ಅಂಕಣ

ಇದು ಒಂದು ಯುನಿವರ್ಸಿಟಿಯ ಕತೆಯಲ್ಲ

ಜನವರಿ 26,2016. ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಭಾರತ-ಆಸೀಸ್ ನಡುವೆ ಟ್ವೆಂಟಿ ಟ್ವೆಂಟಿ ಪಂದ್ಯ ನಡೆಯುತ್ತಿತ್ತು. ಇತ್ತ ಪಾಕಿಸ್ತಾನದಲ್ಲಿ ಈ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿರಾಟ್ ಕೊಹ್ಲಿ ಅಭಿಮಾನಿ ಉಮರ್ ದಾರಜ್ ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ಅತೀವ ಸಂಭ್ರಮದಿಂದ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಿಯೇ ಬಿಟ್ಟ. ವಿರಾಟ್ ಕೊಹ್ಲಿ ಆಟದಿಂದ ಉತ್ತೇಜಿತನಾಗಿ ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ಕಿಂಚಿತ್ತು ಯೋಚನೆ ಕೂಡ ಆತನ ಮನದಲ್ಲಿ ಬಂದಿತ್ತೋ ಇಲ್ಲವೋ. ಆದರೆ ಆತನ ಕ್ರೀಡಾಭಿಮಾನ ಏನೇ ಇರಲಿ ಆ ದೇಶದ ಕಾನೂನಿನ ದೃಷ್ಟಿಯಲ್ಲಿ ಆತ ಮಾಡಿದ್ದು ಅಕ್ಷಮ್ಯ ಅಪರಾಧ ಹಾಗು ದೇಶವಿರೋಧಿ ಕಾರ್ಯ. ಅದೇ ದಿನ ಆತನ ಬಂಧನವಾಯಿತು. ಮರು ದಿನ ಅಂದರೆ ಜನವರಿ 27, 2016ರಂದು ಅಲ್ಲಿನ ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉಮರ ದಾರಜ್ ನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಂಬಿಯ ಹಿಂದೆ ತಳ್ಳಿತು. ಅಲ್ಲಿನ ಯಾವುದೇ ಮಾಧ್ಯಮಗಳು ಉಮರ್ ಮಾಡಿದ್ದು ಸರಿ ಎಂದು ವಾದಿಸಲಿಲ್ಲ. ಅಲ್ಲಿನ ಯಾವೊಬ್ಬ ರಾಜಕಾರಣಿಯೂ ಉಮರನಿಗಾಗಿ ಧ್ವನಿ ಎತ್ತಲಿಲ್ಲ. ಅಲ್ಲಿನ ಯಾವೊಂದು ವಿಶ್ವವಿದ್ಯಾಲಯ, ಪುರಭವನಗಳ ಮುಂದೆ ಜಸ್ಟಿಸ್ ಫಾರ್ ಉಮರ್ ಎಂಬ ಘೋಷಣೆಗಳು, ಬೋರ್ಡ್ ಗಳು ಕಂಡು ಬರಲಿಲ್ಲ. ಕಾರಣ ಅವರಿಗೆಲ್ಲ ಗೊತ್ತಿತ್ತು ಆತ ಮಾಡಿದ್ದು ಪಾಕ್ ವಿರೋಧಿ ಕಾರ್ಯ ಎಂದು. ಮತ್ತದನ್ನು ಒಪ್ಪಿಕೊಂಡಿದ್ದರು. ಆದರೆ ಭಾರತದಲ್ಲಿ ‘ದೇಶ’ ಎಂಬ ವಿಷಯ ಬಂದಾಗ ಅಂತಹ ಒಗ್ಗಟ್ಟನ್ನು ಕಾಣಬಹುದೇ ?

ಈ ಘಟನೆಯ ಎರಡು ವಾರಗಳ ನಂತರ ಫೆಬ್ರವರಿ 11,2016ರಂದು ಭಾರತದ ರಾಜಧಾನಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮೇಲಿನದಕ್ಕಿಂತ ಭಿನ್ನ ಹಾಗು ಭಾರತದ ಅಸ್ತಿತ್ವಕ್ಕೆ ಮಾರಕವಾದ ಘಟನೆಯೊಂದು ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಅನುಮತಿ ಪಡೆದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಗುಂಪು ಅಲ್ಲಿನ ವಿದ್ಯಾರ್ಥಿ ನಾಯಕರುಗಳಾದ ಕನಯ್ಯ ಕುಮಾರ್ ಹಾಗು ಒಮರ್ ಖಾಲಿದ್ ನೇತೃತ್ವದಲ್ಲಿ ಉಗ್ರ ಅಫ್ಜಲ್ ಗುರು ಹಾಗು ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಮಕ್ಬೂಲ್ ಭಟ್ ಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಭಾರತದ ಸಂವಿಧಾನ, ದೇಶದ ಗೌರವ ಹಾಗು ಸಾರ್ವಭೌಮತೆಗೆ ಸೆಡ್ಡು ಹೊಡೆಯುತ್ತದೆ. JNU ಕ್ಯಾಂಪಸ್ ನ ಗೋಡೆಗಳಲ್ಲಿ ಅಫ್ಜಲ್ ಗುರು ಪರ ಪೋಸ್ಟರ್ ಅಂಟಿಸಿ ಆತನ ಗಲ್ಲು ಶಿಕ್ಷೆಯನ್ನು ‘ನ್ಯಾಯಾಂಗ ಹತ್ಯೆ’ ಎಂದು ಪ್ರತಿಭಟಿಸುತ್ತದೆ. ಅಷ್ಟಕ್ಕೂ ಸುಮ್ಮನಾಗದ ದೇಶದ್ರೋಹಿ ಗುಂಪು ಯಾವುದೇ ಭಯೋತ್ಪಾದಕರಿಗೂ ಕಡಿಮೆಯಿಲ್ಲದಂತೆ ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತದೆ.

ಆ ಆಘಾತಕಾರಿ ಘೋಷಣೆಗಳ್ಯಾವುವು ಗೊತ್ತೇ ?

* ಅಫ್ಜಲ್ ಹಂ ಶರ್ಮಿಂದಾ ಹೇ , ತೆರೆ ಕಾತಿಲ್ ಜಿಂದಾ ಹೇ (ಅಫ್ಜಲ್ ನಿನ್ನನ್ನು ಗಲ್ಲಿಗೆರಿಸಿದ್ದಕ್ಕೆ ನಮಗೆ ನಾಚಿಕೆಯಾಗಿದೆ, ಆದರೆ ನಿನ್ನ ಹೆಸರು ಅಜರಾಮರವಾಗಿರಲಿದೆ)

*ಭಾರತ್ ಕಿ ಬರಬಾದಿ ತಕ ಜಂಗ್ ರಹೇಗಿ ( ಭಾರತದ ಸರ್ವನಾಶವಾಗುವವರೆಗೆ ಹೋರಾಟ ಜಾರಿಯಲ್ಲಿರುತ್ತದೆ)

*ಭಾರತ್ ತೆರೆ ತುಕುಡೇ ಹೋಂಗೇ ಇನ್ಷಾ ಅಲ್ಲಾ ಇನ್ಷಾ ಅಲ್ಲಾ ( ದೇವರ ಸತ್ಯವಾಗಿ ಹೇಳುತ್ತೇವೆ , ಭಾರತವೇ ನೀನು ತುಂಡು ತುಂಡಾಗಿ ಹೋಗಲಿದ್ದೀಯ)

*ಇಂಡಿಯಾ ಮುರ್ದಾಬಾದ್ , ಮಾವೊವಾದ್ ಜಿಂದಾಬಾದ್ ( ಭಾರತಕ್ಕೆ ಧಿಕ್ಕಾರ, ಮಾವೊವಾದಕ್ಕೆ ಜೈಕಾರ )

* ಗೋ ಬ್ಯಾಕ್ ಇಂಡಿಯಾ (ಕಾಶ್ಮೀರದಿಂದ) (ಭಾರತವೇ ಕಾಶ್ಮೀರದಿಂದ ವಾಪಾಸ್ ಹೋಗು)

* ಘರ್ ಘರ್ ಸೆ ಅಫ್ಜಲ್ ನಿಕ್ಲೆಗ ( ಮನೆ ಮನೆಯಿಂದ ಅಫ್ಜಲ್ ಹೊರ ಬರಲಿದ್ದಾನೆ )

* ಕಾಶ್ಮೀರ ನಮ್ಮದಾಗುವ ತನಕ ಹೋರಾಡುತ್ತೇವೆ, ಕಾಶ್ಮೀರ ಸ್ವಾತಂತ್ರ್ಯವನ್ನು ಪಡೆದೆ ತೀರುತ್ತೇವೆ

ಯಾವುದೇ ಅನುಮಾನ ಬೇಡ !! ಈ ಘೋಷಣೆಗಳನ್ನು ಕೂಗಿದವರೆಲ್ಲ ಭಾರತೀಯರೇ. ಭಾರತದಲ್ಲೇ ಹುಟ್ಟಿ, ಇಲ್ಲೇ ಬೆಳೆದು , ಇಲ್ಲಿನ ಸವಲತ್ತುಗಳನ್ನು ಪಡೆದು , ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಿ, ವೋಟಿಂಗ್ ರೈಟ್ಸ್, ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪಾಸ್-ಪೋರ್ಟ್ ಹೊಂದಿರುವವರೇ.

ಆದರೆ ಇವೆಲ್ಲಕ್ಕಿಂತ ದೊಡ್ಡ ಆಘಾತವನ್ನು ಉಂಟು ಮಾಡಿದ್ದು ಇಂತಹ ದೇಶದ್ರೋಹಿ ಕೃತ್ಯಗಳಿಗೂ ಬೆಂಗಾವಲಾಗಿ, ಭಾರತವನ್ನು ಸರ್ವನಾಶ ಮಾಡುತ್ತೇವೆ ಎಂದವರ ಬೆನ್ನಿಗೆ ನಾವಿದ್ದೇವೆ ಎಂದು ನಿಂತ ರಾಜಕೀಯ ಪಕ್ಷಗಳು, ಎಡಪಂಥೀಯ ವಿದ್ವಾಂಸರು ಹಾಗು ಕೆಲ ಮಾಧ್ಯಮಗಳ ನಡೆ. ಟಿವಿ ಪ್ಯಾನಲ್ ಚರ್ಚೆಗಳಲ್ಲಂತೂ ಈ ದೇಶವಿರೋಧಿಗಳ ಬೆಂಬಲಿಗರ ಮಾತು ಕೇಳಿದರೆ ನೀವೇ ದಿಗಿಲು ಬೀಳುತ್ತೀರಿ. ಬಹುಶ ದೇಶ ವಿರೋಧಿಗಳನ್ನು ಕೂಡ ಬಲವಾಗಿ ಬೆಂಬಲಿಸುವ ಒಂದು ವರ್ಗ ಇದೆ ಎಂದಾದರೆ ಅದು ಭಾರತದಲ್ಲಿ ಮಾತ್ರವೇನೋ. ವಿಶ್ವದ ಬೇರೆ ಯಾವುದೇ ರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಪ್ರಜೆಗಳು ಹಾಗು ರಾಜಕೀಯ ಪಕ್ಷಗಳು ಭೇಧ ಮರೆತು ದೇಶದ ಘನತೆಯನ್ನು ಕಾಪಾಡಲು ಒಂದಾಗುತ್ತಿದ್ದವು. ಆದರೆ ನಮ್ಮ ಭಾರತದ ರಾಜಕೀಯ ದುರವಸ್ಥೆ ನೋಡಿ.

JNU ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಬಂಧಿತರಾಗಿರುವುದು ಇಬ್ಬರು ಮಾತ್ರ. ಒಬ್ಬ ಕನಯಾ ಕುಮಾರ್, ಮತ್ತೊಬ್ಬ ಎಸ್.ಎ.ಆರ್ ಗಿಲಾನಿ (JNU ಮಾಜಿ ಪ್ರೊಫೆಸರ್). ಇನ್ನೊಬ್ಬ ಪ್ರಮುಖ ಆರೋಪಿ ವಿದ್ಯಾರ್ಥಿ ನಾಯಕ ಒಮರ್ ಖಾಲಿದ್ ತಲೆತಪ್ಪಿಸಿಕೊಂಡಿದ್ದಾನೆ. ಒಮರ್ ಖಾಲಿದ್ ಅಫ್ಜಲ್ ಗುರುವಿನ ಪುಣ್ಯ ತಿಥಿ ಕಾರ್ಯಕ್ರಮ ಆಚರಿಸಲು ಸುಮಾರು ಒಂದು ತಿಂಗಳಿಂದ ಕಾರ್ಯಪ್ರವೃತ್ತನಾಗಿದ್ದ ಹಾಗು ಈ ಸಂಬಂಧ ಅನುಮತಿ ಪಡೆಯಲು ಹರಸಾಹಸ ನಡೆಸಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಅಲ್ಲದೆ ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪ್ರತ್ಯೆಕವಾದಿಗಳೊಂದಿಗೆ ಭೇಟಿಯಾಗಿ ಬಂದಿದ್ದ ಅನ್ನುವುದು ಕೂಡ ಈಗ ಜಗಜ್ಜಾಹೀರಾಗಿದೆ. JNU ನಲ್ಲಿ ದೇಶವಿರೋಧಿ ಕಾರ್ಯಕ್ರಮ ಆಯೋಜನೆಯಾಗಿದ್ದ ೪ ದಿನ ಮೊದಲು ಅಂದರೆ ಫೆಬ್ರುವರಿ 7 ರಂದು 10 ಮಂದಿ ಕಾಶ್ಮೀರಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ ಗೆ ಭೇಟಿ ಕೊಟ್ಟಿದ್ದರು ಅನ್ನುವ ಅಂಶ ಕೂಡ ಈ ಶೃದ್ಧಾಂಜಲಿ ಕಾರ್ಯಕ್ರಮದ ಹಿಂದೆ ದೇಶವಿರೋಧಿಗಳ ಕೈವಾಡ ಇದೆ ಎನ್ನುವುದನ್ನು ಪುಷ್ಟೀಕರಿಸುತ್ತದೆ. ಫೆ. ೧೧ರ ಕಾರ್ಯಕ್ರಮದ ನಂತರ ಟೈಮ್ಸ್ ನೌ ಟಿವಿ ಮಾಧ್ಯಮದ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಇದೇ ಒಮರ್ ಖಾಲಿದ್ ಭಾರತೀಯ ಸೈನಿಕರನ್ನು ಅತ್ಯಾಚಾರಿಗಳು ಎಂದು ಅವಮಾನಿಸಿದ್ದ. ಇದು ಆತನ ಭಾರತ ವಿರೋಧಿ ಮನೋಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಸ್ಪಷ್ಟ ಕನ್ನಡಿ. ಅದೇ ಕೊನೆ, ಮತ್ತೆಲ್ಲೂ ಆತ ಕಾಣ ಸಿಗಲಿಲ್ಲ. ಬಂಧನಕ್ಕೊಳಗಾಗುವ ಭೀತಿಯಿಂದ ಈಗ ತಲೆತಪ್ಪಿಸಿಕೊಂಡಿದ್ದಾನೆ.

ಈಗಾಗಲೇ ಬಂಧಿತನಾಗಿರುವ ಜವಾಹರ್ ಲಾಲ್ ನೆಹರೂ ವಿವಿಯ ಮಾಜಿ ಪ್ರೊಫೆಸರ್ ಎಸ್.ಎ.ಆರ್ ಗಿಲಾನಿ 2001ರ ಪಾರ್ಲಿಮೆಂಟ್ ಧಾಳಿಯ ಸಂದರ್ಭ ಉಗ್ರ ಅಫ್ಜಲ್ ಗುರುವಿಗೆ ನೆರವಾದಾತ. ಅಂದು ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದ. ನಂತರ ಕಾಶ್ಮೀರಿ ಪ್ರತ್ಯೇಕವಾದಿ ವಿಚಾರದೊಂದಿಗೆ ಗುರುತಿಸಿಕೊಂಡಿದ್ದ ಈತ ಫೆ. 11 ರ ಕಾರ್ಯಕ್ರಮದ ಸೂತ್ರಧಾರರಲ್ಲಿ ಒಬ್ಬ.

ದೇಶಕ್ಕೆ ಅಮೋಘ ರತ್ನಗಳನ್ನು ನೀಡಬೇಕಾಗಿದ್ದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಎಂಬ ದೇಶದ ಪ್ರತಿಷ್ಟಿತ ವಿವಿ ಇಂದು ಉಗ್ರಗಾಮಿಗಳ, ದೇಶವಿರೋಧಿಗಳ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಇಂತಹ ಕುಖ್ಯಾತಿಯ JNU ದೇಶವಿರೋಧಿ ಚಟುವಟಿಕೆಗಳಿಗಾಗಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ.

*1990ರಲ್ಲಿ ಶಹಾಬುದ್ದೀನ್ ಘಾದ್ರಿ ಎಂಬ ಭಯೋತ್ಪಾದಕನನ್ನು ಇದೇ JNU ಕ್ಯಾಂಪಸ್ ನಿಂದ ಬಂಧಿಸಿ ಕರೆದೊಯ್ಯಲಾಗಿತ್ತು.

*2000ರ ಎಪ್ರಿಲ್ ನಲ್ಲಿ ಪಾಕಿಸ್ತಾನದ ಕವಿದ್ವಯರನ್ನು ಕ್ಯಾಂಪಸ್ ಗೆ ಕರೆಸಿ ಸ್ವತಹಃ ಭಾರತದ ವಿರುದ್ಧವೇ ಮಾತನಾಡಿಸಲಾಗಿತ್ತು. ಭಾರತ ವಿರೋಧಿ ಮಾತುಗಳನ್ನು ವಿರೋಧಿಸಿದ ಅಲ್ಲಿಯೇ ಇದ್ದ ಭಾರತದ ಮಾಜಿ ಸೈನಿಕರಿಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು.

*2008ರ ಸೆಪ್ಟೆಂಬರ್ ನಲ್ಲಿ ‘ಕ್ರಾಂತಿಕಾರಿ ಕವಿ ಸಮ್ಮೇಳನ’ ಎಂಬ ಹೆಸರಿನಲ್ಲಿ ಓದಿದ್ದೆಲ್ಲಾ ಭಾರತ ವಿರೋಧಿ ಕವಿತೆಗಳನ್ನೇ.

*2010ರಲ್ಲಿ ಛತ್ತೀಸಘಡದಲ್ಲಿ ಮಾವೋ ಉಗ್ರರು ನಮ್ಮ 76 ಮಂದಿ ಪೋಲೀಸ್ ಸಿಬ್ಬಂದಿಯನ್ನು ಹತ್ಯೆಗೈದಾಗ ‘ಸಂಭ್ರಮಾಚರಣೆ’ ನಡೆಸಿದ ಏಕೈಕ ಸ್ಥಳವೊಂದಿದ್ದರೆ ಅದು JNU ಕ್ಯಾಂಪಸ್.

ಹೀಗೆ ಒಂದಿಲ್ಲೊಂದು ರೀತಿಯಲ್ಲಿ ದೇಶ ವಿರೋಧಿ ಚಟುವಟಿಕೆಗಳಿಂದ ಸುದ್ದಿಯಾಗುತ್ತಾ ಬಂದಿದೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ. ವಿದ್ಯಾರ್ಥಿಗಳ ಇಂತಹ ಚಟುವಟಿಕೆಗಳಿಗೆ ಅಲ್ಲಿನ ಕೆಲ ಪ್ರಾಧ್ಯಾಪಕರುಗಳ ಬೆಂಬಲವೂ ಇದೆ. ಅಲ್ಲಿನ ಕುಲಗೆಟ್ಟ ವ್ಯವಸ್ಥೆಯ ಮಧ್ಯೆ ಇಂತಹ ಚಟುವಟಿಕೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ. ಅಲ್ಲಿನ ಹಾಸ್ಟೆಲ್ ನಲ್ಲಿ ಎಷ್ಟು ವರ್ಷದವರೆಗೂ ಇರಬಹುದು. ವಿದ್ಯಾಭ್ಯಾಸದ ನಂತರವೂ ನೀನು ಯಾಕೆ ಇಲ್ಲಿದ್ದಿಯಾ ಅಂತ ಯಾರೂ ಕೇಳುವುದಿಲ್ಲ. ಹಾಗೆಯೇ ಹೊರಗಿನವರು ಬಂದೂ ಸೇರಿಕೊಳ್ಳಬಹುದು. ನೀನು ಯಾಕೆ ಬಂದೆ ಅಂತ ಜಪ್ಪಯ್ಯ ಅಂದರೂ ಯಾರೂ ಪ್ರಶ್ನಿಸಲಾರರು. ಈಗ ತಲೆತಪ್ಪಿಸಿಕೊಂಡಿರುವ ಉಗ್ರ ಪರ ವಿದ್ಯಾರ್ಥಿ ನಾಯಕ ಒಮರ್ ಖಾಲಿದ್, ಒಮಾಲ್ ಎಂಬ ವಿಶ್ವವಿದ್ಯಾಲಯಕ್ಕೆ ಸಂಬಂಧಪಡದ ವ್ಯಕ್ತಿಯನ್ನು ಕರೆದುಕೊಂಡು ಬಂದು ವಿವಿ ಹಾಸ್ಟೆಲಿನಲ್ಲಿ ರೂಮು ಕೊಡಿಸಿದ್ದ. ಫೆ. 11ರ ಕಾರ್ಯಕ್ರಮದ ನಂತರ ಒಮಾಲ್ ಕಾಣೆಯಾಗಿದ್ದಾನೆ. ಹಾಗಾಗಿ ಆತ ಯಾರಾಗಿರಬಹುದು ಎಂಬುದು ನಿಗೂಢವಾಗಿಯೇ ಉಳಿದಿದೆ. ಭಯೋತ್ಪಾದಕನಾ, ಕಾಶ್ಮೀರಿ ಪ್ರತ್ಯೇಕವಾದಿಯಾ, ಮಾವೋ ಉಗ್ರನಾ…? ಉತ್ತರ ಕೊಡಲು ಒಮಾಲ್ ಈಗ ಅಲ್ಲಿಲ್ಲ. ಕರೆದು ತಂದಿದ್ದ ಖಾಲಿದ್ ತಲೆಮರೆಸಿಕೊಂಡಿದ್ದಾನೆ.

ಇದು ಕೇವಲ JNU ಒಂದರ ಪರಿಸ್ಥಿತಿಯಲ್ಲ. ಹೆಚ್ಚು ಕಡಿಮೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ದೇಶವನ್ನು ವಿರೋಧಿಸುವ, ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವ ಒಂದು ವಿದ್ಯಾರ್ಥಿ ವರ್ಗ ಇದ್ದೇ ಇದೆ. ಮುಂಬೈ ಸರಣಿ ಸ್ಪೋಟದ ಸಂಚುಕೊರರಲ್ಲಿ ಒಬ್ಬನಾದ ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯನ್ನು ವಿರೋಧಿಸಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲನ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ನಂತರ ಭಾರತದ ಸಂವಿಧಾನ, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಆದಿಯಾಗಿ ದೇಶವನ್ನು ಹೀಯಾಳಿಸಿ ಕೊನೆಗೆ ರೋಹಿತ್ ಆತ್ಮಹತ್ಯೆಯಲ್ಲಿ ಕೊನೆಯಾದದ್ದು ಇನ್ನು ತಾಜಾವಾಗಿಯೇ ಇದೆ. ಫೆ. 11ರ JNUನ ಅಫ್ಜಲ್ ಶೃದ್ಧಾಂಜಲಿ ಕಾರ್ಯಕ್ರಮದ ನಂತರ ಮೊನ್ನೆ ಮೊನ್ನೆ ಕೊಲ್ಕತ್ತಾದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಒಂದು ಗುಂಪು ಮತ್ತದೇ ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟಿದ್ದು ಇತರೆ ವಿವಿಗಳೂ ಇಂತಹ ದೇಶ ವಿರೋಧಿ ವಿದ್ಯಾರ್ಥಿಗಳಿಂದ ಹೊರತಾಗಿಲ್ಲ ಅನ್ನುವುದಕ್ಕೆ ತೀರಾ ಇತೀಚೆಗಿನ ಉದಾಹರಣೆ.

ಹೆಚ್ಚಿನ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಹಾಗು ಹಾಸ್ಟೆಲಿನ ಸ್ಥಿತಿ ಹೆಚ್ಚು ಕಡಿಮೆ JNUನಲ್ಲಿ ಇರುವಂತೆಯೇ ಇದೆ. ಕ್ಯಾಂಪಸ್ಸಿನೊಳಗೆ ಯಾರು ಬರುತ್ತಾರೆ, ಯಾವ ಉದ್ದೇಶಕ್ಕೆ ಬರುತ್ತಾರೆ ಅನ್ನುವುದನ್ನು ಗಮನಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ವಿವಿಗಳ ತರಗತಿ ಕೋಣೆಗಳಲ್ಲಿ ನಡೆಯುವ ಗುಪ್ತ ಸಭೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಸ್ಟೆಲ್ ಗಳ ಕತೆಯಂತೂ ಹೇಳುವುದೇ ಬೇಡ. ಅಲ್ಲಿ ಹಾಲಿ ವಿದ್ಯಾರ್ಥಿಗಳ್ಯಾರು, ಹಳೆ ವಿದ್ಯಾರ್ಥಿಗಳು ಯಾರು, ಹೊರಗಿನವರಾರು ಎಂಬುದಕ್ಕೆ ಏನೂ ತನಿಖೆ ನಡೆಯುವುದಿಲ್ಲ. ಬಹುಶ JNU, ಹೈದರಾಬಾದ್ ವಿಶ್ವ ವಿದ್ಯಾಲಯಗಳಲ್ಲಿನ ಘಟನೆಗಳ ನಂತರವಾದರೂ ಇತರೆ ವಿವಿಗಳು ಈ ಬಗ್ಗೆ ಗಮನ ಹರಿಸುವಂತಾದರೆ ಭಾರತದ ಘನತೆ ಜತೆಗೆ ವಿವಿ ಘನತೆಯನ್ನೂ ಎತ್ತಿ ಹಿಡಿಯಬಹುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Ashwin Amin Bantwal

Self Employed & Journalist

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!