Featured ಅಂಕಣ

“ನನ್ನ ಹೆಸರು ಸ್ಮೃತಿ ಇರಾನಿ…”

“ನನ್ನ ಹೆಸರು ಸ್ಮೃತಿ ಇರಾನಿ, ನಿಮಗೆ ಧೈರ್ಯ ಇದ್ರೆ ನನ್ನ ಜಾತಿ ಯಾವುದೆಂದು ಹೇಳಿ; ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ಯಾವತ್ತಿಗೂ ಕ್ಷಮೆ ಕೇಳಲ್ಲ; ಹಿಂದೆ ಆರು ನೂರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಸ್ಥಳಕ್ಕೆ ಎರಡೆರಡು ಬಾರಿ ಭೇಟಿ ಕೊಟ್ಟಿದ್ದನ್ನು ನೀವು ಯಾವತ್ತಾದ್ರೂ ನೋಡಿದ್ದೀರಾ?” ಹೀಗೆ ಸ್ಮೃತಿ ಇರಾನಿಯವರು ಮೊನ್ನೆ ಗುಡುಗಿದಾಗ ಬಹುಷಃ ನೀವೆಲ್ಲರೂ ರೋಮಾಂಚನಗೊಂಡಿರುತ್ತೀರಾ. ನೀವು ಏನು ಮಹಾ, 24ನೇ ತಾರೀಖಿನ ಅವರ ಭಾಷಣವನ್ನು ಕೇಳಿ, ಎಂಥಹ ವಿರೋಧಿಗೂ ಅವರ ನಡತೆ, ಮಾತಿನಲ್ಲಿದ್ದ ಆತ್ಮವಿಶ್ವಾಸ ಮತ್ತು ವಾಕ್ಚತುರತೆಯ ಬಗ್ಗೆ ಮೆಚ್ಚುಗೆಯಾಗಿರುತ್ತದೆ. ಇವರ ಖ್ಯಾತಿ ಕೇವಲ ಮಂತ್ರಿಯಾದ ಮೇಲೊ, ಅಥವ ರಾಜಕೀಯಕ್ಕೆ ಬಂದ ಮೇಲೊ ಆದದ್ದಲ್ಲ! ಇವರು ಬಹಳ ಮುಂಚೆಯಿಂದಾನೆ ಮಾಡೆಲಿಂಗ್ ಹಾಗು ಕಿರುತೆರಯ ರಂಗಗಳಲ್ಲಿ ಫ಼ೇಮಸ್! ನಿಜ, ಏಕ್ತಾ ಕಪೂರಿನ “ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥಿ” ಧಾರವಾಹಿಯಿಂದ ಸ್ಮೃತಿಯವರಿಗೆ ಒಂದು ಖ್ಯಾತಿ ಹಾಗೂ ಪ್ರಸಿದ್ಧಿ ಸಿಕ್ಕಿದ್ದು.

ಇವತ್ತು ರಾಜಕೀಯ ರಂಗದಲ್ಲಿ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಸ್ಮೃತಿಗೆ ಅದು ಸುಖಾ ಸುಮ್ಮನೆ ದೊರೆತ ಬಳುವಳಿಯಲ್ಲ. ಅವರ ಜೀವನ ಎಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ಗೋಲ್ಡನ್ ಸ್ಪೂನ್’ನಲ್ಲಿ ತಿಂದುಂಡು ಬೆಳೆದವರೆಲ್ಲರಿಗೂ ಸವಾಲೆಸೆಯುವ ಮಟ್ಟಕ್ಕೆ ಬೆಳೆದಿರುವ ಇರಾನಿ ಎಂದೂ ಗೋಲ್ಡನ್ ಸ್ಪೂನ್’ನಲ್ಲಿ ತಿಂದಿಲ್ಲ.

ಹುಟ್ಟಿದ್ದು 23/03/1975 ರಲ್ಲಿ. ಇವರ ನಾಮಧೇಯ “ಸ್ಮೃತಿ ಮಲ್ಹೋತ್ರ”. ಇವರ ತಂದೆ ಮೂಲತಃ ಪಂಜಾಬ್ ಪ್ರಾಂತದವರು ಮತ್ತು ತಾಯಿ ಪಶ್ಚಿಮಬಂಗಾಳದವರು. ತಂದೆ ಒಂದು ಖಾಸಗಿ ಕೊರಿಯರ್ ವ್ಯಾಪಾರವನ್ನು ನಡೆಸುತ್ತಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ಮೃತಿಯವರು, ನವ ದೆಹೆಲಿಯ ’ಹೋಲಿ ಚೈಲ್ಡ್ ಆಗ್ಜೀಲಿಯಂ ಸ್ಕೂಲ್’ನಲ್ಲಿ (Holy Child Auxilium School) ನೆರೆವೇರಿಸಿದ್ದು. ಚಿಕ್ಕಂದಿನಿಂದನೆ ರಾಷ್ಟ್ರೀಯ ಸ್ವಯಂಸ್ವಕ ಸಂಘದ (ಆರ್.ಎಸ್.ಎಸ್) ವಿಚಾರಗಳಿಗೆ ಪ್ರಭಾವಿತರಾದವರು ಸ್ಮೃತಿ ಇರಾನಿಯವರು. ಸಹಜವಾದ ದೇಶಾಭಿಮಾನ ಮೂಡಿಸುವ ಸಂಘ-ವಾತಾವರಣದಲ್ಲಿ ಬೆಳೆದಿದ್ದು, ರಾಷ್ಟ್ರೀಯತೆಯೆಂಬುದು ಸಹಜವಾಗಿಯೇ ಇವರ ಮೈಯಲ್ಲಿ ಸೊಂಕಿತ್ತು. ಇವರ ತಂದೆ ಆರ್.ಎಸ್.ಎಸ್’ನ ಸ್ವಯಂಸೇವಕರಾದರೆ, ತಾಯಿ ಅಂದಿನ ಜನ-ಸಂಘ ಪಾರ್ಟಿಯಲ್ಲಿ ಇದ್ದವರು.

ಸ್ಮೃತಿಯ ತಂದೆ-ತಾಯಿಗೆ ಒಟ್ಟು 3 ಹೆಣ್ಣುಮಕ್ಕಳು. ತಮ್ಮ ಒಡಹುಟ್ಟಿದವರಾದ ಮೂವರಲ್ಲಿ ಮೊದಲನೆಯವರಾದ ಸ್ಮೃತಿಯವರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಸೇರ್ಪಡೆಯಾದರು. ತನ್ನ ಕುಟುಂಬಕ್ಕೆ ತಾನು ನೆರವಾಗಬಹುದೆಂಬ ಕನಸನ್ನು ಹೊತ್ತು ಈಕೆ ಕೆಲಸ ಮಾಡಲು ನಿಶ್ಚಯಿಸಿದರು. ಆಗ ಅವರು ಬಂದದ್ದೆ ಮಾಡೆಲಿಂಗ್ ಕ್ಷೇತ್ರಕ್ಕೆ. ತಮ್ಮ ಕೆಲಸದ ಪ್ರಾರಂಭಿಕ ದಿನಗಳಲ್ಲಿ ತಾನು ಪತ್ರಕರ್ತೆಯಾಗಬೇಕೆಂಬ ಆಸೆಯನ್ನು ಹೊತ್ತಿದ್ದರು. ಆದರೆ ಪ್ರತಿಷ್ಠಿತ ವಾರ್ತಾ ಚಾನೆಲ್ ಒಂದು ಇವರ ಅರ್ಜಿಯನ್ನು ತಿರಸ್ಕರಿಸಿದ ನಂತರ ಪತ್ರಿಕೋದ್ಯಮ ಸೇರುವ ಕನಸು ನುಚ್ಚು ನೂರಾಯಿತು. ’ಆದದ್ದೆಲ್ಲಾ ಒಳಿತೇ ಆಯಿತು’ ಎಂಬ ದಾಸರಪದ ಕೇಳಿಲ್ಲವೆ? ಇದು ಸ್ಮೃತಿಯವರ ಜೀವನದಲ್ಲಿ ಅಕ್ಷರಶಃ ನಿಜವಾಯಿತು. ಮುಂದೆ ಕಿರುತೆರೆಯಲ್ಲಿ ಅವರು ಕಂಡ ಯಶಸ್ಸೇ ಇದಕ್ಕೆ ಸಾಕ್ಷಿ!

1998ರ “Femina Miss India” ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದು, ಇವರ ಮಾಡೆಲಿಂಗ್ ಕ್ಷೇತ್ರದ ಗರಿಮೆಯೆಂದೇ ಹೇಳಬಹುದು. ಈ ಸ್ಪರ್ಧೆಗೆಂದು ಅವರ ತಂದೆಯ ಹತ್ತಿರ ₨ 2,00,000/- ಸಾಲವನ್ನು ಪಡೆದಿದ್ದರು. ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಾಗದೆ, ಹಣ ವಾಪಸ್ ಮಾಡಲು ಆಗಲಿಲ್ಲ. ತಂದೆಯ ಹಣ ತೆಗೆದುಕೊಳ್ಳುವುದು ಸರಿಯಲ್ಲ, ಅವರಿಗೆ ಭಾರವಾಗಬಾರದೆಂದು, ಸ್ವಂತವಾಗಿ ದುಡಿಯಲು ಪ್ರಾರಂಭಿಸಿದರು. ತಮ್ಮ ಈ ಕಷ್ಟಕಾಲದಲ್ಲಿ ‘McDonalds ರೆಸ್ಟೋರೆಂಟ್’ನಲ್ಲಿ ಜೀವನಕ್ಕಾಗಿ ಕೆಲಸ ಮಾಡಬೇಕಾಗಿ ಬಂತು. ಮೇಜನ್ನು ಸ್ವಚ್ಛ ಮಾಡುವುದು, ಬರ್ಗರ್ ಸರ್ವ್ ಮಾಡುವುದು, ನೆಲ ಒರೆಸುವುದು, ಹೀಗೆ ಹಲವಾರು ಕೆಲಸವನ್ನು ಮಾಡಿ ಒಂದಷ್ಟು ಸಂಪಾದನೆ ಮಾಡಿದರು ಸ್ಮೃತಿ. . ಕಷ್ಟ ಪಟ್ಟು ತಮ್ಮ ತಂದೆಯ ಹಣವನ್ನು ವಾಪಸ್ಸು ಮಾಡಿದರು.

ಮಾಡೆಲಿಂಗ್’ನಲ್ಲಿ ಕೆಲವು ವರ್ಷಗಳು ಕಳೆದ ನಂತರ ಕಿರುತೆರೆಯಲ್ಲಿ ನಟಿಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ನೆರವಾಗಿದ್ದು “ಸ್ಟಾರ್ ಪ್ಲಸ್” ಚಾನೆಲ್ ಮತ್ತು ನಿರ್ದೇಶಕಿ “ಏಕ್ತಾ ಕಪೂರ್”. ಈ ಕಾಲಘಟ್ಟವೆ ಸ್ಮೃತಿಯವರ ಜೀವನದಲ್ಲಿ ಒಂದು ಹೊಸ ತಿರುವು ತಂದದ್ದು. 2000ರಲ್ಲಿ ಪ್ರಾರಂಭವಾದ ಬಾಲಾಜಿ ಪ್ರೋಡಕ್ಷನ್ಸ್ ಅವರ “ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥಿ” ಎಂಬ ಹಿಂದಿ ಧಾರವಾಹಿಯಲ್ಲಿ ಮುಖ್ಯ ಪಾತ್ರವಾದ “ತುಳ್ಸಿ ವಿರಾನಿ” ಎಂಬ ಪಾತ್ರವನ್ನು ನಿರ್ವಹಿಸಿದರು. ಹೇಗೆ ಕನ್ನಡ ಚಿತ್ರರಂಗದಲ್ಲಿ ರೌಡೀಜ಼ಮ್ ಚಿತ್ರಗಳಿಗೆ ಶಿವಣ್ಣರವರ “ॐ” ಚಿತ್ರ ಪ್ರೇರಣೆಯಾಗಿದೆಯೋ, ಹಾಗೆ “ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥಿ” ಎಂಬ ಧಾರವಾಹಿಯು ಅದರ ನಂತರ ಬಂದಂಥಹ ಎಲ್ಲಾ “ಫ್ಯಾಮಿಲಿ-ಕೇಂದ್ರಿತ” ಅಥವ “ಸೋಪ್ ಒಪೆರಾ” ಧಾರವಾಹಿಗಳಿಗೆ ಪ್ರೇರಣೆಯಾಯ್ತು (ನಿಜ ರೂಪದಲ್ಲಿ “ಅತ್ತೆ-ಸೊಸೆ-TRP” ಆಧಾರಿತ ಧಾರವಾಹಿಗಳು). ಇರಲಿ, ಈ ಧಾರವಾಹಿಯಲ್ಲಿ ಸ್ಮೃತಿ ಇರಾನಿಯವರ “ತುಳ್ಸಿ ವಿರಾನಿ” ಪಾತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯ್ತು. ಮನೆ-ಮನೆಗಳಲ್ಲಿ, ಒಬ್ಬ “ಆದರ್ಶ ಮಹಿಳೆ” ಎಂಬಂತೆ ಎಲ್ಲಾ ಹೆಣ್ಣುಮಕ್ಕಳು ಈ ಪಾತ್ರವನ್ನು ವೀಕ್ಷಿಸುತ್ತಿದ್ದರು. ಎಷ್ಟರ ಮಟ್ಟಿಗೆ “ತುಳ್ಸಿ ವಿರಾನಿ” ಎಂಬ ಪಾತ್ರ ಜನರ ಮನಸ್ಸನ್ನು ಹೊಕ್ಕಿತ್ತು ಎಂದರೆ, ಒಮ್ಮೆ ಧಾರವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಮಂದಿರಾ ಬೇಡಿಯವರನ್ನು ನಿಜ ಜೀವನದಲ್ಲಿ “ತುಳ್ಸಿ ಫಾನ್” ಆದ ಓರ್ವ ಹಲ್ಲೆ ಮಾಡಿದ್ದು ಉಂಟು. ಧಾರವಾಹಿಯಲ್ಲಿ ತುಳ್ಸಿಯ ವೈರಿಯಾದ ಮಂದಿರಾಳನ್ನು ನಿಜ ಜೀವನದಲ್ಲಿ ಹಲ್ಲೆ ಮಾಡಬೇಕಾದರೆ, ಆ ಪಾತ್ರವನ್ನು ಜನ ಹೇಗೆ ಸ್ವೀಕರಿಸಿರಬೇಕು ಎಂದು ಒಮ್ಮೆ ಊಹಿಸಿಕೊಳ್ಳಿ!

2001ರಲ್ಲಿ ಜ಼ುಬಿನ್ ಇರಾನಿ ಎಂಬ ಪಾರ್ಸಿ ಜನಾಂಗದ ಉದ್ಯಮಿಯೊಬ್ಬರನ್ನು ಸ್ಮೃತಿ ಮದುವೆಯಾದರು. ಅವತ್ತಿನಿಂದ ಸ್ಮೃತಿ ಮಲ್ಹೋತ್ರ ಎಂಬ ನಾಮಧೇಯ ಸ್ಮೃತಿ ಇರಾನಿ ಎಂದಾಯಿತು. ಜ಼ುಬಿನ್ ಮತ್ತು ಸ್ಮೃತಿ ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರಾಗಿದ್ದರಂತೆ. ಇವರಿಬ್ಬರಿಗೆ ಜ಼ೋಹರ್ (Zohr) ಮತ್ತು ಜ಼ೋಯಿಶ್ (Zoish) ಎಂಬ ಹೆಸರಿನ 2 ಮಕ್ಕಳು. ತನ್ನ ಸವತಿಯ ಮಗಳಾದ ಶಾನೆಲ್ಲೆಯನ್ನು (Shanelle) ಕೂಡ ಇವರು ಸಾಕುತ್ತಿದ್ದಾರೆ. ಎಲ್ಲರೂ ಸಂತೋಷದಿಂದ ಒಂದು ಅವಿಭಕ್ತ ಕುಟುಂಬವಾಗಿ ಸಂಸಾರವನ್ನು ಸಾಗಿಸುತ್ತಿದ್ದಾರೆ.

ರಾಜಕೀಯದಲ್ಲಿ ಆಸಕ್ತಿಯುಳ್ಳವರಾಗಿ, 2003ರಲ್ಲಿ ಸ್ಮೃತಿಯವರು ಭಾರತೀಯ ಜನತಾ ಪಕ್ಷವನ್ನು (ಭಾ.ಜ.ಪ) ಸೇರಿಕೊಂಡರು. 2004ರಲ್ಲಿ ಭಾ.ಜ.ಪ. ದ ಮಹಾರಾಷ್ಟ್ರ ಘಟಕದ ಯುವ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 2004ರ ಡಿಸೆಂಬರ್ ತಿಂಗಳಲ್ಲಿ “ಗೋಧ್ರ ಹತ್ಯಾಖಾಂಡ”ದ ಕುರಿತಾಗಿ ಅಂದಿನ ಗುಜರಾತಿನ ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರು ರಾಜಿನಾಮೆ ನೀಡಬೇಕೆಂದು “ಆಮರಣ ಉಪವಾಸಕ್ಕೆ” ಕುಳಿತಿದ್ದರು. ಇದು ಆಶ್ಚರ್ಯವಾದರು ನಿಜ; ವಿಚಿತ್ರವಾದರು ಸತ್ಯ. ಭಾ.ಜ.ಪದ ಹಿರಿಯ ನಾಯಕರ ಒತ್ತಾಯದ ಮೇರೆಗೆ, ಸ್ಮೃತಿಯವರು ಉಪವಾಸ ನಿಲ್ಲಿಸಿದರು. ನಿಜ, ಆಗ ವಿರೋಧ ಮಾಡಿದವರು ಈಗ ಹೇಗೆ ಮಂತ್ರಿಮಂಡಲದಲ್ಲಿ ಇದ್ದಾರೆ ಎಂದು ನಿಮಗೆ ಅಚ್ಚರಿಯಾಗಬಹುದು. ಇಂದು ನರೇಂದ್ರ ಮೋದಿಯನ್ನು ನಾಯಕರೆಂದು ಸ್ವೀಕರಿಸಿರುವ ಸ್ಮೃತಿ, “ಅಂದು ಏಕೆ ವಿರೋಧಿಸಿದರು ಎಂಬ ಪ್ರಶ್ನೆ ಉದ್ಭವವಾಗಬಹುದು. ಈ ಪ್ರಶ್ನೆ ತುಂಬಾ ದಿನಗಳ ಕಾಲ ಹೆಚ್ಚಿನ ಜನಕ್ಕೆ ಕಾಡಿತ್ತು. ಇದೇ ವಿಷಯವಾಗಿ ಸ್ಮೃತಿಯವರು 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸ್ಪಷ್ಟೀಕರಣವನ್ನು ನೀಡಿದರು. ’ನಾನು ಆಗ ಹುಡುಗುತನದಲ್ಲಿ ಆತುರದಿಂದ ವಿರೋಧ ಮಾಡಿದ್ದೆ ಎಂದರೆ ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ಸತ್ಯ ಎಂಬ ಭ್ರಮೆ ನನ್ನಲ್ಲಿತ್ತು. ಆದರೆ ಮೋದಿಯವರನ್ನು ಉಚ್ಛ ನ್ಯಾಯಾಲಯವು (Supreme Court) “ಆರೋಪ ಮುಕ್ತರಾಗಿ” ಮಾಡಿದ ಮೇಲೆ ಇಡೀಯ ಗೋಧ್ರಾ ಘಟನೆಯ ಸುತ್ತ ಏನೆಲ್ಲಾ ಷಡ್ಯಂತ್ರ ನಡೆದಿದೆ ಎಂಬುದು ನನಗೆ ತಿಳಿದು ಬಂತು, ಆ ಬಳಿಕ ಮೋದಿ ಗುಜರಾತಿನಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ನಾನು ಅವರ ನೇತೃತ್ವವನ್ನು ಒಪ್ಪಿದ್ದೇನೆ’, ಎಂದು ಹೇಳಿದ್ದರು.

24/06/2010 ರಲ್ಲಿ ಭಾ.ಜ.ಪ.ದ ರಾಷ್ಟ್ರೀಯ ಘಟಕದ ಕಾರ್ಯದರ್ಶಿಗಳಾಗಿ ಇವರು ನಿಯುಕ್ತಿಯಾದರು. 2004ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದಿಂದ ಕಾಂಗ್ರೇಸ್’ನ ಕಪಿಲ್ ಸಿಬ್ಬಲ್ ವಿರುದ್ಧ ನಿಂತು ಸೋತಿದ್ದರು. ಅದೇ 2014ರ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಪ್ರಬಲ ಪೈಪೋಟಿ ನೀಡಿದರೂ ಜಯ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. . ಚುನಾವಣಾ ರಾಜಕೀಯದ ಇವರ ಜೀವನವನ್ನು ತೆಗೆದುಕೊಂಡರೆ, ಬರಿ ಸೋಲುಗಳೆ ಕಂಡುಬರುವುದು. ಆದರೆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿರುವ ಕೆಲವು ಮಹಿಳಾ ಕಾರ್ಯಕರ್ತರಲ್ಲಿ ಇವರೂ ಒಬ್ಬರು. ಆದ್ದರಿಂದಲೇ ಪಕ್ಷ ಸೇರ್ಪಡೆಗೊಂಡ ಕೇವಲ 10 ವರ್ಷಗಳಲ್ಲಿ ಉನ್ನತ ಹುದ್ದೆಗಳು ಸಿಕ್ಕಿದ್ದು. .

ಪ್ರಸಕ್ತ ಸ್ಮೃತಿಯವರು ಗುಜರಾತ್ ರಾಜ್ಯದ ರಾಜ್ಯಸಭಾ ಪ್ರತಿನಿಧಿಯಾಗಿದ್ದು, ನ್ಯಾಷನಲ್ ಡೆಮೋಕ್ರಾಟಿಕ್ ಮೈತ್ರಿಕೂಟ ಸರ್ಕಾರದ ಕೇಂದ್ರ ಮಂತ್ರಿಮಂಡಲದಲ್ಲಿ “ಮಾನವ ಸಂಪನ್ಮೂಲ ಅಭಿವೃದ್ಧಿ” (HRD) ಖಾತೆಯ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಮೃತಿಯವರ ವಿದ್ಯಾಭ್ಯಾಸದ ಕುರಿತಾಗಿ ಕೆಲವು ವಿವಾದಗಳಿದ್ದರೂ ಇವರ ಸನ್ನಡತೆ, ಕೆಲಸದ ಮೇಲಿನ ಬದ್ಧತೆ, ತಿಳುವಳಿಕೆ, ಮತ್ತು ವಾಕ್ಚಾತುರ್ಯಗಳ ಬಗ್ಗೆ ಎರಡು ಮಾತೇ ಇಲ್ಲ.

ಇನ್ನು “People for Change” ಎಂಬ ಸೇವಾ-ಸಂಸ್ಥೆಯನ್ನು ಸ್ಮೃತಿಯವರು ನಡೆಸುತ್ತಾರೆ. ಈ ಸಂಸ್ಥೆಯು ಹಳ್ಳಿಯ ಬಡ ಮಕ್ಕಳಿಗೆ ಹಾಗು ಕುಗ್ರಾಮಗಳಿಗೆ “ಉಚಿತ ನೀರಿನ ವ್ಯವಸ್ಥೆ” ಮಾಡಿಕೊಡುತ್ತದೆ. ಕಷ್ಟದಿಂದ ಬಂದವರಿಗೆ ಮಾತ್ರ, ಕಷ್ಟದ ಅರಿವಾಗುವುದು ಕಣ್ರಿ. ತಾವು ಮನೆಯ ಕೆಲಸವಲ್ಲದೆ, ಇಷ್ಟೆಲ್ಲಾ ಬಿಡುವಿಲ್ಲದ ರಾಜಕೀಯದ ಜೀವನದ ಮಧ್ಯೆ, ಸಮಾಜ ಸೇವೆಯ ಸಂಕಲ್ಪವನ್ನು ತೊಟ್ಟಿರುವ ಈ ಮಹಾ ತಾಯಿಗೆ ದೊಡ್ಡ ಸಲಾಮ್!

ಇನ್ನು “ಮಾನವ ಸಂಪನ್ಮೂಲ ಅಭಿವೃದ್ಧಿ” ಮಂತ್ರಾಲಯದಲ್ಲಿ ಇವರು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಬರುತ್ತಿದೆ. ಕೆಲಸದ ಕೆಲವು ತುಣುಕುಗಳು ಇಲ್ಲಿವೆ:-

• CBSE ವಿದ್ಯಾರ್ಥಿಗಳ ಪೋಷಕರ ಹಾಗೂ ಶಾಲೆಗಳ ಅನುಕೂಲಕ್ಕೆ “ಸಾರಂಶ್” [CBSE Saransh] ಎಂಬ ’ಮೊಬೈಲ್ ’ಆಪ್ಲಿಕೇಷನ್’ನ ಬಿಡುಗಡೆ.

• “ವೀರ್ ಗಾಥ” ಎಂಬ ಯೋಧರ ಕಥೆಗಳನ್ನು ಆಧಾರಿತ ಕೃತಿಗಳ ಬಿಡುಗಡೆ.

• ಪಠ್ಯ ಪುಸ್ತಕಗಳಲ್ಲಿ ಚರಿತ್ರೆಯ ಸತ್ಯಾಂಶಗಳನ್ನು ನೀಡುವ ಪ್ರಯತ್ನ. ತಿರುಚುವಿಕೆಯ/ಸುಳ್ಳು ಇತಿಹಾಸದ ತಿರಸ್ಕಾರ.

• ರಾಷ್ಟ್ರೀಯ ಏಕೀಕರಣ ಯಾತ್ರೆ – ರಾಷ್ಟ್ರದ ಬೇರೆಬೇರೆ ರಾಜ್ಯಗಳ ವಿದ್ಯಾರ್ಥಿಗಳು ಮತ್ತೊಂದು ರಾಜ್ಯದ ಯಾತ್ರೆಯನ್ನು ಹಮ್ಮಿಕೊಂಡು ಅದರ ಮೂಲಕ ಐಕ್ಯದ ಸಂಕೇತ. ಉದಾಹರಣೆಗೆ “ಈಶಾನ್ಯ ಭಾರತದ” ಮಕ್ಕಳನ್ನು ಬೇರೆ ರಾಜ್ಯಗಳಿಗೆ ಕರೆದೊಯ್ದದ್ದು.

• ಮಕ್ಕಳ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆಯಂದು HRD ಮಂತ್ರಾಲಯದ ವ್ಯವಸ್ಥೆಯ ಮೂಲಕ ಪ್ರಧಾನಮಂತ್ರಿಯವರು ದೇಶದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸುತ್ತಾರೆ ಮತ್ತು ಸಂವಾದವೂ ಮಾಡುತ್ತಾರೆ. ಅಷ್ಟು ದೊಡ್ಡ ಕಾರ್ಯಕ್ರಮದ ಆಯೋಜನೆ ಮಾಡುವುದು ತಮಾಷೆಯೇನು ಅಲ್ಲ! ಕಷ್ಟ-ಸಾಧ್ಯವಾದ ಸಾಹಸ! ಈ ಒಂದು ದೊಡ್ಡ ವ್ಯವಸ್ಥೆಯ ಭೀಮ ಸಾಹಸವನ್ನು HRD ಮಂತ್ರಾಲಯವು ಸುಲಭವಾಗಿ ಮಾಡುತ್ತಿರುವುದು ಇವರ ನೇತೃತ್ವದಲ್ಲಿ.

ಇನ್ನು ಸ್ಮೃತಿಯವರ 24ನೇ ತಾರೀಕಿನ ಸಂಸತ್ತಿನ ಭಾಷಣವನ್ನು ನಾವೆಲ್ಲರೂ ಕೇಳಿದ್ದೇವೆ. ಅದರಿಂದ ಪ್ರಭಾವಿತರಾಗಿದ್ದೇವೆ, ಪುಳಕಿತರಾಗಿದ್ದೇವೆ. “JNU ಮತ್ತು ರೋಹಿತ್ ವೇಮುಲಾ ವಿದ್ಯಾರ್ಥಿಯ ಆತ್ಮ-ಹತ್ಯೆ” ಕುರಿತಾಗಿ ಮಾತನಾಡಿ ಸ್ಮೃತಿಯವರು ತಮ್ಮ ಮೇಲೆ ಬಂದ ಆರೋಪಗಳು, ಮಂತ್ರಾಲಯದ ಮೇಲೆ ಬಂದ ಆರೋಪಗಳು, ಮತ್ತು ಸರ್ಕಾರದ ಮೇಲೆ ಬಂದ ಆರೋಪಗಳನ್ನು ಸವಿವರವಾಗಿ ಉತ್ತರಿಸಿದರು. ಈ ಮಹಾ ತಾಯಿಯ ಅಂದಿನ ಸಂಸತ್ತಿನ ಭಾಷಣ ಕೇಳಿ, ಎಂಥವರಿಗೂ ದೇಶಪ್ರೇಮದ ಕಾವಿಂದ ರಕ್ತ ಕುದಿಯಲೇಬೇಕು! ತೀಕ್ಷ್ಣವಾದ ಮಾತಿನ ಬಾಣಗಳಿಂದ ದೇಶದ್ರೋಹವೆಂಬ ರಾಕ್ಷಸನ ಎದೆಯನ್ನು ಬಗೆದರು ಸ್ಮೃತಿ ಇರಾನಿ. ಮಾಜಿ ಪ್ರಧಾನಿ ಅಟಲ್ ಬಿಹಾರಿಯವರ ಮಾತನ್ನು ನೆನೆಯುತ್ತ ಹೇಳಿದರು, “ಬದಕುವುದು ಭಾರತಕ್ಕೆ, ಮರಣವದು ಭಾರತಕ್ಕೆ. ಅಷ್ಟೇ ಅಲ್ಲ, ನಾನು ಸತ್ತ ಮೇಲೆ ನನ್ನ ಅಸ್ತಿಯ ಧ್ವನಿಯನ್ನೇನಾದರು ಗಂಗೆಯಲ್ಲಿ ನೀವು ಕೇಳಿದರೆ ಅದು ಸಹ ’ಭಾರತ್ ಮಾತಾ ಕಿ ಜೈ’ ಎಂದು ಸ್ತುತಿ ಮಾಡುತ್ತಿರುತ್ತದೆ”. ಎಂಥಹ ಮಿಂಚಿನಂಥ ಮಾತು! ಸ್ಮೃತಿ ಇರಾನಿಯವರ ಮಾತಿನ ಗುಡುಗು-ಸಿಡಿಲುಗಳ ನಡುವೆ, ದೇಶಪ್ರೇಮವೆಂಬ ಮಳೆಯು ಧಾರಾಕಾರವಾಗಿ ಹರೆಯಿತು. ಅದೇ ಮಳೆ, ದೇಶಪ್ರೇಮವೆಂಬ ಫಸಲು ಬೆಳೆಯಲು ಅನುಕೂಲವಾದರೆ, ದೇಶದ್ರೋಹವೆಂಬ ಕೊಳೆಯು ಕೊಚ್ಚಿ ಹೋಗುವ ಪ್ರವಾಹವೂ ಆದೀತು. ಸ್ಮೃತಿಯವರ ಅಂದಿನ ಭಾಷಣ ಅವರ ವ್ಯಕ್ತಿ ಜೀವನ ಮತ್ತು ರಾಜಕೀಯ ಜೀವನದ ಶಿಖರವಾಗಿತ್ತು. ತಮ್ಮ ಎಲ್ಲಾ ರಾಜಕೀಯ ದ್ವೇಷಿಗಳಿಗೂ ಮತ್ತು ತಮ್ಮ ಸಾಮರ್ಥ್ಯಗಳನ್ನು ಶಂಕಿಸುತ್ತಿದ್ದ ಎಲ್ಲರಿಗೂ, ಸ್ಮೃತಿಯವರು ತಮ್ಮ ಭಾಷಣದ ಮೂಲಕ ಉತ್ತರವನ್ನು ನೀಡಿದರು. ’ಶಭಾಷ್ ಸ್ಮೃತಿ ಇರಾನಿಯವರೆ, ನಿಮಗೊಂದು ಸಲಾಮ್’ ಎಂದು ದೇಶ ಪ್ರೇಮಿಗಳೆಲ್ಲಾ ಒಂದೇ ಸ್ವರದಲ್ಲಿ ಧ್ವನಿಮೂಡಿಸಿದರು.

ಒಬ್ಬ ಒಳ್ಳೆಯ ತಾಯಿಯಾಗಿ, ಪ್ರೀತಿಯ ಹೆಂಡತಿಯಾಗಿ, ಮತ್ತು ಕೇಂದ್ರ ಮಂತ್ರಿಮಂಡಲದ ನಿಷ್ಠೆಯ ಶ್ರಮಜೀವಿಯಾಗಿ ಇವರು ತಮ್ಮ ಎಲ್ಲಾ ಪಾತ್ರಗಳನ್ನು ನಿಖರವಾಗಿ ನಿರ್ವಹಿಸುತ್ತಿದ್ದಾರೆ. “ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥಿ” ಧಾರವಾಹಿಯ “ತುಳ್ಸಿ ವಿರಾನಿ”ಯಿಂದ ಕೇಂದ್ರ ಮಂತ್ರಿಸಂಪುಟದ ಖಾತೆಯವರೆಗೆ, ಇವರು ನಡೆದು ಬಂದ ಹಾದಿ ಬಲು ಕಠಿಣ ಮತ್ತು ಕಷ್ಟತಮವಾದದ್ದು. ಸೋಲು-ಗೆಲುವುಗಳು ಇವರ ಜೀವನದ ಅವಿಭಾಜ್ಯ ಅಂಗವಾಗಿದೆ. ಅದೇನೆ ಇದ್ದರು ಇವರ ಪ್ರಖರತೆ, ವ್ಯಕ್ತಿತ್ವ, ಕಾರ್ಯಶೈಲಿ, ವಾಕ್ಚಾತುರ್ಯ, ನಡವಳಿಗೆ, ಸಂಘಟನಾ ಶಕ್ತಿ, ನಿಷ್ಠಾವಂತಿಕೆ ಇವೆಲ್ಲವೂ ಮೆಚ್ಚಬೇಕಾದದ್ದೆ! ಇಂಥಹ ಒಬ್ಬ ಮಹಿಳೆ ನಮ್ಮ ನಾಯಕಿಯಾಗಿ ರಾಜ್ಯಸಭೆಯಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ನೇತೃತ್ವ ವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯೇ ಸರಿ. ಇಂದಿಗೂ ಎಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದಾರೆ ಸ್ಮೃತಿ ಇರಾನಿ; ಇನ್ನು ಮುಂದೆ ಹೆಚ್ಚಿನ ಜನಕ್ಕೆ ಆಗಲಿದ್ದಾರೆ. ಇವರ ದೇಶಪ್ರೇಮ ಮತ್ತು ದೇಶಾಭಿಮಾನ ನಮ್ಮೆಲ್ಲರಿಗೂ ಆದರ್ಶವಾಗುವಂತಿದೆ ಎಂದು ಹೇಳಬಹುದು. ಇಂಥಹ ಮಹನೀಯರನ್ನ ನೆನೆದು, ನಮ್ಮ ಜೀವನವೂ ಸನ್ಮಾರ್ಗದೆಡೆಗೆ ಹೋಗಲಿ ಎಂದು ನಾನು ಆಶಿಸುತ್ತೇನೆ.

ಜೀವನವಿ ನಾಟಕವು ಕಿರುತೆರೆಯ ಪಾತ್ರಗಳು |

ಜೀವನಕೆ ಜೀವಿಸುತ ಕಷ್ಟಗಳ ಹೊತ್ತವಳು ||

ಸಜ್ಜನರ ಶೃತಿಯಿವಳು ಉಪಕಾರಿ ಸ್ಮೃತಿಯಿವಳು |

ವೈರಿಗಳ ಜಾಲಗಳ ಸುಡುವ ದುರ್ಗೆಯುಯಿವಳು || ೧ ||

ಧೂರ್ತರಿಗೆ ದುಷ್ಟೆ ತಾನ್ ಋಜುಗಳಿಗೆ ಮಾತೆಯು |

ಕರ್ಮಯೋಗವ ನಿತ್ಯ ಪೂಜನೆಯ ಗೈದಿಹಳು ||

ದೇಶ ಮೊದಲೆಂದೆನುವ ಪರಿಭಾಷೆಯಾಗಿರಲು |

ರೋಷವದು ದುರುಳರಿಗೆ ಸಹನೆ ಸಜ್ಜನರಿಂಗೆ || ೨ ||

ರಾಷ್ಟ್ರಚೇತನ ಮೊಳಗೆ ದೇಶಭಕ್ತಿಯು ಮೊಳಗೆ |

ವಾಕ್ಬಾಣಯಿವರಿಂದೆ ರಕ್ತವದು ಕದಿಯೆ ||

ಅರ್ಪಿತವು ಜೀವನವು ಭಾರತದ ಒಳಿತಿಗದು

ಭಾರತಾಂಬೆಯ ಪುತ್ರಿ ಸ್ಮೃತಿಯಿವಳು ನೋಡಿರೈ || ೩ ||

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!