ರವಿವಾರ
ಸೂರ್ಯಕಿರಣಗಳು ಮುತ್ತಿಟ್ಟಾಗಲೇ
ಅರಿವಾದದ್ದು ನನಗೆ ಬೆಳಗಾಯಿತೆಂದು
ರವಿವಾರ; ರವಿಯೇ ಬರಬೇಕಾಯ್ತು…
ಸ್ವಪ್ನಸುಂದರಿಯ ಮೃದು ತೋಳಿನಿಂದ
ನನ್ನ ಬಿಡಿಸುವ ಪ್ರಯತ್ನಕ್ಕಿಂದು
ಅಲೆಮಾರಿ
ಅಲೆಯುತಿಹೆ ನಿನ್ನೆದೆಯ ಬೀದಿಯಲಿ
ಅಲೆಮಾರಿಯಂತೆ
ನೀಡೆನಗೆ ಒಂದಿಷ್ಟು ಜಾಗವ
ಇಳಿಸುವೆ ನನ್ನ ಕನಸುಗಳ ಕಂತೆ
ಕಂಗಳಲಿ ಕಳೆದಾಗ…
ನಾ ನಿನ್ನ ಕಂಗಳಲಿ
ಕಳೆದುಹೋಗೋ ಆ ದಿನ
ಹುಡುಕುವ ಯತ್ನವನು
ಖಂಡಿತ ಮಾಡೆ ನಾ…
ಬಾನು ನಾಚಿದಾಗ
ಮೂಡಣ ಬಾನು
ನಾಚಿ ಕೆಂಪೇರಿದೆ,
ಸೂರ್ಯ ಈ ಮುಂಜಾನೆಯಲ್ಲೇ
ಮುದ್ದಿಸಿದನೇ ಅವಳ…???!!!
ನೆನಪಿನ ಸೆರೆ
ತುಂತುರಿನ ಸ್ಪರ್ಷಕ್ಕೆ
ಅರಳಿತ್ತು ಹೂಬನವು
ನಿನ್ನ ನೆನಪಿನ ಸೆರೆಗೆ
ಮರಳಿತ್ತು ಈ ಮನವು
ಮಲ್ಲಿಗೆ ಮಾಲೆ…
ಸಹ್ಯಾದ್ರಿಯ ಒಡಲಿಂದ
ಹಾಲ್ನೊರೆಯ ಜಲಪಾತ ಧುಮ್ಮಿಕ್ಕಿದಂತೆ
ಅವಳ ಇಳಿಬಿಟ್ಟ ಕೂದಲನ್ನು
ಮಲ್ಲಿಗೆಯ ಮಾಲೆ ಅಲಂಕರಿಸಿತ್ತು
ಬರೆಯದ ಸಾಲು…
ನಾ ಬರೆಯದೆ ಉಳಿದ ಸಾಲುಗಳೆಲ್ಲ
ಇರುವುದು ನಿನ್ನದೇ ಕುರಿತು
ನಾ ಬರೆದು ಹರಿದ ಹಾಳೆಗಳೆಲ್ಲ
ನಿನ್ನದೇ ನೆನಪಿನ ಗುರುತು