ಅಂಕಣ

ಇದು ಬರೆಯುವವರು ಓದಲೇಬೇಕಾದ ಪುಸ್ತಕ!

ಭರ್ಜರಿ ಮೂರು ತಿಂಗಳ ಶ್ರಮಕ್ಕೊಂದು ಫಲ ಸಿಗುವ ದಿನ ಬಂದಿದೆ. ಹೀಗೊಂದು ಪುಸ್ತಕ ಆಗಬೇಕು ಅಂತ ತಲೆಗೆ ಬಂದಿದ್ದೆ ತಡ ಕೆಲಸ ಶುರು ಹಚ್ಚಿಕೊಂಡೆ. ಒಂದಷ್ಟು ಗೆಳೆಯರನ್ನು ಮಾತಾಡಿಸಿ ಪುಸ್ತಕದ ಕುರಿತು ಹೇಳಿದೆ. ಮೊದಲು ಇದ್ದ ಆಲೋಚನೆ ಇಂಪ್ರೂ ಆಗ್ತಾ, ಆಗ್ತಾ ಎಲ್ಲಿವರೆಗೆ ಬಂದಿದೆ ಅನ್ನೋದನ್ನ ನಿಮ್ಮ ಕೈ ಸೇರಲಿರುವ ಪುಸ್ತಕ ಹೇಳುತ್ತೆ.

ಕಾರ್ಯಕ್ರಮ ಹೇಗೆ ಆಗುತ್ತೋ ಏನೋ? ಪುಸ್ತಕದ ರೀಚು, ಮಾರಾಟದ ಕಥೆ ಏನು ಅಂತೆಲ್ಲ ಒಂಚೂರು ಭಯವಿದೆ. ಕಾರಣವಿಷ್ಟೆ ಈ ಪುಸ್ತಕದೊಂದಿಗೆ ನನ್ನದೇ ಕನಸಿನ ಮಿಥಿಲಾ ಪ್ರಕಾಶನ ಹುಟ್ಟುತ್ತಿದೆ. ವರ್ಷಗಳ ಹಿಂದೆ ನನ್ನ ಕಥಾಸಂಕಲನ ಮಾಡಬೇಕು ಅಂತ ಹಲವಾರು ಪ್ರಕಾಶಕರ ಹತ್ರ ತಿರುಗಾಡಿದೆ. ಆದ್ರೆ ಎಲ್ಲ ವಲ್ಲೆ ಅಂದ್ರು. ‘ಸೇಲೆಬಲ್‌ ಕಟೆಂಟ್‌ ಏನಾದ್ರು ಕೊಡಿ. ಅದೇ ಪರ್ಸನಾಲಿಟಿ ಡೆವಲೆಪ್‌ಮೆಂಟ್‌ ಥರದ್ದು, ಮಣಿಕಾಂತ್‌ ಬರೀತಾರಲ್ಲ ಆಥರದ್ದು’ ಅಂದ್ರು ಕೆಲವರು. ಇನ್ನು ಕೆಲವ್ರು ನಾವು ಪುಸ್ತಕ ಮಾಡ್ತೀವಿ. ಆದ್ರೆ ಮಾರಾಟ ನಿಮ್ಮದು ಅನ್ನೋ ಥರ ಮಾತಾಡಿದ್ರು. ಹೊಸ ಬರಹಗಾರನೊಬ್ಬನ ಪುಸ್ತಕವನ್ನು ಪ್ರಕಾಶಿಸುವುದು, ಅದ್ರಲ್ಲೂ ವಿಷಯಾಧಾರಿತ ಪುಸ್ತಕ ಪ್ರಕಾಶನ ತುಸು ಕಷ್ಟವೆ.

ಪ್ರಕಾಶಕರ ಇನ್ನೊಂದು ವರ್ಗವಿದೆ. ಸಾವಿರ ಕಾಪಿ ಪ್ರಿಂಟ್‌ ಹಾಕಿ ಅದ್ರಲ್ಲಿ ೩೦೦ ಲೈಬ್ರರಿಗೆ ಹಾಕಿ, ಬಿಡುಗಡೆಯಾದ ದಿನ ಒಂದು ೨೦೦ ಕಾಪಿ ಸೇಲ್‌ ಮಾಡಿ, ಮಿಕ್ಕಿದ್ದು ಮಾರಾಟ ಆದ್ರೆ ಆಯ್ತು, ಇಲ್ಲ ಅಂದ್ರೆ ಇಲ್ಲ ಅಂತ ಕೈತೊಳೆದುಕೊಳ್ಳುವ ಪ್ರಕಾಶಕರು. ಅಲ್ಲಿ ಪುಗ್ಸಟ್ಟೆ ೨೫ ಪುಸ್ತಕದ ಹೊರತಾಗಿ ಬರಹಗಾರನಿಗೆ ಏನು ಸಿಗುವುದಿಲ್ಲ. ಬಾಳ ಮಜ ಅಂದ್ರೆ ಮಣಿಕಾಂತ್‌ ಥರದ ಪುಸ್ತಕ ಬರೆದುಕೊಡಿ ಅಂದಕಡೆ ಮಣಿಕಾಂತ್‌ ರೆಫರೆನ್ಸ್‌ನಿಂದಾನೆ ಹೋಗಿದ್ದೆ! ಆರಂಭದಲ್ಲಿ ಮಣಿಕಾಂತ್‌ ಪುಸ್ತಕವನ್ನು ಯಾರೂ ಪ್ರಕಟಿಸಲು ಮುಂದೆ ಬರಲಿಲ್ಲ. ಅಮ್ಮ ಹೇಳಿದ ೮ ಸುಳ್ಳುಗಳು ೯೦ ಸಾವಿರ ಪ್ರಿಂಟ್‌ ತಲುಪಿದಾಗ ಈ ವಿಷಯವನ್ನು ಬರೆದುಕೊಂಡಿದ್ರು. ಇವತ್ತು ಅಮ್ಮ ಹೇಳಿದ ೮ ಸುಳ್ಳು ಲಕ್ಷ ಪ್ರತಿ ದಾಟಿದೆ. ಅಮ್ಮ ಅಂದ್ರೆ ಆಕಾಶ ಮತ್ತು ಇತರ ಎಲ್ಲ ಪುಸ್ತಕಗಳು ಸೇರಿ ಬಹುಶಃ ಮಣಿ ೨.೫ಲಕ್ಷಕ್ಕಿಂತ ಹೆಚ್ಚು ಪುಸ್ತಕ ಮಾರಾಟ ಮಾಡಿರಬಹುದು ಅಂತ ನಾವು ಮೊನ್ನೆ ಲೆಕ್ಕ ಹಾಕ್ತಾ ಇದ್ವಿ.

ಸಂಖ್ಯೆ ದೊಡ್ಡದಾಗಿ ಕಾಣುತ್ತೆ. ಆದ್ರೆ ಅದರ ಹಿಂದಿನ ಪರದಾಟ ಹೆಚ್ಚಿನವರಿಗೆ ಕಾಣಿಸಲ್ಲ. ಪುಸ್ತಕ ಬಿಡುಗಡೆ ಮಾಡಿದ ಆರಂಭದ ದಿನಗಳಲ್ಲಿ ಮಣಿ ಪುಸ್ತಕ ಹೊತ್ತುಕೊಂಡು ಸಿಕ್ಕಾಪಟ್ಟೆ ಅಲೆದಾಡಿದ್ದಾರೆ. ಸಾಹಿತ್ಯ ಸಮ್ಮೇಳನ, ಯಾವುದೋ ಸಣ್ಣ ಸಮಾರಂಭ, ನೂರಾರು ಜನ ಸೇರುವ ಎಲ್ಲೆಂದರಲ್ಲಿ ಮಣಿ ಸ್ವತಃ ತಾನೇ ನಿಂತು, ಪುಸ್ತಕದ ಲೇಖಕ ಎಂಬುದನ್ನು ಮರೆತು ಪುಸ್ತಕ ಮಾರಾಟ ಮಾಡಿದ್ದಾರೆ. ಬಂಡಲ್‌ಗಳನ್ನು ಹೊತ್ತು ಬಸ್‌ಗೆ ಹಾಕಿದ್ದಾರೆ. ಖಂಡಿತ ಇದೆಲ್ಲ ನಂಗು ಸ್ಫೂರ್ತಿ ಕೂಡ.

ಇಷ್ಟಾಗಿಯೂ ನಂಗಂತು ಪ್ರಕಾಶನದ ಕನಸು ಇರಲಿಲ್ಲ. ‘ಪತ್ರಿಕೆಗೆ ಬರೆಯೋದು ಹೇಗೆ?’ ಈ ಪ್ರಶ್ನೆಗೆ ಯಾರಾದ್ರು ಉತ್ತರ ಕೊಡಬೇಕು ಅಂತ ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಸಂಪಾದಕರ ಮಟ್ಟದಲ್ಲಿ ಇರೋರು ಯಾರಾದ್ರು ಬರೆದ್ರೆ ಚೆನ್ನಾಗಿರುತ್ತೆ. ಅದಿಲ್ಲ ಅಂದ್ರೆ ನನ್ನಂತ ಆರೆಂಟು ವರ್ಷ ಅನುಭವ ಉಳ್ಳವನು ಅದ್ರ ತಂತ್ರಗಳ ಕುರಿತು, ಪತ್ರಿಕೆಯ ಲೇಖನವೊಂದು ಬೇಡುವ ಅಗತ್ಯತೆಯ ಕುರಿತು ಬರೆಯಬೇಕು ಕೈಪಿಡಿ ಥರದಲ್ಲಿ ಅಂತ ಆಲೋಚಿಸುತ್ತಿದ್ದೆ.

ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವದಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು.

ಆ ಎಲ್ಲ ಆಲೋಚನೆಗಳಿಗೆ ಗೆಳೆಯ ಶ್ರೀನಿಧಿ ಡಿ,ಎಸ್‌ ಬೇರೆಯದೆ ರೂಪ ನೀಡಿದ್ರು. ಮಾಡೋದು ಮಾಡ್ತೀವಿ ಒಂದು ಡಾಕ್ಯುಮೆಂಟ್‌ ಆಗೋ ಥರದ ಪುಸ್ತಕವನ್ನೇ ಮಾಡೋಣ ಅಂದಾಯ್ತು. ಆದ್ರೆ ಬೇರೆಯವರೆಲ್ಲ ಇದಕ್ಕೆ ಬರೆಯಲಿಕ್ಕೆ ಒಪ್ಪುತ್ತಾರಾ ಎಂಬುದು ಪ್ರಶ್ನೆ. ಕೇಳಿ ನೋಡೋಣ ಬರೆದ್ರೆ ಆಯ್ತು. ಇಲ್ಲ ಅಂದ್ರೆ ಇಲ್ಲ ಅಂತ ನಿರ್ಧಾರ ಮಾಡಿದ್ವಿ. ಬಹಳ ಮಜ ಅಂದ್ರೆ ಒಬ್ಬ ಘನವೆತ್ತ ಸಂಪಾದಕರನ್ನು ಹೊರತುಪಡಿಸಿ, ನಾವು ಲೇಖನ ಕೇಳಿದ ಉಳಿದವ್ರೆಲ್ಲ ತಕ್ಷಣ ಒಪ್ಪಿ ಲೇಖನ ಬರೆದುಕೊಟ್ಟಿದ್ದಾರೆ ಹಾಗೂ ಅದೇ ಪುಸ್ತಕವಾಗಿ ಫೆ.೨೦ರ ಶನಿವಾರ ಸಂಜೆ ನಿಮ್ಮ ಕೈ ಸೇರುತ್ತಿದೆ. ಶ್ರೀವತ್ಸ ಜೋಶಿ, ಶಿವಾನಂದ ಕಳವೆ, ರೋಹಿತ್‌ ಚಕ್ರತೀರ್ಥ, ನವೀನ್‌ ಸಾಗರ್‌, ಶ್ರೀನಿಧಿ ಡಿ.ಎಸ್‌, ಶ್ರೀನಿಧಿ ಟಿ.ಜಿ, ಮಾವೆಂಸ ಪ್ರಸಾದ್‌, ಜಯದೇವ್‌ಪ್ರಸಾದ್‌ ಮೊಳೆಯಾರ್‌, ವಿಕಾಸ್ ನೇಗಿಲೋಣಿ, ರಜನಿ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ ಇದರಲ್ಲಿ ಬರೆದಿದ್ದಾರೆ. ವಾನಳ್ಳಿ ಸರ್‌ ಮುನ್ನುಡಿ, ರವಿ ಹೆಗಡೆಯವರ ಬೆನ್ನುಡಿ ಪುಸ್ತಕಕ್ಕಿದೆ.

ಕೇವಲ ಪತ್ರಿಕೆಯಲ್ಲಿ ಲೇಖನ ಪ್ರಕಟವಾಗುವ ಥರ ಬರೆಯುವುದನ್ನು ಉತ್ತೇಜಿಸುವುದು ಮಾತ್ರ ನಮ್ಮ ಉದ್ದೇಶವಲ್ಲ. ಅದು ಒಂದು ಸಕಾರಾತ್ಮಕ ಸಂದೇಶ ನೀಡಬೇಕು ಎಂಬುದು. ಪುಸ್ತಕ ಸರಿಯಾಗಿ ರೀಚ್‌ ಆಗಬೇಕು. ಒಂದಷ್ಟು ಜನರನ್ನು ತಲುಪಿ ಒಂದಷ್ಟು ಒಳ್ಳೆಯ ಬರಹಗಾರರು ಹುಟ್ಟಬೇಕು ಎಂಬ ಉದ್ದೇಶದಿಂದಲೇ ಇದಕ್ಕಾಗಿಯೇ ಒಂದು ಪ್ರಕಾಶನ ಹುಟ್ಟುಹಾಕಿ, ಪುಸ್ತಕ ಹೊರತರುವ ಸಾಹಸ ಮಾಡಿದ್ದೇನೆ. ಅದು ಏನಾಗುತ್ತೋ ಗೊತ್ತಿಲ್ಲ. ಪುಸ್ತಕದಲ್ಲಿ ಬರೆಯಲು ಒಪ್ಪಿ ಜೊತೆಗಿರುವ ಎಲ್ಲ ಲೇಖಕರಿಗು ಹೇಳಲು ಥ್ಯಾಂಕ್ಸ್‌ಗಿಂತ ಹೆಚ್ಚಾಗಿದ್ದು ಇನ್ನೇನು ಇಲ್ಲ. ಕಾರ್ಯಕ್ರಮ, ಪ್ರಿಂಟ್‌, ಸೇಲ್‌ ಇತ್ಯಾದಿ ವಿಷಯಗಳಲ್ಲಿ ನವೀನ್‌ ಸಾಗರ್‌, ಮಣಿಕಾಂತ್‌, ಶ್ರೀನಿಧಿ ಡಿ.ಎಸ್‌, ಶ್ರೀನಿಧಿ ಟಿ.ಜಿ ನೆರವನ್ನು ಮರೆಯಲು ಸಾಧ್ಯವಿಲ್ಲ. ನಾಗರಾಜ್‌ ವೈದ್ಯರ ವಿನ್ಯಾಸ, ಸತೀಶ್‌ ಬಾಬು ಚಿತ್ರಗಳು ನಿಮಗು ಇಷ್ಟವಾಗಬಹುದು.

ಈ ಪುಸ್ತಕ ಗೆಲ್ಲಿಸಿ ಇನ್ನೊಂದಷ್ಟು ಒಳ್ಳೆ ಪುಸ್ತಕಗಳನ್ನು ಹೊರತರಲು ಸ್ಫೂರ್ತಿ ನೀಡುವುದು ನಿಮ್ಮ ಕೈಯಲ್ಲಿದೆ. ಫೆ.೨೦ರ ಶನಿವಾರ ಸಂಜೆ ೪.೩೦ಕ್ಕೆ ಕೆ.ಆರ್‌.ಸರ್ಕಲ್ಲಿನ ಯುವಿಸಿಇ ಆವರಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ. ನೀವೆಲ್ಲ ಮುದ್ದಾಂ ಬರಬೇಕು. ಹಾಗೆಯೇ ಈ ಪುಸ್ತಕ ನಿಮ್ಮಿಂದ ಇನ್ನೊಂದಷ್ಟು ಜನರನ್ನು ತಲುಪುವಂತಾಗಿ, ಮತ್ತೊಂದಷ್ಟು ಜನ ಬರೆಯಲು ಶುರುವಿಟ್ಟರೆ ನಮ್ಮ ಪ್ರಯತ್ನ ಯಶಸ್ವಿ…ಶನಿವಾರ ಸಂಜೆ ಸಿಗೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Vinayaka Kodsara

ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!