Featured ಪರಿಸರದ ನಾಡಿ ಬಾನಾಡಿ

ನೀರು ಕೊಡಿ

ಏಪ್ರಿಲ್ ಬಂದಾಯಿತು, ಬೇಸಿಗೆಯ ಕಾವು ದಿನೇ ದಿನೇ ಏರುತ್ತಿದೆ. ಉತ್ತರ ಭಾರತಕ್ಕೆ ಸೀಮಿತವಾಗಿದ್ದ   sun stroke ನಮ್ಮೆಡೆಗೆ ಕೂಡಾ ಧಾವಿಸಿ ಬರುತ್ತಿದೆ. ಈಗಾಗಲೇ ಮಂಗಳೂರಿನಲ್ಲಿ 5 ಜನ ಆಸ್ಪತ್ರೆ ಸೇರಿದ್ದಾರಂತೆ. ಶಿವಮೊಗ್ಗವಂತೂ 48 ಡಿಗ್ರೀ ತಾಪದಲ್ಲಿದೆ. ಸದಾ ತಂಪಾಗಿರುವ ಮೈಸೂರು 40ಡಿಗ್ರಿಯ ಆಸುಪಾಸಿನಲ್ಲಿದೆ. ಎಲ್ಲರ ಬಾಯಲ್ಲಿ ಒಂದೇ ಉದ್ಗಾರ, ಎಂಥಾ ಸೆಖೆ!

ಇಪ್ಪತ್ತು ವರ್ಷಗಳ ಹಿಂದೆ, ನಾನಾಗ ಏಳನೇ ತರಗತಿಯ ವಿದ್ಯಾರ್ಥಿ, ಇದೇ ಏಪ್ರಿಲ್ ತಿಂಗಳು, ದಿನಪತ್ರಿಕೆಯಲ್ಲಿ ಒಂದು ಸ್ಪೋಟಕ ಸುದ್ದಿ ಬರುತ್ತಿತ್ತು.  ಕೆ.ಆರ್.ಎಸ್ (ಕೃಷ್ಣರಾಜಸಾಗರ ಜಲಾಶಯ)ನಲ್ಲಿ ಮುಳುಗಿದ್ದ ವೇಣುಗೋಪಾಲ ಸ್ವಾಮಿ” ದೇವಾಲಯ ಕಾಣಿಸುತ್ತಿದೆ. ಕೆ.ಆರ್.ಎಸ್’ನ ನೀರು 70 ಅಡಿಗೆ ತಗ್ಗಿದೆ, ಮುಳುಗಿದ್ದ ದೇವಾಲಯ ಎದ್ದಿದೆ. ನಮ್ಮಿಂದ ಹಿಡಿದು ಮೈಸೂರಿನ ಸಮಗ್ರರೂ ಆ ದೇಗುಲದತ್ತ ಹೋದದ್ದೇ ಹೋದದ್ದು. ಮೈಸೂರಿಂದೇನು, ಒಂದು ಹಂತದಲ್ಲಿ ಮೈಸೂರು ಅರಮನೆಗೆ ಬರುವ ಪ್ರವಾಸಿಗರಿಗಿಂತ ಹೆಚ್ಚು ಎದ್ದ ವೇಣುಗೋಪಾಲನ ಸನ್ನಿಧಿಗೆ ಜನ ಬರುವಂತಾಗಿತ್ತು. ಏಪ್ರಿಲ್, ಮೇ ಎರಡು ತಿಂಗಳಲ್ಲಿ ಲಕ್ಷಾಂತರ ಜನರು ಬಂದು ಹೋದರು. ಜೂನ್ ತಿಂಗಳಿನಲ್ಲಿ ಮುಂಗಾರು ಪ್ರಾರಂಭಿಸುತ್ತಿದ್ದಂತೆ ಕೆ.ಆರ್.ಎಸ್ ಒಡಲು ತುಂಬತೊಡಗಿತು, ವೇಣುಗೋಪಾಲ ದೇವಾಲಯ ನೀರೊಳಗೆ ಸೇರಿ ಬಿಟ್ಟಿತು. ಕೆ.ಆರ್.ಎಸ್ ಕಟ್ಟಿದ ನಂತರ ಮೊದಲ ಬಾರಿಗೆ ಕಂಡಿದ್ದ ಆ ದೇಗುಲ ಅನಂತರದ ವರ್ಷದಲ್ಲಿ ಪುನಃ ಕಾಣಿಸಿತು. ಮತ್ತಷ್ಟೇ ಜನ ದೇಗುಲದತ್ತ ನುಗ್ಗಿದರು. ಜನರ ಈ ಭಕ್ತಿ ಕಂಡು ಇಡೀ ದೇಗುಲವನ್ನು ಹಿನ್ನೀರಿನ ತಟಕ್ಕೆ ಸ್ಥಳಾಂತರಿಸಿ ಬಿಟ್ಟರು. ಸಣ್ಣದೊಂದು ಗುಡಿಯನ್ನು ಆ ದೇಗುಲದ ಕುರುಹಿಗಾಗಿ ಅಲ್ಲೇ ಬಿಟ್ಟರು. ಪ್ರತಿ ವರ್ಷವೂ ಕೆ.ಆರ್. ಎಸ್ ನೀರಿನ ಮಟ್ಟ 60 ಅಡಿಗೆ ಬರುತ್ತಿದೆ. ಆ ಗುಡಿ ಪುನಃ ಪುನಃ ಕಾಣಿಸುತ್ತಿದೆ. ಏಪ್ರಿಲ್’ನಲ್ಲಿ ಕಾಣಿಸುತ್ತಿದ್ದ ಆ ಗುಡಿ ಈಗ ಮಾರ್ಚಿನಲ್ಲಿ ಕಾಣುವಂತಾಗಿದೆ. ಇತ್ತ ಹಿನ್ನೀರಿನ ತಟದಲ್ಲಿ ಭಕ್ತಿಗೆ ಓಗೊಟ್ಟು ಯಥಾವತ್ ದೇಗುಲವು ಬಲು ಸುಂದರವಾಗಿಯೇ ನಿರ್ಮಾಣಗೊಂಡಿದೆ.

07

ಎಲ್ಲರಿಗೂ ದೇಗುಲದ ದರ್ಶನವಾದದ್ದು ಪುಳುಕಗೊಳಿಸಿತೇ ಹೊರತು, ಆ ದೇಗುಲ ಪ್ರತೀ ವರ್ಷ ಹೀಗೆ ಕಾಣಲು ಕಾರಣವೇನು ಎಂದೂ ಯೋಚಿಸಲಿಲ್ಲ. ಯೋಚಿಸಿದರೂ ಆ ಕುರಿತು ಯೋಜಿಸುವುದು ಸಾಧ್ಯವಾಗಲಿಲ್ಲ. ದೇಗುಲದ ಪುನರ್ನಿರ್ಮಾಣಕ್ಕೆ ಇದ್ದ ಭಕ್ತಿ, ಶ್ರದ್ಧೆ ಮತ್ತು ಹಿತಾಸಕ್ತಿ ಜಲನಿರ್ಮಾಣದಲ್ಲಿ ಪ್ರತಿಬಿಂಬಿಸಲಿಲ್ಲ. ನಮ್ಮ ಮನೆಗೆ ನೀರು ಬರದಿರುವಾಗ ಸ್ಥಳೀಯ ಕಾರ್ಪೋರೇಶನ್ ಅನ್ನು ದೂರುವುದು ಅಥವಾ ಅದರ ಮುಂದೆ ಜಾಲಿ ಕೊಡಪಾನ ಹಿಡಿದು ಧರಣಿ ಕೂರುವುದಕ್ಕಿಂತ ಹೆಚ್ಚಿನ ಜವಾಬ್ಧಾರಿ ನಮಗಿಂದು ಬಂದಿಲ್ಲ. ನೆಲ, ಜಲವನ್ನು ಭತ್ತಿಸುವುದೇ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿದಂತಿದೆ. ವೇಣುಗೋಪಾಲನ ಭಕ್ತಿ ಪ್ರಕೃತಿ ಮಾತೆಯ ಕಡೆಗೆ ಹರಿಯದಿದ್ದರೆ ಆ ವೇಣುಗೋಪಾಲನೂ ಏನೂ ಮಾಡಲಾರದ ಸ್ಥಿತಿ ಬರುತ್ತದೆ.

08

ಇನ್ನು ನಮ್ಮ ಪೇಟೆಯ ಕಡೆಗೆ ಬರೋಣ. ಸಂಪೂರ್ಣ ಅಣೆಕಟ್ಟಿನ ಮೇಲೆ ಅಥವಾ ಕೊಳವೆಬಾವಿಯ ಮೇಲೆ ಅವಲಂಬಿತವಾದ ಜೀವನ. ಪೇಟೆಯ ಬೆಳವಣಿಗೆಯ ಧಾವಂತಕ್ಕೆ ಅಣೆಕಟ್ಟಿನ ನೀರು ಸಾಲದಾಗಿದೆ. ಹೊಸ ಹೊಸ ಜಲಯೋಜನೆಗಳ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ. ಇತ್ತೀಚಿನ ಎತ್ತಿನಹೊಳೆ ಇದಕ್ಕೆ ನಿದರ್ಶನ. ಪ್ರತಿ ಬೇಸಿಗೆಯಲ್ಲಿ ಒಂದೇ ಕೂಗು ನೀರು ಕೊಡಿ”.

06

ಮುಂಬಯಿಯಂತಹ ಮಾಯಾನಗರದಲ್ಲಿ ನೀವು ಕೇಳಿದ್ದು ಸಿಗುತ್ತದೆ. ಆದರೆ ನೀರು ಮಾತ್ರ ವಾರಕ್ಕೊಮ್ಮೆ ಲಭ್ಯ.  ನಮ್ಮಲ್ಲಿ ಊಟ ಮಾಡಿದ ತಟ್ಟೆಯನ್ನು ತೊಳೆಯಲೂ ನೀರಿಲ್ಲ ಹಾಗಾಗಿ ನಾವು ಪೇಪರ್ ಪ್ಲೇಟ್’ನಲ್ಲಿ ಉಣ್ಣುತ್ತೇವೆ, ವಾರಕ್ಕೊಮ್ಮೆ ಸ್ನಾನ ಮಾಡುವುದೂ ಕಷ್ಟವಾಗಿದೆ, ಕುಡಿಯುವುದಕ್ಕೆ ` Mineral water‘. “ನೀವು ಪುಣ್ಯವಂತರು”. ಇದು ಅಲ್ಲಿರುವವರು ವಿವರಿಸುವ ರೀತಿ. ಇದು ಈ ವರ್ಷದ ಸ್ಥಿತಿ. ಮುಂದೆ ಮುಂದೆ ವೇಣುಗೋಪಾಲ ಮತ್ತೆ ಮತ್ತೆ ಬೆತ್ತಲಾಗುವ ಸ್ಥಿತಿ. ಮುಂಬಯಿ ನಮಗೆ ತೀರ ಸಮೀಪದಲ್ಲೇ ಇದೆ. ಕಾಡ್ಗಿಚ್ಚು ಹರಡುವುದು ಸುಲಭ, ನಂದಿಸುವುದೇ ಕಷ್ಟ. ಹಾಗಾಗಿ ಪ್ರಕೃತಿಯೆಡೆಗೆ ಭಕ್ತಿ ಹರಿಸುವ ಸಮಯ ಬಂದಿದೆ. ಪರಸ್ಪರ ವಿರುದ್ಧ ದಿಕ್ಕಿನ ಪೇಟೆಯನ್ನು ಹೃಸ್ವಗೊಳಿಸದೆ “ನೀರು ಕೊಡಿ” ಎಂಬ ಬೇಡಿಕೆ ಈಡೇರುವುದು ಅಸಾಧ್ಯವಿದೆ.

ಇನ್ನು ನಮ್ಮ ಹಳ್ಳಿಯಲ್ಲಿ ತಿರುಗಾಡಿದಾಗಲೂ ಇದೇ ಕೂಗು “ನೀರು ಕೊಡಿ” . ಅರರೆ ಯಾವುದೇ ವೈಭವದ ಮಾಲುಗಳಿಲ್ಲ, ಸಾಲು ಸಾಲು ಮನೆಗಳಿಲ್ಲ, ಇಂದಿನ ಅಭಿವೃದ್ಧಿಯ ತಳುಕಿಲ್ಲ. ಆದರೂ ನೀರು ಕೊಡಿ”.

ಹೌದು ಪೇಟೆಯ ಅಭಿವೃದ್ಧಿಯಲ್ಲಿ ನಮ್ಮ ಹಳ್ಳಿಯ ಸಹಕಾರ ಇದ್ದೇ ಇದೆ. ಹಳ್ಳಿಯ ನೀರು ಕುಡಿದ ಹಣ್ಣು, ಹಾಲು ಆ ಪೇಟೆಗೆ ಹೋಗುವುದಕ್ಕಾಗಿ ವಾಹನಗಳು ಮತ್ತಷ್ಟು ನೀರು ಕುಡಿಯುತ್ತವೆ. ಹಳ್ಳಿಯಿಂದ ಪ್ರತಿ ದಿನ ಪೇಟೆಗೆ ವಲಸೆ ಹೋಗುವವರು ಮತ್ತೆ ಮತ್ತೆ ನೀರು ಹೊತ್ತಿಸುವ ಕೆಲಸಕ್ಕೆ ಸಹಕರಿಸುತ್ತಾರೆ. ಪೇಟೆಗೆ ಏಷ್ಟು ಹೋದರೂ ಅದು ಸಾಲದಾಗಿದೆ. ವೈವಿಧ್ಯಮಯವಾಗಿದ್ದ ಮನುಷ್ಯನ ಆಹಾರ ಅಕ್ಕಿ, ಗೋಧಿ, ಕ್ಯಾರೆಟ್ ಬೀಟ್ರೂಟ್’ಗೆ ಸೀಮಿತವಾಗಿದೆ. 30 ಅಡಿಯಲ್ಲಿ ಸಿಗುತ್ತಿದ್ದ ನೀರು 1500 ಅಡಿ ಸೇರಿ ವರ್ಷಗಳು ಉರುಳಿವೆ. ಮತ್ತೆ ಮತ್ತೆ ನೀರಾವರಿ ಯೋಜನೆಗಳ ಕೂಗು ಜೋರಾಗುತ್ತಿದೆ. ಕಳಸಾ ಯೋಜನೆ ಅನಿವಾರ್ಯವಾಗಿದೆ. ಎಲ್ಲಾ ಕಡೆ ಒಂದೇ ಘೋಷಣೆ “ನೀರು ಕೊಡಿ”.

ಕಾಲವೊಂದಿತ್ತು, ಪ್ರತಿ ಹಳ್ಳಿಯಲ್ಲಿ ಒಂದು ಸುಂದರ ಕೆರೆ. ಆ ಕೆರೆಯ ಹಳ್ಳಿಯ ಜೀವನಾಡಿ. ಆ ಊರಿನ ಎಲ್ಲಾ ಕಷ್ಟಗಳಿಗೂ ಆ ಕೆರೆ ಮಿಡಿಯುತ್ತಿತ್ತು. ಪಶು ಪಕ್ಷಿಗಳಿಗೂ ನೀರುಣಿಸುತ್ತಿತ್ತು. ನಮ್ಮ ಪಾತ್ರೆ ಬಟ್ಟೆಗಳನ್ನು ಒಗೆಯುತ್ತಿತ್ತು. ರಾಸುಗಳನ್ನು ಮೀಯಿಸುತ್ತಿತ್ತು. ನಮ್ಮ ದಾಹ ಇಂಗಿಸುತ್ತಿತ್ತು. ಆದರೆ ಈಗ! ಅದೇ ಕೆರೆಗಳು ಕೂಗುತ್ತಿವೆ – “ನೀರು ಕೊಡಿ”. ಈ ಕೂಗು ಸರಕಾರಕ್ಕೂ ಕೇಳಿದಂತಿದೆ. ಹಾಗಾಗಿ ಸಹಜವಾಗಿ ತುಂಬಬೇಕಾದ ಕೆರೆಗಳನ್ನು ನಾಲೆ ನೀರಿನ ಮೂಲಕ ತುಂಬಿಸುವಂತಾಗಿದೆ. ಈಗ ಕೆರೆಗಳೆಂದರೆ ಒಂದೋ ನಾಲೆ ನೀರು ಹರಿಸಿ ತುಂಬಿಸಿದ್ದು ಅಥವಾ ನಮ್ಮ ಬಚ್ಚಲು ನೀರು, ಕಾರ್ಖಾನೆಯ ನೀರು. ನಗರದ ಸುತ್ತಮುತ್ತ ಇರುವ ಕೆರೆ ಗಬ್ಬು ನಾರುತ್ತಿದೆ. ನಮ್ಮ ಮಕ್ಕಳಿಗೆ ಅಂತರ್ಜಲ ಎಂಬ ಪದವೇ ಮರೆತುಹೋಗಿದೆ. ಇದೂ  ಅಭಿವೃದ್ಧಿಯ ಒಂದು ಅಂಶ ಎಂದು ನಾವು ಪರಿಗಣಿಸಿದಂತಿದೆ.

ಎಲ್ಲರೂ “ನೀರು ಕೊಡಿ” ಎಂದು ಬೊಬ್ಬಿಡುತ್ತಿರುವಾಗ ಅಲ್ಲಿ ಮೆಲುದನಿಯಲ್ಲಿ ನೀರು ಕೊಡಿ ಎಂಬ ಕೂಗು ಕೇಳುತ್ತಿದೆಯೇ?

ಹಾಂ!!! ಅದು ನಮ್ಮ ಬಾನಾಡಿಗಳ ಕೂಗು. ನಮ್ಮ ಅಭಿವೃದ್ಧಿಯ ಆತುರಕ್ಕೆ ನೊಂದವರೆಷ್ಟು ಜೀವಿಗಳೋ? ಅದರಲ್ಲಿ ನಮ್ಮ ಕಣ್ಣಿಗೆ ಸುಲಭದಲ್ಲಿ ಕಾಣುವುದೇ ಈ ಹಕ್ಕಿಗಳು. ಬೇಸಿಗೆಯಲ್ಲಂತೂ ಪೇಟೆಗಳಲ್ಲಿ ನೀರು ಸಿಗದೆ ಸುಮಾರು ಹಕ್ಕಿಗಳು ಸಾಯುತ್ತವೆ. ನೀರಿದ್ದರೂ ಅದು ಅಶುದ್ಧ ನೀರು. ನಮ್ಮ ಸರಕಾರದ ಶುದ್ಧ ಕುಡಿಯುವ ನೀರು ಯೋಜನೆ ಅದೇನಿದ್ದರೂ ನಮಗೆ ನಿಮಗೆ. ಇಂಥಾ ನೂರಾರು ಯೋಜನೆಗಳ ಕಾರಣವಾಗಿ ಉಂಟಾದ ಕೊಳಚೆಗಳಷ್ಟೇ ಅವುಗಳಿಗೆ.
05

ಪುಟ್ಟ ಹಕ್ಕಿಗೆ ಎಷ್ಟು ನೀರು ಬೇಕು. ನೀವೇ ಯೋಚಿಸಿ. ಅಷ್ಟು ನೀರು ಕೂಡಾ ಈಗ ಹೆಚ್ಚಿನೆಡೆ ಅವಕ್ಕೆ ಅಲಭ್ಯ.  ಹಾಗಾಗಿ ಅವು ಅನಿವಾರ್ಯವಾಗಿ ಕೂಗುತ್ತಿದೆ “ನೀರು ಕೊಡಿ”.

001

ಕೇಳಿಸಲಿಲ್ಲವೇ?…..

ಇನ್ನೇಕೆ ತಡ. ನಾವು ಬಾಯಾರಿದಾಗ ನೀರು ಸಿಗದಿದ್ದರೆ ಹೇಗಾಗುತ್ತದೆ ಎಂದು ಒಮ್ಮೆ ಊಹಿಸಿ. ತಮ್ಮದಲ್ಲದ ತಪ್ಪಿಗೆ ಆ ಪಕ್ಷಿಗಳನ್ನು ಶಿಕ್ಷಿಸುವುದು ಬೇಡ. ಹಾಗಾಗಿ ಅವಕ್ಕೆ ನೀರು ಕೊಡಿ”. ನಾವು ಮಾಡಿದ ಪರಿಸರ ನಾಶಕ್ಕೆ ಪ್ರಾಯಶ್ಚಿತ್ತವಾಗಿಯಾದರೂ ಅವಕ್ಕೆ ನೀರು ಕೊಡಿ”. ಪ್ರಕೃತಿಯೆಡೆಗಿನ ಭಕ್ತಿಯ ಹರಿವಿನ ಮೊದಲ ಹಂತವಾಗಿ ನೀರುಕೊಡಿ”. ಹಾಗಾಗಿ ಹಕ್ಕಿಗಳಿಗಾಗಿ ನಿಮ್ಮ ಮನೆ ಮುಂದೆ ನೀರು ಇಡಿ”.

ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಮಣ್ಣಿನ ಕುಂಡ, ಅದೂ ಬೇಡ ಅಗಲವಾದ ಯಾವುದಾದರೂ ಒಂದು ಪಾತ್ರೆ. ಪಾತ್ರೆ ಅಗಲ ಇದ್ದಷ್ಟೂ ಒಳ್ಳೆಯದು. ಪಾತ್ರೆಯ ಮಧ್ಯೆ ಒಂದು ಚೆಂದದ ಕಲ್ಲು ಇಡಿ. ನೀರು ಕಲ್ಲಿನಿಂದ ಮೇಲೆ ಹೋಗುವುದು ಬೇಡ. ಈ ಕಲ್ಲು ಹಕ್ಕಿಗಳಿಗೆ ಕೂರಲು ಸಹಕಾರಿಯಾಗುತ್ತದೆ. ನೀರು ತುಂಬ ಇದ್ದರೆ ಹಕ್ಕಿಗಳಿಗೆ ಅಷ್ಟು ಹಿತವಾಗುವುದಿಲ್ಲ. ಬೇಸಿಗೆಯ ಕಾವಿಗೆ ಅವು ನೀವು ಇಟ್ಟ ನೀರಿನಲ್ಲಿ ಸ್ನಾನವನ್ನೂ ಮಾಡುತ್ತವೆ.
002ನೀವು ಸದಾ ಓಡಾಡುವ ಜಾಗದಲ್ಲಿ ಇಟ್ಟರೆ ಅವು ಅಂಜಿ ಬರದಿರುವ ಸಾಧ್ಯತೆಯೇ ಹೆಚ್ಚು. ಬಿಸಿಲಿನಲ್ಲಿ ಇಡಬೇಡಿ, ಮರದ ನೆರಳಿದ್ದರೆ ಒಳ್ಳೆಯದು. ಮರವಿಲ್ಲದ ಈ ಸಮಯದಲ್ಲಿ ಆದಷ್ಟು ನೆರಳು ಇರುವೆಡೆ ನಿಮ್ಮ ನೀರಿರಲಿ. ಬೆಕ್ಕಿನ ಕೈಗೆ ಸುಲಭ ತುತ್ತಾಗದಂತೆ ಎಚ್ಚರ ವಹಿಸಿ. ಅವು ನೀರು ಕುಡಿಯುವ ಸಮಯಕ್ಕೆ ಬೆಕ್ಕುಗಳು ಹೊಂಚು ಹಾಕುತ್ತಿರುತ್ತವೆ. ನೀರಿಗೆ ಕೆಲವರು ಸಕ್ಕರೆ ಹಾಕುವುದುಂಟು. ದಯವಿಟ್ಟು ಆ ತಪ್ಪು ಮಾಡಬೇಡಿ. ನಮಗೆ ಸಕ್ಕರೆ ಕಾಯಿಲೆ ಬಂದದ್ದು ಸಾಕು.
03

ಹಗಲು ಮತ್ತು ಸಂಜೆ ಬಾನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೀರಿಗೆ ಭೇಟಿಕೊಡುತ್ತವೆ. ನಿಮಗೆ ವಿರಾಮವಿದ್ದರೆ ಆ ಹೊತ್ತಿನಲ್ಲಿ  ಯಾವ ಯಾವ ಹಕ್ಕಿಗಳು ನಿಮ್ಮ ಮನೆಗೆ  ಭೇಟಿಕೊಟ್ಟವು ಎಂಬುದನ್ನು ದಾಖಲಿಸಿ. ಅವುಗಳು ಆ ನೀರಿನಲ್ಲಿ ಆಡುವ ಪರಿಯನ್ನು ಗಮನಿಸಿ. ಪ್ರಕೃತಿಗೆ ತುಸು ಹತ್ತಿರವಾಗೋಣ. ನೀರಿಡದೆ, ನೀರು ಕೊಡದೆ, ಎಲ್ಲರಿಗೂ ಇರುವೆಡೆ ನೀರಿರುವ ಹಾಗಾಗಲು ಏನು ಮಾಡಬೇಕೆಂದು ಯೋಚಿಸೋಣ. ಇನ್ನೂ ನಿಖರವಾಗಿ ಹೇಳುವುದಾದರೆ ಏನೇನು ಮಾಡದಿರಬೇಕೆಂದು ಯೋಚಿಸೋಣ. ನಿಜವಾಗಿ ಯೋಚಿಸಿದರೆ, ಪ್ರಕೃತಿಯ ಉಳಿವಿಗೆ ನಾವು ಮಾಡಬೇಕಾದುದು ಏನೂ ಇಲ್ಲ. ಮಾಡಬಾರದ್ದನ್ನು ಮಾಡದಿದ್ದರೆ ಸರಿಯಾಗುವುದೆಲ್ಲ.
04

ಚಿತ್ರ ಕೃಪೆ : ಡಾ. ಅಭಿಜಿತ್ ಎ.ಪಿ.ಸಿ. , ವಿಜಯಲಕ್ಷ್ಮಿ ರಾವ್, ಸಹನಾ ಮೈಸೂರು.

ಮುಂದಿನ ಕಂತಿನಲ್ಲಿ : ಹಕ್ಕಿಗಳ ಸಮಯ ಪಾಲನೆ ಮತ್ತು ಹಕ್ಕಿಗಳಿಗೆ ನೀರಿಟ್ಟ ಹಾಗೆ ಆಹಾರ ಇಡಬಹುದೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!