ಪ್ರವಾಸ ಕಥನ

ಕಾಶಿಯಾತ್ರೆಯ ಅನುಭವ-8

ನಾನು ಉಳಿದುಕೊಂಡಿದ್ದ ಕರಪಾತ್ರಿಧಾಮದಲ್ಲಿ 75 ವರ್ಷ ವಯಸ್ಸಿನ ಅಜ್ಜಿಯೊಬ್ಬಳಿದ್ದಳು. ನಾನು ಏಳುವುದಕ್ಕೂ ಮುಂಚೆಯೇ ಮೂರೂವರೆಗೆ ನದಿಗೆ ಹೋಗಿ ಸ್ನಾನ ಮುಗಿಸಿ ಬಂದು ಒಂದಿಷ್ಟು ಜಪಗಳನ್ನ, ಸೂರ್ಯನಮಸ್ಕಾರಗಳನ್ನ ಮಾಡ್ಕೊಳ್ತಾ ಇದ್ಳು. ರಾತ್ರಿ ಎಲ್ಲರ ಊಟ ಮುಗಿದ ಮೇಲೆ ನಾನು ಒಂದು ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು ಮೂಲೆಯಲ್ಲಿ ಒಬ್ಬನೇ ಕುಳಿತು ಮೌನವಾಗಿ ಊಟ ಮಾಡ್ತಿದ್ದೆ. ಅದನ್ನು ಗಮನಿಸಿದ ಅಜ್ಜಿ “ದೂರದಲ್ಲಿ ಒಬ್ಬನೇ ಯಾಕೆ ಕೂತು ಉಣ್ತೀಯಾ.. ನಾಳೆಯಿಂದ ನಾನು ಬಡಿಸ್ತೀನಿ ನಿನಗೆ” ಅಂತ ಹೇಳಿದಳು. ನಾನು ಒಂದೇ ಸಾರಿ ಬಡಿಸಿಕೊಂಡು ಅದನ್ನೇ ಹದಿನಾರು ತುತ್ತು ಮಾಡಿಕೊಂಡು ತಿಂತಿದ್ದೆ. ‘’ಮತ್ತೆ ಮತ್ತೆ ಬಡಿಸಿಕೊಳ್ಳೋ ಅಗತ್ಯ ಇಲ್ಲ’’ ಅಂತ ಅವಳಿಗೆ ನನ್ನ ನಿಯಮ ಹೇಳಿಕೊಂಡೆ. ಮೌನವಾಗಿ ಒಂದೊಂದು ತುತ್ತಿಗೂ ತಾರಕ ನಾಮ ಮನಸ್ಸಿನಲ್ಲಿ ಹೇಳಿಕೊಂಡು ಹದಿನಾರು ತುತ್ತು ಮಾತ್ರ ತಿಂತೀನಿ. ಪಂಕ್ತಿಯಲ್ಲಿ ಕುಳಿತರೆ ಯಾರೋ ಮಾತಾಡಿಸ್ತಾರೆ, ಬಲವಂತ ಮಾಡಿ ಹೆಚ್ಚು ಬಡಿಸ್ತಾರೆ. ಪ್ರೀತಿ ತೋರಿಸುವವರಿಗೆ ನೋವು ಮಾಡಬಾರದು. ತಟ್ಟೆಗೆ ಬಡಿಸಿದ್ದನ್ನ ಚೆಲ್ಲಬಾರದು. ಈ ಧರ್ಮ ಸಂಕಟದಿಂದ ಪಾರಾಗಲಿಕ್ಕೆ ದೂರ ಇರೋದೇ ಯೋಗ್ಯ’’ ಅಂದೆ. ಆಕೆ ಮಾರನೇ ದಿನದಿಂದ ಎಲ್ಲರ ಊಟಕ್ಕಿಂತ ಮೊದಲೇ ನನಗಾಗಿ ಒಂದಿಷ್ಟು ಅನ್ನವನ್ನ ಉಚ್ಛಿಷ್ಟ ಆಗದ ಹಾಗೆ ಎತ್ತಿಟ್ಟು ನನಗೆ ಬಡಿಸುವುದಕ್ಕೆ ಕಾಯ್ತಿದ್ಳು. ನಾನು ಊಟ ಮಾಡುವಾಗ ದೂರ ನಿಂತು ನನ್ನನ್ನು ಯಾರೂ ಮಾತಾಡಿಸದಂತೆ ಕಾವಲು ಕಾಯ್ತಿದ್ಳು. ನಾನು ಬೆಳಗಿನ ಜಪಗಳನ್ನ ಮುಗಿಸಿ ರೂಮಿಗೆ ಬಂದ ಕೂಡಲೇ ಉದ್ದಕ್ಕೆ ಕಾಲಿಗೆ ಬೀಳ್ತಿದ್ಳು. “ಅಜ್ಜಿ ನಾನು ನಿನ್ನ ಮೊಮ್ಮಗನ ವಯಸ್ಸಿನವನು. ನನ್ನ ಕಾಲಿಗೆ ಬೀಳಬೇಡ” ಅಂತ ಹೇಳಿದ್ದಕ್ಕೆ “ ಬಮ್ಮನ್ ತೊ, ಬಮ್ಮನ್ ಹೋತಾ ಹೈ. ಉಸ್ ಮೆ ಛೊಟಾ ಬಡಾ ಕುಛ್ ನಹೀಂ’’ ಅಂತ ದಬಾಯಿಸ್ತಿದ್ಳು. ನನಗೆ ಕಾಲಿಗೆ ಬೀಳಿಸಿಕೊಳ್ಳುವುದು ಸುತಾರಾಂ ಇಷ್ಟವಿಲ್ಲದಿದ್ದರೂ ಆಕೆಯ ಶ್ರದ್ಧಾ ಭಂಗ ಮಾಡುವ ಧೈರ್ಯ ನನಗೆ ಬರಲಿಲ್ಲ.

ಆಕೆ ಸರ್ಕಾರಿ ಕೆಲಸದಿಂದ Retire ಆದವಳು. ಆಕೆಯ ಮಕ್ಕಳೆಲ್ಲ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರಂತೆ. ತನ್ನ ಪೆನ್ಶನ್ ಹಣವನ್ನು ಕರಪಾತ್ರೀ ಧಾಮಕ್ಕೆ ಕೊಡುತ್ತಾ ಅಲ್ಲೇ ಏಕಾಂಗಿಯಾಗಿ ಇದ್ದಾಳೆ. “ಮೊಮ್ಮಕ್ಕಳನ್ನ ಆಡಿಸಿಕೊಂಡು ಹಾಯಾಗಿ ಇರಬಹುದಿತ್ತಲ್ಲ” ಅಂದದ್ದಕ್ಕೆ ‘’ನನ್ನ ಮಕ್ಕಳನ್ನ ಆಡಿಸಬೇಕಾದ ವಯಸ್ಸಲ್ಲಿ ಆಡಿಸಿದೀನಿ. ಈಗ ಅವರು ತಮ್ಮ ಮಕ್ಕಳನ್ನ ತಾವು ಆಡಿಸಿಕೊಳ್ಳಲಿ. ನನಗ್ಯಾಕೆ ಅದೆಲ್ಲ. ಮಾಡಿದ್ದನ್ನೇ ಮತ್ತೆ ಮತ್ತೆ ಮಾಡ್ತಾ ಕೂರ್ಬೇಕಾ..?” ಅಂತ ಕೇಳಿದಳು. ಆ ಒಂದು ಮಾತಿನಿಂದಲೇ ಆಕೆಯ ಪರಿಚಯ ನನಗೆ ಆಗಿ ಹೋಯ್ತು. ಮತ್ಯಾವತ್ತೂ ಆಕೆಯ ಬಳಿ ವೈಯಕ್ತಿಕ ಸಂಗತಿಗಳನ್ನ ಮಾತಾಡಲಿಲ್ಲ.

ಆರನೇಯ ದಿನ ಯಾರ ಜೊತೆಗೂ ಮಾತು ಬೇಡ ಮತ್ತು ಎಲ್ಲಿಗೂ ಹೋಗುವುದು ಬೇಡ ಅಂತ ನಿರ್ಧಾರ ಮಾಡಿಕೊಂಡೆ. ಯಾರ ಜೊತೆಗೂ ಮಾತಿಲ್ಲದೇ, ಯಾವುದರ ಬಗ್ಗೆಯೂ ತೀವ್ರವಾಗಿ ಆಲೋಚಿಸದೇ ನೆನಪುಗಳಿಗೂ ಅವಕಾಶ ಕೊಡದೇ at least ಮೂರು ದಿನಗಳನ್ನಾದರೂ ಕಳೆಯೋದು ನನ್ನ ಉದ್ದೇಶವಾಗಿತ್ತು. ಮುಂಜಾನೆ ಮತ್ತು ಸಂಜೆಯಂತೂ ಆಲೋಚನೆಗಳಿಗೆ ಅವಕಾಶವಿಲ್ಲದಷ್ಟು ಜಪಗಳನ್ನ ಹಮ್ಮಿಕೊಂಡಿದ್ದೆ. ಸುಮ್ಮನೇ ಸೂರ್ಯನನ್ನ, ಆಕಾಶವನ್ನ ದಿಟ್ಟಿಸುತ್ತಾ ಮಧ್ಯಾಹ್ನಗಳನ್ನ ಕಳೀತಿದ್ದೆ. ಸೂರ್ಯನ ಉಪಾಸನೆ, ಅಗ್ನಿಯ ಉಪಾಸನೆ ಇವೆರಡು ಭಾರತದವರ ತಿಳುವಳಿಕೆಯ ಆಳವನ್ನು ತಿಳಿಸೋ ವಿಷಯಗಳು.

“ಸ ಯಶ್ಚಾಯಂ ಪುರುಷೆ- ಯಸ್ಚಾಸಾವಾದಿತ್ಯೆ- ಸ ಏಕಃ”

ಯಾವುದು ಈ ಮಾನವ ಶರೀರದಲ್ಲಿದೆಯೋ, ಯಾವುದು ಆದಿತ್ಯಮಂಡಲವಾಗಿ ಬೆಳಗುತ್ತಿದೆಯೋ- ಅದು ಒಂದೇ ಆಗಿದೆ.

ಅದನ್ನ ಅನುಸಂಧಾನ ಮಾಡಲಿಕ್ಕಾಗಿಯೇ ಸಂಧ್ಯಾವಂದನೆಯಲ್ಲಿ ಅರ್ಘ್ಯ ಬಿಟ್ಟಾದ ಮೇಲೆ, “ಅಸಾವಾದಿತ್ಯೋ ಬ್ರಹ್ಮ’’ ( ಈ ಆದಿತ್ಯನೇ ಬ್ರಹ್ಮವಾಗಿದೆ) ಅನ್ನೋ ಸ್ಮರಣೆ ಮಾಡೋದು. ಆ ಕಾಶಿಯ ವಿಶ್ವನಾಥನೂ ಅವನೇ. ರುದ್ರಾಧ್ಯಾದಯಲ್ಲಿ “ಅಸೌ ಯಃ ತಾಮ್ರೋ, ಅರುಣ ಉತ ಬಭ್ರುಃ ಸುಮಂಗಲಃ” ಅನ್ನೋ ವಾಕ್ಯವೂ ಅದನ್ನೇ ಹೇಳುತ್ತೆ. ಜಗತ್ತಿಗೆ ಕಾರಕವಾದ ಬ್ರಹ್ಮತತ್ವ ನಸುಕಿನಲ್ಲಿ “ತಾಮ್ರ’’ನಾಗಿ, ಆಮೇಲೆ “ಅರುಣ”ನಾಗಿ ಮಧ್ಯಾಹ್ನದ ಹೊತ್ತಿಗೆ ಸುಮಂಗಲಮಯವಾದ “ಬಭ್ರು”ವಾಗಿ ಅವನೇ ಬೆಳಗ್ತಾನೆ.

“ಅಸೌ ಯೋSವ ಸರ್ಪತಿ ನೀಲಗ್ರೀವೋ ವಿಲೋಹಿತಃ” ಮುಂದೆ ಸರಿದು ನೀಲಗ್ರೀವನಾಗ್ತಾನೆ. ಆಮೇಲೆ ವಿಲೋಹಿತನಾಗ್ತಾನೆ. “ಉತೈನಂ ಗೋಪಾಃ ಅದೃಶನ್” ಅಂತಹ ಭಗವಂತನ ಆ ಐದೂ ರೂಪಗಳನ್ನ ಪ್ರತಿದಿನವೂ ಗೋಪರು, ಅಂದರೆ ದನ ಕಾಯುವವರು ನೋಡ್ತಲೇ ಇದ್ದಾರೆ. “ಅದೃಶನ್ ಉದಹಾರ್ಯಃ” (ಬಾವಿಗಳಿಂ, ಕೆರೆಯಿಂದ) ನೀರು ಹೊತ್ತು ತರುವ ಹೆಂಗಸರುಗಳೂ ನೋಡುತ್ತಿದ್ದಾರೆ. ನಿತ್ಯ ಭಗವಂತ ಕಾಣಿಸುತ್ತಲೇ ಇದ್ದಾನೆ.“ಉತೈನಂ ವಿಶ್ವಾ ಭೂತಾನಿ ಸ ದೃಷ್ಟಃ” ಜಗತ್ತಿನ ಎಲ್ಲಾ ಪ್ರಾಣಿ ಪಕ್ಷಿಗಳೂ ಕೂಡ ನಿತ್ಯ ಆ ಭಗವಂತನನ್ನ ನೋಡುತ್ತೆಲೇ ಇವೆ. “ಸ ದೃಷ್ಟಃ” ಅವನು ನೋಡಲ್ಪಡುತ್ತಲೇ ಇದ್ದಾನೆ

ಬೆಂಗಳೂರಿನಲ್ಲಿ ನಾನು ಯಾವ ದೇವಸ್ಥಾನಕ್ಕೂ ಹೋಗುವುದಿಲ್ಲ. ಆದರೆ ಪ್ರತೀ ದಿನ ಆಕಾಶದಲ್ಲಿ ಭಗವಂತ ಕಾಣಿಸ್ತಲೇ ಇದ್ದಾನೆ. ಹಾಗಾಗಿ ನಾನು ದೇವರನ್ನ ನೋಡಲಿಕ್ಕೆ, ದೇವಸ್ಥಾನ ನೋಡಲಿಕ್ಕೆ ಕಾಶಿಗೆ ಬಂದವನಲ್ಲ. ಇಲ್ಲಿನ ಸ್ಥಳ ಪುರಾಣ, ಇತಿಹಾಸಗಳನ್ನ ತಿಳಿದುಕೊಳ್ಳುವುದರಲ್ಲಿಯೂ ನನಗೆ ಆಸಕ್ತಿಯಿರಲಿಲ್ಲ. ಶಾಪಿಂಗ್ ಮಾಡಿಕೊಂಡು ಒಂದೆರಡು ಫೋಟೋ ತೆಗೆದುಕೊಂಡು ಹೋಗುವುದಕ್ಕೂ ಅಲ್ಲ. ಸುಮ್ಮನೇ ನನ್ನನ್ನು ನಾನು observe ಮಾಡಿಕೊಳ್ಳಲಿಕ್ಕೆ, ಸ್ವಲ್ಪ ಮಾನಸಿಕ ಮತ್ತು ದೈಹಿಕ ಆರೋಗ್ಯ ಸರಿ ಮಾಡಿಕೊಳ್ಳಲಿಕ್ಕೆ ಬಂದಿದ್ದೆ. ನನ್ನನ್ನು ನಾನು repair ಮಾಡಿಕೊಳ್ಳಲಿಕ್ಕೆ ಬಂದಿದ್ದೇನೆ. ಉಪವಾಸ, ಜಪ, ಮೌನ, ಏಕಾಂತ, ಕ್ರಿಯಾಯೋಗ ಇವೆಲ್ಲವುಗಳನ್ನ ಪ್ರಯೋಗ ಮಾಡಿ ಹನ್ನೊಂದು ದಿನ ಕಳೆದೆ. ಉಂಟಾದ ಪ್ರಯೋಜನ ಏನು ಅಂತ ನೊಡಿಕೊಂಡೆ. ದೇಹ ಆರೋಗ್ಯವಾಗಿದೆ, ಮನಸ್ಸು ಸ್ಥಿರವಾಗಿದೆ ಅನ್ನೋದು ಬಿಟ್ಟರೆ ಬೇರೇ ಏನೂ ತಿಳಿಯಲಿಲ್ಲ.

ಕಳೆದು ಹನ್ನೊಂದು ದಿನಗಳಿಂದ ಪ್ರತೀ ದಿನ ಎರಡು ಬಾರಿ ಕ್ರಿಯೆ ಮಾಡಿದ್ದರಿಂದ ಶರೀರದ ನಾಡಿಗಳು ಸ್ಥಿರವಾಗಿದ್ದವು. ಮೂಗಿನ ಬಳಿ ಬೆರಳು ಇಟ್ಟುಕೊಂಡು ನೋಡಿದೆ. ಇಳಾ-ಪಿಂಗಳಾ ಎರಡೂ ಸಮಾನವಾಗಿ, ದೀರ್ಘವಾಗಿ ಮತ್ತು ಸ್ಥಿರವಾಗಿ ಉಸಿರಾಡ್ತಾ ಇದ್ವು.

ದಿಲ್ಲಿಯ airport ಗೆ ಬಂದಿಳಿದ ಮೇಲೆ ನನ್ನ ಮೊಬೈಲ್ ಫೋನಿನ ನೆನಪಾಯ್ತು. ಬ್ಯಾಗಿನ ಬುಡದಿಂದ ಅದನ್ನು ತೆಗೆದು ಚಾರ್ಜ್ ಮಾಡಿದೆ. ಮನೆ ಬಾಡಿಗೆಯ ಚೆಕ್ಕು, ಸಾಲದ ಕಂತುಗಳ ಚೆಕ್ಕುಗಳು ಎಲ್ಲಾ ಬ್ಯಾಂಕಿನಿಂದ ಡೆಬಿಟ್ ಆಗಿದ್ದ ಮೆಸೇಜುಗಳು ರಪ-ರಪನೇ inbox ಗೆ ಬಂದು ಬಿದ್ದು ಬ್ಯಾಂಕ್ ಬ್ಯಾಲೆನ್ಸ್ ಬತ್ತಿ ಹೋಗಿದ್ದನ್ನು ತೋರಿಸುತ್ತಿದ್ವು. ಬೆಂಗಳೂರಿಗೆ ಒಯ್ಯುವ ಫ್ಲೈಟಿಗೆ ಕಾಯುತ್ತ ಕುಳಿತಾಗ ಇನ್ನು ಮುಂದೆ ಜೀವನದಲ್ಲಿ ಮಾಡಲೇಬೇಕಾದ/ಮಾಡಲೇಬಾರದ ಕೆಲಸಗಳು ಸ್ಪಷ್ಟವಾಗತೊಡಗಿದ್ದವು. ಬ್ಯಾಗಿನಿಂದ ಡೈರಿ ತೆಗೆದು ಬರೆದುಕೊಳ್ಳತೊಡಿಗಿದೆ. ಅಮ್ಮನನ್ನ ನಾರಾಯಣ ಹೃದಯಾಲಯಕ್ಕೆ ಮತ್ತೆ ಒಯ್ಯಬೇಕು. ಅಪ್ಪನ ಕಣ್ಣಿನ ಆಪರೇಷನ್ ಮಾಡಿಸಬೇಕು. ಆಫೀಸಿಗೆ ಹೊಸ ಪ್ರಿಂಟರ್ ತರಿಸಬೇಕು, ಮೂರ್ಖರ ಜೊತೆಗೆ ವಾದ ಮಾಡಬಾರದು, ನಮ್ಮನ್ನ ದ್ವೇಷಿಸುವವರನ್ನೂ ಕರುಣೆಯಿಂದ ಕಾಣಬೇಕು, ಯಾರನ್ನೂ ದ್ವೇಷಿಸಬಾರದು, ಹೀಗೆ .. ಹನುಂತನ ಬಾಲದ ಹಾಗೆ ಲಿಸ್ಟ್.. ಬೆಳೀತಾ ಹೋಯ್ತು. ಬರೆದು ಮುಗಿಸಿ ಫೋನಿನಲ್ಲೇ ಇದ್ದ ಭಗವದ್ಗೀತೆಯ PDF ಅನ್ನ ತೆಗೆದು ಒಂದು ಸುತ್ತು ಕಣ್ಣಾಡಿಸಿದೆ. ಎಷ್ಟು ಅದ್ಭುತ ಈ ಗೀತೆ, ಎಷ್ಟು ಸಾರಿ ಓದಿದರೂ ಪ್ರತೀ ಬಾರಿ ಕೆನ್ನೆಯ ಮೇಲೆ ಬಾರಿಸಿ ಬುದ್ಧಿ ಹೇಳುತ್ತೆ. ಗೀತೆಯಿಂದ ಕೆನ್ನೆಗೆ ಬಾರಿಸಿಕೊಂಡು ಮುಗುಳ್ನಗುವಷ್ಟರಲ್ಲೇ ಫ್ಲೈಟಿನ ಸಮಯವಾಗಿಹೋಗಿತ್ತು.

– ಮುಗಿಯಿತು

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!