Featured ಅಂಕಣ

ಕಾಡುವ ವೃತ್ತಿಯೂ ಬಾಡುವ ಪ್ರವೃತ್ತಿಯೂ

ಅದೆಷ್ಟು ಬಾರಿ ನೋಡಿದ್ದಾಳೋ, ಆದರೂ “ತ್ರೀ ಈಡಿಯೆಟ್ಸ್” ಚಿತ್ರ ಮತ್ತೆ ನೋಡಿದಾಗೆಲ್ಲ ಅರ್ಚನಾಳ ಕಣ್ಣಲ್ಲಿ ನೀರು. ಫೋಟೋಗ್ರಾಫರ್ ಆಗಬೇಕು ಅಂತ ಕನಸು ಕಾಣುತ್ತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಚು ಬಿಸಿ ಮಾಡುತ್ತ ಹೆಂಚು ಲೆಕ್ಕ ಮಾಡುತ್ತ ದಿನದೂಡುವ ಫರಾನ್‍ನ ಹಾಗೆ ತನ್ನ ಲೈಫೂ ಹಾಳಾಗಿ ಹೋಯ್ತಲ್ಲ ಅಂತ ಕನವರಿಕೆ. ಬೆಟ್ಟದಷ್ಟು ಕನಸು ಹೊತ್ತಿದ್ದು ಡ್ಯಾನ್ಸರ್ ಆಗಬೇಕು ಅಂತ, ಆದರೆ ಮಾಡುತ್ತಿರುವುದು ಬಲವಂತದ ಎಂಬಿಬಿಎಸ್. ಕೆಂಪು ಹಸಿರಿನ ಜರಿ ಬಟ್ಟೆ ಹಾಕಿ ವೇದಿಕೆಯಲ್ಲಿ “ಆಡಿಸಿದಳ್ ಯಶೋದಾ” ಅನ್ನಬೇಕಾದವಳು ಶವಕ್ಕೆ ಹೊದ್ದಂತೆ ಬಿಳಿ ಕೋಟು ಸುತ್ತಿಕೊಂಡು ಅಂಗರಚನಾಶಾಸ್ತ್ರ ಕಲೀತಿದೀನಲ್ಲ ಅಂತ ಅವಳಿಗೆ ಉರಿ, ಕೋಪ, ಸೆಡವು.

ಸಮಸ್ಯೆ ಅವಳೊಬ್ಬಳದೇ ಅಲ್ಲ, ನಮ್ಮ ದೇಶದ ಲಕ್ಷಾಂತರ ಹುಡುಗರು ಹೀಗೆ ಯಾವಾವುದೋ ಕನಸುಗಳನ್ನು ಹೊತ್ತುಕೊಂಡು ಅವಕ್ಕೆ ಸಂಬಂಧವೇ ಇಲ್ಲದ ಕಲಿಕೆಯೋ ಕೆಲಸವೋ ಮಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತೇವೆ. ರೇಡಿಯೋ ಜಾಕಿ ಆಗಬೇಕು ಅಂದುಕೊಂಡ ಸುರೇಶ ಮೆಕಾನಿಕಲ್ ಡಿಪ್ಲೋಮ ಮಾಡುತ್ತಾನೆ. ಆರ್ಟಿಸ್ಟ್ ಆಗಿ ದೊಡ್ಡ ಹೆಸರು ಮಾಡಬೇಕು ಅಂತ ಬಯಕೆ ಹೊತ್ತ ರಮಾಕಾಂತ ಅಪ್ಪನ ಒತ್ತಾಯಕ್ಕೆ ಬಿದ್ದು ಎಲ್‍ಎಲ್‍ಬಿಗೆ ಸೈಕಲ್ ಹೊಡೆಯುತ್ತಾನೆ. ವೈದ್ಯೆಯಾಗಿ ಸಮಾಜಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತ ಗಿರಿಮಾ ಅನಿವಾರ್ಯ ಸಂಕಟಗಳಿಗೆ ಬಲಿಯಾಗಿ ಕೊನೆಗೆ ಬಿಎನಲ್ಲಿ ಇಂಗ್ಲೀಷ್ ಸಾಹಿತ್ಯ ಓದುತ್ತಾಳೆ. ಒಟ್ಟಿನಲ್ಲಿ ಕನಸು ಯಾವುದೋ ಕಲಿಯುವುದು ಯಾವುದೋ ಎಂಬಂಥ ಎಡಬಿಡಂಗಿ ಪರಿಸ್ಥಿತಿ.

ಸುಲಭ ಉತ್ತರವಿಲ್ಲ!

ಹೀಗೇಕೆ ಆಗಬೇಕು? ಇಚ್ಛೆಗೆ ವಿರುದ್ಧವಾಗಿ ಡಿಗ್ರಿ ಪಡೆದು ಏನು ಪ್ರಯೋಜನ? ಇಷ್ಟ ಇರುವುದರಲ್ಲೇ ಮುಂದುವರಿದರೆ ಒಳ್ಳೆಯದಲ್ಲವೇ ಎನ್ನುವುದೆಲ್ಲ ಕೇಳಲು ರುಚಿಕರವಾದ ಪ್ರಶ್ನೆಗಳು. ಆದರೆ, ಇವುಗಳಿಗೆ ಸುಲಭ ಉತ್ತರಗಳಿಲ್ಲ. ಕೆಳಗಿನ ಅಂಶಗಳನ್ನು ಗಮನಿಸಿ:

Ø  ಮಕ್ಕಳನ್ನು “ಇದೇ ಕೋರ್ಸು ಸೇರು, ಇದೇ ಡಿಗ್ರಿ ಮಾಡು” ಎಂದು ಬಲವಂತ ಮಾಡುವ ತಂದೆತಾಯಿಗಳನ್ನು ದೂರುವುದು ಕೂಡ ತಪ್ಪು. ಯಾವ ತಂದೆತಾಯಂದಿರೂ ತಮ್ಮ ಮಕ್ಕಳಿಗೆ ಕೆಟ್ಟದಾಗಲಿ ಎಂದು ಒತ್ತಾಯ ಮಾಡುವುದಿಲ್ಲ. ಹೇಗೆ ಹೋದರೆ ಒಳ್ಳೆಯದು, ಏನು ಮಾಡಿದರೆ ಜೀವನಕ್ಕೆ ಭದ್ರತೆ ಎನ್ನುವುದನ್ನೆಲ್ಲ ತಮ್ಮ ನೆಲೆಯಲ್ಲಿ ವಿವರವಾಗಿ ಯೋಚಿಸಿಯೇ ಅವರು ಅಂತಹ ಮಾತುಗಳನ್ನು ಹೇಳುತ್ತಾರೆ. ಮಕ್ಕಳ ಮೇಲೆ ಒತ್ತಾಸೆ ಹೇರುತ್ತಾರೆ. “ದೊಡ್ಡವನಾದ ಮೇಲೆ ದೊಡ್ಡ ನಟನಾಗಿ ಲಕ್ಷಾಂತರ ದುಡಿಯುತ್ತೇನೆ. ಹಾಗಾಗಿ ನನಗೆ ಡಿಗ್ರಿ ಬೇಡ” ಎಂದು ಹೇಳುವ ಮಗನ ಮಾತನ್ನು ನಂಬಿ ಸುಮ್ಮನಾಗುವ ತಂದೆತಾಯಿಯರು ಇರುವುದಿಲ್ಲ, ಅಲ್ಲವೆ?

Ø  ತನಗೆ ಮುಂದೆ ಯಾವುದರಲ್ಲಿ ಭವಿಷ್ಯವಿದೆ ಎನ್ನುವುದನ್ನು ಗುರುತಿಸಿ ಅದಕ್ಕೆ ತಕ್ಕ ರೀತಿಯಲ್ಲಿ ದಾರಿ ಮಾಡಿಕೊಂಡು ನಡೆಯಬೇಕಾದವರು ನೀವೇ ಹೊರತು ನಿಮ್ಮ ಹೆತ್ತವರಲ್ಲ, ಒಪ್ಪೋಣ. ಆದರೆ, ನಿಮಗೆ ಆಸಕ್ತಿಯಿರುವ ವಿಷಯದಲ್ಲಿ ನಿಮ್ಮ ಮಿತಿಯಲ್ಲೇ ಏನೇನು ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ಯೋಚಿಸಿ ಕಾರ್ಯಪ್ರವೃತ್ತರಾಗಿದ್ದೀರಾ? ಉದಾಹರಣೆಗೆ, ಸಂಗೀತದಲ್ಲಿ ಆಸಕ್ತಿ ಇರುವ ಹುಡುಗಿ ತಾನು ಚಿಕ್ಕವಳಿರುವಾಗಲೇ ತನಗೆ ಬೇಕಾದ ಗುರುಗಳನ್ನು ಹೊಂದಿಸಿಕೊಂಡು ತನ್ನ ದಾರಿಯಲ್ಲಿ ನಡೆಯಲು ಶುರುಮಾಡಿ ಬಿಡುತ್ತಾಳೆ. ಇಪ್ಪತ್ತು ವರ್ಷವಾದ ಮೇಲೆ ರಾತ್ರೋರಾತ್ರಿ ಅಭ್ಯಾಸ ಮಾಡಿ ಹೆಸರಾಂತ ಗಾಯಕಿ ಆಗುತ್ತೇನೆ ಅಂತ ಹೇಳುವುದು ಮೂರ್ಖತನವಾಗುತ್ತದೆ.

Ø  ನಿಮ್ಮ ಆಸಕ್ತಿಗಳೇನಿವೆ ಎಂಬುದನ್ನು ಸೂಚ್ಯವಾಗಿ ನಿಮ್ಮ ಹೆತ್ತವರಿಗೆ ಆದಷ್ಟು ಬೇಗನೆ ತಿಳಿಸಿ ಬಿಡುವುದು ಬುದ್ಧಿವಂತಿಕೆ. ಉದಾಹರಣೆಗೆ, ನಿಮಗೆ ಆನಿಮೇಶನ್ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದಿಟ್ಟುಕೊಳ್ಳೋಣ. ಅದರಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಬೇಕು ಎಂದು ನೀವು ತೀರ್ಮಾನ ಮಾಡಿದ್ದೀರಿ ಅಂತಾದರೆ ಅದರ ಬಗ್ಗೆ ಮುಂಚಿತವಾಗಿಯೇ ನಿಮ್ಮ ತಂದೆತಾಯಿಯರಿಗೆ ತಿಳಿಸಿಹೇಳುವುದು ಒಳ್ಳೆಯದು. ಬೇರೆಯವರ ಒತ್ತಾಯಕ್ಕೆ ಮಣಿದು ವೈದ್ಯಕೀಯವೋ ಕಾನೂನೋ ಓದುವುದು ಆಗ ತಪ್ಪುತ್ತದೆ. ಆದರೆ, ನಿಮ್ಮ ಆಸಕ್ತಿ ಆಳವಾಗಿಲ್ಲದೆ, ಜಗತ್ತಿನ ಇತರ ಆಶೆ-ಪ್ರಲೋಭನೆಗಳಿಗೆ ಒಳಗಾಗಿ ಮುಂದೊಂದು ದಿನ ನಿಮಗೆ ನಿಮ್ಮ ಆಸಕ್ತಿಯಲ್ಲಿ ಅಸಡ್ಡೆ ಬಂದೀತು ಅನ್ನಿಸಿದರೆ, ಅದನ್ನೂ ಹೆತ್ತವರಲ್ಲಿ ಮುಕ್ತವಾಗಿ ಚರ್ಚಿಸಿ ಮಾರ್ಗದರ್ಶನ ಕೋರುವುದು ಒಳ್ಳೆಯದು.

ಅದೃಷ್ಟಹೀನರು ನೀವೊಬ್ಬರೇ ಅಲ್ಲ!

ಜಗತ್ತಿನಲ್ಲಿ ಎಲ್ಲರೂ ತಮ್ಮ ಪ್ರವೃತ್ತಿಯನ್ನೇ ವೃತ್ತಿ ಮಾಡಿಕೊಳ್ಳುವ ಅದೃಷ್ಟ ಪಡೆದು ಬಂದಿರುವುದಿಲ್ಲ ಎನ್ನುವುದನ್ನು ನೆನಪಿಡಿ. ಆದರೂ ಪ್ರವೃತ್ತಿಯ ಆಕಾಂಕ್ಷೆ, ಆಕರ್ಷಣೆ ಬಲವಾಗಿದ್ದರೆ ನೀವು ಯಾವುದೇ ಕೋರ್ಸು ಮಾಡಿದರೂ ಯಾವ ಉದ್ಯೋಗದಲ್ಲಿದ್ದರೂ, ಹೇಗೋ ಸಮಯ ಹೊಂದಿಸಿಕೊಂಡುಬಿಡುತ್ತೀರಿ. ಕನ್ನಡದಲ್ಲಿ ಒಳ್ಳೊಳ್ಳೆಯ ಕತೆಗಳನ್ನು ಬರೆದಿರುವ ವಸುಧೇಂದ್ರ, ಬಹುರಾಷ್ಟ್ರೀಯ ಕಂಪೆನಿಯೊಂದರ ಉನ್ನತ ಹುದ್ದೆಯಲ್ಲಿದ್ದಾಗಲೂ ಟ್ರಾಫಿಕ್ಕಿನ ಮಧ್ಯೆ ಸಿಕ್ಕಿ ಹಾಕ್ಕೊಂಡಾಗ ಕತೆ ಬರೆಯುತ್ತಿದ್ದ ಬಗೆಯನ್ನು ಒಂದೆಡೆ ಹೇಳಿಕೊಂಡಿದ್ದಾರೆ. “ಆಸಕ್ತಿಯಿದೆ, ಆದರೆ ದುಡಿಸಿಕೊಳ್ಳಲು ಸಮಯವಿಲ್ಲ” ಅಂತ ಅಂದುಕೊಳ್ಳುವುದು ನಿಮಗೆ ನೀವೇ ಮಾಡಿಕೊಳ್ಳುವ ವಂಚನೆಯಲ್ಲದೆ ಬೇರೇನೂ ಅಲ್ಲ.

ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಳ್ಳಲು ಆಗಲಿಲ್ಲ ಎಂಬ ಹತಾಶೆ ಬೇಡ. ಇವೆರಡೂ ಸಂಪೂರ್ಣ ಭಿನ್ನವಾಗಿದ್ದರೂ ಸರಿದೂಗಿಸಿಕೊಂಡು ಹೋಗುವ ಜಾಣತನ ಇರಬೇಕು ಅಷ್ಟೆ. ವೈದ್ಯೆಯಾಗಿ ದಿನರಾತ್ರಿ ರೋಗಿಗಳ ಉಪಚಾರ ಮಾಡುವ, ಸಮಯ ಮತ್ತು ಸಂಯಮ ಎರಡನ್ನೂ ಬೇಡುವ ಗುರುತರ ಜವಾಬ್ದಾರಿಯ ನಡುವೆಯೂ ಅನುಪಮಾ ನಿರಂಜನ ಒಳ್ಳೊಳ್ಳೆಯ ಕತೆಗಳನ್ನು ಬರೆಯುತ್ತಿದ್ದರು. ಪಾಠ ಪ್ರವಚನ ಸಂಶೋಧನೆಗಳಂತಹ ತಲೆತಿನ್ನುವ ಕೆಲಸಗಳ ನಡುವೆಯೂ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಗುಲಾಬಿ ಹೂಗಳಿಂದ ಸೆಂಟ್ ತಯಾರಿಸುತ್ತಿದ್ದರು. ತೊಂಭತ್ತೆಂಟು ಕಂಪೆನಿಗಳನ್ನು ಆದಿಶೇಷನಂತೆ ತಲೆ ಮೇಲೆ ಹೊತ್ತು ನಿದ್ದೆಗೂ ಪುರುಸೊತ್ತಿಲ್ಲದಂತೆ ದುಡಿಯುತ್ತಿದ್ದ ರತನ್ ಟಾಟಾ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರು. ಸದಾ ಜನರಿಂದ ಸುತ್ತುವರೆದ ಬ್ಯುಸಿ ರಾಜಕಾರಣಿಯಾಗಿದ್ದ ಎಮ್.ವೈ.ಘೋರ್ಪಡೆ ಕಾಡು ಪ್ರಾಣಿಗಳ ಅದ್ಭುತ ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದರು. ರಾಕೆಟ್ ತಂತ್ರಜ್ಞಾನದಲ್ಲಿ ಜಗತ್ತಿಗೇ ಪಾಠ ಮಾಡಬಲ್ಲ ವಿಜ್ಞಾನಿಯಾಗಿದ್ದ ಅಬ್ದುಲ್ ಕಲಾಂ ಬಿಡುವಾದಾಗೆಲ್ಲ ಸೊಗಸಾಗಿ ವೀಣೆ ನುಡಿಸುತ್ತಿದ್ದರು! ಇವರಿಗೆಲ್ಲ ಇದು ಹೇಗೆ ಸಾಧ್ಯವಾಯಿತು ಎಂದರೆ, ವೃತ್ತಿಯ ಒತ್ತಡದ ನಡುವೆಯೂ ಪ್ರವೃತ್ತಿಯ ಬಳ್ಳಿ ಬಾಡಿ ಹೋಗದಂತೆ ಎಚ್ಚರದಿಂದ ಕಾಯುವ ತಾಳ್ಮೆ ಮತ್ತು ಪ್ರೀತಿ ಇವರಲ್ಲಿತ್ತು.

ಎಂದಿಗೂ ನಿಮ್ಮ ವೃತ್ತಿಯನ್ನು ನೆಗೆಟಿವ್ ದೃಷ್ಟಿಯಿಂದ ಕಾಣಬೇಡಿ. ವೃತ್ತಿಯನ್ನು ಪ್ರೀತಿಸಲು ಕಲಿತಾಗಲೇ ನಿಮಗೆ ಪ್ರವೃತ್ತಿಯಲ್ಲೂ ಸಾಧನೆ ಮಾಡುವ ಆತ್ಮವಿಶ್ವಾಸ ಮತ್ತು ಒಲವು ಹುಟ್ಟುತ್ತದೆ. ಸದಾ ತನ್ನ ಕೆಲಸದ ಬಗ್ಗೆ ದೂರು ದುಮ್ಮಾನಗಳನ್ನೇ ತೋಡಿಕೊಳ್ಳುತ್ತಿರುವ ವ್ಯಕ್ತಿಗೆ ಪ್ರವೃತ್ತಿಯ ಬಗ್ಗೆ ಅಂಥಾದ್ದೇನೂ ಅತಿಶಯವಾದ ಆಸಕ್ತಿ ಇರುವುದಕ್ಕೆ ಸಾಧ್ಯವಿಲ್ಲ.

ಬಹಳ ಜನ ತಮ್ಮ ಜೀವನದಲ್ಲಿ ವೃತ್ತಿ ಮತ್ತು ಪ್ರವೃತ್ತಿ ಬೇರೆ ಬೇರೆಯಾಗಿದ್ದಾಗೆಲ್ಲ ಒಂದು ಇನ್ನೊಂದಕ್ಕೆ ತೊಡಕಾಗಿದೆ ಎಂದು ಭಾವಿಸುತ್ತಾರೆ. ಇಂತಹ ಮನೋಧರ್ಮ ಒಳ್ಳೆಯದಕ್ಕಿಂತ ಕೆಡುಕು ಮಾಡುವುದೇ ಹೆಚ್ಚು. ಪ್ರವೃತ್ತಿಯನ್ನು, ಹಾಬಿಯನ್ನು ಸರಿಯಾಗಿ ಮುಂದುವರೆಸಿಕೊಂಡು ಹೋಗಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆಯುವವರು ಕೆಲವರು. ಇದರಿಂದ ಹವ್ಯಾಸಕ್ಕೇನೋ ಸಮಯ ಸಿಗುತ್ತದೆ, ಆದರೆ, ತನ್ನ ಜೀವನದ ಎಲ್ಲ ಭಾರವನ್ನೂ ಹವ್ಯಾಸದ ಬಲದಿಂದಲೇ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹವ್ಯಾಸಗಳಿಗಾಗಿ ವೃತ್ತಿಗೆ ಗುಡ್‍ಬೈ ಹೇಳಿದ ಮೇಲೆ ಕಾಲಕಾಲಕ್ಕೆ ಸಿಗುತ್ತಿದ್ದ ವರಮಾನ ನಿಂತು ಹೋದಾಗ ವ್ಯಕ್ತಿ ಹತಾಶನಾಗುವ ಸಂಭವವಿರುತ್ತದೆ. ಸಾವಿರಾರು ರೂಪಾಯಿಗಳ ಜೇಬು ತುಂಬಿಸುವ ಲಾಭದಾಯಕ ಹುದ್ದೆಗಳನ್ನು ಬಿಟ್ಟು ಹವ್ಯಾಸಗಳ ಬೆನ್ನು ಹತ್ತುವವರಲ್ಲಿ ಈ ಬಗೆಯ ಖಿನ್ನತೆ ಕಾಡಿದರೂ ಕಾಡೀತೇ.

ಹಾಗೆಂದು, ಪ್ರವೃತ್ತಿಯನ್ನು ಬಿಟ್ಟು ದುಡ್ಡಿನ ಗುಲಾಮನಾಗಿ ವೃತ್ತಿಯನ್ನೇ ಹಿಡಿದು ಮುಂದುವರೆಯಬೇಕು ಎನ್ನುವ ವಾದ ನನ್ನದಲ್ಲ. ಆದರೆ, ವಿನಾಕಾರಣ ವೃತ್ತಿಯನ್ನು ದ್ವೇಷಿಸಿ ಅದರಿಂದ ಹೊರ ಬಂದು ಕೇವಲ ಪ್ರವೃತ್ತಿಯನ್ನು ಅಪ್ಪಿಕೊಳ್ಳುವ ಮುನ್ನ ಯೋಚಿಸಿ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಮಾತ್ರ ಹೇಳುತ್ತಿದ್ದೇನೆ.

ವೃತ್ತಿ ಮುಖ್ಯವೋ ಪ್ರವೃತ್ತಿಯೋ ಎನ್ನುವುದನ್ನು ಚರ್ಚಿಸಿ ಅಂತಿಮ ನಿರ್ಣಯ ಕೊಡುವುದು ಈ ಬರಹದ ಉದ್ದೇಶವಲ್ಲ. ಇಲ್ಲಿ, ನಾನು ಗಮನಿಸಿದ ಐದು ಬೇರೆ ಬೇರೆ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಸುಮ್ಮನೆ ಓದಿಕೊಂಡು ಹೋಗಿ, ನಿಮ್ಮ ವೃತ್ತಿ-ಪ್ರವೃತ್ತಿಯ ಗೊಂದಲಗಳು ಈ ಐದರಲ್ಲಿ ಯಾವುದನ್ನು ಹೆಚ್ಚು ಹೋಲುತ್ತವೆ ಎನ್ನುವುದನ್ನು ನೀವೇ ಸಮೀಕರಿಸಿಕೊಳ್ಳಿ.

  1. ಎಳಸು ನಡೆಯಿಂದ ಪ್ರಬುದ್ಧತೆಯೆಡೆಗೆ

ಈ ಪ್ರವೃತ್ತಿ ನನಗೆ ಜೀವನದ ಪರಮ ಮುಖ್ಯ ಸಂಗತಿಯೆ? ಇದು ನನ್ನ ಜೀವನದ ಗತಿಯನ್ನೇ ಬದಲಿಸಬಲ್ಲಷ್ಟು ಬಲವುಳ್ಳದ್ದೆ? ಈ ಹವ್ಯಾಸವಿಲ್ಲದೆ ಹೋದರೆ, ಅದನ್ನು ಬೆಳೆಸಿಕೊಳ್ಳದೆ ಹೋದರೆ ನನ್ನ ಬದುಕು ನಿರರ್ಥಕವಾಗಬಹುದೆ? ಈ ಪ್ರವೃತ್ತಿ ನನ್ನ ಜೀವನಕ್ಕೆ ಹೊಸ ಅರ್ಥ ಕೊಡಬಲ್ಲುದೆ? – ಈ ಪ್ರಶ್ನೆಗಳನ್ನು ವ್ಯಕ್ತಿ ಗಂಭೀರವಾಗಿ ಯೋಚಿಸಬೇಕಾಗುತ್ತದೆ.

ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಪತ್ರಿಕೆಗಳಲ್ಲಿ ಎರಡು ಕಾಲಮ್ಮಿನ ಬಾಲಿಶ ಬರಹಗಳನ್ನು ಬರೆಯ ಹೋಗುತ್ತಿರುವವನು ಅದೇ ತನ್ನ ಪ್ರವೃತ್ತಿ, ತನ್ನ ಜೀವನದ ಏಕಮೇವ ಗುರಿ ಎಂದು ಭಾವಿಸಿಕೊಂಡು ಬ್ಯಾಂಕ್ ಹುದ್ದೆ ತೊರೆದರೆ ಅದು ದುರಂತ. ಮುಂದೆ ಎಂದೋ ಒಂದು ದಿನ, ಹಾಗೆ ಅಪ್ರಬುದ್ಧವಾಗಿ ಬರೆಯುತ್ತಿದ್ದವನೇ ಓದಿ ಬರೆದು ಒಳ್ಳೆಯ ಲೇಖಕನಾಗಿ ಹೆಸರು ಮಾಡಬಾರದು ಎಂದೇನಿಲ್ಲ. ಆದರೆ, ತನ್ನ ಎಳಸು ನಡೆಯನ್ನೇ ದೊಡ್ಡ ಸಾಧನೆಯೆಂದು ಆರಂಭದಲ್ಲಿ ಗ್ರಹಿಸುವ ತಪ್ಪನ್ನು ಮಾಡದಷ್ಟು ವಿವೇಕ ಆತನಲ್ಲಿರಬೇಕಾಗುತ್ತದೆ.

  1. ಪ್ರವೃತ್ತಿಗೆ ತೊಡಕಾದ ವೃತ್ತಿ

ಹೆಸರಾಂತ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ ಕಿರಣ್, ಒಂದು ದಿನ ತನ್ನ ಕೆಲಸಕ್ಕೆ ತಿಲಾಂಜಲಿ ಇಟ್ಟು ತನ್ನ ಹುಟ್ಟೂರಿಗೆ ಹೋಗಿ ಗ್ರಂಥಾಲಯವೊಂದನ್ನು ತೆರೆದ. ಅಮೆರಿಕೆಯಲ್ಲಿ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್, ಅದಕ್ಕೆ ರಾಜೀನಾಮೆ ಇತ್ತು ಭಾರತಕ್ಕೆ ಬಂದಿಳಿದು ಅದೃಷ್ಟ ಪರೀಕ್ಷೆಗಾಗಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟ. ರಾಜಕೀಯ ಒಲವುಗಳಿದ್ದ ಸುಹಾಸಿನಿ ಒಂದಷ್ಟು ದಿನ ಪತ್ರಕರ್ತೆಯಾಗಿ ಕೆಲಸ ಮಾಡಿ ಅದನ್ನು ಬಿಟ್ಟು ಧೈರ್ಯ ಮಾಡಿ ರಾಜಕಾರಣಕ್ಕೆ ಧುಮುಕಿಯೇ ಬಿಟ್ಟಳು. ಬಿಡಿಎಸ್ ಮಾಡಿ ದಂತ ವೈದ್ಯೆಯಾಗಿ ಹೆಸರು ಮಾಡತೊಡಗಿದ್ದ ಅಶ್ವಿನಿ ಒಂದು ದಿನ ದಿಟ್ಟ ನಿರ್ಧಾರಕ್ಕೆ ಬಂದು, ವೈದ್ಯ ವೃತ್ತಿ ತೊರೆದು ಮಧುಬನಿ ಚಿತ್ರಗಳನ್ನು ಬರೆಯುವ ಗ್ರಾಮೀಣ ಜನರ ಕಲೆಯನ್ನು ಜಗತ್ತಿಗೆ ಪರಿಚಯಿಸುವ ಎನ್‍ಜಿಒ ಒಂದರಲ್ಲಿ ತನ್ನನ್ನು ತೊಡಗಿಸಿಕೊಂಡಳು.

ಹೆಸರುಗಳನ್ನು ಬದಲಿಸಿದ್ದರೂ ಇವೆಲ್ಲವೂ ಸತ್ಯಕತೆಗಳು. ಯಾವುದೋ ಒಂದು ವೃತ್ತಿಯಲ್ಲಿ ಮುಂದುವರೆಯುತ್ತ ಅದರಿಂದ ಪ್ರವೃತ್ತಿಗೆ ಒಳಿತಿಗಿಂತ ತೊಡಕೇ ಹೆಚ್ಚಾಗುತ್ತಿದೆ ಎನ್ನಿಸಿದಾಗ ದಿಟ್ಟರು ತೆಗೆದುಕೊಂಡ ನಿರ್ಧಾರಗಳು ಇವು.

ಈ ಮೇಲಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಮಗೆ ಅವರು ವೃತ್ತಿ-ಪ್ರವೃತ್ತಿಗಳನ್ನು ಸರಿದೂಗಿಸಿಕೊಂಡು ಹೋಗಲು, ಎರಡು ದೋಣಿಗಳಲ್ಲಿ ಏಕಕಾಲಕ್ಕೆ ಕಾಲಿಟ್ಟು ಸಾಗಲು ಸಾಧ್ಯವಿರಲಿಲ್ಲ ಎನ್ನುವುದು ವೇದ್ಯವಾಗುತ್ತದೆ. ಹಾಗಾಗಿ, ಅವರ ನಿರ್ಧಾರಗಳನ್ನು ಹಣದ ಮಾನದಂಡದಿಂದ ಅಳೆಯದೆ ಗೌರವಿಸಬೇಕಾಗುತ್ತದೆ.

ಜೀವನದಲ್ಲಿ ಇಂಥ ನಿಶ್ಚಿತವಾದ ನಿರ್ಧಾರಗಳನ್ನು ತೆಗೆದುಕೊಂಡಾಗ ನಿಮ್ಮ ಗುರಿ, ಧ್ಯೇಯಗಳು ಯಾವ ಬಿರುಗಾಳಿಗೂ ಅಲುಗದ ಗರುಡಗಂಬದಂತೆ ಅಚಲವಾಗಿದೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ.

 

  1. ಮೊಳಕೆಯಲ್ಲೆ ಅರಳಿದ ತಿಳಿವು

ತಮ್ಮ ಪ್ರವೃತ್ತಿಯನ್ನು ಬಹಳ ಚಿಕ್ಕಂದಿನಲ್ಲೇ ಗುರುತಿಸಿಕೊಂಡು, ವೃತ್ತಿ-ಪ್ರವೃತ್ತಿ ಎರಡನ್ನೂ ಒಂದೇ ಆಗಿ ಮಾಡಿಕೊಂಡವರು ತೆಗೆದುಕೊಂಡ ರಿಸ್ಕ್ ಕೂಡ ಕಮ್ಮಿಯದಲ್ಲ. ಚಲನಚಿತ್ರವೇ ತನ್ನ ಕ್ಷೇತ್ರ ಎಂದು ಗಟ್ಟಿಮನಸು ಮಾಡಿಕೊಂಡು ಇಂಜಿನಿಯರಿಂಗಿಗೆ ಟಾಟಾ ಹೇಳಿದ ಕನ್ನಡಚಿತ್ರ ನಿರ್ದೇಶಕ ಪವನ್ ಕುಮಾರ್, ನಾಟಕವನ್ನೇ ಜೀವನದ ಕೊನೆಯವರೆಗೆ ಉಸಿರಾಗಿಸಿಕೊಂಡ ಮತ್ತು ಅದಕ್ಕಾಗಿ ಏಳು ವರ್ಷದ ಎಳವೆಯಲ್ಲೇ ಮನೆ ಬಿಟ್ಟು ಓಡಿಹೋಗಿ ನಾಟಕ ಕಂಪೆನಿ ಸೇರಿದ ಬಿ.ವಿ.ಕಾರಂತರು, ಅವಧಾನ ಕಲೆಯೇ ತನ್ನ ಬದುಕು ಎಂಬುದನ್ನು ಮನಗಂಡು ತಂತ್ರಜ್ಞಾನ ಕ್ಷೇತ್ರದಿಂದ ಈ ಚೆಬಂದ ಆರ್.ಗಣೇಶ್, ಸಂಗೀತ ಮತ್ತು ಗಿಟಾರಿನ ಮೇಲಿನ ಪ್ರೀತಿಗಾಗಿ ಚಿನ್ನದ ಪದಕ ಗಳಿಸಿಕೊಟ್ಟ ಮೈಕ್ರೋಬಯಾಲಜಿಯನ್ನೇ ಮರೆತು ಬಿಟ್ಟ ರಘು ದೀಕ್ಷಿತ್ – ಇವರೆಲ್ಲ ಈ ಬಗೆಯವರು.

ಯಾರಿಗೂ ಪ್ರವ್ರತ್ತಿ ಅಥವಾ ಹವ್ಯಾಸ ಎನ್ನುವುದು ಹುಟ್ಟುತ್ತಲೇ ಬಂದು ಬಿಡುವ ಗೀಳಲ್ಲ. ಅದು ವ್ಯಕ್ತಿ ಬೆಳೆಯುತ್ತ ಬೆಳೆಯುತ್ತ ಸುತ್ತಲಿನ ಜಗತ್ತನ್ನು ನೋಡುತ್ತ ಕಲಿಯುತ್ತ ಸಂಸ್ಕಾರಗೊಳ್ಳುತ್ತ ಬರುವಾಗ ಅಂಟಿಕೊಳ್ಳುವ ಬಿಡಿಸಲಾರದ ಅನುಬಂಧ. ಒಂದು ಪ್ರವೃತ್ತಿ ಅಥವಾ ಹವ್ಯಾಸ ತನ್ನಲ್ಲಿ ಹಾಗೆ ರೂಪುಗೊಳ್ಳುತ್ತಿರುವುದನ್ನು ಒಬ್ಬ ಹದಿಹರೆಯದ ಹುಡುಗ ಸೂಕ್ಷ್ಮವಾಗಿದ್ದರೆ ತಾನೇ ಗಮನಿಸಿಯಾನು. ಹಾಗೆ ತನ್ನನ್ನು ತಾನು ಗಮನಿಸುತ್ತ ಶೋಧಿಸುತ್ತ ಹೋದ ಹಾಗೆ ಮನುಷ್ಯನಿಗೆ ತನ್ನ ಮುಂದಿನ ಬದುಕಿನ ಗತಿ, ರೇಖೆಗಳು ಕೂಡ ಸ್ಪಷ್ಟವಾಗುತ್ತಾ ಹೋಗುತ್ತವೆ. ತನಗೆ ಮುಂದೆ ತಾನು ಬಯಸುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವೇ? ಅಷ್ಟು ಶಕ್ತಿ ತನ್ನಲ್ಲಿ ಇದೆಯೆ? ಇಲ್ಲವಾದರೆ ಅದನ್ನು ಗಳಿಸಿಕೊಂಡು ಬೆಳೆಸಿಕೊಂಡು ಹೋಗುವಷ್ಟು ಆಸೆ ತನ್ನಲ್ಲಿ ಅದಮ್ಯವಾಗಿದೆಯೇ – ಎನ್ನುವುದನ್ನೆಲ್ಲ ಆತನ ಮನಸು ಲೆಕ್ಕಾಚಾರ ಹಾಕಲು ಪ್ರಾರಂಭಿಸಿಬಿಡುತ್ತದೆ. ಹಾಗೆ ಯೋಚಿಸುತ್ತ ಹೋದ ಹಾಗೆ ಆತನಿಗೆ ತನ್ನ ಮೇಲಿನ ವಿಶ್ವಾಸ (ಅಂಧವಿಶ್ವಾಸ ಅಲ್ಲ!) ಹೆಚ್ಚಾಗುತ್ತಾ ಹೋದರೆ ಅವನು ಅದೃಷ್ಟವಂತ. ತನ್ನ ಬಾಳಿನಲ್ಲಿ ಹವ್ಯಾಸವನ್ನೇ ವೃತ್ತಿಯಾಗಿ ಸ್ವೀಕರಿಸಿ ಬದುಕಿ ತೋರಿಸಲು ಬೇಕಾದಷ್ಟು ದ್ರವ್ಯ ಅವನಲ್ಲಿ ಇದೆ ಎಂದೇ ಅರ್ಥ.

ಪ್ರವೃತ್ತಿ – ಯಾವತ್ತೂ ಕಲೆಗೇ ಸಂಬಂಧಪಟ್ಟಿರಬೇಕಾಗೂ ಇಲ್ಲ. ಜೀವನವಿಡೀ ಗಣಿತವನ್ನೇ ಧೇನಿಸುತ್ತಾ ಹೋದ ಆಂಡ್ರ್ಯೂ ವೈಲ್ಸ್ ಎಂಬ ಸಮಕಾಲೀನ ಮಹಾಗಣಿತಜ್ಞನಿಗೆ ಹಾಗೆ ಆಗಲು ಪ್ರೇರಣೆ ಸಿಕ್ಕಿದ್ದು ತಾನು ಹತ್ತು ವರ್ಷದ ಹುಡುಗನಿದ್ದಾಗ ಓದಿದ ಒಂದು ಗಣಿತದ ಕತೆ ಪುಸ್ತಕದಿಂದ! ನಿಮಗೂ ಅಂತಹ, ಬದುಕಿನ ಹರಿವಿನ ದಿಕ್ಕನ್ನೇ ಬದಲಿಸಿ ಬಿಡುವಂತಹ, ಒಂದು ಪ್ರವೃತ್ತಿಯನ್ನು ನಿಮ್ಮೊಳಗೆ ಹುಟ್ಟಿಸಿ ನೀರು ಹಾಕಿ ಬೆಳೆಸಿ ಹೆಮ್ಮರ ಮಾಡುವಂತಹ ಪ್ರೇರಣೆ ಅಚಾನಕ್ ಆಗಿ ಸಂಭವಿಸಿದೆಯೆ? ನೀವೇ ಹೇಳಬೇಕು!

  1. ನೀರಿಗೆ ಬಿದ್ದಲ್ಲೆ ಸ್ನಾನ ಮುಗಿಸುವವರು

ಪ್ರವೃತ್ತಿಯನ್ನು ವೃತ್ತಿಯ ಶತ್ರುವೆಂದಾಗಲೀ, ವೃತ್ತಿ – ಪ್ರವೃತ್ತಿಗೆ ತೊಡರುಗಾಲೆಂದಾಗಲೀ ಭಾವಿಸದೆ, ಒಂದರಿಂದ ಇನ್ನೊಂದನ್ನು ಬೆಳೆಸಿಕೊಂಡ ತುಂಬ ಜನರಿದ್ದಾರೆ. ಅವರಿಗೆ ವೃತ್ತಿಯೇ ತಮ್ಮ ಪ್ರವೃತ್ತಿಗೆ ಸಹಾಯಕವಾಗಿ ನಿಂತಿದೆ, ಅವೆರಡೂ ತೀರಾ ವಿಭಿನ್ನ ಕ್ಷೇತ್ರಗಳಾದರೂ!

ಆದಿತ್ಯನಿಗೆ ಸೈಕ್ಲಿಂಗ್ ಹೋಗುವ ಹವ್ಯಾಸ. ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ನಡೆಯುವ ಯಾವುದೇ ಸೈಕ್ಲಿಂಗ್ ಕಾರ್ಯಕ್ರಮದಲ್ಲೂ ಹಾಜರಿ ಹಾಕುತ್ತಾನೆ. ಅದಕ್ಕೆಂದೇ ನಲವತ್ತು ಸಾವಿರದ ಅತ್ಯಾಧುನಿಕ ಸೈಕಲ್ ಕೂಡ ಖರೀದಿಸಿದ್ದಾನೆ. ಅದನ್ನು ಮೆಂಟೇನ್ ಮಾಡಲೆಂದೇ ತಿಂಗಳಿಗೆ ಹಲವು ನೂರುಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕೆಲ್ಲ ದುಡ್ಡು ಹೊಂದಿಸಲು ಅವನ ವೃತ್ತಿ ಅವನಿಗೆ ನೆರವಾಗಿದೆ.

ಸುರೇಖಳಿಗೆ ಹೊಸ ಊರುಗಳಿಗೆ ಹೋಗುವುದೆಂದರೆ ಎಲ್ಲಿಲ್ಲದ ಹುರುಪು. ಹೊಸ ಜನ, ಪ್ರದೇಶ, ಸಂಸ್ಕøತಿ – ಇತ್ಯಾದಿಗಳನ್ನೆಲ್ಲ ನೋಡಿ ತಿಳಿದುಕೊಳ್ಳುವುದೆಂದರೆ ಅಮಿತ ಉತ್ಸಾಹ. ಅದಕ್ಕೆ ತಕ್ಕಂತೆಯೇ ಅವಳು ಆರಿಸಿಕೊಂಡ ಉದ್ಯೋಗದಲ್ಲೂ ಆಕೆಗೆ ಹತ್ತಾರು ಊರು ಸುತ್ತಬೇಕಾದ ಅನಿವಾರ್ಯತೆ. ರೋಗಿ ಬಯಸಿದ್ದೂ ಹಾಲು, ವೈದ್ಯ ಕೊಟ್ಟಿದ್ದೂ ಹಾಲು ಅನ್ನುವ ಹಾಗೆ ವೃತ್ತಿ-ಪ್ರವೃತ್ತಿಗಳೆರಡೂ ಮ್ಯಾಚ್ ಆಗುವುದರಿಂದ, ಆಫೀಸಿನ ಖರ್ಚಲ್ಲೇ ಮುಫತ್ತಾಗಿ ಊರೂರು ಸುತ್ತುವ ಆಕೆಯ ಬಯಕೆಯನ್ನು ಈಡೇರಿಸಿಕೊಳ್ಳುತ್ತಾಳೆ ಜಾಣ ಹುಡುಗಿ!

ತನ್ನದೇ ಕಾಲ ಮೇಲೆ ನಿಲ್ಲಬೇಕು, ತನ್ನದೇ ಬ್ಯುಸಿನೆಸ್ ನಡೆಸಬೇಕು, ತನ್ನ ಕಂಪೆನಿಗೆ ತಾನೇ ಬಾಸ್ ಆಗಿರಬೇಕೆಂದು ಬಯಸಿ ಅದಕ್ಕಾಗಿ ದುಡಿಯುವುದು ಕೂಡ ಒಂದು ಹವ್ಯಾಸ ತಾನೇ! ಪದ್ಮನಾಭ ಕೆಲಸ ಮಾಡುವುದು ಒಂದು ಟ್ಯುಟೋರಿಯಲ್‍ನಲ್ಲಿ. ಕ್ಲಾಸಿದ್ದಾಗ ಹಾಜರಿ ಹಾಕಿದರೆ ಸಾಕು, ಉಳಿದ ಸಮಯವನ್ನು ಆಫೀಸಿನಲ್ಲಿ ಕೂತು ವ್ಯರ್ಥ ಮಾಡಬೇಕಿಲ್ಲ ಎಂದು ಟ್ಯುಟೋರಿಯಲ್‍ನ ಡೈರೆಕ್ಟರು ಹೇಳಿಬಿಟ್ಟಿದ್ದಾರೆ. ಅಲ್ಲದೆ, ಪದ್ಮನಾಭ ಕೂಡ ಕೆಲಸಕ್ಕೆ ಸೇರುವಾಗಲೇ, ತಾನು ತನ್ನದೇ ಆದ ಬ್ಯುಸಿನೆಸ್ಸನ್ನು ನಡೆಸುತ್ತಿರುವುದಾಗಿಯೂ ಅದು ಈಗ ತಾನು ಸೇರುತ್ತಿರುವ ಕೆಲಸಕ್ಕೆ ಯಾವ ರೀತಿಯಲ್ಲೂ Conflict of interest ಅಲ್ಲವೆಂದೂ ಡೈರೆಕ್ಟರಿಗೆ ಮನವರಿಕೆ ಮಾಡಿಕೊಟ್ಟಿದ್ದ. ಹಾಗಾಗಿ, ಫ್ರೀ ಸಮಯದಲ್ಲೆಲ್ಲ ಆತ “ಈವೆಂಟ್ ಮ್ಯಾನೇಜ್‍ಮೆಂಟ್” ಮಾಡುತ್ತಾನೆ. ನಗರದಲ್ಲಿ ನಡೆಯುವ ದೊಡ್ಡ ದೊಡ್ಡ ಕಾರ್ಯಕ್ರಮಗಳ ಯಶಸ್ಸಿನಲ್ಲಿ ದೊಡ್ಡ ಪಾಲು ಅವನದ್ದೇ.

ಪ್ರವೃತ್ತಿಗೆ ಬೇಕಾದ ಹಣಕಾಸಿನ ಬೆಂಬಲಕ್ಕಾಗಿ ವೃತ್ತಿಯನ್ನು ಅವಲಂಬಿಸುವ ಆದಿತ್ಯ, ವೃತ್ತಿಯಲ್ಲೇ ತನ್ನ ಪ್ರವೃತ್ತಿಯನ್ನು ಸಾಕಾರಗೊಳಿಸಿಕೊಳ್ಳುವ ಸುರೇಖ, ವೃತ್ತಿಯ ಜೊತೆ ಜೊತೆಗೆ ಪ್ರವೃತ್ತಿಯನ್ನೂ ಮುಂದೊಯ್ದು ತನ್ನ ಕನಸನ್ನು ನನಸಾಗಿಸಿಕೊಳ್ಳಲು ಜಾಣಹೆಜ್ಜೆ ಇಡುತ್ತಿರುವ ಪದ್ಮನಾಭ – ಇವರೆಲ್ಲ ಒಂದಿಲ್ಲೊಂದು ರೀತಿಯಲ್ಲಿ ವೃತ್ತಿ-ಪ್ರವೃತ್ತಿಗಳ ನಡುವೆ ಬ್ಯಾಲೆನ್ಸ್ ಮಾಡುವ ಬುದ್ಧಿವಂತಿಕೆ ಕಲಿತುಬಿಟ್ಟಿದ್ದಾರೆ ಎನ್ನಬಹುದು. ನೀವು ಕೂಡ ಈ ರೀತಿಯ ಹೆಜ್ಜೆ ಇಡಬಲ್ಲಿರಾ? ಯೋಚಿಸಿ!

  1. ಸ್ಯಾಂಡ್‍ವಿಚ್ಚನ್ನು ಇಡಿಯಾಗಿ ನುಂಗುವವರು

ವೃತ್ತಿ ಮತ್ತು ಪ್ರವೃತ್ತಿಗಳನ್ನು ಬೇರೆ ಬೇರೆಯಾಗಿಟ್ಟುಕೊಂಡೂ ಅವೆರಡರಲ್ಲಿಯೂ ಪ್ರಾವೀಣ್ಯ ಸಾಧಿಸುವವರದ್ದು ಒಂದು ಗುಂಪು! ಹಾಗೆಂದಾಗ ನನಗೆ ಪಕ್ಕನೆ ನೆನಪಿಗೆ ಬರುವುದು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಸಾಹಿತ್ಯದ ಪಾಠ ಮಾಡುತ್ತ, ಕನ್ನಡದಲ್ಲಿ ಸಾಹಿತ್ಯ ರಚಿಸಿದ ಅನೇಕರು. ಹಾಗೆ ಬರೆದ ಅನೇಕ ಕನ್ನಡ ಲೇಖಕರು ತಮ್ಮ ಇಂಗ್ಲೀಷ್ ಪಾಂಡಿತ್ಯದಿಂದಾಗಿಯೇ ತಮ್ಮ ಕನ್ನಡದ ಬರವಣಿಗೆಗೆ ಒಂದು ವಿಶಿಷ್ಟತೆ ಮತ್ತು ಅನನ್ಯ ಜೀವಂತಿಕೆ ಒದಗಿಸಿಕೊಂಡರು ಎನ್ನುವುದನ್ನು ನೋಡಬಹುದು.

ಎನ್.ನರಸಿಂಹಯ್ಯ ಬಸ್ ಕಂಡೆಕ್ಟರಾಗಿದ್ದಾಗ ಆಗಾಗ ದಂಡ ಕಟ್ಟಲು ಕೋರ್ಟಿಗೆ ಹೋಗ ಬೇಕಾಗಿತ್ತಂತೆ. ಹಾಗೆ ಹೋದಾಗೆಲ್ಲ, ಅಲ್ಲಿ ನಡೆಯುತ್ತಿದ್ದ ಕೇಸುಗಳ ಹಿಯರಿಂಗನ್ನು ನೋಡಿ, ತಮ್ಮ ಪತ್ತೇದಾರಿ ಕಾದಂಬರಿಗಳಲ್ಲಿ ರಸವತ್ತಾದ ಸನ್ನಿವೇಶಗಳನ್ನು ಬರೆಯತೊಡಗಿದರು ಅವರು! ತನ್ನ ವೃತ್ತಿಯೇ ತನ್ನ ಪ್ರವೃತ್ತಿಗೆ ಬೇಕಾದ ಬಂಡವಾಳ ತಂದುಕೊಡುತ್ತದೆ ಎನ್ನುವುದು ಅವರಿಗೆ ಕಾದಂಬರಿ ಬರೆಯಲು ತೊಡಗುವ ಮೊದಲು ಗೊತ್ತಿತ್ತೋ ಇಲ್ಲವೋ!

ರಾಜ್‍ಕುಮಾರ್ ಹಿರಾನಿ ಎಂಬ ನಿರ್ದೇಶಕ “ಮುನ್ನಾಭಾಯ್ ಎಮ್‍ಬಿಬಿಎಸ್” ಎನ್ನುವ ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಿದ್ದು ನಿಮಗೆ ಗೊತ್ತಿರಬಹುದು. ಅಲ್ಲಿ ಬರುವ ಸಹಜ ಹಾಸ್ಯಕ್ಕೆ ಸ್ವತಃ ಡಾಕ್ಟರ್ ಆಗಿರುವ ಹಿರಾನಿಯ ವೈದ್ಯಕೀಯ ಬದುಕು ಎಷ್ಟು ಕೊಡುಗೆ ಕೊಟ್ಟಿದೆ ಎಂದು ಅಳೆಯಲು ಸಾಧ್ಯವಿಲ್ಲ!

ಅಟಲ್ ಬಿಹಾರಿ ವಾಜಪೇಯಿ ಮಾತಾಡಲು ನಿಂತರೆ ಸ್ವತಃ ನೆಹರೂ ಕೂಡ ನಿಸ್ತೇಜರಾಗಿ ಹೋಗುತ್ತಿದ್ದ ಕತೆಗಳನ್ನು ನಾವು ಓದಿದ್ದೇವೆ. ಅಟಲ್‍ಜೀಯನ್ನು ಅವರ ಪಾಂಡಿತ್ಯದ ಸೊಬಗಿಗೆ ಮೆಚ್ಚುತ್ತಿದ್ದ, ಅವರ ಕವಿ ಹೃದಯದ ಆರ್ದೃ ಮಾತುಗಳಿಗೆ ಕರಗುತ್ತಿದ್ದ, ಅವರ ಮಾತುಗಳ ತೂಕವನ್ನೂ ತಂಪನ್ನೂ ಸವಿಯುತ್ತಿದ್ದ ದೊಡ್ಡ ಅಭಿಮಾನಿ ಬಳಗವೇ ಅವರಿಗಿತ್ತು, ಅವರ ವಿರೋಧ ಪಕ್ಷಗಳಲ್ಲೂ ಕೂಡ! ಇಂದಿಗೂ ನಮಗೆ ಅಟಲ್‍ಜೀ ವಿಭಿನ್ನ, ವಿಶಿಷ್ಟ ವ್ಯಕ್ತಿಯಾಗಿ ಕಾಣಲು ಅವರು ಕವಿ ಹೃದಯಿಯಾಗಿದ್ದರು ಎನ್ನುವುದು ಕೂಡ ಕಾರಣ, ಅಲ್ಲವೆ?

ಈ ಎಲ್ಲ ಉದಾಹರಣೆಗಳಲ್ಲಿ ನಮಗೆ ಎದ್ದು ಕಾಣುವ ಒಂದು ವೈಶಿಷ್ಟ್ಯವೆಂದರೆ, ಕೆಲವು ವ್ಯಕ್ತಿಗಳು ತಮ್ಮ ಬದುಕನ್ನು ವೃತ್ತಿ-ಪ್ರವೃತ್ತಿ ಎಂದು ಕತ್ತರಿಸಿಕೊಳ್ಳದೆ, ಅದಕ್ಕೆ ಇದನ್ನು ಬೆರೆಸಿ, ಇದರಲ್ಲಿ ಅದನ್ನು ಸುರಿಸಿ, ಜೀವನವನ್ನು ಇಡಿಯಾಗಿ ಆಸ್ವಾದಿಸುತ್ತ ಹೋಗುತ್ತಾರೆ. ಹಾಗೆ ಮಾಡುವಾಗ, ಅವರ ಪ್ರವೃತ್ತಿಗೆ ಅವರ ವೃತ್ತಿಯಿಂದಾಗಿಯೇ ಒಂದು ಅನನ್ಯ ಎನ್ನಬಹುದಾದ ರುಚಿ, ಸೂಕ್ಷ್ಮತೆ, ಸೌಂದರ್ಯ ಒದಗಿ ಬರುತ್ತದೆ. ವೃತ್ತಿ-ಪ್ರವೃತ್ತಿಯ ನಡುವಿನ ಗೊಂದಲ ನಿಜವಾಗಿಯೂ ನಾವು ಅಂದುಕೊಂಡಷ್ಟು ಗಂಭೀರವಾದದ್ದಲ್ಲ, ಅವೆರಡನ್ನೂ ಲೀಲಾಜಾಲವಾಗಿ ಮ್ಯಾನೇಜ್ ಮಾಡಿಕೊಂಡು ಹೋಗಿ ಬಿಡಬೇಕು. ಯಾವುದು ಬೇಕು, ಯಾವುದನ್ನು ಬಿಡಲಿ ಎಂದು ತಲೆ ತುರಿಸುತ್ತ ದಿಕ್ಕೆಟ್ಟು ಕೂರುವುದರಲ್ಲಿ ಅರ್ಥವಿಲ್ಲ ಎಂದು ಇಂಥವರು ನಮಗೆ ಸರಳವಾಗಿ ಹೇಳಿ ಬಿಡುತ್ತಾರೆ!

ಕೊನೆ ಮಾತು ಏನೆಂದರೆ…

ವೃತ್ತಿ-ಪ್ರವೃತ್ತಿಗಳ ಸಂಬಂಧ ಮಡದಿ-ಸವತಿಯಂತಹ ನೇರಾನೇರ ಸಂಬಂಧವಲ್ಲ. ಹಾಗಾಗಿ, ಸಲಹೆ ಕೇಳುವ ಯಾರಿಗೇ ಆಗಲಿ, “ಹೀಗೆಯೇ ಮಾಡಿ” ಎಂದು ನಿರ್ದಿಷ್ಟವಾಗಿ ಕೊಂಬೆ ಕತ್ತರಿಸಿದಷ್ಟು ಮೊನಚಾಗಿ ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಹಾಗಾಗಿ, ಈ ಲೇಖನದಲ್ಲಿ, ವೃತ್ತಿ-ಪ್ರವೃತ್ತಿಗಳ ವಿಭಿನ್ನ ಮಜಲುಗಳನ್ನು ಅವುಗಳ ವಿಚಿತ್ರ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಿಮ್ಮ ಪ್ರವೃತ್ತಿ ಯಾವುದು, ಅದನ್ನು ವೃತ್ತಿಯಾಗಿ ಸ್ವೀಕರಿಸಬೇಕೆ, ಅಥವಾ ವೃತ್ತಿಯ ಜೊತೆ ತೂಗಿಸಿಕೊಂಡು ಹೋಗಬೇಕೆ ಅಥವಾ ವೃತ್ತಿಯನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಂಡು ಪ್ರವೃತ್ತಿಯನ್ನು ಕೈಗೆಟುಕಿಸಿಕೊಳ್ಳಬೇಕೆ – ಈ ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳುವ ವಿವೇಚನೆ, ಆಯ್ಕೆ ಮತ್ತು ಸ್ವಾತಂತ್ರ್ಯ – ಜಾಣರಾದ ನಿಮ್ಮದೇ! ಆ ಜಾಣತನ ನಿಮಗಿದೆ ಎನ್ನುವ ವಿಶ್ವಾಸ ನನ್ನದು.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!