ಅಂಕಣ

ದೇವಸ್ಥಾನಗಳೂ …. ಅದರೆದರು ನಡೆಯುವ ಪ್ರಹಸನಗಳೂ…

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದೇವಸ್ಥಾನದ ಪ್ರವೇಶದ ಬಗ್ಗೆ ನಡೆಯುತ್ತಿರುವ ಪ್ರಹಸನಗಳನ್ನು ಗಮನಿಸಿದಾಗ ಕೆಲವಷ್ಟು ಪ್ರಶ್ನೆಗಳೂ, ಸಂದೇಹಗಳೂ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಿವೆ. ದೇವಸ್ಥಾನವನ್ನು ಪ್ರಧಾನ ರಂಗಭೂಮಿಯನ್ನಾಗಿಸಿ ಜಾತಿ, ಸಮಾನತೆ ಎನ್ನುವ ಮುಖ್ಯ ಪಾತ್ರಗಳನ್ನು ಬಹು ವೈಭವೀಕರಿಸಿ ಪ್ರದರ್ಶಿಸಲಾಗುತ್ತಿದೆ. ಇದು ಪಾಶ್ಚ್ಯಾತ್ಯ ಚಿಂತನೆಯಲ್ಲಿ ಮೂಡಿ ಬಂದ ಸ್ಕ್ರಿಪ್ಟ್ ಎನ್ನುವುದಕ್ಕೆ ಹಲವಾರು ಪುರಾವೆಗಳು ಗಮನಿಸಿದಾಗ ದೊರಕುತ್ತಾ ಹೋಗುತ್ತವೆ.

ಭಾರತಿಯ ಸಂಸ್ಕೃತಿಯಲ್ಲಿ ಏಕ ದೇವರ ಕಲ್ಪನೆಯಾಗಲಿ, ದೇವಸ್ಥಾನಗಳ ನಿರ್ಮಾಣವಾಗಲಿ ಇಲ್ಲ. ಹಾಗೆಯೇ ಒಂದು ನಿಗದಿತ ದಿನದಲ್ಲಿ ಹೋಗಲೇ ಬೇಕಾದ ಕಟ್ಟುಪಾಡುಗಳಾಗಲಿ ಇಲ್ಲ. ಹೀಗೆ ಪ್ರಾರ್ಥಿಸಬೇಕು ಎನ್ನುವ ನಿಯಮವಿರಲಿ ಪ್ರಾರ್ಥಿಸಲೇ ಬೇಕು ಎನ್ನುವ ನಿಬಂಧನೆ ಕೂಡಾ ಇಲ್ಲ. ಧಾರ್ಮಿಕ ವಿಷಯಗಳಲ್ಲಿ, ಆಚರಣೆಗಳಲ್ಲಿ, ಸಂಪೂರ್ಣ ಸ್ವಾತಂತ್ರ್ಯವಿದೆ.ಆಸ್ತಿಕರಿಗೆ ಇರುವಷ್ಟೇ ಪ್ರಾಮುಖ್ಯತೆ ನಾಸ್ತಿಕರಿಗೂ ಇದೆ. ಯಾವುದನ್ನೇ ಆದರೂ ಯಾರನ್ನೇ ಆದರೂ ಪೂಜಿಸುವ ಹಕ್ಕಿದೆ.

ದೇವಸ್ಥಾನಗಳೇ ಪೂಜಾ ಮಂದಿರಗಳೆಂದು ಭಾರತೀಯರು ಎಂದೂ ಭಾವಿಸಿಲ್ಲ. ಇಲ್ಲಿ ಪ್ರತಿ ಮನೆಯಲ್ಲೂ ಪೂಜಾಗೃಹವಿದೆ. ಅವರಿಗಿಷ್ಟವಾದ ದೇವರು ಪೂಜಾ ಮಂದಿರದಲ್ಲೋ, ಗೋಡೆಯ ಮೇಲೋ ಸ್ಥಾಪಿತವಾಗಿರುತ್ತಾನೆ. ಪೂಜಾ ಪದ್ಧತಿ ಕೂಡಾ ಅಷ್ಟೇ, ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ ಅಷ್ಟೇಕೆ ದೇವರಿಂದ ದೇವರಿಗೆ ಬೇರೆಯದೇ ಆಗಿರುತ್ತದೆ.ಎಲ್ಲಿಯೂ ಏಕರೂಪತೆ ಕಾಣಲು ಸಾದ್ಯವಿಲ್ಲ. ಒಂದೇ ಮನೆಯ ಸದಸ್ಯರೂ ಕೂಡಾ ಅವರಿಗಿಷ್ಟವಾದ ಬೇರೆ ಬೇರೆ ದೇವರನ್ನು ಆರಾಧಿಸಲು ಯಾವುದೇ ನಿರ್ಬಂಧವಿಲ್ಲ. ಈ ವಿವಿಧತೆಯಲ್ಲಿ ನಮಗೆ ಏಕವಾಗಿ ಕಾಣಿಸುವುದು ಕೇವಲ ನಂಬಿಕೆಯೊಂದೇ.

ಮುಕ್ಕೋಟಿ ದೇವರುಗಳನ್ನು ಸೃಷ್ಟಿಸಿದ ಸಂಸ್ಕೃತಿ ನಮ್ಮದು. ನಮ್ಮನ್ನು ಪೊರೆವ ಪ್ರತಿಯೊಂದಕ್ಕೂ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಸ್ಕೃತಿಯ ಲಕ್ಷಣ. ಪೂಜಿಸಿದ ಪ್ರತಿಯೊಂದೂ ದೇವರಾಗ ಬೇಕಿಲ್ಲ. ಪೂಜಿಸುವ ಪ್ರತಿ ಜಾಗ ದೇವಸ್ಥಾನವೆಂದು ಪರಿಗಣಿಸ ಬೇಕಿಲ್ಲ. ಇಷ್ಟು ಸ್ವತಂತ್ರ್ಯ ಇರುವ ಈ ಸಂಸ್ಕೃತಿ ಏಕ ದೇವರ ಆರಾಧಕರಿಗೆ ವಿಚಿತ್ರವೆನಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂತಹದು ಏನಿಲ್ಲ. ಅವರ ಸೀಮಿತ ದೃಷ್ಟಿಕೋನವೇ ಈ ಎಲ್ಲಾ ಗೊಂದಲಗಳಿಗೆ ಕಾರಣ.

ಹಿಂದೂಗಳಲ್ಲೇ ಅನೇಕ ಪಂಗಡಗಳಿವೆ. ಒಂದೊಂದು ಪಂಗಡಕ್ಕೂ ಒಬ್ಬೊಬ್ಬ ದೇವರಿದ್ದಾರೆ. ಶೋಷಕರೆಂದೇ ಕುಖ್ಯಾತಿ ಪಡೆದಿರುವ ಬ್ರಾಹ್ಮಣರಲ್ಲೇ ಅನೇಕ ದೇವರ ಆರಾಧಕರಿದ್ದಾರೆ. ಶೈವರಿಗೆ ವಿಷ್ಣು ವರ್ಜ್ಯ. ವೈಷ್ಣವರು ಗಣಪತಿಯಿಂದ ಬಹು ದೂರ. ಇಲ್ಲಿ ಮೇಲು ಕೀಳುಗಳ ಭೇಧವಲ್ಲ. ಅವರವರ ನಂಬಿಕೆಯ ಪ್ರಕಾರ ಆರಾಧನೆ ಅಷ್ಟೇ. ಶಿವನಷ್ಟೇ ಪ್ರಾಮುಖ್ಯತೆ ಊರ ದೇವಿಗೂ. ಪ್ರತಿಯೊಂದು ಜಾತಿಗೂ ತನ್ನದೇ ಆದ ದೇವಸ್ಥಾನಗಳನ್ನು ನಿರ್ಮಿಸಿಕೊಳ್ಳುವ, ಅವರಲ್ಲೇ ಒಬ್ಬರು ಪೂಜಿಸುವ ಹಕ್ಕು ಮೊದಲಿನಿಂದಲೂ ಇದೆ. ಅಲ್ಲಿ ಅವರ ನಂಬಿಕೆ ಆಚರಣೆಗಳನ್ನು ಗೌರವಿಸುವವರಿಗೆ ಮಾತ್ರ ಪ್ರವೇಶ ಅದು ಯಾರೇ ಆದರೂ. ಉಳಿದವರಿಗೆ ಅಲ್ಲಿ ಪ್ರವೇಶ ನಿಷಿದ್ದ. ಅದರ ಅಗತ್ಯ ಕೂಡ ಉಳಿದವರಿಗೆ ಕಂಡು ಬರುವುದಿಲ್ಲ.

ಇನ್ನು ಕೆಲವು ದೇವಾಲಯಗಳಿಗೆ ತನ್ನದೇ ಆದ ಕಟ್ಟುಪಾಡುಗಳಿವೆ. ಕಾಶಿಯ ವಿಶ್ವನಾಥನನ್ನು ಯಾರು ಬೇಕಾದರೂ ಸ್ಪರ್ಶಿಸಿ ಪೂಜಿಸಬಹುದು.ತಿರುಪತಿಯ ತಿಮ್ಮಪ್ಪನ ಗುಡಿಗೆ ಕೇವಲ ಅರ್ಚಕರಿಗಷ್ಟೇ ಪ್ರವೇಶ. ಅಯ್ಯಪ್ಪನ್ನು ದರ್ಶಿಸಲು ಹೆಂಗಳೆಯರಿಗೆ ಕೆಲವು ನಿಯಮಗಳಿವೆ. ಅಣ್ಣಪ್ಪ ಶುದ್ದ ಬ್ರಹ್ಮಚಾರಿ, ಅಲ್ಲಿ ಹೆಣ್ಣಿನ ಗಾಳಿ ಸೋಕಲು ಅವಕಾಶವಿಲ್ಲ. ಇಲ್ಲಿ ನಿರ್ಬಂಧವಿರುವುದು ಕೇವಲ ಪ್ರವೇಶಕ್ಕೆ ಹೊರತು ಅವರನ್ನು ಪೂಜಿಸುವುದಕ್ಕಲ್ಲ. ನಿಮ್ಮ ಮನೆಯಲ್ಲಿ ಪೂಜಿಸಿದರೆ ಕೆಳುವವರರಾರು ಇಲ್ಲ. ಹೀಗಿರುವಾಗ ಅಲ್ಲಿ ಪ್ರವೇಶ ಮಾಡುವುದರ ಮೂಲಕ ಪಡೆಯುವುದಾದರೂ ಏನು?

ಭಾರತೀಯ ಪರಂಪರೆಯಲ್ಲಿ ತನ್ನ ಅರಿವನ್ನು ಹೆಚ್ಚಿಸಿಕೊಳ್ಳಲು, ಆಧ್ಯಾತ್ಮಿಕ ಸಾಧನೆ ಮಾಡಲು ದೇವರು ಕೇವಲ ಒಂದು ಉಪಕರಣವೇ ಹೊರತು ಅಂತಿಮ ಗುರಿಯಲ್ಲ. ಪ್ರತಿಯೊಬ್ಬರ ಮನೋಭಾವ, ಆಸಕ್ತಿ, ಸಾಧನೆಗನುಗುಣವಾಗಿ ದೇವರ ಆಯ್ಕೆಯಷ್ಟೇ. ಯಾವ ದೇವರೂ ಶ್ರೇಷ್ಠನಲ್ಲ, ಯಾರೂ ನಿಕೃಷ್ಟವಲ್ಲ. ಅರಿವು ಮೂಡಿದ ನಂತರ ಅಹಂ ಬ್ರಹ್ಮಾಸಿ ಅಂದ ಸಂಸ್ಕೃತಿ ನಮ್ಮದು. ಕೇವಲ ಉಪಕರಣವನ್ನು ಗುರಿಯಾಗಿಸಿ ಹೋರಾಡುವುದು ಮುರ್ಖತನವಷ್ಟೇ ಹೊರತು ಇನ್ನೇನಿಲ್ಲ.

ದೇವರು ನೀವು ಕೇಳಿದ್ದನ್ನು ಕೊಡುವುದಿಲ್ಲ, ತಪ್ಪುಗಳಿಗೆ ಶಿಕ್ಷಿಸುವುದಿಲ್ಲ ಎಂದೇನಾದರೂ ಇದ್ದಿದ್ದರೆ ಇವತ್ತು ದೇವರನ್ನು ಕೇಳುವವರೇ ಗತಿಯಿರುತ್ತಿರಲಿಲ್ಲ. ಇಂತಹ ದೇವರನ್ನು ಕಡ್ಡಾಯವಾಗಿ ಪೂಜಿಸಿ ಎಂದು ಆದೇಶ ಹೊರಡಿಸಿದರೂ ಸಾಕು ಇವತ್ತು ದೇವಸ್ಥಾನದ ಪ್ರವೇಶದ ಪ್ರಹಸನ ಬೇರೆಯದೇ ರೂಪು ಪಡೆಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆಯ ಅರ್ಥವೇ ಬೇರೆಯಾಗುತ್ತದೆ. ಹೆಚ್ಚೇನೂ ಬೇಡಾ ಉಳಿದ ಮತಗಳಂತೆ ವಾರಕ್ಕೊಂದು ದಿನವನ್ನು ನಿಗದಿ ಮಾಡಿದರೂ ಸಾಕು ವೇಷ ಕಳಚಲು.

ಒಂದು ದೇಶ ತನ್ನ ಸಂಸ್ಕೃತಿಯನ್ನು,ಬೇರನ್ನು ಮರೆತಾಗ ಎಂಥಹ ಸ್ಥಿತಿಗೆ ತಲುಪುತ್ತದೆ ಎನ್ನುವುದಕ್ಕೆ ನಮ್ಮ ದೇಶಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಜಗತ್ತಿಗೆ ಶಾಂತಿಯನ್ನು ಭೋಧಿಸಿದ, ಅಧ್ಯಾತ್ಮವನ್ನು ತಿಳಿಸಿಕೊಟ್ಟ ದೇಶಕ್ಕೆ ಇವತ್ತು ತನ್ನದೇ ಪಾಠ ಮರೆತು ಹೋಗಿರುವುದು ಮಾತ್ರ ವಿಪರ್ಯಾಸ. ಕೇವಲ ದೇವಸ್ಥಾನಗಳ ಪ್ರವೇಶದಿಂದ ಬದಲಾಗುವುದು ಏನೂ ಇಲ್ಲ. ಸಮಾನತೆ ಇರುವುದು ದೇವರಲ್ಲಿ ಅಲ್ಲ. ಬದಲಾಗಬೇಕಿರುವುದು ಮನಸ್ಸುಗಳು. ಬದಲಾವಣೆಯಾಗ ಬೇಕಿರುವುದು ಆಲೋಚಿಸುವ ಮೆದಳು. ಗಟ್ಟಿಯಾಗ ಬೇಕಿರುವುದು ನಿಂತ ನೆಲ. ಹೋರಾಟಗಳು ಇದಕ್ಕಾಗಿ ನಡೆಯ ಬೇಕಾಗಿದೆಯೇ ಹೊರತು ದೇವರನ್ನು ಉಪಯೋಗಿಸಿಕೊಂಡು ಬರುವ ಪ್ರಸಿದ್ದಿಯಾಗಲಿ, ಪ್ರಸಿದ್ದಿಯಿಂದ ಬರುವ ಲಾಭಗಳಾಗಲಿ ಅಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Shobha Rao

Writer

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!