ಅಂಕಣ

ಭಾರತೀಯರ ಕಾಲದ ಲೆಕ್ಕಾಚಾರ ಮತ್ತು ಜಗತ್ತಿನ ಸೃಷ್ಟಿ ಮರುಸೃಷ್ಟಿಗಳ ವಿಜ್ಞಾನ.

ಮಂಗಳವಾರ ನಮ್ಮ office’ಗೆ ರಜಾ ಇರುತ್ತೆ. ಅದರೂ ಇವತ್ತೂ ಕೂಡ ಅಭ್ಯಾಸಕ್ಕೆ ಅನುಗುಣವಾಗಿ ಹತ್ತು ಗಂಟೆಗೆ ಮನೆಯಿಂದ ಹೊರಟು SLV’ಯಲ್ಲಿ ಒಂದು ಇಡ್ಲಿ ತಿಂದು ಅಫೀಸಿಗೆ ಬಂದೆ. ಇವತ್ತೇನು ಕೆಲಸ ಅಂತ ನೆನಪು ಮಾಡಿಕೊಂಡರೆ ಏನೂ ಇಲ್ಲ. ಬಾಸ್ ಊರಲ್ಲಿಲ್ಲ. ಸ್ಟಾಫ್’ನವರು, ಡ್ರೈವರ್’ಗಳು ಬಂದಿಲ್ಲ. ನಾನೇ ನನ್ನ ಬಳಿ ಇರುವ ಕೀಲಿ ಕೈಯಿಂದ ಬಾಗಿಲು ತೆಗೆದು ಕಸಗುಡಿಸಿ ದೇವರ ಮುಂದೆ ದೀಪ ಹಚ್ಚಿದೆ. ಏಕಾಂತದಲ್ಲಿ ಕಾಲು ಚಾಚಿಕೊಂಡು ಕುಳಿತು ಸುಮ್ಮನೇ ಕಣ್ಣು ಮುಚ್ಚಿಕೊಂಡು ಕುಳಿತರೆ ಮಂಗನಂಥ ”ಮನಸು” ಎಲ್ಲೆಲ್ಲೊ ತಿರುಗಾಡಿ ಕೊನೆಗೆ ”ಸಮಯ ಎಷ್ಟು ವ್ಯರ್ಥವಾಗ್ತಿದೆ” ಅನ್ನುವಲ್ಲಿಗೆ ಬಂದು ನಿಂತಿತು.

ಕೆಲ ತಿಂಗಳುಗಳ ಹಿಂದೆ ಶೃಂಗೇರಿಯ ರಾಜೀವ ಗಾಂಧಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಮೇಷ್ಟ್ರಾಗಿರುವ ಗೆಳೆಯ ವಿನಾಯಕ ರಜತ್ ಭಾರತೀಯ ಕಾಲಮಾಪನವನ್ನು ಕುರಿತು ಟ್ವಿಟ್ಟರ್’ನಲ್ಲಿ ಒಂದಿಷ್ಟು ಬರೆದಿದ್ರು. ಇದೆಲ್ಲಿ ಸಿಕ್ತು..? ಅಂದಿದ್ದಕ್ಕೆ ದೃಗ್ಗಣಿತದ ಕಡೆಗೆ ಕೈ ತೋರಿಸಿದ್ರು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನ ಇಲ್ಲದೇ ಸುಮ್ಮನಾಗಿದ್ದೆ. ”ಕಾಲ” ಅನ್ನುವುದು ಮನಸಿಗೆ ಬಂದ ಕೂಡಲೇ ಮತ್ತೆ ವಿನಾಯಕ ರಜತ್ ಅವತ್ತು ಹಂಚಿಕೊಂಡ ಮಾಹಿತಿ ತಲೆಯಲ್ಲಿ ಕೊರೆಯತೊಡಗಿತು. ಅವರು ಟ್ವಿಟ್ಟರ್’ನಲ್ಲಿ ಶೇರ್ ಮಾಡಿದ್ದ ಮಾಹಿತಿ ಇಲ್ಲಿದೆ.

ಪರಮಾಣು- 0.0000235 Second

ಅಣು – 0.000047 Second

ತ್ರಸರೇಣು – 0.00014 Second

ತೃಟಿ- 0.00043 Second

ವೇಧ: – 0.043 Second

ಲವ: – 0.13 Second, (Sixth part of twinkling)

ನಿಮಿಷಃ: – 0.4 Second

ಕ್ಷಣಃ – 1.2 Second

ಲಘು- 90 Seconds

ನಾಡಿಕಾ- 22.5 Seconds

ಮುಹೂರ್ತಃ- 45 Seconds

ಪ್ರಹರಃ – 3 Hours

ದಿನಂ/ರಾತ್ರಿಃ – 12 hours

ಇದಿಷ್ಟೇ ಅವರು ಹಂಚಿಕೊಂಡಿದ್ದು. ಇದರ ಮುಂದಿನದ್ದು ನಮಗೆಲ್ಲ ಗೊತ್ತೇ ಇದೆ.

ತಿಥಿಃ- 24 Hours

15 ತಿಥಿಗಳಿಗೆ – ಪಕ್ಷ

2 ಪಕ್ಷ- ಮಾಸ

6 ಮಾಸ- 1 ಅಯನ

2 ಅಯನ- 1 ವತ್ಸರಃ( ಸಂವತ್ಸರ)

ಸತ್ಯಯುಗ- 1,728,000 solar years (ಸಂವತ್ಸರಗಳು)

ತ್ರೇತಾಯುಗ – 1,296,000 solar years

ದ್ವಾಪರ ಯುಗ – 864,000 solar years

ಕಲಿಯುಗ- 432,000 Solar years

ನಾಲ್ಕು ಯುಗಗಳಿಗೆ (43,20,000 ವರ್ಷಗಳಿಗೆ) – ಒಂದು ಮಹಾಯುಗ

71 ಮಹಾಯುಗಗಳಿಗೆ ಅಥವಾ (30, 67, 20,000) ಮೂವತ್ತು ಕೋಟಿ ಅರವತ್ತೇಳು ಲಕ್ಷ ಇಪ್ಫತ್ತು ಸಾವಿರ ವರ್ಷಗಳಿಗೆ ಒಂದು ಮನ್ವಂತರ. ಇಂತಹ 14 ಮನ್ವಂತರಗಳು ಇವೆ. ಸ್ವಾಯಂಭುವ ಮನ್ವಂತರ, ಸ್ವಾರೋಚಿಷ ಮನ್ವಂತರ, ಇತ್ಯಾದಿ. ನಾವು ಈಗ ಏಳನೇಯದ್ದಾದ ವೈವಸ್ವತ ಮನ್ವಂತರದಲ್ಲಿದ್ದೇವೆ.

14 ಮನ್ವಂತರಗಳಿಗೆ – ಒಂದು ಕಲ್ಪ. ಒಂದು ಕಲ್ಪದಲ್ಲಿ 4,29,40,80,000 ವರ್ಷಗಳು. ಇಂತಹ ಏಳು ಕಲ್ಪಗಳಿವೆ. ನಾವು ಈಗ ಇರುವುದು ಶ್ವೇತವರಾಹ ಕಲ್ಪದಲ್ಲಿ. ಅದು ನಾಲ್ಕನೇಯ ಕಲ್ಪ.

ನನಗೆ ಈ ಕಲ್ಪ ಅನ್ನೋದು ಕಣ್ಣಿಗೆ ಬಿದ್ದಕೂಡಲೇ ಬಾಲ್ಯದಿಂದಲೂ ಪ್ರತೀದಿನ ಸಂಧ್ಯಾವಂದನೆಯ ಹಾಗೂ ಇತರ ಸಂದರ್ಭಗಳಲ್ಲಿ ಹೇಳುವ ಸಂಕಲ್ಪದಲ್ಲಿರುವ ದೇಶ-ಕಾಲಗಳ ನೆನಪಾಯ್ತು. ಇವತ್ತು ಇದನ್ನೆಲ್ಲ ಇತ್ಯರ್ಥ ಮಾಡೇ ಬಿಡೋಣ ಅಂತ ಪಟ್ಟಿಗೆ ಬಿದ್ದು ದೇಶ ಕಾಲ ಹೇಳಿಕೊಳ್ಳತೊಡಗಿದೆ.

ಶ್ವೇತವರಾಹ ಕಲ್ಪೇ, ಸಪ್ತಮೇ ವೈವಸ್ವತ ಮನ್ವಂತರೆ, ಅಷ್ಟಾವಿಂಶತಿತಮೆ ಮಹಾ ಯುಗೆ- ಕಲಿಯುಗೆ- ಅಂತ ಪ್ರತೀದಿನ ದೇಶಕಾಲ ಉಚ್ಚಾರ ಮಾಡುವಾಗ ಹೇಳ್ತಿದ್ದೇವೆ. ಅದರ ಅರ್ಥ ವೈವಸ್ವತ ಮನ್ವಂತರದ ಇಪ್ಪತ್ತೆಂಟನೇಯ ಮಹಾಯುಗದಲ್ಲಿದ್ದೇವೆ. ಅಂದರೆ ಈ ಮನ್ವಂತರದಲ್ಲಿಯೇ 27 ಬಾರಿ ಕಲಿಯುಗ ಬಂದು ಹೋಗಿದೆ. ಅದರ ಹಿಂದಿನ ಆರು ಮನ್ವಂತರಗಳಲ್ಲಿ 453 ಕಲಿಯುಗಗಳು ಆಗಿ ಹೋಗಿವೆ. ಮಹಾಯುಗಗಳ ಲೆಕ್ಕದಲ್ಲಿ ನೋಡಿದರೆ ನಾವು ಈಗ ಇರುವುದು 454 ನೇ ಮಹಾಯುಗದಲ್ಲಿ.

1000 ಮಹಾಯುಗಗಳು ಕಳೆದಾಗ ಬ್ರಹ್ಮನಿಗೆ ಒಂದು ದಿನ. ಅಂತಹ ನೂರುದಿನಗಳು ಈ ಜಗತ್ತಿನ ಆಯುಸ್ಸು. ಆದರೆ ಇಲ್ಲಿಯವರೆಗೆ ಮೊದಲ ದಿನದ ಬರೀ 453 ಮಹಾಯುಗಗಳು ಕಳೆದಿವೆ. ಹಾಗಾಗಿ ಈ ಸೃಷ್ಟಿಗೆ ಕೇವಲ 0.5% ಆಯುಸ್ಸು ಕೂಡ ಇನ್ನೂ ಕಳೆದಿಲ್ಲ. ಆದ್ದರಿಂದಲೇ ಕನ್ಯಾದಾನ ನದೀ ಸ್ನಾನ ಮತ್ತು ಮಹಾದಾನ ಮಾಡುವಾಗ ಹೇಳುವ “ಮಹಾ ಸಂಕಲ್ಪ” ದಲ್ಲಿ ಬ್ರಹ್ಮಣ: ಪ್ರಥಮೇ ಮಾಸೆ, ಪ್ರಥಮೇ ಪಕ್ಷೇ, ಪ್ರಥಮೇ ಅಹನಿ, ಪ್ರಥಮ ಪ್ರಾಣಾಯಾಮ ಸಮಯೇ…. ಅಂತೆಲ್ಲ ಹೇಳೋದು. ಆ ಆದಿ ಬ್ರಹ್ಮನ ಮೊದಲನೇ ವರ್ಷದ ಮೊದಲೇ ದಿನದ ಬೆಳಗಿನ ಮೊದಲ ಪ್ರಾಣಾಯಾಮದ ಸಮಯದಲ್ಲಿ ನಾವಿದೀವಂತೆ. ಅಷ್ಟರಲ್ಲೇ 453 ಕಲಿಯುಗಗಳು ಕಳೆದು ಹೋಗಿವೆ. ಇನ್ನೂ ಸಾವಿರಾರು ಲಕ್ಷಾಂತರ ಕಲಿಯುಗಗಳು ಬರುವುದು ಬಾಕಿ ಇದೆ. ಆದರೆ ನಾವು ಈಗಾಗಲೇ ” ಕಲಿಕಾಲ ಬಂದುಬಿಡ್ತಪ್ಪಾss..” ಅಂತ ಗೊಣಗ್ತೀವಿ.

ಕ್ಯಾಲ್ಕ್ಯುಲೇಟರ್ ಇಟ್ಕೊಂಡು ಇದನ್ನೆಲ್ಲಾ ಲೆಕ್ಕ ಹಾಕ್ತಾ ಕೂತಾಗ ನಾವು ಈ ಸೃಷ್ಟಿಯಲ್ಲಿ ಎಷ್ಟು ಸಣ್ಣ ಕ್ರಿಮಿ ಮತ್ತು ನಮ್ಮ “ಔಕಾತ್” ಎಷ್ಟು ಅಂತ ಅರ್ಥವಾಗಿ ಅಂಹಂಕಾರವೆಲ್ಲಾ ಝರ್ರಂತ ಕುಸಿದು ಬಿತ್ತು. ಸಂಕಲ್ಪದಲ್ಲಿ ಹೇಳುವ ದೇಶ-ಕಾಲಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಂಡೆ. ಅದರ ಮೊದಲನೇ ವಾಕ್ಯವೇ “ಆದ್ಯಬ್ರಹ್ಮಣಃ ದ್ವೀತೀಯ ಪರಾರ್ಧೇ” ಅಂತಿದೆ. ಅದರರ್ಥ ಈಗಿರೋದು ಎರಡನೇ ಪರಾರ್ಧ. ಮೇಲಿನ ಈ ಲೆಕ್ಕವೆಲ್ಲ ಬರೀ ಎರಡನೇ ಪರಾರ್ಧದ್ದು. ಮೊದಲನೇ ಪರಾರ್ಧ ಕಳೆದು ಹೋಗಿದೆ. ಅದರ ಲೆಕ್ಕ ಇದರಲ್ಲಿ ಸೇರಿಯೇ ಇಲ್ಲ. ಈಗ ಪರಾರ್ಧ ಅಂದ್ರೆ ಎಷ್ಟು? ಅಂತ ಅರ್ಥ ಹುಡುಕುವಾಗ “ಏಕಾ ಚ ದಶ ಶತ ಚ ಸಹಸ್ರಂಚಾಯುತಂ ಚ ನಿಯುತಂ ಪ್ರಯುತಂ ಚಾರ್ಬುದಂ ಚ ನ್ಯರ್ಬುದಂ ಚ ಸಮುಂದ್ರಂ ಚ ಮಧ್ಯಂಚಾಂತಶ್ಚ ಪರಾರ್ಧಶ್ಚ” ಅನ್ನೋ ಯಜುರ್ವೇದದ ಸಾಲು ನೆನಪಾಯ್ತು. ಕನ್ನಡದಲ್ಲಿ ಬಿಡಿ, ಹತ್ತು, ನೂರು, ಸಾವಿರ, ಹತ್ತು ಸಾವಿರ ಇತ್ಯಾದಿ ವಿಭಾಗಗಳಿರುವ ಹಾಗೆ ಸಂಸ್ಕೃತದಲ್ಲಿ ” ಏಕ, ದಶ, ಶತ, ಸಹಸ್ರ, ಅಯುತ, ನಿಯುತ, ಪ್ರಯುತ, ಅರ್ಬುದ ನ್ಯರ್ಬುದ, ಸಮುದ್ರ ಮಧ್ಯ, ಸಮುದ್ರಾಂತ, ಪರಾರ್ಧ, ಅನ್ನೂ ಸಂಖ್ಯಾ ವಿಭಾಗ ಇದೆ. ಅದರ ಪ್ರಕಾರ ಪರಾರ್ಧ ಅಂದ್ರೆ ಸಾವಿರ ಕೋಟಿಗೂ ಹೆಚ್ಚು. ರಾಮಾಯಣದಲ್ಲಿ ”ನಿನ್ನ ಸೈನ್ಯ ಎಷ್ಟಿದೆ? ಅಂತ ರಾಮ ಕೇಳಿದಾಗ ”ಕರಡಿಗಳು, ಕೋತಿಗಳು, ಯೋಧರು ಎಲ್ಲಾ ಸೇರಿ ಒಂದು ಪರಾರ್ಧ ಇದೆ” ಅಂತ ಸುಗ್ರೀವ ಹೇಳ್ತಾನೆ ಅಂತ ಕೇಳಿದ್ದ ನೆನಪಿತ್ತು. ಸುಗ್ರೀವನ ಬಳಿ ಸಾವಿರ ಕೋಟಿಗೂ ಹೆಚ್ಚು ಸೈನಿಕರು ಇರಲಿಕ್ಕೆ ಸಾಧ್ಯವಿಲ್ಲ. ಹಾಗಾದ್ರೆ ಈ ಪರಾರ್ಧ ಅಂದ್ರೆ ನಿಜವಾಗ್ಲೂ ಎಷ್ಟು ಅಂತ ಕುತೂಹಲದಿಂದ archive.com ನಲ್ಲಿ ಭಾಸ್ಕರಾಚಾರ್ಯನ ಗಣಿತ ಸೂತ್ರಗಳನ್ನೆಲ್ಲ ನೋಡಿದರೆ, ಗಣಿತದ ತಲೆ ಬುಡ ಗೊತ್ತಿಲ್ಲದ್ದರಿಂದ ನನಗೆ ಅದು ಏನೂ ಅರ್ಥವಾಗಲಿಲ್ಲ. ಒಂದಿಬ್ಬರು ಜ್ಯೋತಿಷಿ ಗೆಳೆಯರಿಗೆ ಫೋನು ಮಾಡಿ ”ಈ ಲೆಕ್ಕ ಬಗೆ ಹರಿಸಿ ಮಾರಾಯ್ರೆ..” ಅಂದದಕ್ಕೆ ಅವರು ಕಕ್ಕಾಬಿಕ್ಕಿಯಾಗಿ ”ಸ್ವಲ್ಪ ಟೈಮ್ ಬೇಕು. ಇದು ಗಣಿತ ವಿಭಾಗ. ನಾವು ಅಭ್ಯಾಸ ಮಾಡಿರೋದು ಫಲಭಾಗ ಮಾತ್ರ.” ಅಂದರು.

ಗೂಗಲ್’ನಲ್ಲಿ age of the universe ಅಂತೆಲ್ಲ ಥರಾವರಿ ಹುಡುಕಾಟ ನಡೆಸಿ ನೋಡಿದ್ರೆ ಅದರಲ್ಲಿರುವ ಯಾವ ಮಾಹಿತಿಯೂ ನನಗೆ ಒಪ್ಪಿಗೆಯಾಗಲಿಲ್ಲ. ವಿಕಿಪಿಡಿಯಾದಲ್ಲಿ ಕೂಡ ಬ್ರಹ್ಮಾಂಡ ಪುರಾಣದಲ್ಲಿರೂ ಲೆಕ್ಕಗಳನ್ನೇ ಹಾಕಿದ್ರು. ಆದಿಬ್ರಹ್ಮನಿಗೆ ಒಂದು ದಿನ ಅಂದ್ರೆ ಜಗತ್ತಿಗೆ 7 ಕಲ್ಪಗಳು, ಒಂದು ಕಲ್ಪಕ್ಕೆ ಹದಿನಾಲ್ಕು ಮನ್ವಂತರಗಳು, ಒಂದು ಮನ್ವಂತರಕ್ಕೆ 71 ಮಹಾಯುಗಗಳು – ಇವೆಲ್ಲಾ ಲೆಕ್ಕಗಳು ಸರಿಯಾಗಿಯೇ ಇವೆ. ಆದರೆ ಬ್ರಹ್ಮ ಅನ್ನೋ ವ್ಯಕ್ತಿ ಎಲ್ಲೋ ಕೂತ್ಕೊಂಡಿದಾನೆ, ಅವನು ಪ್ರಾಣಾಯಾಮ ಮಾಡ್ತಾ ಇದ್ದಾನೆ ಅನ್ನೋದನ್ನು ನನಗೆ ಒಪ್ಪಲಿಕ್ಕೆ ಆಗಲಿಲ್ಲ.

ಸಮಾಧಾನ ಆಗದೇ ಅಮೇರಿಕದಲ್ಲಿರೋ ನರೇಂದ್ರ ಕಾಪ್ರೆಯವರಿಗೆ ಸ್ಕೈಪ್’ನಲ್ಲಿ ಕರೆ ಮಾಡಿ ತಲೆ ತಿಂದೆ. ಅವರು ನನ್ನ ಪ್ರಶ್ನೆ ಕೇಳಿ ಮೊದಲು ನಕ್ಕು, ”ಆಪ್ ಹಮೇಶಾ ಬಢಿಯಾ ಸವಾಲ್ ಪೂಛತೆ ಹೊ. ಜವಾಬ್ ದೇನೆ ಮೆ .. ಮಜಾ ಆತಾ ಹೈ..” ಅಂದು.. ಆಮೇಲೆ ಹೇಳಿದ್ರು.

ಹೌದು, ಆದಿಬ್ರಹ್ಮನಿಗೆ ಒಂದು ಪರಾರ್ಧ ಕಳೆದು ಹೋಗಿದೆ. ಈಗಿನದೆಲ್ಲ ಎರಡನೇ ಪರಾರ್ಧ, ಅದರಲ್ಲಿ ಏಳನೇ ಮನ್ವಂತರ. ಆದರೆ ಆದಿ ಬ್ರಹ್ಮ ಅನ್ನೋ ವ್ಯಕ್ತಿ ಯಾರೂ ಅಸ್ತಿತ್ವದಲ್ಲಿ ಇಲ್ಲ. ಅರ್ಥ ಮಾಡ್ಕೊಳ್ಳಲಿಕ್ಕೆ ಸುಲಭ ಆಗಲಿ ಅಂತ ಅದೊಂದು ವ್ಯಕ್ತಿ, ಅವನದೊಂದು ಆಯುಸ್ಸು ಅನ್ನೋ ಹಾಗೆ ಪುರಾಣದಲ್ಲಿ ಈ ಎಲ್ಲಾ ಲೆಕ್ಕಗಳನ್ನ ಹೇಳಿದಾರೆ. ಈ ಜಗತ್ತು ಎಷ್ಟು ಹಳೆಯದು… ಇನ್ನೂ ಎಷ್ಟು ವರ್ಷ ಇರುತ್ತೆ ಅನ್ನೋದನ್ನು ಭೌತಿಕ ಆಧಾರಗಳ ಮೇಲೆ ತರ್ಕಿಸಿ ಹೇಳೋದು ಸಾಧ್ಯವಿಲ್ಲ. ಏಕೆಂದರೆ ತರ್ಕಕ್ಕೆ ಇಂದ್ರಿಯಗಳ limitation ಇರುತ್ತೆ. ಹಾಗಾಗಿ ತರ್ಕ ಮತ್ತು ಊಹೆ ಬಹಳ ಸೀಮಿತವಾಗಿರುವಂಥವುಗಳು. ಯಾಕಂದ್ರೆ ಅವುಗಳು ಇಂದ್ರಿಯಾನುಭವ ಆಧಾರಿತ. ಇಂದ್ರಿಯಕ್ಕೆ ಮಿತಿ ಇದ್ದ ಹಾಗೆ ತರ್ಕ-ಊಹೆ, ಚಿಂತನೆ ಇವೆಲ್ಲಕ್ಕೂ ಮಿತಿ ಇರಲೇ ಬೇಕು. ಇಂದ್ರಿಯಾನುಭವ, ತರ್ಕ, ಊಹೆ ಮುಂತಾದ ಎಲ್ಲಕ್ಕೂ ನಿಲುಕದ ಯಾವ ಸಂಗತಿಗಳಿವೆಯೋ ಅದನ್ನು ಹೇಳೋದೇ ವೇದಗಳಲ್ವಾ..? ಆದರೆ ಅವುಗಳನ್ನು ವೇದಗಳು ನೇರವಾಗಿ ಮಾಹಿತಿಯ ರೂಪದಲ್ಲಿ ಹೇಳೋದಿಲ್ಲ. ವೇದದಿಂದ ಅದನ್ನು ಗ್ರಹಿಸಿ ಚರ್ಚಿಸಿ ವಿವರಿಸೋದು ದರ್ಶನಗಳು.(ಶಾಸ್ತ್ರಗಳು).

“ಸರ್ವಸ್ಯ ಲೋಚನಂ ಶಾಸ್ತ್ರಂ” ಅನ್ನೋ ಪ್ರಸಿದ್ಧ ವಾಕ್ಯ ಇದೆಯಲ್ವಾ..? ಅದೇ ಕಾರಣಕ್ಕೆ. ಯಾವುದು ಕಾಣಿಸುವುದಿಲ್ಲವೋ, ಯಾವುದು ಊಹೆಗೆ ನಿಲುಕೋದಿಲ್ಲವೋ, ಸ್ವಪ್ರಯತ್ನದಿಂದ ಯಾವುದು ಅರ್ಥವಾಗಲು ಸಾಧ್ಯವಿಲ್ಲವೋ, ಅದನ್ನ ಅರ್ಥ ಮಾಡಿಸೋದೇ ದರ್ಶನಗಳು. ಆದ್ದರಿಂದಲೇ ಶಾಸ್ತ್ರವನ್ನ ”ಎಲ್ಲದರ ಕಣ್ಣು” ಅನ್ನೋದು. ಯಾವುದು ಅರ್ಥವಾಗುತ್ತಿಲ್ಲವೋ ಅದನ್ನ ಶಾಸ್ತ್ರದ ಮೂಲಕವೇ ತಿಳೀಬೇಕು. ಬೇರೆ ದಾರಿ ಇಲ್ಲ.

ಈ ಜಗತ್ತು ಎಷ್ಟು ಹಳೆಯದು ಅನ್ನೋ ನಿಮ್ಮ ಪ್ರಶ್ನೆಗೆ ವೇದಾಂತ ಉತ್ತರ ಕೊಡುತ್ತೆ. ಈ ಸಂಖ್ಯೆಗಳು, ಗಣಿತ, ಮನ್ವಂತರಗಳು, ಆದಿಬ್ರಹ್ಮ ಇವೆಲ್ಲ ಅರ್ಥ ಮಾಡ್ಕೊಳ್ಳಲಿಕ್ಕೆ ಸುಲಭವಾಗಿ ಇರಲಿ ಅಂತ ಹೇಳಿದ ಕ್ರಮ. ಸರಿ… ಪರವಾಗಿಲ್ಲ. ಇರಲಿ.

ಆದರೆ ನಿಮಗೆ ವೇದಾಂತದ “ಮಾಯಾವಾದ” ಗೊತ್ತಲ್ವಾ..?

ನಾನು: ಇಲ್ಲ ಸರ್, ನನಗೆ ವೇದಾಂತದ ಬೇಸಿಕ್ ಗೊತ್ತು ಅಷ್ಟೇ.. ಸರಿಯಾದ ಪರಂಪರೆಯಿಂದ ಗುರುಮುಖವಾಗಿ ಕಲಿಯುವ ಆಸೆ ಇದೆ. ಅಂತಹ ಗುರುಗಳು ಸಿಕ್ಕಿಲ್ಲ. ಸಮಯಾನುಕೂಲವೂ ಇಲ್ಲ. ಈ ಪ್ರಾರಬ್ಧ ಸ್ವಲ್ಪ ಅನುಕೂಲ ಮಾಡಿಕೊಟ್ರೆ ಶಾಸ್ತ್ರವನ್ನೂ ಒಂದು ಕೈ ನೋಡೇಬಿಡೋಣ ಅಂತಿದೀನಿ.

ಕಾಪ್ರೆಯವರು; ಪ್ರಾರಬ್ಧ ಅದರ ಪಾಡಿಗೆ ಅದು ಇರುತ್ತೆ. ಅದು ಮುಗಿಯೋದೇ ಇಲ್ಲ. ಆದರೆ ನಿಮಗೆ ಇದು ಸರಿಯಾದ ಸಮಯ. ನೀವು ಶಾಸ್ತ್ರಾಭ್ಯಾಸ ಶುರು ಮಾಡ್ಕೊಳ್ಳಿ. ಪ್ರಾರಬ್ಧವನ್ನು ಮೀರಿದಾಗಲೇ ಜೀವನ ನಿರ್ಮಾಣ ಆಗೋದು. ಪ್ರಾರಬ್ಧ ನಮ್ಮನ್ನ ಜಜ್ಜಿ ಜಜ್ಜಿ ಸ್ವಚ್ಛ ಮಾಡಲಿಕ್ಕಾಗೇ ಇರೋದು. ಅದು ಎಷ್ಟು ತೀವ್ರವಾಗಿರುತ್ತೋ, ಮನುಷ್ಯ ಅಷ್ಟು ಸ್ವಚ್ಛವಾಗ್ತಾನೆ. ಅಗಸ ಬಟ್ಟೆಯನ್ನ ಒಗೆದ ಹಾಗೆ ಪ್ರಾರಬ್ದ ನಮ್ಮನ್ನು ಬಡಿದು ಸ್ವಚ್ಛ ಮಾಡ್ತದೆ. ಅದೆಲ್ಲ ಇರಲಿ.

ವಾಸ್ತವವಾಗಿ ಈ ಸೃಷ್ಟಿಗೆ ಆದಿಯೇ ಇಲ್ಲ. ಅಂತ್ಯವೂ ಇಲ್ಲ. ಭಗವಂತ ಹೇಗೆ ಅನಾದಿಯೋ ಸೃಷ್ಟಿಯೂ ಅಷ್ಟೇ. ಜೇಡದ ಹುಳ ಬಲೆಯನ್ನು ತನ್ನೊಳಗಿಂದಲೇ ಹೊರಹಾಕಿ, ಮತ್ತೆ ತಾನೇ ಅದನ್ನು ತಿಂದು ಹಾಕುತ್ತಲ್ಲ ಹಾಗೆ ಈ ಸೃಷ್ಟಿ ಇದೆ. ಅದನ್ನೇ. ಕಲ್ಪಾಂತ್ಯದಲ್ಲಿ ಪ್ರಳಯ ಅಂತಾರಲ್ಲ.. ಅನಂತ ಆಕಾಶದಲ್ಲಿ ಇಷ್ಟಲ್ಲ ಗ್ಯಲಾಕ್ಸಿಗಳು ಅನಂತ ಕಾಲದಿಂದ ಪ್ರಕಟವಾಗ್ತಾ.. ಮಾಯವಾಗ್ತಾ ಇವೆ. ಇನ್ನೂ ಆಳಕ್ಕಿಳಿದು ನೋಡಿದ್ರೆ ಈ ಸೃಷ್ಟಿಗೆ ಅಸ್ತಿತ್ವವೇ ಇಲ್ಲ. ಇದೆಲ್ಲ ಮನಸ್ಸಿನ ಕಲ್ಪನೆ ಅಷ್ಟೇ.

ನಾನು: ಹೌದು, ಅದೆಲ್ಲ ನನಗೆ ಅಲ್ಪ ಸ್ವಲ್ಪ ಅರ್ಥವಾಗಿದೆ. “ಇಹ ಸಂಸಾರ ಖಿಲೌನಾ ಮನ್ ಕಾ” ಅಂತ ಮಾರ್ತಾಂಡ ಪ್ರಭುಗಳೂ ಹೇಳಿದಾರೆ. ಆದರೆ ಇಂದ್ರಿಯಾನುಭಕ್ಕೆ ಯಾವುದು ಸಿಕ್ತಾ ಇದೆಯೋ ಅದನ್ನು ಭ್ರಮೆ ಅಂತ ನಿರಾಕರಿಸೋದು ಹೇಗೆ. ಆ ಭ್ರಮೆಗೆ ಮನಸ್ಸು ಕಾರಣ ಅಂತಾದರೆ ಆ ಮನಸ್ಸು ಕೆಲಸ ಮಾಡಲಿಕ್ಕೆ ಚೈತನ್ಯ ಬೇಕೇ ಬೇಕಲ್ವಾ…? ಹಾಗಾದರೆ ಚೈತನ್ಯವೂ ಭ್ರಮೆಯಾ..?

ಕಾಪ್ರೆಯವರು: ಅದು ಹಾಗಲ್ಲ. ನಿಮಗೆ ರಜ್ಜುವಿನ ಉದಾಹರಣೆ ಗೊತ್ತಲ್ವಾ…?

ನಾನು: ಹಾಂ. ಗೊತ್ತಿದೆ. ಕತ್ತಲೆಯಲ್ಲಿ ಹಗ್ಗ(ರಜ್ಜು) ಬಿದ್ದಿರುತ್ತೆ. ಆದರೆ ಅದು ಹಾವು ಅನ್ನೋ ಭ್ರಮೆ ಉಂಟಾಗ್ತಾ ಇರುತ್ತೆ. ಆದರೆ ಅದರ ಮೇಲೆ ಬೆಳಕು ಹಾಕಿದಾಗ ಅದು ಹಾವಲ್ಲ.. ಹಗ್ಗ ಅನ್ನೋದು ಗೊತ್ತಾಗುತ್ತೆ. ಹಾವಿನ ಅಸ್ತಿತ್ವ ಸುಳ್ಳಾದ್ರೂ ಹಾವಿನ ಭ್ರಮೆ ಉಂಟಾಗಲಿಕ್ಕೆ ಕಾರಣವಾದ ಹಗ್ಗದ ಅಸ್ತಿತ್ವನ್ನು ನಿರಾಕರಿಸಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಭ್ರಮೆ ಉಂಟಾಗಲಿಕ್ಕೂ ಸತ್ಯದ ಅಧಿಷ್ಠಾನ ಆವಶ್ಯಕ. ಹಾಗಾಗಿ ಈ ಜಗತ್ತು ಅನ್ನೋ ಭ್ರಮೆ ಭಗವಂತ ಅನ್ನೋ ಚೈತನ್ಯದ ಅಧಿಷ್ಠಾನದ ಮೇಲೆ ಉಂಟಾಗಿದೆ. ಆ ಭ್ರಮೆ ತೊಲಗಿದ್ರೆ ಎಲ್ಲೆಲ್ಲೂ ಭಗವಂತನೇ ಕಾಣ್ತಾನೆ. ಈ ಭ್ರಮೆಗೆ ಕಾರಣ ತ್ರಿಗುಣಗಳಿಂದ ಕೂಡಿರೋ ಪ್ರಕೃತಿ. ನಾನು ಹೀಗೆ ಅರ್ಥ ಮಾಡ್ಕೊಂಡಿದೀನಿ ಇದನ್ನು. ನನ್ನ ತಿಳಿವಳಿಕೆ ಸರಿಯೋ ಇಲ್ಲವೋ ಗೊತ್ತಿಲ್ಲ.

ಕಾಪ್ರೆಯವರು: ಸ್ವಲ್ಪ ಮಟ್ಟಿಗೆ ಸರಿಯಾಗಿದೆ. ಆದರೆ ಅದಕ್ಕೆ ಇನ್ನೂ ಅನೇಕ ಆಯಾಮಗಳಿವೆ. ಇದೆಲ್ಲ ಬಹಳ ಗಹನವಾಗಿ step by step ಹೋಗಬೇಕಾಗಿರೋ ಸಂಗತಿಗಳು. ಹೀಗೆ ಸಾಧಾರಣ ಸಂಭಾಷಣೆಗಳಲ್ಲಿ ಪ್ರಶ್ನೋತ್ತರ ಮಾಡ್ತಾ ಹೋದ್ರೆ ದಾರಿ ತಪ್ಪುತ್ತೆ. ಅದಕ್ಕೆ ಸೂಕ್ತ ತಯಾರಿ ಬೇಕು. ನಿಮ್ಮಲ್ಲಿ ತಯಾರಿ ಇದೆ. ಆದರೆ ಒಮ್ಮೆಲೇ ತುದಿ ಮುಟ್ಟೋ ಗಡಿಬಿಡಿ ಕಾಣ್ತಾ ಇದೆ. ಹಂತ ಹಂತವಾಗಿ ಪೂರ್ವಪಕ್ಷ, ಆಕ್ಷೇಪ, ಸಮಾಧಾನ, ಸಿದ್ಧಾಂತ ಇವುಗಳನ್ನೆಲ್ಲ ಮನವರಿಕೆ ಮಾಡಿಕೊಳ್ತಾ order ನಲ್ಲಿ ಬಂದ್ರೆ ಗೊಂದಲಗಳು ಉಳಿಯೋದಿಲ್ಲ. ರಜ್ಜು ನ್ಯಾಯ ಗೊತ್ತಿದ್ರೂ.. ಚೈತನ್ಯವೂ ಭ್ರಮೆಯಾ ಅಂತ ಪ್ರಶ್ನೆ ಮಾಡ್ತಾ ಇದ್ದೀರಿ.

ನಾನು: ಹೌದು .. ಯಾಕಂದ್ರೆ… ಜಗತ್ತಿಗೆ ಆದಿಯೂ ಇಲ್ಲ.. ಅಂತ್ಯವೂ ಇಲ್ಲ ಅನ್ನೋದನ್ನ ಒಪ್ಪಬಹುದು. ಅದು ನನಗೆ ಅರ್ಥ ಆಗುತ್ತೆ. ಆದರೆ ಜಗತ್ತೇ ಭ್ರಮೆ ಮತ್ತು ಅದಕ್ಕೆ ಅಸ್ತಿತ್ವವೇ ಇಲ್ಲ.. ಅನ್ನೋವಾಗ ಅದನ್ನು ಆಲೋಚನೆ ಮಾಡೋದು ನಮ್ಮ ಬುದ್ಧಿ. ಆ ಬುದ್ಧಿಯೇ ಜಡವಸ್ತು. ಚೈತನ್ಯದ ಆಧಾರದ ಮೇಲೆಯೇ ಬುದ್ಧಿ ಕೆಲಸ ಮಾಡೋದು. ಅಂದಮೇಲೆ ಚೈತನ್ಯವೂ ಜಗತ್ತಿನ ಅಥವಾ ಸಂಸಾರದ ಭಾಗ ಅಂತಾಯ್ತು. ಈ ಸಂಸಾರವೇ ಭ್ರಮಾಕಲ್ಪಿತ, ಅಸ್ತಿತ್ವವಿಲ್ಲದ್ದು ಅಂತಾದರೆ ಈ ಚೈತನ್ಯಕ್ಕೂ ಅಸ್ತಿತ್ವ ಇಲ್ಲವಾ..? ಅನ್ನೋದು ನನ್ನ ಗೊಂದಲ. ಚೈತನ್ಯಕ್ಕೆ ಅಸ್ತಿತ್ವ ಇಲ್ಲದೇ ಇರಲಿಕ್ಕೆ ಹೇಗೆ ಸಾಧ್ಯ..?

ಕಾಪ್ರಯವರು: ಮೊದಲನೇಯದಾಗಿ ನೀವು ಚೈತನ್ಯಕ್ಕೂ ಸಂಸಾರಕ್ಕೂ ವ್ಯತ್ಯಾಸ ತಿಳ್ಕೋಬೇಕು. ಎರಡನೇಯದಾಗಿ ”ಸಂಸಾರ” ಅಂದ್ರೆ ಏನು?

ನಾನು: ಸಂ-ಸರತಿ ಇತಿ ಸಂಸಾರಃ, …. ಯಾವುದು ಪ್ರತಿಕ್ಷಣ ನಾಶದ ಕಡೆಗೆ ಹೋಗ್ತಾ ಇದೆಯೋ, ಯಾವುದು ಪ್ರತಿಕ್ಷಣ ಬದಲಾಗ್ತಾ ಇದೆಯೋ… ಅದು ಸಂಸಾರ.

ಕಾಪ್ರೆಯವರು: ಹಾಗಾದ್ರೆ ಅವಿನಾಶಿಯಾದ ಚೈತನ್ಯಕ್ಕೂ ಸಂಸಾರಕ್ಕೂ ಅಭೇದವನ್ನು ಹೇಗೆ ಅನ್ವಯ ಮಾಡ್ತೀರಿ…?

ನಾನು: ಹೌದು.. ನೀವು ಹೇಳಿದ ಹಾಗೆ ನಾನು ಗಡಿಬಿಡಿಯಲ್ಲಿ ಯಡವಟ್ಟು ದಾರಿಯಲ್ಲಿ ಹೋಗ್ತಾ ಇದ್ದೀನಿ.

ಸೃಷ್ಟಿಯ ಉದ್ದೇಶ ತಿಳಿದರೆ ಸೃಷ್ಟಿಯ ಕಾಲಪರಿಮಿತಿ ತಿಲಿಯುತ್ತಲ್ವಾ…?

ಕಾಪ್ರೆಯವರು: ಸೃಷ್ಟಿಯ ಉದ್ದೆಶವಾ..? ಅದಕ್ಕೆ ಉದ್ದೇಶ ಇದೆ ಅಂತ ಯಾರು ಹೇಳಿದ್ರು ನಿಮಗೆ..?

ನಾನು: ಶ್ರುತಿವಾಕ್ಯವೇ ಇದೆಯಲ್ಲ. “ಏಕೊsಹಂ ಬಹುಸ್ಯಾಂ ಪ್ರಜಾಯೆಯ” (ಅವನು “ತಾನು ಏಕವಾಗಿದ್ದು ಅನೇಕವಾಗ ಬಯಸಿದ” ) ಅಂತ .

ಕಾಪ್ರೆಯವರು: ಹೌದು, ಆದ್ರೆ ಅದಕ್ಕೆ ತದ್ವಿರುದ್ಧವಾದ ಮಾತುಗಳನ್ನೂ ಶ್ರುತಿಯೇ ಹೇಳಿದೆ. ಈಗ ತಾನು ಒಬ್ಬನೇ ಇದ್ದು ಅನೇಕವಾಗ್ಬೇಕು ಅನ್ನೋ ಆಸೆ ಅವನಲ್ಲಿ ಬಂತು ಅಂತ ಆದ್ರೆ ಅವನೊಬ್ಬ ವ್ಯಕ್ತಿ, ಅವನಿಗೆ ಸೃಷ್ಟಿ ಮಾಡುವ ಬಯಕೆ ಉಂಟಾಯ್ತು ಅಂತಾಯ್ತು. ನಿರ್ಗುಣವಾದ ವಾದ ಬ್ರಹ್ಮಕ್ಕೆ ಗುಣಾತ್ಮಕವಾದ, ಪ್ರಾಕೃತಿಕವಾದ ಬಯಕೆಯನ್ನು ಮತ್ತು ವ್ಯಕ್ತಿತ್ವನ್ನು ಆರೋಪಿಸಿದರೆ, ಗುಣಗಳನ್ನೂ ಆರೋಪಿಸಿದ ಹಾಗೆ ಆಗಲಿಲ್ವ..? ಅವನಿಗೆ ಬಯಕೆ ಉಂಟಾಯ್ತು ಅಂದರೆ, ಅಲ್ಲಿಗೆ ಭಗವಂತ ನಿರ್ಗುಣ ಅನ್ನೋದೇ ಸುಳ್ಳಾಯ್ತು.

ಅವನಿಗೆ ಯಾವತ್ತೋ ಒಂದು ದಿನ ಬಯಕೆ ಉಂಟಾಯ್ತು, ಆಗ ಸೃಷ್ಟಿಯನ್ನು ಮಾಡಿದ, ಅಲ್ಲಿಯವರೆಗೆ ಅವನಿಗೆ ಬಯಕೆ ಇರಲಿಲ್ಲ … ಹೀಗೆ ಮುಂದುವರೆದು non sense ಆದ ಹಂತಕ್ಕೆ ಬಂದು ನಿಲ್ಲುತ್ತೆ ಅದು. Religious Dogma’ಗಳಲ್ಲಿ, ವಿಶೇಷವಾಗಿ Abrahamic Religion’ಗಳಲ್ಲಿ ಇಂಥಾ ತಲೆ ಬುಡ ಇಲ್ಲದೆ ಹುಚ್ಚು ನಂಬಿಕೆಗಳು ಬೆಳೆದು ಬಂದಿವೆ. ಅವುಗಳ influence ನಿಮ್ಮ ಮೇಲೆ ಆದ ಹಾಗಿದೆ.

ನಾನು: ಹೊ.. ಹೌದು, ಅವುಗಳ ಪ್ರಭಾವದಿಂದ ದೂರ ಇರೋದು ಬಹಳ ಕಷ್ಟ. ನಮ್ಮ ಆಡುಭಾಷೆಯಲ್ಲಿ, ಓದುವ ಸಾಹಿತ್ಯದಲ್ಲಿ ಪತ್ರಿಕಾ ಬರಹಗಳಲ್ಲಿ ಎಲ್ಲೆಲ್ಲಿಯೂ Religious ನಂಬಿಕೆಗಳ ಪ್ರಭಾವ ತುಂಬಿ ಹೋಗಿದೆ.

ಗೀತೆಯಲ್ಲಿ “ಹೃದಯೇ ಸರ್ವಭೂತಾನಾಮ್” (ನಾನು ಎಲ್ಲ ಜೀವಿಗಳ ಹೃದಯಲ್ಲಿ ಇದ್ದೇನೆ) ಅಂತ ಹೇಳ್ತಾನೆ, ಮತ್ತೊಂದು ಕಡೆ “ಮತ್ತಃ ಪರತರಂ ನಾನ್ಯತ್”(ನನ್ನ ಹೊರತಾದದ್ದು ಇಲ್ಲಿ ಏನೂ ಇಲ್ಲವೇ ಇಲ್ಲ) ಅಂತ contradiction ಇದೆ. ಅದರ ಸಮನ್ವಯ ಅರ್ಥ ಆಗಿತ್ತು. ಆದರೆ ನೀವು ಹೇಳಿದ ಕೋನದಲ್ಲಿ ನಿರ್ಗುಣತ್ವದ ಬಗ್ಗೆ ನಾನು ಯೋಚನೆ ಮಾಡಿರಲಿಲ್ಲ.

ಕಾಪ್ರೆಯವರು : ಆ ವಿಷಯದಲ್ಲಿ ಮಾತ್ರ ಇಲ್ಲ. ಇನ್ನೂ ತುಂಬಾ ವಿಷಯಗಳಲ್ಲಿ ಹಾಗೆಯೇ ವೈರುಧ್ಯ ಇದೆ. ಅವೆಲ್ಲವನ್ನು ವಿಮರ್ಶಿಸಿ ಸಮನ್ವಯ ಮಾಡೋದೇ ಶಾಸ್ತ್ರ ಪ್ರಕ್ರಿಯೆ. ಅದೇ ಕಾರಣಕ್ಕೆ ಶಾಸ್ತ್ರಾಧ್ಯಯನ ಇಲ್ಲದೇ ಬರೀ ಬಿಡಿ ಬಿಡಿಯಾಗಿ ಶಬ್ದಶಃ-ವಾಕ್ಯಶಃ ಅರ್ಥ ತಿಳಿದುಕೊಂಡರೆ ಅಥವಾ ಅನುವಾದಗಳನ್ನು ಓದಿಕೊಂಡರೆ ಅದು ಅರ್ಥವಾಗೋದಿಲ್ಲ. ಶಾಸ್ತ್ರದ ಅಧ್ಯಯನ ಇಲ್ಲದೇ ಬರೀ ವೇದಗಳನ್ನ ಉರು ಹೊಡೆದು ಕಂಠಸ್ಥ ಮಾಡಿದವರನ್ನ, ಪುರಾಣಗಳ, ಗೀತೆಯ ಅನುವಾದಗಳನ್ನ ಓದಿಕೊಂಡು ಲೆಕ್ಚರ್ ಹೊಡಿಯುವವರನ್ನ ಶಾಸ್ತ್ರಾಧ್ಯಯನ ಮಾಡಿದವರು ಅಪಹಾಸ್ಯ ಮಾಡ್ಕೊಂಡು ನಗೋದು ಇದೇ ಕಾರಣಕ್ಕೆ.

ನಾನು: ಹಹ್ .. ಹಾ. ಅದರಲ್ಲಿ ನಾನು ಮೊದಲನೇ ಕೆಟಗರಿಗೆ ಸೇರಿದವನು. ನನಗೆ ಲಭ್ಯವಾಗಿದ್ದು ಅಷ್ಟೇ. ಹಾಗಾಗಿ ನಾನೂ ಅಪಹಾಸ್ಯಕ್ಕೆ ಪಾತ್ರ.

ಕಾಪ್ರಯವರು: ನಾನು ತಮಾಷೆಗೆ ಹೇಳಿದೆ. ಬಾಲ್ಯದಲ್ಲೇ ಶ್ರೌತ್ರೀಯವಾಗಿ ವೇದಗ್ರಹಣ ಮಾಡೋ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ. ಮತ್ತು ಅದು ಅಷ್ಟು ಸುಲಭವೂ ಅಲ್ಲ. ಅದರ ಬೆಲೆ ಗೊತ್ತಿದ್ದವರಿಗೆ ಗೊತ್ತು ಅಷ್ಟೇ. ನಾನು ಅದಕ್ಕೇ ಹೇಳ್ತಿರೋದು ನಿಮಗೆ. ಅಂಥಾ ಅಮೂಲ್ಯವಾದ ಮೊದಲನೇ ಹಂತ ಮುಗಿದಿದೆ. ಈಗ ಎರಡನೇ ಹಂತಕ್ಕೆ ಹೋಗೋ ಸಮಯ. ವೇದಾಧ್ಯಯನ ಶರೀರ ಇದ್ದ ಹಾಗೆ, ಶಾಸ್ತ್ರಾಧ್ಯಯನ ಅದಕ್ಕೆ ಕಣ್ಣು ಇದ್ದ ಹಾಗೆ. ಕಣ್ಣಿಲ್ಲದೇ ಶರೀರ ಸುಲಭವಾಗಿ ಉಪಯೋಗಕ್ಕೆ ಬರೋದಿಲ್ಲ. ಶರೀರ ಇಲ್ಲದೇ ಇದ್ರೆ ಕಣ್ಣಿಗೆ ಅಸ್ತಿತ್ವವೇ ಇಲ್ಲ.

ಚಲೋ, ಅಚ್ಛೀ ಬಾತ್ ಹೈ,

ಆಹ್ನಿಕದಲ್ಲಿ ಅಘಮರ್ಷಣ ಮಾಡ್ತೀರೋ ಇಲ್ವೋ?

ನಾನು: ಸಮಯ ಕಡಿಮೆ ಇದ್ದಾಗ ಕೆಲವೊಮ್ಮೆ skip ಮಾಡಿಬಿಡ್ತೀನಿ. ಈ ಬೆಂಗಳೂರು ಜೀವನದಲ್ಲಿ ಆಹ್ನಿಕ ಮಾಡೋದೇ ಕಷ್ಟ. ಕೆಲವೊಮ್ಮೇ ಅದೇ skip ಆಗಿಬಿಡುತ್ತೆ. ಅದನ್ಯಾಕೆ ಕೇಳ್ತಿದೀರಿ..?

ಕಾಪ್ರೆಯವರು: ಅದರಲ್ಲಿ ಹೇಳೋ ಋಕ್ಕುಗಳನ್ನ ನೆನಪು ಮಾಡ್ಕೊಳಿ.

ನಾನು: ನಾನು ನಿಧಾನವಾಗಿ ಪದ ಪದ ಬಿಡಿಸಿ ಅರ್ಥ ಮಾಡಿಕೊಳ್ತಾ ಋಕ್ಕುಗಳನ್ನು ಹೇಳತೊಡಗಿದೆ. ” ಋತಂ ಚ ಸತ್ಯಂ ಚ … ತತೋ ರಾತ್ರ್ಯಜಾಯತ ತತಃ ಸಮುದ್ರೋ ಅರ್ಣವಃ, ಸಮುದ್ರಾತ್ ಅರ್ಣವಾದಧಿ ಸಂವತ್ಸರೋ ಅಜಾಯತ. ಅಹೋ ರಾತ್ರಾಣಿ ವಿದಧತ್ ವಿಶ್ವಸ್ಯ ಮಿಶತೋ ವಶೀ, ಸೂರ್ಯಾಚಂದ್ರಮಸೌ ಧಾತಾ ಯಥಾ ಪೂರ್ವಂ ಅಕಲ್ಪಯತ್,

ಕಾಪ್ರೇಯವರು: ಅಷ್ಟೇ, “ಯಥಾ ಪೂರ್ವಂ ಅಕಲ್ಪಯತ್” ಅಲ್ಲೇ ಇದೆ ಎಲ್ಲಾ. ಈಗ ನಿಮ್ಮ ಮೊದಲ ಪ್ರಶ್ನೆಗೆ ಉತ್ತರ ಸಿಕ್ತಾ..?

ನಾನು : ಹೊ. ಹೊ. ಹೊ…. ಗೊತ್ತಾಯ್ತು. ಅದರ ಜೊತೆಗೆ ಇನ್ನೂ ಹೊಸ ಪ್ರಶ್ನೆಗಳು ಹುಟ್ಟಿಕೊಳ್ತಾ ಇವೆ. ನಾವು ಇಷ್ಟು ವರ್ಷಗಳಿಂದ ದೇಶ-ಕಾಲಗಳನ್ನು ಹೇಳೋ ಪರಿಪಾಠ ಇಟ್ಕೊಂಡಿದ್ರೂ ಅದರ ಅರ್ಥ ಏನು ಅನ್ನೋದರ ಬಗ್ಗೆ ಗಮನವೇ ಹೋಗಿರಲಿಲ್ಲ. ಸಂಧ್ಯಾವಂದನೆಯ ಅಘಮರ್ಷಣದ ಋಕ್ಕಿನಲ್ಲೇ ಸೃಷ್ಟಿಯ ರಹಸ್ಯ ಇದ್ರೂ ಗಮನಕ್ಕೇ ಬಂದಿಲ್ಲ. ನಾವು ಆಡುವ ಪ್ರತಿನಿತ್ಯದ ಭಾಷೆಯಲ್ಲಿ ಬಳಸೋ ಎಷ್ಟೋ ಶಬ್ದಗಳನ್ನೂ ನಾವು ಅರ್ಥ ಗೊತ್ತಿಲ್ಲದೇ ಬಳಸ್ತಾ ಇದ್ದೀವಿ. ಅವುಗಳ ಮೂಲ ಅರ್ಥ ಹುಡುಕಿದ್ರೆ ಎಲ್ಲಾ ಸ್ಪಷ್ಟವಾಗುತ್ತೆ ಅನ್ಸುತ್ತೆ.

ಕಾಪ್ರೆಯವರು: ಭಾಷೆಯ .. ಶಬ್ದಗಳ ಅರ್ಥ ಮಾತ್ರ ಅಲ್ಲ. ನಮ್ಮ ಶರೀರ ಹೇಗೆ ವರ್ಕ್ ಆಗ್ತಾ ಇದೆ ಅನ್ನೋದರ ಬಗ್ಗೆಯೇ ನಾವು ಸರಿಯಾಗಿ ಗಮನ ಕೊಟ್ಟಿರೋದಿಲ್ಲ. ಅಂಡಾಂಡ, ಪಿಂಡಾಂಡಗಳನ್ನು ಮೊದ್ಲು ತಿಳ್ಕೊಂಡ್ರೆ ಬ್ರಹ್ಮಾಂಡ ಸುಲಭವಾಗಿ ಅರ್ಥ ಆಗುತ್ತೆ. ಆದರೆ ಆ ಅಂಡಾಂಡ ಪಿಂಡಾಂಡಗಳ ಕಡೆಗೆ ಗಮನವೇ ಹೋಗದ ಹಾಗೆ ಇಂದ್ರಿಯಗಳು ಬಹಿರ್ಮುಖವಾಗಿವೆ. ಅದೇ divine design’ನ ಸ್ವಾರಸ್ಯ.

ನಾನು: ಹ್ಹ.. ಹ್ಹ..ಹ್ಹ.. ನಿಜ ನಿಜ. “ದೈವೀ ಹಿ ಏಷಾ ಗುಣಮಯಿ…ಮಮ ಮಾಯಾ ದುರತ್ಯಯಾ” ಆ ಖದೀಮ ಈ ಡಿಸೈನೇ ಹಾಗೆ ಮಾಡಿ ಇಟ್ಟಿದಾನೆ.

ಕಾಪ್ರೆಯವರು: ಹಾಗಾದ್ರೆ ಶಾಸ್ತ್ರಾಭ್ಯಾಸ ಯಾವಾಗಿಂದ ಶುರು ಮಾಡ್ತೀರಿ…?

ನಾನು: ಆದಷ್ಟು ಬೇಗ. ಆದರೆ ಅದಕ್ಕೆ ಸಾಧನ ಚತುಷ್ಟುಯ ಮಾಡಿ, ಷಟ್ ಸಂಪತ್ತುಗಳನ್ನು ಗಳಿಸ್ಕೋಬೇಕಲ್ವಾ..? ಅದಿಲ್ಲದೇ ಶಾಸ್ತ್ರ ಪ್ರವೇಶ ಮಾಡಬಹುದು ಅಂತೀರಾ..?

ಕಾಪ್ರೆಯವರು: ಅನುಭವಪೂರ್ವಕ ಜ್ಞಾನಕ್ಕೆ ಅದೆಲ್ಲ ಅಗತ್ಯ. ಆದರೆ ಮಾಹಿತಿಗಾಗಿ ಅಭ್ಯಾಸ ಮಾಡ್ಲಿಕ್ಕೆ ಆಸಕ್ತಿ ಒಂದಿದ್ರೆ ಸಾಕು. ಮಾಹಿತಿ ಬಂದ ಮೇಲೆ.. ಸಾಧನೆಯೂ ಶುರು ಆಗಬಹುದು. ನಾಮಸ್ಮರಣೆ ಮಾಡ್ತಾ ಹೋದಹಾಗೆ ಚಿತ್ತಶುದ್ಧಿ ಆಗೇ ಆಗುತ್ತೆ. ಸಾಧನೆ ಶುರು ಆಗುತ್ತೆ. ನೀವು ನಾಮಸ್ಮರಣೆ ಮಾಡ್ತೀರೋ ಇಲ್ವೋ..?

ನಾನು: ಇಲ್ಲ. ಸ್ವಲ್ಪ ದಿನ ಒತ್ತಡ ಕಡಿಮೆ ಮಾಡ್ಕೊಳ್ಳಿಕ್ಕೆ ರಾಮ ನಾಮ ಜಪ ಮಾಡ್ತಿದ್ದೆ. ಈಗ ನಿಂತು ಹೋಗಿದೆ.

ಕಾಪ್ರೆಯವರು: ಮತ್ತೆ ಶುರು ಮಾಡಿ. ನಾಮಸ್ಮರಣೆ ಶಮ, ದಮ, ತಿತಿಕ್ಷೆ ಮುಂತಾದ ಎಲ್ಲ ಯೋಗ್ಯತೆಗಳನ್ನೂ ಎಳೆದುಕೊಂಡು ಬಂದು ನಿಮ್ಮ ಮುಂದೆ ಹಾಕುತ್ತೆ.

ನಾನು: ಆದರೆ ಆಹಾರ-ವಿಹಾರ ಮತ್ತು ಸ್ವಪ್ನಬೋಧೆಗಳನ್ನ ಯುಕ್ತವಾಗಿ ಇಟ್ಕೊಳ್ಳೋದು ಕಷ್ಟ ಆಗ್ತಾ ಇದೆ.

ಕಾಪ್ರೆಯವರು: ಸ್ವಪ್ನಬೋಧ ಅಂದಿದ್ದಕ್ಕೆ ನೆನಪಾಯ್ತು. ಇಲ್ಲಿ (ಅಮೇರಿಕಾದಲ್ಲಿ) ಈಗ ರಾತ್ರಿ. ಬೇಗ ಮಲಗಬೇಕು. ಇಲ್ಲಾಂದ್ರೆ ಹೆಂಡ್ತಿ ಬೈತಾಳೆ. ಮುಂಜಾನೆ ಯುನಿವರ್ಸಿಟಿಗೆ ಹೋಗ್ಬೇಕು.

ನಾನು: ಒಂದೇ ನಿಮಿಷ, ಮುಗಿಸಿಬಿಡ್ತೀನಿ. ಈ ಸ್ವಪ್ನದ ದೃಷ್ಟಿಯಲ್ಲಿ ಜಾಗೃತಿ ಸಂಪೂರ್ಣ ಭ್ರಮೆ. ಸುಷುಪ್ತಿಯಲ್ಲಿ ಸ್ವಪ್ನ ಮತ್ತು ಜಾಗೃತಿ ಎರಡೂ ಭ್ರಮೆ.. ಮೂರೂ ಅವಸ್ಥೆಗಳೂ ಪರಸ್ಪರ ವೈರುಧ್ಯದಿಂದ ”ತಾನಲ್ಲದ ಮತ್ತೊಂದು ಅವಸ್ಥೆಯ ಅಸ್ತಿತ್ವವನ್ನೇ ಇಲ್ಲದಂತೆ ಮಾಡಿಹಾಕ್ತವೆ”. ಹಾಗಾಗಿ ನಾಲ್ಕನೇಯ ಅವಸ್ಥೆಯಲ್ಲಿ ಈ ಮೂರಕ್ಕೂ ಅಸ್ತಿತ್ವವೇ ಇಲ್ಲವಲ್ಲ.. ಹಾಗೆ ಈ ಜಗತ್ತು ಭ್ರಮೆ ಅನ್ನೋದಾ..?

ಕಾಪ್ರೆಯವರು: ಈಗ ನೀವು ಸ್ವಲ್ಪ ಸರಿಯಾದ ದಾರಿಗೆ ಬಂದ್ರಿ. ಒಂದು ಅವಸ್ಥೆಯಲ್ಲಿದ್ದಾಗ ಮತ್ತೊಂದು ಅವಸ್ಥೆಯ ಅಸ್ತಿತ್ವ ಸುಳ್ಳು ಅಂತ ಸಾಬೀತಾಗೋದು ಮಾತ್ರವಲ್ಲ .. ಯಾವ ಅವಸ್ಥೆಯಲ್ಲೂ ಸ್ವಪ್ರಯತ್ನದಿಂದ ಇರಲಿಕ್ಕೆ ಸಾಧ್ಯವೇ ಇಲ್ಲ. ನಿದ್ದೆ ಬಂದಾಗ ನಿದ್ರಿಸಲೇ ಬೇಕು. ಕನಸು ಬಂದಾಗ ನೋಡಲೇ ಬೇಕು. ಸುಷುಪ್ತಿಯ ಆಳಕ್ಕಿಳಿಯೋದೂ ಕೂಡ ನಮ್ಮ ಕೈಯಲ್ಲಿಲ್ಲ. ಸುಷುಪ್ತಿ ನಮ್ಮನ್ನ ಎಚ್ಚರಕ್ಕೆ ತಂದು ಒಗೆದು ಹೊದಾಗ ಎಚ್ಚರ ನಮಗೆ ಅನಿವಾರ್ಯ. ಅವಸ್ಥೆಗಳ ಹಿಡಿತದಲ್ಲಿ ನಾವಿದ್ದೇವೆಯೇ ಹೊರತು ಅವುಗಳ ಮೇಲೆ ನಮ್ಮ ಕಂಟ್ರೋಲ್ ಇಲ್ಲ. ಜಾಗೃತಿಗಿಂತ ಸ್ವಪ್ನ ಸ್ವಲ್ಪ Subtle ಆದದ್ದು. ಸ್ವಪ್ನಕ್ಕಿಂತ ಸುಷುಪ್ತಿ ಮೇಲ್ಮಟ್ಟದ್ದು ಅಷ್ಟೇ.

ನಾನು: ಹ್ಮ್….ನಾಲ್ಕನೆಯ ಅವಸ್ಥೆಯ ಸ್ಯಾಂಪಲ್ ಮಾತ್ರ ಸುಷುಪ್ತಿಯಲ್ಲಿ ಸಿಕ್ತಾ ಇದೆ ಅಲ್ವಾ..? ಈಗ ಅರ್ಥ ಆಗ್ತಾ ಇದೆ. ಸುಷುಪ್ತಿಯಲ್ಲಿ ಕಾಲವೇ ಇಲ್ಲದೇ ಇರೋ ಹಾಗೆ ತುರೀಯದಲ್ಲೂ ಕಾಲವೇ ಇರೋದಿಲ್ಲ. ಹಾಗಾಗಿ ಈ ಕಾಲಗಣನೆ ಜಾಗೃತಿಗೆ ಮಾತ್ರ ಸೀಮಿತ ಅಂತಾಯ್ತು.

ಕಾಪ್ರೆಯವರು: ಸರಿಯಾಗಿ ಹಿಡಿದ್ರಿ. ತುರೀಯದಲ್ಲಿ ಕಾಲವೇ ಇಲ್ಲ. ಜಾಗೃತಿಗೆ ಮಾತ್ರ ಕಾಲದ ಮರ್ಯಾದೆ ಇರೋದು. ನೀವು ಕೇಳಿದ ಆ ಯುಗಗಳ ಹಾಗೂ ಮನ್ವಂತರಗಳ ಲೆಕ್ಕವೆಲ್ಲ ಜಾಗೃತಿ ಅವಸ್ಥೆಗೆ ಮಾತ್ರ ಸೀಮಿತ. ಜೀವದ ವಾಸ್ತವಿಕ ಸ್ಥಿತಿ ಯಾವುದು..? ಜಾಗೃತಿಯೋ, ಸ್ವಪ್ನವೋ..? ಸುಷುಪ್ತಿನೋ..? ಅಥವಾ ನಾಲ್ಕನೇಯದ್ದೋ…?

ನಾನು: ಗೊತ್ತಾಯ್ತು.. ಯಾವುದು ಜೀವದ ವಾಸ್ತವಿಕ ಸ್ಥಿತಿಯೋ.. ಅದೇ ಈ ಸೃಷ್ಟಿಯ ವಾಸ್ತವಿಕ ಸ್ಥಿತಿ. ಮತ್ತು ಜೀವದ ಆಯುಸ್ಸು ಎಷ್ಟೋ .. ಈ ಸೃಷ್ಟಿಯ ಆಯುಸ್ಸೂ ಕೂಡ ಅಷ್ಟೇ.

ಕಾಪ್ರೆಯವರು: ಬಿಲ್ ಕುಲ್.

ನಾನು: ಎಲ್ಲಾ ಕ್ಲಿಯರ್ ಆಯ್ತು. ಸರಿ. ನೀವು ಮಲ್ಕೊಳ್ಳಿ. ಮತ್ತೆ ಮಾತಾಡೋಣ; ಶುಭರಾತ್ರಿ.

ಕಾಪ್ರಯವರು: ರಾಮ್ ರಾಮ್. ಶುಭರಾತ್ರಿ

ಕರೆ ಕಟ್ ಮಾಡಿ ಕಣ್ಣು ಮುಚ್ಚಿ ಕುಳಿತುಕೊಂಡರೆ ವರ್ಣಿಸಲಾಗದ ಖುಷಿಯಾಗತೊಡಗಿತು. ಸರ ಸರನೆ ಮೆಟ್ಟಿಲು ಹತ್ತಿ ಆಫೀಸಿನ ಛಾವಣಿ ಮೇಲೆ ಹೋಗಿ ನಿಂತು ಆಕಾಶದ ಕಡೆಗೆ ನೋಡಿದರೆ ಸುತ್ತಲೂ ಕಟ್ಟಡಗಳು. ಮೇಲೆ ಅನಂತ ಆಕಾಶ. ಆದರೆ ಅನಂತ ಕಾಣಿಸುವುದಿಲ್ಲ. ಏಕೆಂದರೆ ಕಣ್ಣುಗಲ Range ಕೂಡ ಬುದ್ಧಿಯ ರೇಂಜ್’ನ ಹಾಗೆ ಸೀಮಿತ. ಇಂದ್ರಿಯಗಳು ಮತ್ತು ಬುದ್ದಿ ಎರಡೂ ”ಸಾಂತ”ವೇ. ಹಾಗಾಗಿ ಅವುಗಳಿಗೆ ”ಅನಂತ” ನಿಲುಕುವುದಿಲ್ಲ.

You are so full of yourself. Please reduce that. Just understand your place in this existence. You are nothing but a spec of dust on this eternal creation. Suppose if you disappear from tomorrow, nothing will change. Everything will be fine. I am educated, I am intelligent, I am Honest, I am good, I am beautiful, I am strong, I am weak, i am rich, I am poor, I am that, I am this, reduce all this bull shit. self importance is the hell which you have created for yourself ಅಂತ ಸದ್ಗುರು ಯಾವತ್ತೋ ಹೇಳಿದ್ದು ಕೆನ್ನೆಯ ಮೇಲೆ ಬಾರಿಸಿದ ಹಾಗೆ ನೆನಪಾಗಿ personality ಅನ್ನೋ ಹಾಳು ಗೋಡೆಗಳೆಲ್ಲ ಕುಸಿದು ಹೋಗತೊಡಗಿದ ಮೇಲೆ ಎದೆಯ ಮೇಲಿನಿಂದ ಬೆಟ್ಟದಷ್ಟು ಭಾರ ಇಳಿದುಹೋಯ್ತು.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!