ಗುರು ಅನಂತ ಶಕ್ತಿಯ ನಿರಂತರ ರೂಪ. “ನಾನು” ಎನ್ನುವ ಅಹಂಕಾರದ ಕೂಪದಲಿ ಬಿದ್ದು ಹೊರಳಾಡುವಾಗ ಮಾನಸಿಕವಾಗಿ ಕೈ ಹಿಡಿದು ಎತ್ತುವನು ಗುರು. ಆ ತೇಜಸ್ಸು ತುಂಬಿದ ಮುಖಾರವಿಂದವನ್ನು ಹೊಂದಿ ಅನೇಕ ಶಿಷ್ಯಂದಿರ ಮನದೊಳಗಿನ ಆರದ ನಿರಂತರ ರೂಪ ಗುರು. ಸುಪ್ತದೊಡನೆ ಮಾತುಕತೆಗೆ ಬಿಡದೇ ನಮ್ಮನ್ನು ಅನುವುಗೊಳಿಸಿ, ಭಕ್ತಿ, ಶಾಂತಿ,ಧರ್ಮವೆಂಬ ಮಾರ್ಗದ ಮೂಲಕ ಮನದ ಕಲ್ಮಶವನ್ನು ತೊಳೆದು ಹಾಕಿ ಸಂತೃಪ್ತ ಮನಸ್ಥಿತಿಯ ನಿರ್ಮಾತೃ ಆ ಗುರು. ಸದಾ ಭವದ ಬಂಧಗಳ ಕೂಪದಲಿ ಬಿದ್ದು ಹೊರಳಾಡುವ ಮನಕ್ಕೆ ಸಾಂತ್ವಾನವ ಹೇಳಿ ಗುರಿಯ ಸ್ಪಷ್ಟಪಡಿಸಿ ಕೈ ಹಿಡಿದು ನಡೆಸುವವನು ಗುರು. ಮರ್ಕಟದಂತ ಮನಸ್ಸಿಗೆ ಅವಶ್ಯವಿರುವ ಬೇಲಿ ಹಾಕಿ ಸಾಧನೆಯ ದಾರಿ ತೋರಿಸುವವನು ಗುರು. ಹಾಗಾದರೆ ಗುರು ಕೇವಲ ಒಂದು ವ್ಯಕ್ತಿಯಲ್ಲ, ಭವದ ಸಂಪೂರ್ಣ ಸಾರವ ಅರಿತು ಕಠಿಣ ಸಾಧನೆಯ ತಪಸ್ಸಿನಿಂದ ತನ್ನೊಳಗಿನ ಅಹಂಕಾರವನ್ನು ಸಂಪೂರ್ಣ ದಮನಿಸಿಕೊಂಡು ಆತ್ಮವೆಂಬ ಪ್ರಜ್ವಲಿಸೋ ಶಕ್ತಿಯ ಮಹತ್ವ ಅರಿತು ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಂಡವನು ಗುರು. ಹಾಗಾಗಿಯೇ ಶಂಕರರು ನಮಗೆ ಕೇವಲ ವ್ಯಕ್ತಿಯಾಗಿ ಗೋಚರಿಸುವುದಿಲ್ಲ ಬದಲಾಗಿ ಅವರೊಂದು ಶಕ್ತಿಯಾಗಿ ನಮ್ಮನ್ನು ಆವರಿಸುತ್ತಾರೆ. ಬಸವಣ್ಣನವರನ್ನು ಸಂಪೂರ್ಣ ಅಧ್ಯಯನ ಮಾಡಿದವರ್ಯಾರೂ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವುದಿಲ್ಲ. ಹಾಗಾಗಿಯೇ ನಮ್ಮ ಗುರು ಪರಂಪರೆ ನಮ್ಮ ಬಹುದೊಡ್ಡ ಶಕ್ತಿಯೇ ಸೈ.
ಮಠಗಳು ಧರ್ಮ ಸಂಸ್ಥಾಪನೆಯ ಕೇಂದ್ರ ಬಿಂದುಗಳು. ಧರ್ಮವೆಂಬುದನ್ನು ಕೇವಲ ಒಂದು ಜಾತಿಗೆ ಅಥವಾ ಒಂದು ಕೋಮಿಗೆ ಸೀಮಿತಗೊಳಿಸದೆ “ಲೋಕಾಃ ಸಮಸ್ಥಾಃ ಸುಖಿನೋ ಭವಂತು” ಎಂದು ಜಗತ್ತಿನ ಉದ್ದಾರವ ಬಯಸುವ ಮುಖ್ಯ ಕೇಂದ್ರ ಈ ಮಠಗಳು. ಈಗಿನ ಸುಮಾರು ಮಠ ಮಾನ್ಯಗಳು ಅದೆಷ್ಟು ಆ ನಿಟ್ಟಿನಲ್ಲಿ ಸಾಗುತ್ತಿವೆ ಎಂಬುದನ್ನೂ ಅವಲೋಕಿಸಬೇಕು. ಆದರೆ ಇಲ್ಲೊಂದು ಮಠ, ಇಲ್ಲೊಬ್ಬರು ಸ್ವಾಮೀಜಿ ತಮ್ಮನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಶಂಕರರ ತತ್ವವ ಲೋಕಕ್ಕೆ ಸಾರುತ್ತಾ ಬದುಕುತ್ತಿದ್ದಾರೆ. ಗತ್ತು ಶ್ರೀಮಂತಿಕೆಯ ಪ್ರದರ್ಶನವಿಲ್ಲ,ಪ್ರವಚನಕ್ಕೆ ಕೂತರೆ ಅವರಂತ ಗಾಂಭೀರ್ಯ ಮತ್ತೊಬ್ಬರಲಿಲ್ಲ, ತಾನು ಸರ್ವಶ್ರೇಷ್ಠ ಎಂಬ ಅಹಂಕಾರವಿಲ್ಲ, ಮಠದಲ್ಲಿ ಹಣದ ಕ್ರೋಢೀಕರಣಕ್ಕೆ ಅಡ್ಡದಾರಿ ಹಿಡಿಯಲಿಲ್ಲ,ಶಂಕರರ ತತ್ವವೆಂಬ ಆ ಗೆರೆಯನ್ನು ದಾಟದೆ ಸರ್ವ ಪಂಥ,ಜಾತಿಯ ಉದ್ಧಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡರೆ ಹೊರತು ಒಂದು ಜಾತಿಗೆ ಮಠವ ಸೀಮಿತಗೊಳಿಸಲಿಲ್ಲ,ಇಡೀ ವಿಶ್ವಕ್ಕೆ ಭಗವದ್ಗೀತೆಯ ಚಿಂತನೆ,ಅದರ ಮೂಲ ವಿಚಾರಧಾರೆಯನ್ನು ಸಾರಿದ ಆ ಸ್ವಾಮೀಜಿಯವರನ್ನು ಗುರು ಎನ್ನಲು ಗಂಭೀರವಾದ ಹೆಮ್ಮೆ ಆಗುತ್ತದೆ. ನಾನು ಇಷ್ಟು ಹೊತ್ತು ಬರೆದಿದ್ದು ಪಾಂಡಿತ್ಯದ ಮೇರು ಶಿಖರ ಮತ್ತು ಸಮಾಜಮುಖಿ ಚಿಂತನೆಗಳ ಮೂಲಕ ಅದೆಷ್ಟೋ ಭಕ್ತ ಸಮುದಾಯದ ಮಾರ್ಗದರ್ಶಕರಾಗಿ ಮನದೊಳಗೆ ನೆಲೆ ನಿಂತಿರುವ ಪರಮಪೂಜ್ಯ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಬಗ್ಗೆ. ಕೆಲವೊಂದು ಮಹಾನ್ ವ್ಯಕ್ತಿಗಳ(ಶಕ್ತಿಗಳ) ಬಗ್ಗೆ ಬರೆಯುವಾಗ ಬರೆಯುವವನಿಗೆ ಸ್ವಲ್ಪವಾದರೂ ಅರ್ಹತೆಯಿರಬೇಕು,ಆ ಅರ್ಹತೆ ನನಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೇ ನನ್ನಾವರಿಸಿರುವ ಗುರುವಿನ ಬಗ್ಗೆ ಬರೆಯುವ ಚಿಕ್ಕ ಪ್ರಯತ್ನವಿದು ಅಷ್ಟೇ.
ಕಾಶೀ ಕ್ಷೇತ್ರದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಹಿಂದೂ ಧಾರ್ಮಿಕ ಪೀಠವು ಕಾರಣಾಂತರಗಳಿಂದ ಸ್ಥಳಾಂತರಗೊಳ್ಳುತ್ತ ಕ್ರಿ.ಶ 1556 ರಲ್ಲಿ ಸ್ವಾದಿಯ ರಾಜ ಅರಸಪ್ಪನಾಯಕನ ಆಡಳಿತದಲ್ಲಿ ಶಾಲ್ಮಲೆಯ ತೀರದಲ್ಲಿ ಕಟ್ಟಲ್ಪಟ್ಟು ಶಕ್ತಿ ಪೀಠವಾಗಿ ಸ್ವರ್ಣವಲ್ಲೀ ಮಠವಾಗಿ ನಿಂತಿದ್ದು ಇತಿಹಾಸ. ಶ್ರೀ ಮಠದ 53 ನೇ ಯತಿಗಳಾದ ಪೂಜ್ಯ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳು 1990ರ ಸೆಪ್ಟೆಂಬರ್ 21ರಂದು ಬ್ರಹ್ಮೀಭೂತರಾದ ನಂತರ ಮಠದ ಭಕ್ತರೆಲ್ಲ ದಿಕ್ಕು ಕಾಣದ ಸ್ಥಿತಿಯಲ್ಲಿದ್ದರು ಆಗ ಆ ಭಕ್ತರಿಗೆಲ್ಲ ಶಕ್ತಿಯಾಗಿ ಬಂದವರು ತೋಟದ ಸೀಮೆಯ ನೀಡಗೋಡಿನ ಪ್ರತಿಷ್ಠಿತ ವೈದಿಕ ಮನೆತನದ ಗೌತಮ ಗೋತ್ರದ ಶ್ರೀಮತಿ ಶರಾವತಿ ಮತ್ತು ಶ್ರೀ ಶಿವರಾಮ ನರಸಿಂಹ ಭಟ್ಟರ ಮಧ್ಯಮ ಪುತ್ರರಾದ ವಿದ್ವಾನ್ ಪರಮೇಶ್ವರ ಭಟ್ಟರು. ಅಂದರೆ ವಿದ್ವಾನ್ ಪರಮೇಶ್ವರ ಭಟ್ಟರನ್ನು ಗುರುಪೀಠಕ್ಕೆ ಹೊಸ ಸ್ವಾಮೀಜಿಗಳು ಎಂದು ನಿರ್ಣಯಿಸಲಾಯಿತು. ಅವರೇ ಸ್ವರ್ಣವಲ್ಲೀ ಮಠದ 54ನೇ ಯತಿಗಳಾದ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು. 1991ರ ಮಾಘ ಬಹುಳ ಬಿದಿಗೆಯಂದು ( ಫೆಬ್ರುವರಿ 2.1991) ರಂದು ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಂಚಿ ಪೀಠದ ಜಗದ್ಗುರು ಶ್ರೀ ಶ್ರೀ ಜಯೇಂದ್ರ ಸರಸ್ವತೀ ಮಹಾಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಪ್ರಣೀತ ಪರಂಪರೆಯ ಪೀಠಾರೋಹಣಗೈದರು.ಅಂದರೆ 2016ರ ಈ ಸಂದರ್ಭ ನಮ್ಮ ಸ್ವಾಮೀಜಿಗಳು ಪೀಠಾರೋಹಣ ಮಾಡಿ 25 ವರ್ಷ ತುಂಬಿದಂತಾಯಿತು. ಪೀಠಾರೋಹಣದ ರಜತ ಮಹೋತ್ಸವವನ್ನು ಶ್ರೀ ಮಠ ಸಮಾಜಮುಖಿಯಾಗಿ ನಡೆಸುವ ಯೋಜನೆ ಹಾಕಿಕೊಂಡಿದೆ. 24ರ ಆ ಯೌವನಾವಸ್ಥೆಯಲ್ಲಿ ಒಂದು ಅವಿಚ್ಛಿನ್ನ ಪರಂಪರೆ ಹೊಂದಿರುವ ಮಠದ ಯತಿಯಾಗಿ ಮತ್ತು ದೊಡ್ಡ ಪ್ರಮಾಣದ ಭಕ್ತ ಸಮುದಾಯದ ಮಾರ್ಗದರ್ಶಕರಾಗಿ ಅವರು ಮಾಡಿದ ಕಾರ್ಯಗಳು ನಿಜವಾಗಲೂ ಅದ್ಭುತವಾದದ್ದು.
1979ರಲ್ಲಿ ಪ್ರಮುಖವಾಗಿ ಉತ್ತರ ಕನ್ನಡದ ಜನರನ್ನು ಕಾಡಿದ್ದು ಬೇಡ್ತಿ ಜಾಲ ವಿದ್ಯುತ್ ಯೋಜನೆ. ಈ ಜಲವಿದ್ಯುತ್ ಯೋಜನೆ ಇಂದ ಅದೆಷ್ಟೋ ಜನ ತಮ್ಮ ಅಮೂಲ್ಯ ಜಾಗವನ್ನು ಕಳೆದುಕೊಳ್ಳುತ್ತಿದರು ಮತ್ತು ಪ್ರಮುಖವಾಗಿ ಪ್ರಕೃತಿಯ ಮಡಿಲು ಉತ್ತರಕನ್ನಡದ ಅಗಾಧ ಹಸಿರಿಗೆ ಧಕ್ಕೆ ಬರುತ್ತಿತ್ತು. ಆದರೆ 1979 ರಲ್ಲಿ ಶ್ರೀಮತಿ ಅನುಸೂಯ ಶರ್ಮ ಅವರ ಪ್ರಯತ್ನದಿಂದ ಜಲವಿದ್ಯುತ್ ಯೋಜನೆ ಸ್ಥಗಿತಗೊಂಡಿತ್ತು ಆದರೆ 1992ರಲ್ಲಿ ಮತ್ತೆ ಆ ಯೋಜನೆಯ ಅನುಷ್ಠಾನದ ಬಗ್ಗೆ ಸರ್ಕಾರ ಮಾತಾಡಿತ್ತು ಮತ್ತು ಅದಕ್ಕೆ ಪೂರಕವಾಗಿರುವ ಕೆಲಸಗಳು ಸರ್ಕಾರದ ಕಡೆಯಿಂದ ನಡೆಯುತಿತ್ತು. ಆಗ ಶ್ರೀಗಳು ಶ್ರೀ ಮಠದಿಂದ ಯಲ್ಲಾಪುರದ ಮಾಗೋಡಿನವರೆಗೂ ಸುಮಾರು 50 ಕಿಲೋ ಮೀಟರ್’ಗಳ ದೀರ್ಘ ಪಾದಯಾತ್ರೆಯನ್ನು ಮಾಡಿ ಜನಸಾಮಾನ್ಯರ ಬದುಕಿಗೆ ಆಶಾಕಿರಣವಾಗಿ ನಿಂತರು. ಪರಿಣಾಮ ಸರಕಾರ ನಲುಗಿತು ಹೋರಾಟದ ತೀವ್ರತೆ ಅರಿತ ಸರಕಾರ ಆ ಯೋಜನೆಯನ್ನು ಕೈ ಬಿಡುವುದು ಅನಿವಾರ್ಯವಾಗಿತ್ತು. ಶ್ರೀಗಳ ಹೋರಾಟಕ್ಕೆ ಜಯ ದೊರಕಿತು. ಪರಿಸರ ಕಾಪಾಡಲು ತಾವು ಯಾವತ್ತೂ ಮುಂದು ಎಂಬ ಸ್ಪಷ್ಟ ಸಂದೇಶವನ್ನು ಸರಕಾರಕ್ಕೆ ಮುಟ್ಟಿಸಿದ್ದರು ಶ್ರೀಗಳು.
ಕಟ್ಟುನಿಟ್ಟಾದ ಧರ್ಮಾನುಷ್ಠಾನ, ನಿರಂತರ ಶ್ರೀಚಕ್ರ ಪೂಜೆಯ ಜೊತೆಗೆ ಅನೇಕ ಸಾಮಾಜಿಕ ಸೇವೆಗಳನ್ನು ಶ್ರೀಗಳು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಶ್ರೀನಿಕೇತನ ಆಂಗ್ಲ ಮಾಧ್ಯಮಿಕ ಶಾಲೆ,ಶ್ರೀದೇವಿ ಶಿಕ್ಷಣ ಸಂಸ್ಥೆ, ಸಂಸ್ಕೃತ ಮಹಾವಿದ್ಯಾಲಯ ಸ್ಥಾಪಿಸಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ ಶ್ರೀಗಳು. ಪ್ರಮುಖವಾಗಿ ಭಗವತ್ಪಾದ ಪ್ರಕಾಶನದ ಮೂಲಕ ಅನೇಕ ಧಾರ್ಮಿಕ ಗ್ರಂಥಗಳನ್ನು ಪ್ರಕಾಶಿಸಿ ಧರ್ಮದ ಅರಿವು ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ಸಕ್ರಿಯವಾಗಿದೆ ಶ್ರೀಮಠ. ಇಷ್ಟೇ ಅಲ್ಲದೇ ಧಾರ್ಮಿಕ ಕಾರ್ಯಕ್ಕಾಗಿ “ಲಲಿತಾಂಬ ನಿಧಿ ಟ್ರಸ್ಟ್”, ಸಾಂಸ್ಕೃತಿಕ,ಧಾರ್ಮಿಕ ಚಟುವಟಿಕೆ, ಅಭಿಯಾನ ಮತ್ತು ಜ್ಞಾನ ಸತ್ರ ಇತ್ಯಾದಿ ಕಾರ್ಯಕ್ಕಾಗಿ “ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ”, ಕೃಷಿಕರ ಹಿತಕ್ಕಾಗಿ “ಕೃಷಿ ಪ್ರತಿಷ್ಠಾನ”, ಸಂಗೀತ ಯಕ್ಷಗಾನ ಇತ್ಯಾದಿ ಕಲೆಗಳ ಪೋಷಣೆಗಾಗಿ “ಯಕ್ಷ ಶಾಲ್ಮಲಾ”, ಸುಖಿ ದಾಂಪತ್ಯ ನೀತಿ ಬೋಧನೆ ಮತ್ತು ಭ್ರೂಣ ಹತ್ಯಾ ನಿಷೇಧ ಮಾಡುವ ನಿಟ್ಟಿನಲ್ಲಿ “ಧನ್ಯೋ ಗೃಹಸ್ಥಾಶ್ರಮ” ಹೀಗೆ ಅನೇಕ ಸಂಘಟನೆಗಳನ್ನು ಸ್ಥಾಪಿಸಿರುವ ಶ್ರೀಗಳು ಸಮಾಜಮುಖಿ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ಶ್ರೀಗಳ ಇನ್ನೊಂದು ಮಹತ್ತರ ಕಾರ್ಯವೆಂದರೆ 2007ರಲ್ಲಿ ಶುರು ಮಾಡಿದ ಶ್ರೀ ಭಗವದ್ಗೀತ ಅಭಿಯಾನ. ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವುದೇ ಈ ಅಭಿಯಾನದ ಮೂಲ ಉದ್ದೇಶವಾಗಿತ್ತು. ಈ ಅಭಿಯಾನ ಇಂದಿಗೂ ನಿರಂತರವಾಗಿ ನಡೆಯುತ್ತಲೇ ಇದೆ.ನಾಡಿನ ಶ್ರೇಷ್ಠ ವಿದ್ವಾಂಸರನ್ನು,ಚಿಂತಕರನ್ನೂ,ಸಾಧು ಸಂತರನ್ನು, ಪೀಠಾಧೀಶರನ್ನು,ಸಮಾಜಸೇವಕರನ್ನು ನೇರವಾಗಿ ಸಂಪರ್ಕಿಸಿ ಅವರನ್ನೆಲ್ಲ ಈ ಕಾರ್ಯಕ್ರಮದಲ್ಲಿ ಶ್ರೀಗಳು ತೊಡಗಿಸಿದರು. ಜಾತಿ,ಮತ,ಪಂಥ ಮೀರಿ ಒಂದಾದ ಜನತೆಯು ಈ ಅಭಿಯಾನದ ಯಶಸ್ಸಿಗೆ ಕಾರಣೀಭೂತವಾಯಿತು. ರಾಜ್ಯದ 30 ಜಿಲ್ಲೆಗಳಲ್ಲಿ ಈ ಅಭಿಯಾನ ಅಭೂತಪೂರ್ವವಾಗಿ ನಡೆಯಿತು. ಪ್ರಮುಖವಾಗಿ ವಿದ್ಯಾರ್ಥಿಗಳು ಮತ್ತು ಮಾತೆಯರು ಈ ಅಭಿಯಾನದಲ್ಲಿ ಆಸಕ್ತಿಯಿಂದ ತೊಡಗಿಕೊಂಡರು. ನೆನಪಿದೆ ಈ ಅಭಿಯಾನ ನಡೆವಾಗ ನಾನೂ ಕೂಡ ಹತ್ತನೇ ತರಗತಿಯಲ್ಲಿದ್ದೆ. ಆಗ ನಾವು ಭಗವದ್ಗೀತೆಯ 13,14 ಮತ್ತು 15ನೇ ಅಧ್ಯಾಯವನ್ನು ಕಂಠಪಾಠ ಮಾಡಿ ಜೊತೆಗೆ ಹಾಡುತ್ತಿದ್ದೆವು. ಭಗವದ್ಗೀತೆಯ ಸಾರವನ್ನು ನಾವು ಅರಿಯುವ ಪ್ರಯತ್ನ ಮಾಡುತ್ತಿದ್ದೆವು. ಎಲ್ಲರ ಮನೆಯಲ್ಲೂ ಒಂದು ಭಗವದ್ಗೀತೆಯ ಗ್ರಂಥವಿರಬೇಕು ಎಂದು ಇಲ್ಲಿಯವರೆಗೆ ಸುಮಾರು 20 ಲಕ್ಷ ಗೀತೆಯ ಪುಸ್ತಕವನ್ನು ವಿತರಿಸಿ ಅದ್ಭುತ ಅಭಿಯಾನವನ್ನು ಶ್ರೀಗಳು ಸಾಕಾರಗೊಳಿಸಿದ್ದಾರೆ. ಪ್ರಮುಖವಾಗಿ ಅನೇಕ ವಿಚಾರ ಸಂಕಿರಣಗಳು ಭಗವದ್ಗೀತ ಅಭಿಯಾನದ ಅಂಗವಾಗಿ ನಡೆದವು. ಬೆಂಗಳೂರಿನ ನಿಮ್ಹಾನ್ಸ್ ಸಹಯೋಗದಲ್ಲಿ ಭಗವದ್ಗೀತೆ ಮತ್ತು ಮಾನಸಿಕ ಸ್ವಾಸ್ಥ್ಯ ಎಂಬ ವಿಚಾರ ಸಂಕಿರಣ,ಮಂಗಳೂರಿನಲ್ಲಿ ಭಗವದ್ಗೀತೆ ಮತ್ತು ನಿರ್ವಹಣಾ ಕೌಶಲ್ಯ ಎಂಬ ವಿಚಾರ ಸಂಕಿರಣ,ಮೈಸೂರಿನಲ್ಲಿ
ಜೆಎಸ್‌ಎಸ್ ವಿದ್ಯಾಪೀಠದ ಸಹಯೋಗದಲ್ಲಿ ಭಗವದ್ಗೀತೆ ಮತ್ತು ವಚನ ಸಾಹಿತ್ಯ ಎಂಬ ಅಮೋಘ ವಿಚಾರ ಸಂಕಿರಣ ಮತ್ತು ಬೆಂಗಳೂರಿನಲ್ಲಿ ಆಯುಷ್ ಸಂಸ್ಥೆಯ ಸಹಯೋಗದಲ್ಲಿ ಭಗವದ್ಗೀತೆ ಮತ್ತು ಆಯುರ್ವಿಜ್ಞಾನ ಎಂಬ ವಿಚಾರಸಂಕಿರಣಗಳು ನಡೆದವು. ಕಳೆದ ಮೂರು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ನಿರಂತರವಾಗಿ ಈ ಅಭಿಯಾನ ನಡೆಯುತ್ತಿದೆ, ಶಿರಸಿ,ಕುಮಟಾ ಮತ್ತು ಹಳಿಯಾಳದಲ್ಲಿ ಬೃಹತ್ ಸಮರ್ಪಣ ಸಮಾರಂಭಗಳು ಈ ಅಭಿಯಾನದ ಯಶಸ್ಸಿಗೆ ಹಿಡಿದ ಕೈಗನ್ನಡಿ. ಈ ವರ್ಷ 2016ರ ಡಿಸೆಂಬರ್ 4ರಿಂದ 11ರ ವರೆಗೆ ಇಡೀ ರಾಜ್ಯಾದ್ಯಂತ
ಭಗವದ್ಗೀತ ಅಭಿಯಾನ ಶ್ರೀಗಳ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ನಡೆಯುತ್ತಿದೆ.
ಒಟ್ಟಿನಲ್ಲಿ ಶ್ರೀ ಮಠವನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಸಮಾಜದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿರುವ ಶ್ರೀಗಳ ಕಾರ್ಯವನ್ನು ನಾವೆಲ್ಲ ಮೆಚ್ಚಲೇಬೇಕು. ರಾಮಕೃಷ್ಣಾಶ್ರಮದ ಸ್ವಾಮೀಜಿಗಳಾದ ಶ್ರೀ ಜಗದಾತ್ಮಾನಂದರ ಪ್ರವಚನದಿಂದ ಪ್ರಭಾವಿತರಾದ ಶ್ರೀಗಳು ನಮಗೆಲ್ಲ ಪ್ರೇರಕರೇ ಸರಿ. ಅವರು ಕಟ್ಟಿದ ಆ ವಿದ್ಯಾಸಂಸ್ಥೆಯಲ್ಲಿ ಎರಡು ವರ್ಷ ಓದುವ ಭಾಗ್ಯ ನನ್ನದಾಗಿತ್ತು. ಆಗೆಲ್ಲ ಅವರ ಪ್ರವಚನಕ್ಕೆ ಕಿವಿಯಾಗಲು ಮನಸ್ಸು ಹಾತೊರೆಯುತ್ತಿತ್ತು. ಸ್ವಾಮೀಜಿ ನಿಮ್ಮ ಕಣ್ಣುಗಳ ತೇಜಸ್ಸನ್ನು ನೋಡುತ್ತಾ ಕಣ್ಣನ್ನು ತೆರೆದು ಧ್ಯಾನಿಸಬಲ್ಲೆ. ನಿಮ್ಮ ವಿಚಾರಗಳ ಸುಳಿಯಲ್ಲಿ ಬಂಧಿಯಾಗಿ ಆತ್ಮ ಪರಮಾತ್ಮದ ಹುಡುಕಾಟಕ್ಕೆ ನನ್ನನ್ನು ಅನುಗೊಳಿಸಬಲ್ಲೆ.
ಧನ್ಯ ಗುರುವೇ ಈ ಜೀವವು….