ಕವಿತೆ

ಬೆಳಕಿನೆಡೆಗೆ

ಕತ್ತಲೆಯ ಒಡಲಿಂದ ರವಿಯ ಮಡಿಲಿಗೆ ಬಂದು

ಕುಳಿತಿರುವಿರೇಕೆ,ನಿಮಗಾರ ನಿರೀಕ್ಷೆ?

ಮೃದು ಮಂದಹಾಸ ಮೊಗದ ತುಂಬೆಲ್ಲಾ ಸೂಸೆ,

ನನಗಚ್ಚರಿ ನಿಮಗಿರುವುದಾರ ಪ್ರತೀಕ್ಷೆ!

ಪುರುಷ ದಬ್ಬಾಳಿಕೆಯ ಈ ಜಗದ ನಡುವಿನಲಿ

ಸಂಕೋಲೆ,ಬಹುಬಂಧನಗಳ ಕಳಚಿ

ಜೀವ ಜಗದ ಕಡೆ ಮುಖ ಮಾಡಿ ನಿಂತಿರುವಿರಿ

ಸಂಸಾರ ತಾಪತ್ರಯಗಳಿಂದ ನುಣುಚಿ!

ಜಗದ ತುಂಬೆಲ್ಲಾ ಗಾಢಾಂಧಕಾರವಿರೆ

ಬೆಳಕ ಅರಸುತ ನೀವು ಬಂದಿರೇನು?

ಎಲ್ಲ ತೊಡರನು ದಾಟಿ,ಭಾವ ವೀಣೆಯ ಮೀಟಿ

ಹೊರಬರಲು ನೀವು,ಚಮಕಿಸುವುದು ಭಾನು!

ತನ್ನತನವನು ತೋರೆ,ಹರಿಯಬಿಡೆ ರಸಧಾರೆ

ಹಿಡಿದಿರದು ನಿಮ್ಮ ಬರಿ ನಾಲ್ಕು ಗೋಡೆ

ಸ್ತ್ರೀ ಶಕ್ತಿ ಎಚ್ಚೆತ್ತುಕೊಂಡಿತೆಂದರೆ ಸಾಕು,

ಪ್ರಗತಿಪಥ ಹಿಡಿಯುವುದು ಇಡಿಯ ನಾಡೇ!

ನಿಮ್ಮ ಶಕ್ತಿ,ಭುಕ್ತಿ,ಭಾವನೆಯ ಅಭಿವ್ಯಕ್ತಿ

ಹುಟ್ಟುಹಾಕಲಿ ಈ ಜಗದಿ ಕ್ರಾಂತಿ

ಅಬಲೆ ಹೆಸರನು ತೊಡೆದು ಸಬಲರಾದರೆ ನೀವು

ಪ್ರತಿ ಮನೆ ಮನಕೆ ಅದೇ ಸುಗ್ಗಿ-ಸಂಕ್ರಾಂತಿ!

ಮನೆಯು ಮುರುಕಾದರೂ ಮನ ಚುರುಕು ಆಗಿರಲು

ಹೊಸ ಹೊಳಪು ಪಡೆಯುವುದು ಈ ಮನ್ವಂತರ

ಹಿಡಿದಿರುವ ಕೈಗಳಿಗೆ ಅದು ತೋರಲೆಂದೇ,

ಈ ಮುಗುಳುನಗೆ,ಕಣ್ಣಲ್ಲಿ ತುಸು ಕಾತರ?!

ಒಂದಾಗಿರಿ,ಮುಂದಾಗಿರಿ,ನಗುನಗುತ ಬಾಳುತಲಿ

ಹುಟ್ಟುಹಾಕಿರಿ ಕ್ರಾಂತಿ,ವಿಶ್ವಪ್ರೀತಿ

ನಿಮ್ಮೊಲವು ಜಗದಗಲ,ಸ್ವಾಭಿಮಾನದ ಬಲವು

ಜೊತೆಗೂಡೆ ಹೊಳೆಯುವುದು ಶಾಂತಿ ಪ್ರಣತಿ!!

Facebook ಕಾಮೆಂಟ್ಸ್

ಲೇಖಕರ ಕುರಿತು

Deepthi Delampady

Currently studying Information Science and Engineering (6th semester) at SJCE, Mysore.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!