ಮಲ್ಲಿಕಾರ್ಜುನ ಬಂಡೆ, ಜಗದೀಶ್.. ಈ ಎರಡು ಹೆಸರು ಕೇಳಿದರೆಯೇ ಸಾಕು.. ಕರುಳು ಚುರುಕ್ ಎನ್ನುತ್ತದೆ. ಕರ್ನಾಟಕದ ಪರಿಸ್ಥಿತಿ ಹೇಗಿದೆಯೆಂದರೆ ಪೋಲೀಸರು ಜನರನ್ನು ರಕ್ಷಿಸುವುದು ಬಿಡಿ, ಸ್ವತಃ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಾರರು ಎನ್ನುವಂತಾಗಿದೆ. ಒಂದು ಕಾಲದಲ್ಲಿ ದೇಶಾದ್ಯಂತ ಹೆಸರುವಾಸಿಯಾಗಿದ್ದ ಕರ್ನಾಟಕ ಪೋಲೀಸರನ್ನು ಅಧೀರರನ್ನಾಗಿ ಮಾಡುವ ಪಯತ್ನಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ದಕ್ಷವಾಗಿ ಕಾರ್ಯ ನಿರ್ವಹಿಸುವವರಿಗೆ ಇಲ್ಲಿ ಅವಕಾಶವಿಲ್ಲ, ಯಾವುದೇ ಸ್ವಾತಂತ್ಯವಿಲ್ಲ. ರಾಜಕಾರಣಿಗಳಿಗೆ ಬಕೆಟ್ ಹಿಡಿದು ಅವರು ಹೇಳಿದಂತೆ ಕೆಲಸ ಮಾಡಿದರಷ್ಟೇ ಪೋಲೀಸರಿಗೆ ನೆಮ್ಮದಿ.
ನಮ್ಮ ವ್ಯವಸ್ಥೆಗಳೇ ಹಾಗೆ. ಅದರ ಸೂತ್ರ ರಾಜಕಾರಣಿಗಳ ಕೈಲಿರುತ್ತದೆ. ಪೋಲೀಸರು, ಅಧಿಕಾರಿಗಳು ಅವರ ಕೈಗೊಂಬೆಯಾಗಿರುತ್ತಾರೆ. ಕೋರ್ಟ್, ಕಾನೂನುಗಳು ಏನೇ ಆಗಿರಲಿ, ಸಾಮಾನ್ಯ ಜನ ಇವೆಲ್ಲಕ್ಕೆ ಬದ್ಧವಾಗಿರಬೇಕಾಗುತ್ತದೆ. ರಾಜಕಾರಣಿಗಳು ಈ ಪೋಲೀಸ್ ವ್ಯವಸ್ಥೆಯನ್ನು ತಮ್ಮ “ಪವರ್” ಎಂಬ ವೀಕ್ನೆಸ್ಸನ್ನು ಹೊಂದಿರುತ್ತಾರೆ. ಪೋಲೀಸರಿರುವುದು ಸಮಾಜದ ರಕ್ಷಣೆಗೆ ಎಂಬುದು ಗೊತ್ತಿದ್ದರೂ ಸಹ, ಪೋಲೀಸರಿರುವುದೇ ತಮ್ಮ ಸ್ವಂತ ರಕ್ಷಣೆ, ತಾವು ಹೇಳಿದಂತೆ ಕೆಲಸ ಮಾಡುವುದಕ್ಕಾಗಿ ಎನ್ನುವ ಭಾವನೆ ಎಲ್ಲಾ ಕಾಲದ ರಾಜಕಾರಣಿಗಳಿಗೆ ಇದ್ದಿದ್ದಿದೆ. ಎಲ್ಲಾದರೂ ಇದಕ್ಕೆ ಚ್ಯುತಿ ಬಂತೆಂದರೆ ಸಾಕು, ಆಫೀಸರ್ ಐ.ಎ.ಎಸ್ಸೇ ಆಗಿರಲಿ, ನೆಟ್ಟಗೆ ಹತ್ತನೇ ತರಗತಿ ಪಾಸಾಗದ ರಾಜಕಾರಣಿಯ ಕೈಯಿಂದ ಉಗಿಸಿಕೊಳ್ಳಬೇಕಾಗುತ್ತದೆ. ನೀರಿಲ್ಲದ ಜಾಗಕ್ಕೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಡಿ.ವೈ.ಎಸ್.ಪಿ ಅನುಪಮಾ ಶೆಣೈಯವರ ವರ್ಗಾವಣೆ!
ಪ್ರಕರಣ ಇನ್ನೂ ಹಸಿಹಸಿಯಾಗಿಯೇ ಇರುವುದರಿಂದ ಇದು ನಿಮಗೆಲ್ಲಾ ಗೊತ್ತೇ ಇದೆ. ಇಲ್ಲಿ ಆಗಿದ್ದಿಷ್ಟೇ. ಕೂಡ್ಲಗಿಯ ಡಿ.ವೈ. ಎಸ್.ಪಿ ಆಗಿದ್ದ ಅನುಪಮಾ ಶೆಣೈಯವರಿಗೆ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ಯಾವುದೋ ಕಾರಣಕ್ಕೆ (ಕೆಲವರು ಹೇಳುತ್ತಾರೆ, ಮರಳು ದಂಧೆಗೆ ಸಂಬಂಧಿಸಿ ಕರೆ ಮಾಡಿದ್ದು ಅಂತ, ಮತ್ತೆ ಕೆಲವರು ಹೇಳುತ್ತಾರೆ ಯಾವುದೋ ಕೊಲೆ ಕೇಸಿನ ಬಗ್ಗೆ ಮಾತನಾಡಲು ಕರೆ ಮಾಡಿದ್ದು ಅಂತ, ನಿಜ ಏನೂಂತ ಆ ಪರಮೇಶ್ವರನಿಗಷ್ಟೇ ಗೊತ್ತು!) ಕರೆ ಮಾಡಿದ್ದಾರೆ. ಆ ಕ್ಷಣ ಬೇರಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಅನುಪಮಾ ಸಚಿವರ ಕರೆಯನ್ನು ಹೋಲ್ಡ್ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸಚಿವ ನಾಯಕ್, ಕ್ಷಣವೂ ವಿರಮಿಸದೆ ಅನುಪಮಾರನ್ನು ವರ್ಗಾವಣೆ ಮಾಡಿಸಿದ್ದಾರೆ. ಹ್ಹ.. ಅದು ಒಂದೇ ದಿನದ ಅಂತರದಲ್ಲಿ ಆದ ಎರಡನೇ ವರ್ಗಾವಣೆಯಾಗಿತ್ತು
ಅಲ್ಲಿಗೆ ವಿವಾದ ಸ್ಪೋಟಗೊಂಡಿತು, ಪರಮೇಶ್ವರ ತೇಪೆ ಹಚ್ಚುವುದಕ್ಕಾಗಿ ಸುದ್ದಿಗೋಷ್ಟಿ ಕರೆದು “ಇದರಲ್ಲಿ ನನ್ನ ತಪ್ಪೇನಾದ್ರು ಸಾಬೀತಾದ್ರೆ ರಾಜೀನಾಮೆ ಕೊಡುತ್ತೇನೆ” ಎಂದು ಘಂಟಾಘೋಷವಾಗಿ ಹೇಳ್ಕೊಂಡ್ರು. ಅದಾದ ಮರುದಿನವೇ, ಆವತ್ತು ಆಂಜನೇಯ ಓಪನ್ನಾಗಿ ಹೇಳಿದ್ರಲ್ಲಾ,”ಓಪನ್ ಮಾಡಿ ನೋಡಿದ್ರೆ ಬರೀ ಕಾಗದದ ಕಟ್ಟು” ಅಂತ, ಅದೇ ಸ್ಟೈಲಲ್ಲಿ , “ನಲ್ವತ್ತೆರಡು ಸೆಕೆಂಡ್ ಕಾಲನ್ನ ಹೋಲ್ಡ್’ನಲ್ಲಿಟ್ಟಿದ್ದಕ್ಕೆ ನಾನೇ ಆಕೇನ ವರ್ಗಾವಣೆ ಮಾಡಿಸಿದ್ದು” ಎನ್ನುವುದನ್ನು ಓಪನ್ನಾಗಿ ಹೇಳ್ಕೊಂಡು ಜನರ ಚಪ್ಪಾಳೆ ಗಿಟ್ಟಿಸಿಕೊಂಡ್ರು. ಖದೀಮ ಕಾಂಗ್ರೇಸಿಗನೊಬ್ಬ ಅದನ್ನು ಮೀಡಿಯಾಕ್ಕೆ ಹರಿಯಬಿಟ್ಟ. ಆಗ ಶುರುವಾಗಿದ್ದು ನೋಡಿ ಮತ್ತೊಂದು ಸುತ್ತಿನ ಪ್ರಹಸನ!
ವಿಡಿಯೋ ವೈರಲ್ ಆಗುತ್ತಲೇ ಪರಮೇಶ್ವರ “ಇದು ಡ್ಯುಪ್ಲಿಕೇಟ್, ಆಡಿಯೋ ಮಿಕ್ಸ್ ಮಾಡಿದ್ದು” ಅಂತ ವರ್ಲ್ಡ್ ಫೇಮಸ್ ಡೈಲಾಗ್ ಹೊಡುದ್ರು. ರಾಜ್ಯ ಕಾಯುವ ಪರಮೇಶ್ವರನಿಗೆ ಈ ಪರಮೇಶ್ವರ ಇನ್ನೂ ಸಂಪರ್ಕಕ್ಕೆ ಸಿಗಲಿಲ್ಲ. ಸರಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿಗಳು “ಇದೊಂದು ಆಡಳಿತಾತ್ಮಕ ವಿಚಾರ, ಅದ್ರಲ್ಲೆಲ್ಲಾ ತಪ್ಪು ಹುಡುಕಬಾರದು” ಅಂದ್ರು. ಇದೆಲ್ಲವನ್ನು ನೋಡಿದ ರಾಜ್ಯದ ಜನಕ್ಕೆ ಅನಿಸುತ್ತಿರುವುದು, ವಿಡಿಯೋದಲ್ಲಿ ಮಾತನಾಡುತ್ತಿರುವುದು ಪರಮೇಶ್ವರ ನಾಯಕರೇ ಎನ್ನುವುದು ಸುಸ್ಪಷ್ಟವಾಗಿ ಕಾಣುತ್ತಿದೆ. ಆದ್ರೂ ಇವರು ಸತ್ಯದ ನೆತ್ತಿಯ ಮೇಲೆ ಹೊಡೆದಂತೆ ಅದನ್ನು ಮಿಕ್ಸ್ ಮಾಡಲಾಗಿದೆ ಎನ್ನುತ್ತಿದ್ದಾರಲ್ಲಾ, ಯಾರ ಕಿವಿ ಮೇಲೆ ಲಾಲ್’ಬಾಗ್ ಇಡುತ್ತಿದ್ದಾರೆ? ಎಲ್ಲಾ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನಮ್ಮನ್ನೆಲ್ಲಾ ಇವರು ಗುಲ್ಡುಗಳೆಂದು ಭಾವಿಸಿದ್ದಾರೋ ಹೇಗೆ?
ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮದ ಬಗ್ಗೆ ಆಲೋಚಿಸುತ್ತೇವೆ ಎನ್ನುತ್ತಿದ್ದಾರೆ ಕಾಂಗ್ರೇಸಿಗರು. ಒಮ್ಮೆ ಫ್ಲಾಶ್’ಬ್ಯಾಕ್’ಗೆ ಹೋಗಿ, ಮೂರು ತಿಂಗಳ ಹಿಂದೆ ಆಂಜನೇಯ ಡೀಲ್ ಪ್ರಕರಣ ಬಂದಾಗಲೂ ಈ ಸರಕಾರ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದನ್ನು ಯಾರೂ ಮರೆತಿಲ್ಲ ತಾನೇ? ಆ ವರದಿಯ ಕಥೆಯೇನಾಯ್ತು ಅಂತ ಯಾರಿಗಾದ್ರೂ ಗೊತ್ತಿದೆಯಾ? ದಲಿತೋದ್ದಾರಕ್ಕಾಗಿಯೇ ಹುಟ್ಟಿದ ಸರಕಾರವೊಂದು ದಲಿತರಿಗೇ ಮೋಸ ಮಾಡಿದ ಕಥೆಯನ್ನು ಎಷ್ಟೊಂದು ವ್ಯವಸ್ಥಿತವಾಗಿ ಮುಚ್ಚಲಾಯ್ತು? ಭೇಷ್! ಆಂಜನೇಯ ವಿಡಿಯೋವಾದರೂ ಅಷ್ಟು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ., ಆದರೆ ಪರಮೇಶ್ವರ ನಾಯಕ್ ವಿಡಿಯೋದಲ್ಲಿ ಅದು ಇವರೇ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆಯಲ್ಲಾ, ಮತ್ತಿನ್ಯಾವ ಕರ್ಮಕ್ಕೆ ವರದಿ, ವಿಡಿಯೋವೊಂದೇ ಸಾಲದೇ? ಎಂಬುದು ಜನರ ಪ್ರಶ್ನೆ.
ಮತ್ತೊಂದು ಪ್ರಕರಣವೂ ಹಸಿರಾಗಿಯೇ ಇದೆ. ಪ್ರಮೋದ್ ಕುಮಾರ್. ಮಂಗಳೂರಿನ ಜನ ಇವರನ್ನು “ಸಿಂಗಂ” ಹೆಸರಿನಿಂದ ಕರೆಯುತ್ತಾರೆ ಎಂದರೆಯೇ ನಿಮಗೆ ಅರ್ಥವಾಗಬೇಕು ಇವರ ಖದರ್ ಎಂತಾದ್ದು ಅಂತ. ಪ್ರಮೋದ್ ಎಂತವರೆಂದರೆ, ಸ್ವಂತ ಸಂಬಂಧಿಗಳೇ ಪ್ರಭಾವ ಬೀರಲು ಹೋದರೆ ಕೇರ್ ಮಾಡದೆ ಹೊರ ಕಳಿಸುವವರು, ಅಂತಾದ್ದರಲ್ಲಿ ಈ ರಾಜಕಾರಣಿಗಳನ್ನು ಕೇರ್ ಮಾಡುತ್ತಾರಾ? ತಿಂಗಳ ಹಿಂದಷ್ಟೇ ಸ್ಥಳೀಯ ರಾಜಕಾರಣಿಗಳ ತಾಳಕ್ಕೆ ತಕ್ಕ ಹಾಗೆ ಕುಣಿಯದ ಪ್ರಮೋದ್’ರನ್ನು ವರ್ಗಾವಣೆ ಮಾಡಿದಾಗ, ಸಾರ್ವಜನಿಕರಲ್ಲ, ಸ್ವತಃ ಪೋಲೀಸರೇ ನೀತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಪ್ರತಿಭಟನೆ ನಡೆಸಿ ಈ ದಕ್ಷ ಅಧಿಕಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಆ ಘಟನೆಯನ್ನಿನ್ನೂ ಜನ ಮರೆತಿಲ್ಲ. ಅಷ್ಟರಲ್ಲಿಯೇ ಪ್ರಮೋದ್ ಕುಮಾರ್ ರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಆವತ್ತು ಪ್ರತಿಭಟಿಸಿದ ಪೋಲೀಸರೆಲ್ಲಾ ಈ ಭಾರಿ ಸುಮ್ಮನೆ ಕುಳಿತಿದ್ದಾರೆಂದರೆ ನಿಮಗೆ ಅರ್ಥವಾಗಬೇಕು, ಯಾವ ರೀತಿ ಅವರಿಗೆ ನೋಟೀಸ್ ನೋಡಿ, ಹೆದರಿಸಿ ಬೆದರಿಸಿ ಮೂಲೆ ಸೇರಿಸಿಲಾಗಿದೆ ಅಂತ. ರಜೆ ನೀಡದ, ಮಾನಸಿಕ ಕಿರುಕುಳ ನೀಡಿದ ಹಿರಿಯ ಅಧಿಕಾರಿಯನ್ನು ಕಿರಿಯ ಅಧಿಕಾರಿಯೇ ಕೊಲ್ಲುತ್ತಿರುವ ಕಾಲದಲ್ಲಿ ಅದಕ್ಕೆ ಅನ್ವರ್ಥವೆಂಬಂತೆ ಕಿರಿಯ ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿ, ಕೇಡಿಗಳನ್ನು ಹಿಡಿದು ಕೊಟ್ಟಿದ್ದಕ್ಕಾಗಿ ನಮ್ಮ ಸರಕಾರ ನೀಡಿದ್ದು ಇದೇ ನೋಡಿ!
ಹೋದ ವರ್ಷ ವಿನಯ ಕುಮಾರ್ ಸೊರಕೆ ಧಾರವಾಡದ ಕಾರ್ಯಕ್ರಮವೊಂದರಲ್ಲಿ ತಡವಾಗಿ ಬಂದ ಪೋಲೀಸ್ ಅಧಿಕಾರಿಯೊಬ್ಬರನ್ನು “ನೀವೇನ್ ಕತ್ತೆ ಕಾಯ್ತಿದ್ರಾ?” ಅಂತ ಸಾರ್ವಜನಿಕವಾಗಿಯೇ ಜರೆದಿದ್ದರು. ರೆಡ್ಡಿಗಳ ಕಾಲದಲ್ಲಿ ಬಳ್ಳಾರಿಯ ಪೋಲೀಸರ ಪಾಡು ಹೇಗಿತ್ತು ಎಂಬುದನ್ನು ಹೇಳ ಹೊರಟರೆ ಅದನ್ನೊಂದು ಮಾಫಿಯಾದ ಹೆಸರಿನಲ್ಲಿ ಪುಸ್ತಕವಾಗಿ ಹೊರತರಬಹುದು. ನೇರ ಹಾದಿಯಲ್ಲಿ ಸಾಗುತ್ತಿರುವ ಸೋನಿಯಾ ನಾರಂಗ್, ರಶ್ಮಿ ಮಹೇಶ್, ಹರ್ಷ ಗುಪ್ತ ಮುಂತಾದವರೆಲ್ಲರೂ ಈ ರಾಜಕಾರಣಿಗಳ ಆಟಾಟೋಪಕ್ಕೆ ಗುರಿಯಾದವರೇ. ಈ ಕಡೆ ಉಡುಪಿಯಲ್ಲಿಯೂ; ಗೂಂಡಾಗಿರಿ, ಕೊಲೆಗಳನ್ನೆಲ್ಲಾ ಹತೋಟಿಗೆ ತಂದು, ಗೋಕಳ್ಳರಿಗೆ ಸಿಂಹ ಸ್ವಪ್ನರಾಗಿರುವ ಅಣ್ಣಾ ಮಲೈ ಅವರನ್ನೂ ವರ್ಗಾವಣೆ ಮಾಡಲು ಎಷ್ಟರ ಮಟ್ಟಿಗೆ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಸಹ ಇಲ್ಲಿ ಉಲ್ಲೇಖಿಸಬಹುದು. ಒಟ್ಟಿನಲ್ಲಿ ಹೇಳುವುದಾದರೆ ಪರಮೇಶ್ವರ ನಾಯಕರಂಥಹ ನಾಯಕರಿದ್ದರೆ ಅನುಪಮಾ ಶೆಣೈರಂತಹ, ಪ್ರಮೋದ್ ಶೆಟ್ಟಿಯವರಂತಹ ಅದೆಷ್ಟೇ ದಕ್ಷ ಅಧಿಕಾರಿಗಳಿಗೂ, ಅವರ ಕೆಲಸಗಳಿಗೂ ಇಲ್ಲಿ ಬೆಲೆಯಿರದು.
ನಮ್ಮ ಸರಕಾರದ ದೊಡ್ಡ ವೀಕ್ನೆಸ್ಸ್ ಏನು ಗೊತ್ತಾ? ಯಾವುದೇ ವಿವಾದಗಳಾದಾಗ, ಮತ ಹಾಕಿದ ಜನ ಅದೆಷ್ಟೇ ಕಿರುಚಾಡಿಸಿಕೊಂಡರೂ ಕೇಳದ ಈ ಸರಕಾರ ರಾಹುಲ್ ಗಾಂಧಿಯವರೇನಾದರೂ ಹೇಳಿದರೆ ತಕ್ಷಣ ಕಾರ್ಯೋನ್ಮುಖವಾಗುತ್ತದೆ. ಈ ಭಾರಿಯೂ ರಾಹುಲ್ ಗಾಂಧಿಯ ಆಜ್ಞೆಯ ಮೇರೆಗೆ ಅನುಪಮಾ ಶೆಣೈಯವರ ವರ್ಗಾವಣೆಯನ್ನೇನೋ ರದ್ಧು ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಪ್ರಮೋದ್ ಶೆಟ್ಟಿಯವರಿಗೆ ತಂದಿಟ್ಟ ಸ್ಥಿತಿಯನ್ನೇ ಅನುಪಮಾರಿಗೂ ತಂದಿಡಲಾರರು ಎನ್ನುವುದಕ್ಕೇನು ಗ್ಯಾರಂಟಿ? ದುರುದ್ದೇಶಪೂರ್ವಕವಾಗಿ ಪೋಲೀಸರ ಕೆಲಸದಲ್ಲಿ ಪ್ರಭಾವ ಬೀರಲು ಯತ್ನಿಸಿದ ಸಚಿವರು ಮತ್ತವರ ಬೆಂಬಲಿಗರು ಈ ಮುಖಭಂಗವನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು, ಅನುಪಮಾರಿಗೆ ಮುಂದೆ ತೊಂದರೆ ಕೊಡಲಾರರು ಎಂಬುದಕ್ಕೇನು ಗ್ಯಾರಂಟೀ? ಹೋಗಲಿ, ವರ್ಗಾವಣೆ ಆದೇಶವನ್ನು ಸರಕಾರವೇ ಹಿಂತೆಗೆದುಕೊಂಡಿರುವುದರಿಂದ, ಸಚಿವರ ತಪ್ಪು ಅದರಷ್ಟಕ್ಕೇ ಸಾಬೀತಾಗಿದೆ, ಸಚಿವರಿಗೇನು ಶಿಕ್ಷೆ? “ಇದು ಆಡಳಿತಾತ್ಮಕ ವಿಚಾರ” ಎನ್ನುತ್ತಾ ಜನರನ್ನು ಬಕ್ರಾ ಮಾಡಿದ ಮುಖ್ಯಮಂತ್ರಿಗಳೇನು ಹೇಳುತ್ತಾರೆ ಈಗ? ರೋಹಿತ್ ವೇಮುಲ ಆತ್ಮಹತ್ಯೆಗೆ ಕಾರಣರಾದ ಸಚಿವರನ್ನು ವಜಾ ಮಾಡಿ ಎಂದು ಕಣ್ಣು ಮುಚ್ಚಿ ಆಗ್ರಹಿಸಿದವರು ಇವತ್ತು ತನ್ನ ಮೂಗಿನಡಿಯಲ್ಲಿದ್ದುಕೊಂಡೇ ಇಷ್ಟೆಲ್ಲಾ ಅನ್ಯಾಯಗಳನ್ನು ಮಾಡುತ್ತಿರುವವರನ್ನು ಮೊದಲು ವಜಾ ಮಾಡಬೇಕಲ್ಲವೇ?
ಲಾಸ್ಟ್ ಪಂಚ್: ಮೀಡಿಯಾಗಳಲ್ಲಿ ಹೊಡೆದದ್ದು ಸ್ಪಷ್ಟವಾಗಿ ಕಂಡರೂ ನಾನು ಹೊಡೆದೇ ಇಲ್ಲ ಎನ್ನುತ್ತಾ ಜನರ ಕೆನ್ನೆ ಸವರಿದ ಮುಖ್ಯಮಂತ್ರಿಯ ಬಳಿ ನಿಮ್ಮದೇನು ವರಾತ ಅಂತ ಕೇಳ್ಬೇಡಿ ಪ್ಲೀಸ್!