Featured ಅಂಕಣ

ವಿಜಯ ಲಕ್ಷ್ಮಿಯವರೇ, ನಿಮ್ಮ ಕವರ್ ಸ್ಟೋರಿಗೂ ಮುನ್ನ ಈ ಸ್ಟೋರಿಯನ್ನೊಮ್ಮೆ ಕೇಳಿ.

ಪ್ರೀತಿಯ ವಿಜಯ ಲಕ್ಷ್ಮಿಯವರಿಗೆ ನಮಸ್ಕಾರಗಳು;

ನಾನು ಹೇಳಿಕೊಳ್ಳುವಷ್ಟೇನೂ ನಿಮ್ಮ ಅಭಿಮಾನಿಯಲ್ಲ. ನಿಮ್ಮ ಕಾರ್ಯಕ್ರಮಗಳ ನಿತ್ಯದ ವೀಕ್ಷಕನೂ ನಾನಲ್ಲ. ಆದರೆ ಖಂಡಿತವಾಗಿಯೂ ನಿಮ್ಮ ಮೇಲೆ ನನಗೆ ಒಂದಷ್ಟು ಅಭಿಮಾನವಿದೆ.  ಯಾಕೆ ಗೊತ್ತಾ? ಮಹಿಳೆಯಾಗಿ ನೀವು ಅಷ್ಟೊಂದು ಧೈರ್ಯದಿಂದ ರಾಜ್ಯದಲ್ಲಾಗುತ್ತಿರುವ ಅನ್ಯಾಯ ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತೀರಿ ಎನ್ನುವ ತಾತ್ಸಾರದ  ಕಾರಣಕ್ಕಲ್ಲ. ಆದರೆ ಇತರ ಯಾವ ಪತ್ರಕರ್ತರಿಗೂ ಸಾಧ್ಯವಾಗದ ಕೆಲಸವನ್ನು ನೀವು ಛಲ ಬಿಡದೆ ಮಾಡುತ್ತಿದ್ದೀರಲ್ಲ ಎನ್ನುವ ಕಾರಣಕ್ಕೆ. ನಿಮ್ಮ ಕವರ್ ಸ್ಟೋರಿಯಲ್ಲಿ ಬಂದ ಆಂಜನೇಯ ಡೀಲ್ ಪುರಾಣ, ಲಾಟರಿ ದಂಧೆ, ಆಹಾರ ಪದಾರ್ಥಗಳ ಅಕ್ರಮ ಮುಂತಾದ ಕಾರ್ಯಕ್ರಮಗಳು ನಿಮಗೆ ನಿಮ್ಮದೇ ಆದ ಅಭಿಮಾನಿಗಳನ್ನು ಕೊಟ್ಟಿದೆ. ಅದರಲ್ಲೂ ಒಂದಂಕಿ ಲಾಟರಿ ಹಗರಣ ಮತ್ತು ಆಂಜನೇಯ ಡೀಲ್ ಹಗರಣವನ್ನು ನೀವು ನಿಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದು ರಾಜ್ಯದ ಜನರೆದುರು ಬಿಚ್ಚಿಟ್ಟಾಗ ನಿಮ್ಮ ಮೇಲಿನ ಗೌರವ ಸಾವಿರ ಪಟ್ಟು ಹೆಚ್ಚಾಗಿತ್ತು. ಅಬ್ಬಾ..  ಈ ಪತ್ರಕರ್ತೆಯೆ ಸಾಹಸೆವೇ ಎಂದು ನಾವೆಲ್ಲ ಹುಬ್ಬೇರಿಸುವಂತೆ ಮಾಡಿತ್ತು.  ಪತ್ರಕರ್ತರೆಂದರೆ ವಿಜಯಲಕ್ಷ್ಮಿಯವರ ಥರಾ ಇರಬೇಕಪ್ಪ ಎಂಬಂತಹ ಮಾತುಗಳು ಸಹ  ಕೇಳಿ ಬಂದಿದ್ದವು.

ಆದರೆ… ನಿಮ್ಮ ಮೇಲಿದ್ದ ಗೌರವ ಅಭಿಮಾನವೆಲ್ಲಾ ಒಂದೇ ಕ್ಷಣದಲ್ಲಿ ಉಡುಗಿ ಹೋಗುವಂತಹಾ ಕಾರ್ಯಕ್ರಮವೊಂದು ನಿಮ್ಮ ಕಡೆಯಿಂದ ಬಂದಿದೆ. ಅಷ್ಟು ಮಾತ್ರವಲ್ಲ, ನಿಮ್ಮ ಇಡೀಯ ಕವರ್ ಸ್ಟೋರಿಯ ಮೇಲೆ ಅನುಮಾನ ಮೂಡಲಾರಂಭಿಸಿದೆ. ಯಾಕೆ ಅಂತಾ ಕೇಳ್ತೀರಾ? ಈ ಫ಼ುಲ್ ಸ್ಟೋರಿ ಓದಿ ಪ್ಲೀಸ್

ಮೊನ್ನೆ ಶುಕ್ರವಾರ (೧೯-೨- ೨೦೧೬) ದಂದು ಟಿ.ವಿ ನೋಡುತ್ತಿದ್ದಾಗ ಅಚಾನಕ್ಕಾಗಿ ಚಾನೆಲ್ ಸುವರ್ಣ ನ್ಯೂಸಿನತ್ತ ಹೊರಳಿತ್ತು. ಅದರಲ್ಲಿ ನಿಮ್ಮ ಕವರ್ ಸ್ಟೋರಿ (ವೀಡಿಯೋವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು) ಪ್ರಸಾರವಾಗುತ್ತಿತ್ತು. ನಾನು ಕವರ್ ಸ್ಟೋರಿಯನ್ನು ಪ್ರತೀ ವಾರ ನೋಡುವುದಿಲ್ಲ. ಆದರೆ ಮೊನ್ನೆಯ ಕವರ್ ಸ್ಟೋರಿ ಮೊದಲ ನೋಟದಲ್ಲಿಯೇ ನನ್ನ ಗಮನ ಸೆಳೆದಿತ್ತು, ಯಾಕಂದ್ರೆ ಅದರಲ್ಲಿ ನರಸೀಪುರದ ಪ್ರಖ್ಯಾತ ನಾಟಿ ವೈದ್ಯರಾದ ನಾರಾಯಣ ಮೂರ್ತಿಯವರ ಚಿತ್ರ ಎದ್ದು ಕಾಣುತ್ತಿತ್ತು. ನಾರಾಯಣ ಮೂರ್ತಿಯವರು ಪಾರಂಪರಿಕ ಔಷಧಗಳ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ, ಹಣ ಪೀಕುತ್ತಿದ್ದಾರೆ, ಅರಣ್ಯ ನಾಶ ಮಾಡುತ್ತಿದ್ದಾರೆ ಎನ್ನುವಂತಹ  ಥರಹೇವಾರಿ ಡೈಲಾಗ್’ಗಳು ನಿಮ್ಮ ಬಾಯಿಯಿಂದ ಉದುರುತ್ತಿದ್ದವು. ನಾನು ಒಂದು ಕ್ಷಣ ದಂಗಾಗಿ ಹೋಗಿದ್ದೆ. ಯಾಕಂದ್ರೆ ನಿಮ್ಮ ಈ ಕಾರ್ಯಕ್ರಮ ಪ್ರಸಾರವಾದ ಐದು ದಿನಗಳ ಹಿಂದಷ್ಟೇ ತೀರಾ ಬೇಕಾದವರ ಕ್ಯಾನ್ಸರ್ ಚಿಕಿತ್ಸೆಗಾಗಿ ನಾನೇ ಸ್ವತಃ ಸರತಿ ಸಾಲಿನಲ್ಲಿ ನಿಂತು ಮೂರ್ತಿಯವರನ್ನು ಭೇಟಿಯಾಗಿ ಬಂದಿದ್ದೆ.

ಕಾರ್ಯಕ್ರಮ ನೋಡುತ್ತಾ ನೋಡುತ್ತ ಅದರ ಒಳ ಹರಿವನ್ನು ಅರ್ಥೈಸಲು ನನಗೆ ಹೆಚ್ಚು ಸಮಯ ತಗುಲಲಿಲ್ಲ. ನನ್ನನ್ನು ನರಸೀಪುರಕ್ಕೆ ಕರೆದೊಯಿದ್ದಿದ್ದ ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ನನ್ನ ಬಳಿ ಹೇಳ್ತಾಯಿದ್ರು, “ಇಲ್ಲಿ ಸ್ಥಳೀಯರಿಗೆ ಮೂರ್ತಿಯವರನ್ನು ಕಂಡರೆ ಆಗುವುದಿಲ್ಲ, ಈಗ್ಗೆ ಕೆಲ ಸಮಯದ ಹಿಂದೆ  ‘ಇಲ್ಲಿಗೆ ಬಂದವರೆಲ್ಲ ಪರಿಸರ ಹಾಳು ಮಾಡ್ತಾರೆ, ಸುತ್ತ ಮುತ್ತಲಲ್ಲೇ ಗಲೀಜು ಮಾಡುತ್ತಾರೆ, ಮೂರ್ತಿಯವರು ಅರಣ್ಯ ನಾಶ ಮಾಡ್ತಾರೆ’ ಎಂದೆಲ್ಲಾ ಕಂಪ್ಲೇಟ್ ನೀಡಿದಾಗ ಮೂರ್ತಿಯವರು ಔಷಧಿ ಕೊಡುವುದನ್ನೇ ನಿಲ್ಲಿಸಿದ್ದರು” ಅಂತ. ಅವರು ಹೇಳಿದ್ದಕ್ಕೂ, ನಿಮ್ಮ ಕಾರ್ಯಕ್ರಮದಲ್ಲಿ ಕಂಡು ಬಂದ ಸ್ಕ್ರಿಪ್ಟಿಗೂ ಹೋಲಿಕೆಯಾದ್ದರಿಂದ ಇದು ಸ್ಥಳೀಯರದ್ದೇ ಕಿತಾಪತಿ ಎನ್ನುವುದು ನನಗೆ ಬಹಳ ಬೇಗನೆ  ತಿಳಿದು ಹೋಯಿತು.

ವಿಜಯಲಕ್ಷ್ಮಿಯವರೇ, ನಾನೊಬ್ಬ ವಿದ್ಯಾವಂತ , ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ವೈದ್ಯಕೀಯ ಲೋಕದ ಎಲ್ಲಾ ಆಧುನಿಕ ಆವಿಷ್ಕಾರಗಳ ಕುರಿತು ಸಂಪೂರ್ಣ ಮಾಹಿತಿ ಇದ್ದವನಾಗಿಯೂ ನಾನು ನರಸೀಪುರದ ವೈದ್ಯರ ಮನೆಯ ಮುಂದಿನ ಸಾಲಿನಲ್ಲಿ ನಿಂತಿದ್ದೆ. ಯಾಕೆ ಗೊತ್ತಾ? “ಇನ್ನು ಇಲ್ಲಿ ಆಗುವುದಿಲ್ಲ” ಎಂದು ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ  ಕ್ಯಾನ್ಸರ್  ಆಸ್ಪತ್ರೆಯ ಡಾಕ್ಟರ್ ಹೇಳಿದ ಬಳಿಕ ನಮಗೆ ಕಂಡ ಕಟ್ಟಕಡೆಯ ಮಾರ್ಗ ಅದಾಗಿತ್ತು. ಸರಿಯಾಗಿ ಕೇಳಿಸಿಕೊಳ್ಳಿ, ನಾನು ಮಾತ್ರ ಅಲ್ಲ, ನನ್ನಂತ ನೂರಾರು ವಿದ್ಯಾವಂತರು ಕ್ಯೂನಲ್ಲಿ ನನ್ನ ಹಿಂದೆ ಮುಂದೆ ನಿಂತಿದ್ದರು. ನಿಮ್ಮ ಕವರ್ ಸ್ಟೋರಿಯಲ್ಲಿ ಹೇಳಿದಂತೆ, ವೈದ್ಯರು ನನ್ನ ಬಳಿ ಯಾವ ರಿಪೋರ್ಟನ್ನೂ ಕೇಳಲಿಲ್ಲ. ರೋಗಿಯನ್ನು ಪರೀಕ್ಷಿಸಲು ರೋಗಿಯೇ ಬಂದಿರಲಿಲ್ಲ.  ಸಮಸ್ಯೆಯನ್ನು ಆಲಿಸಿ ಮೂರು ಬಗೆಯ ಪುಡಿಯನ್ನು ಕೈಗಿತ್ತರು. ನನ್ನನ್ನು ನಂಬಿ, ಮೂರ್ತಿಯವರಾಗಲಿ, ಅಲ್ಲಿದ್ದವರಾಗಲೀ ನಯಾಪೈಸೆ ಕೇಳಲಿಲ್ಲ.  ಆದರೆ ಅಲ್ಲೊಂದು ಡಬ್ಬವಿತ್ತು. ಜನ ಅವರ ಶಕ್ತಿಗೆ ತಕ್ಕಂತೆ ಹಣ ಹಾಕಬಹುದಿತ್ತು. ಜನ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನೂರು – ಐದುನೂರು – ಸಾವಿರ ಹೀಗೆ ಹಾಕುತ್ತಿದ್ದರು.

ಮಲ್ಟಿಪ್ಲೆಕ್ಸುಗಳಲ್ಲಿ ಸಿನೆಮಾ ನೋಡಲು, ಹತ್ತು ರೂಪಾಯಿಯ ಜೋಳಾಪುರಿಯನ್ನೇ ಪೊಟ್ಟಣದಲ್ಲಿ ಹಾಕಿ ತಿನ್ನುವುದಕ್ಕೆ ನೂರಾರು ರೂಗಳನ್ನು ವ್ಯಯಿಸುತ್ತಿರುವ ಕಾಲದಲ್ಲಿ ಜೀವವುಳಿಸುತ್ತಾರೆ ಎಂಬ ನಂಬಿಕೆಯಲ್ಲಿ ಒಂದಷ್ಟು ಹಣ ಹಾಕುವುದು ದೊಡ್ಡ ವಿಷಯವಲ್ಲ ಬಿಡಿ, ಆದರೆ ಈ ಹಣಕ್ಕಿಂತ ಹೆಚ್ಚಾಗಿ  ಅಲ್ಲಿದ್ದವರೆಲ್ಲರ ಮುಖದಲ್ಲೊಂದು ಹೊಸ ಆಶಾಭಾವವಿತ್ತು. ಭರವಸೆಯಿತ್ತು.  ಕಿಡ್ನಿ ವೈಫಲ್ಯ, ಕಿಡ್ನಿ ಸ್ಟೋನ್, ಕ್ಯಾನ್ಸರ್ ಮುಂತಾದ ರೋಗಗಳಿಂದ ಬಳಲುತ್ತಿರುವವರಿಂದ ಹಿಡಿದು ಅಂಗವಿಕಲರೂ ಸಹ  ಸರತಿ ಸಾಲಿನಲ್ಲಿದ್ದರು. ಮೂರ್ತಿಯವರು ನಮ್ಮ ಬದುಕಿನಲ್ಲೇನಾದರೂ ಪವಾಡ ಮಾಡುತ್ತಾರೆ ಎಂಬುದು ಅವರೆಲ್ಲರ ವಿಶ್ವಾಸವಾಗಿತ್ತು. ನಿಮಗೆ ಗೊತ್ತಿರಲಿ,  ಆ ಥರಾ ಪವಾಡ ಮಾಡುತ್ತೇನೆ ಎಂದು ಮೂರ್ತಿಯವರೆಲ್ಲೂ ಜಾಹೀರಾತು ಹಾಕಿಕೊಂಡಿಲ್ಲ. ಜನರನ್ನು ಮರುಳು ಮಾಡಿಲ್ಲ. ಕರಾವಳಿಯ ಜಾತ್ರೆಗಳಲ್ಲಿ ಐಸ್’ಕ್ರೀಮ್ ಲಾರಿಯವರು ಬಲೇ ಬಲೇ ಬಲೇ”(ಬನ್ನಿ ಬನ್ನಿ ಬನ್ನಿ) ಎಂದು ಕೂಗುತ್ತಾರಲ್ಲಾ? ಆ ಥರ  ಅವರೆಂದೂ ಕೂಗಿಕೊಂಡಿಲ್ಲ.  ಅವರ ಟ್ರಾಕ್ ರೆಕಾರ್ಡುಗಳೇ ಅವರು ಅಂತಹಾ ಪವಾಡ ಮಾಡುತ್ತಾರೆ ಎಂಬುದನ್ನು ಹೇಳುತ್ತದೆ. ಅದು ನಿಜವಾಗಿಯೂ ಪವಾಡವೋ ವೈದ್ಯಕೀಯ ಲೋಕಕ್ಕೆ ಬಂದ ಸವಾಲೋ? ಅಥವಾ ಭಟ್ಟರು ಏನೂ ಓದಿಕೊಳ್ಳದೆ ಸಿಕ್ಕ ಸಿಕ್ಕ ಮರದ ಪುಡಿಯನ್ನು ಕೊಡುತ್ತಾರೋ? ಏನೋ ಒಂದು. ಆದರೆ ಅವರು ನಮ್ಮನ್ನು ಬದುಕಿಸುತ್ತಾರೆ ಎನ್ನುವ ಭಾವನೆ ಮಾತ್ರ ಅಲ್ಲಿದ್ದವರೆಲ್ಲರಲ್ಲೂ ಇತ್ತು. ನನ್ನನ್ನು ಸ್ಥಳೀಯರೊಬ್ಬರು ಅಲ್ಲಿಗೆ ಕರೆದೊಯ್ದಿದ್ದರಲ್ಲ, ಅವರು ಹೇಳ್ತಾಯಿದ್ರು “ನಾನು ನನ್ನ ಹತ್ತಾರು ಫೇಸ್’ಬುಕ್ ಸ್ನೇಹಿತರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಶೇಕಡಾ ೯೦ ರಷ್ಟು ಜನಕ್ಕೆ ಗುಣವಾಗಿದೆ” ಎಂದು. ಮತ್ತದು ನಿಜವಾದ ಮಾತೂ ಆಗಿತ್ತು.

ನಿಮಗೆ ಗೊತ್ತಿರಬಹುದು, ಸರ್ಪಸುತ್ತು(Herpes Virus) ಅಂತ ಒಂದು ಕಾಯಿಲೆ ಇದೆ. ಈಗ್ಗೆ ಐದಾರು ವರ್ಷಗಳ ಹಿಂದೆ ಅದಕ್ಕೆ ಅಲೋಪತಿಯಲ್ಲಿ ಯಾವುದೇ ಔಷಧ ಇರಲಿಲ್ಲ. ನಾನು ಪಿ.ಯು.ಸಿಯಲ್ಲಿರುವಾಗ ನನಗೂ ಅದು ಬಂದಿತ್ತು. ಡಾಕ್ಟರನ್ನು ಭೇಟಿಯಾದಾಗ ಅವರು ನನಗೆ ಹೇಳಿದ್ದೇನು ಗೊತ್ತಾ? “ಇದಕ್ಕೆ ಇಲ್ಲಿ ಆಗುವುದಿಲ್ಲ, ನೀನು ತಕ್ಷಣ ಮುತ್ತಮ್ಮನವರಲ್ಲಿಗೆ ಹೋಗು” ಅಂತ. ಮುತ್ತಮ್ಮ ನಮ್ಮ ಊರಿನಲ್ಲಿದ್ದ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದರು(ಈಗ ಅವರಿಲ್ಲ). ನಾಟಿ ವೈದ್ಯಕೀಯದಲ್ಲಿ ಅಗಾಧ ಅನುಭವವಿದ್ದ ಮುತ್ತಮ್ಮನವರ ಬಳಿಗೆ ನಿತ್ಯವೂ ನೂರಾರು ರೋಗಿಗಳು ಬರುತ್ತಿದ್ದರು. ಬಂದವರಿಗೆಲ್ಲ  ಸೀಯಾಳದಲ್ಲಿ  ಅದೇನೋ ಮಂತ್ರ ಮಾಡಿ ಒಂದಷ್ಟು ಗಿಡಮೂಲಿಕೆಗಳನ್ನು  ಕೊಡ್ತಾಯಿದ್ರು. ನನಗೂ ಅದನ್ನೇ ಕೊಟ್ಟಿದ್ದರು. ನನಗೆ ವಾಸಿಯೂ ಆಯ್ತು.  “ಬರೀ ಮೂರನೇ ಕ್ಲಾಸ್ ಓದಿರುವ ಮೂರ್ತಿಯವರು ಯಾವುದೇ ರಿಪೋರ್ಟ್ ನೋಡದೇ ಕ್ಯಾನ್ಸರ್’ನಂತಹ ಮಾರಕ ರೋಗಗಳಿಗೆ ಮದ್ದು ಕೊಡುತ್ತಾರೆ ಅಂತ ಕುಹುಕವಾಡಿದ್ದರಲ್ಲವೇ, ಅದಕ್ಕಾಗಿ ಈ ಉದಾಹರಣೆ ಕೊಟ್ಟಿದ್ದು. ಮುತ್ತಮ್ಮ ಮೂರನೇ ಕ್ಲಾಸನ್ನೂ ಓದಿರಲಿಲ್ಲ. ಆದರೂ ರೋಗಿಗಳಿಗೆ ಔಷಧ ನೀಡಿ ಅವರನ್ನು ಗುಣಮುಖರಾಗಿ ಮಾಡುತ್ತಿರಲಿಲ್ಲವೇ? ಅಷ್ಟಕ್ಕೂ, ನೀವು ಹೇಳುವ ಎಂ.ಬಿ.ಬಿ.ಎಸ್  – ಬಿ.ಎ.ಎಂ.ಎಸ್  ಓದಿದವರೂ ಕೂಡಾ  ಎಲ್ಲಾ ರೋಗಿಗಳನ್ನು ಬದುಕಿಸಿದ ಉದಾಹರಣೆಯಿದೆಯೇ?

ವಿಜಯಲಕ್ಷ್ಮಿಯವರೇ, ಇನ್ನೂ  ನೈಜ ಉದಾಹರಣೆ ನೀಡಬಯಸುತ್ತೇನೆ. ಮೂರ್ತಿಯವರ ಬಳಿಗೆ ಭೇಟಿ ನೀಡುವ ಮುನ್ನ, ಅಲ್ಲಿ ಸದಾನಂದ  ಶೆಟ್ರು ಅಂತೊಬ್ಬ ವ್ಯಕಿ ಸಿಗ್ತಾರೆ. ಪಂಡಿತರು ಔಷಧಿ ಕೊಡುವ ದಿನಗಳಲ್ಲೆಲ್ಲಾ ಆ ವ್ಯಕ್ತಿ ಸಿಗ್ತಾರೆ. ಅವರಿಗೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ತಗಲಿತ್ತು. ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡ ಬಳಿಕವೂ ಅದು ಕಡಿಮೆಯಾಗಲಿಲ್ಲ. ಬೆನ್ನು ಬೆನ್ನಿಗೆ ನಡೆದ ಕೀಮೋಗಳಿಂದ ಅವರ ದೇಹ “ಇನ್ನು ಇದ್ಯಾವುದು ಬೇಡ” ಎನ್ನುವಷ್ಟು ಜರ್ಜರಿತವಾಗಿತ್ತು. ಕಡೆಗೆ ಯಾರದ್ದೋ ಮಾತು ಕೇಳಿ ನರಸೀಪುರಕ್ಕೆ ಬಂದ್ರು. ಅಲ್ಲಿ ಮೂರೇ ಮೂರು ತಿಂಗಳುಗಳಲ್ಲಿ ಅವರ ಖಾಯಿಲೆ ಸಂಪೂರ್ಣವಾಗಿ ವಾಸಿಯಾಯ್ತು. ಆವತ್ತು ತನ್ನ ಖಾಯಿಲೆ ವಾಸಿ ಮಾಡಿದ ವೈದ್ಯರಿಗೆ ಉಪಕಾರ ಮಾಡುವ ಸಲುವಾಗಿ ಶೆಟ್ಟರು ಇವತ್ತಿಗೂ ಮೂರ್ತಿಯವರ ಮನೆಯಲ್ಲಿ ಸ್ವಯಂಸೇವಕರಾಗಿ ಬಂದವರ ಸರತಿ ಸಾಲನ್ನು ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದಾರೆ. ಅದೂ ಉಚಿತವಾಗಿ.

“ಎಂಟು ವರ್ಷಗಳ  ಹಿಂದೆ ನಾನು ಬೋನ್ ಕ್ಯಾನ್ಸರ್’ಗೆ ತುತ್ತಾದಾಗ ಮಣಿಪಾಲದ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಜೊತೆಗೆ ನಾರಾಯಣ ಮೂರ್ತಿಯವರ ಚಿಕಿತ್ಸೆಯನ್ನೂ ಪಡೆದಿದ್ದೇನೆ. ಈಗ ಕ್ನಾನ್ಸರನ್ನು ಗೆದ್ದು ಏಳು ವರ್ಷಗಳು ಕಳೆದಿದೆ. ಮಣಿಪಾಲದ ಅಲೋಪತಿ ಚಿಕಿತ್ಸೆಯನ್ನು ನಿಲ್ಲಿಸಿದ್ದೇನೆ. ಆದರೆ  ನನ್ನ satisfaction ಗಾಗಿ ಮೂರ್ತಿಯವರ  ಔಷಧಿಯನ್ನು ಈಗಲೂ ತಪ್ಪದೆ ತೆಗೆದುಕೊಳ್ಳುತಿದ್ದೇನೆ- ಶ್ರುತಿ ಬಿ.ಎಸ್, ಸಾಗರ, ಕ್ಯಾನ್ಸರ್ ಸರ್ವೈವರ್”

ಇನ್ನೊಂದು ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ಅನೂಪ್ ಅಂತ  ಸ್ನೇಹಿತರೊಬ್ಬರಿದ್ದಾರೆ. ಅವರ ಅತ್ತೆಗೆ ಕೆಲವು ವರ್ಷಗಳ ಹಿಂದೆ ಬೋನ್ ಮ್ಯಾರೋ ಕ್ಯಾನ್ಸರ್ ಆಗಿತ್ತು. ಇಲ್ಲಿ ಆಗುವುದಿಲ್ಲ ಎಂಬ ಕಾರಣ ನೀಡಿ  ಅಪೋಲೋ ಆಸ್ಪತ್ರೆ ವೈದ್ಯರು ರೋಗಿಯನ್ನು  ಶಂಕರ  ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿನ ವೈದ್ಯರು ಇನ್ನು ಆರು ತಿಂಗಳಿಗಿಂತ ಹೆಚ್ಚು ಇವರು ಬದುಕಲ್ಲ ಎಂದು ಕೈಚೆಲ್ಲಿದ್ದರು. ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾಗ ಇವರಿಗೆ ಜೀವ ಉಳಿಸುವ ಸಲಹೆಯೊಂದು ಸಿಕ್ಕಿತ್ತು, “ಕಡೇಯ ಪ್ರಯತ್ನವಾಗಿ ನರಸೀಪುರಕ್ಕೆ ಹೋಗಿ, ಪ್ರಯೋಜನ ಆದರೂ ಆದೀತು” ಅಂತ. ಶಾಕ್ ಆಗ್ಬೇಡಿ, ಇಂತಹ ಒಂದು ಸಲಹೆ ಕೊಟ್ಟಿದ್ದು ಮತ್ತಾರೂ ಅಲ್ಲ, ಅಪೋಲೋ ಆಸ್ಪತ್ರೆಯಲ್ಲಿ ಅನೂಪ್ ಅತ್ತೆಗೆ ಚಿಕಿತ್ಸೆ ನೀಡಿದ್ದ ವೈದ್ಯರೇ. ಅವರ ಸಲಹೆಯಂತೆ ಇವರು ನರಸೀಪುರದ ಮೂರ್ತಿಯವರಿಂದ ಚಿಕಿತ್ಸೆ ಪಡೆದರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ,  ಆರು ತಿಂಗಳಷ್ಟೇ ಎಂದು ಹೇಳಿಸಿಕೊಂಡು ಬಂದವರು ಇವತ್ತು ಮೂರು ವರ್ಷಗಳಾದರೂ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಇದೇ ಥರ ಕಡೆಯ ಪ್ರಯತ್ನ ಎನ್ನುತ್ತಾ ನರಸೀಪುರಕ್ಕೆ ಬಂದವರು ಇನ್ನೂ ಉಸಿರಾಡುತ್ತಾ ಜೀವನ ನಡೆಸುತ್ತಿರುವವರು ನೂರಾರು ಜನ ಇದ್ದಾರೆ.

ಮೇಲಿನ ಲಿಂಕಿನಲ್ಲಿರುವ ವೀಡಿಯೋ ತೆರೆದು ನೋಡಿ. ಯಾರೋ ವಿದೇಶಿ  ಮಹಿಳೆಯೊಬ್ಬರು ಮೂರ್ತಿಯವರ ಬಗೆಗೆ ತಿಳಿದು Take a bow ಎನ್ನುವಂತೆ ಕೈ ಮುಗಿಯುತ್ತಿರುವ  ವೀಡೀಯೋ ಅದು. ಮೂರ್ತಿಯವರ ಔಷಧದಿಂದ ಯಾರೂ ಬದುಕಿಲ್ಲವೆಂದಾದರೆ ಅವರೇಕೆ ಇಲ್ಲಿ  ಬಂದು ವೀಡಿಯೋ  ಮಾಡಿದರು? ಏನೂ ಇಲ್ಲದೆ ಅಷ್ಟು ಸುಲಭಕ್ಕೆ ಭಾರತೀಯರನ್ನು ವಿದೇಶಿಯರು ಒಪ್ಪಿಕೊಂಡಾರೇ?

ಎರಡನೆಯದನ್ನು ನೋಡಿ, ನಮ್ಮದೇ ಟಿ.ವಿ೯ ನಲ್ಲಿ ಬಂದಿದ್ದು. ಅದೆಷ್ಟು ಜನ ಮೂರ್ತಿಯವರ ಕೈಯಿಂದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಣ್ಣ ಪರಿಚಯ ಸಿಗುತ್ತದೆ. ಮೂರ್ತಿಯವರು ಜನರನ್ನು ಮೋಸಗೊಳಿಸಿ ಹಣ ಮಾಡುತ್ತಿದ್ದಾರೆಂದರೆ ಟಿವಿ೯ ನವರು ನಿಮಗೊಂದು ಸಲಾಂ ಎನ್ನುತ್ತಿದ್ದರೇ? ಇಲ್ಲಿ ಒಂದೋ ಟಿ.ವಿ೯ ನವರು ಸುಳ್ಳು ಹೇಳಿರಬೇಕು ಅಲ್ಲಾ ನಿಮ್ಮ ಕವರ್ ಸ್ಟೋರಿ ಸುಳ್ಳು ಹೇಳಿರಬೇಕು, ಅಲ್ವಾ?

ನಿಮ್ಮ ಕಾರ್ಯಕ್ರಮದ ಕೊನೆಯಲ್ಲಿ “ನಿಮ್ಮ ಊರಲ್ಲೂ ಇಂತಹ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ನಾವು ಕವರ್ ಮಾಡ್ತೀವಿ” ಅಂತ ಬರುತ್ತದೆ. ಅಂದ್ರೆ ಯಾವ ಊರಿನಿಂದಾದರೂ ಸರಿ, ಜನ ನಿಮಗೆ ಬರೆದು ಹಾಕಿದ್ರೆ ತಕ್ಷಣ ಕವರ್ ಮಾಡ್ತೀರಾ ಅಂತಾಯ್ತು. ಸತ್ಯ ಹೇಳಿ,  ನರಸೀಪುರದ ವಿಷಯದಲ್ಲೂ ಕವರ್ ಸ್ಟೋರಿ ತಂಡದವರು ಮಾಡಿದ್ದೂ ಅದೇ ಅಲ್ವಾ? ಯಾರೋ ಮೂರ್ತಿಯವರಿಗೆ ಆಗದ ಸ್ಥಳೀಯರು ಕೆಲವು ವಿಷಯಗಳನ್ನು  ನಿಮ್ಮ ಗಮನಕ್ಕೆ ತಂದಿದ್ದಾರೆ, ನೀವು ಹಿಂದೆ ಮುಂದೆ ನೋಡದೆ ಏಕಪಕ್ಷೀಯ ಪ್ರೋಗ್ರಾಂ ಮಾಡೀದ್ದೀರ. ಅದರಲ್ಲೊಬ್ಬ ತಮಿಳುನಾಡಿನ ಆಸ್ಪತ್ರೆಯಿಂದ ಡಾಕ್ಟರುಗಳೇ ಇಲ್ಲಿಗೆ ಜನ ಕಳುಹಿಸುತ್ತಾರೆ. ಪಂಡಿತರು ಅವರಿಗೆ ಮಾಮೂಲಿ ಕಮಿಷನ್ ಕೊಡುತ್ತಾರೆ ಅಂತ. ಅಲ್ಲಾ ಮೇಡಂ, ಹೇಳಿಕೆ ಕೊಡುವವರೇನೋ ಬಾಲಿಶವಾಗಿ ಹೇಳಿಕೆ ಕೊಡುತ್ತಾರೆ. ಆದರೆ ನಿಮಗೆ ತಿಳುವಳಿಕೆ ಇಲ್ಲವೇ? ಡಾಕ್ಟರುಗಳಿಗೆ ಹಣ ಮಾಡುವುದಾದರೆ ಹೇಗೂ ಮಾಡಬಹುದು. ಎಂಜಲು ಕಮಿಷನ್’ಗಾಗಿ ತಮಿಳ್ನಾಡಿನಿಂದ ಇಲ್ಲಿಗೆ ರೋಗಿಗಳನ್ನು ಕಳುಹಿಸುವ ಅವಶ್ಯಕತೆಯಿದೆಯೇ? ಸ್ಥಳೀಯರ ಹೇಳಿಕೆಗಳನ್ನೆಲ್ಲಾ ಪಡೆದ ನೀವು, ಮೂರ್ತಿಯವರ  ಕೈಯಿಂದ ಚಿಕಿತ್ಸೆ  ಪಡೆದು ಗುಣಮುಖರಾದವರನ್ನು ಸೌಜನ್ಯಕ್ಕಾದರೂ ಮಾತನಾಡಿಸಿದ್ದೀರಾ? ಸತ್ಯಾಸತ್ಯತೆ ಏನು ಅಂತ ತಿಳಿಯುವ ಪ್ರಯತ್ನವನ್ನಾದರೂ ಮಾಡಿದ್ದೀರಾ? ಕವರ್ ಸ್ಟೋರಿ ಹೆಸರಿನಲ್ಲಿ ಏಕಪಕ್ಷೀಯ ಪ್ರೋಗ್ರಾಂ ಮಾಡಿದ್ದು ಏಕೆ?

ಒಂದಂತೂ ಖರೇ ಮೇಡಂ, ನೀವು ಮೊನ್ನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ನಾರಾಯಣ ಮೂರ್ತಿಯವರು ಔಷಧ ಕೊಡುವುದು ನಿಂತು ಹೋದರೆ, ಅದರಿಂದ ಅವರು ಕಳೆದುಕೊಳ್ಳುವಂತಾದ್ದು ಏನೇನೂ ಇಲ್ಲ. ಯಾಕಂದ್ರೆ ಅವರಿಗೆ ಮೂರು ಜನ್ಮಕ್ಕೆ ಕುಳಿತು ಉಣ್ಣುವಷ್ಟು ಅಡಿಕೆ ತೋಟವಿದೆ. ಆದರೆ ನಿಮ್ಮ  ಅಚಾತುರ್ಯದಿಂದ ಏನಾದರೂ ತೊಂದರೆ ಉಂಟಾದರೆ ಅದು ಮಾರಕ ರೋಗಗಳಿಂದ ಬಳಲಿಕೊಂಡು ಮೂರ್ತಿಯವರನ್ನೇ ಕೊನೇಯ ಆಸರೆ ಎಂದು ನಂಬಿರುವ ಸಾವಿರಾರು ರೋಗಿಗಳಿಗೆ ಎಂಬುದನ್ನು ಮರೆಯಬೇಡಿ ಪ್ಲೀಸ್!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!