ಅಂಕಣ

ಮಹಿಳಾ ದಿನಾಚರಣೆ

ಘಟನೆ ೧. ಇಂಚರ ಚಿಗರೆಯಂತಹ ಹುಡುಗಿ, ಅಣ್ಣನ ಮದುವೆಯಲ್ಲಿ ಮದುವೆ ಹೆಣ್ಣು ಅತ್ತಿಗೆಗಿಂತ ಹೆಚ್ಚು ನಾನೇ ಮಿಂಚಬೇಕೆಂದು ತನಗೆ ಬೇಕಾದ ಸೌಂದರ್ಯವರ್ಧಕಗಳನ್ನು ತಿಂಗಳ ಮೊದಲೇ ಖರೀದಿಸಿದ್ದಾಳೆ, ಮ್ಯಾಚಿಂಗ್ ಬಟ್ಟೆಗಳನ್ನೇ ಹಾಕಿ ಕುಣಿದಾಡಿದ್ದಾಳೆ, ತನ್ನ ಕಾಲೇಜು ಗೆಳೆಯ ಗೆಳತಿಯರನ್ನು ಆಮಂತ್ರಿಸಿದ್ದಾಳೆ. ಮೇಕಪ್ ಮಾಡುವ ಹುಡುಗಿಯನ್ನು ಸಂಪರ್ಕಿಸಿದ್ದಾಳೆ ಅದರೆ ಮದುರಂಗಿಯ ದಿನ ಪ್ರಕೃತಿಯ ಕರೆಗೆ ಮುಟ್ಟಾಗುತ್ತಾಳೆ. ಅಮ್ಮನ ಅಪ್ಪಣೆಯಂತೆ ಕೊಟ್ಟಿಗೆಯ ಜಗಲಿಯಲ್ಲೇ ಅವಳ ಸ್ಥಾನ. ದೇವಸ್ಥಾನದ ಅಂಗಣದ ಮದುವೆ ಮಂಟಪಕ್ಕೆ ಪ್ರವೇಶವಿಲ್ಲ. ಕುಳಿತ್ತಲ್ಲೇ ಕಣ್ಣು ಕತ್ತಲೆ ಬಂದಿತ್ತು ಇಂಚರಳಿಗೆ ನಾಳೆಯ ನೆನೆದು.

ಘಟನೆ ೨. ಪ್ರಿಯಾ ತನ್ನ ದೂರದೂರಿನ ಗೆಳತಿ ಮಾಮ್ತಾಜ್‍’ಳ ಮದುವೆಗೆ ಸಹಪಾಠಿಗಳೊಂದಿಗೆ ಬಾಡಿಗೆ ವಾಹನದಲ್ಲಿ ಉಡುಗೊರೆಯೊಂದಿಗೆ ಹೋಗಿದ್ದಳು, ಸುಮಾರು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮನೆಯೊಳಗಿದ್ದ ಮದುಮಗಳನ್ನು ನೋಡಬೇಕೆಂದು ಕಾದು ಕಾದು ಸುಸ್ತಾಗಿ ಉಡುಗೊರೆಯನ್ನು ಮಾಮ್ತಾಜ್‍’ಳ ಅಪ್ಪನೊಂದಿಗೆ ಕೊಟ್ಟು ಬೇಸರದಿಂದ ಹಿಂದುರುಗಿದ್ದರು.

ಮೇಲಿನಂತಹ ಅನುರೂಪ ಘಟನೆಗಳು ನಮ್ಮ-ನಿಮ್ಮ ದೈನಂದಿನ ಅನುಭವಕ್ಕೆ ಬರುವಂತಹುದು. ಪುರುಷ ಸಮಾಜವೆಂದು ಕಕ್ಕುವ ವಿಷಮ ಮೌಢ್ಯಗಳಿವು. ಹೆಣ್ಣು ಅನುಭವಿಸಿ ಅನುಸರಿಸಲೇಬೇಕೇಂದು ದೈವ, ದೇವರು, ಧರ್ಮದ ಹೆಸರಿನಲ್ಲಿ ಹೇರಿಕೆಯ ಹೊರೆಯನ್ನು ಇಂದಿನ ಸಮಾಜವೂ ಹೊತ್ತುಕೊಂಡು ಬಂದಿರುವುದು ಖೇದಕರ. ನಾವು ಮಾಡಿಕೊಂಡ ಧರ್ಮ, ಸಂಸ್ಕಾರ, ಶುದ್ಧಿ ನೆಪದ ಅನುಲಂಘ್ಯ ಕಟ್ಟಲೆಗಳು ಹೆಣ್ಣನ್ನು ಗಂಡಿನ ಕಣ್ಣುಗಳಿಂದ ಕಾಪಾಡಲಿಕ್ಕಿರುವಂತಹುದು ಅದಕ್ಕಾಗಿ ಮುಸುಕು, ಮುಟ್ಟು, ಅಬಲತೆ, ಅಶುದ್ಧತೆಯ ನೆವಗಳು… ನಿಜವಾಗಿಯೂ ಮೈಲಿಗೆ ಇರುವುದು ಗಂಡಿನ ದೃಷ್ಟಿಯಲ್ಲಿ, ಮನಸ್ಸಿನಲ್ಲಿ, ಮೆದುಳಿನಲ್ಲಿ ಅದರೆ ಮುಲಾಮು ಔಷಧ ಹೆಣ್ಣಿನ ಮೈಯಿಗೆ, ಹೆಣ್ಣಿನ ಶಕ್ತಿಗೆ. ಸಮಾನತೆಯೆಂಬುವುದು ಬರುವುದು ಬರೀ ನಾವು ಮಾಡುವ ಭಾಷಣದಿಂದಲ್ಲ, ಕವಿತೆಯಿಂದಲ್ಲ, ಅಥವಾ ಇಂತಹ ಅಪಕ್ವ ಬರಹದಿಂದಲ್ಲ ಅದು ವ್ಯಕ್ತಿಯ ಅಂತರ್ಯದ ಭಾವನೆಗೆ ಚೇತನ ತುಂಬಿ ಅವಳ ವೇದನೆ ನನ್ನದೆಂದಾಗ ಮಾತ್ರ ಸಾಧ್ಯ.

ಕರಾವಳಿಯ ದೈವಾರಾಧನೆ ಇರುವ ಮನೆಗಳಲ್ಲಿ ಇಂದಿಗೂ ತಿಂಗಳ ರಜೆಯ ಸಮಯದಲ್ಲಿ ಮನೆಯ ಹೆಂಗಸರಿಗೆ 3-4 ದಿನ ಕೊಟ್ಟಿಗೆಯಲ್ಲಿ ಅಸ್ಪೃಶ್ಯರಂತೆ ಬದುಕುವ ಶಿಕ್ಷೆ, ದೂರದಿಂದ ಊಟ ಕೊಡುವ ಅತ್ತೆ, ಮಾರು ದೂರ ನಿಂತು ಮಾತಾಡಿಕೊಳ್ಳುವ ನವದಂಪತಿ, ಸಮಾರಂಭಗಳು ನಿಷಿದ್ಧ ಇವು ಧಾರ್ಮಿಕ ವಿಚಾರವಾದರೆ ರಾತ್ರಿಯ ಸಮಾರಂಭಗಳಿಗೆ ಹೋಗುವುದು ಬೇಡ, ದೂರದಲ್ಲಿ ಜರಗುವ ಎನ್.ಸಿ.ಸಿ ಕ್ಯಾಂಪ್’ನಲ್ಲಿ ಭಾಗವಹಿಸುವುದು ಬೇಡ, ದಾರಿಯಲ್ಲಿ ನಿಂತು ಮಾತಾನಾಡಬೇಡ, ದಾರಿಯಲ್ಲಿ ಒಂಟಿಯಾಗಿ ಬರಬೇಡ, ಆ ಕಾರ್ಯಕ್ರಮಕ್ಕೆ ಹೋಗೋದು ಬೇಡ, ಅದು ಇದು ಎಂದು ಏನೇನನ್ನೋ ಊಹಿಸಿಕೊಂಡು , ನಿನ್ನೆಯ ದಿನಪತ್ರಿಕೆಯಲ್ಲಿ ಬಂದ ಅಪ್ರಿಯ ಸುದ್ದಿ, ತಡರಾತ್ರಿ ದೂರದರ್ಶನದಲ್ಲಿ ಬಿತ್ತರಗೊಂಡ ಅಹಿತಕರ ಘಟನೆಯಲ್ಲಿ ತನ್ನ ಮಗಳನ್ನು ಕಲ್ಪಿಸಿಕೊಂಡು ಪ್ರೀತಿಯ ಬಂಧನ ಸದಾ ಸೀದಾ ಸ್ವಾತಂತ್ರ್ಯಕ್ಕೆ ತಡೆ ಮಾತ್ರ ಹೌದು.

ಅವಳ ಕಣ್ಣೊಳಗೆ ಅವಿತಿರುವ ಪುರ್ಕು ತುಂಬಿದ ನೀರು, ಎದೆಯೊಳಗಣ ಶಾಖ, ಒಡಲೊಳಗಿನ ದೊಂಬಿ, ಬಾಹ್ಯ- ಅಂತರ್ಯ ರೂಪಾಂತರ, ಮಾನಸಿಕ ತಲ್ಲಣ, ಮೆದುಳಿನ ಚಂಚಲಗಳಿಗೆ ಮತ್ತಷ್ಟು ಜವ ನೀಡುವ ಈ ಕಟ್ಟಲೆಗಳು ಅವಳನ್ನು ಇನ್ನಷ್ಟು ಜರ್ಝರಿತಗೊಳಿಸುತ್ತವೆ. ತಿಂಗಳ ಮುಟ್ಟೆಂದರೆ ಅದು ಚಂದ್ರನ ಋತುಚಕ್ರ ಹುಣ್ಣಿಮೆ – ಅಮಾವಾಸ್ಯೆ ಅಷ್ಟೇ ಪ್ರಕೃತಿ ಸಹಜ ಅದು ಅಗಲೇಬೇಕು ಹಾಗಾಗದಿದ್ದರೆ ಅವಳು ಹೆಣ್ಣೇ ಅಲ್ಲ. ನಮಗೆ ಹುಣ್ಣಿಮೆಯ ಚಂದ್ರ ಬೇಕು ಆಮಾವಾಸ್ಯೆಯ ಶಶಿ ಬೇಡವೆಂದರೆ ಹೇಗೆ?.

ಇಂದಿನ ಸಮಾಜದಲ್ಲಿ ಒಂದಷ್ಟು ಶೋಷಣೆ ನಡೆಯುತ್ತಿದೆಯಾದರೂ ಅದು ದಿನಚರಿಯ ಭಾಗವೆಂದೇ ವಿರೋಧದ ದನಿಯಿಲ್ಲದೇ ಸಾಗುತ್ತಿದೆ, ವಿದ್ಯಾವಂತರೂ ಸುಮ್ಮನಿದ್ದಾರೆ. ಎಲ್ಲ ವಿಚಾರಕ್ಕೂ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಶಿಕ್ಷಣದ ಕೊರತೆಯೆಂದು ದೂರುವ ನಾವುಗಳು ಶಿಕ್ಷಣವಿದ್ದರೂ ಅಷ್ಟವೈರಿಗಳಿಗೆ ಸಮಾನದ ಇಂತಹುಗಳು ನಮ್ಮಲ್ಲೇ ಶಾಖವಾಗಿ ಬೆಚ್ಚಗೆ ಇನ್ನೂ ಸುಖವಾಗಿವೆ ಎಂಬುವುದು ವಿರ್ಪಯಾಸದೊಂದಿಗೆ ಕುಹಕವಾಡುತ್ತಿವೆ.

ಪ್ರತಿ ದಿನವೂ ತೊಳೆದು ಮಡಿ ಮಾಡುವ ಅಂಗಿ, ಸೀರೆಗಳಲ್ಲಿ ಇಷ್ಟೊಂದು ಕೊಳೆ ಇರಬೇಕಾದರೆ ಮನಸ್ಸಿನಲ್ಲಿ ತುಂಬಿರುವ ಕೊಳೆಯ ಕಳೆಯನ್ನು ಕಳೆಯುವುದಾದರೂ ಹೇಗೆ?

ಮಹಿಳಾ ಸ್ವಾತಂತ್ರ್ಯ ಕೆಲವೊಮ್ಮೆ ದುರ್ಬಳಕೆಯೂ ಅಗುವುದಿದೆ. ಅಬಲೆಯಿಂದ ಸಬಲೆಯಾಗುವ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ ಅದರಿಂದ ಏನನ್ನು ಗಳಿಸುತ್ತಾಳೋ ಗೊತ್ತಿಲ್ಲ ಅದರೆ ಅಷ್ಟೇ ಸ್ತ್ರೀ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಒಟ್ಟಾರೆ ಈ ಧಾರ್ಮಿಕ ನಿಷಿದ್ಧ, ಸಾಮಾಜಿಕ ಚೌಕಟ್ಟುಗಳ ಚೌಕಾಶಿಯಲ್ಲಿ ಕಟ್ಟುಪಾಡು ಸಡಿಲಗೊಳಿಸಿದ ಮಾತ್ರಕ್ಕೆ ಪುರುಷ ಕಳೆದುಕೊಳ್ಳುವುದೇನಿಲ್ಲ, ಮುಕ್ತವಾದ ಮಾತ್ರಕ್ಕೆ ಮಹಿಳೆ ಹಾರುವ ಹಕ್ಕಿಯಾಗುವುದಿಲ್ಲ. ಅದೇನಿದ್ದರೂ ಮಾನಸಿಕ ಹಿಂಸೆ ಕಡಿಮೆಯಾಗಿ ನಿರಾಳವಾಗಬಹುದು ಮತ್ತು ದೃಷ್ಟಿಕೋನದ ಸ್ಥಳಾಂತರ ಪ್ರಕ್ರಿಯೆಯಷ್ಟೇ. ಏನೇ ಅಗಲಿ ತಮ್ಮ ಮನೆಗಳಲ್ಲೂ ಇಂತಹ ದಿನಚರಿಯಿದ್ದರೆ ಕೆಲವನ್ನು ತೊರೆದು ಬಿಡಿ, ಅವಳು ನಗುತಿರಲಿ, ಮನ ಶುದ್ಧವಾಗಿರಲಿ. ಮಹಿಳಾ ದಿನಾಚರಣೆಯ ಶುಭಾಶಯಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Bharatesha Alasandemajalu

ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!