ಅಂಕಣ

ದಣಿವರಿಯದ ದಳಪತಿ

ಹುಟ್ಟಿದ್ದು ರೈತ ಕುಟುಂಬದಲ್ಲಿ, ಓದಿದ್ದು ಸಿವಿಲ್ ಡಿಪ್ಲೋಮಾ, ಉದೋಗಕ್ಕಾಗಿ ಅರಸಿದ್ದು ಕಂಟ್ರಾಕ್ಟರ್ ವೃತ್ತಿ ಆದರೆ ಬದಲಾಗಿದ್ದು ಚಾಣಾಕ್ಷ ರಾಜಕಾರಣಿಯಾಗಿ. ಇದು ದೇಶದ ಅತ್ಯಂತ ಚತುರ ಮತ್ತು ಸಮಯಸಾಧಕ ರಾಜಕಾರಣಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರ ಬಗ್ಗೆ ಸಂಕ್ಷಿಪ್ತ ವರ್ಣನೆ. ೬೦ ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರಂಭವಾದ ದೇವೇಗೌಡರ ರಾಜಕೀಯ ಪಯಣ ಹಲವು ಏಳು ಬೀಳುಗಳ ತರುವಾಯವೂ ಇಂದಿಗೂ ನಡೆಯುತ್ತಿದೆ ಅಂದರೆ ಅದಕ್ಕೆ ಅವರ ರಾಜಕೀಯ ನೈಪುಣ್ಯತೆ, ಸಮಯಕ್ಕೆ ಸರಿಯಾಗಿ ರಾಜಕೀಯ ದಾಳಗಳನ್ನು ಉರುಳಿಸುವ ಕಲೆ ಮತ್ತು ತಂತ್ರಗಾರಿಕೆಯೇ ಕಾರಣ.

ದೇವೇಗೌಡರ ೬ ದಶಕಗಳ ಸುದೀರ್ಘ ರಾಜರಾಣದಲ್ಲಿ ಅವಲೋಕಿಸಿದರೆ ಕಾಣುವುದು ಹುಟ್ಟು ಹೋರಾಟ ಮಾತ್ರ. ಸಹಕಾರ ಸಂಘದ ಅನುಭವ ಹಿನ್ನಲೆಯಲ್ಲಿ ರಾಜಕಾರಣಕ್ಕೆ ಧುಮುಕಿ ಕಾಂಗ್ರೆಸ್ ಸೇರಿದ್ದ ದೇವೇಗೌಡರು ೧೯೬೨ರ

ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಕೊನೇಕ್ಷಣದಲ್ಲಿ ಟಿಕೆಟ್ ನಿರಾಕರಿಸಿದ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆದು ಸ್ವತಂತ್ರವಾಗಿ ಹೊಳೆನರಸೀಪುರದಲ್ಲಿ ಗೆದ್ದು ಬರುತ್ತಾರೆ ಗೌಡರು. ಆವಾಗ ಹೇಳಿ ಕೇಳಿ ಈಗಿನ ತರಹದ ರಾಜಕಾರಣ ಇರಲಿಲ್ಲ. ಈಗಿನ ತರಹ ಹಣದ ಹೊಳೆ ಹರಿಯುತ್ತಿರಲಿಲ್ಲ. ಕೇವಲ ಜನಪ್ರಿಯತೆ, ವರ್ಚಸ್ಸು ಇದ್ದರೆ ಮಾತ್ರ ಚುನಾವಣೆ ಗೆಲ್ಲೋ ಕಾಲವಾಗಿತ್ತು. ಮೇಲಾಗಿ ಗೌಡರ ಬಳಿ ಚುನಾವಣೆ ಖರ್ಚಿಗೆ ಬೇಕಾದಷ್ಟು ಹಣವಿರದಿದ್ದಾಗ ಸ್ನೇಹಿತರು ಮತ್ತು ಹಿತೈಶಿಗಳೇ ಖುದ್ದು ಹಣದ ಸಹಾಯ ಮಾಡುತ್ತಾರೆ. ನಂತರ ಈ ಹಣವನ್ನು ಹಿಂತಿರುಗಿಸಲು ಸ್ವತಃ ಶಾಸಕರಾಗಿದ್ದ ದೇವೇಗೌಡರೇ ಆಲೂಗಡ್ಡೆ ಉಳುಮೆ ಮಾಡುತ್ತಾರೆ. ಹಾಗಾಗಿ ಅವರಿಗೆ ಮಣ್ಣಿನ ಮಗ ಎಂಬ ಹೆಸರು ಬಂತು ಎಂಬ ಮಾತಿದೆ.

೮೦ರ ದಶಕದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಮನ್ವಂತರಕ್ಕೆ ಜನತಾ ಪರಿವಾರ ನಾಂದಿ ಹಾಡಲು ಬಹುದೊಡ್ದ ಕಾರಣ ದೇವೇಗೌಡರು. ೧೯೮೩ರ ವಿಧಾನಸಭಾ ಚುನಾವಣೆ ಕಾಲದಲ್ಲಿ ಜನತಾದಳದ ರಾಜ್ಯಾಧ್ಯಕ್ಷರಾಗಿದ್ದ ಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯವಿಡೀ ಸುತ್ತುತ್ತಾರೆ. ನಿಂತ ನೀರಾಗಿದ್ದ ರಾಜ್ಯ ರಾಜಕಾರಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಕಾರಣರಾಗುತ್ತಾರೆ. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದು ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ರಚನೆ ಮಾಡುವಲ್ಲಿ ಗೌಡರ ಪಾತ್ರ ಮಹತ್ತರವಾಗಿತ್ತು. ರಾಜ್ಯಾಧ್ಯಕ್ಷರಾಗಿದ್ದರಿಂದ ಸಹಜವಾಗೇ ಮುಖ್ಯಮಂತ್ರಿ ಸ್ಥಾನದ ಮೇಲೆ ಗೌಡರು ಕಣ್ಣಿಟ್ಟಿದ್ದರು. ಆದರೆ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರ ಮಾತಿಗೆ ಮನ್ನಣೆ ನೀಡಿ ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರಿಸುತ್ತಾರೆ. ಯಾವಾಗ ಹೆಗಡೆಯವರು ಗೌಡರ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲವೋ ಗೌಡರು ತಮ್ಮ ರಾಜಕೀಯ ಚದುರಂಗ ಆಟವನ್ನು ಆಡಿ ಹೆಗಡೆಯವರನ್ನು ಪಕ್ಷದಿಂದಲೇ ಉಚ್ಚಾಟಿಸುತ್ತಾರೆ. ಎಸ್. ಆರ್. ಬೊಮ್ಮಾಯಿ ಮತ್ತು ಜೆ.ಹೆಚ್. ಪಟೇಲ್ ಮುಖ್ಯಮಂತ್ರಿಯಾದಾಗಲೂ ಗೌಡರು ತಮ್ಮ ತಂತ್ರಗಳನ್ನು ಸರಿಯಾದ ಸಮಯಕ್ಕೆ ಹೆಣೆಯುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಗೌಡರ ರಾಜಕೀಯ ಗರಡಿಯಲ್ಲಿ ಪಳಗಿದವರ ಪಟ್ಟಿಯೇ ದೊಡ್ದದಿದೆ.

ನೀರಾವರಿ ಮತ್ತು ಕೃಷಿ ಕ್ಷೇತ್ರಕ್ಕೆ ಗೌಡರು ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಕೃಷ್ಣಾ, ತುಂಗಭದ್ರಾ ಮತ್ತು ಕಾವೇರಿ ನದಿಗಳ ಹೆಚ್ಚುವರಿ ನೀರನ್ನು ಕೃಷಿ ಕ್ಷೇತ್ರಕ್ಕೆ ಬಳಸಲು ಹಲವು ಮಹತ್ತರ ಯೋಜನೆಗಳಿಗೆ ಕಾರಣರಾದವರು ದೇವೇಗೌಡರು. ತಾವು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನೀರಿಗೆ ತಗಾದೆ ತೆಗೆದಿದ್ದ ಜಯಲಲಿತಾಗೆ ಸರಿಯಾಗೇ ಟಾಂಗ್ ನೀಡಿದ್ದರು. ೧೯೯೬ ರಲ್ಲಿ ಎಡ ಪಕ್ಷಗಳ ನೇತೃತ್ವದ ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ದೇವೇಗೌಡರು. ೨೦೦೬ ರಲ್ಲಿ ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರಕಾರ ಮುರಿದು ಬೀಳಿಸಿದ ದೇವೇಗೌಡರ ಮಗ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಗೌಡರಿಗೆ ಸಹಜವಾಗಿಯೇ ಕಸಿವಿಸಿ ಅನುಭವ. ರಾಜಕೀಯ ಜೀವನದುದ್ದಕ್ಕೂ ಸೋ ಕಾಲ್ಡ್ ಜಾತ್ಯಾತೀತತೆ ತತ್ವವನ್ನು ಅನುಸರಿಸಿಕೊಂಡು ಬಂದಿದ್ದ ಗೌಡರಿಗೆ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದ ಬಿಜೆಪಿಯ ಜೊತೆ ಕೈ ಜೋಡಿಸಿಕೊಂಡಾಗ ಅರಗಿಸಲು ಸಾಧ್ಯವಾಗಲಿಲ್ಲ ಎಂಬುದು ಗೌಡರ ಆಪ್ತವರ್ಗದವರ ಮಾತು. ಆದರೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಗೌಡರು ಆಡಿದ ನಾಟಕ ಇದು ಎಂಬುದು ವಿರೋಧಿಗಳ ಮಾತು. ಅಧಿಕಾರಕ್ಕಾಗಿ ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳನ್ನು ಮಿತ್ರರನ್ನಾಗಿ ಮಾಡಿಕೊಂಡ ದೇಶದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ದೇವೇಗೌಡರು ಅಗ್ರಪಂಕ್ತಿಯಲ್ಲಿ ಕಾಣುತ್ತಾರೆ. ಡಿ.ಕೆ.ಶಿವಕುಮಾರ್ ಅವರಿಂದಾಗಿ ಕನಕಪುರ, ರಾಮನಗರದಲ್ಲಿ ಗೌಡರ ಪ್ರಾಬಲ್ಯ ಬಹಳ ಕುಸಿದಿದೆಯಾದರೂ ಹಾಸನದಲ್ಲಿ ಇನ್ನೂ ಮುಂದುವರಿದಿದೆ. ಸೊಸೆ ಭವಾನಿ ರೇವಣ್ಣ ಅವರ ರಾಜಕೀಯ ರಂಗ ಪ್ರವೇಶದಿಂದಾಗಿ ಹಾಸನದಲ್ಲಿ ಗೌಡರನ್ನು ತೆರೆಮರೆಗೆ ಸರಿಸಲು ವೇದಿಕೆ ಸಿದ್ದವಾಗಿದ್ದು ಸ್ಪಷ್ಟವಾಗುತ್ತಿದೆ. ಪಕ್ಷದ ಒಳಗಿನ ಮತ್ತು ಹೊರಗಿನ ವಿರೋಧಿಗಳನ್ನು ಹಣಿಯಲು ಗೌಡರು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌಡರ ವಿರೋಧಿಗಳು ಗೌಡರು ಹಾಸನ ಮತ್ತು ತಮ್ಮ ಹುಟ್ಟೂರಾದ ಹೊಳೆನರಸೀಪುರದಲ್ಲಿ ಅಪಾರ ಆಸ್ತಿ ಪಾಸ್ತಿ ಮಾಡಿಕೊಂಡಿದ್ದಾರೆ ಎಂಬ ಗುರುತರ ಆಪಾದನೆ ಮಾಡಿದರೂ, ಯಾವುದೇ ಹಗರಣಕ್ಕೆ ಸಿಲುಕದೇ, ಕೈ ಮತ್ತು ಹೆಸರು ಕೊಳಕು ಮಾಡಿಕೊಳ್ಳದ ರಾಜಕಾರಣಿ ಗೌಡರು. ದೇವೇಗೌಡರು ಅಂದರೆ ಡೋಂಗಿ ಜಾತ್ಯಾತೀತವಾದಿ, ಅವಕಾಶವಾದಿ, ಕುಟುಂಬ ರಾಜಕಾರಣಿ, ಸೆಕ್ಯುಲರ್ ಸಿದ್ಧಾಂತವನ್ನು ಉಪಯೋಗಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ರಾಜಕಾರಣಿ ಎಂದು ಗೌಡರ ವಿರೋಧಿಗಳು ಜರಿಯುತ್ತಾರೆ. ಕರ್ನಾಟಕದ ರಾಜಕೀಯವನ್ನು ಬಹುಷಃ ಎಲ್ಲಾ ಆಯಾಮಗಳಿಂದ ನೋಡಿರುವ ರಾಜಕಾರಣಿ ದೇವೇಗೌಡರು ಅಂದರೆ ತಪ್ಪಾಗಲಾರದು. ಪ್ರಾಯ ೮೪ ಆದರೂ ಗೌಡರ ರಾಜಕೀಯ ಬದ್ಧತೆ ಮತ್ತು ಪ್ರ‍ೇಮ ಎಂತವರನ್ನೂ ನಾಚಿಸುವಂತದ್ದು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಮಗ್ಗಲುಗಳನ್ನು ದಾಟಿ ಬಂದಿರುವ ಗೌಡರು ಗೆದ್ದಾಗ ಅತಿಯಾಗಿ ಹಿಗ್ಗಿಲಿಲ್ಲ. ಸೋತಾಗ ಬಹಳ ಕುಗ್ಗಲಿಲ್ಲ. ಮತ್ತಷ್ಟು ಪುಟಿದೆದ್ದು ರಾಜಕೀಯ ತಂತ್ರಗಳನ್ನು ದಾಳಗಳನ್ನು ಉರುಳಿಸಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗರಿಮೆ ಗೌಡರದ್ದು. ಒಬ್ಬ ರಾಜಕಾರಣಿಯಾಗಿ ಎಲ್ಲಾ ಹುದ್ದೆಗಳನ್ನು ಅನುಭವಿಸಿ, ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡು ಜನತಾ ಪರಿವಾರ ಒಗ್ಗೂಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ ದೇವೇಗೌಡರಿಗೆ ಇನ್ನೊಂದು ಸಲ ಜೆ.ಡಿ.ಎಸ್. ಪಕ್ಷ ಅಧಿಕಾರಕ್ಕೇರಬೇಕು ಅನ್ನುವುದು ಮನಸ್ಸಿನೊಳಗಿರುವ ಕೊನೆಯ ರಾಜಕೀಯ ಆಸೆ ಅಂದರೂ ಅತಿಶಯೋಕ್ತಿಯಾಗಲಾರದು. ಕುಟುಂಬ ಸದಸ್ಯರನ್ನು ರಾಜಕೀಯಕ್ಕೆ ಕರೆ ತಂದು ತಮ್ಮ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿ ತಾವೇ ಹುಟ್ಟಿ ಆಡಿಸಿ ಬೆಳೆಸಿದ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನುವ ಕೊರಗು ಗೌಡರದ್ದು. ಗೌಡರು ರಾಜಕೀಯ ಆಟಗಳು ಮತ್ತು ಸಿದ್ಧಾಂತಗಳೇನೇ ಇರಲಿ , ಕರ್ನಾಟಕ ರಾಜಕೀಯದಲ್ಲಿ ಅವರೊಂದು ಮೇರುವ್ಯಕ್ತಿ.

ಅವರಿಗೊಂದು ಸಲಾಂ!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!