ಅಂಕಣ

ನಂಬಿಕೆಗಳು ಮೂಢವಾದಾಗ

ನನ್ನ ಈ ಬರವಣಿಗೆ ಜ್ಯೋತಿಷ್ಯ, ಅದರ ಮೇಲಿನ ನಂಬಿಕೆ ಮತ್ತು ಆ ನಂಬಿಕೆಯ ಅತಿರೇಕಗಳ ಕುರಿತ ನನ್ನ ವಿಚಾರಸರಣಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿನ ವಿಚಾರಗಳು ಯಾರದೇ ವ್ಯಕ್ತಿಗತ ನಂಬಿಕೆಗಳಿಗೆ ಅಥವಾ ನಂಬುವ ಮನಸ್ಸುಗಳಿಗೆ ನೋವುಂಟುಮಾಡುವಂತಿದ್ದರೆ ಮುಂಚಿತವಾಗಿಯೇ “ಕ್ಷಮೆಯಿರಲಿ” ಎನ್ನುತ್ತೇನೆ.

ನನ್ನನ್ನ ಈ ಜ್ಯೋತಿಷ್ಯ, ನಂಬಿಕೆ-ಮೂಢನಂಬಿಕೆಗಳ ಕುರಿತು ಆಲೋಚಿಸುವಂತೆ ಮಾಡಿದ್ದು, ದೂರದರ್ಶನದಲ್ಲಿ ಮುಂಜಾನೆಯ ಬೆಳಕು ಹರಿಯುತ್ತಿದ್ದಂತೆ ಮನೆ-ಮನೆಗಳಲ್ಲಿ ತಮ್ಮ ಮುಖದರ್ಶನಮಾಡಿಸುವ ಒಬ್ಬ the so called ‘ಜ್ಯೋತಿಷಿ’ ನಡೆಸಿಕೊಡುವ ಒಂದು ಕಾರ್ಯಕ್ರಮ. ನಾನು ಸಾಮಾನ್ಯವಾಗಿ ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನೋಡುವುದಿಲ್ಲ. ಆದರೆ ಅಂದು ಹೀಗೆ ಟಿ.ವಿ. ಎದುರು ಕುಳಿತು ಒಂದೊಂದೇ ಚಾನಲ್ಗಳನ್ನು ಸಂದರ್ಶಿಸುತ್ತ ನನ್ನ ಇಷ್ಟದ ಕಾರ್ಯಕ್ರಮದ ಹುಡುಕಾಟದಲ್ಲಿದ್ದೆ. ಆಗ ಈ ಜ್ಯೋತಿಷ್ಯಶಾಸ್ತ್ರ ಕಾರ್ಯಕ್ರಮದ ದರ್ಶನವಾಯಿತು. ಅದೇ ಸಮಯಕ್ಕೆ ನನ್ನ ಮೊಬೈಲ್’ಗೆ ಒಬ್ಬ ಗೆಳೆಯನ ಸಂದೇಶ ಕೂಡ ಬಂದಿತು. ಹಾಗಾಗಿ ನಾನು ನನ್ನ ಚಾನಲ್ ಸಂದರ್ಶನ ಬಿಟ್ಟು ಆ ಸಂದೇಶಕ್ಕೆ ಉತ್ತರ ಕಳಿಸುವ ಕೆಲಸದಲ್ಲಿ ನಿರತನಾದೆ. ಇದರಿಂದ ಜ್ಯೋತಿಷ್ಯಶಾಸ್ತ್ರ ಕಾರ್ಯಕ್ರಮದ ಸಂಭಾಷಣೆಯ ತುಣುಕುಗಳು ನನ್ನ ಕಿವಿಯನ್ನು ತಲುಪಿದ್ದವು.

ಆ ಕಾರ್ಯಕ್ರಮಕ್ಕೆ ಬಂದ ಒಂದು ದೂರವಾಣಿ ಕರೆಯ ಸಂಭಾಷಣೆ ಹೀಗಿತ್ತು;

ಕರೆಮಾಡಿದ ವ್ಯಕ್ತಿ : “ಗುರುಗಳೇ ನನ್ನ ಮಗ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ. ಅವನಿಗೆ ವಿಜ್ಞಾನ ವಿಷಯದಲ್ಲಿ ತುಂಬಾ ಆಸಕ್ತಿ. ಅವನು ಅದೇ ದಿಶೆಯಲ್ಲಿ ಮುಂದುವರಿದರೆ ಒಳ್ಳೇದಾಗುತ್ತದೆಯೇ? ದಯವಿಟ್ಟು ತಿಳಿಸಿ.” ತದನಂತರ ಅವನ ನಕ್ಷತ್ರ, ರಾಶಿ, ಗೋತ್ರ ಮತ್ತೊಂದು ಮಗದೊಂದು ಎಲ್ಲವನ್ನು ತಿಳಿಸಲಾಯಿತು.

ಈ ಪ್ರಶ್ನೆಗೆ ದೊರೆತ ಉತ್ತರ ನನ್ನನ್ನು ಒಂದು ಕ್ಷಣಕ್ಕೆ ದಂಗುಬಡಿಸಿತು. ಉತ್ತರ ಹೀಗಿತ್ತು :

“ನೋಡಿ, ನಿಮ್ಮ ಮಗ ವಿಜ್ಞಾನ ವಿಭಾಗದಲ್ಲಿ ವಿಧ್ಯಾಭ್ಯಾಸ ಮುಂದುವರಿಸಿದರೆ ಅವನಿಗೆ ಖಂಡಿತಾ ಏಳಿಗೆ ಆಗುವುದಿಲ್ಲ. ಆತನ್ನು ‘ಕಲಾ ವಿಭಾಗ’ಕ್ಕೆ ಸೇರಿಸಿ. ಒಳ್ಳೆಯದಾಗುತ್ತದೆ.”

ಮೊದಲಾಗಿ ಪೋಷಕರಲ್ಲಿ ಇಂತಹ ಒಂದು ಪ್ರಶ್ನೆಯ ಉದ್ಭವವೇ ನನಗೆ ಒಂದು ಅಚ್ಚರಿಯಾಗಿ ಕಾಣುತ್ತದೆ. ಅದರಲ್ಲೂ ಯಾವುದೇ ವಿದ್ಯಾರ್ಥಿ ತನ್ನ ಆಸಕ್ತಿಯ ವಿಚಾರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ತನ್ನದೇ ಅದ ಉತ್ತಮ ಭವಿಷ್ಯದ ಕನಸುಗಳನ್ನು ಕಾಣುತ್ತಿರುವಾಗ ಇಂತಹ ಒಂದು ಉತ್ತರ ಅವರ ಎಲ್ಲ ಅಸೆ-ಕನಸುಗಳಿಗೆ ಕೊಟ್ಟ ಕೊಡಲಿ ಪೆಟ್ಟಿನಂತಾಗುವುದಿಲ್ಲವೇ? ‘ಕಲಾವಿಭಾಗ’ದಲ್ಲಿ ಕೂಡ ಆತ ಔನ್ನತ್ಯವನ್ನೇ ಕಾಣಬಹುದು ಆದರೆ ಅದು ಅವನು/ಅವಳು ಬಯಸಿದ ಔನ್ನತ್ಯ ಆಗುವುದಿಲ್ಲ. ಆ ಯಶಸ್ಸು ಬೇರೆ ಯಾರಿಗೇ ತೃಪ್ತಿ ಕೊಟ್ಟರೂ ಆ ವ್ಯಕ್ತಿಗೆ ಕೊಡಲಾರದು ಎಂಬುದು ನನ್ನ ಭಾವನೆ.

ಪ್ರಯತ್ನಿಸಿದರೆ ನಮಗೆ ಏನೂ ತಿಳಿಯದ ಕ್ಷೇತ್ರದಲ್ಲೂ ಪ್ರವೀಣರಾಗಬಹುದ, ಅಂದ ಮೇಲೆ ವ್ಯಕ್ತಿಯ ಇಷ್ಟವಾದ ಕ್ಷೇತ್ರದಲ್ಲಿ ಆತನಿಗೆ ಕೆಡುಕು ಉಂಟಾಗಬಹುದೇ? ಕೆಲವು ಕಹಿದಿನಗಳು ಅವನ ಪಾಲಿಗಿರಬಹುದು. ಅದು ಎಲ್ಲರ ಬದುಕಿನಲ್ಲಿಯೂ ಇರುವಂಥದ್ದು ಎಂಬುದು ನನ್ನ ವಿಚಾರ. ‘ಜ್ಯೋತಿಷ್ಯಶಾಸ್ತ್ರ’ ಸುಳ್ಳು ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಅದರ ಮೇಲಿನ ನಂಬಿಕೆ ಅತಿರೇಕಕ್ಕೆ ಹೋಗಬಾರದು ಅಷ್ಟೇ. ಎಲ್ಲಿ ಅವಶ್ಯಕತೆಗಳಿವೆಯೋ ಅಲ್ಲಿ ಅದರ ಸದುಪಯೋಗ ಪಡೆದುಕೊಳ್ಳುವುದು ಜಾಣತನ. ನಮ್ಮ ಪ್ರಯತ್ನಗಳಿಗೆ ಅವಕಾಶಗಳಿರುವಾಗ ಆಪ್ರಯತ್ನಗಳಿಗೆ ಹಿಮ್ಮುಖವಾಗಿ ಇನ್ಯಾವುದೋ ಕಾಣದ ಭವಿಷ್ಯವೆಂಬ ಕಲ್ಪನೆಯ ಹುಚ್ಚು-ಕುದುರೆಯನ್ನೇರಿ ಗುರಿ ತಲುಪುವ ಅವಸರ ಸರಿಯಲ್ಲ. ಈ ಅವಸರದ ದಾರಿಯಲ್ಲಿ ಸಹ ನಾವು ಗುರಿಮುಟ್ಟಬಹುದು. ಆದರೆ ಮುಂದೊಂದು ದಿನ ಹಿಂತಿರುಗಿ ನೋಡಿದಾಗ ಗುರಿಯೆಡೆಗೆ ಸಾಗಿದದಾರಿ ನಮಗೆ ತೃಪ್ತಿಕೊಡಲಾರದು. ಆ ಹಾದಿಯಲ್ಲಿನ ಭಿನ್ನ ಸಿಹಿ-ಕಹಿ ಅನುಭವಗಳನ್ನು ಮನಸಾರೆ ಆಸ್ವಾದಿಸುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದುಕನ್ನು ಸಂಭ್ರಮಿಸುವ ಪರಿಯನ್ನು ಅರಿಯದೇ ಹೋಗುತ್ತೇವೆ. ನಮಗೆ ಪುನಃ ಸಿಗಲಾರದ ಬದುಕಿದು. ಇಲ್ಲಿನ ಯಾವೊಂದು ಕ್ಷಣವೂ ತಿರುಗಿಬರಲಾರದು. ಅಂತಹ ಅಮೂಲ್ಯವಾದ ‘ನಮ್ಮಬದುಕ’ನ್ನು ನಮ್ಮ ಇಷ್ಟದಂತೆ ಬದುಕಬೇಕಲ್ಲವೇ?

ಇವಿಷ್ಟು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ಯಾರ ಮೇಲೂ ಹೇರುವ ಉದ್ದೇಶವೂ ನನ್ನದಲ್ಲ; ಆ ಅಧಿಕಾರವೂ ನನಗಿಲ್ಲ. ನನ್ನ ಪ್ರಕಾರ ‘ಭವಿಷ್ಯ’ ಎನ್ನುವುದು ತಿಳಿಯುವಂಥದ್ದಲ್ಲ; ನಾವೇ ರೂಪಿಸಿಕೊಳ್ಳುವಂಥದ್ದು ಹಾಗಾಗಿ ಅದರ ಕುರಿತಾಗಿನ ಕನಸುಗಳನ್ನು ನಾವೇ ನಮಗೆ ಬೇಕಾದಂತೆ, ನಮ್ಮ ಮನಬಯಸುವಂತೆ ಕಾಣಬೆಕಲ್ಲವೇ? ನಮ್ಮ ಬದುಕಿನ ಕನಸನ್ನು ಯಾರೋ ಒಬ್ಬ ಜ್ಯೋತಿಷಿಯ ಕಣ್ಣುಗಳಲ್ಲಿ ಕಾಣುವುದೆಂದರೆ ನನಗೆ ವಿಚಿತ್ರ ಅನಿಸುತ್ತದೆ.

ಗೆಳೆಯರೇ, ಈ ‘ಜೀವನ’ ಎಂಬ ಧಾರಾವಾಹಿಯಲ್ಲಿ ‘ನಾಳೆ’ ಎಂಬ ಕುತೂಹಲಭರಿತ ‘ಸಂಚಿಕೆ’ಗಾಗಿ ಕಾಯುವುದರಲ್ಲಿಯ ರೋಮಾಂಚಕ ಅನುಭವ ಅದನ್ನು ಮೊದಲೇ ತಿಳಿದು ಬದುಕುವುದರಲ್ಲಿಲ್ಲ ಎಂಬುದು ನನ್ನ ವಿಚಾರಸರಣಿ. ಈ ವಿಚಾರಸರಣಿ ಒಪ್ಪುವ ಮನಸುಗಳಿದ್ದರೆ, ಆ ಮನಸುಗಳಿಗೆ ಒಂದು ‘ಧನ್ಯವಾದ’. ಇಷ್ಟವಾಗದ ಮನಸುಗಳಿಗೆ ಅವರ ವಿಚಾರಸರಣಿಯಲ್ಲಿಯೇ ಅವರಿಗೆ ಒಳಿತಾಗಲಿ ಎಂಬ ‘ಹಾರೈಕೆ’.

ಕೊನೆಯದಾಗಿ ‘ಸರ್ವೇಜನಾಃ ಸುಜನೋ ಭವಂತು, ಸರ್ವೇ ಸುಜನಾ ಸುಖಿನೋಭವಂತು” ಎಂಬ ಆಶಯದೊಂದಿಗೆ ಈ ವಿಚಾರ ಸರಣಿಗೆ ಪೂರ್ಣವಿರಾಮ ಇಡುತ್ತಿದ್ದೇನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!