ಕಳೆದವಾರವಷ್ಟೇ ಅವಿಶ್ರಾಂತ ಜೀವನವನ್ನು ನಡೆಸುವ ಕವಲುತೋಕೆಗಳ ಬಗ್ಗೆ ತುಸು ತಿಳಿದುಕೊಂಡಿರಿ. ಈ ವಾರ swift ಗಳ ಬಗೆಗೆ ನೋಟ ಹರಿಸೋಣ. ಅಯ್ಯೋ swift ಗೊತ್ತಿಲ್ಲದಿರುವುದೇನು? ಮಾರುತಿ ಕಂಪೆನಿಯ ಅತ್ಯುನ್ನತ ಕಾರ್’ಗಳಲ್ಲಿ ಒಂದು swift, ಎಲ್ಲಾ ಗೊತ್ತು ಬಿಡಿ! ಎಂದಿರಾ!
ಊಹೂ. . . . ಅಲ್ಲ.
swift ಎಂದರೆ ವೇಗ/ಚುರುಕು, ಅಂಥಾ ಚುರುಕಿನ ಹಕ್ಕಿಯೇ swift”.
ಏಪೋಡಿಫಾರ್ಮಿಸ್ ಗಣದ ಏಪೋಡಿಡೆ ಕುಟುಂಬಕ್ಕೆ ಸೇರಿದ ಹಕ್ಕಿ ಈ ಸ್ವಿಫ್ಟ್. ಪ್ರಪಂಚದಾದ್ಯಂತ ಸುಮಾರು 100 ಪ್ರಭೇದದ ಸ್ವಿಫ್ಟ್’ಗಳು ಲಭ್ಯ. ಇವುಗಳನ್ನು swift, swiftlet ಮತ್ತು needletail ಎಂದು ಮೂರು ವಿಭಾಗಗಳಲ್ಲಿ ವರ್ಗೀಕರಿಸಬಹುದು.
ಈ ವೇಗದೂತಗಳಲ್ಲಿ ಕೆಲವು ಪ್ರಭೇದಗಳು ಗಂಟೆಗೆ 25 – 30 ಕೀಮೀ ವೇಗದಲ್ಲಿ ಚಲಿಸಿದರೆ ಮತ್ತೆ ಕೆಲವು ಗುಂಪು 100-160 ಕೀಮೀ ವೇಗದಲ್ಲಿರುತ್ತದೆ. ನೀಡಲ್ ಟೈಲ್ ಪ್ರಭೇದದ swift 240-300 ಕೀಮೀ ವೇಗದಲ್ಲಿ ಹಾರುವುದೂ ಉಂಟು. ಹೆಚ್ಚಿನ ಸ್ವಿಫ್ಟ್ಗಳು ಗಾಳಿಯ ದಿಕ್ಕಿನಲ್ಲೇ ಚಲಿಸುತ್ತವೆ. ಗಾಳಿಯ ವೇಗದೊಂದಿಗೆ ತೇಲಿ ಹೋಗುವ ಕಾರಣ ಅಷ್ಟರ ಮಟ್ಟಿಗೆ ವೇಗೋತ್ಕರ್ಷ ಸುಲಭ.
ಈ ಸ್ವಿಫ್ಟ್’ಗಳು ಹಾರುವಾಗ ಅದರ ರೆಕ್ಕೆ ಬಡಿತವೇ ನಮಗೆ ಕಾಣಿಸುವುದಿಲ್ಲ, ಅಷ್ಟು ವೇಗವಾಗಿರುತ್ತದೆ ಇದರ ಬಡಿತ, ಮತ್ತು ಹಾರಾಟ ನಿರಂತರ. ಸಂತಾನೋತ್ಪತ್ತಿ ಸಮಯ ಬಿಟ್ಟರೆ ಎಂದೂ ಈ ಹಕ್ಕಿಗಳು ಕೂರುವುದಿಲ್ಲವಂತೆ. ಊಟ, ನಿದ್ರೆ, ಮೈಥುನ ಎಲ್ಲವೂ ಹಾರಿಕೊಂಡೇ!
ಹೌದು, ಈ ಹಕ್ಕಿಗಳಿಗೆ ಬಲು ಅಗಲವಾದ ಬಾಯಿಯಿರುತ್ತದೆ. ಹಾರಿಕೊಂಡೇ ಆಗಸದಲ್ಲಿ ಹಾರಾಡುವ ಸಣ್ಣ ಸಣ್ಣ ಕೀಟಗಳನ್ನು ತಿನ್ನುತ್ತವೆ. ಮಳೆಹನಿಯು ಭೂಮಿಗೆ ಸೇರುವ ಮೊದಲೇ ಆ ಹನಿಯನ್ನು ನುಂಗಿಬಿಡುವ ಸಾಮರ್ಥ್ಯ ಈ ಸ್ವಿಫ್ಟ್’ಗಳಿಗಿವೆ. ರಾತ್ರಿ ಸಮಯದಲ್ಲೂ ಇದರದ್ದು ನಿರಂತರ ಹಾರಾಟ. ಹಾರಿಕೊಂಡೇ ತಲೆಯನ್ನು ರೆಕ್ಕೆಯ ನೇಲಿಟ್ಟು ವಿಶ್ರಮಿಸುತ್ತವೆ. ತನ್ನ ಜೀವನದ ಹೆಚ್ಚಿನ ಪಾಲನ್ನು ಬಾನಿನಲ್ಲೇ ಕಳೆಯುವ ಇವು ಬಾನಾಡಿ ಲೋಕದ ನಿಜವಾದ ಬಾನಾಡಿ! ಹಾಗಾಗಿ ಇದಕ್ಕೆ ನಮ್ಮ ಅಚ್ಚ ಕನ್ನಡದ ಹೆಸರೇ ಬಾನಾಡಿ ಹಕ್ಕಿ.
ಈ ಬಾನಾಡಿಗಳಿಗೆ ಇತರೆ ಹಕ್ಕಿಗಳಂತೆ ಉದ್ದನೆಯ ಬಾಲವಿಲ್ಲ. ಬದಲಾಗಿ ಇದರ ರೆಕ್ಕೆಯು ಉದ್ದವಿರುತ್ತದೆ. ಈ ಉದ್ದನೆಯ ರೆಕ್ಕೆ ಹಾರುವಾಗ ದಿಕ್ಕನ್ನು ಸೂಚಿಸುತ್ತದೆ. ( ಉಳಿದ ಹಕ್ಕಿಗಳು ಬಾಲದ ಮುಖಾಂತರ ದಿಕ್ಕನ್ನು ನಿಶ್ಚಯಿಸುತ್ತವೆ.)
ಹೀಗೆ ಸದಾ ತಿರುಗಿಕೊಂಡೇ ಇರುವ ಈ ಬಾನಾಡಿಗೆ ಬೈರುಂಡೆ ಎಂದೂ ಹೆಸರುಂಟು. ಊರಿಂದೂರಿಗೆ ತಿರುಗುವ
ಬೈರಾಗಿಯನ್ನು ಈ ಹೆಸರು ನೆನೆಪಿಸುವುದು, ಈ ಬೈರುಂಡೆಗೆ ಮೊದಲೇ ತಿಳಿಸಿದಂತೆ ರೆಕ್ಕೆಗಳು ಸಪೂರ, ಉದ್ದ ಮತ್ತು ಚೂಪು. ಮೋಟುಬಾಲ, ಪುಟ್ಟ ಕೊಕ್ಕು, ಅಗಲಬಾಯಿ. ಬಾಯಿ ಕಣ್ಣಿನವರೆಗೂ ತೆರೆದಿರುತ್ತದೆ. ಕಾಲುಗಳು ತುಂಬಾ ಚಿಕ್ಕವು. ಹಕ್ಕಿಯ ಭಾರವನ್ನೂ ಹೊರಲಾಗದಷ್ಟು ಚಿಕ್ಕವು. ಹಾಗಾಗಿ ಈ ಹಕ್ಕಿಗೆ ನೆಲದ ಮೇಲಾಗಲೀ ಅಥವಾ ರೆಂಬೆಯ ಮೇಲಾಗಲೀ ಕೂರಲಾಗುವುದಿಲ್ಲ. ಯಾಕೆಂದರೆ ಕಾಲಿನ ಶಕ್ತಿಯೆಲ್ಲವೂ ರೆಕ್ಕೆಗೆ ಹೋಗಿದೆ ಎಂದು ಬೇಕಾದರೂ ನಾವು ವಾದ ಮಂಡಿಸಬಹುದು. ಇಂಥಾ ಸಣ್ಣ ಕಾಲುಗಳಿಗೆ ಬಲು ಚೂಪಾದ ಉದ್ದನೆಯ ಉಗುಗಳಿವೆ. ಈ ಉಗುರಿನ ಸಹಾಯದಿಂದ ಇವು ಸಂತಾನೋತ್ಪತ್ತಿ ಸಮಯದಲ್ಲಿ ಎಲ್ಲಿ ಬೇಕಾದರೂ ನೇಲಬಲ್ಲವು. ಪ್ರಪಾತಕ್ಕೆ ಮುಖಮೇಲಾಗಿ ಅಂಟಿಕೊಳ್ಳೂವ ಸಾಮರ್ಥ್ಯ ಇವಕ್ಕಿದೆ.
ಸದಾ ಗಾಳಿಯಲ್ಲೆ ತೇಲಿಕೊಂಡಿರುವ ಈ ಹಕ್ಕಿಗೆ ಸಂಸ್ಕೃತದಲ್ಲಿ “ವಾತಾಶಿ” ಎಂದು ಕರೆಯುವರು. ವಾತಾಶಿ ಹಿಂದಿ ಪ್ರಾಂತ್ಯದವರಿಗೆ “ಬಾತಾಶಿ” ಯಾಯಿತು. ಹೀಗೆ ಈ ವಾಯುಪುತ್ರನಿಗೆ ಹಲವು ಹೆಸರುಗಳು.
ನೀವು ದಾರಿಯಲ್ಲಿ ಹೋಗುವಾಗ ಅಲ್ಲಲ್ಲಿ ಎಂಜಲು ಉಗುಳುವವರನ್ನು ನೋಡಿದ್ದೀರಿ. ರಸ್ತೆ ಬದಿಯಲ್ಲಿ ಮಾಡುವ ಖಾದ್ಯಗಳಿಗೆ, ಅಥವಾ ನಿಮ್ಮಮ್ಮ ಮಾಡುವ ನೆಚ್ಚಿನ ಭಕ್ಷಗಳಿಗೆ ಜೊಲ್ಲು ಸುರಿಸಿದ್ದೀರಿ. ನಾವು ತಿಂದ ಆಹಾರದಲ್ಲಿ ಪ್ರಮುಖವಾದ ಶರ್ಕರಪಿಷ್ಠ (Carbohydrate) ವನ್ನು ಜೀರ್ಣ ಮಾಡುವ ನಮ್ಮ ಜೊಲ್ಲಿನ ಬಗೆಗೆ ಅರಿತಿರುವಿರಿ. ಅತಿಯಾಗಿ ದಾಹವಾದಾಗ ಜೊಲ್ಲನ್ನು ಉತ್ಪತ್ತಿ ಮಾಡಿ ಸ್ವಲ್ಪ ಮಟ್ಟಿಗೆ ಸಮಾದಾನ ಪಟ್ಟುಕೊಂಡ ಅನುಭವವಿರಬಹುದು. ಅಷ್ಟೇ ಏಕೆ? ಅವರಿವರ ಎಂಜಲು ಕಾಸಿಗೆ ಬಾಯಿ ಬಿಡುವ ಅನೇಕರನ್ನು ಕಂಡಿರಬಹುದು. ಹುಡುಗಿಯರಿಗಾಗಿ ಜೊಲ್ಲು ಸುರಿಸುವ ಪಡ್ಡೆ ಐಕಳನ್ನು ನೋಡಿರುವಿರೇನೋ? ನಾಯಿಯ ಜೊಲ್ಲಿನ ಮೂಲಕ ಹರಡುವ ಹುಚ್ಚುನಾಯಿ ರೋಗ (Rabies) ಬಗೆಗೆ ಬಲ್ಲವರುಂಟು. ಆದರೆ ಜೊಲ್ಲಿನಲ್ಲೇ ಮನೆಮಾಡುವವರನ್ನು ಬಲ್ಲಿರಾ?
ಹೌದೇ ಹೌದು! ಬೈರುಂಡೆಗಳು ತಮ್ಮ ಕಪ್ ಆಕಾರದ ಮನೆಯನ್ನು ತಮ್ಮ ಜೊಲ್ಲಿನಿಂದ ಕಟ್ಟುತ್ತವೆ. ಆ ಜೊಲಿಗೆ ಸ್ವಲ್ಪ ಕಸಕಡ್ಡಿಯನ್ನು ಅಂಟಿಸುತ್ತವೆ. ಬಲು ಪುಟ್ಟ ಗೂಡು, 2-6 ಮೊಟ್ಟೇಗಳು (ಪ್ರಭೇದಕ್ಕನುಸಾರ). ಗಂಡು ಹೆಣ್ಣು ಎರಡೂ ಕಾವು ಕೊಡುತ್ತವೆ. ಮೊಟ್ಟೆ ಒಡೆಯುತ್ತಲೇ ಮರಿಗಳು ಆಹಾರಕ್ಕೆ ಹಪಹಪಿಸುತ್ತವೆ. ಒಂದು ತಾಯಿ ಬಾನಾಡಿ ಒಂದು ಗಂಟೆಗೆ ಸುಮಾರು 400 ಕೀಟಗಳನ್ನು ಹಿಡಿದು ತನ್ನಲ್ಲಿ ಶೇಖರಿಸಿ, ಮರಿಯ ಹತ್ತಿರ ಬಂದು ತಿಂದ ಕೀಟಗಳನ್ನು ಒಂದೊಂದಾಗಿ ವಾಕರಿಸಿ ಹೊರತೆಗೆದು ಮರಿಗಳಿಗೆ ಉಣಿಸುವುದಂತೆ! 25 ದಿನಗಳ ನಂತರ ಮರಿ ಹಾರಾಟ ಪ್ರಾರಂಭಿಸುತ್ತದೆಯಂತೆ. ಒಮ್ಮೆ ಹಾರಲು ಪ್ರಾರಂಭಿಸಿದ ಬೈರುಂಡೆ ಮತ್ತೆ ತಾನು ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿ ಆರಂಭಿಸುವ ತನಕವೂ ಹಾರುತ್ತಲೇ ಇರುತ್ತದಂತೆ. ಈ ಅವಧಿ 2-4 ವರ್ಷವೂ ಆಗಬಹುದಂತೆ. ನಾನಂತೂ ಇದುವರೆಗೆ ಯಾವ ಬೈರುಂಡೆಯೂ ಕುಳಿತ್ತದ್ದನ್ನು ಕಂಡಿಲ್ಲ. ನಿಜಕ್ಕೂ ಹೀಗೆ ವರ್ಷಗಟ್ಟಲೆ ಕುಳಿತುಕೊಳ್ಳದೇ ಹಾರುತ್ತವೆಯೋ? ಇವೆಲ್ಲ ಬೈರುಂಡೆಯ ಬಗೆಗೆ ಉತ್ಪ್ರೇಕ್ಷೆಯೊ? ನನಗಂತೂ ಗೊತ್ತಿಲ್ಲ. ಗೊತ್ತಿರುವವರು ಹೇಳಿದ್ದನ್ನು ಒಪ್ಪಿಕೊಳ್ಳುವ ಆಸ್ತಿಕವಾದವನ್ನವಲಂಬಿಸದೆ ನನಗೆ ಬೇರೆ ಫತಿ ಇಲ್ಲ.
ಇನ್ನಷ್ಟು ಕೌತುಕಗಳು, ಕರ್ನಾಟಕದಲ್ಲಿ ಸಿಗುವ ಬಾನಾಡಿಗಳ ಬಗೆಗೆ ಮುಂದಿನ ಭಾಗದಲ್ಲಿ… … …
ಚಿತ್ರಗಳು : ಶಿವಶಂಕರ್ ಕಾರ್ಕಳ, ವಿಜಯಲಕ್ಷ್ಮಿ ರಾವ್.