ಅಂಕಣ

ಮಾಮರವೆಲ್ಲೋ…ಕೋಗಿಲೆಯೆಲ್ಲೋ…?!

ಆಗ ತಾನೇ ಕಂಗಳೆರಡು ಸೃಷ್ಟಿಯ ಸೌಂದರ್ಯದಲ್ಲಿ ತಮ್ಮ ದೃಷ್ಟಿಯನ್ನು ವಿಲೀನಗೊಳಿಸಿದ್ದವು. ಆ ಎಳೆ ಮನಸಿಗೆ ಅಂದೇ ಜಗತ್ತಿನ ಜನನ. ಅದಕ್ಕೆ ಇಡೀ ಜಗತ್ತೇ ಅಪರಿಚಿತ. ’ಅಮ್ಮ’ ಎಂಬ ಕರುಳ ಸಂಬಂಧವೊಂದು ಹೊರತುಪಡಿಸಿ ಎಲ್ಲವೂ ಎಲ್ಲರೂ ಅಪರಿಚಿತ. ದಿನ ಕಳೆದಂತೆ ಒಂದೊಂದೇ ಸಂಬಂಧಗಳು ಪರಿಚಯವಾಗುತ್ತಾ ಹೋಗುತ್ತದೆ. ಅಪ್ಪ, ಅಕ್ಕ, ಅಣ್ಣ, ತಮ್ಮ, ತಂಗಿ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ ಹೀಗೆ ರಕ್ತಸಂಬಂಧಗಳ ಪರಿಚಯದ ಹಾವಳಿಯಾಗುತ್ತದೆ. ಸಂಬಂಧಗಳ ವೃಕ್ಷ ಹೊಸ-ಹೊಸ ರೆಂಬೆಗಳಾಗಿ ಕವಲೊಡೆಯುತ್ತದೆ. ಪುಟ್ಟ ಮಗುವಿಗೆ ಅದರ ಅಮ್ಮನೋ, ಅಪ್ಪನೋ ಎದುರಿಗಿರುವ ಒಬ್ಬ ಅಣ್ಣನನ್ನು ತೋರಿಸಿ “ಇದು ಯಾರು ಪುಟ್ಟ?” ಎಂದು ಪ್ರಶ್ನಿಸಿದಾಗ, “ಎಲ್ಲೋ ನೋಡಿದ್ದೀನಲ್ಲಾ…?” ಎನ್ನುವ ಆಲೋಚನೆಯಲ್ಲಿ ಆ ಪುಟ್ಟ ಕಂಗಳಲ್ಲಿ ಕಾಣುವ ಸೋಜಿಗವೇ ಒಂದು ಚಂದ. ನಂತರ “ಅವನು ನಿನ್ನ ಅಣ್ಣ. ಅಣ್ಣಾ ಅಂತ ಕರಿ” ಎಂದ ಕೂಡಲೇ ಅದು ತನ್ನ ತೊದಲು ನುಡಿಗಳಲ್ಲಿ “ಅ…ನ್ನಾ…” ಅನ್ನುವ ಕರೆ ಕೇಳಿದಾಗ, ಆಹಾ ಇಷ್ಟು ಸುಂದರ ಸಂಬಂಧವೇ ಅದು ಅನ್ನಿಸಿಬಿಡುತ್ತದೆ. ಅದಕ್ಕೆ ತಾನೇ ಮಗು ಮನಸು ಎನ್ನುವುದು. ಬಹುಷಃ ಸಂಬಂಧಗಳಲ್ಲಿ ಈ ಮುಗ್ಧತೆ ಶಾಶ್ವತವಾಗಿ ಇದ್ದರೆ ಬದುಕು ಅತ್ಯಂತ ಸುಂದರವಾಗಬಹುದು.

ಈ ರಕ್ತ ಸಂಬಂಧಗಳ ಪರಿಚಯಗಳ ಒಂದು ಹಂತ ಮುಗಿದ ನಂತರ ಬದುಕಿನಲ್ಲಿ ಆರಂಭವಾಗುವ ಇನ್ನೊಂದು ಹಂತ ಅಪೂರ್ವವಾದದ್ದು. ಸಮಾಜದ ಸಮಾನ ವಯಸ್ಕ ಹಾಗೂ ಸಮಾನ ಮನಸ್ಕರೊಂದಿಗೆ ಒಡನಾಟ ಆರಂಭವಾಗುವ ಈ ಹಂತದಲ್ಲಿ ಅನೇಕ ಅಪರಿಚಿತ ಮನಸುಗಳು ಪರಿಚಿತವಾಗುತ್ತವೆ. ಪ್ರಾಥಮಿಕ ಹಂತದಲ್ಲಿ ಈ ಒಡನಾಟಗಳು ಎಳೆ ಮನಸುಗಳಿಗೆ ಅಷ್ಟಾಗಿ ಅರಿವಿಗೆ ಬಾರದೇ ಇರಬಹುದು. ಆದರೆ ಪ್ರೌಢಾವಸ್ತೆಯಲ್ಲಿ ಹಾಗೂ ಅದರ ನಂತರ ಭೇಟಿಯಾಗುವ ಪ್ರತಿ ವ್ಯಕ್ತಿಯ ನಡುವೆ ಅಪರಿಚಿತತೆಯ ಪರದೆ ಸರಿದು ಪರಿಚಿತರಾಗುವ ಪರಿಗೆ ಅರಿಯದೇ ಮಾರುಹೋಗುತ್ತೇವೆ. ಇನ್ನು, ಪರಿಚಿತವಾದ ಮನಸ್ಸುಗಳಲ್ಲಿ ಕೂಡ ಎಲ್ಲವೂ ಆತ್ಮೀಯವಾಗಲಾರವು. ಅವುಗಳಲ್ಲಿ ಒಂದಷ್ಟು ಮನಸುಗಳು ಮಾತ್ರ ಭಾವನೆಗಳನ್ನೇರಿ ಎದೆಗೆ ಪ್ರೀತಿ ಮಳೆ ಸುರಿಸುತ್ತವೆ. ಹೀಗೆ ಪ್ರೀತಿ ಮಳೆ ಸುರಿಸಿ ಬದುಕಿಗೆ ಆತ್ಮೀಯವಾದ ವ್ಯಕ್ತಿಗಳನ್ನು ನೆನಪಿಸಿಕೊಂಡಾಗೆಲ್ಲ ಸಣ್ಣದೊಂದು ಸಕ್ಕರೆ ನಗು ತುಟಿಗಳನ್ನು ಮುತ್ತಿಕ್ಕದಿರದು. ಈ ಸಂಬಂಧಗಳ ಕುರಿತು ಆಲೋಚಿಸಿದಾಗೆಲ್ಲ ನನಗಾಗುವ ಅಚ್ಚರಿ ಏನೆಂದರೆ, ಈ ಎಲ್ಲ ಪ್ರಿಯ ಮನಸುಗಳ ಜೊತೆಗೆ ಮೊದಲು ಸಂಧಿಸಿದ ದಿನ ನೆನಪಿದೆ; ಹಾಗೆಯೇ, ಅವರು ಹೃದಯಕ್ಕೆ ಇಷ್ಟೊಂದು ಹತ್ತಿರವಾಗಿರುವ ಪ್ರಸ್ತುತತೆಯ ಅರಿವಿದೆ. ಆದರೆ ಈ ನಡುವೆ ಪರಿಚಿತತೆ ಆತ್ಮೀಯತೆಯಾಗಿ ಬದಲಾದ ಆ ಕ್ಷಣ ಅಥವಾ ದಿನ ಯಾವುದು ಅಂದರೆ ನೆನಪಾಗುವುದಿಲ್ಲ. ಅದೇಕೆ ಈ ಒಂದಷ್ಟು ಮನಸುಗಳು ಮಾತ್ರ ಮನಸನ್ನು ಆವರಿಸುತ್ತಾರೆ? ನಾವೇಕೆ ಅವರನ್ನು ಅಷ್ಟು ಹಚ್ಚಿಕೊಳ್ಳುತ್ತೇವೆ? ಒಂದೇ ದಿನ ಒಟ್ಟಿಗೇ ಭೇಟಿಯಾದ ಇಬ್ಬರಲ್ಲಿ ಒಬ್ಬರ ಕಣ್ಣು ಮಾತ್ರ ಕಣ್ಮುಚ್ಚಿದಾಗೆಲ್ಲ ಏಕೆ ಕಾಡುತ್ತದೆ? ಇವೆಲ್ಲಕ್ಕಿಂತ ಹೆಚ್ಚಾಗಿ, ಅವರೂ ಕೂಡ ಏಕೆ ನನ್ನನ್ನು ಇಷ್ಟಪಡುತ್ತಾರೆ? ಅವರಿಗೆ ನನ್ನನ್ನು ಪ್ರೀತಿಸುವಂತೆ ಮಾಡಿದ ನನ್ನ ವ್ಯಕ್ತಿತ್ವದಲ್ಲಿನ ಆ ಗುಣ ಯಾವುದು? ಅವರ ಬಳಿ ಮಾತನಾಡದೇ ಉಳಿದರೆ ಏಕೆ ಮನಸು ಚಡಪಡಿಸುತ್ತದೆ? ಅವರಿಗೇಕೆ ನನ್ನ ಮೇಲೆ ಒಡಹುಟ್ಟಿದವರಿಗಿಂತ ಹೆಚ್ಚು ಕಾಳಜಿ? ಹೀಗೆ ಕಾಡುವುದು ಹಲವು ಸಿಹಿಯಾದ ಪ್ರಶ್ನೆಗಳು. ಸಿಹಿಯಾದ ಪ್ರಶ್ನೆಗಳು ಅಂದಿದ್ದೇಕೆ ಎಂದರೆ, ಬಹುಷಃ ಈ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಾಗ ಮಾತ್ರ ಬದುಕು ಸಿಹಿಯಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಸಿಹಿ ಪ್ರಶ್ನೆಗಳು ಕಾಡಿದಾಗೆಲ್ಲ ನನಗೆ ನೆನಪಾಗುವ ಸಾಲುಗಳೆಂದರೆ : “ಮಾಮರವೆಲ್ಲೋ, ಕೋಗಿಲೆಯೆಲ್ಲೋ…ಏನೀ ಸ್ನೇಹ ಸಂಬಂಧ…ಎಲ್ಲಿಯದೋ ಈ ಅನುಬಂಧ…!!!”

ಅದೆಷ್ಟೋ ಸ್ನೇಹಿತರ ಭೇಟಿ ಜೀವನದಲ್ಲಿ ಆಗಿರಬಹುದು, ಹೆಗಲ ಮೇಲೆ ಕೈ ಹಾಕಿ ನಡೆಯುವ ಸಲಿಗೆ ಕೆಲವೇ ಕೆಲವು ಗೆಳೆಯರಿಗಿರುತ್ತದೆ. ಅದೆಷ್ಟೋ ಚಂದ-ಚಂದದ ಹೆಸರಿನ ಗೆಳೆಯ/ಗೆಳತಿಯರಿರಬಹುದು ಆದರೆ ಯಾವ ನಾಲ್ಕು ಜನರಿಗೆ ಅತಿ ವಿಚಿತ್ರ ಅಡ್ಡ ಹೆಸರಿಡುತ್ತೇವೋ ಅವರನ್ನು ಪ್ರೀತಿಸುವಷ್ಟು ಇನ್ಯಾರನ್ನೂ ಪ್ರೀತಿಸಲಾರೆವು. ಅವರುಗಳು ಎಂದಿಗೂ ಹೃದಯದ ಭಾಗವಾಗಿರುತ್ತಾರೆ. ಅವರಲ್ಲಿ ಎಲ್ಲವನ್ನೂ ಭಿನ್ನವಿಸಿಕೊಳ್ಳುತ್ತೇವೆ. ನಮ್ಮ ಯಶಸ್ಸಿನಲ್ಲಿ ನಮಗಿಂತ ಜಾಸ್ತಿ ಸಂಭ್ರಮಿಸುವ, ನಮ್ಮ ನೋವುಗಳಲ್ಲಿ ಸಂತೈಸುವ, ಸ್ಥೈರ್ಯ ತುಂಬುವ ಅದ್ಭುತ ಮನಸುಗಳು ಅವು. ದಿನಚರಿಯಲ್ಲಿ ಹೊಸದೇನೋ ನಡೆದಾಗ ತಕ್ಷಣ ಯಾರಲ್ಲಿಯೋ ಹೇಳಿಕೊಳ್ಳಬೇಕೆನಿಸಿದಾಗ ನೆನಪಾಗುವುದು ಮತ್ತೆ ಅದೇ ಪ್ರೀತಿಸುವ ಹೃದಯಗಳು. ಇನ್ನು ಕೆಲವೊಮ್ಮೆ ಕೆಲಸವಿಲ್ಲದೆ ಒಂದಷ್ಟು ತರಲೆ ಕೆಲಸಗಳಲ್ಲಿ ತೊಡಗಿಕೊಂಡಾಗ ಅದರಲ್ಲಿ ಪಾಲುದಾರರಾಗುವುದು ಕೂಡ ಅದೇ ಹೃದಯಗಳು. ನಮ್ಮೆಲ್ಲ ಭಾವಗಳ ಸಹಪಾಠಿಯಾಗಬಲ್ಲ, ಎಲ್ಲ ತರಲೆ-ತಕರಾರುಗಳಲ್ಲಿ ನಮ್ಮೊಂದಿಗಿರುವ, ರಕ್ತಸಂಬಂಧಗಳಿಗಿಂತ ಹೆಚ್ಚು ಕಾಳಜಿ ವಹಿಸುವ; ಈ ನಮ್ಮ ಹುಚ್ಚು ಮನಸಿನ ಮೆಚ್ಚಿನ ಬಂಧುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಜೀವನ ಪಯಣದಲ್ಲಿ ಈ ಅಪರಿಚಿತ, ಅನಾಮಿಕ ಬಂಧನಗಳೇ ಒಂದು ಸೋಜಿಗದಂತೆ ಕಾಣುತ್ತದೆ ನನಗೆ. ಈ ಮನಸಿನ ಸಹಪಾಠಿಗಳೊಂದಿಗೆ ಕಳೆವ ಕ್ಷಣಗಳಲ್ಲಿ ಮನಸಿನ ಕ್ಯಾಮರಾ ಕ್ಲಿಕ್ಕಿಸುವ ಸೆಲ್ಫಿಗಳಿಗೆ ಲೆಕ್ಕವಿಲ್ಲ. ನೆನಪಿನ ಆಲ್ಬಮ್ ಗೆ ಗಿಗಾ-ಬೈಟ್ ಟೆರಾ-ಬೈಟ್ ಗಳ ಮಿತಿ ಇದೆಯೇ? ಖಂಡಿತ ಇಲ್ಲ. ಎಲ್ಲ ಚಿಕ್ಕ ಚಿಕ್ಕ ಕ್ಷಣಗಳೂ ಅಲ್ಲಿ ಒಂದು ಕ್ಲಿಕ್. ಈ ರೀತಿ ಮಾನಸ ಸರೋವರದ ಪ್ರತಿ ಪ್ರೀತಿ ಅಲೆಗಳನ್ನು ನೆನಪುಗಳಾಗಿ ಹಿಡಿದಿಡುವ ಇನ್ ಬಿಲ್ಟ್ ಕ್ಯಾಮರಾಗೆ ನನ್ನದೊಂದು ಹೃತ್ಪೂರ್ವಕ ಧನ್ಯವಾದ. ಇದೇ ಆಲ್ಬಮ್ ಅಲ್ಲವೇ ಏಕಾಂಗಿಯಾಗ ಕುಳಿತಾಗ ಮೊಗದ ಮೇಲೊಂದು ಮುಗ್ಧ ನಗು ಬರಿಸುವುದು? ಇದೇ ಆಲ್ಬಮ್ ಅಲ್ಲವೇ ಎಷ್ಟು ಬಾರಿ ಪುಟಗಳನ್ನು ತಿರುವಿದರೂ ಪ್ರತಿ ಬಾರಿಯೂ ಖುಷಿಯ ಹನಿಗಳನ್ನು ಹೂಕಂಗಳಲ್ಲಿ ಅರಳಿಸುವುದು? ಇದೇ ಆಲ್ಬಮ್ ಅಲ್ಲವೇ ಮತ್ತೆ ಇನ್ನೊಂದಷ್ಟು ಸೆಲ್ಫಿಗಳಿಗೆ ಪ್ರೇರೆಪಿಸುವ ಶಕ್ತಿ? ಇದೇ ಆಲ್ಬಮ್ ಅಲ್ಲವೇ ನಮ್ಮಲ್ಲಿ ಜೀವನ ಪ್ರೀತಿ ಬೆಳೆಸುವುದು? ಖಂಡಿತ ಹೌದು. ನೆನಪುಗಳಿಲ್ಲದ ಜೀವನ ಕಲ್ಪಿಸಲೂ ಅಸಾಧ್ಯ.

ಹೀಗೆ ಸದ್ದಿಲ್ಲದೇ ಮನದ ಮನೆಯಲ್ಲಿ ಹೆಜ್ಜೆ ಇಟ್ಟು, ನೋವುಗಳಿಗೆಲ್ಲ ಮದ್ದಾಗಿ, ಕಳೆದ ಮುಗ್ಧತೆಯನ್ನು ಎಲ್ಲಿಂದಲೋ ಮತ್ತೆ ಕದ್ದು ತರುವ ಈ ಆತ್ಮೀಯ ಮುದ್ದು ಮನಸುಗಳಿಗೆ ಎಂದೂ ಋಣಿಯಾಗಿರುತ್ತೇನೆ ನಾನು. ಆ ಎಲ್ಲ ಸುಂದರ ಮನಸುಗಳಿಗೂ ನಾನು ಪದೇ ಪದೇ ಕೇಳುವ ಪ್ರಶ್ನೆ ಒಂದೇ. “ಮಾಮರವೆಲ್ಲೋ, ಕೋಗಿಲೆಯೆಲ್ಲೋ… ಏನೀ ಸ್ನೇಹ ಸಂಬಂಧ? ಎಲ್ಲಿಯದೋ ಈ ಅನುಬಂಧ…??!!!”

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!