ಪೌಲೋನ ‘ಇಲೆವನ್ ಮಿನಟ್ಸ್’ ಪುಸ್ತಕ ಹಿಡಿದು ಕೂತವಳಿಗೆ ಡೆಡಿಕೇಷನ್ ನೋಡಿ ಆಶ್ಚರ್ಯ ಆಗಿತ್ತು. ಇಷ್ಟುದ್ದದ ಡೆಡಿಕೇಷನ್ ಯಾರಿಗಪ್ಪಾ ಅ೦ತ ಯೋಚಿಸುತ್ತಲೇ ಓದತೊಡಗಿದ್ದೆ. ಪೌಲೋನ ಈ ಪುಸ್ತಕ ಮುಗಿಯುವ ಹಂತದಲ್ಲಿದ್ದಾಗ ಫ಼್ರಾನ್ಸ್’ಗೆ ಭೇಟಿ ನೀಡಿದ್ದರು. ಅಲ್ಲಿ ಸುಮಾರು ೭೦ವರ್ಷದ ವೃದ್ಧರೊಬ್ಬರು ಇವರನ್ನು ಕಂಡು ಮಾತನಾಡಿಸಿ, “ನಿಮ್ಮ ಪುಸ್ತಕಗಳು ನನಗೆ ಕನಸು ಕಾಣುವಂತೆ ಪ್ರೇರೇಪಿಸುತ್ತವೆ” ಎಂದರಂತೆ. ಮೊದಲೆಲ್ಲ ಈ ಮಾತು ಕೇಳಿ ಸಂತೋಷ ಪಡುತ್ತಿದ್ದ ಪೌಲೋಗೆ ಈ ಬಾರಿ ಈ ಮಾತಿನಿಂದ ಸ್ವಲ್ಪ ಭಯವಾಯಿತಂತೆ. ಯಾಕೆಂದರೆ ಅವರ ಇಲೆವನ್ ಮಿನಟ್ಸ್ ಪುಸ್ತಕದಲ್ಲಿ ಬದುಕಿನ ಕ್ರೂರತೆ, ಸಂಕಷ್ಟಗಳನ್ನು ತೆರೆದಿಟ್ಟಿತ್ತು. ಆ ಸನ್ನಿವೇಶದ ಕೊನೆಯಲ್ಲಿ “ಕೆಲ ಪುಸ್ತಕಗಳು ನಮ್ಮನ್ನು ಕನಸು ಕಾಣುವಂತೆ ಪ್ರೇರೇಪಿಸುತ್ತದೆ, ಇನ್ನು ಕೆಲವು ಬದುಕಿನ ವಾಸ್ತವತೆಯನ್ನು ನಮಗೆ ಪರಿಚಯಿಸುತ್ತದೆ” ಎಂದರು. ಆಗ ನಿಜಕ್ಕೂ ಭಯವಾಗಿದ್ದು ನನಗೆ!!!
“ರಿಯಾಲಿಟಿ ಈಸ್ ಡಿಫ಼ೆರೆಂಟ್ ಡಿಯರ್” ಎಂದಿದ್ದ ನನ್ನ ಗೆಳೆಯನ ಮಾತುಗಳು ನೆನಪಾಗುತ್ತಿದ್ದವು. ನಿಜಕ್ಕೂ ಬದುಕಿನ ವಾಸ್ತವತೆ ಕನಸುಗಳಿಗಿಂತ ಅಷ್ಟೊಂದು ಭಿನ್ನವೇ? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. “If you want something sincerely all the universe conspires in helping you achieve it” ಎಂದಿದ್ದ ಪೌಲೋ ಒಮ್ಮೆಲೇ ವಾಸ್ತವವೇ ಬೇರೆ ಎಂದುಬಿಟ್ಟರೆ?!! ಹಾಂ.. ಬದುಕು ಹೂವಿನ ಹಾಸಿಗೆಯಲ್ಲ ಅನ್ನುವುದು ನಾನೂ ಒಪ್ಪಿಕೊಳ್ಳುತ್ತೇನೆ. ಕನಸುಗಳು ಸಾಕಾರಗೊಳ್ಳುವುದು ಕೂಡ ಸುಲಭವಲ್ಲ ಎನ್ನುವುದೂ ಅಷ್ಟೇ ನಿಜ. ಆದರೆ ಆ ಜಟಿಲತೆಗಳನ್ನು ದಾಟಿ ಕನಸುಗಳು ಸಾಕಾರಗೊಂಡಾಗಲೇ, ವಾಸ್ತವ ಕನಸಿಗಿಂತ ಸುಂದರ ಎನಿಸುವುದು.!! ವಾಸ್ತವತೆ ಭಿನ್ನವಾಗಿರುತ್ತದೆ ಎಂಬ ಭಾವನೆಯೇ ನಮ್ಮ ಎಷ್ಟೊ ಕನಸುಗಳನ್ನು ಕನಸಾಗಿಯೇ ಉಳಿಸಿಕೊಳ್ಳುವಂತೆ ಮಾಡುತ್ತದೆಯೋ ಏನೋ?! ಪುಸ್ತಕ ಓದುವಾಗ ಎಷ್ಟೋ ಕಡೆ ಹಾಗೆನಿಸಿದ್ದು ನಿಜ. ಅದರೆ ಪುಸ್ತಕ ಓದಿದ ನಂತರ ನಿರಾಶೆಯಂತೂ ಆಗಲಿಲ್ಲ. ಎಲ್ಲಾ ಜಟಿಲತೆಯ ನಂತರವೂ ಕನಸುಗಳು ವಾಸ್ತವವಾಗಲು ಸಾಧ್ಯ ಎನ್ನುವಂತಿತ್ತು.
ಇದೇ ನಡುವೆ, ಎಲೆವನ್ ಮಿನಟ್ಸ್ ಜೊತೆ-ಜೊತೆಗೆ ಶಾನ್’ನ “ಎವೆರೆಸ್ಟ್: ಬೀಯಿಂಗ್ ಅನ್’ಸ್ಟಾಪೇಬಲ್” ಪುಸ್ತಕವನ್ನು ಓದುತ್ತಿದ್ದೆ. ನನ್ನೆಲ್ಲಾ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರದಂತೆ ಶಾನ್ ನಿಂತಿದ್ದ. ಎರಡು ಡೆಡ್ಲಿ ಕ್ಯಾನ್ಸರ್’ನಿಂದ ಬದುಕುಳಿದು, ಒಂದೇ ಶ್ವಾಸಕೋಶ ಇಟ್ಟುಕೊಂಡು, ಪರ್ವತಾರೋಹಣದ ಯಾವುದೇ ಅನುಭವವಿಲ್ಲದೇ, ಕೈಯ್ಯಲ್ಲಿ ಹಣ ಇಲ್ಲದೇ, ಎವೆರೆಸ್ಟ್ ಎಂಬ ಜಗತ್ತಿನ ಅತಿ ಎತ್ತರದ ಪರ್ವತ ಹತ್ತುತ್ತೇನೆ ಎಂದಾಗ, “ದಿಸ್ ಈಸ್ ಇಂಪ್ರಾಕ್ಟಿಕಲ್” ಎಂದು ನಕ್ಕವರೇ ಹೆಚ್ಚು. ಹುಚ್ಚುತನ ಎಂದರು ಎಲ್ಲ. ಆದರೆ ಆತನ ಕನಸು ಮಾತ್ರ ಎವೆರೆಸ್ಟ್ ಅಷ್ಟೇ ಎತ್ತರ ಹಾಗೂ ಸದೃಢವಾಗಿತ್ತು. ಶಾನ್’ನ ಆ ಪುಸ್ತಕ ಓದುವಾಗ, ಒಮ್ಮೆಯೂ ಆತನಿಗೆ ವಾಸ್ತವ ಕನಸಿಗಿಂತ ಬೇರೆಯೇ ಆಗಿರುತ್ತದೆ ಅಂತ ಯಾಕೆ ಅನಿಸಲಿಲ್ಲ ಎನಿಸುತ್ತಿತ್ತು. ಮನೆಯಿಂದ ಎಷ್ಟೋ ದೂರ, ಯಾವುದೋ ಪರ್ವತದ ಬುಡದಲ್ಲಿ ಆಶ್ರಯವಿಲ್ಲದೆ ಸಣ್ಣದೊಂದು ಟೆಂಟ್’ನಲ್ಲಿ ಕಾಲ ಕಳೆಯುತ್ತಾ, ಪುಸ್ತಕಗಳನ್ನೋದಿ ಟ್ರೈನಿಂಗ್ ಮಾಡಿಕೊಳ್ಳುತ್ತಿದ್ದಾಗ ಇದೆಲ್ಲ ತನ್ನ ಸ್ಟುಪಿಡ್’ನೆಸ್ ಅಂತ ಯಾಕೆ ಅನಿಸಲಿಲ್ಲ.? ಸ್ಪಾನ್ಸರ್’ಗಳ ಎದುರಲ್ಲಿ ತನ್ನ ಇಂಪ್ರಾಕ್ಟಿಕಲ್ ಕನಸನ್ನ ಹೇಳಿಕೊಂಡ ಶಾನ್’ಗೆ ನಕ್ಕು ಮನೆಯ ದಾರಿ ತೋರಿಸಿದಾಗ ಯಾಕೆ ತನ್ನ ಕನಸನ್ನು ಮಧ್ಯೆಯೇ ಕೈ ಬಿಡಲಿಲ್ಲ.? ಆತನಿಗೆ ತನ್ನ ಯೋಚನೆಗಳ ಮೇಲೆ, ಕಲ್ಪನೆಗಳ ಮೇಲೆ, ಕನಸುಗಳ ಮೇಲೆ ಎಲ್ಲರಿಗಿಂತ ಹೆಚ್ಚು ಭರವಸೆಯಿತ್ತು. ಆತ ಜನರ ಟೀಕೆಗಳಿಗಿಂತ, ತನ್ನ ನಂಬಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದ, ನೀರಸ ಬದುಕಿಗಿಂತ ತನ್ನ ಇಂಪ್ರಾಕ್ಟಿಕಲ್ ಎನಿಸುವ ಕನಸನ್ನೇ ಆಯ್ಕೆ ಮಾಡಿಕೊಂಡಿದ್ದ. ಅದಕ್ಕಾಗಿಯೇ ಇರಬೇಕು “ನಮ್ಮ ಯೋಚನೆಗಳು ನಮ್ಮ ಕಾರ್ಯಗಳನ್ನು ಪ್ರೇರೇಪಿಸುತ್ತವೆ, ನಮ್ಮ ಕಾರ್ಯಗಳು ನಮ್ಮ ಬದುಕನ್ನ ರೂಪಿಸುತ್ತದೆ” ಎಂದಿದ್ದು ಶಾನ್.
ನನ್ನ ಕಸಿನ್ ಒಮ್ಮೆ ತನ್ನ ಕಲ್ಪನೆಗಳ ಬಗ್ಗೆ ಹೇಳುವಾಗ, “ನಿನಗಿದು ಸ್ಟುಪಿಡ್ ಅನಿಸಬಹುದು, ಆದರೆ ನನ್ನ ಕಲ್ಪನೆಗಳಿಗೆ ಮಿತಿಯೇ ಇರುವುದಿಲ್ಲ. ಎಷ್ಟೋ ಬಾರಿ ಇದೆಲ್ಲ ಎಲ್ಲಿ ಆಗುವುದು ಎನಿಸುತ್ತದೆ, ಆದರೆ ಕೊನೆಪಕ್ಷ ಕಲ್ಪನೆಯಲ್ಲಾದರೂ ಇದೆಲ್ಲಾ ಮಾಡಿ ಬಿಡೋಣ ಅಂತ ನನ್ನ ಕಲ್ಪನೆಗಳನ್ನು ಮುಂದುವರೆಸುತ್ತೇನೆ” ಎಂದಳು. ಅವಳು ಹೇಳಿದ್ದು ಕೇಳಿ ನನಗೆ ಖುಷಿಯಾಗಿತ್ತು. ನಿಜಕ್ಕೂ ಸ್ಟುಪಿಡ್’ನೆಸ್ ಎನಿಸುವುದು ನಾವು ನಮ್ಮ ಕಲ್ಪನೆಗಳಿಗೆ ಮಿತಿಯನ್ನು ಹಾಕಿಕೊಳ್ಳುವುದು. ಈ ಮಿತಿಗಳಿಗೊಂದು ಮಿತಿ ಇರಬೇಕು. ಇಲ್ಲ ಅಂದರೆ ‘ಇದು ಹೇಗೂ ಆಗುವುದಿಲ್ಲ’ ಎಂಬ ಭಾವ ನಮ್ಮ ಪ್ರಯತ್ನಗಳಿಗೂ ಮಿತಿಯನ್ನು ಹಾಕಿಬಿಡುತ್ತದೆ. ವಾಸ್ತವ ಬದುಕು ಕಠಿಣತೆಗಳಿಂತ ಕೂಡಿರುತ್ತದೆ ನಿಜ, ವಾಸ್ತವದ ಕಠಿಣತೆ ಕನಸುಗಳಿಗೇ ಮಿತಿ ಹಾಕಿದರೆ?!
ನಮ್ಮ ಕನಸುಗಳು ನಿಜಕ್ಕೂ ನಮಗೆ ಪ್ರಮುಖವಾಗಿದ್ದರೆ, ವಾಸ್ತವದ ಕಠಿಣತೆಯನ್ನೆಲ್ಲಾ ಮೀರಿ ಅದರೆಡೆಗೆ ಸಾಗುತ್ತೇವೆ. ಎಲ್ಲಾ ತರ್ಕಗಳ, ಎಲ್ಲಾ ತೊಡಕುಗಳ ಮೀರಿ ಕನಸು ವಾಸ್ತವವಾದಾಗ ಭಿನ್ನ ಎನಿಸುವುದರ ಬದಲಾಗಿ ಸುಂದರ ಎನಿಸಿಕೊಳ್ಳುತ್ತದೆ. ಆದರೆ ನಮ್ಮ ಆಯ್ಕೆ ಕೇವಲ ತರ್ಕಗಳ, ಇತರರ ಟೀಕೆಗಳ ಮೇಲೆ ನಿರ್ಧರಿತವಾದರೆ ಕನಸು ಕನಸಾಗಿಯೇ ಉಳಿದು, ವಾಸ್ತವ ಭಿನ್ನವಾಗಿಬಿಡುತ್ತದೆ.