ಅಂಕಣ

ಕುರಿಮಂದೆ ಮದುವೆ ಪ್ರಸಂಗ..

ನೋಡಿ… ಇದೊಂದು ಅಗ್ನಿಗೃಹ. ಆಂಧ್ರದ  ದೆಂದುಕೂರಿ ಅಗ್ನಿಹೋತ್ರಿಗಳ ಕುಟುಂಬದ್ದು. ಅಗ್ನಿಹೋತ್ರಿಗಳ ಮನೆ ಹೀಗೆ ಇರುತ್ತೆ. ಪ್ರಾತಃ ಸವನ, ಮಾಧ್ಯಂದಿನ ಸವನ ಮತ್ತು ತೃತೀಯ ಸವನಗಳನ್ನಮಾಡ್ತಾರೆ.

ಅಂದ್ರೆ ದಿನಕ್ಕೆ ಮೂರು ಬಾರಿ ಅಗ್ನಿಗೆ ನಾಲ್ಕು ನಾಲ್ಕು ಆಹುತಿಗಳನ್ನ ಕೊಡ್ತಾರೆ ಮತ್ತು ಆ ಮೂರೂ ಅಗ್ನಿಗಳು ಶಾಂತವಾಗದ ಹಾಗೆ ಜೀವನಪೂರ್ತಿ ರಕ್ಷಣೆ ಮಾಡಿಟ್ಟುಕೊಳ್ತಾರೆ. ಒಂದು ವೇಳೆಏನಾದ್ರೂ ಆ ಅಗ್ನಿ ಶಾಂತವಾದರೆ ಪ್ರಾಯಶ್ಚಿತ್ತ ಮಾಡಿಕೊಂಡು ಮತ್ತೆ ಅಗ್ನಿ ಮಂಥನ ಮಾಡಿ ಸ್ಥಾಪನೆ ಮಾಡಿಕೊಳ್ತಾರೆ. ಅಗ್ನಿಗೆ “ಗೃಹಪತಿ” ಅನ್ನೋ ಹಸರು ಇದೆ. ಅಂದರೆ ಮನೆಯ ಒಡೆಯ ಅಗ್ನಿ.ಅಲ್ಲಿ ವಾಸಿಸುವವರು ಅವನ ಅತಿಥಿಗಳು. ಆಹವನೀಯ ಗಾರ್ಹಪತ್ಯ, ಮತ್ತು ದಕ್ಷಿಣಾಗ್ನಿ ಅನ್ನೋ ಮೂರು ಹೆಸರಿನ ಮೂರು ಅಗ್ನಿಗಳನ್ನ ಮನೆಯಲ್ಲಿ ಇಟ್ಕೊಂಡು ಪ್ರತೀ ದಿನ ಅಗ್ನಿ ಉಪಾಸನೆಮಾಡುವವನು ಅಹಿತಾಗ್ನಿ, ಅಥವಾ ಅಗ್ನಿಹೋತ್ರಿ ಅಂತ ಕರೆಸಿಕೊಳ್ತಾನೆ. ಬ್ರಾಹ್ಮ ವಿವಾಹದಲ್ಲಿ ಮದುವೆಯ ಮಂಟಪದಲ್ಲಿ ಅಗ್ನಿಯನ್ನ ಹಾಕ್ತಾರಲ್ಲ.. ಅದು ಆಹವನೀಯ. ಅದಕ್ಕೆ ಗಾರ್ಹಪತ್ಯ ಮತ್ತುದಕ್ಷಿಣಾಗ್ನಿಯನ್ನ ಸೇರಿಸಿಕೊಳ್ಳಬೇಕು. ಪ್ರತೀ ಹುಣ್ಣಿಮೆ ಮತ್ತು ಅಮವಾಸ್ಯೆಗೆ ದರ್ಶೇಷ್ಟಿ ಮತ್ತು ಮಾಸೇಷ್ಟಿ ಅಂತ ಎರಡು ಇಷ್ಟಿಗಳನ್ನ ಮಾಡಬೇಕು. ಐದು ವರ್ಷಕ್ಕೊಂದು ಸೋಮ ಯಾಗಮಾಡಬೇಕು. ಹಾಗೆ ಸೋಮಯಾಗ ಮಾಡಿದವನನ್ನ ಸೋಮಯಾಜಿ ಅಂತ ಕರೀತಾರೆ. ವಾಜಯಪೇಯ ಮಾಡಿದವನನ್ನ ವಾಜಪೇಯಿ ಅಂತ ಕರೀತಾರೆ.

ಈ ಆಹವನೀಯ ಅಗ್ನಿಯಲ್ಲೇ ಗರ್ಭಾಧಾನ, ಪುಂಸವನ(ಸೀಮಂತ) ಮುಂತಾದವುಗಳ ನಡೆಯಬೇಕು. ಮಕ್ಕಳು ಹುಟ್ಟಿದ ಮೇಲೆ ಅವುಗಳಿಗೆ ಮಾಡುವ ಚೌಲ, ಉಪನಯನ ಇತ್ಯಾದಿಗಳನ್ನ ಅದೇಅಗ್ನಿಯಲ್ಲಿ ಮಾಡಬೇಕು. ಕೊನೆಯಲ್ಲಿ ಪ್ರಾಣ ಹೋಗುವವರೆಗೂ ಈ ಮೂರೂ ಅಗ್ನಿಗಳನ್ನ ರಕ್ಷಿಸಿಕೊಳ್ಳಬೇಕು. ಪ್ರಯಾಣ ಹೋಗಬೇಕಾದ ಸಂದರ್ಭ ಬಂದರೆ ಮನೆಯಲ್ಲಿ ಪತ್ನಿ ಪತಿ ಊರಿಂದಬರುವವರೆಗೂ ಅಗ್ನಿಯನ್ನು ಕಾಯ್ದುಕೊಂಡು ಮೂರೂ ಹೊತ್ತು ಔಪಸನಾ ಹೋಮವನ್ನ ಮಾಡಬೇಕು. ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡಬೇಕಾಗಿ ಬಂದರೆ “ಸಮಿತ್ ಸಮಾರೋಪಣ” ಅಂದರೆಒಂದು ಪಲಾಶದ ಸಮಿತ್ತನ್ನ ಈ ಅಗ್ನಿಯಲ್ಲಿ ಅರ್ಧ ಸುಟ್ಟು ಅದನ್ನ ಬಟ್ಟೆಯಲ್ಲಿ ಕಟ್ಟಿಕೊಂಡು ಜೊತೆಗಿಟ್ಟುಕೊಳ್ಳಬೇಕು. ಪ್ರಯಾಣದಲ್ಲಿ ಮುಂದೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಆ ಸಮಿತ್ತನ್ನಉಪಯೋಗಿಸಿ ಹೊಸ ಅಗ್ನಿಯನ್ನ ಮಾಡಿಕೊಳ್ಳಬಹುದು.

 ಇಂತಹ ಗೃಹಸ್ಥ ಪ್ರಾಣ ಬಿಟ್ಟರೆ ಆ ಮೂರೂ ಅಗ್ನಿಗಳನ್ನ ಒಟ್ಟುಗೂಡಿಸಿ ಅದನ್ನು ಒಂದು ಕುಡಿಕೆಯಲ್ಲಿ ಹಾಕಿ ಸ್ಮಶಾನಕ್ಕೆ ಒಯ್ದು ಅದೇ ಅಗ್ನಿಯಲ್ಲಿ ಆತನ ಅಂತಿಮ ಸಂಸ್ಕಾರವೂ ನಡೆಯಬೇಕು.ತ್ರೇತಾಗ್ನಿ ಸಂಗ್ರಹ ಅಂತಾರೆ ಅದನ್ನ. ಅಂದರೆ ಮೂರೂ ಅಗ್ನಿಗಳು ಒಟ್ಟುಗೂಡುವುದು ಆತನ ಪ್ರಾಣ ಹೋದಮೇಲೆಯೇ.

ಹಾಗಾಗಿಯೇ ಶವಯಾತ್ರೆಯಲ್ಲಿ ಮೃತನ ಪುತ್ರ ಅಗ್ನಿಯನ್ನ ಕೈಯಲ್ಲಿ ಹಿಡಿದುಕೊಂಡು ಸ್ಮಶಾನಕ್ಕೆ ಹೋಗ್ತಾನೆ.

 ಈಗಿನ ಕಾಲದಲ್ಲಿ ಅಗ್ನಿಯನ್ನ ಯಾರೂ ಇಟ್ಟುಕೊಳ್ಳುವುದಿಲ್ಲ ಆದ್ದರಿಂದ ಮನೆ ಮುಂದೆ ಬೆಂಕಿ ಹಾಕಿ ಅದನ್ನ ಒಯ್ಯೋ ಪದ್ಧತಿ ಬಂದಿದೆ. ಇದನ್ನೆಲ್ಲ ಯಾರು ಮಾಡಬೇಕು ಯಾಕೆ ಮಾಡಬೇಕು ಅಂತೆಲ್ಲಗೊತ್ತಿಲ್ಲದೇ ಎಲ್ಲರೂ ಎಲ್ಲವನ್ನೂ ಅನುಕರಿಸುವ ಕಾಲ ಬಂದಮೇಲೆ ಯಾರೇ ಪ್ರಾಣ ಬಿಟ್ಟರೂ ಮನೆ ಮುಂದೆ ಹೊಗೆ ಹಾಕೋ ರೂಢಿ ಬಂತು. ಹಾಗಾಗಿ ಯಾರಾನ್ನಾದ್ರೂ ಸಾಯಿಸ್ತೀನಿ ಅಂತ ಹೇಳೋಬದ್ಲು.. “ಮಗನೆ…ಹೊಗೆ ಹಾಕಿಸ್ಕೋತೀಯಾ..” ಅಂತ ಧಮ್ಕಿ ಹಾಕೋ ಜಮಾನಾ ಬಂತು.

ಕಲ್ಯಾಣ ಮಂಟಪದಲ್ಲಿ ಪುರೋಹಿತರು ಹಚ್ಚಿದ ಬೆಂಕಿಗೆ ಕಾಟಾಚಾರಕ್ಕೆ ನಾಲ್ಕು ಸೌಟು ತುಪ್ಪ ಸುರಿದು ”ಮದುವೆ” ಮಾಡಿಕೊಳ್ಳುವವರಿಗೆ ಇದೆಲ್ಲ ಘೋರ ನರಕದ ಹಾಗೆ ಕಾಣಬಹುದು.

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಭವ್ಯ ಕಲ್ಯಾಣ ಮಂಟಪದಲ್ಲಿ ಒಂದು ಮದುವೆ ನಡೀತಾ ಇತ್ತು. ನಾವು ದೊಡ್ಡ ಸೋಮಯಾಜಿಗಳ ಕುಟುಂಬದವರು ಅಂತೆಲ್ಲ ಕೊಚ್ಚಿಕೊಳ್ಳುತ್ತಿದ್ದ ಅಜ್ಜಅಜ್ಜಿಯರು.. ತಮ್ಮ ತಮ್ಮ ಸಂಭ್ರಮಗಳಲ್ಲಿ ಮುಳುಗಿದ್ರು. ಹುಡುಗ ಹುಡುಗಿ ತಮ್ಮ ತಮ್ಮ ಸ್ನೇಹಿತರಿಗೆ ಶೇಕ್ ಹ್ಯಾಂಡ್ ಕೊಡುವುದರಲ್ಲಿ ಬ್ಯುಸಿಯಾಗಿದ್ರು. ಪುರೋಹಿತರು ನನ್ನ ಪರಿಚಯದವರೇ.ದೊಡ್ಡ ವಿದ್ವಾಂಸರು. ಯಾರೂ ತಮ್ಮನ್ನ ಕೇರ್ ಮಾಡುತ್ತಿಲ್ಲ ಅಂತ ಗಮನಿಸಿ…. ಕಾಟಾಚಾರಕ್ಕೆ ಲಾಜಾ ಹೋಮದ ವಿಧಿಯನ್ನ skip ಮಾಡಿ ಶಾರ್ಟ್’ಕಟ್ ನಲ್ಲಿ ಮುಗಿಸ್ತಾ ಇದ್ರು. ಅವರನ್ನ ಹಂಗೇಮಾತಿಗೆಳೆದು… “ಗುರುಗಳೇ… ಈಗಿನ ಕಾಲದಲ್ಲಿ ಮದುವೆಯಲ್ಲಿ ಹೋಮ ಮಾಡೋದೇ ಬೇಕಾಗಿಲ್ಲ. ಅವರಿಗೆ ಶೋಭನಕ್ಕೆ ಪರ್ಮಿಶನ್ ಬೇಕು. ಅಷ್ಟಕ್ಕೆಲ್ಲ ಈ ಹೋಮ, ಸಪ್ತಪದಿ ಮುಂತಾದನಾಟಕಗಳೆಲ್ಲಾ ಯಾಕೆ ಮಾಡಬೇಕು..? ಪಾಣಿಗ್ರಹಣವಂತೂ ಮದುವೆಗೂ ಮುಂಚೆಯೇ ಆಗಿಹೋಗಿರುತ್ತೆ. ಹಾಗಾಗಿ ಈ ಮದುವೆ ಅನ್ನೋ ತತಂಗವೇ ಬೇಕಾಗಿಲ್ಲ. ನೇರವಾಗಿ ಒಳ್ಳೇ ಬಟ್ಟೆಉಟ್ಕೊಂಡು ಹಾರ ಬದಲಾಯಿಸಿಕೊಂಡು ಡೈರೆಕ್ಟಾಗಿ ಶೋಭನಕ್ಕೆ ಕಳಿಸಿಬಿಟ್ರೆ ಆಯ್ತು.”

ಇಲ್ಲೇ ಕಲ್ಯಾಣ ಮಂಟಪದ ರೂಮಿನಲ್ಲೇ..ಯಾರೋ ಉಪಯೋಗಿಸಿದ ಮಂಚದ ಮೇಲೆ ಶೋಭನ ಮಾಡ್ಕೊಳ್ತವೆ. ಹಾಸಿಗೆಯ ಶುದ್ಧಿ ಬೇಕಾಗಿಲ್ಲ, ಶರೀರಶುದ್ಧಿ ಗೊತ್ತಿಲ್ಲ, ಗರ್ಭಾಧಾನ ಸಂಸ್ಕಾರಕುಟುಂಬದ ಹಿರಿಯರಿಗೂ ಬೇಕಾಗಿಲ್ಲ. ಗರ್ಭಾಧಾನದ ಮುಹೂರ್ತವಂತೂ ನೆಗೆದುಬಿದ್ದು ಹೋಯ್ತು. ಇವರಿಗೆಲ್ಲಾ ಯಾಕೆ ಬ್ರಾಹ್ಮ ವಿವಾಹ? ನೀವು “ಶೂದ್ರ ವಿವಾಹ ವಿಧಿನಾ ಕರಿಷ್ಯೆ” ಅಂತ ಸಂಕಲ್ಪಮಾಡಿಸ್ಬೇಕು. ಅಥವಾ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಳ್ಳಿ ಅಂತ ಹೇಳಬೇಕು” ಅಂತ ಅವರಿಗೆ ಹೇಳಿದೆ.

“ಅಯ್ಯಪ್ಪ.. ನಮ್ ಹೊಟ್ಟೆ ಮೇಲೆ ಕಲ್ಲು ಹಾಕ್ಕೊಳ್ಳೋ ಮಾತಾಡ್ತೀಯಲ್ಲೋ ದತ್ರಾಜಾ..? ಸುಮ್ನೇ ನಡೀಲಿ ಬಿಡು. ಅವರ ಹುಚ್ಚಾಟದಲ್ಲಿ ನಮಗೆ ಸ್ವಲ್ಪ ಕಾಸಾಗುತ್ತೆ. ಅದೂ ಅಲ್ದೇ ನಮ್ ಸಂಸ್ಕೃತಿಉಳೀಬೇಕಲ್ವೇನೋ..? ಅಂದ್ರು.

“ಇದೆಂಥಾ ಸಂಸ್ಕೃತಿ? ಇದನ್ನ ಸಂಸ್ಕೃತಿ ಅಂತಾರಾ..? ನೀವೂ ಕೂಡ ಹೀಗೆ ಮಾತಾಡ್ತೀರಲ್ಲ ..ಗುರುಗಳೇ ..ನೀವು ಹಿರಿಯರು” ಅಂತ ಪಾಟೀ ಸವಾಲು ಹಾಕಿದೆ.

ತಮ್ಮನ್ನ ಹಿರಿಯರು ಅಂತ ನಾನು ಕರೆದ ಕೂಡಲೇ ಆ ಆರೋಪವನ್ನ ಒಪ್ಪಿಕೊಂಡು ತಮ್ಮ ನಿಜವಾದ ತಿಳುವಳಿಕೆಯಿಂದ ಒಂದು ಮಾತು ಹೇಳಿದ್ರು.

“ನೋಡೋ ದತ್ತಾ… ಇವರಿಗೆ ಏನೂ ಗೊತ್ತಿರೋದಿಲ್ಲ. ಶ್ರದ್ಧೆ ಇರೋದಿಲ್ಲ. ಆದರೂ ನಾವು ಈ ಸಂಸ್ಕಾರಗಳನ್ನೆಲ್ಲ ವಿಧಿಪೂರ್ವಕವಾಗಿ ಮಾಡಿಸಲೇಬೇಕು. ಇವರಿಗೆ ಸಂಸ್ಕಾರ ಕೊಡಬೇಕಾದತಂದೆತಾಯಿಗಳು ಸರಿಯಾಗಿ ಕೊಟ್ಟಿಲ್ಲ. ಅದಕ್ಕೆಲ್ಲಾ ಬೇಕಾದಷ್ಟು ಕಾರಣಗಳಿವೆ. ಇನ್ನು ಮದುವೆ ಆಗೋ ಹುಡುಗ ಹುಡುಗಿಗೂ ಇದೆಲ್ಲ ಬೇಕಾಗಿಲ್ಲ. ಆದರೆ ಇವರಿಗೆ ಹುಟ್ಟೋ ಮಕ್ಕಳಿಗೆ ಅನ್ಯಾಯಆಗಬಾರದು. ಅವು ಏನು ತಪ್ಪು ಮಾಡಿರ್ತವೆ ಹೇಳು..? ಎಷ್ಟು ಸಾಧ್ಯವೋ ಅಷ್ಟು ವಿಧಿವತ್ತಾಗಿ ಮದುವೆ ಮಾಡ್ಸೋದ್ರಿಂದ ಇವರಿಗೆ ಹುಟ್ಟೋ ಮಕ್ಕಳಿಗೆ ಏನೋ ಸಂಸ್ಕಾರ ಸಿಗಬಹದು. ಅದರಿಂದಅವರಿಗೆ ಒಳ್ಳೇದಾದ್ರೂ ಆಗಬಹುದು. ನಾವು ವಿಧಿಯನ್ನೇ ಬಿಟ್ಟು ವಿವಾಹ ಮಾಡಿಸಿದ್ರೆ ಆ ಚಾನ್ಸ್ ಕೂಡ ಉಳಿಯೋದಿಲ್ಲ ಅಲ್ವಾ..?

ಇವರ ಮಕ್ಕಳಿಗಾದರೂ ಸಂಸ್ಕಾರ ಬರಲಿ ಅನ್ನೋ ನಂಬಿಕೆಯಿಂದ ಮಾಡಿಸಬೇಕು ಅಷ್ಟೇ ಹೊರತು.. ಇವರನ್ನ ನಾವು ಕೇರ್ ಮಾಡಬಾರದು. ನಮ್ಮ ಕರ್ತವ್ಯವನ್ನ ನಾವು ಮಾಡಬೇಕು. ಅದುಅವರಿಗೆ ಗೊತ್ತಾಗಲಿ ಬಿಡಲಿ.. “ಅಂದ್ರು. ಅವರ ನಿಜವಾದ ಕಾಳಜಿ ಹೊರಗೆ ಬಂದಿದ್ದು ನೋಡಿ ನನಗೆ ಅವರ ಬಗ್ಗೆ ಇದ್ದ ಗೌರವ ಇನ್ನೂ ಹೆಚ್ಚಾಯ್ತು.

ಯಾರಿಗೂ ನಾವು ಯಾವ ವಿಧಾನದ ಮೂಲಕ ಮದುವೆಯಾಗ್ತಾ ಇದ್ದೀವಿ, ಆ ವಿಧಾನ ಯಾಕೆ.. ಅನ್ನೋ ಸ್ಪಷ್ಟತೆ ಇಲ್ಲ.

ಇದೆಲ್ಲ ಬದಲಾಗಲು ಮೊದಲು ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು, ಹಾಗೂ ಆ ಬದಲಾಯಿತ ಶಿಕ್ಷಣ ವ್ಯವಸ್ಥೆ ಬರಲು ಸಂವಿಧಾನದಲ್ಲಿ ತಿದ್ದುಪಡಿಗಳಾಗಬೇಕು. ಆ ತಿದ್ದುಪಡಿಗಳಿಗೆ ಇಸ್ಲಾಂ ಮತ್ತುಕ್ರಿಶ್ಚಿಯನ್ ಶಕ್ತಿಗಳು ಅವಕಾಶ ಕೊಡುವುದಿಲ್ಲ. ಅರೇಬೀ ದೇಶಗಳು ಮತ್ತು ಯೂರೋಪಿಯನ್ ದೇಶಗಳು ವಿಶ್ವಸಂಸ್ಥೆಯ ಮಟ್ಟದಲ್ಲಿ ಆರ್ಥಿಕವಾಗಿ ಪ್ರಭಾವ ಹೊಂದಿರುವುದು, ಮತ್ತು ಭಾರತಆರ್ಥಿಕವಾಗಿ ಭೇರೆ ದೇಶಗಳ ಮೇಲೆ ಅವಲಂಬಿತವಾಗಿರುವುದರಿಂದ ಒತ್ತಡಕ್ಕೊಳಗಾಗಿ ಆ ಬದಲಾವಣೆಗಳನ್ನು ಮಾಡುವ ಸಾಹಸ ಯಾವ ಸರ್ಕಾರವೂ ಮಾಡುವುದಿಲ್ಲ. ನಮ್ಮ ದೇಶದ ಸಂಪತ್ತನ್ನೇಲೂಟಿ ಹೊಡದು ತಮ್ಮ ದೇಶಗಳನ್ನು ಶ್ರೀಮಂತಗೊಳಿಸಿಕೊಂಡು ಆಮೇಲೆ ತಮ್ಮ ದೇಶದ ಮೂಢನಂಬಿಕಯಿಂದ ಕೂಡಿದ religion ಗಳನ್ನ ನಮ್ಮ ದೇಶದ ಮೇಲೆ ಹೇರಿದ ಪರಿಣಾಮ ಇದು. ಇಸ್ಲಾಂಮತ್ತು ಕ್ರೈಸ್ತ ಎರಡೂ ರಾಕ್ಷಸ ಶಕ್ತಿಗಳು ನಮ್ಮನ್ನು ಲೂಟಿಹೊಡೆದು ಈಗ ನಮ್ಮ ದೇಶದ ಮಕ್ಕಳು ಏನು ವಿದ್ಯಾಭ್ಯಾಸ ಮಾಡಬೇಕು ಅನ್ನುವುದನ್ನ ನಿರ್ಧರಿಸ್ತಾ ಇದ್ದಾರೆ. ಸೆಕ್ಯುಲರ್ ಶಿಕ್ಷಣ ಅನ್ನೋಹೆಸರಿನಲ್ಲಿ ಭಾರತದವರಿಗೆ ಭಾರತದ ಬಗ್ಗೆಯೇ ಬೇಸಿಕ್ ಆದ ತಿಳುವಳಿಕೆ ಇಲ್ಲದಂತೆ ಆಗುತ್ತಿದೆ.   ನಮಗೆ ಸ್ವಾತಂತ್ರ್ಯ ಬಂದೇ ಇಲ್ಲ. ಯಾಕಂದ್ರೆ ನಮ್ಮ ಜುಟ್ಟು ಇನ್ನೂ ಅವರ ಕೈಯಲ್ಲೇ ಇದೆ.

ಸಮಾಜದಲ್ಲಿ ಎಲ್ಲರಿಗೂ ಮೂರೂ ಅಗ್ನಿಗಳನ್ನು ಇಟ್ಟುಕೊಳ್ಳುವುದು ಕಷ್ಟ.  ಹಾಗಾಗಿ ಕೇವಲ ಗೃಹ್ಯಾಗ್ನಿ ಅಂದರೆ ಮದುವೆಯಲ್ಲಿ ಬಂದು ಒಂದು ಅಗ್ನಿಯನ್ನ ಮಾತ್ರ ಇಟ್ಟುಕೊಳ್ಳಬಹುದು. ಹಾಗೆಅಗ್ನಿಯನ್ನ ಇಟ್ಟುಕೊಂಡವರು ಬೆಂಗಳೂರಿನಲ್ಲಿ ಹತ್ತು ಹದಿನೈದು ಜನ ಇದ್ದಾರೆ. ಅದಕ್ಕೆ ಸ್ವಲ್ಪ ವೈದಿಕ ಮಂತ್ರಭಾಗಗಳ ಅಭ್ಯಾಸ ಮಾಡಬೇಕಾಗುತ್ತೆ. ಮತ್ತು ತಮ್ಮ ಹೆಂಡತಿಗೂ ಸ್ವಲ್ಪ ವೇದಾಭ್ಯಾಸಮಾಡಿಸಬೇಕಾಗುತ್ತೆ. ಪ್ರತೀ ದಿನ ಹತ್ತು ಹದಿನೈದು ನಿಮಿಷದ ಕೆಲಸವಷ್ಟೇ ಇರುತ್ತೆ.

ಇನ್ನು ಮದುವೆಯಾದವರೆಲ್ಲರೂ ಹೀಗೆ ಅಗ್ನಿ ಇಟ್ಟುಕೊಳ್ಳಲೇಬೇಕು, ಇಟ್ಟುಕೊಳ್ಳದವರೆಲ್ಲಾ ವೇಸ್ಟ್ ಫೆಲೋಗಳು ಅಂತ ಹೇಳುವುದು ನನ್ನ ಬರಹದ ಉದ್ದೇಶವಲ್ಲ. ನಾವು ಯಾವ ರೀತಿಯಜೀವನವನ್ನ ಲೀಡ್ ಮಾಡಬೇಕು ಅಂದುಕೊಳ್ಳುತ್ತೇವೋ ಅದಕ್ಕೆ ತಕ್ಕಂತೆ ಮದುವೆಯ ವಿಧಾನವನ್ನೂ ಬದಲಾಯಿಸಿಕೊಳ್ಳಬೇಕು. ಸುಮ್ನೇ ಎಲ್ಲರೂ ಮಾಡಿದ ಹಾಗೆಯೇ ಕುರಿಮಂದೆಯಂತೆ ಮದುವೆಮಾಡಿಕೊಳ್ಳಬಾರದು ಅಂತ ಹೇಳುವುದಷ್ಟೇ ನನ್ನ ಉದ್ದೇಶ. ವರ್ಣ, ಆಶ್ರಮ, ಆರ್ಥಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ ಮುಂತಾದ ಅನೇಕ ಸಂಗತಿಗಳನ್ನ ಪರಿಗಣನೆಗೆ ತೆಗೆದುಕೊಂಡು ನಮಗೆ ಯಾವರೀತಿಯ ಮದುವೆ ಸೂಕ್ತ? ಮತ್ತು ಯಾವ ರೀತಿಯ ಜೀವನ ಸರಿಯಾದದ್ದು ಅಂತ ನಿರ್ಧರಿಸಿಕೊಳ್ಳಬೇಕು. ಎಲ್ಲರಿಗೂ ಒಂದೇ ನಿಯಮಗಳು, ಒಂದೇ ದೇವರು, ಒಂದೇ ನಂಬಿಕೆ,, ಹಾಗೆ ಮಾಡದೇಇದ್ರೆ ನರಕಕ್ಕೆ ಹೋಗ್ತೀಯಾ,, ಹೀಗೆ ಮಾಡದೇ ಇದ್ರೆ ನರಕಕ್ಕೆ ಹೋಗ್ತೀಯಾ… ದೇವರು ಎಲ್ಲಾ ನೋಡ್ತಾ ಇದ್ದಾನೆ, ಅವನು ಘೋರ ಶಿಕ್ಷೆ ಕೊಡ್ತಾನೆ ಇತ್ಯಾದಿ ಇತ್ಯಾದಿ ಬೆದರಿಕೆಗಳನ್ನು religionಗಳು ಹಾಕ್ತವೆ. ನಮ್ಮಲ್ಲಿ religion ನ್ನೇ ಇಲ್ಲದೇ ಇರುವುದರಿಂದ ಅವರ ಹಾಗೆ ಎಲ್ಲರಿಗೂ ಸಮಾನ ನಿಯಮ, ಸಮಾನ ನಂಬಿಕೆ ಇಲ್ಲ. ಆಚರಣೆ ಮಾಡದೇ ಇದ್ದರೇ ಯಾಕೋ ನೀನು ಮಾಡ್ತಾ ಇಲ್ಲ ?ಅಂತ ಕೇಳುವ ಚರ್ಚ್ ಅಥವಾ ಮೌಲ್ವಿಗಳ ವ್ಯವಸ್ಥೆಯೂ ಇಲ್ಲ. ಎಲ್ಲವನ್ನೂ ಅಧ್ಯಯನ ಮಾಡಿ ನಮ್ಮ ವಿವೇಚನೆಗೆ ತಕ್ಕಂತೆ ಧರ್ಮ ಆಚರಿಸುವ ಸ್ವಾಂತ್ರ್ಯ ನಮ್ಮ ದೇಶದಲ್ಲಿತ್ತು. ಹಾಗಾಗಿ ಸ್ವಲ್ಪ ಧರ್ಮಶಾಸ್ತ್ರ ಅಧ್ಯಯನ ಮಾಡಿ. ನಿಮ್ಮ ಧರ್ಮ ಯಾವುದು ಮತ್ತು ಏನು ಅಂತ ಅರ್ಥ ಮಾಡಿಕೊಂಡು ನೀವೇ ಆಯ್ದುಕೊಳ್ಳಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!