Featured ಪರಿಸರದ ನಾಡಿ ಬಾನಾಡಿ

ಕವಲುತೋಕೆಯ ಅವಿಶ್ರಾಂತ ಬದುಕು – 2

ಕವಲುತೋಕೆಯಲ್ಲಿನ ವಿವಿಧ ಪ್ರಭೇದಗಳು

ಭಾರತದಲ್ಲಿ 15 ಪ್ರಭೇದದ ಕವಲುತೋಕೆಗಳು ಲಭ್ಯ ಎಂದು ನೀವೀಗ ಬಲ್ಲಿರಿ (ಅಂಬರ ಗುಬ್ಬಿಯ ಅವಿಶ್ರಾಂತ ಬದುಕು).  ಅವುಗಳಲ್ಲಿ ಕರ್ನಾಟಕದ ಸ್ವಾಲೋ ಮತ್ತು ಮಾರ್ಟೀನ್‍ಗಳ ಬಗೆಗೆ ನಾನಿಲ್ಲಿ ವಿವರಿಸುವೆ.

ನಮ್ಮ ರಾಜ್ಯದಲ್ಲಿ ಐದು ಪ್ರಭೇದದ ಸ್ವಾಲೋಗಳು ಲಭ್ಯ.

  1. Barn swallow(Hirundo rustica) ಕವಲುತೋಕೆ
  2. Red-rumped swallow(Cecropis daurica) ಕೆಂಪು ಪೃಷ್ಠದ ಕವಲುತೋಕೆ
  3. Streak-throated swallow(Petrochelidon fluvicola) ಗೀರುಕತ್ತಿನ ಕವಲುತೋಕೆ
  4. Wire-tailed swallow(Hirundo smithii) ತಂತಿ ಬಾಲದ ಕವಲುತೋಕೆ
  5. Dusky crag martin(Ptyonoprogne concolor)  ಕಂದುಗಪ್ಪು ಕಮರಿತೋಕೆ

ಈ ಐದೂ ಅಂಬರಗುಬ್ಬಿಗಳಲ್ಲಿ Barn swallow (ಕವಲುತೋಕೆ) ಬಿಟ್ಟರೆ ಉಳಿದವೆಲ್ಲಾ ಸ್ಥಾನೀಯ ಹಕ್ಕಿಗಳು. Barn swallow ನಮಗೆ ಚಳಿಗಾಲದ ಅತಿಥಿ. ನಮ್ಮ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ವಿಶೇಷ ಗೌರವವಿರುವುದರಿಂದ ನಾನು ಮೊದಲು ಈ Barn swallow ಬಗೆಗೆ ತಿಳಿಸುವೆ.

  1. Barn swallow (ಕವಲುತೋಕೆ)

ಆಗಸ್ಟ್, ಸೆಪ್ಟೆಂಬರ್ ತಿಂಗಳು, ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗುವ ಸಮಯ. ಇದು ತನಕ ಕೋಶಾವಸ್ಥೆಯಲ್ಲಿದ್ದ ಲಕ್ಷೋಪಲಕ್ಷ ಕೊಡತಿ ಕೀಟಗಳು (Dragonfly) ಅಂಬರದಲ್ಲಿ ಹಾರುತ್ತಿರುತ್ತವೆ. ಎಲ್ಲಿ ನೋಡಿದರಲ್ಲಿ ಕೊಡತಿಕೀಟಗಳು. ಮಂಗೋಲಿಯಾದಿಂದಲೂ ಕೆಲ ಕೊಡತಿಕೀಟಗಳು ಈ ಸಮಯದಲ್ಲಿ ವಲಸೆ ಬರುತ್ತವಂತೆ.

Ruddymarsh skimmer male

Ruddymarsh skimmer male

ಅಂಬರದಲ್ಲಿ ಇಂತಿಪ್ಪ ಕೀಟಗಳನ್ನು ಸಮತೋಲನದಲ್ಲಿಡಲು ಅಂಬರ ಗುಬ್ಬಿಗಳು ನಮ್ಮಲ್ಲಿಗೆ ಬರುತ್ತವೆ. ಈ ಅಂಬರಗುಬ್ಬಿಗಳು ಯುರೋಪ್ ಮತ್ತು ಹಿಮಾಲಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಜಪಾನ್, ಉತ್ತರ ಆಫ್ರಿಕಾ, ಉತ್ತರ ಅಮೇರಿಕಾದಲ್ಲೂ ಇವು ಲಭ್ಯ. ಆಗಷ್ಟ್ ಕೊನೆಯಲ್ಲಿ ನಮ್ಮಲ್ಲಿಗೆ ಇವು ಲಕ್ಷಗಟ್ಟಲೆ ಸಂಖೆಯಲ್ಲಿ ಆಗಮಿಸುತ್ತವೆ. ಒಂದೊಂದು ಹಿಂಡಿನಲ್ಲಿ ಕನಿಷ್ಠ 50 ಹಕ್ಕಿಗಳನ್ನು ನಾವು ಕಾಣಬಹುದು. ದಿನವೊಂದಕ್ಕೆ 300-400 ಕೀಟಗಳನ್ನು ಹಾರಿಕೊಂಡೇ ಭಕ್ಷಿಸುತ್ತವೆ. ಪಿಕಳಾರ ಗಾತ್ರದ ಗಾಢ ನೀಲಿ ಹೊಳಪಿನ ಹಕ್ಕಿ ಇದು. ಹಣೆ ಮತ್ತು ಗಂಟಲು ಕೆಂಗಂದು ಬಣ್ಣದಲ್ಲಿದ್ದು ಬಿಳಿ ಕೆಳಮೈ ಹೊಂದಿರುತ್ತದೆ. ಆಳವಾಗಿ ಸೀಳಿದ ಚೂಪು ಬಾಲ. ಹೆಚ್ಚಾಗಿ ಎಲೆಕ್ಟ್ರಿಕ್ ತಂತಿಯ ಮೇಲೆ ಅಂಟಿಕೊಂಡು ಕುಳಿತಿರುವುದನ್ನು ಕಾಣಬಹುದು. ಮರದ ಕಡ್ಡಿಗಳಲ್ಲಿ ಕುಳಿತ ದೃಷ್ಯ ಬಲು ವಿರಳ. ದೊಡ್ಡ ಕೆರೆಗಳಿಗೆ ಇವು ಹಾರಿ ಬಂದು ಹಾಗೆ ನೀರು ಕುಡಿಯುವುದನ್ನು ನೋಡುವುದೇ ಒಂದು ಚಂದ. ನೀರಡಿಕೆ ಆರಿದ ನಂತರ ದಡದಲ್ಲಿರುವ ಒಡಕೆ(Typha)ಯ ಮೇಲೆ ಕೂರುವುದನ್ನು ನಾವು ಕಾಣಬಹುದು. ಆಧುನಿಕರಾದಂತೆ,ಒಡಕೆ ಹೋದಂತೆ, ವಿದ್ಯುತ್ ತಂತಿ ಹೆಚ್ಚಾದಂತೆ, ಅಲ್ಲಿ ಇಂದು ಅಂಬರಗುಬ್ಬಿಯ ಸಂತೆ.

Barn swallow

Barn swallow

ಈ ಅತಿಥಿಗಳು ನಮ್ಮ ಸ್ಥಾನೀಯ ಅಂಬರಗುಬ್ಬಿಗಳೊಡನೆ ಸಹಬಾಳ್ವೆ ನಡೆಸುತ್ತವೆ. ಎಲ್ಲಾ ತರಹದ ಕವಲುತೋಕೆಗಳು ಒಟ್ಟಿಗೇ ಬೇಟೆಯಾಡುವುದನ್ನು ನವು ಕಾಣಬಹುದು. ಸೆಪ್ಟೆಂಬರ್‍ನಿಂದ ಅವಿಶ್ರಾಂತವಾಗಿನಮ್ಮಲ್ಲಿ ದುಡಿದ ಈ ಹಕ್ಕಿಗಳು ಮೇ ತಿಂಗಳಲ್ಲಿ ಮುಂಗಾರುಮಳೆಯ ಮಾರುತ ಬೀಸುತ್ತಿದ್ದಂತೆ ಪುನಃ ತವರಿಗೆ ತೆರಳುತ್ತವೆ. ಈ ಅಂಬರಗುಬ್ಬಿಯ ತೆರಳುವಿಕೆಯು ಮಳೆಗಾಲದ ಸಂಕೇತ ಎಂಬುವುದನ್ನು ಮತ್ತೆ ಗಮನಿಸಿ.

  1. Red-rumped swallow(Cecropis daurica) ಕೆಂಪು ಪೃಷ್ಠದ ಕವಲುತೋಕೆ :

ನಮ್ಮಲ್ಲಿ ಕಾಣಸಿಗುವ ಅತಿ ಸಾಮಾನ್ಯ ಕವಲುತೋಕೆ ಇದು. ಸಂತಾನೋತ್ಪತ್ತಿ ಕಾಲದಲ್ಲಿ ಸ್ಥಾನೀಯ ವಲಸೆ ಹೋಗುತ್ತವೆ. ಈ ಗುಬ್ಬಿಗಳು ಪ್ರಪಂಚದ ಹಲವು ಭಾಗಗಳಲ್ಲಿ ಅಲ್ಲಲ್ಲೇ ಲಭ್ಯ. ದಕ್ಷಿಣ ಯುರೋಪ್, ಉತ್ತರ ಮತ್ತು ಮಧ್ಯ ಆಫ್ರಿಕಾ, ಪೂರ್ವ ಜಪಾನ್‍ನಲ್ಲೂ ಇವುಗಳನ್ನು ಕಾಣಬಹುದು.

Red-rumped swallow (Cecropis daurica)  ಕೆಂಪು ಪೃಷ್ಠದ ಕವಲುತೋಕೆ

Red-rumped swallow (Cecropis daurica) ಕೆಂಪು ಪೃಷ್ಠದ ಕವಲುತೋಕೆ

ಶುರುವಿನ ಮಳೆ ಬೀಳುತ್ತಿದ್ದ ಹಾಗೆ ಇವು ಗೂಡುಕಟ್ಟಲು ಪ್ರಾರಂಭಿಸುತ್ತದೆ. ಪಾಳು ಬಿದ್ದ ಮನೆಗಳ ಗೋಡೆಯಲ್ಲಿ, ದೊಡ್ಡ ಬಾವಿಗಳಲ್ಲಿ ಇವು ಗೂಡು ಮಾಡುತ್ತವೆ. ಜೌಗು ಮಣ್ಣನ್ನು ತಂದು ತಮ್ಮ ಒಲ್ಲಿನಿಂದ ಕಲಿಸಿ ಕಪ್ ಆಕಾರದ ಗೂಡು ನಿರ್ಮಿಸುತ್ತವೆ. ಮೊಟ್ಟೆ ಇಡಲು ಬೇಕಾದ ಹಾಸಿಗೆಯನ್ನು ಅಲ್ಲಿ ಇಲ್ಲಿ ಬಿದ್ದ ಹಕ್ಕಿಪುಕ್ಕಗಳಿಂದ ಮಾಡುತ್ತವೆ.

red rumped swallow

red rumped swallow

ಗಾತ್ರದಲ್ಲಿ ಕವಲುತೋಕೆಯಷ್ಟೇ ಇರುವ ಇವಕ್ಕೆ ಕಡುನೀಲಿ ಮೇಲ್ಮೈ, ಕೆಂಗಂದು ಹಿಂಗತ್ತು ಮತ್ತು ಪೃಷ್ಠ. ಗೀರುಗಳಿರುವ ಮಾಸಲು ಬಿಳಿ ಕೆಳಮೈ. ಸೀಳುಬಾಲ. Barn swallow ಗೆ ಹೋಲಿಸಿದರೆ ಇವು ತುಸು ಸಣ್ಣ ಗುಂಪುಗಳಲ್ಲಿರುತ್ತವೆ.

05

  1. Streak-throated swallowor TheIndian cliff swallow (Petrochelidon fluvicola)

ಗೀರುಕತ್ತಿನ ಕವಲುತೋಕೆ:

ಕವಲುತೋಕೆಗಲಲ್ಲಿ ಅತಿ ಸಣ್ಣವು. 11 ಸೆ.ಮೀ ಉದ್ದ. ಇವಕ್ಕೆ ಸೀಳು ಬಾಲದ ಬದಲಿಗೆ ಸೀಳುರಹಿತ ಬಾಲ. ಕೆಂಗಂದು ಹಣೆ, ಗಂಟಲು ಮತ್ತು ಎದೆಯ ಬಾಗದಲ್ಲಿ ಗೀರುಗಳಿರುತ್ತವೆ. ನೀರು ಹೇರಳವಿರುವ ಪ್ರದೇಶದಲ್ಲಿ ಮಾತ್ರ ಇವುಗಳು ಲಭ್ಯ.

06

ಆಸಕ್ತರು ಇವನ್ನು ನೋಡಬಯಸುವುದಾದರೆ ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗಬಹುದು. ಅಲ್ಲಿನ ಬಂಡೆಗಳಲ್ಲಿ ಒತ್ತೊತ್ತಿಗೆ ಗೂಡು ಮಾಡುವುದನ್ನು ನೋಡಿ ತಣಿಯಬಹುದು.

07 

  1. Wire-tailed swallow(Hirundo smithii) ತಂತಿಬಾಲ ಕವಲುತೋಕೆ:

ಹೆಸರೆ ಸೂಚಿಸುವಂತೆ ಈ ಕವಲು ತೋಕೆಗೆ ತಂತಿರೀತಿಯ ಉದ್ದನೆಯ ಬಾಲ. ತಂತಿ ಬಾಲದ ಈ ಗುಬ್ಬಿ ಹೆಚ್ಚಾಗಿ ತಂತಿಯ ಮೇಲೇ ಕುಳಿತಿರುವುದರಿಂದ ಇಂದಿನ ಪರಿಸ್ಥಿತಿಯಲ್ಲಿ ಇವಕ್ಕೆ ಈ ಹೆಸರು ಅನ್ವರ್ಥ.

09

14 ಸೆ.ಮೀ, ಹೊಳೆಯುವ ಕಡುನೀಲಿ ಮೇಲ್ಮೈಗೆ ಕೆಂಗಂದು ಟೋಪಿ. ಬಿಳಿ ಕೆಳಮೈ. ಇವುಗಳು ಒಂಟಿಯಾಗಿ ಅಥವಾ 3-4 ಹಕ್ಕಿಗಳ ಗುಂಪಿನಲ್ಲಿರುತ್ತವೆ. ಗೀರುಕತ್ತಿನ ಕವಲುತೋಕೆಯಂತೆ ಇವಕ್ಕೆ ನೀರ ಆಸರೆ ಬೇಕು.

10

  1. Dusky crag martin(Ptyonoprogne concolor) ಕಂದುಗಪ್ಪು ಕಮರಿತೋಕೆ :

ಕವಲುತೋಕೆಗಿಂತ ತುಸು ಬಿನ್ನ ಈ ಕಮರಿತೋಕೆ. ಚಳಿ ಪ್ರದೇಶವನ್ನು ಇವು ಇಷ್ಟ ಪಡುತ್ತವೆ. ಮಲೆನಾಡಿನ ಯಾವುದೇ ಬೆಟ್ಟದ ತುದುಯಲ್ಲಿ ಇವುಗಳ ಹಾರಾಟ ಕಾಣಬಹುದು. ಕೊಡಗಿನಲ್ಲಿ ವಾಸವಿರುವವರು ಇತರೆ ಕವಲುತೋಕೆಗಳಿಗಿಂತ ಹೆಚ್ಚು ಕಮರಿತೋಕೆಗಳನ್ನು ಕಾಣಬಹುದು. ಹೆಚ್ಚಿನ ಮನೆಯ ಗೋಡೆಯಲ್ಲಿ ಇದರ ಗೂಡನ್ನು ನಾವು ನೋಡಬಹುದು.

11

13ಸೆ.ಮೀ ಮಸಿಗಂದು ದೇಹ. ಉದ್ದ ರೆಕ್ಕೆ, ಗಿಡ್ಡ ಮೊಂಡು ಬಾಲ. ಮಾಸಲು ಇಳಿ ಕೆಳಮೈ, ಸಣ್ಣ ಗುಂಪಿನಲ್ಲಿ ಇವುಗಳ ವಾಸ.

ಇತರೆ ಕವಲುತೋಕೆಗಳಂತೆ ಗಂಡು ಮತ್ತು ಹೆಣ್ಣು ಎರಡೂ ಶಿಶುಪಾಲನೆಯಲ್ಲಿ ತೊಡಗುತ್ತವೆ. ಮರಿಗಳು ಹಾರಲು ಕಲಿತ ನಂತರವೂ ಇವು ಮರಿಗಳಿಗೆ ಹಲವುಸಮಯ ಉಣಿಸುವುದು ವಿಶೇಷ. ಇನ್ನೂ ವಿಶೇಷವೆಂದರೆ ಇವು ಹಾರಿಕೊಂಡೇ ಮರಿಗಳಿಗೆ ತುತ್ತು ಕೊಡುತ್ತವೆ. ಇದನ್ನು Mid-air feeding  ಎನ್ನುವರು. ಈ ವಿಶೇಷತೆಯನ್ನು ನಾವು ಕೆಂಪು ಪೃಷ್ಠದ ಕವಲುತೋಕೆ(Red-Rumped swallow) ಮತ್ತು ಅಂಬರಕೀಚುಗ (Ashy wood swallow) ದಲ್ಲೂ ಕಾಣಬಹುದು.

Dusky crag martin (Ptyonoprogne concolor)  ಕಂದುಗಪ್ಪು ಕಮರಿತೋಕೆ

Dusky crag martin (Ptyonoprogne concolor) ಕಂದುಗಪ್ಪು ಕಮರಿತೋಕೆ

ಹಗಲಿಡೀ ದುಡಿದು ಒಂದೊಂದು ಕವಲುತೋಕೆಯೂ ನೂರಕ್ಕೂ ಮಿಕ್ಕಿ ಕೀಟಗಳನ್ನು ತಿಂದು ಸದಾ ರೈತರ ಸೇವೆಯಲ್ಲಿ ನಿರತರಾಗಿರಲು ಇವುಗಳ ಮಹತ್ತರ ಸೇವೆಯನ್ನು ಗುರುತಿಸಲಾಗದಷ್ಟು ನಾವಿಂದು ಬದಲಾಗಿದ್ದೇವೆ. ಪ್ರಕೃತಿ ಸಮತೋಲನಕ್ಕೆ ಬೇಕಾದಷ್ಟು ಕೀಟಗಳಾದರೂ ಇರಬೇಕೆಂಬುದನ್ನು ಅರಿಯದೆ, ತೋಕೆಯ ಕೀಟನಿಯಂತ್ರಣ ಸಾಮರ್ಥ್ಯ ಸಾಲದೆಂದುಕೊಂಡು ಕೀಟನಾಶಕಗಳಿಗೆ ಮೊರೆ ಹೋಗಿ ದಶಕಗಳು ಸರಿದಿವೆ. ಈ ಕೀಟನಾಶಕಗಳು, ಸೃಷ್ಟಿಸಿದ ಮನುಷ್ಯನನ್ನೇ ಕೀಟಗಳೆಂದು ಭಾವಿಸಿವೆ. ಯಾಕೆಂದರೆ ಅವಕ್ಕೆ ಕೆಲಸ ಬೇಕು. ಇಷ್ಟೆಲ್ಲಾ ಆದ ಮೇಲೆ ಕೆಲಸ ಕಳೆದುಕೊಂಡ ಅಂಬರ ಗುಬ್ಬಿಗಳು ಏನು ಮಾಡಬೇಕೋ? ಗೊತ್ತಿಲ್ಲ.

 Streak throated & Wire tailed Swallow

Streak throated & Wire tailed Swallow

 

ಚಿತ್ರಗಳು: ಡಾ.ಅಭಿಜಿತ್ ಎ.ಪಿ.ಸಿ. ಷಣ್ಮುಖರಾಜ ಮೂರೂರು, ವಿಜಯಲಕ್ಷ್ಮಿ ರಾವ್.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!