ಅಂಕಣ

ನರಮಾನವನಾಗಿ ರಾಮನ ಜನುಮ – 3

ಅಂತೂ ಯಾವ ರಾಜನೀತಿಯ ಸೂತ್ರವೊ, ಯಾವ ರಣನೀತಿಯ ಹಿನ್ನಲೆಯೊ, ಎರಡೂ ಅಲ್ಲದ ‘ಮೊದಲು ಸಿಕ್ಕಿದವರಿಗೆ ಮೊದಲ ಆದ್ಯತೆ’ ಎನ್ನುವ ಸರಳ ಮತ್ತು ನೇರ ನೀತಿ ಅನುಕರಿಸಿದ ಪರಿಣಾಮವೊ – ಒಟ್ಟಾರೆ ಸುಗ್ರೀವ ಸಖ್ಯ ಬೆಳೆಸಿದ್ದಾಯ್ತು ಮತ್ತು ಅವನನ್ನು ಕಿಷ್ಕಿಂದೆಯ ರಾಜನನ್ನಾಗಿಸಿದ್ದೂ ಆಯ್ತು. ಆರಂಭದ ಹರ್ಷೊಲ್ಲಾಸದ ಆಚರಣೆ, ಹೇಷಾರವವೆಲ್ಲ ಮುಗಿದ ಮೇಲೆ ತಳಾರ ಕೂತು ಚರ್ಚಿಸಿ ನಿರ್ಧರಿಸುವ ಹೊತ್ತು ಬಂತು – ಏನು ಮುಂದಿನ ಹೆಜ್ಜೆ? ಎಂದು. ಏನೇ ಮಾಡಬೇಕೆಂದರೂ ಮೊದಲ ಹೆಜ್ಜೆಯಾಗಿ ಸೀತೆಯನ್ನಿಟ್ಟಿರುವ ಜಾಗವನ್ನು ಪತ್ತೆ ಮಾಡುವುದು ಮೊದಲ ಆದ್ಯತೆಯ ಕೆಲಸ. ಅದಕ್ಕೂ ಮೊದಲು ಕೈಯಳತೆಯಲ್ಲಿರುವ ಬಲಾಬಲ ವಿಶ್ಲೇಷಣೆ ಮಾಡಿ ನೋಡಿಕೊಳ್ಳುವುದು ಮತ್ತೊಂದು ಮುಖ್ಯ ಕೆಲಸ. ಹರಡಿ ಹಂಚಿ ಹೋಗಿದ್ದ ಕಪಿ ಸೈನ್ಯವನ್ಬೆಲ್ಲ ಲೆಕ್ಕ ಹಾಕಿ ಒಂದು ಮಹೌಘದಷ್ಟು ದೊಡ್ಡ ಸೈನ್ಯವಿದೆಯೆಂಬ ಲೆಕ್ಕಾಚಾರವೇನೊ ಸಿಕ್ಕಿತು. ಆದರೆ ಅದನ್ನೆಲ್ಲ ಕ್ರೋಢೀಕರಿಸಿ ಗಮ್ಯದೆಡೆ ನಡೆಸಲು ಸಾಧ್ಯವಾಗುವುದು ಸೀತೆಯಿರುವ ತಾಣವನ್ನು ಕಂಡು ಹಿಡಿದ ಮೇಲೆ ತಾನೆ? ಸರಿ , ಅದಕ್ಕೊಂದು ಕಾರ್ಯತಂಡದ ರಚನೆಯೂ ಆಯ್ತು – ಸೂಕ್ತ, ಚಾಣಾಕ್ಷ್ಯ ಮತ್ತು ಬಲಾಡ್ಯರನ್ನು ಆರಿಸುವ ಮೂಲಕ. ಹೋದದ್ದು ದಕ್ಷಿಣಕ್ಕೆ ಆದರೂ, ದಾರಿಯನ್ನೊ ತಾಣವನ್ನೊ ಬದಲಿಸಿ ಹೋಗಿದ್ದರೆ ಮತ್ತೆ ಹುಡುಕುವ ಸಮಯ ವ್ಯರ್ಥವಾಗಬಾರದಲ್ಲ? ಸರಿ – ತಂಡವನ್ನೆ ವಿಭಜಿಸಿ ಪ್ರತಿ ದಿಕ್ಕಿಗೂ ಅಟ್ಟಿದ್ದಾಯ್ತು. ಹೆಚ್ಚು ಗಣನೀಯ ಸಾಧ್ಯತೆಯಿದ್ದ ದಕ್ಷಿಣಕ್ಕೆ ಮಾತ್ರ ತುಸು ಹೆಚ್ಚು ಪ್ರಮುಖ ಭಂಟರನ್ನು ಅಟ್ಟುವ ನಿರ್ಧಾರ ಕೈಗೊಳ್ಳಲಾಯಿತು – ಹನುಮ, ಅಂಗಜ, ಜಾಂಬವಂತರೂ ಸೇರಿದಂತೆ. ಈ ತಂಡಕ್ಕೆ ಸೀತೆಯನ್ನು ಕಾಣುವ ಸಾದ್ಯತೆ ಹೆಚ್ಚಾಗಿದ್ದ ಕಾರಣಕ್ಕೆ, ಜತೆಗೆ ಅತ್ಯಂತ ನಂಬಿಕೆಯ ಪ್ರೀತಿಪಾತ್ರನಾದ ಭಂಟ ಹನುಮಂತನು ಜತೆಯಲ್ಲಿರುವ ಕಾರಣಕ್ಕೆ ಸಾಧಾರಣ ಸ್ಥಿತಿಯಲ್ಲಿ ಮಾಡದ ಕೆಲವು ವೈಯಕ್ತಿಕ ಮಟ್ಟದ ಇರಿಸುಮುರಿಸಿನ ಕೆಲಸಗಳನ್ನು ಮಾಡುವ ಅನಿವಾರ್ಯಕ್ಕೊಳಗಾಗಬೇಕಾಯ್ತು ಶ್ರೀರಾಮ. ಹೋದ ತಂಡ ಸೀತೆಯನ್ನು ಹುಡುಕಿದರೂ ಬಂದವರು ರಾಮನ ಕಡೆಯವರು, ರಾವಣನ ಮೋಸ ಜಾಲದ ಸಂಚಿನವರಲ್ಲ ಎಂದು ಸೀತೆಗೆ ನಂಬಿಕೆ ಬರಿಸಲಾದರೂ ಹೇಗೆ? ಅದರ ಸಲುವಾಗಿ ಗುರುತಿನುಂಗುರದ ಚೂಡಾಮಣಿಯನ್ನು ಬಿಚ್ಚಿ ಕೊಡಬೇಕಾಯ್ತು ರಾಮ. ಸಾಲದೆಂಬಂತೆ ಅಂತರಂಗಿಕವಾಗಿ ಕೇವಲ ರಾಮ ಸೀತೆಯರಿಬ್ಬರ ಅಂತರಂಗಕ್ಕೆ ಮಾತ್ರ ಗೊತ್ತಿದ್ದ ತೀರಾ ವೈಯಕ್ತಿಕ ಮಟ್ಟದ ಗುಟ್ಟುಗಳನ್ನು ಹನುಮನಿಗೆ ಹೇಳಬೇಕಾಗಿ ಬಂತು – ರಾಮನೊಡನೆ ಏಕಾಂತದಲ್ಲಿದ್ದಾಗ ಸೀತೆಯನ್ನು ಕಾಡಿದ್ದ ಕಾಕಾಸುರನ ಪ್ರಸಂಗವೂ ಸೇರಿದಂತೆ. ಒಂದೆಡೆ ಇದು ಹನುಮನ ಮೇಲಿಟ್ಟಿದ್ದ ಅಪಾರ ನಂಬಿಕೆಗೆ ಸಾಕ್ಷಿಯಾದರೆ, ಮತ್ತೊಂದೆಡೆ ಏನೆಲ್ಲ ಮುಜುಗರ ತರಿಸುವ ರೀತಿ ಗುಟ್ಟುಗಳನ್ನೆಲ್ಲ ಬಿಚ್ಚಿಕೊಡಬೇಕಾದ ಅವಸ್ಥೆ ಬಂತಲ್ಲಾ ಶ್ರೀರಾಮನಿಗೆ – ಎಂದನಿಸದೆ ಇರದು.

ಕೂಡಿಡುತ ಕಪಿ ಸೈನ್ಯ ಹತ್ತರ ಘಾತ ಅರವತ್ಮೂರರ ಮಹೌಘ
ಅಟ್ಟಬೇಕಾಯ್ತೆ ಕಪಿದೂತರ ಹುಡುಕೆ ಸೀತಾಮಾತೆ ವಿಯೋಗ
ಗುರುತಿಲ್ಲದವರಿಗು ಗುರುತು ಹೇಳುತ ಮುದ್ರೆಯುಂಗುರ ನೀಡಿ
ಚೂಡಾಮಣಿ ಕಾಕಾಸುರ ಕಣಿ ಬಿಚ್ಚಿಡಬೇಕಾಯ್ತೆ ಅಂತರಂಗವಿಡಿ || ೧೧ ||

ಭೌತಿಕವಾಗಿ ದೂರವಾಗಿದ್ದ ನೋವಿನ ಜತೆ ಮಾನಸಿಕ ಯಾತನೆ ಅನುಭವಿಸುವುದೇನು ಸಾಮಾನ್ಯವೆ? ಸಾಮಾನ್ಯ ಮನುಜನಾಗಿ ಸಾಮಾನ್ಯರ ರೀತಿಯಲ್ಲೆ ವಿರಹ , ಬೇರ್ಪಡುವಿಕೆಯ ನೋವನ್ನೆಲ್ಲ ಅನುಭವಿಸುತ್ತಲೆ ಮನದಾಳದ ಎಷ್ಟೊ ಗುಟ್ಟುಗಳನ್ನು ಖಾಸಗಿಯಾಗಿ ಹನುಮಂತನಲ್ಲಿ ಹಂಚಿಕೊಳ್ಳುವುದರ ಹಿಂದಿನ ಆಶಾವಾದ – ಹೇಗಾದರೂ ಈ ಕಾರ್ಯದಲ್ಲಿ ಹನುಮ ಜಯಶೀಲನಾಗಬಲ್ಲನೆಂಬ ಅಗಾಧ ನಂಬಿಕೆ. ಜತೆಗೆ ಆತನ ನಡೆ ನುಡಿಗಳಿಂದಾಗಿ ಅವನಲ್ಲಿ ನಂಬಿಕೆಯಿಟ್ಟು ಏನು ಹೇಳಿದರೂ ಅದನ್ನು ಗುಟ್ಟಾಗಿರಿಸಬಲ್ಲನೆಂಬ ಆತ್ಮವಿಶ್ವಾಸ. ಈ ಕನ್ನಡಿಗ ಹನುಮನೇನು ಕಡಿಮೆಯೆ? ಇಟ್ಟ ನಂಬಿಕೆಗೆ ಚ್ಯುತಿ ಬಾರದಂತೆ ನಡೆಯುವುದರಲ್ಲಿ ಹುಟ್ಟಾ ನಿಸ್ಸೀಮ. ಮುದ್ರೆಯುಂಗುರದ ನೆಪದ ಗುರುತಿನ ಜತೆ ಅಮೂಲ್ಯ ರಹಸ್ಯ ಪ್ರಸಂಗ, ಸಂಭಾಷಣೆಗಳನ್ನೆಲ್ಲ ಮನನ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ಹೊರಟ ತಂಡದ ಜತೆಗೆ ನಡೆಯುತ್ತಾನೆ. ಕಾಡುಮೇಡು, ಬೆಟ್ಟ ಗುಡ್ಡವೆನ್ನದೆ ಅಲೆಯುತ್ತ ಕೊನೆಗೂ ಲಂಕೆಯ ಸಮುದ್ರ ತೀರದ ಹತ್ತಿರ ತಲುಪಿದಾಗ ಎಲ್ಲಾ ಹತಾಶೆಯ ಪರಾಕಾಷ್ಟೆಯನ್ನು ಮುಟ್ಟಿರುತ್ತಾರೆ – ಸೀತೆಯ ಸುಳಿವನ್ನೆ ಕಾಣದೆ. ಜತೆಗೆ ಗಡುವಾಗಿ ಕೊಟ್ಟಿದ್ದ ತಿಂಗಳ ಕಾಲವೂ ಮುಗಿದು ಹೋದ ಕಾರಣ ಸೋತ ಮುಖ ಹೊತ್ತು ಹಿಂದೆ ಹೋಗುವ ಬಯಕೆಯೂ ಬರದೆ, ನಿರಾಶೆಯ ಮಡುವಲ್ಲಿ ಸಿಲುಕಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುವ ಸಂಧರ್ಭ. ಅದೃಷ್ಟ ಆ ಹೊತ್ತಿನಲ್ಲಿ ಅರಸಿಕೊಂಡು ಬರುತ್ತದೆ – ಮೃತ ಜಟಾಯುವಿನ ಸೋದರ ಸಂಪಾತಿಯ ರೂಪದಲ್ಲಿ. ರಾವಣ ಸೀತೆಯನ್ನು ಅಪಹರಿಸಿಕೊಂಡು ಆಕಾಶಮಾರ್ಗದಲ್ಲಿ ಹಾರಿಸಿಕೊಂಡು ಹೋಗುವಾಗ ಕೆಳಗೆ ಎಸೆದಿದ್ದ ಒಡವೆ, ಆಭರಣಗಳನ್ನು ಕಂಡು ಆಯ್ದೆತ್ತಿಟ್ಟುಕೊಂಡಿರುತ್ತಾನೆ, ಸಂಪಾತಿ. ಆ ಜತನದ ಸಂಪತ್ತನ್ನು ಅವರಿಗೊಪ್ಪಿಸಿ, ಸೀತೆಯನ್ನು ಕಾಣಬೇಕಾದರೆ ನೂರು ಯೋಜನ ದೂರದ ಸಾಗರೋಲ್ಲಂಘನ ಮಾಡಬೇಕಾದ ಸುದ್ದಿ ಕೊಡುತ್ತಾನೆ. ಅದೇನು ಸಾಮಾನ್ಯ ದೂರವೆ? ಆದರೆ ಸಿಗಲಿಲ್ಲವೆಂಬ ಚಿಂತೆಯಿಂದ ಸಿಗಲಿರುವಳೆಂಬ ಆಶಾವಾದ ಹುರಿದುಂಬಿಸಿ ಕೊನೆಗೆ ಇಡೀ ಸಮುದ್ರದಗಲವನ್ನು ಲಂಘಿಸಿ ನಡುವಿನ ಅಪಾಯಗಳನ್ನೆಲ್ಲ ನಿವಾರಿಸಿಕೊಂಡು ಕೊನೆಗೆ ಅಶೋಕವನದಲ್ಲಿ ಬಂಧಿಸಿಟ್ಟ ಸೀತಾಮಾತೆಯ ತಾಣವನ್ನು ಕಂಡು ಹಿಡಿಯಲು ಸಫಲನಾಗುತ್ತಾನೆ, ಕನ್ನಡ ಕುಲ ಪುಂಗವ ಹನುಮ.

ಸಾಲದಂತೆ ಕಾಯುವ ಮನದೂರ ಸಾಗರದಾಚೆಗಾಚಿನಾ ತೀರ
ಕಾಡು ಮೇಡು ಕಲ್ಲು ಮುಳ್ಳು ಬೆಟ್ಟಾ ಗುಡ್ಡ, ಹತ್ತಿಳಿದ ವ್ಯಾಪಾರ
ಹಾರಿದವರಷ್ಟಿಷ್ಟು ಹನುಮಂತರು ಲಂಘಿಸಿ ದೂರದ ಆಲಿಂಗನ
ಕಂಡು ಹಿಡಿಯಬೇಕಾಯ್ತೆ ಸೀತಾ ಮಾತೆಯನಿಟ್ಟ ಅಶೋಕ ವನ || ೧೨ ||

ಹನುಮನೇನೊ ಕಡೆಗೂ ಶ್ರೀರಾಮನಿಗೆ ಬೇಕಾಗಿದ್ದ ಕಾರ್ಯ ಸಾಧಿಸಿಕೊಂಡು ಬರುವಲ್ಲಿ ಸಫಲನಾದ. ಆದರೆ ಇದೆಲ್ಲಾ ಪಾಡು ಪಟ್ಟ ಶ್ರೀರಾಮನ ಕಥೆಗೇನೆನ್ನೋಣ? ಕೊಟ್ಟ ಮಾತಿಗನುಸಾರ ವನವಾಸದಲ್ಲಿ ಕಾಡಿನಲ್ಲಿ ಬದುಕುವ ದುರ್ಗತಿಯ ಹೊರೆಯಷ್ಟೆ ಸಾಲದು ಎಂಬಂತೆ ಧೀರ್ಘ ಅಗಲಿಕೆಯ ತೆರವನ್ನು ಕಟ್ಟಿಸಿಬಿಟ್ಟಿತು ಮಾಯಾ ವಿಧಿ. ಶಾಪದ ಸಲುವಾಗಿಯೊ, ಲೋಕ ಕಲ್ಯಾಣದ ಕಾರಣವಾಗಿಯೊ , ಪೂರ್ವನಿಯೋಜಿತ ಜಗನ್ನಾಟಕದ ಹಿನ್ನಲೆಗಾಗಿಯೊ – ಏನೆಲ್ಲಾ ಕಾರಣವನ್ನು ಕೊಟ್ಟು ಸಂಭಾಳಿಸಬಯಸಿದರೂ ಇದೆಲ್ಲಾ ಆ ಜಗದ್ರಕ್ಷಕನೆನಿಸಿಕೊಂಡವನಿಗೆ ನಿಜವಾಗಿಯೂ ಬೇಕಿತ್ತೆ? ಎಂಬ ಸಂದೇಹ ಪದೆ ಪದೆ ಬಿಡದೆ ಕಾಡುವುದಂತೂ ನಿಜ.

ವರ್ಷಾಂತರ ಕಾನನ ವಾಸ ಘೋರ, ವಚನ ವನವಾಸದ ಭಾರ
ಹೊತ್ತದ್ದು ಸಾಲದಿತ್ತೆ ದುಸ್ಥಿತಿ ಹೊರೆ, ಬೇಕಿತ್ತೇಕೊ ಅಗಲಿಕೆ ತೆರ
ಶಾಪ ಮರ್ಮ ಅವತಾರ ಕರ್ಮ ಲೋಕಕಲ್ಯಾಣ ಕಾರ್ಯಕಾರಣ
ಜಗನ್ನಾಟಕದ ಹೆಸರಲಿ ಹಗರಣ, ಏನೆಲ್ಲ ನೆಪ ನೀತಿ ಸಂಘಟನ || ೧೩ ||

ಮೊದಲಿಗೆ ಮಾತು ಕೊಟ್ಟಿದ್ದು ತಂದೆ ದಶರಥ ತಾನೆ, ನಾನಲ್ಲವಲ್ಲ ಎಂದು ಮೊಂಡುವಾದ ಹಿಡಿದು ರಾಜ್ಯಾಧಿಕಾರಕ್ಕೆ ಅಂಟಿಕೊಂಡು ಕೂತು ನಿರಾಳವಾಗಿರಬಹುದಿತ್ತು ಬಂಧು ಭಾಂಧವರ ಜತೆಗೆ. ಆ ಮನಸತ್ವವನ್ನೆಲ್ಲ ನಿಗ್ರಹಿಸಿ ತನ್ನದೆನ್ನಬಹುದಾಗಿದ್ದ ರಾಜ್ಯ, ಸೈನ್ಯ, ಬಂಧು ಬಳಗವನ್ನೆಲ್ಲ ದೂರವಾಗಿಸಿಕೊಂಡು ಕಾಡಿಗೆ ಬಂದರೆ, ಅಲ್ಲಿ ಕಾದಿರಬೇಕೆ ಈ ವಿಯೋಗದ ಶಿಕ್ಷೆ? ಮನುಜರಿಲ್ಲದ ಕಾನನದಲ್ಲಿ ಜತೆ ಸಿಕ್ಕ ಕಪಿಗಳನ್ನೆ ಸೇರಿಸಿ ಸೈನ್ಯ ಕಟ್ಟಿಕೊಂಡು ಕಾಣದೂರಿನ ಕಡೆ ಯುದ್ಧಕ್ಕೆ ಹೊರಡುವ ಗ್ರಹಚಾರವನ್ನು ಅನುಭವಿಸಬೇಕಾದ ಶ್ರೀ ರಾಮಚಂದ್ರ, ತನ್ನ ಸಂಕಟ ಗೋಳನ್ನು ಹೇಳಿಕೊಳ್ಳುವುದಾದರೂ ಯಾರಲ್ಲಿ? ಏನೇ ಮಾಡಲ್ಹೊರಟರೂ ಎಲ್ಲವನ್ನು ಚೊಕ್ಕವಾಗಿ ಬುನಾದಿಯ ಮಟ್ಟದಿಂದ, ಯಾವುದೆ ಹಣ ಅಧಿಕಾರ ಸಂಪನ್ಮೂಲಗಳ ಬಲವಿಲ್ಲದೆ ಮಾಡುವ ಅನಿವಾರ್ಯಕ್ಕೆ ಏನೆಂದು ಹೆಸರಿಡೋಣ?

ರಾಜ್ಯ ಸೈನ್ಯದೊಡೆತನ ಕಳಚಿಟ್ಟೆ, ದೂರಿಟ್ಟು ಬಂಧು ಜನರ ನಿಷ್ಠೆ
ಕಾಡಿಗೆ ಬಂದರು ತಪ್ಪದ ಶಿಕ್ಷೆ, ವಿಯೋಗದೀ ಕೊನೆಗು ಎಡವಟ್ಟೆ
ಮನುಜರಿಲ್ಲದ ಕಾನನ, ಕಪಿ ಕೋತಿ ಕರಡಿ ವಾನರಗಳ ಪಾಲಿನ
ಸೇನೆ ಕಟ್ಟುವ ಗ್ರಹಚಾರ, ಯಾರಿಗ್ಹೇಳುವುದೊ ಸಂಕಟ ಗೋಳನ್ನ || ೧೪ ||

ಹೀಗೆ ರಾಮಾವತಾರದ ಹೆಸರಿನಲ್ಲಿ ಮಾನವಾವತಾರ ತಳೆದ ಜಗ ಸೂತ್ರಧಾರಿ ಏನೆಲ್ಲಾ ತರಹ ಏಗಬೇಕಾಯ್ತೊ ಬಣ್ಣಿಸಲಸದಳ. ಅತ್ತ ಅರಮನೆಯ ಸುಖ ಭೋಗವನ್ನು ತ್ಯಜಿಸಿ ಇತ್ತ ಕಾನನ ವಾಸದಲ್ಲೂ ಸರಾಗವಿಲ್ಲದ ಸಂಕಟದ ಜೀವನ ನಡೆಸಿ ಯಾತನೆ ಪಟ್ಟಿದ್ದೆ ಲಾಭ. ಬಾಲ್ಯದಿಂದಲೆ ಆರಂಭವಾದ ಈ ಪ್ರಕ್ರಿಯೆ ವನವಾಸದ ಅವಧಿ ಮುಗಿದು ಹಿಂದೆ ಬಂದ ಮೇಲೂ ಬಿಡದೆ ಕಾಡುತ್ತಲೆ ಹೋಯ್ತು, ಮತ್ತೆ ವಿರಹ ದಳ್ಳುರಿಗೆ ದೂಡುತ್ತ. ಇಡೀ ಜೀವಮಾನದಲ್ಲಿ ಪ್ರಾಯಶಃ ಮದುವೆಯಾದ ಸಂಧರ್ಭವೊಂದಷ್ಟೆ ವೈಭೋಗದ ಸುರಿಮಳೆ ಸುರಿಸಿರಬಹುದಷ್ಟೆ ಹೊರತು ಮಿಕ್ಕೆಲ್ಲಾ ಕಡೆ ಒಂದಲ್ಲ ಒಂದು ನೋವು, ಯಾತನೆ ಕಾಡುತ್ತಲೆ ಸಾಗಿತ್ತು. ಹೆಸರಿಗಷ್ಟೆ ಎಲ್ಲಾ ತರದ ಸುಖ ಹಸ್ತಗತವಾದಂತೆ ಕಂಡರೂ ಅದನ್ನು ಮನಸಾರೆ ಅನುಭವಿಸುವ ಭಾಗ್ಯಕ್ಕೆ ಯಾವಾಗಲೂ ಏನಾದರೊಂದು ಅಡ್ಡಿ ಆತಂಕ ಬರುತ್ತಲೆ ಇತ್ತು. ಆ ರೀತಿ ಬರಬೇಕೆಂಬುದೆ ದೇವನ ಇಂಗಿತವಾಗಿತ್ತೊ ಏನೊ – ಆ ತರದ ಕಠಿಣ ವ್ಯವಸ್ಥೆ, ಪರಿಸರದಲ್ಲಿ ನಿಭಾಯಿಸಿ ಜಗಕ್ಕೆಲ್ಲ ಆ ರೀತಿಯ ದುರ್ಗಮ ಹಾದಿ ಕ್ರಮಿಸುವ ರೀತಿ ತೋರಿಸಿಕೊಡುವ ಇಚ್ಛೆಯೊ? ಒಟ್ಟಾರೆ ಸಂಕಟಗಳ ನಡುವಿನ ಜೀವನವನ್ನು ಅದರ ಕುರಿತು ಕುಹುಕವನ್ನಾಡದೆ ಮೌನ ಸಂಗ್ರಾಮವೆನ್ನುವಂತೆ ಹೋರಾಡಿ ತೋರಿಸುವುದೆ ಅವನಿಚ್ಛೆಯಾಗಿತ್ತೊ ಏನೊ?

ಜಗ ಸೂತ್ರಧಾರನ ಮುಕುಟ ಧರಿಸಿದ್ದರು ಮಾನವನಾಗಿ ಅಕಟ
ಏಗಬೇಕಾಯ್ತೆ ಭೂಲೋಕದಲಿ ದಿಟ ಹುಲು ಮನುಜತೆಯ ಕಾಟ
ಅರಮನೆಯಲಿಲ್ಲದ ಸುಖ ಭೋಗ, ಕಾನನದಲು ಇರದ ಸರಾಗ
ಬಾಲ್ಯದಿಂದಲೆ ತೀರದಾ ಬವಣೆ, ಹೆಸರಿಗಷ್ಟೆ ಕಲ್ಯಾಣದ ಸೊಬಗ || ೧೫ ||

(ಇನ್ನೂ ಇದೆ)

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!