ಅಂಕಣ

ಹೊಸ ಬೌದ್ಧಿಕ ಪರಂಪರೆಯನ್ನು ರೂಪಿಸೊಣ

ಒಂದು ಕೆಲಸವಾಗಬೇಕಾದರೆ ನಾವು ಆಲೋಚಿಸಬೇಕು.ಆ ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿಸಬೇಕು.ಎಲ್ಲದಕ್ಕೂ ಚಿಂತನೆಯೇ ಮೂಲ.ಒಬ್ಬ ವ್ಯಕ್ತಿ ಯಾವ ರೀತಿ ಚಿಂತನೆ ಮಾಡುತ್ತಾನೆ ಎಂಬುದರ ಮೇಲೆ ಆತನ ಬೌದ್ಧಿಕ ಗುಣಮಟ್ಟ ನಿರ್ಧರಿಸಲ್ಪಡುತ್ತದೆ.ಹಲವು ಚಿಂತನೆಗಳು,ವಿವಿಧ ರೀತಿಯ ಬೌದ್ಧಿಕ ನೆಲೆಗಟ್ಟಿನಲ್ಲಿ ಸಮ್ಮಿಳಿತವಾಗಿ ಒಂದು ಅರ್ಥಪೂರ್ಣ ಮನಸ್ಥಿತಿ ನಿರ್ಮಾಣಗೊಳ್ಳಬಹುದು.ಒಂದು ವೈಚಾರಿಕ ಚಿಂತನೆ ಜನರಿಂದ ಜನರಿಗೆ,ಕಾಲದಿಂದ ಕಾಲಕ್ಕೆ ಪಸರಿಸಲ್ಪಟ್ಟಾಗ ಕಾಲ ಕ್ರಮೇಣದಲ್ಲಿ ಆ ಚಿಂತನೆ ಒಂದು ಪರಂಪರೆಯಾಗಿ ಮುಂದುವರೆಯಬಹುದು.ಇದನ್ನು ನಾವು ಬೌದ್ಧಿಕ ಪರಂಪರೆ ಎನ್ನುತ್ತೇವೆ.

ಭಾರತದ ಸಂಸ್ಕೃತಿಯನ್ನು,ರಾಜಕೀಯವನ್ನು,ಇಲ್ಲಿನ ಹೋರಾಟಗಳನ್ನು ಬೆಳೆಸುವಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಕೊಡುಗೆ ಅಪಾರವೆಂದೂ,ಒಂದು ಬೌದ್ಧಿಕ ಪರಂಪರೆಯನ್ನು ರೂಪಿಸುವಲ್ಲಿ JNU ನ ಕೊಡುಗೆ ಬಹಳ ಇದೆಯೆಂದೂ ಕೆಲವು ಪ್ರಾಜ್ಞರು ಮೊನ್ನೆಯಷ್ಟೇ ದೇಶದ್ರೋಹದ ಪ್ರಕರಣದಲ್ಲಿ JNU ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಹೇಳಿದ್ದರು.ಆ ವಿಶ್ವವಿದ್ಯಾಲಯದಿಂದ ಬಂದವರು ಉನ್ನತ ಬೌದ್ಧಿಕ ಪರಂಪರೆ ಉಳ್ಳವರು,ಅವರ ಮಾತುಗಳಿಗೆ ಮತ್ತು ಘೋಷಣೆಗಳಿಗೆ ಏನಕೇನ ದೇಶದ್ರೋಹದ ಬಣ್ಣ ಬಳಿಯುವುದು ಸರಿಯಲ್ಲ ಎಂದೂ ಸಹ ಕೆಲವು ಬುದ್ಧಿಜೀವಿಗಳು ಅಲವತ್ತುಗೊಂಡರು.ನನ್ನ ಪ್ರಶ್ನೆ ಏನೆಂದರೆ ಇಲ್ಲಿಯವರೆಗೆ ದೇಶದಲ್ಲಿ ಉನ್ನತ ಬೌದ್ಧಿಕ ಪರಂಪರೆಯನ್ನು ರೂಪಿಸಿದ್ದು JNU ಮಾತ್ರವೇ?ಅಥವಾ ಆ ವಿಶ್ವವಿದ್ಯಾಲಯದಿಂದ ಹೊರಗೆ ಬೆಳೆಯುವ ಬೌದ್ಧಿಕ ಪರಂಪರೆಗೆ ಬೆಲೆ ಇಲ್ಲವೇ?ಅವರ ಮಾತುಗಳಿಗೆ ಯಾವ ಅರ್ಥ ಕೊಡಬೇಕು?

ಸ್ವಾತಂತ್ರ್ಯ ಬಂದ ಆರಂಭದ ಕೆಲವು ವರ್ಷಗಳಲ್ಲಿ ಭಾರತಕ್ಕೆ ತಕ್ಷಣದಲ್ಲಿ ಅಭಿವೃದ್ಧಿಯತ್ತ ಸಾಗುವ ಅನಿವಾರ್ಯತೆ ಇತ್ತು.ಆ ದಿನಮಾನದ ಜನರ ಸಮಸ್ಯೆಗಳನ್ನು,ಅವಶ್ಯಕತೆಗಳನ್ನು ಸೂಕ್ಷ್ಮವಾಗಿ ಅರಿತುಗೊಂಡು ತ್ವರಿತಗತಿಯಲ್ಲಿ ಸರ್ಕಾರ ಕೆಲಸ ಮಾಡಬೇಕಾದ ಅಗತ್ಯವಿತ್ತು.ಆ ಸಮಯದಲ್ಲಿ ಕೇವಲ ರಾಜಕೀಯವಷ್ಟೇ ಅಲ್ಲದೇ ಬೇರೆ ಬೇರೆ ವಿಭಾಗಗಳಲ್ಲಿ ಉನ್ನತ ಮಟ್ಟದ ತಿಳುವಳಿಕೆ ಹೊಂದಿದ ಒಂದಷ್ಟು ವ್ಯಕ್ತಿಗಳ ಅವಶ್ಯಕತೆ ಭಾರತಕ್ಕಿತ್ತು.ಆ ವ್ಯಕ್ತಿಗಳು ತಮ್ಮ ಬೌದ್ಧಿಕ ಮಟ್ಟದ ಮೂಲಕ ಇನ್ನಷ್ಟು ಜನರನ್ನು ತಯಾರು ಮಾಡಬೇಕಿತ್ತು.ಈ ನಿಟ್ಟಿನಲ್ಲಿ ಅಂದಿನ ಪ್ರಮುಖ ಸಮಸ್ಯೆಗಳಾದ ಬಡತನ,ಅನಕ್ಷರತೆ,ಮೂಢನಂಬಿಕೆ,ಆರೋಗ್ಯ ಸೇವೆ ಮುಂತಾದ ವಿಷಯಗಳು ಪ್ರಮುಖವಾಗಿ ಬೌದ್ಧಿಕ ನೆಲೆಯಲ್ಲಿ ಚರ್ಚೆಗೊಳಪಟ್ಟವು.ಕೆಲವರು ಅವರದ್ದೇ ಆದ ಪರಿಹಾರಗಳನ್ನೂ ಕಂಡುಕೊಂಡರು.ಮತ್ತೊಂದೆಡೆ ನೆಹರೂ ಪ್ರಣೀತ ವಿಚಾರಧಾರೆಗಳನ್ನು ಪರೋಕ್ಷವಾಗಿ ವಿರೋಧಿಸುತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತೊಂದು ಬೌದ್ಧಿಕ ಪರಂಪರೆಯನ್ನು ರೂಪಿಸುವಲ್ಲಿ ಕಾರ್ಯಪ್ರವರ್ತವಾಗಿತ್ತು.ಅಂಥ ಬೌದ್ಧಿಕ ಪರಂಪರೆಯಲ್ಲಿ ಬೆಳೆದು ಬಂದ ಮಾನ್ಯ ಅಟಲ್ ಬಿಹಾರಿ ವಾಜಪೇಯಿ,ಅಡ್ವಾಣಿಯಂಥವರು ಹೇಗೆ ನಂತರದ ಕಾಲಘಟ್ಟದಲ್ಲಿ ರಾಷ್ಟ್ರವನ್ನು ರೂಪಿಸಿದರು ಎನ್ನುವುದು ಈಗ ಇತಿಹಾಸ.

ಆದರೆ ಮೊನ್ನೆ JNU ಘಟನೆ ಆದ ಮೇಲೆ ನಮ್ಮ ಬೌದ್ಧಿಕ ಪರಂಪರೆಯ ಬಗ್ಗೆ ನಾವು ಅನುಮಾನ ಪಡುವಂತಾಗಿದೆ.ಆ ಪರಂಪರೆಯಲ್ಲಿದ್ದ ಚಿಂತನೆಗಳನ್ನು ಬದಲು ಮಾಡಿ ಹೊಸ ಚಿಂತನೆಗಳ ಹರಿವಿಗೆ ನಾಂದಿ ಹಾಡಬೇಕೇನೋ ಎಂದು ಅನಿಸುತ್ತಿದೆ.ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಸಮಸ್ಯೆಗಳಾದ ಬಡತನ,ಹಸಿವು ಸ್ವಲ್ಪ ಮಟ್ಟಿಗೆ ಪರಿಹಾರಗೊಂಡಿವೆ.ದೇಶದ GDP ಹೆಚ್ಚುತ್ತಿದೆ.ಹಾಗಿರುವಾಗ ಅದೇ ಹಳಸಲು ಚಿಂತನೆಗಳನ್ನು ಹಿಡಿದುಕೊಂಡು ನಮ್ಮ ಬೌದ್ಧಿಕ ಪರಂಪರೆಯನ್ನು ಮುಂದುವರೆಸಬೇಕೇ ಅಥವಾ ಅದನ್ನು ಮತ್ತೆ Redefine ಮಾಡಬೇಕೇ ಎನ್ನುವುದು ನಮ್ಮ ಮುಂದಿರುವ ಸವಾಲು.

JNU ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಒಂದಷ್ಟು ವಿದ್ಯಾರ್ಥಿಗಳು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದರೆನ್ನಲಾಗಿದೆ.ಅಲ್ಲದೇ ಕನ್ಹಯ್ಯಾ ಕುಮಾರ್ ಮಾಡಿದ ಭಾಷಣವೂ ಬಹಳ ಪ್ರಸಿದ್ಧಿ ಪಡೆಯಿತು.ಆತ ಜಾತಿವಾದದಿಂದ,ಮನುವಾದದಿಂದ,ಹಸಿವಿನಿಂದ,ಅಸ್ಪೃಶ್ಯತೆಯಿಂದ ಆಝಾದಿ ಬಯಸುತ್ತಿದ್ದ.ಇಲ್ಲಿಯೇ ನಮಗೆ ಇವರ ಬೌದ್ಧಿಕ ಪರಂಪರೆಯ ಕುರಿತು ಆತಂಕವಾಗುವುದು.ಜನರು ವಿದ್ಯಾವಂತರಾಗಿರುವ ಈ ಕಾಲದಲ್ಲಿ ಬಹುತೇಕರು ತಮ್ಮ ತಮ್ಮ ಮನೆಗಳಲ್ಲಿ ತಾವಷ್ಟೇ ಇರುವಾಗ ಜಾತಿಯತೆಯನ್ನು ಪ್ರದರ್ಶಿಸುತ್ತಾರೆಯೇ ಹೊರತು ಮನೆಯಿಂದ ಹೊರಗೆ ಬಂದು ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ತಮ್ಮ ಜಾತಿಯನ್ನು ಮರೆಯುತ್ತಾರೆ.ಅಲ್ಲದೇ ಒಬ್ಬ ವ್ಯಕ್ತಿಯ ವಿಚಾರಗಳು,ಆತನ ಕೆಲಸ ಕಾರ್ಯಗಳು ಮುಖ್ಯವೇ ಹೊರತು ಆತನ ಜಾತಿಯಲ್ಲ ಎಂಬುದನ್ನೂ ಅನೇಕರು ಒಪ್ಪುತ್ತಾರೆ.ಹೀಗಿರುವಾಗ ಜಾತಿವಾದದಿಂದ ಮುಕ್ತಿ ಬೇಕು ಎಂದರೆ ಇವರ ಬೌದ್ಧಿಕ ಪರಂಪರೆಯ ಮೇಲೆ ನಮಗೆ ಅನುಮಾನ ಬರುವುದಿಲ್ಲವೇ?

ತಾವು ಉನ್ನತ ಬೌದ್ಧಿಕ ಪರಂಪರೆಯಿಂದ ಬಂದವರೆಂದು ಹೇಳಿಕೊಂಡು ಮನುವಾದವನ್ನು ವಿರೋಧಿಸುವ ಬಹುತೇಕರಿಗೆ ಮನು ಎಂದರೆ ಯಾರು ಎಂದು ಗೊತ್ತಿಲ್ಲ.ಮನುಸ್ಪೃತಿಯನ್ನು ಅವರು ಒಮ್ಮೆಯೂ ಓದಿಲ್ಲ.ತಮ್ಮ ಗುರುಗಳು,ಧಣಿಗಳು,ನಾಯಕರುಗಳು ಮನುವಾದದ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವಾಗ ಇವರೂ ಅವರ ಧ್ವನಿಗೆ ತಮ್ಮ ಧ್ವನಿ ಸೇರಿಸಿದ್ದಾರಷ್ಟೇ.ಇಂಥ ಬೌದ್ಧಿಕ ಪರಂಪರೆಯಿಂದ ಅವರೇ ಪ್ರಸ್ತಾಪಿಸುವ ಹಸಿವು,ಅನಕ್ಷರತೆ,ಜಾತಿವಾದ ನಿರ್ಮೂಲನೆಯಾಗುವುದೂ ಇಲ್ಲ.ತಮ್ಮ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸಲು,ತಮ್ಮ ರಾಜಕೀಯ ಅಜೆಂಡಾವನ್ನು ಪ್ರಚುರಪಡಿಸಲು ಇವರು ಭಾರತಕ್ಕೆ ಘಾತವನ್ನುಂಟು ಮಾಡಿದ ವ್ಯಕ್ತಿಗಳಾದ ಅಫ್ಜಲ್ ಗುರು,ಯಾಕೂಬ್ ಮೆನನ್’ನನ್ನು ಆರಾಧಿಸಿ ಭಾರತವನ್ನು ತುಂಡು ಮಾಡುವ ಮಾತುಗಳನ್ನು ಆಡುತ್ತಾರೆಂದರೆ ಅಂಥ ಬೌದ್ಧಿಕ ಪರಂಪರೆಯ ಕುರಿತು ನಾವು ಆತಂಕ ಪಡಬೇಕಾಗುತ್ತದೆ.ಅಲ್ಲದೇ ಆ ಪರಂಪರೆಗೆ ಪ್ರತಿಯಾಗಿ ದೇಶವನ್ನು ಒಗ್ಗೂಡಿಸುವ ಬೌದ್ಧಿಕ ಪರಂಪರೆಯನ್ನು ಬೆಳೆಸದಿದ್ದರೆ ದೇಶಕ್ಕೆ ಅಪಾಯ ಎದುರಾಗಬಹುದು.

ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರಧಾನಿಯನ್ನು ವಿನಾಕಾರಣ ಅಧಿಕಾರದಿಂದ ಕೆಳಗಿಳಿಸುವ ವಿಫಲ ಪ್ರಯತ್ನಕ್ಕೆ ಅವರು ಬಳಸಿಕೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಕತ್ತಿಯನ್ನು.ಪ್ರಧಾನಿಯನ್ನು,ಚುನಾಯಿತ ಸರ್ಕಾರವನ್ನು ಎಲ್ಲಿ ಬೇಕೆಂದರಲ್ಲಿ ಬಾಯಿಗೆ ಬಂದಂತೆ ಆಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಮೇಲೂ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎನ್ನುತ್ತಿರುವ ಇವರ ಬೌದ್ಧಿಕ ಪರಂಪರೆಯ ಬಗ್ಗೆ ನಮಗೆ ಖೇದವಿದೆ.ದೇಶದ ಯೋಧರನ್ನು,ಪೋಲೀಸರನ್ನು ನಕ್ಸಲರು ಕೊಂದಾಗ ನಕ್ಸಲರ ಕೃತ್ಯವನ್ನು ಖುಷಿಯಿಂದ ಸಂಭ್ರಮಿಸುವ ಈ ಬೌದ್ಧಿಕ ಪರಂಪರೆ ಎಂದಾದರು ದೇಶದ ಏಕತೆಯ ಬಗ್ಗೆ ಧ್ವನಿ ಎತ್ತಬಹುದು ಎಂದು ನಾವು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.ಕಾಶ್ಮೀರದ ಪ್ರತ್ಯೇಕತೆಯನ್ನು ನೇರವಾಗಿ ಬೆಂಬಲಿಸುವ ಇವರು ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಆಕ್ಷೇಪ ವ್ಯಕ್ತಪಡಿಸಿರುವುದು ವಿಶೇಷ ಸಂಗತಿಯೇನಲ್ಲ.

ಹಾಗಾಗಿ ಈ JNU ಪ್ರಕರಣದ ನಂತರವಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ.ಎಡ-ಬಲ ಪಂಥಗಳ ಬೌದ್ಧಿಕ ಪರಂಪರೆ ಈಗಾಗಲೇ ಬೆಳೆದು ಬಂದಿದೆ.ಎರಡೂ ಪಂಥದವರೂ ಇಲ್ಲಿಯವರೆಗೆ ಪರಸ್ಪರ ಆರೋಪಗಳನ್ನು ಮಾಡುತ್ತ ಕಾಲ ಕಳೆದರೇ ವಿನಃ ದೇಶವನ್ನು ಸಮಾನವಾಗಿ ಒಗ್ಗೂಡಿಸಿದ್ದು ಅಷ್ಟರಲ್ಲೇ ಇದೆ.ಎಡ-ಬಲ ಎರಡೂ ಪಂಥಗಳಲ್ಲಿನ ಒಳ್ಳೆಯ ವಿಷಯಗಳನ್ನು ಮಾತ್ರ ಒಳಗೊಂಡ ಬಹುಪಂಥೀಯ ರಾಷ್ಟ್ರೀಯತೆ,ಬಹುಪಂಥೀಯ ಬೌದ್ಧಿಕ ಪರಂಪರೆ ನಮಗೆ ಇಂದು ಬೇಕಾಗಿದೆ.ಇಂದಿನ ವಿಶ್ವವಿದ್ಯಾಲಯಗಳು,ಮಾಧ್ಯಮಗಳು ಸೆಲೆಬ್ರೆಟಿಗಳು ಹಾಗೂ ಶ್ರೀಸಾಮಾನ್ಯರ ಮೇಲೆ ಒಂದು ಹೊಸ ಬೌದ್ಧಿಕ ಪರಂಪರೆಯನ್ನು ರೂಪಿಸುವ ಹೊಣೆ ಇದೆ.ಆದರೆ ಹೊಸ ಬೌದ್ಧಿಕ ಪರಂಪರೆಯನ್ನು ರೂಪಿಸುವುದು ಅಷ್ಟು ಸುಲಭದ ಮಾತಲ್ಲ.ನಮ್ಮಲ್ಲಿನ ತಪ್ಪುಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ.ಒಂದೊಮ್ಮೆ ತಪ್ಪಿದೆ ಎಂದು ಗೊತ್ತಾದರೂ,ಆ ತಪ್ಪು ಮಾಡಲೇ ಬೇಕಾಯಿತು ಎಂದು ಸಮರ್ಥನೆಗೆ ನಿಂತುಬಿಡುತ್ತೇವೆ.ಎಲ್ಲಿಯವರೆಗೆ ಈ ಮನೋಭಾವ ಬದಲಾಗುವುದಿಲ್ಲವೋ ಅಲ್ಲಿವರೆಗೂ ಹೊಸ ಬೌದ್ಧಿಕ ಪರಂಪರೆಯನ್ನು ರೂಪಿಸುವುದು ಕಷ್ಟಸಾಧ್ಯ.

ಒಂದು ಉದಾಹರಣೆ ನೋಡೋಣ.ಯಮುನಾ ನದಿ ದಡದಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಕಾಮಗಾರಿ ನಡೆಸಲು ಭಾರತೀಯ ಸೇನೆಯನ್ನು ಬಳಸಿಕೊಂಡಿದ್ದು ವಿವಾದಕ್ಕೆ ಕಾರಣವಾಯಿತು.ಅದನ್ನು ಅನೇಕರು ವಿರೋಧಿಸಿದರು ಕೂಡ.ಆದರೆ ಕೆಲವು ರಾಷ್ಟ್ರಭಕ್ತರು ಯಾವ ಪರಿ ಇದನ್ನು ಸಮರ್ಥಿಸಿಕೊಂಡರು ಎಂದರೆ “ಅಂದು ಬೆನ್ನಿಹಿನ್ ಬೆಂಗಳೂರಿಗೆ ಬಂದಾಗ ಮೂರುದಿನ ಬೆಂಗಳೂರಿನ ವಾಯುನೆಲೆಯೇ ಮುಚ್ಚಲ್ಪಟ್ಟಿತ್ತು.ಅಂದೂ ಕೂಡಾ ಸೈನಿಕರನ್ನು ಬಳಸಿಕೊಂಡಿದ್ದರು.ಅವತ್ತು ವಿವಾದವಾಗದಿದ್ದದ್ದು ಈಗ ವಿವಾದ ಆಗಿದ್ದು ಹೇಗೆ” ಎಂದು ಕೇಳಿದರು.ಅವತ್ತು ಅವರು ಮಾಡಿದ್ದೂ ತಪ್ಪೇ.ಹಾಗಂತ ಅವರು ತಪ್ಪು ಮಾಡಿದರು,ಹಾಗಾಗಿ ನಾವೂ ಮಾಡುತ್ತೇವೆ ಎಂದರೆ ಅದನ್ನು ಒಪ್ಪುವುದು ಸಾಧ್ಯವೇ?ಅಧಿಕಾರಕ್ಕೇರಿದ ನೂರು ದಿನದೊಳಗೆ ಕಪ್ಪು ಹಣ ವಾಪಸ್ ತರಲು ಮೋದಿ ವಿಫಲವಾಗಿದ್ದನ್ನು ಪ್ರಶ್ನಿಸಿದರೆ, ಕಪ್ಪು ಹಣ ತರುವುದು ಸ್ವಲ್ಪ ಕಷ್ಟ.ಇನ್ನಷ್ಟು ಸಮಯ ಬೇಕಾಗುತ್ತದೆ.ಆದರೆ ಭಾರತದಿಂದ ಕಪ್ಪು ಹಣ ಈಗ ವಿದೇಶಕ್ಕೆ ಹೋಗುತ್ತಿಲ್ಲ ಎಂದು ಸಮರ್ಥನೆ ಕೊಡುವ ಜನರೂ ನಮ್ಮಲ್ಲಿದ್ದಾರೆ.ಹಿಂದೆ ಬಿಜೆಪಿಗೆ ಓಟು ಹಾಕಿ ನರೇಂದ್ರ ಮೋದಿಯನ್ನು ಗೆಲ್ಲಿಸಿದವರೇ ಈಗ ಮೋದಿಯನ್ನು ಪ್ರಶ್ನಿಸುತ್ತಿರುವುದನ್ನು ಕೆಲವು ಭಕ್ತರ ಕೈಯಲ್ಲಿ ನೋಡಲಾಗುತ್ತಿಲ್ಲ.ಹೊಸ ಬೌದ್ಧಿಕ ಪರಂಪರೆಯನ್ನು ಕಟ್ಟುವಾಗ ಇವುಗಳನ್ನೆಲ್ಲ ಮೀರಿ ಬೆಳೆಯಬೇಕು.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ರಾಮಮಂದಿರ ಕಟ್ಟುವುದಕ್ಕಲ್ಲ ಬದಲಿಗೆ ದೇಶವನ್ನು ಅಭಿವೃದ್ಧಿ ಮಾಡಲು ಎಂದು ಯಾರದರೂ ಒಬ್ಬ ನಿಷ್ಠಾವಂತ ಹಿಂದೂ ಹೇಳಿದರೂ ಆತನಿಗೆ ಫೇಸ್ಬುಕ್’ನಲ್ಲಿ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟುವ ಬೌದ್ಧಿಕ ಪರಂಪರೆಯೂ ನಮ್ಮಲ್ಲಿದೆ.ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಕೆಲ ಪುಂಡರು ನೈತಿಕ ಪೋಲೀಸ್’ಗಿರಿ ಮೂಲಕ ನಡೆಸುವ ಹಿಂಸೆಯನ್ನು ಆರೆಸ್ಸೆಸ್’ನ ಶಾಖೆಗೆ ತೆರಳುವ ಒಬ್ಬ ರಾಷ್ಟ್ರಭಕ್ತ ವಿರೋಧಿಸಿದರೆ ಆತನಿಗೂ ಸಂಸ್ಕಾರವಿಹೀನ ಪಟ್ಟಕಟ್ಟುವ ಬೌದ್ಧಿಕ ಪರಂಪರೆಯೂ ನಮ್ಮಲ್ಲಿದೆ.ಮೊದಲು ಇವುಗಳನ್ನೆಲ್ಲ ಪರಿಹರಿಸದೇ ನೂತನ ಬೌದ್ಧಿಕ ಪರಂಪರೆಯನ್ನು ರೂಪಿಸುವುದು ಸಾಧ್ಯವಿಲ್ಲ.

ಎಲ್ಲ ಜಾತಿ ಮತಗಳನ್ನು ಮೀರಿದ,ಎಲ್ಲ ಸಿದ್ಧಾಂತಗಳನ್ನೂ ಮೀರಿದ,ಎಂದಿಗೂ ಹಿಂಸೆಯನ್ನು ಪ್ರಚೋದಿಸದ,ದೇಶವನ್ನು ಒಗ್ಗೂಡಿಸುವ ನೂತನ ಬೌದ್ಧಿಕ ಪರಂಪರೆಯನ್ನು ರೂಪಿಸಬೇಕಿದೆ.ಅದಕ್ಕೆ ಮೊದಲು ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕಿದೆ.ನಮ್ಮ ಸಿದ್ಧಾಂತಗಳು ಸರಿ ಬೇರೆಯವರದ್ದು ಸರ್ವಥಾ ತಪ್ಪು ಎಂಬ ಮನಸ್ಥಿತಿ ಇದ್ದರೆ ಬಿಟ್ಟುಬಿಡೋಣ.ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುವುದನ್ನು ಮೊದಲು ಕಲಿತರೆ ಇನ್ನೊಬ್ಬರ ತಪ್ಪನ್ನು ಎತ್ತಿತೋರಿಸುವ ಧೈರ್ಯ ನಮಗೆ ತನ್ನಷ್ಟಕ್ಕೇ ಬರುತ್ತದೆ.ಹೊಲದಲ್ಲಿ ಕೆಲಸ ಮಾಡುವ ರೈತ,ದೇಶವನ್ನು ಕಾಯುವ ಸೈನಿಕ ಮತ್ತು ಇಂದಿನ ದಿನ ಸುಸೂತ್ರವಾಗಿ ಕಳೆದರೆ ಸಾಕೆನ್ನುವ ದೇಶದ ಕಟ್ಟಕಡೆಯ ಶ್ರೀಸಾಮಾನ್ಯನಿಗೆ ಯಾವ ಸಿದ್ಧಾಂತದಿಂದಲೂ,ಯಾವ ಬೌದ್ಧಿಕ ಪರಂಪರೆಯಿಂದಲೂ ಆಗಬೇಕಾದ್ದು ಏನೂ ಇಲ್ಲ ಎಂಬುದನ್ನು ತಿಳಿಯೋಣ.ಎಲ್ಲ ಪಂಥಗಳನ್ನು ಮೀರಿ ಒಂದು ರಾಷ್ಟ್ರ‍ೀಯತೆಯನ್ನು,ಒಂದು ನೂತನ ಬೌದ್ಧಿಕ ಪರಂಪರೆಯನ್ನು ರೂಪಿಸಲು ಸಾಧ್ಯವಾದರೆ ಈ ಶತಮಾನ ಖಂಡಿತವಾಗಿಯೂ ಭಾರತದ ಶತಮಾನವಾಗುತ್ತದೆ.ವಸುದೈವ ಕುಟುಂಬಕಂ ಪರಿಕಲ್ಪನೆ ನಿಜವಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!