Featured ಅಂಕಣ

ಮಾನ್ಯ ಮುಖ್ಯಮಂತ್ರಿಗಳೇ, ಇಲ್ಲಿವೆ ಸಪ್ತಸೂತ್ರಗಳು

ಮುಖ್ಯಮಂತ್ರಿಗಳು ಸುದ್ದಿಯಲ್ಲಿದ್ದಾರೆ. ಸಣ್ಣದಾಗಿ ಶುರುವಾದ ಕೈಗಡಿಯಾರದ ಟಿಕ್ಟಿಕ್ ಸದ್ದು ದೊಡ್ಡದಾಗುತ್ತಾ ಬಂದು ಟೈಂಬಾಂಬ್’ನ ಸದ್ದಿನಂತಾಗಿ ಇನ್ನೇನು ತನ್ನನ್ನು ಕುರ್ಚಿಯಿಂದ ಎತ್ತಿ ಒಗೆದೇ ಬಿಡುತ್ತದೆ ಎಂಬುದು ಖಾತರಿಯಾದ ಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಸಂತನಂತೆ ಕಳಚಿ ಸರಕಾರದ ಖಜಾನೆಯ ಹುಂಡಿಗೆ ಹಾಕಿದ್ದಾರೆ. ಈಗ ಅವರು ಅದೇನೇ ಸ್ಪಷ್ಟೀಕರಣ ಕೊಡಲಿ; ಇಡೀ ಪ್ರಕರಣದಲ್ಲಿ ಅಕ್ರಮವನ್ನು ಬೆಳಕಿಗೆ ತಂದ ಕುಮಾರಸ್ವಾಮಿ ಗೆದ್ದಿದ್ದಾರೆಂದೇ ಹೇಳಬೇಕು. ವಾಚನ್ನು ಕಳಚಿಟ್ಟ ಮಾತ್ರಕ್ಕೆ ಮುಖ್ಯಮಂತ್ರಿಗಳು ತಾನು “ಶುದ್ಧಹಸ್ತ”ನಾದೆನೆಂದು ಬೀಗುವಂತಿಲ್ಲ. ವಾಚ್’ನ ಹಿನ್ನೆಲೆ ಏನು; ಅದೇಕೆ ತನ್ನ ಕೈಗೆ ಬಂತು; ತನ್ನ ಗೆಳೆಯರು ಯಾವ ಪ್ರತಿಫಲಾಪೇಕ್ಷೆ ಇಲ್ಲದೇನೇ ಅದನ್ನು ತನ್ನ ಕೈಗೆ ಕಟ್ಟಿದರೇ; ವಿವಾದ ಹುಟ್ಟಿಕೊಳ್ಳದೇ ಇರುತ್ತಿದ್ದರೆ ತಾನು ಅದನ್ನು ಖಜಾನೆಗೆ ಒಪ್ಪಿಸುತ್ತಿದ್ದೆನೇ- ಎಂಬ ಪ್ರಶ್ನೆಗಳಿಗೂ ಅವರು ಉತ್ತರ ಕೊಡಬೇಕಾಗುತ್ತದೆ. ವಾಚಿನ ವಿವಾದ ಬದಿಯಲ್ಲಿರಲಿ; ನಮ್ಮ ಸರಕಾರ ನಿಜಕ್ಕೂ ಎತ್ತ ಸಾಗುತ್ತಿದೆ? ರಾಜ್ಯವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬುದು ಇನ್ನೊಂದು ದೊಡ್ಡ ಚರ್ಚೆಗೆ ನಾಂದಿ ಹಾಡುವ ಸಂದರ್ಭ ಎದುರಾಗಿದೆ.

ಕಳೆದ ಎರಡು ವಾರಗಳಲ್ಲಿ ನಡೆದು ಹೋಗಿರುವ ಘಟನೆಗಳನ್ನಷ್ಟೇ ತೆಗೆದುಕೊಂಡರೂ ಸಾಕು, ನಮ್ಮ ರಾಜ್ಯದ ದುರವಸ್ಥೆ ಕಣ್ಣಿಗೆ ರಾಚುತ್ತದೆ. ಸರಕಾರಕ್ಕೂ ಮುಖ್ಯಮಂತ್ರಿಗಳಿಗೂ ನಡುವೆ ಹೊಂದಾಣಿಕೆ ಇಲ್ಲ. ಇಬ್ಬರೂ ಎರಡು ದೋಣಿಯ ಪ್ರಯಾಣಿಕರಂತೆ ಅಥವಾ ಸಂಬಂಧವಿಲ್ಲದ ಎರಡು ಸರಳರೇಖೆಗಳಂತೆ ತಮ್ಮ ಪಾಡಿಗೆ ತಾವು ಹೋಗುತ್ತಿರುವುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಗಳು ಯಾವ ವಿಷಯದಲ್ಲೂ ತನ್ನ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸಂಪುಟವೂ ಅಷ್ಟೆ; ಯಾವೊಂದು ಸಮಸ್ಯೆಯಲ್ಲೂ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಸಲಹೆ ಕೇಳುತ್ತಿಲ್ಲ! ಎಲ್ಲರೂ ಅವರವರಿಗೆ ಕಂಡಂತೆ ಮೂಗಿನ ನೇರಕ್ಕೆ ಕೆಲಸ ಮಾಡಿ ಕೈತೊಳೆದುಕೊಂಡರೆ ಸಾಕು ಎಂಬ ಹಂತಕ್ಕೆ ಬಂದಿದ್ದಾರೆ. ಈ ರಾಜ್ಯದ ಸಮಸ್ಯೆಗಳ ಒಂದು ಸ್ಥೂಲ ಚಿತ್ರಣ ಇದು. ಮುಖ್ಯಮಂತ್ರಿಗಳು ಅತ್ಯಂತ ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕಿರುವ ಏಳು ಕೆಲಸಗಳು ಇವು:

(೧) ಸಿದ್ದರಾಮಯ್ಯನವರೇ, ಸದ್ಯದಲ್ಲೇ ಸಂಪುಟ ವಿಸ್ತರಣೆ ಮಾಡುವ ಮಾತುಗಳನ್ನಾಡಿದ್ದೀರಿ. ಸಮಾಧಾನಕರ ಕೆಲಸ ಮಾಡದ ಅಯೋಗ್ಯರನ್ನು ಕೈಬಿಟ್ಟು, ಹೊಸಬರನ್ನು ಸೇರಿಸಿಕೊಳ್ಳುವ; ಒಂದಿಷ್ಟು ಹೆಚ್ಚುವರಿ ಖಾತೆಗಳನ್ನು ತೆರೆದು ಅವಕ್ಕೂ ಸಚಿವರನ್ನು ನೇಮಿಸುವ ವಿಚಾರ ಹೇಳಿದ್ದೀರಿ. ಬೇಡ! ಸಂಪುಟವನ್ನು ಇನ್ನಷ್ಟು ಹಿಗ್ಗಿಸಿ ಉಬ್ಬಿಸುವ ಕೆಲಸ ಖಂಡಿತಾ ಮಾಡಬೇಡಿ! ಈಗ ನಿಮ್ಮ ಸಂಪುಟದಲ್ಲಿ ತುಂಬಿಕೊಂಡಿರುವ ನಾಲಾಯಕ್ ಸಚಿವರನ್ನು ಕೈಬಿಟ್ಟರೆ ಸಾಕಾಗಿದೆ! ಕರೆಂಟ್ ಕೇಳಿದರೆ ಮನೆಯ ಹೆಂಚು ತೆಗೆದು ನುಗ್ಗಿ ದೂರುದಾರರನ್ನೇ ಬಂಧಿಸುವಂತೆ ಪೊಲೀಸರಿಗೆ ಆದೇಶ ಕೊಡುವ ಇಂಧನ ಸಚಿವರು ನಮಗೆ ಬೇಕಾ? ಒಂದೊಂದು ಹಾಸ್ಟೆಲ್’ನ ಬಿಲ್ ಪಾಸ್ ಮಾಡಿಸಲು ಇಂತಿಷ್ಟು ಲಕ್ಷ ಎಂದು ಬೇಡಿಕೆ ಇಡುವ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಖಾತೆಯ ಮಂತ್ರಿಗಳು ಬೇಕಾ? ಇನ್ನು ಕೃಷಿ ಮತ್ತು ನೀರಾವರಿ ಸಚಿವರುಗಳಂತೂ ಗೂಗಲ್ನಲ್ಲಿ ಹುಡುಕಿದರೂ ಸಿಗುತ್ತಿಲ್ಲ. ತಲೆಹಿಡುಕ ಬುದ್ಧಿಜೀವಿಗೆ ಇಪ್ಪತ್ತನಾಲ್ಕು ಗಂಟೆಯೂ ಸರಕಾರದ ಖರ್ಚಿನಲ್ಲಿ ಪೊಲೀಸ್ ರಕ್ಷಣೆ ಒದಗಿಸುವ ತಾವು, ರೈತರು ನೀರು ಕೇಳಿದರೆ ಅದೇ ಖಾಕಿಧಾರಿಗಳನ್ನು ನುಗ್ಗಿಸಿ ಬೆನ್ನ ಮೇಲೆ ರಕ್ತ ಚಿಮ್ಮುವಂತೆ ಹೊಡೆಸುತ್ತೀರಿ. ಮಾನ್ಯ ಗೃಹ ಸಚಿವರು ಈ ಪ್ರಕರಣದ ಹೊಣೆ ಹೊತ್ತು ರಾಜೀನಾಮೆ ಯಾಕೆ ಕೊಡುವುದಿಲ್ಲ? ಸ್ವಾಮಿ ಮುಖ್ಯಮಂತ್ರಿಗಳೆ, ಇವರನ್ನೆಲ್ಲ ಇಟ್ಟುಕೊಂಡು ಏನು ಮಾಡ್ತೀರಿ?

ಆಚಾರ್ಯ ಚಾಣಕ್ಯರು ಹೇಳುತ್ತಾರೆ: “ಹೂವಿನ ಸುವಾಸನೆ ಗಾಳಿ ಬೀಸುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಸಜ್ಜನರ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲೂ ಸಮಾನವಾಗಿ ಹರಡುತ್ತದೆ” ಎಂದು. ಸಜ್ಜನರು ಮಾತ್ರವಲ್ಲ; ದುರ್ಜನರ ದುಷ್ಟತನಗಳೂ ಎಲ್ಲ ಕಡೆಯಲ್ಲಿ ಸಮಾನವಾಗಿ ಪ್ರಚಾರವಾಗುವ ಸಂಗತಿಗಳೇ! ಮುಖ್ಯಮಂತ್ರಿಗಳು, ಸಮಯವಿದ್ದರೆ, ಕಳೆದ ಆರು ತಿಂಗಳುಗಳಲ್ಲಿ ತನ್ನ ಸಂಪುಟದ ಸಹೋದ್ಯೋಗಿಗಳು ಯಾವೆಲ್ಲ ವಿಷಯದಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಮಾಡಿದ್ದಾರೆ ಎಂಬುದನ್ನು ಪರಾಮರ್ಶಿಸಬೇಕು. ಅದರಲ್ಲಿ, ರೈತರು ಸಾಲ ಮಾಡಿ ಸತ್ತರೆ ನಾವೇನು ಮಾಡಬೇಕು ಎಂದವರಿದ್ದಾರೆ. ಇಬ್ಬರೇ ಮಾಡಿದ ರೇಪ್ ಸಾಮೂಹಿಕ ಅತ್ಯಾಚಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದವರಿದ್ದಾರೆ. ನನ್ನ ಫೋನ್ ರಿಸೀವ್ ಮಾಡದವರನ್ನು ಎತ್ತಂಗಡಿ ಮಾಡೋದೇ ಎಂದು ಎದೆ ತಟ್ಟಿಕೊಂಡವರಿದ್ದಾರೆ. ಮಂತ್ರಿ ಹೋಗುವಾಗ ಟ್ರಾಫಿಕ್ ತೊಂದರೆ ಆಗುವುದು ನಿಜ; ಇವನ್ನೆಲ್ಲ ಜನಸಾಮಾನ್ಯರು ಸಹಿಸಿಕೊಳ್ಳಬೇಕು ಎಂದವರಿದ್ದಾರೆ. ಮುಖ್ಯಮಂತ್ರಿಗಳಿಗೆ, ತನ್ನ ಸರಕಾರದ ಈ ಬಗೆಯ ಪ್ರಸಿದ್ಧಿಯ ಬಗ್ಗೆ ಏನೂ ಅನ್ನಿಸುವುದಿಲ್ಲವೆ?

(೨) ಬುದ್ಧಿಜೀವಿಗಳನ್ನು ದೂರ ಇಡಿ: ಮುಂದಿನ ಚುನಾವಣೆಯಲ್ಲಿ ನಾಲ್ಕು ಓಟಾದರೂ ಗಿಟ್ಟಿಸಿಕೊಳ್ಳಬೇಕೆಂಬ ಹಂಬಲವಿದ್ದರೆ, ಅದಕ್ಕೆ ಕಲ್ಲು ಹಾಕುತ್ತಿರುವ ಬುದ್ಧಿಜೀವಿಯೆಂಬ ವಿಶೇಷ ತಳಿಯ ಪ್ರಾಣಿಗಳನ್ನು ಮೊದಲು ನಿಮ್ಮ ಪ್ರಭಾವಲಯದಿಂದ ಹೊರಗಿಡಬೇಕಾದ ಅನಿವಾರ್ಯತೆ ಇದೆ. ಕಳೆದ ಎರಡೂವರೆ ವರ್ಷಗಳಿಂದಲೂ ರಾಜ್ಯದಲ್ಲಿ ಇವರದ್ದೇ ಆಟಾಟೋಪ, ಇವರದ್ದೇ ಬಯಲಾಟ ಎನ್ನುವಂತಾಗಿದೆ. ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳನ್ನು ವಾಚಾಮಗೋಚರ ಬಯ್ಯುವುದೇ ತಮ್ಮ ಕರ್ತವ್ಯ ಎಂದು ಇವರು ತಿಳಿದಿದ್ದಾರೆ. ದೂರದ ದಾದ್ರಿಯಲ್ಲಿ ಆಗುವ ಗಲಾಟೆಗೆ ಇವರು ಇಲ್ಲಿ ಹಸುವಿನ ಮಾಂಸ ತಿಂದು ಗಬ್ಬೆಬ್ಬಿಸುತ್ತಾರೆ. ತಮ್ಮ ವಿರುದ್ಧ ದನಿಯೆತ್ತುವವರನ್ನು ಪೊಲೀಸ್ ಕೇಸುಗಳಲ್ಲಿ ಸಿಕ್ಕಿಸಿ ಹಾಕುತ್ತಾರೆ. ಇವೆಲ್ಲ ಅಪಸವ್ಯಗಳಿಗೂ ಸರಕಾರದ ನೇರ ಬೆಂಬಲ ಇದೆ ಎಂಬುದು ಮೇಲ್ನೋಟಕ್ಕೆ ಜನರಿಗೆ ತಿಳಿದು ಹೋಗಿದೆ. ಬುದ್ಧಿಜೀವಿಗಳ ಬುದ್ಧಿಗೇಡಿತನದ ವಿರುದ್ಧ ಜನರೆಷ್ಟು ಆಕ್ರೋಶಗೊಂಡಿದ್ದಾರೆಂಬುದಕ್ಕೆ, ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಸರಕಾರ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕೊಟ್ಟ ಸನ್ನಿವೇಶವೇ ಸಾಕ್ಷಿ. ಇಂಥದೊಂದು ವಿಚಿತ್ರ ಅನಿವಾರ್ಯತೆಯನ್ನು ಸರಕಾರ ಸೃಷ್ಟಿಸಿಕೊಂಡದ್ದು ಯಾಕೆ? ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ, ಪರಾಮರ್ಶೆ ನಡೆಸಿದ್ದೀರಾ? ಚಾಣಕ್ಯರ ಒಂದು ಮಾತಿದೆ: “ಎಲ್ಲ ಅಗ್ನಿಗಳಿಗಿಂತ ಪ್ರಜೆಯ ಕ್ರೋಧಾಗ್ನಿ ಅತ್ಯಂತ ಭೀಕರವಾದುದು”. ಯಾಕೆ ಗೊತ್ತೆ? ಕಾಡಿನಲ್ಲಿ ಹುಟ್ಟಿದ ಬೆಂಕಿ, ಕೇವಲ ಕಾಡನ್ನಷ್ಟೆ ಸುಡಬಹುದು. ಆದರೆ ಪ್ರಜೆಯ ಕ್ರೋಧಾಗ್ನಿ ಒಂದು ಸಾಮ್ರಾಜ್ಯವನ್ನೇ ಮಣ್ಣು ಮುಕ್ಕಿಸಬಲ್ಲದು. ಪ್ರಜೆಯ ಅಸಮಾಧಾನವನ್ನು ಗ್ರಹಿಸಬಲ್ಲ ರಾಜ ಮಾತ್ರ ತನ್ನ ತಪ್ಪನ್ನು ಶೀಘ್ರ ತಿದ್ದಿಕೊಂಡು ಸರಿದಾರಿಗೆ ಬರಬಲ್ಲ. ಗುರುತಿಸದೇ ಹೋದವನು ಪೋಲ್ಪಾಟ್, ಗಡಾಫಿಯಂಥ ಸರ್ವಾಧಿಕಾರಿಗಳ ಅಂತ್ಯದಂತೆ ತನ್ನ ತಲೆಗೆ ತಾನೇ ಮಣ್ಣು ಹಾಕಿಕೊಳ್ಳುತ್ತಾನೆ. ಹಾಗಾಗಿ, ನೆನಪಿಡಿ: ಬುದ್ಧಿಜೀವಿಗಳನ್ನು ಬೆನ್ನಿಗೆ ಕಟ್ಟಿಕೊಂಡೇ ಆಡಳಿತ ಯಂತ್ರ ನಡೆಸುತ್ತೇನೆಂಬ ಹುಂಬತನ ಮೆರೆದರೆ ಚುನಾವಣೆಯಲ್ಲಿ ಜನರೇ ಸರಿಯಾದ ಬುದ್ಧಿ ಕಲಿಸುತ್ತಾರೆ.

(೩) ಮನೆಹಾಳ ಸಲಹೆಗಾರರನ್ನು ಒದ್ದೋಡಿಸಿ: ಕೈಗೊಂದು ಕಾಲಿಗೊಂದು ಎಂಬಂತೆ ಸಲಹೆಗಾರರನ್ನು ಇಟ್ಟುಕೊಂಡರೆ ಸಾಕೆ? ಅವರೇನು ಮಾಡುತ್ತಿದ್ದಾರೆ; ಎಲ್ಲೆಲ್ಲಿ ತಮ್ಮ ನಾಲಗೆ, ಬಾಲ ಇತ್ಯಾದಿಗಳನ್ನು ಬಿಚ್ಚುತ್ತಿದ್ದಾರೆ ಎಂಬುದನ್ನು ಗಮನಿಸುವುದು ಬೇಡವೆ? ಸದ್ಯಕ್ಕಂತೂ ಈ ಸರಕಾರದಲ್ಲಿ ಮೂಗಿಗಿಂತ ಮೂಗುತಿ ಭಾರ ಎಂಬಂತೆ ಮುಖ್ಯಮಂತ್ರಿಗಿಂತ ಅವರ ಸಲಹೆಗಾರರೇ ಹೆಚ್ಚು ಮಿಂಚುತ್ತಿದ್ದಾರೆ, ಮಾತ್ರವಲ್ಲ ಸರಕಾರವನ್ನೂ ಎಲ್ಲ ವಿವಾದಗಳಲ್ಲಿ ಮಿಂಚಿಸುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಳ್ಳದೆ ಹೋದರೆ, ಕೋತಿ ಸಾಕಿ ಮೂಗೊಡೆಸಿಕೊಂಡ ರಾಜನ ಕತೆಯೇ ನಮ್ಮ ಮುಖ್ಯಮಂತ್ರಿಗಳದ್ದೂ ಆಗಬಹುದು!

ಯಾಕೋ ಮತ್ತೆ ಚಾಣಕ್ಯರು ನೆನಪಾಗುತ್ತಾರೆ. “ರಾಜ್ಯದ ಹಿತಕ್ಕೆ ಅಗತ್ಯವಾದ ನಿರ್ಣಯಗಳನ್ನು ಸಲಹೆಗಾರನ ಜೊತೆ ಚರ್ಚಿಸದೆ ತೆಗೆದುಕೊಳ್ಳಬಾರದು” ಎಂದು ಹೇಳಿದ್ದಾರವರು ತನ್ನ ಗ್ರಂಥದಲ್ಲಿ. ಸಲಹೆಗಾರನ ಅಗತ್ಯ ಒಂದು ರಾಜ್ಯಕ್ಕೆ, ಒಬ್ಬ ರಾಜನಿಗೆ ಎಷ್ಟು ಅಗತ್ಯವೆಂಬುದಕ್ಕೆ ಸ್ವತಃ ಚಾಣಕ್ಯರೇ ಜ್ವಲಂತ ಸಾಕ್ಷಿ! ಆದರೆ, ಸಲಹೆ ಕೊಟ್ಟು ಕಾಪಾಡಬೇಕಾದ ಆ ಸಲಹೆಗಾರ ಹೇಗಿರಬೇಕು? ರಾಜನಾದವನು, ತನಗಿಂತ ಹುದ್ದೆಯಲ್ಲಿ ಕೆಳಗಿನವನಾದ; ಆದರೆ ರಾಜ್ಯದ ಹಿತದ ವಿಚಾರ ಬಂದಾಗ ತನ್ನನ್ನೂ ಮೀರಿ ಯೋಚಿಸಬಲ್ಲ ಪಂಡಿತನನ್ನು ತನ್ನ ಸಲಹೆಗಾರನಾಗಿ ನಿಯೋಜಿಸಿಕೊಳ್ಳಬೇಕು – ಎನ್ನುತ್ತಾರೆ ಚಾಣಕ್ಯರು. ದ್ರೋಹಚಿಂತನೆಯುಳ್ಳ, ನಂಬಿಕೆಗೆ ಅರ್ಹನಲ್ಲದ, ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾದ, ರಾಜನನ್ನು ಗಣಿಸದ ಸಲಹೆಗಾರನಿದ್ದರೆ ಆತನೇ ರಾಜ್ಯದ ಮೊದಲ ಶತ್ರು ಎಂಬ ಮಾತು ಚಾಣಕ್ಯನೀತಿಯಲ್ಲಿ ಬರುತ್ತದೆ. ಈ ಮಾತುಗಳನ್ನು ಅವರು ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿಟ್ಟಿದ್ದರು ಎಂಬುದನ್ನು ನಂಬುವುದೇ ಕಷ್ಟವಾಗುತ್ತದೆ!

(೪) ಅಹಿಂದ ಓಲೈಕೆ ಕಡಿಮೆ ಮಾಡಿ: ನಿಮ್ಮನ್ನು ಅಧಿಕಾರಕ್ಕೆ ತಂದಿರುವುದು ಅಹಿಂದ ಮಾತ್ರ ಅಲ್ಲ. ಈ ರಾಜ್ಯದ ಲಕ್ಷಾಂತರ ಸಾಮಾನ್ಯ ಜನ. ಅವರೆಲ್ಲ ಸಾಮಾನ್ಯ ವರ್ಗಗಳಿಗೆ ಸೇರಿದವರು, ಮಧ್ಯಮ ವರ್ಗದವರು. ಅವರನ್ನೆಲ್ಲ ಈಗ ಬದಿಗಿಟ್ಟು ಅಹಿಂದ ಅಹಿಂದ ಎಂಬ ಜಪ ಮಾಡುತ್ತ ಕೂತರೆ ಆ ಹುಂಡಿಯ ಸಿದ್ಧರಾಮೇಶ್ವರನೂ ನಿಮ್ಮನ್ನು ಕ್ಷಮಿಸಲಾರ. ಹೋಗಲಿ, ಅಹಿಂದಕ್ಕಾದರೂ ನ್ಯಾಯ ಒದಗಿಸಿದ್ದೀರಾ? ಅದೂ ಇಲ್ಲ. ಹಿಂದುಳಿದ ವರ್ಗಗಳಿಗೆ ಒಂದಿಷ್ಟು ಬಿಟ್ಟಿ ಭಾಗ್ಯ ಯೋಜನೆಗಳನ್ನು ಕೊಟ್ಟು ಕೈಕಟ್ಟಿ ಕೂತಿದ್ದೀರಿ. ಅವರ ಬದುಕು ಉತ್ತಮ ಪಡಿಸುವ ಒಂದಾದರೂ ಸ್ಥಿರ ಯೋಜನೆ ನಿಮ್ಮ ಕಡೆಯಿಂದ ಬಂದಿಲ್ಲ. ಅಹಿಂದ ಎಂಬುದು ವೋಟು ಗಳಿಕೆಗೆ, ಆವೇಶದ ಭಾಷಣಗಳ ಪಂಚಿಂಗ್ ಡೈಲಾಗುಗಳಿಗಷ್ಟೇ ನಿಮಗೆ ಬೇಕಾಗಿದೆ. ಕುರ್ಚಿ ಅಲುಗಿದಾಗೆಲ್ಲ ಅಹಿಂದ ಮಂತ್ರ ಜಪಿಸಿ ವೈರಿಗಳನ್ನೂ ಹೈಕಮಾಂಡನ್ನೂ ಬೆದರಿಸಬಹುದು ಎಂದು ನೀವು ತಿಳಿದಂತಿದೆ.

ಇಲ್ಲಿ ಬಹುಮುಖ್ಯ ಮಾತೊಂದನ್ನು ಹೇಳಬೇಕು. ಮುಖ್ಯಮಂತ್ರಿಗಳೇ, ನೀವು ಸಮಾಜವಾದದ ಹಿನ್ನೆಲೆಯಿಂದ ಬಂದವರೆಂದು ಹೇಳುತ್ತಾರೆ. ನಿಮ್ಮ ಹೋರಾಟದ ದಿನಗಳು ಹೇಗಿದ್ದವೆಂದು ನನಗೆ ಗೊತ್ತಿಲ್ಲ. ನನಗೆ ಬುದ್ಧಿ ತಿಳಿವ ಹೊತ್ತಿಗೆ ನೀವಾಗಲೇ ನಿಮ್ಮ ಯೌವನದ ಬಿಸಿರಕ್ತದ ದಿನಗಳನ್ನು ಕಳೆದು ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಲವು ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಲು ಪ್ರಾರಂಭಿಸಿದ್ದಿರಿ. ಆದರೆ, ರಾಮಮನೋಹರ ಲೋಹಿಯಾ ಚಿಂತನೆಗಳನ್ನು ಓದಿಕೊಂಡಾಗ, ಅವರ ಸಮಾಜವಾದದ ಕಲ್ಪನೆಗೂ ನಿಮ್ಮ ನೀತಿಗಳಿಗೂ ಅಜಗಜಾಂತರವಿದೆ ಎಂದೇ ನನಗನ್ನಿಸುತ್ತದೆ. ಸಮಾಜದ ಎಲ್ಲ ವರ್ಗಗಳಿಗೂ ಉದ್ಯೋಗದಲ್ಲಿ ಸಮಾನಾವಕಾಶಗಳು ಸಿಗಬೇಕು; ಎಲ್ಲರೂ ಲಾಭಾಂಶವನ್ನು ಸಮಾನವಾಗಿ ಹಂಚಿಕೊಳ್ಳುವಂತಾಗಬೇಕು ಎನ್ನುವುದು ಸಮಾಜವಾದ. ಆದರೆ ಲೋಹಿಯಾ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲ ವರ್ಗಗಳಿಗೆ ಸಮಾನ ಉದ್ಯೋಗಾವಕಾಶ ಮಾತ್ರವಲ್ಲ; ಎಲ್ಲ ಕ್ಷೇತ್ರಗಳಲ್ಲೂ ಸಮಾನ ಬೆಳವಣಿಗೆ ಆಗಬೇಕು ಎಂದೂ ಹೇಳಿದರು. ಉದ್ಯೋಗ ಅಂದರೆ ಕಾರ್ಖಾನೆಗಳಲ್ಲಿ ಸಮವಸ್ತ್ರ ಹಾಕಿಕೊಂಡು ಮಾಡುವ ಕೆಲಸ ಮಾತ್ರ ಅಲ್ಲ; ಹೊಲದಲ್ಲಿ ದುಡಿಯುವುದೂ ಉದ್ಯೋಗವೇ. ಗುಡಿ ಕೈಗಾರಿಕೆಯೂ ಉದ್ಯೋಗವೇ. ಶಿಕ್ಷಕ, ವೈದ್ಯ, ನ್ಯಾಯವಾದಿ, ವರ್ತಕ, ಪುರೋಹಿತ – ಎಲ್ಲರೂ ಉದ್ಯೋಗಿಗಳೇ. ಎಲ್ಲ ಕ್ಷೇತ್ರಗಳೂ ಒಂದಕ್ಕೊಂದು ಮಾರಕವಲ್ಲ; ಪೂರಕವಾಗಿ ಬೆಳೆಯುತ್ತ ಹೋಗಬೇಕು ಎಂದರು ಲೋಹಿಯಾ. ದೇಶದ ಬೆಳವಣಿಗೆಯನ್ನು ದೇಹದ ಬೆಳವಣಿಗೆಗೆ ಹೋಲಿಸಿ ಮಾತಾಡಿದರು ಅವರು. ಆದರೆ, ಕರ್ನಾಟಕದಲ್ಲಿ ಅವರ ಚಿಂತನೆ ಯಾವ ರೀತಿಯಲ್ಲಿ ಅಳವಡಿಕೆಯಾಗಿದೆ? ಬಿಟ್ಟಿಯಾಗಿ ಭಾಗ್ಯ ಯೋಜನೆಗಳನ್ನು ಹರಿಯಬಿಟ್ಟ ನಿಮ್ಮ ಕ್ರಮವನ್ನು ಪ್ರಶ್ನಿಸಿದಾಗ ನೀವು, “ಅವರೆಲ್ಲ ನೂರಾರು ವರ್ಷ ಕಷ್ಟಪಟ್ಟಿದ್ದಾರೆ. ಈಗ ಮಜಾ ಅನುಭವಿಸಲಿ ಬಿಡಿ” ಎಂದು ಹಾರಿಕೆಯ ಉತ್ತರ ಕೊಟ್ಟು ನಿಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರಿ. ಲೋಹಿಯಾ ಬದುಕಿದ್ದರೆ ಈ ಉತ್ತರ ಕೇಳಿ ಹೃದಯಾಘಾತ ಅನುಭವಿಸುತ್ತಿದ್ದರು.

(೫) ದಯವಿಟ್ಟು ಕೃಷಿಕರಿಗೆ ಏನಾದರೂ ಕೈಲಾದ ಸಹಾಯ ಮಾಡಿ ಸ್ವಾಮಿ: ನಿಮ್ಮ ಕೃಷಿ ಸಚಿವರ ಪತ್ತೆ ಇಲ್ಲ. ರಾಜ್ಯಕ್ಕೆ ಕೃಷಿ ನೀತಿ ಅನ್ನುವುದೇ ಇಲ್ಲ. ಕಬ್ಬಿನ ಬೆಂಬಲ ಬೆಲೆಯನ್ನು ಕಾರ್ಖಾನೆಗಳು ಕೊಟ್ಟವೋ ಇಲ್ಲವೋ ಗೊತ್ತಿಲ್ಲ. ಇನ್ನೆರಡು ತಿಂಗಳು ಹೋದರೆ ಮತ್ತೆ ಈ ಕಬ್ಬಿನ ಬೆಂಬಲ ಬೆಲೆಯ ಸಮಸ್ಯೆ ಶುರುವಾಗುತ್ತದೆ. ರಾಜ್ಯದಲ್ಲಿ ಬಂಜರು ಬಿದ್ದ ಭೂಮಿ ಕೂಡ ಚೆಂದನೆ ಕಾಣಲಿ ಎಂದು ದಿನ ನಿತ್ಯ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಓಡಾಡ್ತೀರಿ. ಸ್ವಲ್ಪ ದಂತಗೋಪುರದಿಂದ ಕೆಳಗಿಳಿದು, ಕೂಲಿಂಗ್ ಗ್ಲಾಸ್ ಕೆಳಗಿಳಿಸಿ ನೋಡಿ. ಕೇವಲ ಎರಡೂವರೆ ವರ್ಷಗಳಲ್ಲಿ ಸಾವಿರದಿನ್ನೂರು ಜನ ಅನ್ನದಾತರು ಸಾಲದ ಶೂಲವೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಸಾಲ ಮನ್ನಾ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿ ಬಿಟ್ಟಿದ್ದೀರಿ! ಸರಕಾರದಿಂದ ಏನೆಲ್ಲ ಸಹಾಯ ಮಾಡಬಹುದೆಂಬ ಯೋಚನೆ ಮಾಡುವುದನ್ನು ಬಿಟ್ಟು ಮೀಟರ್ ಬಡ್ಡಿ ಹಾಕುವವರ ವಿರುದ್ಧ ಗುಡುಗಿದ್ದೀರಿ! ” Barking at the wrong tree ” ಅಂದರೆ ಇದೇ ಅಲ್ಲವೆ? ರುಪಾಯಿಗೊಂದು ಕೆಜಿ ಅಕ್ಕಿ ಕೊಟ್ಟು, ಭಾಗ್ಯದ ಮೇಲೆ ಭಾಗ್ಯ ಯೋಜನೆಗಳನ್ನು ಘೋಷಿಸಿ ಜನರನ್ನು ಸುಪ್ರೀತಗೊಳಿಸಲು ನೋಡಿದರೂ ರೈತರು ಸರಕಾರಕ್ಕೆ ಬಿಸಿ ಮುಟ್ಟಿಸಲು ಬೀದಿಗಿಳಿದಿದ್ದಾರೆಂದರೆ ನಿಮ್ಮ ನೀತಿಗಳು ಎಲ್ಲೋ ಹಳಿ ತಪ್ಪಿವೆ ಎಂಬ ಜ್ಞಾನೋದಯ ನಿಮಗಾಗಬೇಕಿತ್ತು.

ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಬೇಕು ಎಂಬುದೇನೋ ನಿಜ. ಆದರೆ ಯಾವುದು ತನ್ನ ಮೊದಲ ಆದ್ಯತೆ ಎಂಬುದು ಅದಕ್ಕೆ ಸ್ಪಷ್ಟವಿರಬೇಕು. ಸಿದ್ಧರಾಮಯ್ಯನವರ ಸರಕಾರ ಕೈಗಾರಿಕಾ ವಿರೋಧಿ ಎಂಬ ಭಾವನೆ ಜನರಲ್ಲಿತ್ತು. ಯಾಕೆಂದರೆ ನಿಮ್ಮ ಆಡಳಿತದ ಮೊದಲ ಎರಡು ವರ್ಷಗಳಲ್ಲಿ ನೀವು ಯಾವ ಹೊಸ ಕೈಗಾರಿಕೆಯೂ ಈ ನೆಲದಲ್ಲಿ ಬೇರು ಬಿಡದಂತೆ ನೋಡಿಕೊಂಡಿರಿ. ಇಲ್ಲಿ ನೆಲೆ ಕಾಣಬೇಕಿದ್ದ ಹೀರೋ ಮೋಟಾರ್ಸ್, ಅಮೆಝಾನ್, ಭಾರತ್ ಎಲೆಕ್ಟ್ರೋನಿಕ್ಸ್ ಮುಂತಾದವು ರಾಜ್ಯದ ಸಹವಾಸ ಬೇಡವೆಂದು ಹೊರಹೋದವು. ಮ್ಯಾನುಫ್ಯಾಕ್ಚರಿಂಗ್ ಕಂಪೆನಿಗಳು ಬೇಡ; ಅವು ಪರಿಸರಕ್ಕೆ ಮಾರಕ ಎನ್ನೋಣ. ಕೊನೇ ಪಕ್ಷ ಐಟಿ ಕಂಪೆನಿಗಳನ್ನಾದರೂ ಉತ್ತೇಜಿಸಬಹುದಿತ್ತಲ್ಲ? ಅವು ಈ ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡುವಂತೆ ನೋಡಿಕೊಳ್ಳಬಹುದಿತ್ತು. ಈಗಾಗಲೇ ಇಲ್ಲಿ ನೆಲೆ ಕಂಡಿರುವ ಕಂಪೆನಿಗಳು ತಮ್ಮ ಕಾರ್ಯಕ್ಷೇತ್ರ ವಿಸ್ತರಿಸುವಂತೆ ಮಾಡಬಹುದಿತ್ತು. ಆದರೆ, ಸರಕಾರದ ವಿನಾ ವಿಳಂಬ ನೀತಿಗಳು, ಅರ್ಥವಾಗದ ವಿಚಿತ್ರ ತೆರಿಗೆಗಳು, ಉದ್ಯೋಗಿಗಳು ಆಫೀಸಿಗೆ ಬರಲು ಒಂದೆರಡು ಗಂಟೆಗಳನ್ನು ರಸ್ತೆಯಲ್ಲಿ ಕಳೆಯುವಂತೆ ಮಾಡುತ್ತಿರುವ ಟ್ರಾಫಿಕ್ ಸಮಸ್ಯೆ – ಇವೆಲ್ಲದರಿಂದ ರೋಸಿ ಹೋಗಿ ಐಟಿ ಕಂಪೆನಿಗಳೂ ಒಂದೊಂದಾಗಿ ಕರ್ನಾಟಕದಿಂದ ಕಳಚಿಕೊಂಡು ಬೇರೆಡೆ ತಳ ಊರುತ್ತಿವೆ. ಸರಿ, ಸರಕಾರದ ಆದ್ಯತೆ ಕೈಗಾರಿಕೆಯಲ್ಲ; ಕೃಷಿ ಎನ್ನೋಣವೇ? ಕೃಷಿ ಸಾಲ ಕೊಡದೆ ಸತಾಯಿಸುವುದು, ಸರಿಯಾದ ಬೆಂಬಲ ಬೆಲೆ ಘೋಷಿಸದಿರುವುದು, ನೀರಾವರಿ ವ್ಯವಸ್ಥೆಯ ಕೊರತೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು – ಹೀಗೆ ಅಲ್ಲಿನ ಸಮಸ್ಯೆಗಳೋ ಬೆಟ್ಟದಷ್ಟು. ಕೃಷಿ ಸಚಿವರು ಇವೆಲ್ಲಕ್ಕೂ ತನ್ನ ಮ್ಯಾಕ್ ಕಂಪ್ಯೂಟರಲ್ಲಿ ಇಂಟರ್ನೆಟ್ ಮೂಲಕ, ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಪರಿಹಾರ ಕೊಡುತ್ತೇನೆ ಎನ್ನುತ್ತಾರೆ. ಸಿದ್ಧರಾಮಯ್ಯನವರೇ, ಸಮಸ್ಯೆ ಅರ್ಥವಾಗುತ್ತಿದೆಯೇ ನಿಮಗೆ?

(೬) ಪೊಲೀಸ್ ವ್ಯವಸ್ಥೆಯನ್ನು ಸ್ವಲ್ಪ ಹದ್ದುಬಸ್ತಿನಲ್ಲಿಡುವುದು ಒಳ್ಳೆಯದು: ನಿಮ್ಮ ಸರಕಾರದಲ್ಲಿ ಸಚಿವರು, ಸಲಹೆಗಾರರು, ಅಧಿಕಾರಿಗಳು – ಒಟ್ಟಲ್ಲಿ, “ನಾನು ವಿಧಾನಸೌಧದಿಂದ ಮಾತಾಡ್ತಿದೇನೆ” ಎಂದು ಹೇಳಲು ಅವಕಾಶವಿರುವ ಎಲ್ಲ ಮಹಾನುಭಾವರೂ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಎಂದರೆ ರಕ್ಷಕರಲ್ಲ, ರಾಕ್ಷಸರು ಎಂಬ ಭಾವನೆ ಜನರಲ್ಲಿ ಬಲಿಯುತ್ತಿದೆ. ಬಾಯಿ ತೆರೆದರೆ ಪೊಲೀಸ್ ಕೇಸ್ ಹಾಕುವುದನ್ನೇ ನಿಮ್ಮವರು ಯೋಚಿಸುತ್ತಾರೆ, ಮಾತಾಡುತ್ತಾರೆ. ಆರಕ್ಷಕರನ್ನು ಹೀಗೆ ಅಧಿಕಾರದ ಚಾಟಿ ಬಳಸಿ ಎರ್ರಾಬಿರ್ರಿ ಬಳಸಿಕೊಂಡ ಉದಾಹರಣೆ ಹಿಂದೆ ಇರಲಿಲ್ಲ. ಈಗಿನ ಕಾಂಗ್ರೆಸ್ ಸರಕಾರ ಎಂದರೆ ಪೊಲೀಸ್ ರಾಜ್ಯ, ಗೂಂಡಾ ರಾಜ್ಯ ಎನ್ನುವಂತಾಗಿದೆ.

ಇದು ವ್ಯವಸ್ಥೆಯ ಒಂದು ಮುಖವಾದರೆ, ಆರಕ್ಷಕರೇ ತಮ್ಮ ತಲೆ ಉಳಿಸಿಕೊಳ್ಳಲು ಮಂತ್ರಿಗಳ ಕಾಲು ಹಿಡಿಯಬೇಕಾಗಿ ಬಂದಿರುವುದು ಇನ್ನೊಂದು ದುರದೃಷ್ಟ. ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿ ದುಡ್ಡೆಣಿಸುತ್ತಿರುವ ಪೊಲೀಸರದ್ದು ಒಂದು ದಂಡಾದರೆ, ಅಕ್ರಮದ ವಿರುದ್ಧ ದನಿಯೆತ್ತಿ ಗೂಂಡಾಗಳಿಂದ ಜೀವ ಬೆದರಿಕೆ ಪಡೆದು, ಹಲ್ಲೆಗೊಳಗಾಗಿ ಬದುಕುಳಿದ ಪೊಲೀಸರದ್ದು ಇನ್ನೊಂದು ಗುಂಪು. ಈ ಎರಡನೇ ಗುಂಪನ್ನು ಸರಕಾರ ಗುರುತಿಸಿ ಸನ್ಮಾನಿಸಬೇಕಾಗಿತ್ತು. ಆದರೆ ಅವರಿಗೆ ಸಿಕ್ಕಿರುವುದು ಭಡ್ತಿಯಲ್ಲ, ವರ್ಗಾವಣೆಯ ಶಿಕ್ಷೆ! ವಾಚಾಮಗೋಚರ ಬೈಗಳು! ಸಚಿವರಿಂದಲೇ ಬೆದರಿಕೆ! ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳು ಇಂದು ಈ ರಾಜ್ಯದಲ್ಲಿ ತಮ್ಮ ಸೂಟ್ಕೇಸ್ ಕಟ್ಟಿ ಮುಂದಿನ ಊರು ಯಾವುದು ಎಂದು ಸದಾಕಾಲ ನಿರೀಕ್ಷಿಸುತ್ತ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಸರಕಾರದ ಹಲವು ವಿಭಾಗಗಳಲ್ಲಿ ಅಕ್ರಮ ಬಯಲಿಗೆಳೆದು ವರದಿ ತಯಾರಿಸಿ ಉನ್ನತ ಅಧಿಕಾರಿಗಳ ಮುಂದಿಡುವ ಐಎಎಸ್ ಅಧಿಕಾರಿಗಳನ್ನು ಇನ್ಯಾವುದೋ ಸಂಬಂಧಪಡದ ಇಲಾಖೆಗೆ ಕೂಡಲೇ ವರ್ಗಾಯಿಸಲಾಗುತ್ತದೆ. ಇವೆಲ್ಲ, ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ಕೆಳಗೇ ನಡೆಯುತ್ತಿರುವ ವಿದ್ಯಮಾನಗಳು. ನಿಮಗೆ ಗೊತ್ತಿಲ್ಲ ಅಂದರೆ ಹೇಗೆ?

(೭) ಕೊನೆಯ ಮಾತು: ವೈಯಕ್ತಿಕವಾಗಿ ನೀವು, ಸ್ವಲ್ಪ ಅಹಂಕಾರ ಕಮ್ಮಿ ಮಾಡಿಕೊಳ್ಳಿ. ನೀವು ತೋಳು ತಟ್ಟುವುದು, ತೊಡೆ ತಟ್ಟುವುದು, ವಿಧಾನಸೌಧದ ಬಾಗಿಲಿಗೆ ಎಡಗಾಲಲ್ಲಿ ಒದೆಯುವುದು – ಇವೆಲ್ಲ ಅವತಾರಗಳನ್ನು ನಾವು, ಕರ್ನಾಟಕದ ಜನತೆ ನೋಡಿದ್ದೇವೆ. ಅವೆಲ್ಲ ನೀವು ವಿರೋಧ ಪಕ್ಷದಲ್ಲಿ ಇದ್ದಾಗಿನ ದಿನಗಳು ಎನ್ನೋಣ. ಈಗ ನೀವು ರಾಜ್ಯದ ಚುಕ್ಕಾಣಿ ಹಿಡಿದಿರುವವರು. ಜವಾಬ್ದಾರಿ ಹೆಚ್ಚಿದಂತೆ ನಾವು ಪಕ್ವಗೊಳ್ಳಬೇಕು; ಅಹಂಕಾರ, ದರ್ಪ, ಒಗಚುತನಗಳು ಕಮ್ಮಿಯಾಗಬೇಕು. ಜನನಾಯಕನೆಂದು ಕರೆಸಿಕೊಂಡವನಿಗೆ ಜನರ ಸುಖ-ದುಃಖ ಆಲಿಸುವ ತಾಳ್ಮೆ ಮೂಡಬೇಕು. ಜನರ ಕಷ್ಟ ತನ್ನದೂ ಕೂಡ ಎಂಬ ಭಾವನೆಯಿರಬೇಕು. ಮತ್ತೆ ಚಾಣಕ್ಯರ ಮಾತುಗಳನ್ನು ನೆನಪಿಸಬೇಕೆಂದರೆ, ಅಹಂಕಾರದ ಮೊಟ್ಟೆ ಕೋಳಿಯಾಗಿರುವ ರಾಜನಿಗಿಂತ, ರಾಜನಿಲ್ಲದ ರಾಜ್ಯವೇ ಮೇಲು – ಎಂದು ಹೇಳಿದ್ದಾರವರು. ಸ್ವಾರಸ್ಯ ನೋಡಿ. ರಾಜ ಹೇಗಿರಬೇಕು ಎಂಬುದನ್ನು ವಿವರಿಸಲಿಕ್ಕೇ ಗ್ರಂಥ ಬರೆದ ಚಾಣಕ್ಯರು, ತನ್ನ ಇಡೀ ಗ್ರಂಥದ ಸಾರ ಸರ್ವಸ್ವವನ್ನು ಈ ಒಂದು ಮಾತಿನಲ್ಲಿ ಹೇಳಿ ಬಿಟ್ಟರು. ರಾಜನಿಲ್ಲದ ಸ್ಥಿತಿಯೆಂದರೆ ಅರಾಜಕತೆ. ಅಹಂಕಾರದಿಂದ ಮೆರೆಯುವ ರಾಜನಿದ್ದರೆ, ಆತ ಸಿಂಹಾಸನದಲ್ಲಿ ಕೂತಿದ್ದರೂ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತದೆ ಎಂಬುದನ್ನೇ ಸೂಕ್ಷ್ಮವಾಗಿ ಅವರು ಈ ಒಂದು ವಾಕ್ಯದಲ್ಲಿ ಹೇಳಿದರು. ತಾನು ಮಾಡಿದ್ದೇ ಸರಿ, ತಾನು ಹೇಳಿದ್ದೇ ಸರಿ ಎಂದು ಮೂಗಿನ ನೇರಕ್ಕೆ ಎಂದು ನಡೆಯತೊಡಗುತ್ತೇವೋ ಅಂದೇ ಸುತ್ತಲಿನ ಪ್ರಪಂಚಕ್ಕೆ ಕುರುಡಾಗುತ್ತೇವೆ. ಸಿದ್ಧರಾಮಯ್ಯನವರ ಆಡಳಿತದಲ್ಲಿ ಪ್ರಸ್ತುತ ಆಗಿರುವುದು ಅದೇ. ಬೇರೆಲ್ಲ ಮರೆಯೋಣ, ಮುಖ್ಯಮಂತ್ರಿಗಳು ಕನಿಷ್ಠ ಪಕ್ಷ, ರಾಜ್ಯದ ಜನತೆಗೆ ಮರ್ಯಾದೆ ಕೊಟ್ಟು ಯೋಧರ ಬಗ್ಗೆ ಹಗುರವಲ್ಲದ ಮಾತುಗಳನ್ನು ಆಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳೇ, ನೀವು, “ಜನ ಸೇನೆಗೆ ಸೇರುವುದು ದೇಶಭಕ್ತಿಯಿಂದಲ್ಲ, ಬಡತನದಿಂದ” ಎಂಬ ಅತ್ಯಂತ ನಿರ್ಲಜ್ಜ ಮಾತುಗಳನ್ನು ಹೇಳುವವರನ್ನೂ ಎಡಬಲಗಳಲ್ಲಿಟ್ಟುಕೊಂಡು ಪೋಷಿಸುತ್ತಿದ್ದೀರಿ ಎಂಬುದು ನಾಚಿಕೆಗೇಡಿನ ಸಂಗತಿ. ಲೋಹಿಯಾ ಎಂಬ ಅತ್ಯಂತ ಸಂವೇದನಾತ್ಮಕ ನಾಯಕನ ಹೆಸರು ಹೇಳಿಕೊಂಡು ಅಧಿಕಾರದ ಅಟ್ಟ ಹತ್ತಿದ ತಾವು ಈಗ ಮುಟ್ಟಿರುವ ಭಾವನಾರಾಹಿತ್ಯದ ಸ್ಥಿತಿ ಕಂಡಾಗ ನಿಜಕ್ಕೂ ಭಯವಾಗುತ್ತದೆ. ಅಧಿಕಾರ ಒಬ್ಬ ವ್ಯಕ್ತಿಯನ್ನು ಇಷ್ಟೊಂದು ಒಣಗಿಸಿಬಿಡುತ್ತದಾ ಅನ್ನಿಸುತ್ತದೆ.

ಇಷ್ಟು ಹೇಳಬೇಕಿತ್ತು. ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!