ಅವಳು…….ದೇವರೆನ್ನುವ ಶಕ್ತಿಯ ಅದ್ಭುತ ಸೃಷ್ಟಿಯಲ್ಲಿ ಒಂದಾದ ಭೂಮಿಗೆ ನನ್ನನ್ನು ಪರಿಚಯಿಸಿದವಳು…ಅಂಬೆಗಾಲಿಗೆ ನನ್ನ ಅನುವುಮಾಡಿ ನಿಷ್ಕಲ್ಮಷವಾದ ನಗುವಿಗೆ ಮುಹೂರ್ತ ಹಾಕಿದವಳು.. ಚಾಚಿದ ಕೈಗೆ ಆಸರೆಯಾಗಿ ನಡೆಯುವುದ ಕಲಿಸಿದವಳು..ಮಮತೆಯ ಮಡಿಲಲಿ ಬೆಚ್ಚಗೆ ತಲೆ ಸವರುತ್ತಾ ಚಂದಿರನ ಕಥೆ ಹೇಳಿದವಳು..ನನಗೊಂದು ಚಂದದ ಹೆಸರಿಟ್ಟು ಬಾ ಮಗನೇ ಎಂದು ಪ್ರೀತಿಯಿಂದ ಕರೆದು ಅಪ್ಪಿಕೊಳ್ಳುವವಳು…ಮಣ್ಣಿನ ಪಾಟಿಯಲಿ ಅ ಆ ಇ ಈ ಬರೆಸಿ ಬಾಯಿಪಾಠ ಮಾಡಿಸಿದವಳು…ಅಕ್ಷರಕ್ಕೊಂದು ರೂಪ ಕೊಟ್ಟು ಮನದೊಳಗೆ ಅಚ್ಚು ಒತ್ತಿದವಳು…ಸಿಹಿಕಡುಬಿಗೆ ಅದರಷ್ಟೇ ತುಪ್ಪ ಹಾಕಿ ಬಾಯಿ ತುಂಬಾ ತಿನ್ನಿಸಿದವಳು…ಕಂಡ ಕನಸುಗಳ ಅರಸಿ ಹೊರಡುವಾಗ, ಅದೆಷ್ಟೋ ಬಾರಿ ಎಡವಿದಾಗ ಅದ್ಯಾವುದೋ ಶಕ್ತಿಯನು ನನ್ನೊಳಗೆ ತುಂಬಿದವಳು…ಅಮ್ಮ, ನಿನ್ನ ಪ್ರಸ್ತುತವನು ನನ್ನ ಭವಿಷ್ಯಕ್ಕೆ ಮೀಸಲಿಟ್ಟ ನಿನಗೆ ಮಹಿಳಾ ದಿನದ ಶುಭಾಶಯಗಳು…
“ಅಮ್ಮನೊಡಲ ಸೆರೆಯಲಿ ಮತ್ತೆ ಮತ್ತೆ ಮಗುವಾಗಿ,
ಮಮತೆಯ ಮಡಿಲಲಿ ಸದಾ ಧ್ಯಾನಿಯಾಗಿ,
ಮತ್ತೆ ಮತ್ತೆ ಹುಟ್ಟಬೇಕು ನಿನ್ನೊಡಲ ಬಿಂದುವಾಗಿ,
ಹರಸುತಿರು ಅಮ್ಮ ಜೀವಂತ ದೇವರಾಗಿ…
ಚಾಚಿ ಹಿಡಿದ ಕೈ ಚೂರೂ ಸಡಿಲವಾಗದಿರಲಿ,
ನಿನ್ನ ಕಣ್ಣಂಚಿನ ನೀರು ನನ್ನ ಗೆಲುವಿನ ಆನಂದಭಾಷ್ಪದ ಪ್ರತಿಫಲನವಾಗಲಿ,
ನೀ ಹೇಳುತ್ತಿದ್ದ ಚಂದಿರನ ಕಥೆ ನನಗೊಂದೇ ಮೀಸಲಿರಲಿ,
ಮಿಡಿಯುತಿದೆ ಮನವು ಅಮ್ಮ ನಿನ್ನ ಕೈ ತುತ್ತಿಗಾಗಿ…
ಮನದೊಳಗೆ ಬಚ್ಚಿಟ್ಟ ನೋವುಗಳೆಲ್ಲ ನನ್ನ ಪ್ರಸ್ತುದಲಿ ಮಾತಾಗಲಿ,
ನೋವನುಭವಿಸಬೇಡ ಏಕಾಂಗಿಯಾಗಿ,
ನಗುತಿರಲಿ ಜೀವ ಮುಗ್ಧತೆಯ ಶಿಖರದಲಿ,
ಜೊತೆಗಿರುವೆನಮ್ಮ ನಿನ್ನ ಕಣ್ಣೊಳಗಿನ ಬಿಂಬವಾಗಿ..
ನೀ ಹಚ್ಚಿದ ದೀಪ
ದಾರಿ ತೋರುತಲಿದೆ…
ಭರದಿ ಬೀಸಿದ ಗಾಳಿಗೂ
ಬಿಡದೇ ಸುರಿವ ಮಳೆಗು
ಆರದೇ ಕಾಯುತಿದೆ
ನನ್ನದೆನ್ನುವುದ ಮೀರಿ…”
ಅವಳು….ಭಗವಂತನ ಸೃಷ್ಟಿಯ ಸುಂದರವಾದ ರೂಪ. ಅಮ್ಮನಾಗಿ, ಅಕ್ಕನಾಗಿ, ಅಜ್ಜಿಯಾಗಿ, ತಂಗಿಯಾಗಿ, ಗೆಳತಿಯಾಗಿ ನಮ್ಮ ಮನಸ್ಥಿತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಾಗಿ ಸಲಹುತ್ತಿರುವವಳು. ಹುಟ್ಟಿಸಿದವಳು ಹೆಣ್ಣು, ಬದುಕಿನ ಪಾಠ ಹೇಳಿದವಳು ಹೆಣ್ಣು, ಅಕ್ಕರೆಯ ಜಗಳಕ್ಕೆ ಕಿಚ್ಚು ಹಚ್ಚಿಸಿ ‘ಬಾ ತಮ್ಮಾ’ ಎಂದು ಮುದ್ದಿಸಿದವಳು ಹೆಣ್ಣು, ಸೋತು ಕೂತಾಗ ಸ್ನೇಹದ ಮಾತನ್ನಾಡಿ ಸಂತೈಸಿದವಳು ಹೆಣ್ಣು, ನಾ ಕಲಿತ ನಾಲ್ಕಕ್ಷರದ ಮೂಲ ಹೆಣ್ಣು, ಸಾಕಲ್ಲ ನಾನು ‘ಸ್ವಾಭಿಮಾನಿ’ಎಂದುಕೊಂಡು ತಿರುಗಲು… ನೀನೆಷ್ಟು ನೋವನ್ನುಣ್ಣುವೆ ಈ ಸಮಾಜದಲ್ಲಿ? ಯಾರಿಗೂ ಹೇಳಲಿಚ್ಚಿಸದೆ ನೀ ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ದುಗುಡ, ದುಮ್ಮಾನಗಳೆಷ್ಟು? ನಿನ್ನಂತರಂಗದ ಮಾತಿಗೆ ಕಿವಿಕೊಡುವರಾರು?ನೀ ತೊಟ್ಟ ಉಡುಗೆಯಿಂದ, ನೀನಾಡುವ ಮಾತಿನಿಂದ ನಿನ್ನನ್ನ ಮನಬಂದಂತೆ ಸೃಷ್ಟಿಸುವ ಈ ಪುರುಷರನ್ನ ಹೇಗೆ ಸಹಿಸಿಕೊಳ್ಳುವೆ? ಹೀಗಿದ್ದರೂ ಮುಖದ ಮೇಲಿನ ನಿನ್ನ ನಗು.. ಮಾಸಲಿಲ್ಲವಲ್ಲ…ಮನದೊಳಗಿನ ದುಗುಡ, ನೋವು ಆಚೆ ತೋರಿಸದೇ ಅವಿನಾಶಿಯಾಗಿ ಬದುಕುತ್ತಿರುವವಳು ನೀನಲ್ಲವೇ?.. ನಿನ್ನ ರೂಪ ನೋಡಿ ಅಳೆಯುವ ಪುರುಷರ ವಿರೋಧಿಸಿದರೆ ನಿನಗೆ ಅವಮಾನವೇ ಉಡುಗೊರೆ..ನೀ ಕಂಡ ಅದೆಷ್ಟೋ ಕನಸುಗಳು ನಿನ್ನ ಕಲ್ಪನೆಯ ಕಡಲ ದಾಟಿ ಆಚೆ ಬರಲೇ ಇಲ್ಲ ಅಲ್ಲವೇ? ನೀ ಕಂಡ ನಿನ್ನ ನಾಳೆ ಪುರುಷನ ಅಹಂಕಾರದ ಪ್ರಸ್ತುತದಲ್ಲಿ ಹುದುಗಿ ಹೋಯಿತಲ್ಲ ಅದೇಗೆ ನೀನು ಸಹಿಸಿಕೊಂಡೆ?
ಹೋರಾಟದ ಮೂಲ..ಹಸಿವನ್ನು ಇಂಗಿಸುವ ತುದಿ…ಮುಖದ ಮೇಲಿನ ನಗು..ಕಣ್ಣಂಚಿನ ನೀರು…ನಿರಂತರ ಎನ್ನುವ ಪ್ರಕೃತಿಯ ಉಸಿರು…ಪುರುಷನ ಅಹಂಕಾರದ ಆತ್ಮವಿಶ್ವಾಸ ಎಲ್ಲವೂ ನೀನೆ. ನೀ ಕಂಡ ನಾಳೆ ನೆಮ್ಮದಿಯದ್ದು, ಅದು ನಿನ್ನ ಪ್ರಸ್ತುತದ ನಗುವನ್ನೂ ಮೀರಿದ್ದು ಆದರೆ ಅದನ್ನು ನೀನು ಅರಿಯಲೇ ಇಲ್ಲವೇ? ಅಥವಾ ಅರಿತು ಕೂಡ ಮೌನಿಯಾದೆಯಾ? ಪೊಳ್ಳು ಸಂಪ್ರದಾಯದ ಹೆಸರಲ್ಲಿ ನಿನ್ನ ಮೇಲಾಗುವ ದೌರ್ಜನ್ಯವ ಖಂಡಿಸಿದರೆ ನಾ ಗೌರವಿಸುವರ ಮರ್ಯಾದೆ ತಳಸೇರುತ್ತದೆ ಎಂದು ನಿನ್ನತನವನ್ನೂ ಮೀರಿ “ಕ್ಷಮಯಾ ಧರಿತ್ರಿ” ಆದೆಯಲ್ಲ ನಿನಗೆ ನೀನೇ ಸಾಟಿ..ಪುರುಷನ ಅಸಹ್ಯವಾದ ಕೋಪದ ದಾಳಿ ನಿನ್ನ ಮೇಲೆ ನಿರಂತರವದರೂ ನೀ ಅವನ್ನೆಲ್ಲ ಮೀರಿ ನಗುತ್ತಿದ್ದೆ…ನಿನ್ನ ಸೃಷ್ಟಿ ಪ್ರಕೃತಿಯಷ್ಟೇ ಪ್ರಮುಖವಾದ್ದು ಮತ್ತು ಅವಶ್ಯವಾದದ್ದು…
ಹಸಿದು ಬಂದ ಅದೆಷ್ಟೋ ಜನರಿಗೆ ಅನ್ನ ನೀಡುವ ಬೀದಿ ಬದಿಯ ತಳ್ಳುಗಾಡಿಯ ಆ ಹೆಂಗಸು ಕೇವಲ ಹಣಕ್ಕಾಗಿ ಮಾತ್ರ ಆ ಕೆಲಸ ಮಾಡುತ್ತಿಲ್ಲ…ತಾನು ಒಂದು ಹೊತ್ತು ಊಟ ಮಾಡಿ ಓದುವ ಮಗನ ಹೊಟ್ಟೆಗೆ ಹಸಿವಿನ ಗಾಳಿಯೂ ತಾಕದಂತೆ ಸಾಕಿದ ಆ ತಾಯಿಗೆ ಮಗುವಿನ ಭವಿಷ್ಯವನ್ನೂ ಮೀರಿದ ಪ್ರೀತಿ ಸದಾ ಅರಳಿದ್ದ ಮಗನ ಆ ಕಣ್ಣುಗಳಲ್ಲಿ ಕಂಡಿತ್ತು…ಹಾದಿ ಬೀದಿಯಲ್ಲಿ ಸೊಪ್ಪು ಮಾರುತ್ತ ಸಾಗುತ್ತಿದ್ದ ಆ ಹೆಂಗಸಿನ ಕಂಕುಳಲ್ಲಿ ಮಲಗಿದ್ದ ಮಗುವಿಗೆ ಅಮ್ಮನ “ಸೊಪ್ಪು ಅವ್ವ ಸೊಪ್ಪು” ಎಂಬ ಕೂಗೇ ಜೋಗುಳವಾಗಿತ್ತು…ಬೀದಿ ಗುಡಿಸಲು ಬೆಳಕು ಹರಿಯುವ ಮೊದಲೇ ಕಸಬರಿಗೆಯನ್ನು ಹಿಡಿದು ಬಂದು ನಿಂತಿದ್ದ ಆ ತಾಯಿಯ ಮಗು ಮನೆಯಲ್ಲಿ ಅಮ್ಮನ ಮಡಿಲ ಬಯಸಿ ಅಳುತ್ತಿತ್ತು…ಅವಳ್ಯಾರೋ ತಾಯಿ ಮಗನ ಬಗ್ಗೆ ಅನಾಥಾಶ್ರಮದಲ್ಲಿ ಹೊಗಳುವಾಗ ಚೂರೂ ಕೋಪವಿರಲಿಲ್ಲ…ಬೀದಿಯಲ್ಲಿ ಕೈ ಚಾಚಿ ನಿಂತ ಆ ಹೆಂಗಸಿನ ಕಂಕುಳಲ್ಲಿ ಸಿಹಿನಿದ್ದೆಗೆ ಜಾರಿದ್ದ ಮಗುವಿನ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು…
ಹೆಣ್ಣೇ ನೀನು ಅವಿನಾಶಿ…ನೀನು ನಿನ್ನಮೇಲಿನ ಮಾನಸಿಕ ಮತ್ತು ದೈಹಿಕ ತುಳಿತವ ಧಿಕ್ಕರಿಸು..’ನಾನು’ ಎಂಬ ಅಹಂಕಾರದ ತುತ್ತ ತುದಿಯಲಿ ಮೆರೆದಾಡುತ್ತಿರುವ ಪುರುಷರ ಕೆನ್ನೆಗೆ ಬಾರಿಸಿ ನಿನ್ನ ಹಕ್ಕನ್ನು ನಿನ್ನದಾಗಿಸಿಕೋ…ನಂಬಿಕೆಯೆಂಬ ನಿನ್ನೊಳಗಿನ ಶಕ್ತಿಯ ದುರುಪಯೋಗ ಮಾಡಿಕೊಂಡವರ ವಿರುದ್ಧ ಧೈರ್ಯವಾಗಿ ಮಾತಾಡು…ಪ್ರೀತಿ,ಮಮತೆ,ತ್ಯಾಗದ ಮೂರ್ತರೂಪವಾದ ನಿನಗೆ ನೀನೆ ಸಾಟಿ…ಹೆಣ್ಣೆಂದರೆ ಕನಸು, ಹೆಣ್ಣೆಂದರೆ ಆತ್ಮವಿಶ್ವಾಸ, ಹೆಣ್ಣೆಂದರೆ ಅನಂತ ಪ್ರೀತಿಯ ಮೂಲಸ್ಥಾನ…
ಹೆಣ್ಣಾಗಿ ಹುಟ್ಟಿರುವೆ ಎಂಬ ಕಾರಣದಿಂದ ನಿನ್ನ ಧಿಕ್ಕರಿಸುತ್ತಿರುವ ಅಪ್ಪ, ನೀ ಕೇಳಿದ್ದೆಲ್ಲವನ್ನೂ ‘ಇಲ್ಲ’ ಎಂಬ ಒಂದೇ ಉತ್ತರ ನೀಡಿ ಸಿಡುಕುತ್ತಿದ್ದ ಅಜ್ಜಿ, ಗೊಡ್ಡು ಸಂಪ್ರದಾಯದ ರೇಖೆಯೆಳೆದು ನಿನ್ನ ಬಂಧಿಸುತ್ತಿದ್ದ ಸಮಾಜ, ತಲೆ ತಗ್ಗಿಸಿಯೇ ನಡೆ ಎಂಬ ಪಾಠ ಕಲಿಸುತ್ತಿದ್ದ ನಿನ್ನ ಅಣ್ಣ, ಸಂಬಂಧದೊಳಗೆ ಸಂಬಂಧ ಬೆಳೆಸಿ ಕೈತೊಳೆದುಕೊಳ್ಳಲು ತಯಾರಾದ ಅಪ್ಪ, ಮನೆಯ ಮೂಲೆಯಲ್ಲಿ ಬಿಡಿಸಿಟ್ಟ ನಿನ್ನ ಹಾಸಿಗೆಯಲಿ ನಿನ್ನ ಕನಸು ಮಕಾಡೆ ಮಲಗಿ ನರಳುವಾಗ ನಿನ್ನ ಕಣ್ಣಂಚಿನ ನೀರೊಂದೇ ನಿನ್ನ ಆಸರೆಯಾಗಿತ್ತು…ಅಲ್ಲಿ ನೀಲಿ ಆಕಾಶದಲಿ ಒಬ್ಬಂಟಿಯಾಗಿ ಹಾರಾಡುತಿದ್ದ ಹಕ್ಕಿಯ ಜೋಡಿಯಾಗಿ ಹಾರಾಡುವ ನಿನ್ನಾಸೆಗೆ ನೂರೆಂಟು ಅಡೆತಡೆಯ ನಿರ್ಮಿಸಿ ವಿಕಾರವಾದ ನಗುವಿನೊಂದಿಗೆ ಜೀವಿಸುತ್ತಿರುವ ಈ ಸಮಾಜವ ನೋಡಿಯೂ ಕೂಡ ನಿನ್ನ ನಗುಮುಖ ಮಾಸಲೇ ಇಲ್ಲ…ನಿನ್ನ ರೂಪವನ್ನೂ ಮೀರಿದ್ದು ನಿನ್ನ ಮನಸ್ಸು ಎಂದು ಪುರುಷ ಯಾವತ್ತೂ ಯೋಚಿಸಿಲ್ಲವೇ? ಪ್ರೀತಿಯೆಂಬ ಅಮರ ಪ್ರೇಮ ಸೌಧವನ್ನು ನಿನ್ನ ಗೆಳೆಯನ ಆಗಮನದಲಿ ಕಟ್ಟಿಕೊಂಡ ನಿನಗೆ ಅವನು ನೀಡಿದ್ದು ಅನುಮಾನ ಅವಮಾನ ಮಾನಸಿಕ ಹಿಂಸೆಯೆಂಬ ಉಡುಗೊರೆ, ನಿನ್ನ ಮನೆಯೊಳಗೆ ಕೂಡಿಹಾಕಿ ಹೋಗುವ ಗಂಡನಿಗೆ ನಿನ್ನ ಭಾವನೆಗೆ ಬೆಲೆ ಕೊಡಬೇಕೆಂದೆನಿಸಲಿಲ್ಲವೇ?ನಿನ್ನ ವಿಚಾರದಲ್ಲಿ ಕೆಲವೊಂದು ಪ್ರಶ್ನೆಯಾಗಿಯೇ ಉಳಿಯಿತು..ನೀ ಯೋಚಿಸಲೇ ಇಲ್ಲ…ಕಷ್ಟಕ್ಕೆ ಒಗ್ಗಿಕೊಂಡು ನಿನ್ನ ಕುಟುಂಬವ ಕಟ್ಟಿದೆ, ಎದೆಯೊಳಗಿನ ನೋವಿಗೆ ಮುಖ ಕನ್ನಡಿಯಾಗದೇ ನಗುವ ಮುಖವಾಡದ ಒಳಗೆ ನೋವ ಹುದುಗಿಸಿಟ್ಟೆ…ನೋವನ್ನೊಂದೇ ನೀಡುವ ಗಂಡನಿಗೆ ಪ್ರೀತಿಯ ಕೈತುತ್ತು ನೀಡಿದೆ…ಗೊಡ್ಡು ಸಂಪ್ರದಾಯದ ಗೆರೆ ಹಾಕಿದ ಸಮಾಜದ ಸ್ವಾಸ್ಥ್ಯ ಕಾಪಾಡಿದೆ…ನೀನು ಅದೆಷ್ಟೋ ನೋವನ್ನು ಹೊತ್ತುಕೊಂಡು ನಲಿವನ್ನು ಮಾತ್ರ ಹಂಚಿದೆ ಪ್ರಕೃತಿಯಂತೆ…..
ಅಂತರಿಕ್ಷಯಾನವ ನಡೆಸಿ ಅಮರಳಾದ ಕಲ್ಪನಾ ಚಾವ್ಲಾ, ಸಾವನ್ನೂ ಜಯಿಸಿ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ, ಗೊಡ್ಡು ಸಂಪ್ರದಾಯವ ಧಿಕ್ಕರಿಸಿ ಭಾರತದ ಧ್ವಜವನ್ನು ಟೆನ್ನಿಸ್ ಕ್ರೀಡಾಂಗಣದಲಿ ಹಾರಿಸಿದ ಸಾನಿಯಾ ಮಿರ್ಜಾ, ನಾವೇ ಬ್ಯಾಡ್ಮಿಂಟನ್’ನ ಸರ್ವಾಧಿಕಾರಿಗಳು ಎಂದು ಬೀಗುತ್ತಿದ್ದ ಚೈನಿಯರಿಗೆ ಟಾಂಗ್ ನೀಡಿ ವಿಶ್ವದ ಮೊದಲನೇ ಶ್ರೇಯಾಂಕಿತ ಆಟಗಾರ್ತಿಯಾದ ಸೈನಾ ನೆಹ್ವಾಲ್ ಹೀಗೇ ಇನ್ನೂ ಅನೇಕ ವಿಭಾಗದಲಿ ನಿನಗೆ ನೀನೇ ಸಾಟಿಯಾದೆ, ಮಾದರಿಯಾದೆ…ಕನಸು ಕಂಡ ಅದೆಷ್ಟೋ ಎಳೆಯ ಮನಸ್ಸುಗಳಿಗೆ ಪ್ರೇರಣೆಯಾದೆ…ನಿರಂತರವಾಗು ನೀನು ಪ್ರಕೃತಿಯಂತೆ….
ಮಮತೆಯ ಮಡಿಲ ಅಮ್ಮನಾಗಿ, ನಿಷ್ಕಲ್ಮಷವಾದ ಅಕ್ಕರೆಯ ಅಕ್ಕನಾಗಿ, ಅಕ್ಷರಗಳ ಮೂಲವಾದ ಗುರುವಾಗಿ, ಅಂತರಂಗದ ಮಾತುಕತೆಗೆ ಜೊತೆಯಾದ ಗೆಳತಿಯಾಗಿ ನಿರಂತರ ನಿನ್ನ ಪ್ರಸ್ತುತ…ಬದುಕಿನ ಅದೆಷ್ಟೋ ಮಜಲುಗಳನ್ನು ನೀನಿಲ್ಲದೆ ಊಹಿಸಲೂ ಸಾಧ್ಯವಿಲ್ಲ…ನಿನಗೆ ಮಹಿಳಾ ದಿನದ ಶುಭಾಶಯಗಳು…
ಹ್ಯಾಪಿ ವುಮೆನ್ಸ್ ಡೇ…