Featured ಅಂಕಣ

ಅಂತರ್ಜಲಕ್ಕೆ ಬಲ ನೀಡುವ ಮಿಂಚಿನಡ್ಕ ಕಟ್ಟ

ನೀರು ಬರಿದಾಗುತ್ತಿದೆ. ಅಂತರ್ಜಲ ಬತ್ತುತ್ತಿದೆ. ಕೆರೆ ತೊರೆಗಳು, ಹೊಳೆ ನದಿಗಳು ನೀರಿನ ಹರಿವನ್ನು ಬೇಸಿಗೆಯಲ್ಲಿ ಬಹಳ ಬೇಗನೆ ನಿಲ್ಲಿಸಿಬಿಡುತ್ತವೆ. ಎಲ್ಲೆಲ್ಲೂ ನೀರಿಗೆ ತತ್ವಾರ. ಹೋದಲ್ಲಿ ಬಂದಲ್ಲಿ ನೀರಿನ ಸೆಲೆ ಬರಿದಾಯಿತು ಎಂಬ ಕೂಗು. ಬಾವಿ ಕೆರೆಗಳಲ್ಲಿ ಮತ್ತು ನದಿಗಳಲ್ಲಿ ನೀರಿಲ್ಲವೆಂದು ಸಿಕ್ಕ ಸಿಕ್ಕಲ್ಲಿ ಬೇಕುಬೇಕಾದಷ್ಟು ಕೊಳವೆ ಬಾವಿಗಳನ್ನು ಕೊರೆಸಿದರು. ಇದು ಸಮಸ್ಯೆಯನ್ನು ಬಿಗಡಾಯಿಸಿತೇ ಹೊರತು ಅಂತರ್ಜಲಕ್ಕೆ ಬಲನೀಡಲಿಲ್ಲ. ಕೊರೆದಷ್ಟು ಮತ್ತು ಆಳಕ್ಕೆ ಇಳಿದಷ್ಟು ನೀರು ಬಲಗೊಳ್ಳುತ್ತದೆಯೆಂಬ ಭ್ರಮೆಯನ್ನಷ್ಟೆ ತುಂಬಿಕೊಂಡವರು ತಾವು ನೀರಿನ ಭಂಡಾರವನ್ನೇ ಕೊಳ್ಳೆಹೊಡೆಯುತ್ತಿದ್ದೇವೆ ಎನ್ನುವುದನ್ನು ಅರಿತಿಲ್ಲ. ಒಂದಷ್ಟು ತಿಳಿದವರು ಇದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಎಲ್ಲ ಕಡೆ ಕಂಡು ಬರುವುದು ನೀರಿನ ಅತಿಬಳಕೆ ಮತ್ತು ದುರ್ಬಳಕೆ. ನೀರನ್ನು ಮಿತವಾಗಿ ಬಳಕೆಮಾಡುವ, ಹಾಳಾಗುವುದನ್ನು ತಪ್ಪಿಸುವ ಮತ್ತು ಅಂತರ್ಜಲಕ್ಕೆ ಬಲಕೊಡುವ ಪ್ರಯತ್ನಗಳು ನಡೆಯುವುದು ಬಹಳ ಕಡಿಮೆ. ನೀರಿಲ್ಲ ಎಂಬ ಕೂಗಿನಷ್ಟು ಗಟ್ಟಿಯಾಗಿ ನೀರಿನ ಮರುಪೂರಣವಾಗಲಿ, ನೀರಿಂಗಿಸುವ ಪ್ರಾಮಾಣಿಕ ಪ್ರಯತ್ನಗಳಾಗಲಿ ನಡೆಯುವುದು ಅತಿ ವಿರಳ. ಈ ದಿಸೆಯಲ್ಲಿ ಹರಿಯುವ ತೋಡು ಮತ್ತು ಕಿರುನದಿಗಳಿಗೆ ಅಡ್ಡವಾಗಿ ಕಟ್ಟುವ ಕಟ್ಟಗಳು ಬಹಳ ಒಳ್ಳೆಯ ಕಾರ್ಯ. ಇಲ್ಲಿ ಅಂತರ್ಜಲಮಟ್ಟವನ್ನು ಕಾಯುವ ಕೆಲಸ, ಅಂತರ್ಜಲಕ್ಕೆ ಬಲಕೊಡುವ ಕಾರ್ಯ ಮತ್ತು ಕೃಷಿಭೂಮಿಗೆ ನೀರುಣಿಸುವ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿರುತ್ತವೆ.

ಹೊಸ ಪರಿಕಲ್ಪನೆಯಲ್ಲ
ಕಟ್ಟಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೆ ನಮ್ಮ ಹಿರಿಯರು ತೋಡುಗಳಿಗೆ ಕಟ್ಟ ಕಟ್ಟಿಯೇ ಕೃಷಿ ನೀರಾವರಿ ಮಾಡುತ್ತಿದ್ದರು. ಅಂದಿನ ಕಟ್ಟಗಳು ಮಣ್ಣನ್ನು ಹದಬರಿಸಿ ನಿರ್ಮಿಸುವ ಮತ್ತು ಗುರುಜಿಗಳ ಸಹಾಯದಿಂದ ಕಟ್ಟುವಂತವುಗಳು. ಅದೆಲ್ಲ ಮಳೆನೀರಿಗೆ ಸುಲಭದಲ್ಲಿ ಜಗ್ಗುತ್ತಲೂ ಇರಲಿಲ್ಲ. ಕಾಲಸವೆದಂತೆ ಕಾರ್ಮಿಕ ಸಮಸ್ಯೆ, ಕೃಷಿಕರ ನಡುವೆ ಇರದ ಒಮ್ಮತ ಮತ್ತು ನೀರಿನ ಒರತೆಯಲ್ಲಿ ಉಂಟಾದ ವ್ಯತ್ಯಯಗಳಿಂದ ಕಟ್ಟಗಳ ಸಂಖ್ಯೆ ಬಹಳಷ್ಟು ಕಡಿಮೆಯಯಿತು. ಈಗಂತು ಬಹಳ ವಿರಳವಾಗಿ ಕಟ್ಟಗಳನ್ನು ನೋಡಬಹುದಷ್ಟೆ. ಈಗಿನ ಕಟ್ಟಗಳಿಗೆ ಮರಳು ತುಂಬಿಸಿದ ಚೀಲಗಳು, ಕಾಂಕ್ರೀಟಿನ ಹಲಗೆಗಳು ಮತ್ತು ಫೈಬರ್ ಶೀಟುಗಳನ್ನು ಉಪಯೋಗಿಸಿ ಹರಸಾಹಸದಿಂದ ನೀರನ್ನು ತಡೆಹಿಡಿಯುತ್ತಿದ್ದಾರೆ. ಒಬ್ಬ ಕೃಷಿಕ ತನ್ನ ತೋಟ ಮತ್ತು ಗದ್ದೆಯ ಉಪಯೋಗಕ್ಕಾಗಿ ಕಟ್ಟುವ ಕಟ್ಟಗಳು ಕಡಿಮೆಯಾಗಿ ಬಹುಕೃಷಿಕರು ಜತೆಸೇರಿಕೊಂಡು ಕಟ್ಟುವ ಕಟ್ಟಗಳು ಅಲ್ಲಿ ಇಲ್ಲಿ ಉಳಿದುಕೊಂಡಿವೆ. ಅಂತಹ ಕಟ್ಟಗಳ ಪೈಕಿ ಕಾಸರಗೋಡು ಜಿಲ್ಲೆಯ ನೀರ್ಚಾಲು ಸನಿಹದ ಮಿಂಚಿನಡ್ಕದ ಕಟ್ಟ ಪ್ರಮುಖವಾದುದು.

ಭೇಷ್ ಅನ್ನಿಸುವ ಸಾಧನೆ
ಮಿಂಚಿನಡ್ಕದ ತೋಡಿನ ಅಗಲ ಸುಮಾರು ಇಪ್ಪತ್ತರಿಂದ ಇಪ್ಪತ್ತೆರಡು ಮೀಟರ್. ಕಟ್ಟ ಕಟ್ಟುವ ಜಾಗದ ಇಕ್ಕೆಲಗಳಲ್ಲಿ ಮಿಂಚಿನಡ್ಕ ಸಹೋದರರಿಗೆ ಸೇರಿದ ತೋಟಗಳು. ಒಂದು ಬದಿಯಲ್ಲಿ ಗೋವಿಂದ ಭಟ್ಟರ ಕುಟುಂಬಕ್ಕೆ ಸೇರಿದ ತೋಟ. ಮತ್ತೊಂದೆಡೆ ಅವರ ಸಹೋದರ ಗೋಪಾಲಕೃಷ್ಣ ಭಟ್ಟರ ತೋಟ. ಡಿಸೆಂಬರ್ ತಿಂಗಳ ಆರಂಭದ ಹೊತ್ತಿಗೆ ಕಟ್ಟದ ಕೆಲಸ ಆರಂಭಿಸುವಾಗ ಮಿಂಚಿನಡ್ಕ ಮತ್ತು ಮೀಸೆಬೈಲಿನ ಒಟ್ಟು ಏಳು ಎಂಟು ಜನ ಕೃಷಿಕರು ಒಂದಾಗುತ್ತಾರೆ. ಅವರ ತೋಟಕ್ಕೆಲ್ಲ ಜೀವ ಜಲ ಕೊಡುವುದು ಇದೇ ಕಟ್ಟ.
02

ಮಿಂಚಿನಡ್ಕ ಕಟ್ಟದ ಇತಿಹಾಸ ತುಂಬ ಹಳೆಯದು. ಆರಂಭಕ್ಕೆ ಗುರುಜಿಗಳ ಸಹಾಯದಿಂದ ನೀರನ್ನು ತಡೆದು ತೋಟಕ್ಕೆ ಹಾಯಿಸುತ್ತಿದ್ದರು. ಮಣ್ಣು, ಬಾಳೆಯ ತ್ಯಾಜ್ಯಗಳು, ಮರದ ವಸ್ತುಗಳನ್ನು ಉಪಯೋಗಿಸಿ ಕಟ್ಟಕಟ್ಟುತ್ತಿದ್ದುದು ಕಾಲಸರಿದಂತೆ ಬದಲಾವಣೆ ಕಂಡಿದೆ. ಎಂಟುನೂರರಿಂದ ಒಂಭೈನ್ನೂರು ಚೀಲಗಳಲ್ಲಿ ಮರಳು ತುಂಬಿಸಿ ಆ ಚೀಲಗಳನ್ನೇ ಪೇರಿಸಿ ನೀರನ್ನು ತಡೆದು ನಿಲ್ಲಿಸುತ್ತಿದ್ದ ಕಾಲ ಬಹಳ ಹಿಂದಿನದಲ್ಲ. ಕೇವಲ ಎರಡು ವರ್ಷಗಳ ಹಿಂದಿನವರೇಗಿನ ಮಾತಿದು. ಚೀಲಗಳ ಸಂಗ್ರಹಕ್ಕೆ ಅಲೆದಾಡದ ಸ್ಥಳಗಳಿಲ್ಲ. ಎಲ್ಲವನ್ನೂ ಸಮಯಕ್ಕೆ ಒಗ್ಗೂಡಿಸುವುದು, ಕಾರ್ಮಿಕರನ್ನು ಹೊಂದಿಸುವುದು ಮತ್ತು ತಾಂತ್ರಿಕವಾಗಿಯೂ ಕೆಲಸ ಹಾದಿತಪ್ಪದಂತೆ ನಿಗಾವಹಿಸುವುದು. ಇದೆಲ್ಲ ಸಣ್ಣ ಸಂಗತಿಯಲ್ಲ. ಮಿಂಚಿನಡ್ಕದ ಮನೆಯವರ ಶ್ರಮ ಮತ್ತು ಕಾರ್ಯಮಾಡಿಯೇ ಸಿದ್ಧ ಎಂಬ ತೀರ್ಮಾನಕ್ಕೆ ಎಲ್ಲವೂ ಒಗ್ಗುತ್ತಿತ್ತು, ಬಗ್ಗುತ್ತಿತ್ತು. ಈಗಲೂ ಅದನ್ನು ಸಿದ್ಧ ಮಾಡಿ ತೋರಿಸುವ ಹೆಚ್ಚುಗಾರಿಕೆ ಬೆಳೆದು ಮುನ್ನಡೆಯುತ್ತಿದೆ. ಎರಡು ವರ್ಷದ ಹಿಂದಿನವರೇಗೆ ಸಾಕಷ್ಟು ಬವಣೆ, ಆತಂಕಗಳು ಇತ್ತು. ಪುತ್ತೂರಿನ ಯೆಳ್ತಿಮಾರ್ ಇಂಡಸ್ಟಿಸ್‍ನವರ ಫೈಬರ್ ಶೀಟನ್ನು ಮರಳಿನ ಚೀಲದ ಬದಲಿಯಾಗಿ ಉಪಯೋಗಿಸಿ ನೀರನ್ನು ಸಂಗ್ರಹಿಸಿಡುವ ಉಪಾಯ ಕಂಡುಕೊಂಡ ಮೇಲೆ ಖರ್ಚು ಮತ್ತು ಮಾನವ ದಿನಗಳಲ್ಲಿ ಸಾಕಷ್ಟು ಕಡಿತಗೊಂಡಿದೆ ಎನ್ನುತ್ತಾರೆ ಗೋವಿಂದ ಭಟ್. ಏಡಿಗಳ ಉಪಟಳವನ್ನು ಫೈಬರ್ ಶೀಟ್ ನಿಯಂತ್ರಿಸುತ್ತದೆ. ಯಾವುದಕ್ಕೂ ಬಗ್ಗದ ಈ ಶೀಟ್ ಕಟ್ಟ ನಿರ್ಮಾಣಕ್ಕೆ ಒದಗಿ ಬಂದದ್ದು ಸಕಾಲಿಕ.
ಗೋವಿಂದ ಭಟ್ಟರೆಂಬ ಭಗೀರಥ
ಮಿಂಚಿನಡ್ಕ ಕಟ್ಟ ಎಂದಾಗ ಮೊದಲು ನೆನಪಾಗುವುದು ಗೋವಿಂದ ಭಟ್ಟರು. ಇಳಿವಯಸ್ಸಿನ ಅವರಲ್ಲಿ ಇರುವುದು ಉತ್ಸಾಹ ಮತ್ತು ಕಟ್ಟವನ್ನು ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಯೇ ನಿರ್ಮಿಸಬೇಕೆಂಬ ಕಾಳಜಿ. ಭಟ್ಟರ ನಿರ್ದೇಶನವೇ ಇಲ್ಲಿ ಕೆಲಸ ಮಾಡುತ್ತದೆ. ಮಿಂಚಿನಡ್ಕ ಕಟ್ಟದಷ್ಟು ವಿಸ್ತಾರಕ್ಕೆ ನೀರನ್ನು ತುಂಬಿನಿಲ್ಲುವ ಕಟ್ಟಗಳು ಈ ಪರಿಸರದಲ್ಲಿ ಬೇರೆಲ್ಲೂ ಇಲ್ಲ ಎಂಬುದು ಹೆಮ್ಮೆಯ ಸಂಗತಿ. ಈ ಕಟ್ಟವೆಂದರೆ ಉಳಿದ ಹತ್ತುಹಲವು ಕಟ್ಟಗಳಿಗೆ ತಾಯಿಯಿದ್ದಂತೆ. ಯಾಕೆಂದರೆ ಈ ಕಟ್ಟದಲ್ಲಿ ನೀರು ತುಂಬಿದರೆ ಈ ತೋಡಿಗೆ ಕೆಳಭಾಗದಲ್ಲಿ ಕಟ್ಟುವ ಇತರ ಕಟ್ಟಗಳಿಗೆ ನೀರು ಹರಿದುಹೋಗುತ್ತಿರುತ್ತದೆ. ಈ ಕಟ್ಟದಲ್ಲಿ ನೀರು ತುಂಬಿತೆಂದರೆ ಒಂದು ಕಿಲೋಮೀಟರ್ ಉದ್ದಕ್ಕೆ ತೋಡಿನಲ್ಲಿ ನೀರೇ ನೀರು. ಈ ಕಟ್ಟಕ್ಕಿಂತ ಮೇಲೆ ಇರುವ ಮಡಿಪು ಕಟ್ಟದ ಪಂಚಾಂಗಕ್ಕೆ ತುಂಬಿನಿಂತ ನೀರು ಮುತ್ತಿಕ್ಕುತ್ತಿರುತ್ತದೆ. ಎರಡು ಮೂರು ಕಿಲೋಮೀಟರ್ ಸುತ್ತಳತೆಯಲ್ಲಿನ ಕೆರೆ ಬಾವಿಗಳಲ್ಲಿ ಈ ಕಟ್ಟದ ಪ್ರಭಾವದಿಂದ ನೀರಿನ ಒರತೆಗೆ ಭಯವಿಲ್ಲ.ಕಟ್ಟದಲ್ಲಿನ ನೀರನ್ನು ಬಳಕೆ ಮಾಡುವವರ ತೋಟಗಳು ಈಗ ಹಸಿರಿನಿಂದ ನಳನಳಿಸುತ್ತಿವೆ. ಉಳಿದ ಕಡೆಗಳ ಅಡಿಕೆ ತೋಟಕ್ಕೆ ಹೊಕ್ಕಾಗ ಆಗುವ ಬಿಸಿ ಹವೆ ಮತ್ತು ಬಾಡಿದ ಅನುಭವ ಮಿಂಚಿನಡ್ಕ ತೋಟದೊಳಗೆ ಇಲ್ಲ.
01

ಐವತ್ತೈದು ಅಡಿ ಉದ್ದ, ಎಂಟು ಅಡಿ ಅಗಲ ಮತ್ತು ಒಂದು ಎಂ.ಎಂ. ದಪ್ಪದ ಎಳ್ತಿಮಾರ್ ಫೈಬರ್ ಶೀಟ್‍ನ ತಳಭಾಗವನ್ನು ಸ್ವಲ್ಪ ಮಡಚಿ ಅದರ ಮೇಲೆ ಮೂರು ಮೂರು ಮರಳಿನ ಚೀಲವನ್ನು ಉದ್ದಕ್ಕೆ ಮತ್ತು ಅಡ್ಡಕ್ಕೆ ಪೇರಿಸಿಟ್ಟಿದ್ದಾರೆ. ಏಡಿಗಳ ಕಾಟವನ್ನು ಮರಳ ಚೀಲ ತಡೆಯುವುದರೊಂದಿಗೆ ನೀರಿನ ಒತ್ತಡ ಶೀಟ್ ಮೇಲೆ ಹೆಚ್ಚುವುದನ್ನೂ ನಿಯಂತ್ರಿಸುತ್ತದೆ. ಫೈಬರ್ ಶೀಟ್ ಲಂಬವಾಗಿ ನಿಲ್ಲಲು ಮರವನ್ನು ಬಳಸಲಾಗಿದೆ. ಫೈಬರ್ ಶೀಟ್‍ನ ಹಿಂಬದಿಯಲ್ಲಿ ಅಡಿಕೆ ಮರದ ಸಲಿಕೆಯನ್ನು ಒತ್ತೊತ್ತಾಗಿ ನಿಲ್ಲಿಸಿ ಅದರ ಹಿಂದೆ ಉದ್ದನೆಯ ಬಿದಿರು ಮತ್ತು ಮರವನ್ನು ತೋಡಿನ ಅಗಲಕ್ಕೆ ಎರಡೂ ಕಡೆ ಅಲ್ಲಾಡದಂತೆ ಕಾಂಕ್ರೀಟು ಕಟ್ಟೆಯಲ್ಲಿ ಕೊರೆದ ತೂತೊಳಗೆ ತೂರಿಸಿ ಜೋಡಿಸಲಾಗಿದೆ. ಈ ಉದ್ದನೆಯ ಮರಗಳು ನೀರಿನ ಒತ್ತಡಕ್ಕೆ ಹಿಂದೆ ಜಾರದಂತೆ ಬೇರೆ ಬೇರೆ ಅಳತೆಯ ಮರದ ತುಂಡುಗಳನ್ನು ಕಂಬದಂತೆ ಉಪಯೋಗಿಸಿ ಹಗ್ಗದಿಂದ ಬಲವಾಗಿ ಕಟ್ಟಲಾಗಿದೆ. ಶೀಟ್‍ನ ಮುಂಬಾಗದಲ್ಲೂ ಅಡಿಕೆ ಮರದ ಸಲಿಕೆಯನ್ನು ಉಪಯೋಗಿಸಿ ಶೀಟ್ ಎದುರು ಭಾಗಕ್ಕೆ ಬಾಗದಂತೆ ಜಾಗ್ರತೆವಹಿಸಲಾಗಿದೆ. ಒಂದು ತುದಿಯಲ್ಲಿ ಹೆಚ್ಚಾದ ನೀರು ಬಸಿದು ಹೋಗಲು ಬಸಿಗಾಲುವೆಯೂ ಇದೆ. ಶಿವರಾತ್ರಿಯವರೆಗೆ ಈ ಬಸಿಗಾಲುವೆಯಲ್ಲಿ ನೀರು ಕಟ್ಟದಿಂದ ಮಗುಚಿ ಹೋಗುತ್ತಿರುತ್ತದೆ. ಈ ಕಟ್ಟದಲ್ಲಿ ಆರಂಭದ ದಿನಗಳಲ್ಲಿ ಏಂಟು ಅಡಿಗಳವರೆಗೆ ನೀರು ತುಂಬಿನಿಂತಿತ್ತು. ಪ್ರಸ್ತುತ ಊರೆಲ್ಲ ನೀರಿಗೆ ಹಾಹಾಕಾರ ಹೆಚ್ಚುತ್ತಿರುವಾಗ ಈ ಕಟ್ಟದಲ್ಲಿ ನಾಲ್ಕಡಿ ನೀರು ನಳನಳಿಸುತ್ತಿಯೆಂದರೆ ಕಟ್ಟಗಳು ಎಷ್ಟು ಅನುಕೂಲಕರ ಎಂಬುದು ಮನದಟ್ಟಾಗಬಹುದು.

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಒಮ್ಮಿಂದೊಮ್ಮೆಗೆ ತೋಡಿನಲ್ಲಿ ನೀರಿನ ಹರಿವು ಹೆಚ್ಚಾಗಿ ಕಟ್ಟದ ಮೇಲೆ ಒತ್ತಡ ಅಧಿಕಗೊಳ್ಳುತ್ತಿತ್ತು. ನಮ್ಮ ಶ್ರಮವನ್ನೆಲ್ಲ ನೀರು ಕೊಚ್ಚಿಕೊಂಡು ಹೋಗಿಬಿಡುತ್ತದೊ ಎಂಬ ಭಯ ನಮ್ಮನ್ನು ಕಾಡಿತ್ತು. ಆದರೆ ದೇವರ ದಯೆ. ಯಾವ ತೊಡಕೂ ಆಗಲಿಲ್ಲ. ಕಟ್ಟ ಜಾರಿಹೋಗದೆ ಉಳಿದುಕೊಂಡಿತು ಎನ್ನುತ್ತಾರೆ ಗೋವಿಂದ ಭಟ್ಟರ ಮಗ ಶ್ಯಾಮ ಶರ್ಮ. ಕಟ್ಟಗಳಿಂದ ಆಗುವ ಲಾಭಗಳನ್ನು ಇವರು ಲೆಕ್ಕಾಚಾರ ಹಾಕುವ ರೀತಿಯೂ ಕುತೂಹಲಕಾರಿ. ಇವರು ಹೇಳುವಂತೆ ಕಟ್ಟದಲ್ಲಿ ನೀರು ತುಂಬಿತೆಂದರೆ ಎರಡೂ ಬದಿಯ ತೋಟಗಳಿಗೆ ಬೇಲಿಯೇ ಬೇಡ. ಆಚೀಚೆ ಸುತ್ತಿಸುಳಿದು ಬಿದ್ದ ಅಡಿಕೆ ತೆಂಗು ಮತ್ತು ಇತರ ಕೃಷಿ ಉತ್ಪನ್ನಗಳನ್ನು ದೋಚುವ ಮಂದಿಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಕಟ್ಟದ ನೀರು ತುಂಬಿ ನಿಂತ ತೋಡಿನ ಇಕ್ಕೆಲಗಳಲ್ಲಿನ ತೆಂಗುಗಳಲ್ಲಿ ಫಸಲೇ ಫಸಲು. ಸದಾ ನೀರು ಸಿಗುವುದರಿಂದ ಎಲ್ಲ ಮಿಡಿಗಳು ಫಸಲಾಗಿ ಕೈಸೇರುತ್ತದೆ ಎನ್ನುತ್ತಾರವರು.
03

ಸರಕಾರವೇಕೆ ಕಣ್ಣುಬಿಡುತ್ತಿಲ್ಲ?
ಅಂತರ್ಜಲಕ್ಕೆ ಇಷ್ಟೊಂದು ಬಲನೀಡುವ ಇಂತಹ ಕಟ್ಟಗಳನ್ನು ಕಟ್ಟಿಕೊಳ್ಳುವುದು ಇಂದಿನ ದಿನಗಳಲ್ಲಿ ಸುಲಭವಿಲ್ಲ. ಕಾರ್ಮಿಕರ ಅಭಾವ. ಒದಗುವ ಕಾರ್ಮಿಕರಲ್ಲಿ ಇಲ್ಲದ ಅನುಭವ. ದುಬಾರಿ ಸಂಬಳ. ಹೇಳಿದ ದಿನಕ್ಕೆ ಕೆಲಸಕ್ಕೆ ಹಾಜರಾಗದ ಅಶಿಸ್ತು. ಹೀಗೆ ಹತ್ತು ಹಲವು ಕಾರಣಗಳು ಕಟ್ಟದ ಕೆಲಸವನ್ನು ಹೈರಾಣಗೊಳಿಸುತ್ತವೆ. ನಾಲ್ಕಾರು ಕೃಷಿಕರು ಜತೆಸೇರಿ ನಿರ್ಮಿಸುವ ಕಾರ್ಯ ಕೂಡ ಹಾಗೆಯೇ. ಎಲ್ಲರ ಮನಸ್ಸು, ಶ್ರಮ ಮತ್ತು ಸಹಕಾರ ಒಂದೇ ತರ ಇರದು. ಭಾರ ಹೊತ್ತವರೇ ಹೊರುವ ಬವಣೆ ಇಲ್ಲೆಲ್ಲ ಸಹಜ. ಕೇವಲ ಒಂದು ಕಟ್ಟ ಅಂತರ್ಜಲ ಮಟ್ಟವನ್ನು ಕಿಲೋಮೀಟರುಗಳಷ್ಟು ವಿಸ್ತಾರಕ್ಕೆ ಹೆಚ್ಚಿಸುತ್ತದೆಯೆಂದಾದರೆ ಹಳ್ಳಿಗಳಲ್ಲಿ ಹರಿವ ಅದಷ್ಟೂ ಹಳ್ಳ, ತೋಡು ಮತ್ತು ಕಿರುನದಿಗಳಿಗೆ ಕಟ್ಟಕಟ್ಟಿ ನೀರು ತುಂಬಿಸಬಾರದೇಕೆ? ನೀರಿನ ಅಭಾವ ಬಂದಾಗ ಕೊಳವೆ ಬಾವಿಯೊಂದೇ ಅಂತಿಮ ಪರಿಹಾರವಾಗುತ್ತಿರುವುದೇ ಸದ್ಯದ ದುರಂತ.

ಸರಕಾರಗಳು ಇಂತವುಗಳನ್ನು ಸವಾಲಾಗಿ ಸ್ವೀಕರಿಸಬೇಕಿದೆ. ಇಂತಹ ಕಟ್ಟ ಕಟ್ಟಲು ಉದ್ಯೋಗ ಖಾತರಿಯವರನ್ನು ನಿಯೋಜಿಸುವುದರಿಂದ ಹಿಡಿದು ಆರ್ಥಿಕವಾಗಿಯೂ ನೆರವು ನೀಡುವಂತಾಗಬೇಕು. ಮರಳ ಚೀಲ, ಮರಗಳ ಬದಲು ಹೆಚ್ಚು ತಂತ್ರಜ್ಞಾನ ಬಳಕೆ ಮಾಡಿ ಈ ಕೆಲಸವನ್ನು ಇನ್ನೂ ಸುಲಭ ಮಾಡುವ ದಾರಿ ಹುಡುಕಬೇಕು. ಸ್ಥಳೀಯ ಪಂಚಾಯತುಗಳು ಇದರಲ್ಲಿ ಮುತುವರ್ಜಿವಹಿಸಬಾರದೇಕೆ? ಜನಪ್ರತಿನಿಧಿಗಳಿಗೆ ಇದೊಂದು ಅಗತ್ಯ ಕಾರ್ಯ ಅಂತ ಅನ್ನಿಸುತ್ತಿಲ್ಲ ಯಾಕೆ? ಅಂತರ್ಜಲವನ್ನು ಕಾಪಾಡಿ ಅದರ ಬಲವನ್ನು ಹೆಚ್ಚಿಸಲು ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡದೆ ಹೋದರೆ ನಮ್ಮ ನೆಲಗಳೆಲ್ಲ ಮರುಭೂಮಿಯಾಗಲು ಹೆಚ್ಚುಸಮಯ ಬೇಡ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶಂ.ನಾ. ಖಂಡಿಗೆ

ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!