Featured ಅಂಕಣ

ಬೇಸಿಗೆ ರಜೆಯಲ್ಲಿ ಈ ಪುಸ್ತಕಗಳು ನಿಮ್ಮ ಮಕ್ಕಳ ಕೈಗೆಟುಕುವಂತಿರಲಿ!

ಮಕ್ಕಳಿಗೆ ಏನನ್ನು ಓದಿಸೋದು ಸಾರ್ ಎಂದು ಅನೇಕರು ಆಗಾಗ ಕೇಳುತ್ತಾರೆ. ಇದು ಬಹಳ ಕಷ್ಟದ ಪ್ರಶ್ನೆ. ಥಿಯರಿ ಆಫ್ ರಿಲೇಟಿವಿಟಿಯನ್ನು ನಮ್ಮ ಹುಡುಗನಿಗೆ ವಿವರಿಸಿ ಅಂದರೆ ಪ್ರಯತ್ನಪಡಬಹುದೇನೋ, ಆದರೆ ಈ ಹುಡುಗನಿಗೆ ಏನನ್ನಾದರೂ ಓದಿಸಿ ಅಂದರೆ ಓದಿಸುವುದು ಹೇಗೆ? ಬೇಸಿಗೆ ಶಿಬಿರ, ಕ್ರಿಕೆಟ್ ತರಬೇತಿ, ತಬಲಾ ಕ್ಲಾಸು, ಮುಂದಿನ ವರ್ಷದ ತರಗತಿಗೆ ಟ್ಯೂಷನ್ ಕ್ಲಾಸು, ಕಾಲ ವ್ಯಯಿಸಲು ಅಂತರ್ಜಾಲ, ನೂರಾರು ಟಿವಿ ಚಾನೆಲುಗಳು, ಮತ್ತು ಕೈಯಲ್ಲಿ 4ಜಿ ಹಾಕಿಸಿದ ಮೊಬೈಲು – ಇವೆಲ್ಲ ಯಾವ ಆಕರ್ಷಣೆಗಳೂ ಇಲ್ಲದಿದ್ದ ಪುರಾತನ ಕಾಲದಲ್ಲಿ ಬಾಲ್ಯ ಕಳೆದ ನನ್ನಂಥವರಿಗೆ ಪುಸ್ತಕಗಳಷ್ಟು ದೊಡ್ಡ ಸಂಗಾತಿಗಳು ಬೇಸಿಗೆ ರಜೆಯಲ್ಲಿ ಮತ್ಯಾರೂ ಇರಲಿಲ್ಲ. ಜಿರಳೆಯ ರುಚಿ ಹತ್ತಿದ ಬೆಕ್ಕು ಅಡುಗೆಮನೆಯ ಮೂಲೆಮೂಲೆಗಳನ್ನೂ ತಲಾಶ್ ಮಾಡುವಂತೆ, ಒಂದೆರಡು ಪುಸ್ತಕಗಳನ್ನು ಓದಿ ರುಚಿಹತ್ತಿ ಮರುಳಾಗಿದ್ದ ನಾವು ಅಂಥ ಪುಸ್ತಕಗಳಿಗಾಗಿ ಮನೆಯ ಕಪಾಟುಗಳನ್ನೆಲ್ಲ ಅಡಿಮೇಲು ಮಾಡುತ್ತಿದ್ದೆವು. ವೈಯಕ್ತಿಕವಾಗಿ ನನ್ನದೇ ಅನುಭವ ಹೇಳಬೇಕೆಂದರೆ, ಕನಿಷ್ಠ ಏಳು ವರ್ಷಗಳ ಕಾಲ ನಾನು ನಮ್ಮೂರಿನ ಗ್ರಂಥಾಲಯದ ಪ್ರತಿನಿತ್ಯದ ಸಂದರ್ಶಕನಾಗಿದ್ದೆ. ನನ್ನಜ್ಜಿ ಹಸುವಿಗೆ ಗಂಜಿ ನೀರಿಡಲು ಮರೆತ ದಿನವಿದ್ದೀತು, ಆದರೆ ಒಂದಾದರೂ ಪುಟವನ್ನು ಓದದೆ ಮಲಗಿದ ದಿನ ನನ್ನ ಬಾಲ್ಯದಲ್ಲಿರಲಿಲ್ಲ. ವರ್ಷಗಳು ಕಳೆದಿವೆ. ನೇತ್ರಾವತಿಯಲ್ಲಿ ಬಹಳಷ್ಟು ನೀರು ಹರಿದಿದೆ. ಪುಸ್ತಕಗಳನ್ನು ಪಟ್ಟಾಗಿ ಕೂತು ಓದುವ ಹುಕಿ ಈಗಲೂ ಬತ್ತಿಲ್ಲವಾದರೂ ಹಾಗೆ ನೂರಿನ್ನೂರು ಪುಟಗಳನ್ನು ತಡೆಯಿಲ್ಲದೆ ಓದಲು ಉದ್ಯೋಗದ ಒತ್ತಡ ಬಿಡುವುದಿಲ್ಲ. ಮರಳಿ ಬಾರೆಯಾ ಬಾಲ್ಯವೇ ಎನ್ನುತ್ತ ಸ್ವರ್ಗಸಮಾನ ಗತಕಾಲವನ್ನು ಆಗಾಗ ನೆನಪಿಸಿಕೊಂಡು ನಿಡುಸುಯ್ಯುತ್ತೇನೆ.

ಮತ್ತೆ ಕತೆಯ ಪ್ರಾರಂಭಕ್ಕೆ ಮರಳುವುದಾದರೆ, ಮಕ್ಕಳಿಗೆ ಓದಿಸೋದು ಏನನ್ನು – ಎಂಬ ಪ್ರಶ್ನೆಯನ್ನು ಕೇಳುವವರು ಹೆಚ್ಚಾಗುತ್ತಿದ್ದಾರೆ. ಮಕ್ಕಳಿಗೆ ನಿಜಕ್ಕೂ ಏನನ್ನಾದರೂ ಓದಿಸುವುದು ಸಾಧ್ಯವೇ ಎಂಬ ಪ್ರಶ್ನೆ ನನ್ನದು. ಮನೆಯಲ್ಲಿ ಒಂದೆರಡು ಕಪಾಟು ಮಾಡಿಸಿ, ಅಲ್ಲಿ ಒಂದಷ್ಟು ಪುಸ್ತಕಗಳನ್ನು ಇಡಿಸಿ, ಮಗನಿಗೆ ಕಂಪ್ಯೂಟರ್ ಕೊಡಿಸಿ, ಅದರಲ್ಲಿ ಇಂಟರ್ನೆಟ್ ಹಾಕಿಸಿ, ಮನೆಯಲ್ಲಿ ಎರಡೆರಡು ಟಿವಿಗಳನ್ನು ಪ್ರತಿಷ್ಠಾಪಿಸಿ, ಒಂದರಲ್ಲಿ ವಿಡಿಯೋ ಗೇಮ್ ಇನ್ಸ್ಟಾಲ್ ಮಾಡಿಸಿ, ಅಷ್ಟರಮೇಲೆ ಮಗನನ್ನು ಬೇಸಿಗೆ ಶಿಬಿರಕ್ಕೂ ಸ್ವಿಮ್ಮಿಂಗ್ ಕ್ಲಾಸಿಗೂ ಟ್ಯೂಷನ್ನಿಗೂ ಫಿಕ್ಸ್ ಮಾಡಿ, ಕೊನೆಗೆ ಈತ ಓದುವುದೇ ಇಲ್ಲ ಎಂದು ಅಲವತ್ತುಕೊಳ್ಳುವವರಿದ್ದಾರೆ. ಗಿಡ ಬೆಳೆಯಬೇಕಾದರೆ ಅದರ ಬುಡದ ಸುತ್ತ ಮಣ್ಣಿರಬೇಕು; ಮತ್ತದರಲ್ಲಿ ತೇವವಿರಬೇಕು. ಬೇರಿಗೆ ಯಾವ ದಿಕ್ಕಿನಲ್ಲಿ ಚಾಚುತ್ತ ಬೆಳೆದರೆ ನೀರು ಸಿಕ್ಕೀತೆಂಬ ಸುಳಿವು ಸಿಗುವಂತಿರಬೇಕು. ಮಣ್ಣೇ ಇಲ್ಲದ ಪಾತಿಯಲ್ಲಿ ಗಿಡವನ್ನಿಟ್ಟು ಪಕ್ಕದಲ್ಲಿ ಹಂಡೆಗಟ್ಟಲೆ ನೀರಿಟ್ಟರೂ ಗಿಡದ ಬೇರು ನೀರನ್ನು ಹುಡುಕಿಕೊಂಡು ಬರಲಾರದು. ನಮ್ಮ ಇಂದಿನ ಎಷ್ಟು ಮನೆಗಳಲ್ಲಿ ತಂದೆತಾಯಿಯರು ಪುಸ್ತಕ ಓದುತ್ತಾರೆ? ಏನೋ ಒಂದು ವಿಷಯ ಗೊತ್ತಾಗಲಿಲ್ಲ ಎಂದರೆ ಎಷ್ಟು ಜನ ನೋಡೋ ಆ ಡಿಕ್ಷನರಿ ತಗೊಂಬಾ, ಈ ವಿಶ್ವಕೋಶ ನೋಡು ಎಂದೆಲ್ಲ ಹೇಳುತ್ತಾರೆ? ಅಸಲಿಗೆ ಎಷ್ಟು ಮನೆಗಳಲ್ಲಿ ಕಿರಿಯರ ವಿಶ್ವಕೋಶವಾಗಲೀ ಭಾರದ್ವಾಜ ಡಿಕ್ಷನರಿಯಾಗಲೀ ಬ್ರಿಟಾನಿಕಾದ ಹಳೆಯ ಸಂಪುಟಗಳಾಗಲೀ ಸಿಗುತ್ತವೆ? ಎಷ್ಟು ಮನೆಗಳಲ್ಲಿ ಮಕ್ಕಳಿಗೆ ಹೆತ್ತವರ ಜೊತೆ ಒಂದರ್ಧ ಗಂಟೆ ಕೂತು ಹರಟುವ, ತಾವು ಓದಿದ ಪುಸ್ತಕಗಳ ಬಗ್ಗೆ ಮಾತಾಡುವ ವಿರಾಮ ಇದೆ? ಎಷ್ಟು ಜನ ತಂದೆತಾಯಿಯರು ತಮ್ಮ ಮಕ್ಕಳನ್ನು ಹತ್ತಿರ ಕೂರಿಸಿಕೊಂಡು ಪುಸ್ತಕ ಓದುತ್ತಾರೆ? ಪುಸ್ತಕಗಳ ಬಗ್ಗೆ ಚರ್ಚಿಸುತ್ತಾರೆ? ಇವೆಲ್ಲ ಯಾವುದೂ ಇಲ್ಲದೆ, ಕಪಾಟು ಮಾಡಿಸಿ ಒಂದಿಪ್ಪತ್ತು ಪುಸ್ತಕ ಇಟ್ಟು ಮಗ ಅವುಗಳನ್ನು ಓದಿಯೇ ಇಲ್ಲವೆಂದರೆ ತಪ್ಪು ನಿಜವಾಗಿಯೂ ಯಾರದ್ದು? ಹಾಗಾಗಿ, ಪುಸ್ತಕಗಳನ್ನು ಓದಿಸುವುದು ಇಂದಿನ ಅಗತ್ಯವಲ್ಲ; ಓದುವ ವಾತಾವರಣವನ್ನು ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ.

ಹಾಗಂತ ಮಕ್ಕಳು ಯಾವ ಪುಸ್ತಕವನ್ನಾದರೂ ಓದಿಕೊಳ್ಳಲಿ ಎಂದು ಅವರ ಪಾಡಿಗೆ ಬಿಟ್ಟುಬಿಡುವುದೂ ಸರಿಯಲ್ಲ ನೋಡಿ. ಮಕ್ಕಳಿಗೆ ನಡೆಯುವುದನ್ನು ಕಲಿಸಿದಂತೆ, ರುಚಿ ಸಂಸ್ಕೃತಿಯನ್ನು ಕಲಿಸಿದಂತೆ ಓದಿನ ಅಭಿರುಚಿಯನ್ನೂ ಪೋಷಕರು ಕಲಿಸಬೇಕಾಗುತ್ತದೆ. ಸಿನೆಮಾಟೋಗ್ರಫಿ ಕಲಿಸುವ ಶಾಲೆಗಳಲ್ಲಿ ನಿರಂತರವಾಗಿ ಸಿನೆಮಾ ರಸಗ್ರಹಣ ತರಗತಿಗಳನ್ನೂ ನಡೆಸುತ್ತಾರೆ. ಕೇವಲ ಕ್ಯಾಮರಾ ಕೆಲಸ, ಎಡಿಟಿಂಗ್ ಮುಂತಾದ ತಾಂತ್ರಿಕ ಪರಿಣಿತಿ ಮಾತ್ರ ಗಳಿಸಿದರೆ ಸಾಲದು ಸಿನೆಮಾಗಳನ್ನು ಒಳಗಣ್ಣಿನಿಂದ ನೋಡುವ, ಅವುಗಳ ಆಂತರ್ಯದ ಸೌಂದರ್ಯವನ್ನು ಮೆಚ್ಚುವ ಮನಸ್ಸನ್ನು ರೂಪಿಸಿಕೊಳ್ಳುವುದೂ ಅಗತ್ಯವಾಗುತ್ತದೆ. ಹಾಗೆಯೇ, ಮಕ್ಕಳಿಗೆ ಓದಲೆಂದು ಒಂದೈದಾರು ಸಾವಿರ ಚೆಲ್ಲಿ ಸಿಕ್ಕ ಹತ್ತಾರು ಪುಸ್ತಕಗಳನ್ನು ತಂದು ಮನೆಯ ಕಪಾಟು ತುಂಬಿಸಿದರೆ ಸಾಲದು; ಮಗು ಎಂಥ ಪುಸ್ತಕವನ್ನು ಓದಬೇಕು; ಯಾವ ದಾರಿಯಲ್ಲಿ ಮಗುವಿನ ಸಂಸ್ಕಾರ ಹುರಿಗಟ್ಟಬೇಕು ಎಂಬುದನ್ನೂ ಪೋಷಕರು ಯೋಚನೆ ಮಾಡಲೇಬೇಕಾಗುತ್ತದೆ. ಬಿತ್ತಿದಂತೆ ಬೆಳೆ, ನೂಲಿನಂತೆ ಸೀರೆ ಅಲ್ಲವೇ? ಹಾಗೆಯೇ, ನಿಮ್ಮ ಮಗುವಿನ ಪುಟ್ಟ ಗ್ರಂಥಾಲಯದಲ್ಲಿ ಎಂಥ ಪುಸ್ತಕಗಳಿವೆಯೆಂಬುದೂ ಆತ ಮುಂದೆ ಯಾವ ದಾರಿಯಲ್ಲಿ ನಡೆಯುತ್ತಾನೆಂಬುದರ ಒಂದು ಸೂಚಕವಾಗಿರಲಿಕ್ಕೆ ಬಹ್ವಂಶ ಸಾಧ್ಯ. ಅಂದಹಾಗೆ, ಈ ವರ್ಷದ ಬೇಸಿಗೆ ರಜೆಯಲ್ಲಿ ಎಂಥ ಪುಸ್ತಕ ನಿಮ್ಮ ಮಕ್ಕಳ ಕೈಗೆಟುಕುವಂತೆ ನೋಡಿಕೊಳ್ಳುತ್ತೀರಿ?

ಇಂಥ ಲೇಖನಗಳನ್ನು ಬರೆಯುವಾಗ ಹೆಚ್ಚಾಗಿ ನಾನು ಏಕಪಕ್ಷೀಯ ದಾರಿಯನ್ನು ಹಿಡಿಯುವುದಿಲ್ಲ. ಅಂತರ್ಜಾಲದಲ್ಲಿ ಇತ್ತೀಚೆಗೆ ಕ್ರೌಡ್ ಸೋರ್ಸಿಂಗ್ ಎಂಬ ಪರಿಕಲ್ಪನೆ ಗರಿಗೆದರುತ್ತಿದೆ. ಯಾವುದಾದರೂ ಕೆಲಸಕ್ಕೆ ನೂರಾರು ಜನ ಹತ್ತೋ ಇಪ್ಪತ್ತೋ ರುಪಾಯಿಗಳನ್ನು ಕೂಡಿಸಿ ನಿಧಿ ಸಂಗ್ರಹಿಸುವ ಕೆಲಸ ಅದು. ಅಂಥಾದ್ದೇ ದಾರಿಯನ್ನು ನಾನೂ ಹಿಡಿದೆ. ಬೇಸಿಗೆ ರಜೆಯ ಎರಡು ತಿಂಗಳಲ್ಲಿ ಮಕ್ಕಳಿಗೆ ಓದಿಸಬಹುದಾದ, ನೀವು ಚಿಕ್ಕವರಿದ್ದಾಗ ಓದಿದ್ದ, ಅಥವಾ ಮುಂದೆ ಎಂದೋ ಓದಿ ಅರರೆ ಇದನ್ನು ಚಿಕ್ಕವನಿದ್ದಾಗ ಓದಿಬಿಟ್ಟಿದ್ದರೆ ಎಷ್ಟು ಚೆನ್ನಿತ್ತು ಎಂದು ಪರಿತಪಿಸುವಂತೆ ಮಾಡಿದ ಪುಸ್ತಕಗಳ ಪಟ್ಟಿ ಕೊಡಿ ಎಂದು ಗೆಳೆಯರನ್ನು ಕೇಳಿದೆ. ಆಗ ಬಂದ ಉತ್ತರಗಳನ್ನೆಲ್ಲ ನನಗೆ ಸರಿಕಂಡಂತೆ ಪೋಣಿಸಿ ಇಲ್ಲಿ ತೋರಣಕಟ್ಟಿದ್ದೇನೆ. ನಡುವೆ ಅಲ್ಲೋ ಇಲ್ಲೋ ಒಂದೆರಡು ಹೆಸರುಗಳನ್ನಷ್ಟೇ ನಾನಾಗಿ ಸೇರಿಸಿದ್ದೇನೆ. ಹಾಗಾಗಿ ಈ ಬರಹಕ್ಕೆ ನಾನು ಲಿಪಿಕಾರ ಎಂದಷ್ಟೇ ಹೇಳಬಹುದು.

ಕತೆ-ಕಾದಂಬರಿಗಳ ಲೋಕ

ಮೊದಲಿಗೆ ನಮ್ಮ ಪಟ್ಟಿಯನ್ನು ಕತೆ-ಕಾದಂಬರಿಗಳಿಂದಲೇ ಶುರು ಮಾಡೋಣ. ಎಷ್ಟೆಂದರೂ ಹುಡುಗರಿಗೆ ಕತೆಗಳಲ್ಲಿ ಆಸಕ್ತಿ ಹೆಚ್ಚೇ ಅಲ್ಲವೆ? ಶಿವರಾಮ ಕಾರಂತರ ಹೆಸರನ್ನು ಕೇಳದವರು ಯಾರೂ ಇಲ್ಲ. ಅವರ ಕಾದಂಬರಿಗಳು ಎಪ್ಪತ್ತರ ದಶಕದ ಇಡೀ ಕನ್ನಡ ಓದುಗ ಸಮುದಾಯವನ್ನು ಪ್ರಭಾವಿಸಿದ ರೀತಿಯೇ ಅನನ್ಯವಾದದ್ದು. ಅವರ “ಕುಡಿಯರ ಕೂಸು” ಕಾದಂಬರಿಯಿಂದಲೇ ಶಾಲಾಹುಡುಗರು ಕಾರಂತರನ್ನು ಓದುವ ಯಾತ್ರೆಯನ್ನು ಪ್ರಾರಂಭಿಸಬಹುದು. 1951ರಲ್ಲಿ ಬರೆದದ್ದಾದರೂ ಇಂದಿಗೂ ಡಿಕ್ಷನರಿ ಬೇಕಿಲ್ಲದೆ ಓದಿಸಿಕೊಂಡುಹೋಗುವ ಸರಳಗನ್ನಡದ ಕಾದಂಬರಿ ಇದು. 1978ರಲ್ಲಿ ಇದನ್ನಾಧರಿಸಿ “ಮಲೆಯ ಮಕ್ಕಳು” ಸಿನೆಮಾ ಕೂಡ ಬಂತು. ಕಾರಂತರ ರುಚಿ ಹತ್ತಿದೆ, ಇನ್ನೊಂದೆರಡನ್ನು ಓದಿಮುಗಿಸಬೇಕಾಗಿದೆ ಅನ್ನಿಸಿದರೆ “ಮುಗಿದ ಯುದ್ಧ” ಮತ್ತು “ಬೆಟ್ಟದ ಜೀವ”ಗಳನ್ನೂ ಕೈಗೆತ್ತಿಕೊಳ್ಳಬಹುದು. ಇನ್ನು, ಒಂದೇ ವ್ಯಕ್ತಿ ಜಗತ್ಪ್ರಸಿದ್ಧ ಕಲಾವಿದನೊಬ್ಬನಿಗೆ ಜೀವನದ ಎರಡು ಘಟ್ಟಗಳಲ್ಲಿ ಎದುರಾಗುವ ಅದ್ಭುತ ಕತೆ “ರೂಪದರ್ಶಿ”. ಬರೆದವರು ಕೆ.ವಿ. ಅಯ್ಯರ್. ಸಾಹಿತ್ಯ ಮತ್ತು ಇತಿಹಾಸ ಎರಡರಲ್ಲೂ ಆಸಕ್ತಿಯುಳ್ಳ ಹೈಸ್ಕೂಲ್ ಹುಡುಗರು ಅವರ “ಶಾಂತಲಾ” ಕಾದಂಬರಿಯನ್ನು ತಪ್ಪಿಸಿಕೊಳ್ಳಬಾರದು. ಕತೆ ಸರಳವಾಗಿರಬೇಕು, ಗಹನವೂ ಇರಬೇಕು, ತಮಾಷಿ ಇರಬೇಕು, ವೇದಾಂತವೂ ಬೇಕು ಎಂದು ಅದೂ ಬೇಕು ಇದೂ ಬೇಕೆಂದು ಹಂಬಲಿಸುವ ಆಸೆಬುರುಕರು ಪೂರ್ಣಚಂದ್ರ ತೇಜಸ್ವಿಯವರ “ಕರ್ವಾಲೋ” ಕಾದಂಬರಿಯನ್ನು ಕೈಗೆತ್ತಿಕೊಳ್ಳಬೇಕು. ನಮ್ಮಲ್ಲಿ ಬಹುತೇಕ ಕನ್ನಡಿಗರ ಸಾಹಿತ್ಯಪ್ರೀತಿ ಶುರುವಾದದ್ದೇ ಕರ್ವಾಲೋದಿಂದ. ಹಾಗೆಯೇ, ಬದುಕಿನ ಸೂಕ್ಷ್ಮಗಳನ್ನು ಅಷ್ಟೇ ನಯವಾಗಿ ಅನಾವರಣಗೊಳಿಸುವ ಕತೆಗಳನ್ನು ಹಂಬಲಿಸುವವರು ಮಾಸ್ತಿಯವರನ್ನು ಬಿಟ್ಟಾರೇ? ಓದಲು ಕೂತರೆ ಅವರ ಎಲ್ಲ ಕತೆಗಳನ್ನೂ ನಿದ್ದೆ-ಊಟ ಮರೆತೇಬಿಟ್ಟು ಪಟ್ಟಾಗಿ ಕೂತು ಓದಿಬಿಟ್ಟಾರು. ಅರಣ್ಯದ ಸೌಂದರ್ಯ, ಸರಳತೆ, ಗಹನತೆ ಮತ್ತು ನಿಬಿಡತೆಯನ್ನು ನೆನಪಿಸುವ ಮಾಸ್ತಿ ಕತೆಗಳು, ಅದರಲ್ಲೂ “ರಂಗಪ್ಪನ ದೀಪಾವಳಿ”, “ಮೊಸರಿನ ಮಂಗಮ್ಮ”, “ಗೌತಮ ಹೇಳಿದ ಕತೆ”, “ಸುಬ್ಬಣ್ಣ” ಮುಂತಾದ ಕತೆಗಳ ಪುಳಿಯೋಗರೆಯಂಥ ರುಚಿ ಸವಿಯದೆ ತಿಳಿಯುವುದೆಂತು? ಇನ್ನು, ಇಂಗ್ಲೀಷಿನಲ್ಲಿ ಸೈ-ಫೈ ಎಂಬ ಪ್ರಕಾರವಿದೆ. ವೈಜ್ಞಾನಿ-ಕಥಾ ಸಾಹಿತ್ಯ ಎನ್ನಬಹುದು ಕನ್ನಡದಲ್ಲಿ. ಅಂಥವು ಇಷ್ಟವಾಗುತ್ತವೆ ಎನ್ನುವವರು ಓದಬೇಕಾದ ಪುಸ್ತಕಗಳು: ರಾಜಶೇಖರ ಭೂಸನೂರಮಠರ “ರಾಕ್ಷಸ ದ್ವೀಪ” ಮತ್ತು “ಅಟ್ಲಾಂಟಿಸ್”. ಮಲಯಾಳಂ ತಾಯಿನುಡಿಯಾಗಿದ್ದ ನಾ.ಕಸ್ತೂರಿ ಕನ್ನಡ ಕಲಿತು, ಅದರಲ್ಲಿ ಪಂಟರಾಗಿ, ಕುವೆಂಪು ಅವರಿಂದಲೇ ಶಾಬ್ಬಾಷ್ ಅನ್ನಿಸಿಕೊಳ್ಳುವಷ್ಟು ಚೆನ್ನಾಗಿ ಕನ್ನಡದಲ್ಲಿ ಬರೆದ ಮೊದಲ ಪುಸ್ತಕ “ಪಾತಾಳದಲ್ಲಿ ಪಾಪಚ್ಚಿ”. ಮೂಲ “ಆಲಿಸ್ ಇನ್ ವಂಡರ್‍ಲ್ಯಾಂಡ್” ಎಂದು ಹೇಳಿದರಷ್ಟೇ ನಿಮಗೆ ಇದೊಂದು ಅನುವಾದ ಕೃತಿ ಎಂದು ತಿಳಿದೀತು. ಹಾಗೆಯೇ, “ಜರ್ನಿ ಟು ದ ಸೆಂಟರ್ ಆಫ್ ಅರ್ಥ್” ಎಂಬ ಸೈ-ಫೈ ಕತೆಯನ್ನು ಕನ್ನಡಕ್ಕೆ ತಂದವರು ಕವಿ ಗೋಪಾಲಕೃಷ್ಣ ಅಡಿಗರು! ಆ ಕೃತಿಯ ಹೆಸರು: “ಭೂಗರ್ಭ ಯಾತ್ರೆ” ಎಂದು. ಇಷ್ಟೆಲ್ಲ ದೊಡ್ಡ ಪಟ್ಟಿಗೆ ನಾನು ಸೇರಿಸಬಯಸುವ ಒಂದು ಪುಟ್ಟ, ಆದರೆ ಅತ್ಯಂತ ಚೆಂದದ ಪುಸ್ತಕ: ಸೇಡಿಯಾಪು ಕೃಷ್ಣಭಟ್ಟರು ಬರೆದ ನಾಲ್ಕು ಕತೆಗಳ ಸಂಗ್ರಹ “ಪಳಮೆಗಳು”.

ಬದುಕಲು ಕಲಿಸುವ ಕೃತಿಗಳು

ಜೀವನಪಾಠ ಕಲಿಸುವ, ಜೀವನಕ್ಕೆ ಸ್ಫೂರ್ತಿದಾಯಕವಾದ ಕೃತಿಗಳನ್ನು ಓದಲು ಆಸೆ ಇರುವವರು ಮೊತ್ತಮೊದಲು ಎತ್ತಿಕೊಳ್ಳಬೇಕಾದ್ದು ಸ್ವಾಮಿ ಜಗದಾತ್ಮಾನಂದರ “ಬದುಕಲು ಕಲಿಯಿರಿ”. ಈ ಕೃತಿಯನ್ನು ಪೂರ್ತಿಯಾಗಿ ಓದಿದ ಯಾರೇ ಆದರೂ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾರರು ಎಂದು ಧೈರ್ಯದಿಂದ ಹೇಳಬಹುದು! ಇದೇ ಕೃತಿಯ ಸಾಲಿಗೆ ಸೇರುವ ಇನ್ನೆರಡು: ಗುರುರಾಜ ಕರ್ಜಗಿಯವರ “ಕರುಣಾಳು ಬಾ ಬೆಳಕೆ” ಮತ್ತು ಷಡಕ್ಷರಿಯವರ “ಕ್ಷಣಹೊತ್ತು ಆಣಿಮುತ್ತು”. ಭಾವನಾತ್ಮಕ ಸಂಬಂಧಗಳ ಬಗ್ಗೆ ಬರೆದ ಆರ್ದೃ ಕತೆಗಳು ಇಷ್ಟವಾಗುತ್ತವೆ ಎಂಬ ಹೆಂಗರುಳಿನ ಸಹೃದಯರು ಮಿಸ್ ಮಾಡಿಕೊಳ್ಳಬಾರದ ಪುಸ್ತಕಗಳು: ಜೋಗಿ ಬರೆದ “ಲೈಫ್ ಈಸ್ ಬ್ಯೂಟಿಫುಲ್” ಮತ್ತು ಎ.ಆರ್. ಮಣಿಕಾಂತ್‍ರ “ಅಮ್ಮ ಹೇಳಿದ ಎಂಟು ಸುಳ್ಳುಗಳು”. ಒಳ್ಳೆಯ ಮಗಳಾಗಬೇಕು/ಮಗನಾಗಬೇಕು ಹಾಗೆಯೇ ಮುಂದೆ ಒಳ್ಳೆಯ ಅಪ್ಪ/ಅಮ್ಮನೂ ಆಗಬೇಕೆಂದು ಹಂಬಲಿಸುವವರು “ತೊತ್ತೋ-ಚಾನ್” ಕೃತಿಯನ್ನೊಮ್ಮೆ ಓದಬೇಕು. ಜಪಾನಿನ ತಾಯಿಯೊಬ್ಬಳು ಬರೆದದ್ದನ್ನು ಅಷ್ಟೇ ಸರಳವಾಗಿ ವಿ.ಗಾಯತ್ರಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಜಗತ್ತಿನ ಎಲ್ಲ ಮೂಲೆಗಳ ತಂದೆತಾಯಿಯರೂ ಮಕ್ಕಳೂ ಮೂಲತಃ ಒಂದೇ, ಮಾನವ ಸಂಬಂಧಗಳು ಒಂದೇ, ನಾವೆಲ್ಲ ಕೇವಲ ರಾಜಕೀಯ ಗಡಿರೇಖೆಗಳಿಂದಾಗಿ ಬೇರೆಬೇರೆ ರಾಷ್ಟ್ರವಾಸಿಗಳಾಗಿದ್ದೇವೆ ಅಷ್ಟೆ ಎಂಬ ವಿಶ್ವಮಾನವತೆಯನ್ನು ಕೂಡ ನೆನಪಿಸುವ ಪುಸ್ತಕ ಇದು. ಬಾಲ್ಯವೆನ್ನುವುದು ಕನಸುಗಳನ್ನು ಕಟ್ಟುವ ವಯಸ್ಸು. ಜೀವನದಲ್ಲಿ ಮುಂದೆ ಬರಬೇಕು, ದೊಡ್ಡದೊಂದು ಸಾಧನೆ ಮಾಡಬೇಕು, ಸಾಧ್ಯವಾದರೆ ಊರ ನಡುವಿನ ಬೆಟ್ಟವನ್ನೇ ಎತ್ತಿ ಬದಿಗಿಡಬೇಕು ಅನ್ನಿಸುವಂಥ ಹಂಬಲ ಹುತ್ತಗಟ್ಟುವ ವಯಸ್ಸು. ಅಂಥ ವೀರಾಗ್ರಣಿಗಳ ಕೈಗೆ ಕೊಡಬೇಕಾದ ಪುಸ್ತಕ ಯಂಡಮೂರಿ ವೀರೇಂದ್ರನಾಥರ “ವಿಜಯಕ್ಕೆ ಐದು ಮೆಟ್ಟಿಲು”.

ಸುಲಲಿತ ಓದಿಗಾಗಿ

ಹತ್ತಿಪ್ಪತ್ತು ವರ್ಷಗಳ ಹಿಂದೆ ಲಲಿತಪ್ರಬಂಧ ಎಂಬ ಲಲಿತವಾದ ಪ್ರಕಾರವೊಂದು ಕನ್ನಡ ಸಾಹಿತ್ಯದಲ್ಲಿತ್ತು. ಈಗ ಸ್ಥಳಾವಕಾಶದ ಅಭಾವದಿಂದ ಅದು ಪತ್ರಿಕೆಗಳಲ್ಲಿ ಬಹುತೇಕ ನಿಂತೇಹೋಗಿದೆ. ಕನ್ನಡದಲ್ಲಿ ಗತಿಸಿಹೋಗಿರುವ ಈ ಗತವೈಭವವನ್ನು ನೆನಪಿಸಿಕೊಳ್ಳಲು ಬಯಸುವವರು ಈ ಮೂರು ಪುಸ್ತಕಗಳನ್ನಾದರೂ ಓದಲೇಬೇಕು: “ಮಲೆನಾಡಿನ ಚಿತ್ರಗಳು” – ಕುವೆಂಪು; “ನಮ್ಮ ಊರಿನ ರಸಿಕರು” – ಗೊರೂರು ರಾಮಸ್ವಾಮಿ ಅಯ್ಯಂಗಾರ್; “ನಮ್ಮಮ್ಮ ಅಂದ್ರೆ ನಂಗಿಷ್ಟ” – ವಸುಧೇಂದ್ರ. ಅಂದಹಾಗೆ, ಬೇಸಿಗೆಯ ಸುಖವನ್ನು ಹಳ್ಳಿಯ ಅಜ್ಜಿಮನೆಯಲ್ಲಿ ಕಳೆಯಹೋಗುತ್ತಿರುವವರು ಈ ಪುಸ್ತಕಗಳನ್ನು ಸಂಜೆಯ ಗೋಧೂಳಿಯಲ್ಲಿ ಗದ್ದೆಯ ಬದುವಲ್ಲೋ ಗುಡ್ಡೆಯ ಏಕಾಂತದಲ್ಲೋ ಕೂತು, ಪಕ್ಕದಲ್ಲಿ ಹುರಿಗಡಲೆ ಇಟ್ಟುಕೊಂಡು ಓದಿದಾಗ ಸಿಗುವ ಅನುಭೂತಿಯೇ ಬೇರೆ! ಪ್ರಬಂಧಗಳನ್ನು ಓದುವವರು ಹೆಚ್ಚಾಗಿ ವ್ಯಕ್ತಪರಿಚಯಗಳನ್ನೂ ತಮ್ಮ ಓದಿನ ಪರಿಧಿಗೆ ಬಿಟ್ಟುಕೊಳ್ಳುತ್ತಾರೆ. ಐವತ್ತರವತ್ತು ವರ್ಷಗಳ ಹಿಂದಿನ ಜಗತ್ತನ್ನು ಅನಾವರಣ ಮಾಡುವ ಮೂರು ಪುಸ್ತಕಗಳನ್ನು ಈಗಿನ ನಮ್ಮ ಹುಡುಗರು ಅವಶ್ಯ ಓದಬೇಕಾಗಿದೆ. ಅವು: “ಕಲೋಪಾಸಕರು” – ಡಿವಿಜಿ; “ಎಲೆ ಮರೆಯ ಅಲರು” – ಬೆಳಗೆರೆ ಕೃಷ್ಣಶಾಸ್ತ್ರಿ ಮತ್ತು “ಬ್ರಹ್ಮಪುರಿಯ ಭಿಕ್ಷುಕ” – ಶತಾವಧಾನಿ ಆರ್.ಗಣೇಶ್. ಲಲಿತ ಪ್ರಬಂಧಗಳಿಗೂ ತಿಳಿಹಾಸ್ಯಕ್ಕೂ ಬಹಳ ಹತ್ತಿರದ ನಂಟಲ್ಲವೇ? ಈ ಬೇಸಿಗೆಯಲ್ಲಿ ಒಂದಷ್ಟು ಜೋರಾಗಿ, ತಿಳಿಯಾಗಿ, ಹದವಾಗಿ, ಮತ್ತೆಮತ್ತೆ ನೆನಪಿಸಿಕೊಂಡು ನಗುವಂಥ ಸಾಹಿತ್ಯ ಓದಬೇಕು ಎಂದು ಬಯಸುವವರು ಈ ಮೂರನ್ನು ಕೈಗೆತ್ತಿಕೊಳ್ಳಲಿ: “ತಿಂಮನ ತಲೆ” – ಬೀಚಿ; “ಬೆಸ್ಟ್ ಆಫ್ ರಾಶಿ” – ರಾ. ಶಿವರಾಂ; “ಎಂಥದು ಮಾರಾಯ್ರೇ” – ಭುವನೇಶ್ವರಿ ಹೆಗಡೆ.

ಅಂಕದ ಪರದೆ

ನಾನು ಚಿಕ್ಕವನಿದ್ದಾಗ ಇಂಥಾದ್ದೇ ಬೇಕೆಂಬ ಯಾವ ನಿರೀಕ್ಷೆ, ಸಮೀಕರಣಗಳನ್ನು ಇಟ್ಟುಕೊಳ್ಳದೆ ಕೈಗೆ ಸಿಕ್ಕಿದ್ದನ್ನೆಲ್ಲ ಗಬಗಬನೆ ಓದಿ ಮುಗಿಸುತ್ತಿದ್ದೆ. ಆಡಾದರೂ ಆಡುಸೋಗೆಯನ್ನು ತಿನ್ನದೆ ಬಿಟ್ಟಿರಬಹುದೇನೋ; ಆದರೆ ನಾನು ಓದದೆ ಬಿಟ್ಟ ಪ್ರಕಾರ ಯಾವುದೂ ಇರಲಿಲ್ಲ! ಆದರೂ ನಿಮ್ಮ ಇಷ್ಟದ ಪ್ರಕಾರ ಯಾವುದು ಎಂದರೆ ನನ್ನ ಉತ್ತರ “ನಾಟಕಗಳು”. ಕನ್ನಡದ ಶಕ್ತಿಯನ್ನು ನನಗೆ ಮೊತ್ತಮೊದಲು ಪೂರ್ಣಪ್ರಮಾಣದಲ್ಲಿ ಪರಿಚಯ ಮಾಡಿಕೊಟ್ಟದ್ದು ಎರಡು ನಾಟಕಗಳು. ಒಂದು – ಉತ್ತರ ಧ್ರುವದಂತಿರುವ, ಟಿ.ಪಿ. ಕೈಲಾಸಂ ಅವರ “ಪೋಲಿ ಕಿಟ್ಟಿ”. ಇನ್ನೊಂದು – ದಕ್ಷಿಣ ಧ್ರುವದಂತಿರುವ, ಸಂಸರ “ವಿಗಡ ವಿಕ್ರಮರಾಯ”. ಕನ್ನಡವನ್ನು ಹೀಗೂ ದುಡಿಸಿಕೊಳ್ಳಬಹುದೆ? ಆ ಬಾಗು, ಆ ವೇಗ, ಆ ಮೊನಚು, ಆ ಒಗಚು ಆಹಾ! ಕನ್ನಡದ ಅದ್ಭುತ ಶಕ್ತಿಯೇ! ಎನ್ನಿಸಿದ್ದು ಇವುಗಳನ್ನು ಓದಿದಾಗ. ನಾಟಕಗಳ ಹುಚ್ಚು ಹತ್ತಿಸಿಕೊಳ್ಳಬೇಕೆನ್ನುವವರು ಓದಬೇಕಾದ ಒಂದಷ್ಟು ಕೃತಿಗಳು: ದ.ರಾ. ಬೇಂದ್ರೆಯವರ “ಸಾಯೋ ಆಟ”, ಗಿರೀಶ ಕಾರ್ನಾಡರ “ತುಘಲಕ್”, ಪಿ.ಲಂಕೇಶರ “ಸಂಕ್ರಾಂತಿ” ಮತ್ತು ಜಯಂತ ಕಾಯ್ಕಿಣಿಯವರ “ಸೇವಂತಿ ಪ್ರಸಂಗ”. ಭಾರತದ ಸಾಹಿತ್ಯ ಇತಿಹಾಸದಲ್ಲಿ ಸಂಸ್ಕೃತ ನಾಟಕಗಳಿಗೊಂದು ವಿಶಿಷ್ಟ ಸ್ಥಾನವಿದೆ. ಸಂಸ್ಕೃತ ಸತ್ತ ಭಾಷೆ; ಅದು ಲಿಖಿತರೂಪದಲ್ಲಿ ಮಾತ್ರ ಬಳಕೆಯಲ್ಲಿತ್ತು; ಸಂಸ್ಕೃತ ಆಡುಭಾಷೆಯಾಗಿರಲಿಲ್ಲ ಎನ್ನುವ ಬುದ್ಧಿಜೀವಿಗಳಿಗೆ ಸವಾಲೆಸೆಯುವಷ್ಟು ದೊಡ್ಡ ಪ್ರಮಾಣದಲ್ಲಿ ಸಂಸ್ಕøತದಲ್ಲಿ ನಾಟಕ ಕೃತಿಗಳಿವೆ. ಅವುಗಳ ಅಂದಚಂದವನ್ನು ಕನ್ನಡದಲ್ಲಿ ಸವಿಯಬೇಕೆಂದು ಬಯಸುವವರು ಓದಬೇಕಾದ ಎರಡು ಅನುವಾದ ಕೃತಿಗಳು: “ರಾಕ್ಷಸನ ಮುದ್ರಿಕೆ” – ತೀ.ನಂ. ಶ್ರೀಕಂಠಯ್ಯ; “ಮತ್ತೆ ರಾಮನ ಕತೆ” – ಬನ್ನಂಜೆ ಗೋವಿಂದಾಚಾರ್ಯ. ನಮ್ಮ ಹೆಚ್ಚಿನ ನಾಟಕಗಳು ತಮ್ಮ ಸರಕನ್ನು ಭಾರತೀಯ ಮಹಾಕಾವ್ಯಗಳಿಂದ, ಪುರಾಣಗಳಿಂದ ತೆಗೆದುಕೊಳ್ಳುತ್ತವೆ. ಭಾರತದಲ್ಲಷ್ಟೇ ಅಲ್ಲ; ವಿದೇಶದಲ್ಲೂ ಕೂಡ, ಶೇಕ್ಸ್‍ಪಿಯರನಂಥ ನಾಟಕಕಾರನೂ ಪೆನ್ನು ಕೈಗೆತ್ತಿಕೊಂಡಾಗ ಕತೆಗಳಿಗಾಗಿ ಮೊರೆ ಹೋದದ್ದು ಪುರಾಣ, ಇತಿಹಾಸ, ಐತಿಹ್ಯಗಳಿಗೇನೇ. ಭಾರತದಲ್ಲಿ ಪುರಾಣಕ್ಕೇನು ಬರವೇ? ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ರಸವತ್ತಾಗಿ ಸಮಗ್ರವಾಗಿ ಕೊಡುವ ಎರಡು ಪುಸ್ತಕಗಳಿವೆ. ಅವು “ಎಳೆಯರ ರಾಮಾಯಣ” ಮತ್ತು “ಕಿಶೋರ ಭಾಗವತ”. ಎರಡನ್ನೂ ಪ್ರಕಟಿಸಿದ್ದು ಭಾರತ ಸಂಸ್ಕೃತಿ ಪ್ರತಿಷ್ಠಾನ. ಜೊತೆಗೆ ಎ.ಆರ್. ಕೃಷ್ಣಶಾಸ್ತ್ರಿಗಳ “ಕಥಾಮೃತ”ವನ್ನೂ ಮರೆಯುವಂತಿಲ್ಲ.

ವಂದೇ ಮಾತರಂ

ಕತೆ, ಕಾದಂಬರಿ, ನಾಟಕಗಳಿಗಿಂತಲೂ ನಮ್ಮ ನಡುವಿನ ರಕ್ತಮಾಂಸ ತುಂಬಿಕೊಂಡ ವರ್ತಮಾನದ ವ್ಯಕ್ತಿಗಳ ಬಗ್ಗೆ ಓದಿದಾಗ ಖುಷಿಯಾಗುತ್ತದೆ. ದೇಶದ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿಯಬೇಕೆನಿಸುತ್ತದೆ ಎಂದು ಹೇಳುವವರದ್ದು ಒಂದು ಗುಂಪು. ಇಂಥ ಸಾಹಿತ್ಯ ಪ್ರಕಾರವನ್ನು ಇಂಗ್ಲೀಷಿನಲ್ಲಿ “ನಾನ್-ಫಿಕ್ಷನ್” ಎನ್ನುತ್ತಾರೆ. ಕನ್ನಡದಲ್ಲಿ “ಸೃಜನೇತರ” (ಸೃಜನಶೀಲತೆ ಇಲ್ಲದ?) ಎನ್ನುತ್ತಾರೆ. ಇಂಥದೊಂದು ವಿಚಿತ್ರ ಕನ್ನಡ ಪದವನ್ನು ಟಂಕಿಸಿದವನಿಗೆ ಉದ್ದಂಡ ಬೀಳಬೇಕು! ಇರಲಿ, ಇಂಥ ವಿಚಾರಸಾಹಿತ್ಯವನ್ನು ಓದಬಯಸುವವರಿಗೆ ಕನ್ನಡದಲ್ಲಿ ಏನೆಲ್ಲ ಪುಸ್ತಕಗಳಿವೆ? ಮೊತ್ತಮೊದಲಿಗೆ ನೆನಪಾಗುವುದು ಬಾಬು ಕೃಷ್ಣಮೂರ್ತಿಯವರು ಹಲವು ವರ್ಷಗಳ ಕಾಲ ಆಳವಾದ ಅಧ್ಯಯನ ಮಾಡಿ ಬರೆದ ರಸಘಟ್ಟಿಯಂಥ ಕೃತಿ – “ಅಜೇಯ”. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಹೋರಾಡಿದ ಮತ್ತು ಭಗತ್ ಸಿಂಗ್‍ನ ಗುರುವಾಗಿದ್ದ ಚಂದ್ರಶೇಖರ್ ಆಝಾದ್ ಎಂಬ ದೇಶಪ್ರೇಮಿಯ ಕತೆ. ತನ್ನ ಹೆಸರಲ್ಲೇ ಆಝಾದ್ (ಸ್ವಾತಂತ್ರ್ಯ) ಎಂದು ಬರೆದುಕೊಂಡವನ ಗುಂಡಿಗೆಯಾದರೂ ಎಂಥದಿರಬೇಕು! ಪುಸ್ತಕವೂ ಹಾಗೆಯೇ, ರಕ್ತಮಾಂಸಭರಿತವಾಗಿದ್ದು, ಓದುತ್ತೋದುತ್ತ ಹೋದಂತೆ ಮೈರೋಮ ಸೆಟೆಸುವಂತಿದೆ. ಭಾರತದ ನಿಜವಾದ ಇತಿಹಾಸ ಏನು? ಇದು ಎಲ್ಲಿಂದ ಎಲ್ಲಿಯವರೆಗೆ ಹರಡಿತ್ತು? ಕಾಲಕ್ರಮೇಣ ಏನೆಲ್ಲ ಬದಲಾವಣೆಗಳಾಗಿಹೋದವು ಎಂಬ ನೈಜ ಇತಿಹಾಸವನ್ನು ತಿಳಿಸುವ ಒಂದು ಅದ್ಭುತ ಕೃತಿ ವಿದ್ಯಾನಂದ ಶೆಣೈಯವರ “ಭಾರತ ದರ್ಶನ”. 1962ರಲ್ಲಿ ನಡೆದ ಚೀನಾ-ಭಾರತ ಯುದ್ಧದಲ್ಲಿ ನಾವು ಸೋತದ್ದೇಕೆ ಎಂಬುದನ್ನು ವಿಶ್ಲೇಷಿಸುತ್ತ ಆ ಕಾಲದ ರಾಜಕೀಯ ಪರಿಸ್ಥಿತಿಗಳನ್ನು ವಿಶದವಾಗಿ ವಿವರಿಸುವ ಹೊತ್ತಗೆ: ಬ್ರಿಗೇಡಿಯರ್ ಜಾನ್ ಪಿ. ದಳವಿ ಬರೆದ “ಹಿಮಾಲಯನ್ ಬ್ಲಂಡರ್”. ಇದನ್ನು ಯಾವುದೋ ಸೆಕೆಂಡ್‍ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಅಕಸ್ಮಾತ್ತಾಗಿ ಕಂಡು ಓದಿ ರೋಮಾಂಚನಗೊಂಡು ರವಿ ಬೆಳಗೆರೆ ಕನ್ನಡಕ್ಕೆ ತಂದರಂತೆ. ಈ ದೇಶಕ್ಕಾಗಿ ತಮ್ಮ ತನುಮನಗಳನ್ನೆಲ್ಲ ಮುಡಿಪಾಗಿಟ್ಟವರ ಬಗ್ಗೆ ಓದಬಯಸುವವರು ಮಿಸ್ ಮಾಡದೆ ಕಣ್ಣಿಗೊತ್ತಿಕೊಳ್ಳಬೇಕಾದ ಇನ್ನೆರಡು ಪುಸ್ತಕಗಳು: “ನಮೋ ವೀರಭೂಮಿಗೆ” – ಸಂತೋಷ್ ತಮ್ಮಯ್ಯ; “ಶಕ್ತಿಸಾರಥಿ ರಾಷ್ಟ್ರಪತಿ ಅಬ್ದುಲ್ ಕಲಾಂ” – ಡಾ. ಟಿ.ಆರ್. ಅನಂತರಾಮು.

ವಸುಂಧರೆಯಿಂದ ಆಕಾಶಗಂಗೆಯವರೆಗೆ

ವಿಷಯಸಾಹಿತ್ಯದಲ್ಲಿ ಬರುವ ಇನ್ನೊಂದು ವರ್ಗ ವಿಜ್ಞಾನ ಪುಸ್ತಕಗಳದ್ದು. ಕನ್ನಡದಲ್ಲಿ ನಮಗೆ ಬೇಕಾದಷ್ಟು ವಿಜ್ಞಾನ ಸಿಗುತ್ತಿಲ್ಲ ಎಂಬ ಕೂಗು ಇಂದುನಿನ್ನೆಯದಲ್ಲ. ಆ ಕೊರತೆಯನ್ನು ನೀಗಿಸಲೆಂದೇ ಶಿವರಾಮ ಕಾರಂತರು ಯಾವ ವಿಶ್ವವಿದ್ಯಾಲಯದ ಮರ್ಜಿಗೂ ಕಾಯದೆ ಬಾಲಪ್ರಪಂಚ, ವಿಜ್ಞಾನ ಪ್ರಪಂಚ ಸೀರೀಸ್ ತಂದದ್ದು ಗೊತ್ತೇಇದೆ. ಹೌದು, ನಮ್ಮ ನುಡಿಯಲ್ಲಿ ವಿಜ್ಞಾನ ಕಡಿಮೆ. ಆದರೆ ಬೇಸರ ಬೇಡ; ಬೇಸಿಗೆಯ ಎರಡು ತಿಂಗಳಲ್ಲಿ ಓದಬೇಕೆನ್ನುವವರಿಗೆ ಸಾಕುಸಾಕೆನಿಸುವಷ್ಟಿದೆ! ಈಗಿನ ಜನರೇಶನ್ನಿನವರಿಗೆ ಪ್ರಾಯಶಃ ಅಷ್ಟು ಪರಿಚಯವಿಲ್ಲದ, ಆದರೆ ತೊಂಬತ್ತರ ದಶಕದ ನಾನ್-ಫಿಕ್ಷನ್ ಓದುಗರಿಗೆ ಅಚ್ಚುಮೆಚ್ಚಾಗಿದ್ದ ಕೀಟವಿಜ್ಞಾನಿ ಡಾ. ಕೃಷ್ಣಾನಂದ ಕಾಮತರು ಬರೆದ ಒಂದು ಕೃತಿ “ಪಶು-ಪಕ್ಷಿ ಪ್ರಪಂಚ”. ಇದರಲ್ಲಿ ದಿನನಿತ್ಯ ಕಾಣುವ ಜೀವಜಗತ್ತನ್ನೇ ಚಿಕಿತ್ಸಕ ದೃಷ್ಟಿಯಿಂದ ನೋಡುವ ಪರಮ ಕುತೂಹಲಿ ನಮಗೆ ಎದುರಾಗುತ್ತಾನೆ. ಕಾಮತರ ಶೈಲಿಗೆ ಫಿದಾ ಆಗಿ ಇನ್ನಷ್ಟು ಬೇಕು ಎನ್ನುವವರಿಗಾಗಿ ಅವರದ್ದೇ “ಕೀಟಜಗತ್ತು” ಇದೆ. ಕೀಟಗಳ ಹಾರಾಟ-ಪೀಕಲಾಟಗಳ ಬಗ್ಗೆ ರೋಚಕವಾಗಿ ಬರೆಯಬಹುದೆನ್ನೋಣ, ಚಲನೆ ಇಲ್ಲದೆ ನಿಂತಲ್ಲೆ ಸ್ಥಾವರವಾಗಿರುವ ಗಿಡಮರಬಳ್ಳಿಯ ಬಗ್ಗೆ ಏನಾದರೂ ಬರೆಯೋದಕ್ಕೆ ಸಾಧ್ಯವಾ ಎನ್ನುವವರಿಗೆ ಸವಾಲು ಹಾಕುವಂತೆ ಬರೆದವರು ಡಾ. ಬಿ.ಜಿ.ಎಲ್. ಸ್ವಾಮಿ. ಅವರ “ಹಸಿರು ಹೊನ್ನು” ಬೇಸಿಗೆಯ ರಜೆಗೊಂದು ಆಹ್ಲಾದಕರ ಓದು. ರಜೆಯ ಮಜಾ ಅನುಭವಿಸಲು ಹಳ್ಳಿಗಾಡಿಗೆ ಹೊರಟವರು ಈ ಎರಡೂ ಲೇಖಕರ ಕೃತಿಗಳ ಪ್ರಾಕ್ಟಿಕಲ್ ಅನುಭವವನ್ನೂ ಪಡೆಯಬಹುದು. ಇನ್ನು, ಬಣ್ಣಗಳು ಹೇಗೆ ಹುಟ್ಟುತ್ತವೆ, ಈ ಜಗತ್ತು ಇಷ್ಟೊಂದು ವರ್ಣಮಯವಾಗಿರಲು ಏನು ಕಾರಣ? ಪಶುಪಕ್ಷಿಗಳ ಕಣ್ಣಿಗೂ ಈ ಪ್ರಪಂಚ ಹೀಗೆಯೇ ಕಾಣಿಸುತ್ತದೆಯೇ ಎಂಬೆಲ್ಲ ಪ್ರಶ್ನೆಗಳನ್ನು ಎಬ್ಬಿಸಿ ಮನಸ್ಸನ್ನು ಅರಳಿಸುವ ಒಂದು ಕೃತಿ “ವರ್ಣ ಮಾಯಾಜಾಲ”. ಬಯಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್ ಮತ್ತು ಮನೋವಿಜ್ಞಾನ ಎಲ್ಲವನ್ನೂ ಒಳಗೊಂಡು ಜಾಲಿರೈಡ್ ಮಾಡಿಸುವ ಈ ಕೃತಿಯನ್ನು ಬರೆದವರು ಜೀವವಿಜ್ಞಾನದಲ್ಲಿ ಪರಿಣತರಾದ ಡಾ. ಎನ್.ಎಸ್. ಲೀಲಾ. ನೆಲದ ಮೇಲೆ ಗಟ್ಟಿಯಾಗಿ ಪಾದವೂರಿದ ಮನುಷ್ಯನನ್ನು ಸುಮಾರು ನಾಲ್ಕೈದು ಸಾವಿರ ವರ್ಷಗಳಿಂದ ಕಾಡುತ್ತ ಬಂದಿರುವ ಮತ್ತೊಂದು ಗೂಢ ಜಗತ್ತು ಖಗೋಳ. ವಿಜ್ಞಾನದಲ್ಲಿ ಆಸಕ್ತಿಯಿದ್ದು ಖಗೋಳದ ಬಗ್ಗೆ ಒಂದಾದರೂ ಕೃತಿಯನ್ನು ಓದದ ಓದುಗ ಇರಲಾರ. ಈ ವಿಭಾಗದ ಆದ್ಯಂತ ಮಾಹಿತಿಯನ್ನು ಒಂದೇ ಪುಸ್ತಕದಲ್ಲಿ ಪಡೆಯಬೇಕೆಂದು ಹಂಬಲಿಸುವವರು ಅವಶ್ಯ ಎತ್ತಿಕೊಳ್ಳಬೇಕಾದದ್ದು, ಆ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ವಿಜ್ಞಾನಿಯಾಗಿದ್ದ ಡಾ. ಪಿ.ಆರ್. ವಿಶ್ವನಾಥ್ ಬರೆದ ಕೃತಿ – “ಭೂಮಿಯಿಂದ ಬಾನಿನತ್ತ”-ವನ್ನು. ಇನ್ನು, ಕನ್ನಡದಲ್ಲಿ ಮೂಲಕೃತಿಗಳಷ್ಟೇ ಸಮರ್ಥವಾಗಿ ಅನ್ಯಭಾಷೆಯ ಅನುವಾದ ಕೃತಿಗಳೂ ಬಂದಿವೆ. ಎರಡು ಉದಾಹರಣೆಗಳು: “ಸಾಮಾನ್ಯ ಪಕ್ಷಿಗಳು” ಎಂಬ ಸಲೀಂ ಅಲಿಯವರ ಪ್ರಸಿದ್ಧ ಕೃತಿ, ಜಿ.ವಿ.ಬಿ. ನಾಯ್ಡು ಅವರಿಂದ ಕನ್ನಡಕ್ಕೆ ಬಂದಿದೆ. ಜಾರ್ಜ್ ಗ್ಯಾಮೋ ಅವರ “ಒನ್ ಟೂ ಥ್ರೀ.. ಇನ್ಫಿನಿಟಿ” ಕೃತಿ ಅಷ್ಟೇ ಪರಿಪುಷ್ಟವಾಗಿ ಕನ್ನಡಕ್ಕೆ “ವಿಶ್ವದ ಅನಂತ ಅಸ್ತಿತ್ವ” ಎಂಬ ಹೆಸರಲ್ಲಿ ಡಾ. ಎಚ್. ರಾಮಚಂದ್ರಸ್ವಾಮಿಯವರಿಂದ ಅನುವಾದವಾಗಿ ಬಂದಿದೆ. ಗಣಿತದ ವಿಸ್ಮಯ ಜಗತ್ತನ್ನು ಒಂದು ಸಲ ಸುತ್ತಿಬರಬೇಕೆನ್ನುವವರು ಓದಬೇಕಾದ ಮೂರು ಕೃತಿಗಳು: “ಫರ್ಮಾ ಯಕ್ಷಪ್ರಶ್ನೆ” – ಜಿ.ಟಿ. ನಾರಾಯಣ ರಾವ್; “ಲೀಲಾವತೀ – 108 ಆಯ್ದ ಲೆಕ್ಕಗಳು” – ಡಾ. ಎಸ್. ಬಾಲಚಂದ್ರ ರಾವ್ ಮತ್ತು “ಏನು, ಗಣಿತ ಅಂದ್ರಾ?” – ಡಾ. ಬಿ.ಎಸ್. ಶೈಲಜಾ.

ಕವಿತೆ, ಎಲ್ಲಿ ಅವಿತೆ?

ಬೇಸಿಗೆ ರಜೆ ಇರುವುದೇ ಹತ್ತು ತಿಂಗಳು ಎಡೆಬಿಡದೆ ಓದಿ ಬರೆದು ಉರುಹೊಡೆದು ಪರೀಕ್ಷೆಯೆಂಬ ಮಹಾಯುದ್ಧ ಎದುರಿಸಿ ಗೆದ್ದು ಬಂದು ಸುಸ್ತಾದವರಿಗೆ ಎನರ್ಜಿ ತುಂಬುವುದಕ್ಕೆ. ಅಂಥಾದ್ದರಲ್ಲಿ ಆ ರಜೆಯಲ್ಲೂ ಗಣಿತ, ವಿಜ್ಞಾನಗಳಂಥ ಉಕ್ಕಿನ ಕಡಲೆಗಳನ್ನು ನುಂಗಿಸ್ತೀರಾ ಮಾರಾಯ್ರೆ? ನಮ್ಮ ಪಾಡಿಗೆ ನಾವು ಪದ್ಯಗಿದ್ಯ ಹಾಡಿಕೊಂಡು ಇರಬಾರದೆ? ಎನ್ನುವವರೂ ಇದ್ದಾರೆನ್ನಿ. ಇಂಥವರ ಕಷ್ಟಕ್ಕೆ ನೆರವಾಗದಿದ್ದರೆ ಯಾವ ಪರಮೇಶ್ವರನೂ ನಮ್ಮನ್ನು ಕ್ಷಮಿಸಲಾರ! ಅದೂ ಅಲ್ಲದೆ ಸಾಹಿತ್ಯದಲ್ಲಿ ಅಭಿರುಚಿ ಇರುವವರೆಲ್ಲ ಮೊದಲು ಓದುವುದು, ಬರೆಯುವುದು ಪದ್ಯವನ್ನೇ ಅಲ್ಲವೆ? ಬೇಸಿಗೆ ರಜೆಯನ್ನು ಆರಾಮಾಗಿ ಕಳೆಯಲು ಏನೆಲ್ಲ ಪದ್ಯಪುಸ್ತಕಗಳಿವೆ? ಇದೆಯಲ್ಲ ಜಿ.ಪಿ. ರಾಜರತ್ನಂ ಅವರು ಸಂಗ್ರಹಿಸಿದ “ಕಂದನ ಕಾವ್ಯಮಾಲೆ”! 1940ರ ದಶಕದ ಘಟಾನುಘಟಿ ಸಾಹಿತಿಗಳೆಲ್ಲ ಮಕ್ಕಳಿಗಾಗಿ ಬರೆದ ಶಿಶುಪ್ರಾಸಗಳನ್ನು ಕಲೆಹಾಕಿದ ಮೊದಲ ಪ್ರಯತ್ನ ಇದು. ಓದುವುದಷ್ಟೇ ಅಲ್ಲ, ಹಾಡಿ ಕುಣಿದು ಕುಪ್ಪಳಿಸಲಿಕ್ಕೂ ಅನುವಾಗುವ ಹಲವು ರಚನೆಗಳು ಇದರಲ್ಲಿ ಸಿಗುತ್ತವೆ. ಕಾವ್ಯಮಾಲೆ ಔಟ್ ಆಫ್ ಪ್ರಿಂಟ್ ಎಂದು ನಿರಾಶೆಗೊಳ್ಳುವವರಿಗೆ ಅದರ ಎಲ್ಲ ಪದ್ಯಗಳನ್ನು ಮತ್ತೆ ಸಂಗ್ರಹಿಸಿಕೊಟ್ಟ ಬೊಳುವಾರು ಮಹಮದ್ ಕುಂಞಯವರ “ತಟ್ಟು ಚಪ್ಪಾಳೆ ಪುಟ್ಟ ಮಗು” ಸಿಗದಿರಲಾರದು. ಚುಟುಕಗಳನ್ನು ಮೆಚ್ಚುವವರು “ದಿನಕರ ದೇಸಾಯಿಯವರ ಸಮಗ್ರ ಚುಟುಕಗಳು” ಕೃತಿಯನ್ನೂ ತಿರುವಿ ಹಾಕಬಹುದು. ಶಿಶುಪ್ರಾಸಕ್ಕಿಂತ ಮುಂದೆ ಹೋಗಿದ್ದೇವೆ, ಗಂಭೀರ ಕಾವ್ಯವನ್ನೂ ಒಂದಷ್ಟು ನೋಡಬೇಕಲ್ಲ ಎಂಬವರು “ಅಕ್ಷರ ಹೊಸ ಕಾವ್ಯ”ದಿಂದ ತಮ್ಮ ಯಾತ್ರೆ ಶುರು ಮಾಡಬಹುದು. ಇಲ್ಲಿನ ಕೆಲವು ಕವಿತೆಗಳು ಕಷ್ಟವಾಗಬಹುದು; ಏನಪ್ಪ ಇವುಗಳ ಅರ್ಥ ಅನ್ನಿಸಬಹುದು; ಭಾವಾರ್ಥ ತಿಳಿಯಲು ತಿಣುಕಾಡಬೇಕಾಗಬಹುದು. ಆದರೇನಂತೆ, ಕಾವ್ಯ ಪೂರ್ತಿ ಅರ್ಥವಾಗಿಬಿಡಬೇಕೆನ್ನುವ ಗಡಿಬಿಡಿ ಇಲ್ಲಿ ಯಾರಿಗಿದೆ? ನಿಧಾನವೇ ಕಾವ್ಯಾಧ್ಯಯನದ ಪ್ರಧಾನ ಅಗತ್ಯ.

ದಣಿವಿಲ್ಲದ ಸರಣಿ ಓದುಗರಿಗೆ

ಹೀಗೆ ನೂರೆಂಟು ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ಹರಡಿಟ್ಟುಕೂರಲು ಸಮಯವಿಲ್ಲ. ಯಾವುದಾದರೂ ಸರಣಿ ಇದ್ದರೆ ಕೊಡಿ; ಅದರ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿಹಾಕುತ್ತೇವೆ ಎನ್ನುವವರೂ ಇದ್ದಾರೆನ್ನಿ! ಅವರಿಗಾಗಿಯೇ ಕೆಲವೊಂದು ಅದ್ಭುತ ಸರಣಿಗಳು ಕನ್ನಡದಲ್ಲಿವೆ. ಸರಣಿ ಎಂದಾಗೆಲ್ಲ ಥಟ್ಟನೆ ನೆನಪಿಗೆ ಬರುವುದು ರಾಷ್ಟ್ರೋತ್ಥಾನ ಸಾಹಿತ್ಯದ “ಭಾರತ ಭಾರತಿ” ಮತ್ತು ತೇಜಸ್ವಿಯವರ “ಮಿಲೇನಿಯಂ ಸೀರೀಸ್”. ಈಗಷ್ಟೇ ಓದುವ ಹುಚ್ಚು ಹತ್ತಿಸಿಕೊಂಡ ಎಳೆಯರಿಗಾದರೆ ಡಾ. ಅನುಪಮಾ ನಿರಂಜನರ “ದಿನಕ್ಕೊಂದು ಕತೆ” ಹೆಸರಿನ ಹನ್ನೆರಡು ಪುಸ್ತಕಗಳಿವೆ. ಇವನ್ನೆಲ್ಲ ಆಗಲೇ ಓದಿ ಮುಗಿಸಿದ್ದೇವೆ ಎನ್ನುವವರು ಡಾ. ಕೆ.ಎಂ. ಮುನ್ಷಿಯವರ ಕೃಷ್ಣಾವತಾರದ ಸಂಪುಟಗಳನ್ನು ಕೈಗೆತ್ತಿಕೊಳ್ಳಬಹುದು. ನೂರೆಂಟು ಜೀವನಚರಿತ್ರೆಗಳನ್ನು ಓದಿಕೊಳ್ಳಬೇಕು ಎಂದು ಬಯಸುವವರು ನವಕರ್ನಾಟಕ ಪ್ರಕಾಶನದ “ವಿಶ್ವಮಾನ್ಯರು” ಸರಣಿಯತ್ತ ಹೊರಳಬಹುದು. ಓದಿನ ಏಣಿಯಲ್ಲಿ ಆಗಲೇ ಮೇಲಿನ ಮೆಟ್ಟಿಲಿಗೆ ಏರಿಬಿಟ್ಟಿದ್ದೇವೆನ್ನುವವರು ಅಕ್ಷರ ಪ್ರಕಾಶನದ “ಆಯ್ದ ಬರಹಗಳು” ಎಂಬ ಸರಣಿಯನ್ನೂ ಗಮನಿಸಬಹುದು. ಇಲ್ಲಿ ಕನ್ನಡದ ಪ್ರಮುಖ ಲೇಖಕರ ಅತಿ ಮುಖ್ಯ/ಪ್ರಸಿದ್ಧ ಬರಹಗಳನ್ನು ನೂರು-ನೂರಿಪ್ಪತ್ತು ಪುಟಗಳಲ್ಲಿ ಕೊಡುವ ಸಣ್ಣ ಪುಸ್ತಕಗಳನ್ನು ಪ್ರಕಟಿಸಲಾಗಿದೆ.

ಅಂದಹಾಗೆ, ಇದು ಬೇಸಿಗೆಯ ಎರಡು ತಿಂಗಳ ರಜೆಯನ್ನು ಪುಸ್ತಕದ ಸಾಂಗತ್ಯದಲ್ಲಿ ಕಳೆಯಬಯಸುವ ವಿದ್ಯಾರ್ಥಿಗಳಿಗೊಂದು ಕೈಗಂಬ ಅಷ್ಟೇ. ಅಥವಾ, ತಮ್ಮ ಮಕ್ಕಳಿಗೆ ಒಂದಷ್ಟನ್ನಾದರೂ ಓದಿಸಿ ಕನ್ನಡದ ಕೆನೆಪದರದ ರುಚಿ ಕಾಣಿಸಬೇಕೆಂದು ಹಂಬಲಿಸುವ ಪೋಷಕರಿಗೆ ಒಂದು ದಿಕ್ಸೂಚಿ ಮಾತ್ರವೇ. ಈ ಪಟ್ಟಿಯೇ ಅಂತಿಮವಲ್ಲ. ಇಲ್ಲಿರುವಷ್ಟನ್ನು ಓದಿಕೊಂಡಾದ ಮೇಲೆ ಮುಂದೇನು ಓದಬೇಕೆಂಬ ಅಸ್ಪಷ್ಟವಾದರೂ ಗುರುತರವಾದ ಕಲ್ಪನೆಯೊಂದು ಓದುಗನಿಗೇ ಬಂದಿರುತ್ತದೆ ಎಂಬ ಭರವಸೆಯನ್ನು ಧಾರಾಳವಾಗಿ ಕೊಡಬಹುದು. ಲೇಖನದಲ್ಲಿ ಬಿಟ್ಟುಹೋಗಿರಬಹುದಾದ, ಆದರೆ ಓದಿನ ಪಟ್ಟಿಯಲ್ಲಿ ಖಂಡಿತವಾಗಿಯೂ ಸೇರಿಸಿಕೊಳ್ಳಬಹುದಾದ ಇನ್ನೊಂದಿಷ್ಟು ಕೃತಿಗಳು: “ಜನಪ್ರಿಯ ರಾಮಾಯಣ” – ಕುವೆಂಪು; “ಪರಿಸರದ ಕತೆ” – ಪೂರ್ಣಚಂದ್ರ ತೇಜಸ್ವಿ, “ಮೂರು ತಲೆಮಾರು” – ತ.ಸು. ಶಾಮರಾಯರು, “ಗ್ರಾಮಾಯಣ” – ರಾವ್ ಬಹದ್ದೂರ, “ವೋಲ್ಗಾ – ಗಂಗಾ” – ರಾಹುಲ ಸಾಂಕೃತ್ಯಾಯನ, “1857” – ಚಕ್ರವರ್ತಿ ಸೂಲಿಬೆಲೆ, “ದೇಶ ಕಾಲ ಬದುಕು” – ತೀರ್ಥರಾಮ ವಳಲಂಬೆ, “ಪ್ಲಮ್ ನದಿಯ ತೀರದಲ್ಲಿ” – ಎಸ್. ಅನಂತನಾರಾಯಣ, ಇತ್ಯಾದಿ ಇದ್ದೇ ಇವೆ. ಇಲ್ಲಿ ಬಲಪಂಥೀಯರಿದ್ದಾರೆ, ಎಡಪಂಥೀಯರಿದ್ದಾರೆ, ರಾಷ್ಟ್ರವಾದಿಗಳಿದ್ದಾರೆ, ಇತಿಹಾಸಕಾರರಿದ್ದಾರೆ, ಭಾಷಾಪಂಡಿತರಿದ್ದಾರೆ, ವಿಜ್ಞಾನವಾದಿಗಳಿದ್ದಾರೆ. ಯಾವ ಸಿದ್ಧಾಂತಗಳಿಗೂ ಕೊಕ್ಕೆ ಹಾಕಿಕೊಳ್ಳದೆ ಸ್ವತಂತ್ರವಾಗಿ ಎಲ್ಲವನ್ನೂ ಓದಿಕೊಳ್ಳಲು ವಿದ್ಯಾರ್ಥಿ ಜೀವನದಷ್ಟು ಸರಿಯಾದ ಸಮಯ ಬೇರೆ ಇಲ್ಲ. ಕನ್ನಡದಲ್ಲಿ ಏನನ್ನು ಓದಬೇಕು? ಎಂದು ಕೇಳುವವರಿಗೆ “ಏನನ್ನಾದರೂ ಓದಿ. ಆದರೆ ದಯವಿಟ್ಟು ಕನ್ನಡದಲ್ಲಿ ಓದಿ!” ಎಂದು ಹೇಳುವ ಕಾಲಕ್ಕೆ ನಾವು ತುಂಬ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಪಟ್ಟಿ ಕನ್ನಡಿಗರನ್ನೂ, ಕನ್ನಡದ ಕಂದಮ್ಮಗಳನ್ನೂ ಓದಿನ ಹುಚ್ಚಿಗೆ ಹಚ್ಚಲಿ ಎಂಬುದು ನನ್ನ ಕಳಕಳಿ ಮತ್ತು ಪ್ರಾರ್ಥನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!