ಅಂಕಣ

ಎಲ್ಲ ಧರ್ಮಗಳೂ ಸಮಾನವಲ್ಲ, ಎಲ್ಲ ಧರ್ಮಗಳ ಗುರಿಯೂ ಒಂದೇ ಅಲ್ಲ.

ನಮ್ಮ ದೇಶದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ, ಪಾರಸೀ, ಬೌದ್ಧ, ಜೈನ, ಸಿಖ್ ಮುಂತಾದ ಮತಗಳನ್ನು ಗುರುತಿಸುತ್ತೇವೆ. ಆದರೆ ಕಾಲಾಂತರದಲ್ಲಿ ಈ ಮತಗಳು ಅಥವಾ religion ಗಳಿಗೆ ಪರ್ಯಾಯವಾಗಿ ”ಧರ್ಮ” ಎಂಬ ಶಬ್ದದ ಬಳಕೆಗೆ ತಪ್ಪಾಗಿ ಚಾಲ್ತಿಗೆ ಬಂದಿದೆ. ಇವುಗಳಲ್ಲಿ ”ಹಿಂದೂ” ಎಂಬುದು ಉಳಿದ religion ಗಳಂತೆ ಒಂದು ಮತವೇ ಅಲ್ಲ. ಈ ”ಹಿಂದೂ” ಎಂಬ ಪದಬಳಕೆ ವಸಾಹತುಶಾಹಿಗಳು ಪ್ರಾದೇಶಿಕ ಗುರುತಿಸುವಿಕೆ(geographical identity) ಯ ಭಾಗವಾಗಿ ಬಳಸಲು ಪ್ರಾರಂಭಿಸಿದ ಶಬ್ದ.

ನಾಲ್ಕು ವೇದಗಳಲ್ಲಾ­ಗಲಿ, ಆರು ಶಾಸ್ತ್ರ­ಗಳ­ಲ್ಲಾಗಲಿ, ಹನ್ನೆರಡು ಪ್ರಧಾನ ಉಪನಿಷತ್ತು­ಗಳಲ್ಲಾಗಲಿ, ಹದಿನೆಂಟು ಪುರಾಣಗಳಲ್ಲಾಗಲಿ, ರಾಮಾಯಣ-ಮಹಾಭಾರತಗಳಲ್ಲಾಗಲಿ, ಇಪ್ಪತ್ನಾಲ್ಕು ದಿವ್ಯಾ­ಗಮಂಗಳಲ್ಲಾಗಲಿ, ಅಸಂಖ್ಯಾತ ತಂತ್ರಾಗಮ­ಗ­ಳ­ಲ್ಲಾಗಲಿ, ಭಕ್ತಿ ವಾಙ್ಮಯ­­­ದಲ್ಲಾಗಲಿ ಎಲ್ಲಿ­ಯೂ ಗೋಚ­ರಿಸದ ”ಹಿಂದೂ” ಎಂಬ ಈ ಶಬ್ದವನ್ನು ಗ್ರೀಕರು ಮೊದಲಾಗಿ ಹೊರನಾಡ ಹಲ್ಲೆ­ಕೋರರು ಸಿಂಧೂ­ನದಿ ಇತ್ತಲ ಕಡೆಗೆ ವಾಸಿಸುತ್ತಿದ್ದ ಜನಾಂಗದವರನ್ನು ಗುರು­ತಿಸಲು ಬಳಸತೊಡಗಿ­ದರು. ಏಳು ಪ್ರಮುಖ ನದಿಗಳನ್ನು ಹೊಂದಿದ ಭಾರತವನ್ನು ”ಸಪ್ತಸಿಂಧುಸ್ಥಾನ” ಎಂದು ಕರೆಯಲಾಗುತ್ತಿತ್ತು. ಉಚ್ಚಾರಣೆಯ ದೋಷದಿಂದಾಗಿ ಅಪಭ್ರಂಶಗೊಂಡ ಅದು ”ಹಿಂದುಸ್ತಾನ”ವಾಯಿತು. ತಮ್ಮದೇ ಆದ ಒಂದ religion ಅನ್ನು ಹೊಂದಿದ್ದ ಪರಕೀಯರಯರು ಈ ಸೋ ಕಾಲ್ಡ್ ”ಹಿಂದುಸ್ತಾನ” ಎಂಬ ದೇಶದ, ಯಾವುದೇ religion ನ ಬಂಧನಕ್ಕೊಳಗಾಗದೇ ಸ್ವತಂತಂತ್ರವಾಗಿ ಸನಾತನಧರ್ಮದವನ್ನು ಆಚರಿಸುತ್ತಿದ್ದ ಭಾರತೀಯ ಜನರ ಆಚರಣೆಗಳನ್ನು ಕೂಡ ತಮ್ಮ ಮತದಂತೆಯೇ ಒಂದು religious rituals ಎಂದು ಗುರುತಿಸಿ ಅದಕ್ಕೇ ”ಹಿಂದೂಯಿಸಮ್” ಅನ್ನುವ ಹೆಸರು ಕೊಟ್ಟುಬಿಟ್ಟರು.

ರಾಜನೈತಿಕ ಹಾಗೂ ಐತಿಹಾಸಿಕ ದಾಖಲಾತಿಗಳಲ್ಲಿ ಆ ಶಬ್ದದ ಮುಂದುವರಿಕೆ ಹಾಗೂ ಚಳುವಳಿಗಳಲ್ಲಿ ಆ ಶಬ್ದದ ವ್ಯಾಪಕ ಬಳಕೆಯಿಂದಾಗಿ ಜನರ ಮನಸ್ಸುಗಳಲ್ಲಿ ಅದು ಬೇರೂರಿ ಹೋಗಿದೆ. ಹೀಗೆ ಪರಕೀಯರಿಂದ ಆರೋಪಿತವಾದ ಈ ”ಹಿಂದೂ ಧರ್ಮ” ಎಂಬ ಪರಿಕಲ್ಪನೆಯೇ ಆಧಾರವಿಲ್ಲದ್ದು ಹಾಗೂ ಅಪಹಾಸ್ಯಕರವಾದದ್ದು ಎಂದು ಅನೇಕ ಐತಿಹಾಸಿಕ-ಸಾಂಸ್ಕೃತಿಕ ಅಧ್ಯಯನಕಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗೆ ”ಹಿಂದೂ” ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿರುವ ಧರ್ಮ ಮೂಲದಲ್ಲಿ ಭಾರತೀಯ ಸನಾತನ ಧರ್ಮವಾಗಿದೆ. ಅದೂ ಅಲ್ಲದೇ ”ಧರ್ಮ”ಕ್ಕೂ ”ಮತ”ಕ್ಕೂ ಬಹಳ ವ್ಯತ್ಯಾಸಗಳಿವೆ. ಆದರೆ ‘ಧರ್ಮ’ ಎಂದರೆ ಹಿಂದೂ, ಜೈನ, ಮುಸಲ್ಮಾನ ಮುಂತಾದ ಮತಗಳು ಎನ್ನುವ ಅಭಿಪ್ರಾಯ ಬಲವಾಗಿ ಬೇರೂರಿರುವುದರಿಂದ, religion ಶಬ್ದಕ್ಕೆ ಪರ್ಯಾಯವಾಗಿ ”ಧರ್ಮ” ಎಂಬ ಶಬ್ದ ಬಳಕೆಯಲ್ಲಿರುವುದರಿಂದ ಸನಾತನ ಧರ್ಮ ಅಥವಾ ಹಿಂದೂ ಧರ್ಮವನ್ನೂ ಉಳಿದ ಮತಗಳ ಜೊತೆಗೆ ಸಮಾನವಾಗಿ ಪರಿಗಣಿಸಲಾಗುತ್ತಿದೆ. ಆದರೆ ಭಾರತದ ಸನಾತನ ಧರ್ಮಕ್ಕೂ ಪ್ರಪಂಚದ ಹಾಗೂ ಭಾರತದಲ್ಲಿಯೇ ಹುಟ್ಟಿದ ವಿವಿಧ ಮತಗಳಿಗೂ ಕೆಲವು ಪ್ರಮುಖವಾದ ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇ ”ಮತ” ಮತ್ತು ”ಧರ್ಮ” ಇವೆರಡರ ನಡುವಿನ ಭಿನ್ನತೆಯನ್ನು ಸ್ಪಷ್ಟಪಡಿಸುತ್ತವೆ.

ಭಾರತೀಯ ಸನಾತನ ಧರ್ಮಕ್ಕೆ ನಿರ್ದಿಷ್ಟವಾದ ಯಾವುದೇ ಮತಗ್ರಂಥ ಇಲ್ಲ. ಅಪೌರುಷೇಯವಾದ ನಾಲ್ಕು ವೇದಗಳು, ಆರು ಶಾಸ್ತ್ರಗಳು, ಸ್ಮೃತಿಗಳು, ಪುರಾಣಗಳು, ಎರಡು ಇತಿಹಾಸಗ್ರಂಥಗಳು ಮುಂತಾದ ಗ್ರಂಥಗಳ ಆಧಾರದ ಮೇಲೆ ಭಾರತೀಯರ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳು ಇದ್ದರೂ ಕೂಡ ಇವುಗಳಲ್ಲಿ ಯಾವ ಗ್ರಂಥವೂ ಕೂಡ ಮತಗ್ರಂಥವಲ್ಲ.

ಬೌದ್ಧಮತಕ್ಕೆ ”ಬುದ್ಧಗಾಥಾ” ಎಂಬ ಬುದ್ಧನ ಉಪದೇಶಗಳು ಹಾಗೂ ಅದರ ಮೇಲೆ ಬಂದಿರುವ ವ್ಯಾಖ್ಯಾನಗಳು ಆಧಾರವಾಗಿವೆ. ಜೈನ ಮತಕ್ಕೆ ”ಜಿನ” ಉಪದೇಶಗಳು, ತೀರ್ಥಂಕರರ ಬೋಧೆಗಳು ಆಧಾರವಾಗಿವೆ. ಪಾರ್ಸೀ ಮತವು ”ಛಂದಾವೇಸ್ತಾ” ಎಂಬ ಗ್ರಂಥವನ್ನಾಧರಿಸಿದೆ. ಇಸ್ಲಾಂ ಮತಕ್ಕೆ”ಕುರಾನ್” ಗ್ರಂಥವೂ, ಕ್ರೈಸ್ತಮತಕ್ಕೆ ”ಬೈಬಲ್” ಗ್ರಂಥವೂ, ಸೀಖರಿಗೆ ”ಗ್ರಂಥಸಾಹಿಬಾ” ಆಧಾರವಾಗಿವೆ. ಹೀಗೆ ”ಬಹಾಯಿ” ”ಜ್ಯೂಯಿಶ್” ಮೊದಲಾದ ಮತಗಳು ಕೂಡ ಆಯಾ ಮತಗಳ ಪ್ರವರ್ತಕರಾದ ಪ್ರವಾದಿಗಳ (prophets) ಹಾಗೂ ಆಯಾ ಮತಗ್ರಂಥಗಳ ಹೇಳಿಕೆಗಳನ್ನೇ ಶ್ರದ್ಧೆಯಿಂದ ಆಚರಿಸಬೇಕಾಗಿದೆ.

ಈ ಮತಗಳಲ್ಲೆಲ್ಲ ಒಬ್ಬರಿಗೂ ಇನ್ನೊಬ್ಬರಿಗೂ ಕೆಲವು ಮತಭೇದಗಳು ಕಂಡುಬರುತ್ತವೆ. ಪರಮಾತ್ಮ (ಈಶ್ವರ, ದೇವರು) ಎಂಬ ತತ್ವವನ್ನು ಒಪ್ಪಿ ಅವನು ಜಗತ್ತನ್ನು ಹಾಗೂ ಜೀವಿಗಳನ್ನು ಸೃಷ್ಟಿಸಿದನೆಂದು, ಜೀವಿಗಳು ಈ ಕಾಣತಕ್ಕ ಶರೀರದಿಂದ ಬೇರೆಯಾಗಿದ್ದು ಜೀವಂತವಿರುವಾಗ ದೇವರ ಆಜ್ಞೆಯಂತೆ ನಡೆದರೆ ಶಾಶ್ವತವಾದ ಸ್ವರ್ಗಕ್ಕೆ ಹೋಗುವರೆಂದೂ, ಇಲ್ಲದಿದ್ದರೆ ಶಾಶ್ವತವಾದ ನರಕಕ್ಕೆ ಹೋಗುವರೆಂದೂ ಕೆಲವು ಮತಗಳ ಪ್ರವಾದಿಗಳು ಬೋಧಿಸಿದ್ದಾರೆ. ಇನ್ನು ಬೌದ್ಧ ಧರ್ಮದವರು ಈ ಪರಮಾತ್ಮ ಅಥವಾ ಈ ಶರೀರಕ್ಕಿಂತ ಬೇರೆಯಾದ ಆತ್ಮ ಎಂಬುದೆಲ್ಲ ಕೇವಲ ಭ್ರಾಂತಿಮಾತ್ರವಾಗಿದೆ ಎಂದು ಹೇಳುತ್ತಾರೆ. ಭೌದ್ಧರ ಜಾತಕ ಕಥೆಗಳಲ್ಲಿ ಜನ್ಮಾಂತರವನ್ನು ಹೇಳಿದ್ದರೂ ಅವೆಲ್ಲವೂ ಭ್ರಾಂತಿಮಾತ್ರವೇ ಎಂದೂ ಹೇಳುತ್ತಾರೆ. ಮುಸಲ್ಮಾನರೂ, ಕ್ರೈಸ್ತರೂ ಪೂರ್ವಜನ್ಮ-ಪುನರ್ಜನ್ಮಗಳನ್ನು ಒಪ್ಪುವುದಿಲ್ಲ. ಅದೇ ರೀತಿ ಭಾರತದಲ್ಲಿಯೇ ಸನಾತನ ಧರ್ಮದೊಳಗಿನಿಂದ ಟಿಸಿಲೊಡೆದ ಶೈವ-ವೈಷ್ಣವಾದಿ ಮತಗಳವರು ಜನ್ಮಾಂತರಗಳನ್ನು ಒಪ್ಪುತ್ತಾರಾದರೂ ಕೈಲಾಸಪ್ರಾಪ್ತಿ ಅಥವಾ ವೈಕುಂಠ ಪ್ರಾಪ್ತಿಯೇ ಅಂತಿಮ ಗುರಿ ಎಂದು ಆ ಮತಗಳ ಬೋಧನೆಗಳು ಬೋಧಿಸುತ್ತವೆ. ಈ ರೀತಿಯಲ್ಲಿ ಒಂದೊಂದು ಮತಗಳಿಗೂ ಪರಸ್ಪರ ವ್ಯತ್ಯಾಸವಿದ್ದೇ ಇದೆ. ಆದರೆ ಈ ಎಲ್ಲ ಮತಗಳಿಗೂ ಭಾರತೀಯ ಸನಾತನಧರ್ಮಕ್ಕೂ ಆಗಾಧವಾದ ವ್ಯತ್ಯಾಸನ್ನು ಉಂಟುಮಾಡುವ ಒಂದಿಷ್ಟು ಸಂಗತಿಗಳಿವೆ. ಅವುಗಳಿಂದಾಗಿಯೇ ಸನಾತನ ಧರ್ಮವನ್ನು ಮತಗಳ-ಪಂಥಗಳ ಕೋವೆಯಿಂದ ಬೇರೆಯಾಗಿಯೇ ಇಟ್ಟು ನೋಡಬೇಕಾಗುತ್ತದೆ.

ಎಲ್ಲ ಮತಗಳಿಗೆ ಒಂದು ಮತಗ್ರಂಥ ಮತ್ತು ಆ ಮತದ ಪ್ರವರ್ತಕರಾದ ಪ್ರವಾದಿ ಇರುವಂತೆ ಭಾರತೀಯ ಸನಾತನ ವೈದಿಕ ಧರ್ಮಕ್ಕೆ ಯಾವುದೇ ಒಬ್ಬ ಪ್ರವಾದಿ ಇರುವುದಿಲ್ಲ. ಮತ್ತು ಯಾವುದೇ ಮತಗ್ರಂಥ ಇಲ್ಲ. ಮತಪ್ರವರ್ತಕರ ಬೋಧನೆಯಾದ ಮತಗ್ರಂಥವೇ ಮತಗಳಿಗೆ ಸರ್ವೋಚ್ಚ ಪ್ರಮಾಣವಾಗಿದ್ದು ಅದರಲ್ಲಿ ಹೇಳಿದ ಆಚರಣೆಗಳನ್ನು ಆಚರಿಸಲೆಬೇಕೆಂಬ ಕಡ್ಡಾಯವಿರುತ್ತದೆ ಮತ್ತು ಆ ವ್ಯವಸ್ಥೆಯ ಅಂಗವಾಗಿ ಮಸೀದಿ..ಚರ್ಚು.. ಮಠ ಮುಂತಾದವುಗಳು ಇರುತ್ತವೆ ಹಾಗೂ ಅವುಗಳ ಮುಖ್ಯಸ್ಥರಾಗಿ ಫಾದರ್, ಮೌಲ್ವಿ, ಮುಂತಾದವರು ಇರುತ್ತಾರೆ. ಮತಾಚಾರಗಳನ್ನು ಆಚರಿಸದವರನ್ನು ದಂಡಿಸುವ, ನಿಷೇಧಿಸುವ ಮುಂತಾದ ಅನೇಕ ಅಧಿಕಾರಗಳನ್ನು ಇಂಥವರು ಹೊಂದಿರುತ್ತಾರೆ. ಸಾರ್ವಜನಿಕರು ವಿವಾಹಗಳನ್ನು ಮಾಡಿಕೊಳ್ಳುವಾಗಲೂ ಚರ್ಚು ಮಸೀದಿ ಮುಂತಾದವುಗಳಲ್ಲಿ ವಿವಾಹವನ್ನು ಮಾಡಿಕೊಂಡು ಅಲ್ಲಿ ನಮೂದಿಸಿ ಒಪ್ಪಿಗೆ ಪಡೆದಾಗಲೇ ಆ ವಿವಾಹ ಮಾನ್ಯವಾಗುತ್ತದೆ. ಆದರೆ ಸನಾತನ ವೈದಿಕ ಧರ್ಮದಲ್ಲಿ ಈ ರೀತಿಯ ಯಾವುದೇ ಸಂಸ್ಥೆ, ವ್ಯಕ್ತಿ ಮುಂತಾದವುಗಳ ಬಂಧನವಿರುವುದಿಲ್ಲ. ಎಲ್ಲರೂ ಸ್ವತಂತ್ರರು. ವೇದ ವಿಹಿತ ಧರ್ಮವನ್ನು ತಮ್ಮ ತಮ್ಮ ಮನೆಗಳಲ್ಲೇ ಆಚರಿಸಬಹುದು ಹಾಗೂ ಆಚರಿಸದೆಯೂ ಇರಬಹುದು. ಯಾವುದೇ ಕಡ್ದಾಯಗಳಿಲ್ಲ.

ಸನಾತನ ವೈದಿಕ ಧರ್ಮದಲ್ಲಿಯೂ ಪರಮಾತ್ಮನ ಅಸ್ತಿತ್ವ, ಶರೀರಕ್ಕಿಂತಲೂ ಬೇರೆಯಾಗಿರುವ ”ಜೀವ” ನ ಅಸ್ತಿತ್ವ, ಪೂರ್ವಜನ್ಮ, ಪುನರ್ಜನ್ಮಗಳು, ಸ್ವರ್ಗನರಕಾದಿಗಳು, ಲೋಕಾಂತರಗಳು, ದೇವತೆಗಳ ಅಸ್ತಿತ್ವ-ಮುಂತಾದವುಗಳನ್ನು ಪ್ರತಿಪಾದಿಸಲಾಗಿದೆ. ವಾಸ್ತವಾಗಿ ಉಳಿದ ಎಲ್ಲ ಮತಗಳು ಉದಯಿಸುವುದಕ್ಕೆ ಬಹಳ ಮುಂಚಿನಿಂದಲೇ ಇರುವ ವೇದಗಳಲ್ಲೇ ಈ ಎಲ್ಲ ಸಂಗತಿಗಳ ಉಲ್ಲೇಖವಿದೆ. ಹೀಗಾಗಿ ಎಲ್ಲ ಮತ-ಪಂಥಗಳ ಮೇಲೆ ಸನಾತನವಾದ ವೇದಗಳ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ”ಜೀವ” ನ ಅಸ್ತಿತ್ವ, ಪೂರ್ವಜನ್ಮ, ಪುನರ್ಜನ್ಮಗಳು, ಸ್ವರ್ಗನರಕಾದಿಗಳು, ಲೋಕಾಂತರಗಳು, ದೇವತೆಗಳು ಇವುಗಳೆಲ್ಲದರ ಹೊರತಾಗಿ ”ಮೋಕ್ಷ” ವೆಂಬ ಅಂತಿಮ ಪ್ರಯೋಜನದ ಪ್ರತಿಪಾದನೆ ಹಾಗೂ ಅದನ್ನು ಪಡೆಯಬೇಕಾದರೆ ಅನುಸರಿಸಬೇಕಾದ ಮಾರ್ಗಗಳು ಸನಾತನ ವೈದಿಕ ಧರ್ಮದಲ್ಲಿ ಮಾತ್ರ ಕಂಡು ಬರುತ್ತದೆ.

ವೇದಪ್ರತಿಪಾದಿತ ಸನಾತನ ಧರ್ಮದಲ್ಲಿ ಪೂರ್ವಜನ್ಮ-ಪುನರ್ಜನ್ಮ ಸ್ವರ್ಗ-ನರಕ ಇತ್ಯಾದಿಗಳಲ್ಲದೇ ನಾಲ್ಕು ವರ್ಣಗಳ ವಿಭಾಗ, ಹಾಗೂ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮವಿಭಾಗಗಳು ವಿಶೇಷವಾಗಿವೆ. ಈ ಆಶ್ರಮ ವ್ಯವಸ್ಥೆ ಬೇರೆ ಎಲ್ಲಿಯೂ ಕಂಡುಬರುವುದಿಲ್ಲ.

ಅವರವರ ನಂಬುಗೆಯ ಮತಗಳ ಪ್ರಕಾರ ಧರ್ಮ-ಅಧರ್ಮಗಳನ್ನು ಅರಿತುಕೊಂಡು ನಡೆದು ಅದರ ಫಲವನ್ನು ಪಡೆಯುವ ವಿಧಾನವನ್ನು ಅರಿತುಕೊಳ್ಳುವುದಕ್ಕೆ ಸಾಮಾನ್ಯವಾಗಿ “ಧರ್ಮಜಿಜ್ಞಾಸೆ” ಎಂದು ಹೆಸರು. ಈ ”ಧರ್ಮಜಿಜ್ಞಾಸೆ”ಯು ಸಾಮಾನ್ಯವಾಗಿ ಎಲ್ಲ ಮತಗಳಲ್ಲಿಯೂ ಕಂಡುಬರುತ್ತದೆ. ಆದರೆ ಸನಾತನ ವೈದಿಕ ಧರ್ಮದಲ್ಲಿ ಈ ಧರ್ಮಜಿಜ್ಞಾಸೆಯಲ್ಲದೇ ”ಬ್ರಹ್ಮ ಜಿಜ್ಞಾಸೆ” ಎಂಬ ವಿಶೇಷ ವಿಭಾಗವಿದೆ. ಈ ”ಬ್ರಹ್ಮಜಿಜ್ಞಾಸೆಯು” ಯಾವುದೇ ಮತಗಳಲ್ಲಿಯೂ ಇರುವುದಿಲ್ಲ. ಧರ್ಮ ಜಿಜ್ಞಾಸೆ ಅಂದರೇನು ಮತ್ತು ಬ್ರಹ್ಮ ಜಿಜ್ಞಾಸೆ ಅಂದರೇನು ಅನ್ನುವುದನ್ನು ಮುಂದಿನ ಭಾಗಗಳಲ್ಲಿ ವಿವರವಾಗಿ ನೋಡೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!