ನಾಲ್ಕೈದು ವರ್ಷದ ಹಿಂದೆ ಚಂಡೀಗಢದ ವಿಮಾನ ನಿಲ್ದಾಣದಿಂದ ಇಳಿದು ಟ್ಯಾಕ್ಸಿ ಹಿಡಿದು ಸಾಗುತ್ತಿದ್ದಾಗ, ಅದರ ಚಾಲಕ ನನ್ನನ್ನು ಮಾತಿಗೆಳೆಯುತ್ತ “ಸರ್ ನೀವು ನಮ್ಮ ಊರಿಗೆ ಹಿಂದೆ ಬಂದಿದ್ದಿರಾ?” ಎಂದು ಕೇಳಿದ. ಇಲ್ಲ, ಇದೇ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿದ್ದೇನೆ ಎಂದು ನಾನು ಹೇಳಿದ್ದೇ ತಡ, ಅವನಿಗೆ ಲಸ್ಸಿ ಕುಡಿದಷ್ಟು ಸಂತೋಷವಾಗಿರಬೇಕು! ಮುಖ ಅರಳಿತು. ಹಾಗಾದರೆ ನಿಮಗೆ ಈ ಊರು ಕಟ್ಟಿದವರ ಕತೆ ಹೇಳುತ್ತೇನೆ ಕೇಳಿ ಎಂದು ನಾನು ಅದುವರೆಗೆ ಕೇಳಿರದಿದ್ದ ಲು ಕಾರ್ಬೋಸಿಯೆ (Le Corbusier) ಎಂಬ ಮಹಾತ್ಮನ ಸಾಧನೆ – ಸಾಹಸಗಳನ್ನು ವರ್ಣಿಸತೊಡಗಿದ. ಲು ಕಾರ್ಬೋಸಿಯೆ ಮೂಲತಃ ಫ್ರೆಂಚ್ ಆರ್ಕಿಟೆಕ್ಟ್. ಅವನನ್ನು 1950ರ ಸಮಯದಲ್ಲಿ ನೆಹರೂ ವಿಶೇಷವಾಗಿ ಇಲ್ಲಿಗೆ ಕರೆಸಿಕೊಂಡು ಚಂಡೀಗಢವನ್ನು ಹೊಸದಾಗಿ ಕಟ್ಟುವ, ವಿನ್ಯಾಸಗೊಳಿಸುವ ಕೆಲಸ ಕೊಟ್ಟರು. ಕಾರ್ಬೋಸಿಯೆ ಕಟ್ಟಿದ ಊರು ಜಗತ್ತಿನಲ್ಲೇ ಅತ್ಯಂತ ಕ್ರಮಬದ್ಧವಾದ ನಗರ ವ್ಯವಸ್ಥೆಗಳಲ್ಲಿ ಒಂದೆಂದು ಚಂಡೀಗಢದ ಪಂಜಾಬಿಗಳಿಗೆ ಇವೊತ್ತಿಗೂ ಅಭಿಮಾನ, ಪ್ರೀತಿ, ಹೆಮ್ಮೆ ಇದೆ. ಆ ಊರಿಗೆ ಬಂದು ಹೋಗುವ ಹೊರಗಿನ ಜನರಿಗೆ ಅವರು ಕಾರ್ಬೋಸಿಯೆಯ ಕತೆಯನ್ನು ಒಂದಲ್ಲಾ ಒಂದು ಸಂದರ್ಭದಲ್ಲಿ ಹೇಳದೇ ಬಿಡುವುದಿಲ್ಲ. ಹಾಗೆ ಚಾಲಕನ ಮಾತಿಗೆ ಕಿವಿಯಾಗಿ ಕೂತಿದ್ದಾಗ ನನಗೆ ತಟ್ಟನೆ ನೆನಪಿಗೆ ಬಂದದ್ದು ನಮ್ಮ ಬೆಂಗಳೂರಿನ ಚರಿತ್ರೆಯ ಪುಟಗಳು! ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿ ಹೋಗುತ್ತೇವೆ, ಆ ಹೆಸರಿನ ಮಹಾತ್ಮನ ಬಗ್ಗೆ ಓದಿದ್ದೇವಾ? ಬೌರಿಂಗ್ ಆಸ್ಪತ್ರೆಯ ಬೌರಿಂಗ್ ಯಾರು ಗೊತ್ತಿದೆಯೆ? ಮೇಯೋ ಹಾಲಿನ ಮೇಯೋ, ಕಬ್ಬನ್ ಪಾರ್ಕಿನ ಕಬ್ಬನ್, ಸ್ಯಾಂಕಿ ಕೆರೆಯ ಸ್ಯಾಂಕಿ – ಯಾರೋಪ್ಪ ಯಾರಿಗೆ ಗೊತ್ತು! ನಮ್ಮ ನಡುವೆ ದಶಕಗಳಿಂದ ಬದುಕುತ್ತಿರುವ ಈ ಹೆಸರುಗಳ ಬಗ್ಗೆ ನಮ್ಮ ಅವಜ್ಞೆಯನ್ನು ಕಂಡಾಗ ಇದೊಂದು ಇತಿಹಾಸದ ನೆನಪಿಲ್ಲದ, ಬೇರು ಕತ್ತರಿಸಿಕೊಂಡ ತ್ರಿಶಂಕು ನಗರ ಎನಿಸುತ್ತದೆ.
ಎಂಟೀಆರ್’ನಲ್ಲಿ ಖಾರಾಬಾತ್ ತಿಂದು ಬಸವನಗುಡಿಯ ನಿಮ್ಮ ಮನೆಗೆ ಹೊರಟಿದ್ದೀರಾದರೆ, ನೀವು ಲಾಲ್‍ಬಾಗಿನ ಮುಖ್ಯದ್ವಾರದಿಂದ ಪಶ್ಚಿಮದ್ವಾರದವರೆಗಿನ ರಸ್ತೆಯಲ್ಲಿ ನಡೆಯಬೇಕು. ಅಥವಾ ಬಸ್ಸಿನಲ್ಲಿ ಯಾ ಆಟೋದಲ್ಲಿ ಹೋಗುತ್ತೀರಿ ಎನ್ನೋಣ. ಲಾಲ್‍ಬಾಗಿನ ಕಂಪೌಂಡನ್ನು ತನ್ನ ಎಡಕೈಯಿಂದ ಬಾಚಿ ಹಿಡಿದು ಬಳಸಿಕೊಂಡು ಹೋಗುವ ಈ ರಸ್ತೆಗೆ ಕ್ರಂಬಿಗಲ್ ರಸ್ತೆ ಎಂದು ಹೆಸರಿಟ್ಟಿದ್ದಾರೆ. ಅಲ್ಲಿನ ಬಸ್‍ಸ್ಟಾಂಡಿನಲ್ಲೂ Krumbigal Road ಎಂದು ಇಂಗ್ಲೀಷಲ್ಲಿ ಬರೆದಿದ್ದಾರೆ. ಆಟೋದವರು, ಬಸ್ಸಿನವರು ನಾರ್ತ್ ಗೇಟ್, ವೆಸ್ಟ್ ಗೇಟ್ ಎನ್ನುತ್ತಾರೆಯೇ ವಿನಾ ಇದುವರೆಗೆ ಒಮ್ಮೆಯೂ ತಪ್ಪಿಯೂ ಕ್ರಂಬಿಗಲ್ ರೋಡು ಎಂದು ಕೂಗಿರಲಾರರು! ಆದರೂ ಆ ಹೆಸರು ಅಲ್ಲಿ ಇದೆ. ಬಚ್ಚಲು ಮನೆಯಲ್ಲಿ ಬಿದ್ದ ಶಾಸನದ ಕಲ್ಲಿನಂತೆ ಅನಾಥವಾಗಿ ಈ ಅಜ್ಞಾತ ಕ್ರಂಬಿಗಲ್ ಅಲ್ಲಿ ನಿಡುಸುಯ್ಯುತ್ತ ನಿಂತಿದ್ದಾನೆ. ಯಾರೂ ಓದದ ಚರಿತ್ರೆಯ ಪುಟವಾಗಿ. ಬೆಟ್ಟದ ತುದಿಯ ಒಂಟಿ ಬಾವುಟವಾಗಿ.
ಹೆಚ್ಚೆಂದರೆ ಈತ ಈ ನಗರದ ನೂರಾರು ರಸ್ತೆಗಳ ಹೆಸರಾಗಿ ನಿಂತಿರುವ ಬ್ರಿಟಿಷ್ ಅಧಿಕಾರಿಗಳ ಸಾಲಲ್ಲಿ ಒಬ್ಬ ಎಂದುಕೊಳ್ಳುತ್ತೀರಿ. ನಾಲಗೆಗೆ ಸರಿಯಾಗಿ ಸಿಗದ ಇಂತಹ ಆಂಗ್ಲ ಹೆಸರುಗಳನ್ನು ಕಿತ್ತು ಹಾಕಿ ಕನ್ನಡದವರ ಹೆಸರಿಡಬೇಕೆಂದು ಆಗೀಗ ಯೋಚಿಸಿರುತ್ತೀರಿ. ಅಷ್ಟೆ, ಅದರಾಚೆಗೆ ನಿಮಗೆ ಈ ಕ್ರಂಬಿಗಲ್ ಕಾಡುವುದಿಲ್ಲ. ಅವನೂ (ಅಥವಾ ಅವಳೊ?) ಒಬ್ಬ ಮನುಷ್ಯ ಅನ್ನಿಸುವುದಿಲ್ಲ. ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಯಾವ ಉತ್ಸಾಹವೂ ಮೂಡುವುದಿಲ್ಲ. ಅದಕ್ಕೆ ತಕ್ಕ ಯಾವ ಪ್ರೇರಣಾದಾಯಿ ಕೆಲಸವನ್ನೂ ಸರಕಾರ ಮಾಡಿಲ್ಲ, ಮಾಡುವುದೂ ಇಲ್ಲ. ಯಾಕೆಂದರೆ ಅವನು ರಾಜಕೀಯ ಲಾಭಕ್ಕಾಗಿ ನಾವು ಬಡಿದಾಡಿಕೊಳ್ಳುವ ಯಾವ ಜಾತಿಯ ಪ್ರತಿನಿಧಿಯೂ ಅಲ್ಲ ನೋಡಿ! ಅಂದ ಹಾಗೆ, ಈ ಲೇಖನದ ಪ್ರಾರಂಭದಲ್ಲಿ ಲು ಕರ್ಬೋಸಿಯೆ ಬಗ್ಗೆ ಮಾತಾಡಿದ್ದು ಕೇವಲ ಪ್ರಾಸಂಗಿಕವಲ್ಲ. ಕರ್ಬೋಸಿಯೆ ಮಾಡಿದಷ್ಟೇ ಅಥವಾ ಅದಕ್ಕಿಂತ ಒಂದು ಹಿಡಿ ಹೆಚ್ಚೇ ಎನ್ನುವಷ್ಟು ಕೆಲಸವನ್ನು ಕ್ರಂಬಿಗಲ್, ನಮ್ಮ ರಾಜಧಾನಿಗೆ ಮಾಡಿ ಹೋಗಿದ್ದಾನೆ ಎಂದರೆ ನಿಮಗೆ ಆಶ್ಚರ್ಯವಾದೀತು! ಏನು ಘನಂದಾರಿ ಕೆಲಸ ಮಾಡಿದನಿವ ಎನ್ನುತ್ತೀರಾ?
ವಸಂತ ಮಾಸಕ್ಕೆ ಇನ್ನೂ ಎರಡು ತಿಂಗಳಿದೆ ಅನ್ನುವಾಗಲೇ ನಮ್ಮ ಉದ್ಯಾನ ನಗರಿ ಸೀಮಂತಕ್ಕೆ ಅಣಿಯಾದ ಬಾಣಂತಿಯಂತೆ ಹೂವಿನ ಜಲ್ಲೆ ಮುಡಿಯುವುದನ್ನು ನೋಡಿದ್ದೀರಲ್ಲ? ಮೊದಲು ಪುಷ್ಪವತಿಯಾಗುವುದು ಈ ಊರಿನ ತುಂಬ ಹರಡಿರುವ ನೀರು ಕಾಯಿ ಮರ. ಕಡು ಹಸಿರು ಎಲೆಗಳ ಮಧ್ಯೆ ಅಲ್ಲಿಲ್ಲಿ ಕಾಣುವ ಕೆಂಪು ಗೊಂಡೆ ಹೂ ಅರಳಿಸುತ್ತ ಕಣ್ಬಿಡುವ ಈ ವೃಕ್ಷ, ಗುಡಿಸುವವರು ಮುಷ್ಕರ ಹೂಡಿದರೆ ವಾರದಲ್ಲೇ ಅರ್ಧ ಅಡಿಯಾಗುವಷ್ಟು ಹೂವಿನ ಚಪ್ಪರವನ್ನು ರಸ್ತೆಗೆ ಹಾಸಿ ಬಿಡುತ್ತದೆ. ಅದರ ಹೂವಿನ ಜಾತ್ರೆ ಮುಗಿಯಿತು ಎನ್ನುವಷ್ಟರಲ್ಲೇ ಬೂರುಗ ತನ್ನ ಕಡು ಕೆಂಪು ಕಣ್ಣು ಬಿಟ್ಟು ಕುಣಿಯ ತೊಡಗುತ್ತದೆ. ಊರು ತುಂಬ ಎರಡು ತಿಂಗಳು ಬೂರುಗದ್ದೇ ಹಾಸಿಗೆ! ಇಷ್ಟಾಗುವಾಗ ಸುವರ್ಣ ಪುಷ್ಪ ಕಣ್ಣು ಕುಕ್ಕುವ ಬಂಗಾರದ ಗೊಂಚಲು ಹಿಡಿದು ಊರನ್ನೇ ಜ್ಯುವೆಲ್ಲರಿ ಅಂಗಡಿ ಮಾಡಿ ಬಿಡುತ್ತದೆ. ಅದೇ ಜಾತಿಗೆ ಸೇರಿದ ಪಿಂಕ್ ಟಾಬೆಬೂಯ ಎಂಬ ಮರ ಹೆಸರಿಗೆ ತಕ್ಕಂತೆ ಬಾನಂಗಳಕ್ಕೆ ಗುಲಾಬಿ ಬಣ್ಣದ ಚಿತ್ತಾರ ಬಿಡಿಸುತ್ತದೆ. ಇಡೀ ಕಾಡಿಗೆ ಬೆಂಕಿ ಬಿದ್ದರೆ ಅದರ ತೆಳು ಕೆಂಪು ಜ್ವಾಲೆಗಳು ಹೇಗೆ ರಣಚಂಡಿಯ ನಾಲಿಗೆಯಂತೆ ಕಾಣುತ್ತವೋ ಅಂತಹ ಅನುಭವ ಕೊಡುವ ಮುತ್ತುಗದ ಕರಾಮತ್ತೇನು ಕಮ್ಮಿಯೇ? ಅದಕ್ಕೆ ಸ್ಪರ್ಧೆ ಕೊಡಲು ಕೆಂಪು ಗೊಂಚಲುಗಳನ್ನು ಅರಳಿಸಿ ಕಿಚಾಯಿಸುತ್ತದೆ ನೋಡಿ ಗುಲ್‍ಮೊಹರ್! ಇನ್ನು ಮಾರ್ಚ್‍ನಿಂದ ಸೆಪ್ಟೆಂಬರ್’ವರೆಗೂ ಆರೇಳು ತಿಂಗಳು ಬೇಜಾರೇ ಇಲ್ಲದೆ ಹೂವಿನ ಹೆರಿಗೆಯನ್ನು ಹಬ್ಬದಂತೆ ಮಾಡುವ ಹಳದಿ ಗುಲ್‍ಮೊಹರ್ ಕೂಡ ಇದೆ. ಇವುಗಳ ಮಧ್ಯೆ ಬಿಳಿಯೋ ನೇರಳೆಯೋ ಗೊತ್ತಾಗದಷ್ಟು ನಸು ಬಣ್ಣ ಮೆತ್ತಿಕೊಂಡ ಗೊಬ್ಬರದ ಮರದ ವೇಷ ನೋಡಬೇಕು ನೀವು. ವರ್ಷದಲ್ಲಿ ಎರಡೇ ತಿಂಗಳು ಅರಳಿದರೂ ಜೀವನ ಸಾರ್ಥಕವೆನ್ನುವಂತೆ, ಒಂದೇ ಒಂದು ಎಲೆಯೂ ಇಲ್ಲದೆ ಇಡೀ ಮೈ ಬಂಗಾರವಾಗಿ ತೊನೆಯುತ್ತ ನಿಲ್ಲುವ ಕಕ್ಕೆ ಮರದ ಚೆಲುವನ್ನು ಏನೆಂದು ವರ್ಣಿಸುವುದು! ನಿಮ್ಮೆಲ್ಲರಿಗಿಂತ ನಾನು ಭಿನ್ನ ಎನ್ನುತ್ತ ಕಡು ನೇರಿಳೆ ಬಣ್ಣದ ಸೀರೆ ಉಟ್ಟು ನಿಲ್ಲುವ ಮೋಹನಾಂಗಿ ಜಕರಂದೆಯ ವೈಯ್ಯಾರ, ಬಿನ್ನಾಣಗಳನ್ನು ಕಣ್ತುಂಬಿಕೊಳ್ಳಲಿಕ್ಕೆ ಬೆಂಗಳೂರಿಗೇ ಬರಬೇಕೆನ್ನಿ. ಇಂತಹ ನೂರಾರು ವಿಶ್ವ ಸುಂದರಿಯರನ್ನು ಅರ್ಜೆಂಟಿನಾ, ಪರಾಗ್ವೇ, ಮೆಕ್ಸಿಕೋ, ಬ್ರೆಜಿಲ್, ಚೀನಾ, ಮಯನ್ಮಾರ್, ಆಫ್ರಿಕ, ಆಸ್ಟ್ರೇಲಿಯ ಎನ್ನುತ್ತ ಪ್ರಪಂಚದ ಮೂಲೆ ಮೂಲೆಗಳಿಂದ ಹುಡುಕಿ ತೆಗೆದು ಈ ಒಂದು ಊರಲ್ಲಿ ತಂದು ನೆಟ್ಟವನು ಕ್ರಂಬಿಗಲ್!
ಕ್ರಂಬಿಗಲ್ ನೀವಂದುಕೊಂಡಂತೆ ಬ್ರಿಟಿಶ್ ಅಧಿಕಾರಿಯಲ್ಲ, ಅವರ ಶತ್ರು ಪಾಳೆಯವಾಗಿದ್ದ ಜರ್ಮನಿ ದೇಶದವನು! ಅವನ ಪೂರ್ತಿ ಹೆಸರು – ಗುಸ್ತಾವ್ ಹರ್ಮನ್ ಕ್ರಂಬಿಗಲ್ (Gustav Hermann Krumbiegel) ಎಂದು. ಹುಟ್ಟಿದ್ದು 1865ರ ಡಿಸೆಂಬರ್ 18ರಂದು. ಪ್ರಾಥಮಿಕ ಶಿಕ್ಷಣ ನಡೆದದ್ದು ಜರ್ಮನಿಯ ವಿಲ್ಸ್’ಡ್ರಫ್ ಮತ್ತು ಡ್ರೆಸ್ಡನ್ ಎಂಬ ಪಟ್ಟಣಗಳಲ್ಲಿ. ಅಲ್ಲಿಂದ ಮುಂದೆ ತೋಟಗಾರಿಕೆಯ ಮೇಲೆ ಕಲಿಯುವ ಅವಕಾಶ ಸಿಕ್ಕಿ ಕ್ರಂಬಿಗಲ್, ಪಿಲ್‍ನಿಟ್ಸ್ ಎಂಬ ಊರಲ್ಲಿ ರಾಜೋದ್ಯಾನದಲ್ಲಿ ಕೆಲಸ ಮಾಡಿದ. ಅವನ ಮುಖ್ಯ ವಿಷಯ ನಗರ ಸೌಂದರ್ಯ ಹೆಚ್ಚಿಸುವುದು ಹೇಗೆಂದು ಹೇಳಿ ಕೊಡುವ “ಲ್ಯಾಂಡ್‍ಸ್ಕೇಪ್ ಹಾರ್ಟಿಕಲ್ಚರ್” ಆಗಿತ್ತು. ಇದೊಂದು ವಿಚಿತ್ರ, ಅಷ್ಟೇ ವಿನೂತನ ವಿಷಯ. ಒಂದು ಇಡೀ ನಗರವನ್ನು ಗಿಡಮರಗಳಿಂದ ಅಲಂಕರಿಸುವುದು ಹೇಗೆ, ಎಲ್ಲೆಲ್ಲಿ ಎಷ್ಟೆಷ್ಟು ಮರಗಳನ್ನು ನೆಡಬೇಕು, ಅವು ಯಾವ ಜಾತಿಯವಿರಬೇಕು, ಎಷ್ಟು ಹೂವಿನ – ಎಷ್ಟು ಹಣ್ಣಿನ ಮರಗಳು ಇರಬೇಕು – ಹೀಗೆ ಅದರ ವ್ಯಾಪ್ತಿ ನಗರದಷ್ಟೇ ದೊಡ್ಡದು! ಕೇವಲ ಹೊಂಡ ತೋಡಿ ಗಿಡ ಇಡುವ ಮಾಲಿಯಂತಲ್ಲ; ಈ ಕೋರ್ಸು ಸೇರಿದವನಿಗೆ ಕವಿಯ ಮನಸ್ಸಿರಬೇಕಾಗುತ್ತದೆ; ಚಿತ್ರಕಾರನ ಕಣ್ಣಿರಬೇಕಾಗುತ್ತದೆ. ನಗರದ ರಸ್ತೆ, ಶಾಲೆ, ಬಯಲು, ವಸತಿ ಸಂಕೀರ್ಣ, ಸರಕಾರಿ ಕಟ್ಟಡಗಳು, ಕೆರೆಕಟ್ಟೆಗಳು – ಇತ್ಯಾದಿ ಎಲ್ಲವನ್ನೂ ಉಳಿಸಿಕೊಂಡು, ಅವಾವುದಕ್ಕೂ ತೊಂದರೆಯಾಗದಂತೆ ಮರಗಳನ್ನು ನೆಡುವುದು ಸವಾಲಿನ ಕೆಲಸ. ಹಾಗಾಗಿ ಕ್ರಂಬಿಗಲ್ ತನ್ನ ಕೋರ್ಸಿನ ಜೊತೆಜೊತೆಗೇ ಟೌನ್ ಪ್ಲಾನಿಂಗ್ ಕಲಿಯಬೇಕಾಗಿತ್ತು. ಆರ್ಕಿಟೆಕ್ಚರ್ ತರಬೇತಿಯನ್ನೂ ಪಡೆಯಬೇಕಾಗಿತ್ತು. ರಾಜೋದ್ಯಾನದಲ್ಲಿ ಶಿಕ್ಷಣ – ತರಬೇತಿ ಮುಗಿಸಿಕೊಂಡು ಹೊರಬಂದವನಿಗೆ ಮೆಕ್ಲೆನ್‍ಬರ್ಗ್ ಎಂಬಲ್ಲಿ ಹಣ್ಣು – ತರಕಾರಿ ಬೆಳೆಗಳ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಜೊತೆಗೆ, ಹ್ಯಾಂಬರ್ಗ್ ಎಂಬಲ್ಲಿ ಖಾಸಗಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಕೊಡುವ ಕೆಲಸ ಹೆಗಲೇರಿತು. ಹೀಗೆ ಸಿಕ್ಕಿದ ವಿಸ್ತಾರವಾದ ಅನುಭವಗಳಿಂದಾಗಿ ಕ್ರಂಬಿಗಲ್ ಹಣ್ಣು, ತರಕಾರಿ ಮತ್ತು ವಿಶೇಷ ತಳಿಯ ಮರಗಳನ್ನು ಬೆಳೆಸುವ ವಿಚಾರದಲ್ಲಿ ದೊಡ್ಡ ಪಂಡಿತನೇ ಆಗಿಬಿಟ್ಟ.
1888ರಲ್ಲಿ ಇಪ್ಪತ್ಮೂರು ವರ್ಷದ ಈ ತರುಣ ಉದ್ಯೋಗ ನಿಮಿತ್ತ ಲಂಡನ್ನಿನ ಹೈಡ್‍ಪಾರ್ಕ್ ಸೇರಿದ. ಅಲ್ಲಿಂದ ಮುಂದೆ ಐದು ವರ್ಷ ಇಂಗ್ಲೆಂಡ್ ರಾಜಮನೆತನಕ್ಕೆ ಸೇರಿದ ರಾಯಲ್ ಬೊಟಾನಿಕಲ್ ಗಾರ್ಡನ್‍ನಲ್ಲಿ ಕೆಲಸ ಮಾಡಿದ. ಬ್ರಿಟಿಷ್ ದೊರೆಗಳ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಬರೋಡದ ರಾಜ ಸಯ್ಯಾಜಿರಾವ್ ಗಾಯಕ್‍ವಾಡರಿಗೆ ಆಗ ತನ್ನ ರಾಜಧಾನಿಯನ್ನು ಒಪ್ಪಗೊಳಿಸುವ ಒಬ್ಬ ನಗರಪಿತೃವಿನ ಅವಶ್ಯಕತೆ ಇತ್ತು. ಸಹಜವಾಗಿಯೇ ಕ್ರಂಬಿಗಲ್‍ನ ಚಾತುರ್ಯ – ಸೌಂದರ್ಯಪ್ರಜ್ಞೆಗಳ ವಿವರಗಳು ಅವರ ಕಿವಿ ತುಂಬಿದವು. “ನೀನು ನಮ್ಮಲ್ಲಿಗೂ ಬಂದು ಒಂದು ದೊಡ್ಡ ಉಪಕಾರ ಮಾಡಬೇಕು” ಎಂದು ಆಮಂತ್ರಿಸಿದಾಗ ಕ್ರಂಬಿಗಲ್ ಹಿಂದೆ ಮುಂದೆ ಯೋಚಿಸದೆ ಭಾರತಕ್ಕೆ ಬಂದೇ ಬಿಟ್ಟ! ಬರೋಡದಲ್ಲಿ ರಾಜರ ಕೈಕೆಳಗೆ ಕೆಲಸ ಮಾಡತೊಡಗಿದ. ಅವರಿಗಾಗಿ ಬರೋಡಕ್ಕೆ ನೂರಾರು ಉದ್ಯಾನಗಳನ್ನು ತಯಾರಿಸಿಕೊಟ್ಟ. ಬಗೆ ಬಗೆಯ ಹಣ್ಣು – ಹೂವಿನ ಮರಗಳಿಂದ ಬರೋಡವನ್ನು ತುಂಬಿಸಿದ. ಯಾವ ಮರವನ್ನು ಹೇಗೆ ಬೆಳೆಸಬೇಕೆಂಬುದನ್ನು ಸೂಲಗಿತ್ತಿಗಿಂತಲೂ ಚೆನ್ನಾಗಿ ತಿಳಿದಿದ್ದ ಕ್ರಂಬಿಗಲ್‍ನ ಕೈಗುಣವೋ ಏನೋ, ನೆಟ್ಟ ಒಂದೂ ಗಿಡವೂ ಬಾಡಿ ಕಮರಿದ ಉದಾಹರಣೆಯೇ ಇರಲಿಲ್ಲ. ಬರೋಡದ ಹೃದಯಭಾಗದಲ್ಲಿದ್ದ ಕಮಾಟಿ ಬಾಗ್ ಎಂಬ ರಾಜರ ತೋಟ ನಿಜವಾಗಿಯೂ ರಾಜಕಳೆ ಹೊದ್ದು ನಳನಳಿಸುವಂತೆ ಮಾಡಿದ. ಗಾಯಕವಾಡರ ಸಾಮ್ರಾಜ್ಯಕ್ಕೆ ಆಗಾಗ ಹೋಗಿ ಬರುತ್ತಿದ್ದ ಮೈಸೂರಿನ ಒಡೆಯರಿಗೆ ಈ ಸೌಂದರ್ಯ ಕಣ್ಣು ಕುಕ್ಕಿತು. ಇಬ್ಬರೂ ಮಹಾರಾಜರು ಕೂತು ಇಸ್ಪೀಟಾಡುತ್ತಿದ್ದಾಗೊಮ್ಮೆ ಸಯ್ಯಾಜಿಯ ಎಲೆ ಬೋರಲು ಬಿತ್ತಂತೆ. ಒಡೆಯರ ಕೈ ಮೇಲಾಯಿತಂತೆ. ಸೋತವನು ಗೆದ್ದವನಿಗೆ ಬಹುಮಾನ ಕೊಡಬೇಕಲ್ಲ? “ನಿನ್ನ ಆ ಜರ್ಮನ್ ಹೂವಯ್ಯನನ್ನು ನನಗೆ ಕೊಟ್ಟು ಬಿಡು” ಅಂದರಂತೆ ಒಡೆಯರು! ಹಾಗೆ, 1908ರಲ್ಲಿ ಕ್ರಂಬಿಗಲ್ ದಕ್ಷಿಣ ಭಾರತಕ್ಕೆ ಬಂದ. ಮೈಸೂರಿಗೆ ದಕ್ಕಿದ.
ಹಾಗೆ ಬಂದವನನ್ನು ಒಡೆಯರು ಮೊದಲು ಕಳಿಸಿದ್ದು ಊಟಿಗೆ. ಮೈಸೂರಿನ ಸುಪರ್ದಿಯಲ್ಲಿದ್ದ ಈ ಗಿರಿಧಾಮದಲ್ಲಿ ಒಂದು ಅದ್ಭುತವೆನ್ನುವಂತಹ ಉದ್ಯಾನ ಎಬ್ಬಿಸಬೇಕು ಎನ್ನುವುದು ಕೃಷ್ಣರಾಜ ಒಡೆಯರ ಕನಸಾಗಿತ್ತು. ಕ್ರಂಬಿಗಲ್ ಊಟಿಗೆ ಹೋಗಿ, ಆ ವಾತಾವರಣಕ್ಕೆ ಹೊಂದಿಕೆಯಾಗುವಂತಹ ನೂರಾರು ಮರಗಳನ್ನು ಯುರೋಪಿನ ಊರುಗಳಿಂದ ತರಿಸಿದ. ಎರಡು – ಮೂರು ವರ್ಷದಲ್ಲೇ ಅಲ್ಲೊಂದು ಅನುಪಮ ಉದ್ಯಾನ ಎದ್ದು ನಿಂತಿತು. ಒಡೆಯರಿಗೆ ಖುಷಿಯೋ ಖುಷಿ! ಕೂಡಲೇ ಅವನನ್ನು ಬೆಂಗಳೂರಿಗೆ ಕರೆ ತಂದರು. ಇಲ್ಲೂ ನಿನ್ನ ಮ್ಯಾಜಿಕ್ ತೋರಿಸು ಮಾರಾಯ ಎಂದರು. ಬೆಂಗಳೂರಿನ ಹವೆ ಊಟಿಯಂತೆಯೇ ತಂಪಾಗಿತ್ತು. ಬಿರು ಬೇಸಗೆಯಲ್ಲೂ ಎಳೆ ಮಗುವಿನ ಬಿಸಿಗೆನ್ನೆಯಂತಹ ಬೆಚ್ಚನೆ ಹಗಲುಗಳು. ಅಕ್ಟೋಬರಿನ ಚಳಿಯಂತೂ ಹೇಳತೀರದು. ಈ ವಾತಾವರಣ ಹೂವಿನ ಮರಗಳಿಗೆ ಹೇಳಿ ಮಾಡಿಸಿದ್ದು. ಅಲ್ಲದೆ ಅದಕ್ಕೆ ತಕ್ಕಂತೆ, ಕವಡೆ ಎಸೆದರೂ ಚಿಗುರಿಸಬಲ್ಲ ಫಲವತ್ತಾದ ಮಣ್ಣೂ ಇತ್ತು. ಊರು ತುಂಬ ಕಲ್ಯಾಣಿಗಳಿದ್ದುದರಿಂದ ನೀರಿಗೆ ಕೊರತೆ ಇರಲಿಲ್ಲ. ಗೋಡಾ ಹೈ, ಮೈದಾನ್ ಹೈ! ಇನ್ನೇನು ಬೇಕು! ಕ್ರಂಬಿಗಲ್ ಇಡೀ ಬೆಂಗಳೂರಿನ ಮ್ಯಾಪು ಹರಡಿಕೊಂಡು ತನ್ನ ಮರಪೂರಣಕ್ಕೆ ಒಂದು ನೀಲನಕ್ಷೆ ತಯಾರಿಸಿದ. ಯಾವ್ಯಾವ ಗಲ್ಲಿಯಲ್ಲಿ ಎಂತೆಂಥಾ ಮರಗಳನ್ನು ನೆಡಬೇಕೆಂದು ಲೆಕ್ಕ ಹಾಕಿದ. ಇಡೀ ಬೆಂಗಳೂರಲ್ಲಿ ಹುಡುಕಿದರೂ ಇಪ್ಪತ್ತೈದು ಕಾರುಗಳು ಇರಲಿಲ್ಲ ಆಗ. ಆದರೆ, ಕ್ರಂಬಿಗಲ್, ಇಲ್ಲಿನ ಆಯಕಟ್ಟಿನ ಜಾಗಗಳಲ್ಲಿ ಡಬ್ಬಲ್ ರೋಡೇ ಇರಬೇಕೆಂದು ಹಠ ಮಾಡಿದ! ಆ ಎರಡು ಲೇನುಗಳ ನಡುವಲ್ಲೂ ಒಂದಷ್ಟು ಮರ ನೆಟ್ಟುಬಿಡಬಹುದಲ್ಲ ಎಂಬ ದೂರಾಸೆ ಅವನದು! ಪ್ರತಿ ಋತುವಿನಲ್ಲೂ ಒಂದಲ್ಲಾ ಒಂದು ಮರ ಹೂ ಬಿಡುತ್ತಿರುವಂತೆ ವ್ಯವಸ್ಥೆ ಮಾಡಬೇಕು; ವರ್ಷ ಪೂರ್ತಿ ಇಲ್ಲಿ ಜನ ಬಣ್ಣ ಬಣ್ಣದ ಹೂಗಳನ್ನು ನೋಡುತ್ತಲೇ ಇರಬೇಕು ಎನ್ನುವುದು ಅವನ ಯೋಚನೆಯಾಗಿತ್ತು. ಅದಕ್ಕಾಗಿ “ಸೀರಿಯಲ್ ಬ್ಲಾಸಮಿಂಗ್” ಎಂಬ ಸರಣಿ ಪುಷ್ಪಾರ್ಚನೆ ಕಾರ್ಯಕ್ರಮ ರೂಪಿಸಿದ. ವರ್ಷದ ಬೇರೆ ಬೇರೆ ತಿಂಗಳುಗಳಲ್ಲಿ ಹೂ ಬಿಡುವ ಯಾವ ಮರಗಳಿವೆ, ಅವು ಜಗತ್ತಿನ ಯಾವ ಮೂಲೆಯಲ್ಲಿವೆ, ಇಲ್ಲಿನ ವಾತಾವರಣಕ್ಕೆ ಹೊಂದುತ್ತವೆಯೇ, ಯಾವ ಮರ ಹೆಚ್ಚಿನ ಹಕ್ಕಿಗಳಿಗೆ ಆಹಾರ ಕೊಡುತ್ತದೆ ಎಂದು ನೂರೆಂಟು ಲೆಕ್ಕಾಚಾರ ಹಾಕಿಕೊಂಡು ಅಳೆದೂ ಸುರಿದು ಕೆಲಸ ಮಾಡಿದ. ಹೊರ ದೇಶಗಳ ಬಾಟನಿಸ್ಟ್’ಗಳೊಂದಿಗೆ ನಿರಂತರ ಪತ್ರ ವ್ಯವಹಾರ ನಡೆಸಿದ. ದೂರದ ಅಮೆರಿಕ, ಆಫ್ರಿಕ, ಆಸ್ಟ್ರೇಲಿಯಗಳಿಂದ ಗಿಡಗಳು ಹಡಗಿನಲ್ಲಿ ಬಂದು ಬೆಂಗಳೂರಲ್ಲಿ ಇಳಿದವು. ಜಗತ್ತಿನ ಇನ್ನೊಂದು ಮೂಲೆಯಂತಿದ್ದ ದೇಶಗಳಿಂದ ಬೀಜಗಳು ಬಂದವು. ಕ್ರಂಬಿಗಲ್ ನೂರಾರು ಕೆಲಸಗಾರರನ್ನು ಇಟ್ಟುಕೊಂಡು ನಗರದ ತುಂಬ ವನ ಮಹೋತ್ಸವ ನಡೆಸಿದ. ಸಾವಿರಾರು ಸಂಖ್ಯೆಯ ಮರಗಳು ಮೈಚಳಿಬಿಟ್ಟು ಅರಳಿ ನಿಂತವು.
ನೂರು ವರ್ಷಗಳ ಹಿಂದಿನ ಮಾತಿದು. ಲಾಲ್‍ಬಾಗ್ ಇಂದಿನಷ್ಟು ವಿಸ್ತಾರವೂ ವೈವಿಧ್ಯಮಯವೂ ಆಗಿರಲಿಲ್ಲ. ಆದರೂ ಬ್ರಿಟಿಷ್ ಅಧಿಕಾರಿಗಳು ಸಿಕ್ಕಿದಷ್ಟು ಜಾಗದಲ್ಲಿ ಒಳ್ಳೆಯ ನಂದನವನವನ್ನೇ ಎಬ್ಬಿಸಿದ್ದರು. ಮೈಸೂರು ಒಡೆಯರ ಸುಪರ್ದಿಯಲ್ಲಿದ್ದ ಈ ಉದ್ಯಾನಕ್ಕೆ ಜಾನ್ ಕ್ಯಾಮರೂನ್ ಎಂಬ ಅಧಿಕಾರಿ ಸಾಕಷ್ಟು ಕೆಲಸ ಮಾಡಿದರು. ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಲು ಮೈಸೂರು ಅರಸರಿಗೆ ಕ್ರಂಬಿಗಲ್‍ಗಿಂತ ಬೇರೆ ವ್ಯಕ್ತಿ ಇಲ್ಲ ಎಂದೇ ಅನಿಸಿತು. ಅವರ ಆಣತಿಯ ಮೇರೆಗೆ ಕ್ರಂಬಿಗಲ್ ಕೆಂಪು ತೋಟದ ಉಸ್ತುವಾರಿ ವಹಿಸಿಕೊಂಡ. ಅವನು ಈ ಅಧಿಕಾರ ವಹಿಸಿಕೊಂಡ ವರ್ಷದಲ್ಲೇ – ಅಂದರೆ 1912ರಲ್ಲಿ, ಲಾಲ್‍ಬಾಗಿನಲ್ಲಿ ವಾರ್ಷಿಕ ಪುಷ್ಪೋತ್ಸವವನ್ನು ನಡೆಸಲು ಶುರು ಮಾಡಿಬಿಟ್ಟ! ಅಂದಿನಿಂದ ಇಂದಿನವರೆಗೆ ಒಟ್ಟು 202 ಪುಷ್ಪಪ್ರದರ್ಶನಗಳು ಈ ತೋಟದಲ್ಲಿ ಆಗಿ ಹೋಗಿವೆ ಎನ್ನುವುದೇ ಒಂದು ವಿಶೇಷ ದಾಖಲೆ! ಕ್ರಂಬಿಗಲ್‍ನ ಕಾಲದಲ್ಲಿ ಲಾಲ್‍ಬಾಗಿಗೆ ಹತ್ತಾರು ಅಲ್ಲ ನೂರಾರು ಬಗೆಬಗೆಯ ಗಿಡಮರಗಳು ವಿದೇಶಗಳಿಂದ ಬಂದವು. ಪ್ರತಿ ಗಿಡವನ್ನೂ ತನ್ನ ಸ್ವಂತ ಮಗುವಿನಂತೆಯೇ ನೋಡಿಕೊಳ್ಳುತ್ತಿದ್ದ ಕ್ರಂಬಿಗಲ್‍ಗೆ ಯಾವ ಗಿಡಕ್ಕೆ ಎಂತಹ ಮಣ್ಣು ಬೇಕು, ಎಷ್ಟು ಬಾರಿ ನೀರು ಹನಿಸಬೇಕು, ವರ್ಷದ ಯಾವ ಕಾಲದಲ್ಲಿ ಹೂ ಬಿಡುತ್ತದೆ, ಯಾವ ಹಕ್ಕಿಗಳು ಅದರ ಹಣ್ಣು ತಿನ್ನಲು ಬರುತ್ತವೆ, ಬೀಜ ಪ್ರಸಾರ ಮಾಡುವುದು ಹೇಗೆ ಇತ್ಯಾದಿ ಮಾಹಿತಿಗಳು ಬೆರಳ ತುದಿಯಲ್ಲಿ ಕುಣಿಯುತ್ತಿದ್ದವು. ಮೈಸೂರು ಒಡೆಯರನ್ನು ದೇವರಂತೆ ಕಾಣುತ್ತಿದ್ದ ಕ್ರಂಬಿಗಲ್, ತನ್ನ ಸ್ವಾಮಿ ನಿಷ್ಠೆಯ ಪ್ರತೀಕವಾಗಿ ಚಾಮರಾಜ ಒಡೆಯರು ಕುದುರೆಯಲ್ಲಿ ಕೂತ ಆಳೆತ್ತರದ ಪ್ರತಿಮೆಯನ್ನು ಮೈಸೂರಿನ ಕರ್ಝನ್ ಪಾರ್ಕಿನಿಂದ ತಂದು ಲಾಲ್‍ಬಾಗಿನ ಹೃದಯಭಾಗದಲ್ಲಿ ಪ್ರತಿಷ್ಠಾಪಿಸಿದ. ಈ ಪ್ರತಿಮೆಯ ಸುತ್ತ ವರ್ಷದ ವಿವಿಧ ಋತುಗಳಲ್ಲಿ ಹೂಬಿಡುವ ಮರಗಳನ್ನು ನೆಟ್ಟು ಬೆಳೆಸಿದ.
ವಿಶೇಷವೆಂದರೆ ತಾನು ಜರ್ಮನ್ ರಾಷ್ಟ್ರೀಯನಾದರೂ ಕ್ರಂಬಿಗಲ್ ವಿಶ್ವಮಾನವನಂತೆ ಬದುಕಿದ. ಎರಡನೆ ಮಹಾಯುದ್ಧದ ಸಮಯದಲ್ಲಿ ಜರ್ಮನ್ ಮತ್ತು ಬ್ರಿಟಿಷರು ಶತ್ರುಗಳಾದ್ದರಿಂದ, ಅದರ ಬಿಸಿ ಕ್ರಂಬಿಗಲ್‍ಗೂ ತಟ್ಟಿತು. ಅಹ್ಮದ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಉದ್ಯಾನದಲ್ಲೇ ಅವನನ್ನು ಬಂಧಿಯಾಗಿಸಿ, ಈ ಮೇರೆಯಿಂದ ಹೊರ ಹೋಗಬಾರದು ಎಂದು ಬ್ರಿಟಿಷರು ದಿಗ್ಭಂದನ ವಿಧಿಸಿದರಂತೆ. ಇದೇನು ಶಿಕ್ಷೆಯೋ ಬಹುಮಾನವೋ ಎಂದು ಕ್ರಂಬಿಗಲ್ ಕೇಳಿದ್ದನಂತೆ! ವಿಪರ್ಯಾಸವೆಂದರೆ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಪಟ್ಟ ಬರಲು ಕಾರಣನಾದ ಈ ಮಹಾ ಪುರುಷನ ಹೆಸರನ್ನು ಕೇಳಿರುವ ಎಷ್ಟು ಜನ ಬೆಂಗಳೂರಲ್ಲಿದ್ದಾರೆ? ಅಖಂಡ 48 ವರ್ಷ ಬೆಂಗಳೂರಲ್ಲಿ ಬದುಕಿದ, ಈ ನಗರವನ್ನೇ ತನ್ನ ನರನಾಡಿಗಳಲ್ಲಿ ತುಂಬಿಕೊಂಡ, ಕವಿ ಮನಸ್ಸಿನ ಕ್ರಂಬಿಗಲ್ 91 ವರ್ಷದ ಪರಿಪಕ್ವ ಜೀವನ ನಡೆಸಿ 1956ರ ಫೆಬ್ರವರಿ ಎಂಟರಂದು ಇದೇ ಊರಲ್ಲಿ ಕೊನೆಯುಸಿರೆಳೆದ. ಅವನ ದೇಹವನ್ನು ಕ್ಯಾಥೊಲಿಕ್ ಸಂಪ್ರದಾಯದಂತೆ ಶಾಂತಿ ನಗರದ ಸ್ಮಶಾನದಲ್ಲಿ ಮಣ್ಣು ಮಾಡಲಾಯಿತು. ತಾನು ಬದುಕಿದ್ದಷ್ಟೂ ಕಾಲ ಗಿಡ ಮರಗಳನ್ನು ಜೀವದ ಗೆಳೆಯರಂತೆ ಪ್ರೀತಿಸಿದ, ಅವುಗಳಿಗಾಗಿ ಜೀವ ತೇಯ್ದ, ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಜಗತ್ತಿನ ಹತ್ತು ಹಲವು ದೇಶಗಳ ಸಾಂಸ್ಕøತಿಕ ರಾಯಭಾರಿಗಳನ್ನು ತಂದು ಪ್ರತಿಷ್ಠಾಪಿಸಿದ ಕ್ರಂಬಿಗಲ್‍ನನ್ನು ಅದ್ಯಾಕೋ ನಮ್ಮ ಸರಕಾರಗಳು ನೆನೆಯಲಿಲ್ಲ. ಅವನಿಗೆ ತನ್ನ ಜೀವನದಲ್ಲಿ ಒಂದೇ ಒಂದು ಸರಕಾರಿ ಪ್ರಶಸ್ತಿ ಬರಲಿಲ್ಲ. ಬೆಂಗಳೂರ ಜನ ಸದಾ ನೆನೆಸಿಕೊಳ್ಳಬೇಕಿದ್ದ ಒಂದು ಅದಮ್ಯ ಚೇತನ ಕಾಲದ ಅಗೆತದಲ್ಲಿ ಮರೆಯಾಯಿತು, ಎಲೆಮರೆಯ ಹಣ್ಣಾಗೇ ಉಳಿಯಿತು. ಹೊರದೇಶಗಳಲ್ಲಾಗಿದ್ದರೆ, ಒಂದು ನಗರದ ಇಮೇಜ್‍ನ್ನೇ ಬದಲಿಸಿ ಹಾಕಿದ ಶಕಪುರುಷ ಎಂದು ಅವನ ಹೆಸರಲ್ಲಿ ಮ್ಯೂಸಿಯಮ್ ಎದ್ದು ನಿಲ್ಲುತ್ತಿತ್ತು. ಅವನು ಬದುಕಿ ಬಾಳಿದ ಮನೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುತ್ತಿದ್ದರು. ಅವನ ಗೋರಿಯನ್ನು ಪ್ರೀತಿ, ಗೌರವಗಳಿಂದ ನೋಡಿಕೊಂಡು ಐತಿಹಾಸಿಕ ಸ್ಥಳ ಎಂದು ಕಾಯ್ದಿರಿಸುತ್ತಿದ್ದರು. ಆದರೆ ನಮ್ಮಲ್ಲಿ? ಹೊಸೂರು ರಸ್ತೆಯಲ್ಲಿ ನೂರಾರು ಗೋರಿಗಳ ನಡುವೆ ತಣ್ಣಗೆ ಮಲಗಿರುವ ಕ್ರಂಬಿಗಲ್‍ನ ಸಮಾಧಿಗೆ ಆತುಕೊಂಡು ಅವನಿಷ್ಟದ ನೀರು ಕಾಯಿ ಮರ (ಆಫ್ರಿಕನ್ ಟ್ಯೂಲಿಪ್) ಬೆಳೆದುನಿಂತಿದೆ. ವರ್ಷದಲ್ಲಿ ಐದು ತಿಂಗಳು ತನ್ನ ಕೆಂಪು ಹೂಗಳ ಅಶ್ರುಗಳನ್ನು ಮಿಡಿದು ಕೃತಜ್ಞತೆ ಸಲ್ಲಿಸುತ್ತಿದೆ.