Featured ಅಂಕಣ

ನಮ್ಮ ಸಹನೆಯ ಕಟ್ಟೆ ಒಡೀತಾ ಇದೆ..

 

ನಾನಂತೂ ಅಂತಹಾ ಪ್ರತಿಭಟನೆಯನ್ನು ಇದುವರೆಗೆ ನೋಡಿರಲಿಲ್ಲ. ಕಲ್ಲು ತೂರುವುದು ನೋಡಿದ್ದೇನೆ, ಟಯರಿಗೆ ಬೆಂಕಿ ಹಚ್ಚುವುದು ನೋಡಿದ್ದೇನೆ, ರೈಲ್ವೇ ಬಂದ್ ಮಾಡುವುದು, ರಸ್ತೆ ತಡೆ ಮಾಡುವುದರ ಬಗ್ಗೆ ಕೇಳಿದ್ದೇನೆ. ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕುವಂತಹಾ ಪ್ರತಿಭಟನೆಯನ್ನು ನೋಡಿದ್ದೇನೆ. ಆದರೆ ನೂರಾರು ಟ್ರಾಕ್ಟರ್’ಗಳಲ್ಲಿ ಬಂದು ಪೋಲೀಸ್ ರಕ್ಷಣಾ ಕೋಟೆಯನ್ನೆಲ್ಲಾ ಭೇಧಿಸಿ ನಗರದತ್ತ ಮುನ್ನುಗ್ಗುವ ಪ್ರತಿಭಟನೆಯನ್ನು ಹಿಂದೆಂದೂ ನೋಡಿರಲಿಲ್ಲ. ಆ ಪ್ರತಿಭಟನಾಕಾರರ ಮುಖದಲ್ಲಿ ಇನ್ನಿಲ್ಲದ ರೋಷ ಎದ್ದು ಕಾಣುತ್ತಿತ್ತು.ಅವರ ಸಹನೆಯ ಕಟ್ಟೆ ಒಡೆದಿತ್ತು, ಈ ಭಾರಿ ಬೇಡಿಕೆ ಇಡೇರಿಸಿಕೊಂಡೇ ಊರಿಗೆ ಮರಳುವುದು ಎಂದು ಅವರೆಲ್ಲಾ ಸಂಕಲ್ಪಿಸಿಕೊಂಡೇ ಬಂದಿದ್ದಂತೆ ಕಾಣುತ್ತಿತ್ತು. ಆಂಧ್ರದಲ್ಲಿ ಕಾಪು ಸಮುದಾಯದವರು, ಗುಜರಾತಿನಲ್ಲಿ ಪಟೇಲರು, ಹರ್ಯಾಣದಲ್ಲಿ ಜಾಟರು ನಡೆಸಿದ ಮೀಸಲಾತಿ ಪ್ರತಿಭಟನೆಯಂತೆ ಯಾವುದೇ ಜಾತಿ ಮೀಸಲಾತಿಗಾಗಿ ನಡೆದ ಪ್ರತಿಭಟನೆ ಇದಾಗಿರಲಿಲ್ಲ. ಅಷ್ಟಕ್ಕೂ ಇವರು ಕೇಳಿದ್ದು ಬರೀ ನೀರನ್ನು, ಸ್ಸಾರಿ ಬರೀ ನೀರನ್ನಲ್ಲ, ಕುಡಿಯುವ ನೀರನ್ನು.

ಇದು ನಿಜಕ್ಕೂ ನಾಚಿಕೆಯ ಸಂಗತಿಯಲ್ಲವೇ? ಸ್ವಾತಂತ್ರ್ಯ ಬಂದು ಹತ್ತಿರ ಹತ್ತಿರ ಎಪ್ಪತ್ತು ವರ್ಷಗಳಾಗುತ್ತಾ ಬಂತು. ಆದರೂ ಕೆಲವು ಪ್ರದೇಶಗಳಿಗಿನ್ನೂ ಕುಡಿಯುವ ನೀರನ್ನು ಪೂರೈಸಲೂ ಆಗಲಿಲ್ಲವೇ ನಮ್ಮ  ಸರಕಾರಗಳಿಗೆ? ಊರಿನ ರಸ್ತೆ ಅಭಿವೃದ್ಧಿ ಆಗದಿದ್ದರೂ ಪರವಾಗಿಲ್ಲ, ಊರಿಗೆ ರೈಲ್ವೇ ಬಂದಿಲ್ಲ  ಎಂದರೆ ಹೋಗಲಿ ಬಿಡಿ, ವಿದ್ಯುತ್ತಿನ ಮಾತು ಬಿಟ್ಬಿಡಿ, ಹೇಗಾದರೂ ಬದುಕಬಹುದು. ಆದರೆ ಜೀವಜಲವಿಲ್ಲದೆ ಬದುಕುವುದು ಹೇಗೆ? ಪ್ರತಿ ದಿನದ ಹತ್ತಿಪ್ಪತ್ತು ಲೀಟರ್ ನೀರಿಗಾಗಿ ಇನ್ನೆಷ್ಟು ಪ್ರತಿಭಟನೆಗಳನ್ನು ಮಾಡಬೇಕು? ಇನ್ನೆಷ್ಟು ಗಲಾಟೆಗಳನ್ನು ಮಾಡಿ ಕೇಸು ಜಡಿಸಿಕೊಳ್ಳಬೇಕು?

ಸಮಸ್ಯೆಗಳಂತೂ ಎಲ್ಲಾ ಸರಕಾರಗಳಿಗೂ ಇದ್ದೇ  ಇರುತ್ತವೆ. ಮುಖ್ಯವಾಗಿ ಅದನ್ನು ನಿವಾರಿಸುವ ಇಚ್ಛಾಶಕ್ತಿ ಇರಬೇಕು. ಅದಿಲ್ಲವಾ? ಕನಿಷ್ಟ ಪಕ್ಷ ಪ್ರಜೆಗಳ ಸಮಸ್ಯೆಗಳನ್ನು ಆಲಿಸುವ, ಅವರ ಆಕ್ರೋಶವನ್ನು ಸಾವಧಾನದಿಂದ ತಾಳಿಕೊಳ್ಳುವ ವ್ಯವಧಾನವಾದರೂ ಬೇಕು. ಮೊನ್ನೆಯ ಎರಡು ಉದಾರಹರಣೆಗಳನ್ನೇ ನೋಡಿ. ಅಲ್ಲಿ ವಿದ್ಯುತ್ತಿನ ಸಮಸ್ಯೆಯೆಷ್ಟಿದೆಯೆಂದರೆ, ಮೊದಲೆಲ್ಲಾ  ಒಂದು ದಿನದಲ್ಲಿ ಕರೆಂಟು ಒಂದೆರಡು ಗಂಟೆ ಹೋಗುತ್ತಿತ್ತಲ್ಲಾ, ಈಗ ಅಷ್ಟು ಗಂಟೆ ಕರೆಂಟ್ ಇರುತ್ತದೆ. ಕೃಷಿಗಾಗಲಿ, ಉದ್ಯಮಕ್ಕಾಗಲಿ ಯಾವುದಕ್ಕೂ ಕರೆಂಟ್ ಇಲ್ಲ. ಇದರಿಂದ ಬೇಸತ್ತ ನಾಗರೀಕರೊಬ್ಬರು ಮಾನ್ಯ ಇಂಧನ ಸಚಿವರಿಗೆ ಕರೆ ಮಾಡಿ ದೂರಿತ್ತಿದ್ದಕ್ಕೆ ಅವರನ್ನು ಬಂಧಿಸಲಾಯ್ತು. ಮತ್ತೊಂದೆಡೆ ಕುಡಿಯುವ ನೀರಿಗಾಗಿ ಪ್ರತಿಭಟನೆ ಮಾಡಿದ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಯ್ತು. ನಮ್ಮ ಈ ಸರಕಾರಕ್ಕೆ ಸಂವೇಧನೆಯೇ ಇಲ್ಲವೇ? ಕರೆ ಮಾಡಿದವರು ಸಚಿವರ ಬಳಿ ಅವಾಚ್ಯವಾಗಿ ಮಾತಾಡಿರಲೂಬಹುದು, ಆದರೆ ಅದರ ಹಿಂದಿರುವ ಕಾರಣ ತಮ್ಮ ಇಲಾಖೆಯ ಹಣಬರಹವೇ ಅಂತ ಸಚಿವರಿಗೆ ಗೊತ್ತಿರಲಾರದೇ? ರೈತರು ಅಷ್ಟೊಂದು ಆಕ್ರೋಶಭರಿತರಾಗಿ ಸರಕಾರದ ವಿರುದ್ಧ ಮುಗಿ ಬೀಳುತ್ತಾರೆಂದರೆ ಅದಕ್ಕೆ ಸರಕಾರ ಮಾತಿಗೆ ತಪ್ಪಿದೆ ಎಂಬುದೊಂದೇ ಕಾರಣವಲ್ಲವೇ? ಕುಡಿಯಲೂ ನೀರಿಲ್ಲದೆ, ಬಾಯಾರಿ ಗತಿಗೆಟ್ಟಿರುವುದೇ ಅಲ್ಲವೇ ರೈತರು ಸಹನೆ ಕಳೆದುಕೊಳ್ಳುವುದಕ್ಕೆ ಕಾರಣ?

ಬಹುಶಃ ಇದೆಕ್ಕಾಲ್ಲಾ ಒಂದೇ ಕಾರಣ, ನಮ್ಮನ್ನಾಳುವವರಿಗೆ ಇಚ್ಚಾಶಕ್ತಿಯಿಲ್ಲದೇ ಇರುವುದು,ತಮ್ಮನ್ನಾರಿಸಿದವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೈಜ ಕಾಳಜಿಯಿಲ್ಲದೇ ಇರುವುದು. ಇದರಲ್ಲಿ ಆ ಪಕ್ಷ ಈ ಪಕ್ಷ ಎಂಬ ಭೇಧವಿಲ್ಲ. ತಮ್ಮ ತಮ್ಮ ರಾಜಕೀಯ ಇಚ್ಚಾಶಕ್ತಿಯ ಅರ್ಧದಷ್ಟಾದರೂ ಇಚ್ಚಾಶಕ್ತಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದ್ದಿದ್ದರೆ ದೇಶ ಈಗಾಗಲೇ ಉದ್ಧಾರವಾಗಿರೋದು. ಕಳಸಾ ಬಂಡೂರಿ ಹೋರಾಟವನ್ನೇ ತೆಗೆದುಕೊಳ್ಳಿ. ಪಾಪ.. ಆ ಭಾಗದ  ರೈತರು ಈ ಒಂದು ಯೋಜನೆಯ ಸಾಕಾರಕ್ಕಾಗಿ ಎಷ್ಟೋ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ನಮಗೂ ಅಚ್ಚೇದಿನ್ ಬರುತ್ತದೆ ಎಂದು ಆಸೆಗಣ್ಣಿನಿಂದಲೇ ಕಾಯುತ್ತಾ ಇದ್ದಾರೆ. ಈ ಪ್ರತಿಭಟನೆಗಳು ಶುರುವಾದ ಬಳಿಕ ಅದೆಷ್ಟೋ ಸರಕಾರಗಳು ಬದಲಾಗಿವೆ ಆದರೆ ರೈತರ ಸ್ಥಿತಿಗತಿಯಿನ್ನೂ ಬದಲಾಗಿಲ್ಲ.  ಸದ್ಯದ ಪ್ರತಿಭಟನೆಯಂತೂ ಬರೋಬ್ಬರಿ ಇನ್ನೂರು ದಿನಗಳನ್ನು ದಾಟಿದೆ. ಆದರೆ  ನಮ್ಮ ಜನ ಪ್ರತಿನಿಧಿಗಳು ಈ ವಿಚಾರವನ್ನು ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಯೋಜನೆಯ ಅನುಷ್ಟಾನದ ಕುರಿತಾಗಿ ಪ್ರಾಮಾಣಿಕ ಪ್ರಯತ್ನವನ್ನು ದೇವರಾಣೆಗೂ ಮಾಡುತ್ತಿಲ್ಲ. ಸೂಕ್ಷ್ಮವಾಗಿ ಗಮನಿಸಿ, ಕಳೆದ ಆರೇಳು ತಿಂಗಳ ಹಿಂದೆ ಪ್ರತಿಭಟನೆ ಕಾವು ಪಡೆಯುವವರೆಗೂ ನಮ್ಮ ಘನ ಸರಕಾರ ಗಾಢ ನಿದ್ದೆಯಲ್ಲಿತ್ತು. ಈ ವರ್ಷ ಬರದ ಬರೆ ಬೇರೆ. ಜೊತೆಗೆ ಸಾವಿರಕ್ಕೂ ಮಿಕ್ಕಿ ರೈತರ ಆತ್ಮಹತ್ಯೆ. ಕಡೆಗೂ ಸರಕಾರ ಎಚ್ಚೆತ್ತುಕೊಂಡಿತು ಅನ್ನಿ. ಆದರೆ ಆ ಬಳಿಕ ಸರಕಾರ ಕಡಿದು ಕಟ್ಟೆ ಹಾಕಿದ್ದು ಏನು ಅಂತ ಕೇಳಿ. ವಿಪಕ್ಷ ನಾಯಕರನ್ನೂ ಸೇರಿದ ಸರ್ವಪಕ್ಷ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ತೆರಳಿತು. ಅದಾಗಲೇ ಪ್ರಿಂಟ್ ಆಗಿದ್ದ ಮನವಿ ಪತ್ರವನ್ನು ಪ್ರಧಾನಿಯವರಿಗೆ ನೀಡಿ ಫೋಟೋ ಹೊಡೆಸಿಕೊಂಡು ಬಂತು.

ನಮ್ಮ ಜನಪ್ರತಿನಿಧಿಗಳ ನೈಜ ಬಂಡವಾಳ ಪಕ್ಷಾತೀತವಾಗಿ ಬಯಲಾಗಿದ್ದೇ ಆವಾಗ ನೋಡಿ. ಒಂದು ಪಾರ್ಟಿ “ಪ್ರಧಾನಿಗಳು ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸಲೇ ಇಲ್ಲ” ಎನ್ನುತ್ತಾ ಮತ್ತೊಂದು ಪಕ್ಷದ ಮೇಲೆ ಗೂಬೆ ಕೂರಿಸಲು ನೋಡಿತು. ಮತ್ತೊಂದು ಪಾರ್ಟಿ “ಪ್ರಧಾನಿಗಳ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ” ಅಂತ ಇನ್ನೊಂದು ಪಾರ್ಟಿಗೆ ಕೌಂಟರ್ ನೀಡಿತು. ಆರೋಪ ಪ್ರತ್ಯಾರೋಪಗಳು ನಿರಂತರವಾಗಿ ನಡೆದವು. ಈ ರಭಸದಲ್ಲಿ ಪ್ರಧಾನಿಗಳು ಹೇಳಿದ “ನೀವೇ, ಮೂರು ರಾಜ್ಯದವರು ಸೇರಿ ಮಾತುಕತೆ ನಡೆಸಿಕೊಂಡು ಒಂದು ಒಮ್ಮತದ ತೀರ್ಮಾನಕ್ಕೆ ಬನ್ನಿ ” ಎಂಬ ಮಾತು ಎಲ್ಲರಿಗೂ ಮರೆತು ಹೋಯ್ತು.  ರಾಜ್ಯ ಸರಕಾರದಿಂದ ಗೋವಾ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ಸಾಂಕೇತಿಕವಾಗಿ ಒಂದು ಪತ್ರ ಹೋಯ್ತೇ ವಿನಹ ಅದಕ್ಕಿಂತ ಹೆಚ್ಚಿನದೇನೂ ನಡೆಯಲಿಲ್ಲ.

ಬೇರೆ ರಾಜ್ಯಗಳು ಈ ಪತ್ರಕ್ಕೆ ಕ್ಯಾರೇ ಎನ್ನಲಿಲ್ಲ. “ಇಂತಹ ನಡೆಯನ್ನು ನಾವು ನಿರೀಕ್ಷಿರಲಿಲ್ಲ, ದುರದೃಷ್ಟಕರ” ಎಂದು ಜಲ ಸಂಪಲ್ಮೂಲ ಸಚಿವರು ಒಂದು ಲೈನಿನ ಸ್ಟೇಟ್’ಮೆಂಟ್ ಕೊಟ್ಟು ಕೈತೊಳೆದುಕೊಂಡುಬಿಟ್ಟರು. ಜೊತೆಗೆ ಪ್ರಧಾನಮಂತ್ರಿಯವರ ಮೇಲೆ ಒಂದಷ್ಟು ಆರೋಪವನ್ನೂ ಮಾಡಿದರು. ಅದಕ್ಕೆ ಬದಲಾಗಿ, ಬೇರೆ ರಾಜ್ಯದಲ್ಲಿರುವ ಕಾಂಗ್ರೆಸ್ಸ್ ಪಕ್ಷದ ಮುಖಂಡರ ಜೊತೆಗೆ  ಮಾತುಕತೆ ನಡೆಸಿ ಅವರ ಮನವೊಲಿಸುವ ಕೆಲಸ ಮಾಡಿದರಾ? ನಮ್ಮದೇ ರಾಜ್ಯದ ಎಲ್ಲಾ ಪ್ರತಿಪಕ್ಷಗಳನ್ನು ಕರೆದು ಮೊದಲು ನಮ್ಮೊಳಗೆ ಒಮ್ಮತ ಮೂಡಿಸಲು ಪ್ರಯತ್ನಿಸಿದರಾ? ಇಲ್ಲ!

ಹಾಗಂತ ಇದು ಬರೀ ಸರಕಾರದ ಜವಾಬ್ದಾರಿಯಾ? ಖಂಡಿತವಾಗಿಯೂ ಅಲ್ಲ. ರಾಜ್ಯದ ಜನರ ಯೋಗಕ್ಷೇಮದ ವಿಚಾರದಲ್ಲಿ ಒಂದು ಸರಕಾರ ಎಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡಬಹುದೋ ಅಷ್ಟೇ ವಿರೋಧ ಪಕ್ಷವೂ ಮಾಡಬಹುದು. ದುರಾದೃಷ್ಟಕ್ಕೆ ನಮ್ಮ ವಿರೋಧ ಪಕ್ಷಗಳಿಗೂ ತಮ್ಮ ಸ್ವ ಹಿತಾಸಕ್ತಿಯಷ್ಟೇ ಮುಖ್ಯವಾಗಿದ್ದು, ಅದರ ಮುಂದೆ ರೈತರ ಸಮಸ್ಯೆಗಳು ಗೌಣವಾಗಿರುವುದು ಅತ್ಯಂತ ಬೇಸರದ ಸಂಗತಿ. ಮನಸ್ಸು ಮಾಡಿದರೆ ಬಿಜೆಪಿಯವರಿಗೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಪಕ್ಷದ ಸರಕಾರದ ಪ್ರತಿನಿಧಿಗಳನ್ನು ಕಳಸಾ ಬಂಡೂರಿ ಕುರಿತಾಗಿ ಮಾತನಾಡಬಹುದಿತ್ತು. ಅವರು ಒಪ್ಪದೇ ಹೋದರೆ ರಾಷ್ಟ್ರೀಯ ಬಿಜೆಪಿಯ ಮೂಲಕವಾದರೂ ಪ್ರಯತ್ನಿಸಬಹುದಿತ್ತು. ಆದರೆ ಅವರು ಆ ಥರಾ ಮಾಡಿದರಾ? ಇಲ್ಲಿ ಅವರಿವರ ಮೇಲೆ ಆರೋಪಗಳನ್ನು ಮಾಡುವ ಬದಲು ತಮ್ಮ ತಮ್ಮ ಕ್ಷೇತ್ರದ ಜನರ ಮುಖ ನೋಡಿಯಾದರೂ ರಾಜಕೀಯವನ್ನೆಲ್ಲಾ ಬದಿಗೊತ್ತಿ ಒಂದು ಭಾರಿ ಪ್ರಯತ್ನವನ್ನಾದರೂ ಮಾಡಬಹುದಿತ್ತಲ್ಲಾ? ಯಾಕೆ, ಯೋಜನೆ ಕಾರ್ಯಗತಗೊಂಡರೆ ಅದರ ಕ್ರೆಡಿಟ್ಟು ಎಲ್ಲಿ ರಾಜ್ಯ ಸರಕಾರಕ್ಕೆ ಹೋಗುವುದೆಂಬ ಭಯವೇ? ವಿಪರ್ಯಾಸ ನೋಡಿ,  ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಪ್ರಹ್ಲಾದ್ ಜೋಷಿಯವರ ಹುಬ್ಬಳ್ಳಿ ಕ್ಷೇತ್ರದಲ್ಲೇ ಕಳಸಾ ಬಂಡೂರಿಗಾಗಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಮನುಷ್ಯ ಲೋಕಸಭೆಯಲ್ಲಿ ಅದನ್ನು ಪ್ರಸ್ತಾಪಿಸುವ ಬದಲಾಗಿ, ಕಳಸಾ ಬಂಡೂರಿಗೆ ಹೋಲಿಕೆ ಮಾಡಿದರೆ ಅಷ್ಟೇನೂ ಪ್ರಾಮುಖ್ಯವಲ್ಲದ ಮುಖ್ಯಮಂತ್ರಿಗಳ ವಾಚ್ ವಿಚಾರವನ್ನು ಎತ್ತಿದರು. ಅದಕ್ಕಾಗಿ ಸಂಸತ್ತಿನ ಹೊರಗೆ ಪ್ರತಿಭಟನೆಯನ್ನೂ ಮಾಡಿದರು. ಕಳಸಾ ಬಂಡೂರಿ ವಿಚಾರವನ್ನು ಸಂಸತ್ತಿನ ಒಳಗೆ ಎತ್ತಿದ್ದರೆ ಇವರ ಗಂಟೇನು ಹೋಗುತ್ತಿತ್ತು? ವಿಚಾರವನ್ನು ಗಟ್ಟಿ ದನಿಯಲ್ಲಿ ಪ್ರಸ್ತಾಪಿಸಿದಿದ್ದರೆ ಇತರ ರಾಜ್ಯದವರಿಗೂ ಕೇಂದ್ರ ಸರಕಾರಕ್ಕೂ, ಇಲ್ಲಿ ಯಾವ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ,  ಯೋಜನೆಯ ಅಗತ್ಯತೆಯೇನು? ಎಂಬುದು ಸರಿಯಾಗಿ ಮನವರಿಕೆಯಾಗುತ್ತಿರಲಿಲ್ಲವೇ? ಯಾಕೆ, ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರೆ ಕೇಂದ್ರ ಸರಕಾರಕ್ಕೆ ಮುಜುಗರವಾದೀತು, ಬಳಿಕೆ ಪಕ್ಷದ ಆಂತರಿಕ ವಲಯದಲ್ಲಿ ವಿರೋಧ ವ್ಯಕ್ತವಾದೀತು ಭಯವೇ ಇವರಿಗೆ? ತಮ್ಮನ್ನಾರಿಸಿದ ಕ್ಷೇತ್ರದ ಜನತೆಯ ಹಿತಾಸಕ್ತಿಗಳಿಗಿಂತ ರಾಜಕೀಯ ಹಿತಾಸಕ್ತಿಗಳೇ ಮುಖ್ಯವಾಯಿತೇ?

ವಿದ್ಯುತ್ತಿನ ವಿಷಯಕ್ಕೆ ಬರೋಣ.. ಇತ್ತೀಚೆಗಷ್ಟೇ ಮಾನ್ಯ ಇಂಧನ ಸಚಿವರು “ಲೋಡ್ ಶೆಡ್ಡಿಂಗ್” ಇಲ್ಲ ಎಂದು ಹೇಳಿದ ನೆನಪು ನನಗೆ. ಆದರೆ ಅದು ಬರೀ ಜಿಲ್ಲಾ ಪಂಚಾಯಿತಿ  ಚುನಾವಣೆಗಷ್ಟೆ ಸೀಮಿತವಾಯ್ತು. ಏನು ಕೋ ಇನ್ಸಿಡೆನ್ಸೋ ಏನೋ?, ಈ ಲೇಖನ ಬರೆಯುತ್ತಿರುವಾಗ ನಮ್ಮಲ್ಲಿ ಎರಡು ಗಂಟೆ ಲೋಡ್ ಶೆಡ್ಡಿಂಗ್ ಆಗಿತ್ತು.   . ಅವ್ಯಾಹತ ಪವರ್ ಕಟ್! ಇದು ವಿಪರೀತ ಸೆಖೆಯ ಸಮಯ ಬೇರೆ. ರಾತ್ರಿಯ ಹೊತ್ತು ಮೈಯಲ್ಲಾ ಕಿತ್ತುಕೊಂಡು ಬರುವಷ್ಟು ಸೆಖೆ. ಸಾಲದ್ದಕ್ಕೆ ಇಂತಹಾ ಸಮಯಕ್ಕಾಗಿಯೇ ಹೊಂಚು ಹಾಕಿ, “ಲಾಲ್ ಸಲಾಮ್..” ಎನ್ನುತ್ತಾ ದಾಂಗುಡಿಯಿಡುವ ಕಾಮ್ರೆಡ್(ಸೊಳ್ಳೆ)ಗಳು.. ಥತ್.. ಯಾರಿಗೇ ಬೇಕು ಈ ಪಾಡು? ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವರು ಒಮ್ಮೆ ಎಸಿ ಕೋಣೆಯಿಂದ ಹೊರ  ಬಂದು ನೋಡಲಿ, ರಾಜ್ಯದ ಜನರು ಸರಿಯಾದ ವಿದ್ಯುತ್ ಇಲ್ಲದೆ ಅದೆಷ್ಟು ಪರಿತಪಿಸುತ್ತಿದ್ದಾರೆಂದು? ಹಿಟ್ಟು ರುಬ್ಬುವುದು, ಇಸ್ತ್ರಿ ಮಾಡುವುದೆಲ್ಲಾ ಸಿಲ್ಲಿ ಮ್ಯಾಟರ್ ಎನಿಸಬಹುದು, ಆದರೆ ಪರೀಕ್ಷೆಗೆ ಓದುವ ಮಕ್ಕಳ ಪಾಡನ್ನು ಕೇಳುವವರಾರು?  ಆ ಮಕ್ಕಳು ಹಾಕುವ ಹಿಡಿಶಾಪ ನಿಮ್ಮನ್ನು ಸುಮ್ಮನೆ ಬಿಟ್ಟೀತೆ? ಕರೆಂಟನ್ನೇ ನಂಬಿಕೊಂಡು ಸಣ್ಣ ಪುಟ್ಟ ಉದ್ಯಮಗಳನ್ನು ನಂಬಿಕೊಂಡು ಹೊಟ್ಟೆ ಹೊರೆಯುವಂತ ಲಕ್ಷಾಂತರ ಜನರಿದ್ದಾರೆ. ಸಾಲ ಸೋಲ ಮಾಡಿ ಝೆರಾಕ್ಸ್ ಮಷಿನ್ ಹಾಕಿ ದಿನವೊಂದಕ್ಕೆ ನೂರೋ ಇನ್ನೂರೋ ಸಂಪಾದಿಸುವವರ ಕಥೆಯೇನು? ಟಿವಿ, ಮೊಬೈಲ್ ರಿಪೇರಿ ಮಾಡುವವರ ಹೊಟ್ಟೆ ಪಾಡೇನು? ಸಣ್ಣ ಜ್ಯೂಸಿನ ಅಂಗಡಿ ಇಟ್ಟುಕೊಂಡಿರುವವನ ಗೋಳನ್ನು ಕೇಳುವವರಾರು? ಇಂತಹ ಸಣ್ಣಪುಟ್ಟ ಉದ್ಯಮಗಳಿಗೇ, ಸಣಪುಟ್ಟ ಸ್ಟಾರ್ಟಾಪ್’ಗಳಿಗೇ ಸರಿಯಾಗಿ ಕರೆಂಟ್ ಒದಗಿಸದವರು, ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ಅಂತೆಲ್ಲಾ ಮಾಡಿ ದೊಡ್ಡ ದೊಡ್ದ ಉದ್ಯಮಗಳಿಗೆ ಎಲ್ಲಿಂದ ಕರೆಂಟ್ ಕೊಡುತ್ತಾರೆ? ಇದೆಲ್ಲಾ ಬಿಡಿ, ಈ ವರ್ಷವಂತೂ ಮಳೆಯಿಲ್ಲದೆ ಕಂಗೆಟ್ಟು ಕುಳಿತಿದ್ದಾನೆ ನಮ್ಮ ರೈತ. ಈ ಸಂದರ್ಭದಲ್ಲಿ ಪಕ್ಕದ ನಾಲೆಯಿಂದಲೋ, ಕೆರೆಯಿಂದಲೋ ನೀರೆತ್ತಬೇಕಾದ ಅನಿವಾರ್ಯತೆ ಅವನಿಗೆ. ಅದಕ್ಕಾದರೂ ಕರೆಂಟ್ ಬೇಡವೇ? ನೀರೂ ಇಲ್ಲದೆ, ಕರೆಂಟೂ ಇಲ್ಲದೆ ಆತನೆಲ್ಲಿಗೆ ಹೋಗಬೇಕು?

ಒಟ್ಟಿನಲ್ಲಿ ರಾಜಕಾರಣಿಗಳ ಸ್ವಾರ್ಥಕ್ಕೆ, ಅವರ ಸ್ವಂತ ಹಿತಾಸಕ್ತಿಗಳಿಗೆ ರಾಜ್ಯದ ಜನರ ಹಿತಾಸಕ್ತಿಗಳು ಬಲಿಯಾಗುತ್ತಿರುವುದು ಸ್ಪಷ್ಟ. ಇವನ್ನೆಲ್ಲಾ ನೋಡಿ ನಮ್ಮ ಸಹನೆಯ ಕಟ್ಟೆಯೊಡೆತ್ತಿರುವುದೂ ಸಹ ಅಷ್ಟೇ ಸ್ಪಷ್ಟ. ಈಗಾಗಲೇ ಹಿಂದೆಂದೂ ಕಾಣದಷ್ಟು ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಾದರೂ ರೈತರ ಪ್ರತಿಭಟನೆಗಳಿಗೆ, ಅವರ ಸಮಸ್ಯೆಗಳಿಗೆ ಸರಕಾರ ಸೂಕ್ತ ಸಮಯದಲ್ಲಿ ಸ್ಪಂದಿಸದೇ ಇದ್ದರೆ, ವಿರೋಧ ಪಕ್ಷಗಳು  ತಮ್ಮ  ಹೊಲಸು ರಾಜಕೀಯವನ್ನು ಬದಿಗೊತ್ತಿ, ಜವಾಬ್ದಾರಿಯುತವಾಗಿ ಕೆಲಸ ಮಾಡದೇ ಇದ್ದರೆ, ಅದು ಮುಂದಿನ ವರ್ಷ ಇನ್ನೂ ಹಲವು ರೈತರ ಆತ್ಮಹತ್ಯೆಗಳಿಗೆ ಮುನ್ನುಡಿಯಾದೀತು..!

ಲಾಸ್ಟ್ ಪಂಚ್:   ಕರೆಂಟು ಹೋದಾಗಲೆಲ್ಲಾ  ಶೋಭಾ ಕರಂದ್ಲಾಜೆಯವರು ನೆನಪಾಗುತ್ತಾರೆ. “ಛೇ! ಅವರು ಇಂಧನ ಸಚಿವರಾಗಿರಬೇಕಿತ್ತು” ಅಂತ ಮನಸ್ಸಿನ್ನೂ ಅವರನ್ನು ಸ್ಮರಿಸುತ್ತದೆ. ಛೇ..! ಒಬ್ಬ ಹೆಣ್ಮಗಿಗೆ ಆಗಿದ್ದು ಗಂಡ್ಮಗಿಗೆ ಆಗ್ತಾ ಇಲ್ವಲ್ಲಾ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!