ಅಂಕಣ

ಅನಾಮಿಕಳ ಅನುಶಮ ಗಾನ….

ವಿಧಿಯ ಹಸ್ತದಲ್ಲಿ ಬಂಧಿಯಾಗಿ

ನಿಶಾಲೋಕದಲ್ಲಿ ಮೂಕವಾಗಿ

ಬುಧತ್ವಕೆ ಅಂಜನ ಲೇಪಿಸಿ

ಹೊರಟಿಹೆನು ನೇಮ ಪಾಲಿಸಿ

ಪಥವಾವುದೆಂದೇ ತಿಳಿಯದೇ

ನನ್ನೊಳು ನಾನೇ ಅಪೇತವಾಗಿ||

ಮನಸ್ವಿ,

ಯಾಕೋ ನನ್ನ ಪ್ರಾಂಜಲ ಚಿತ್ತ ನಶ್ವರದತ್ತ ಸಾಗ್ತಾ ಇದೆಯಾ ಅಂತನ್ನಿಸುತ್ತೆ. ಸತತವಾಗಿ ತನ್ನ ತನದ ಬಗ್ಗೆ ನಂಬಿಕೊಂಡಿರುವುದು ಕಳಚಿ ಹೋಗುತ್ತಿದೆಯೇನೋ ಎಂದೆನಿಸುವ ಅನಿಶ್ಚಿತತೆಯ ಸಣ್ಣ ಅರಿವಾದರೂ ನಿನಗುಂಟಾ? ತನ್ನ ತನವೇ ಕರಗಿ ಹೋಗಿ ತಾನು ಸರ್ವ ಭ್ರಂಶನಗೊಂಡಂತಹ ಭಾವ ಮನವನ್ನಾಹಿಸಿಕೊಂಡು ಅದು ಹಚ್ಚುವ ಕಿರುಜ್ವಾಲೆ ಜ್ವಾಲಾಮುಖಿಯಾಗಿ ಪರಿಣಮಿಸಿ ನನ್ನನ್ನು ನಿಖಿಲವಾಗಿ ದಹಿಸಿದೆ.

ದೇಹ ಬೆಂದರೂ ಇಲ್ಲ ಗೋಳು

ಚಿತ್ತದಹನವ ಮರೆಯಲೆಂತು ಹೇಳು?!

ಬಾಲ್ಯದಿಂದಲೂ ಅತೀತ ಪ್ರಾಂಜಲತೆಯನ್ನು ಪರಿಭಾವಿಸಿದ್ದೆ. ಉಸಿರಾಗಿಸಿದ್ದೆ. ಯಾಕೆ ಗೊತ್ತಾ? ವಿವೇಕಾನಂದರು ಹೇಳುತ್ತಾರೆ, ” ನಮ್ಮೊಳಗೆ ನಮ್ಮ ಬಗ್ಗೆ ನಾವು ಸೃಜಿಸಿಕೊಳ್ಳುವ ಪರಿಭಾವನೆಯಂತೆಯೇ ನಾವು ರೂಪುಗೊಳ್ಳುತ್ತೇವೆ” ಅಂತ. ಆದರೆ ಈಗ ಎಲ್ಲೋ ಒಂದು ಕಡೆ ನನಗರಿವಿಲ್ಲದೆಯೇ ಆ ಪ್ರಾಂಜಲತೆಯಿಂದ ಹೊರತಾಗುತ್ತಿದ್ದೇನೆಯೇ ಎಂಬ ಸಂಶಯ ಆರಂಭವಾಗಿದೆ ಮತ್ತು ಆ ಪರಿಕಲ್ಪನೆಯೇ ನನ್ನನ್ನು ಕ್ಷಣ ಕ್ಷಣ ಒಳಗಿಂದಲೇ ಇರಿದು ಕೊಲ್ಲುತ್ತಿದೆ. ಯಾಕೋ ಸಮಾಜದಿಂದ ಬಹಳ ದೂರ ಸರೀತಿದ್ದೇನಾ ಅನ್ನಿಸ್ತಿದೆ. ಕೆಟ್ಟದ್ದರಲ್ಲೂ ಒಳ್ಳೆಯದನ್ನಷ್ಟೇ ತವಕದಿಂದರಸುತ್ತಿದ್ದ ಕಂಗಳು ಈಗ ದೋಷದ ಬಟ್ಟೆ ತೊಟ್ಟು ಕುಳಿತಿವೆ ಎಂಬ ಅಂಜಿಕೆ. ಚಿತ್ತಂಬುಧಿಯಲ್ಲುದಿಸೋ ಅಧಮತೆಯ ಒಂದಲೆಯನ್ನೂ ಸಹಿಸಲು ಸಾಧ್ಯವಿಲ್ಲ ನನಗೆ. ದಾರ್ಷ್ಟ್ಯದ ಒಂದು ಸಣ್ಣ ಸೂಚನೆಯೂ ಸಾಕು, ನನ್ನನ್ನು ಕೊಂದು ಬರಿದು ಮಾಡಲು! ಬಾಲ್ಯದ ಮುಗ್ಧತೆಯನ್ನು ಸೀಳಿಕೊಂಡು ಲೋಕದ ನಿಜಮುಖದತ್ತ ಸಾಗುವ ಹಾದಿ ಎಷ್ಟು ಭೀಕರವಲ್ಲವೇ? ನನ್ನಲ್ಲೇ ಉದಿಸುವ ಸೈತಾನ ನನ್ನ ಶಾಂತಿಯನ್ನು ಕೊಲ್ಲುತ್ತಿದ್ದಾನೆ ಮನಸ್ವಿ. ನಾನು ಅವನನ್ನು ಕೊಂದಷ್ಟೂ ಮತ್ತೆ ಮತ್ತೆ ಹುಟ್ಟುತ್ತಿದ್ದಾನೆ. ನಾನೇನು ಮಾಡಲಿ? ಅಳಲಾಗದ, ಏನೂ ಹೇಳಲಾಗದ, ಏನೂ ಮಾಡಲಾಗದ ಈ ಮನೋಸ್ಥಿತಿಯನ್ನು ಏನೆಂದು ಕರೆಯಲಿ? ಒಳಗಿಂದಲೇ ಸತ್ತು ಸತ್ತು ಬದುಕ್ತಿದ್ದೇನೆ ನಾನು.

ಮೈವೆತ್ತ ಸೈತಾನನ್ನುರುಳಿಸಿ

ಮತ್ತೆ ಮತ್ತೆ ಆಗುತಿಹುದೆನ್ನ ಜನನ;

ತೇಲಿ ಮುಳುಗುತಿಹ ಶ್ರೀಹರಣ

ಓ, ಇದು ಜೀವನ್ಮುಕ್ತ ಪಯಣ!

ಇಲ್ಲ ಮನಸ್ವಿ, ಸುತ್ತಲಿನ ದುಷ್ಟತನ ನನ್ನನ್ನು ನಾನಾಗಿರಲು ಬಿಡ್ತಿಲ್ಲ. ನನ್ನನ್ನು ನಾನಾಗಿರಲು ಬಿಡದೇ ಇನ್ನೇನೋ ಮಾಡ್ತಿದೆಯಾ ಅನ್ನಿಸ್ತಿದೆ. ಜೀವನದ ಅಸ್ತಿತ್ವದ ಬಗೆಗೇ ತೀವ್ರ ಗೊಂದಲ ಶುರುವಾಗಿದೆ. ದುಷ್ಟಶಕ್ತಿಗಳು ನಿನ್ನ ಮೇಲೆ ಸವಾರಿ ಮಾಡಲು ಬಂದಾಗಲೂ  ಶಿಷ್ಟತನವನ್ನು ಕಾದಿರಿಸಿಕೊಳ್ಳಲು ಸುಮ್ಮನಿರುವುದು ತುಂಬಾ ದೊಡ್ಡ ಅಪರಾಧವಾಗುವುದಿಲ್ಲವೇ? ಮಹಾಭಾರತದಲ್ಲಿ ಪರಮಾತ್ಮ ಅಧರ್ಮದ ಅಳಿವಿಗಾಗಿ ಧರ್ಮವನ್ನು ಬದಿಗಿಡುವುದಿಲ್ಲವೇ? ಆದರೆ ನಾನಿಲ್ಲಿ ಯಾರನ್ನೇ ದುಷ್ಟರೆಂದು ನಿರ್ಧರಿಸಲು ನನಗ್ಯಾವ ಹಕ್ಕಿದೆ ಹೇಳು? ಅವರವರ ಪ್ರಕಾರ ಅವರವರಿಗೆ ಅವರವರು ಒಳ್ಳೆಯವರೇ. ಮತ್ತ್ಯಾರದೋ ದೃಷ್ಟಿಯಲ್ಲಿ ನಾನೋರ್ವ ಅತಿಹೀನ ದುಷ್ಟೆಯಾಗಿರಲೂಬಹುದು. ಆದರೆ ಅದು ನನಗೆ ಸಂಬಂಧಿಸಿದ್ದಲ್ಲ. ಇತರರ ಆಲೋಚನೆಗಳಿಗೆ, ದೃಷ್ಟಿಕೋನಕ್ಕೆ, ಸಾಮಾಜಿಕ ಅಭಿಪ್ರಾಯಗಳಿಗೆ ನಾನು ಜವಾಬ್ದಾರಳಲ್ಲ. ನನ್ನ ಚೈತನ್ಯವನ್ನು ಬೆಳೆಸಿಕೊಳ್ಳುವ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಭರದಲ್ಲಿ ಅಹಂಕಾರಿಯಾಗುತ್ತಿರುವೆನಾ ಎಂದು ಭಯವಾಗುತ್ತದೆ. ವಿನಯ ಹೆಣ್ಣಿನ ಜನ್ಮಧಾತು. ಅದಿಲ್ಲದ ಮೇಲೆ ನಾನು ಹೇಗೆ ಬದುಕಿರಲಿ ಹೇಳು? ಅಷ್ಟಕ್ಕೂ ‘ನಾನು’ ಯಾರು? ಏನಿದೆ ನನಗೆ? ವಿಶಾಲ ಪ್ರಪಂಚದ ನಡುವಿನ ತೃಣಕಣ ನಾನು. ಅಹಂಕಾರಿಯಾಗಲು ಯಾವ ಕಾರಣವೂ ನನಗಿಲ್ಲ. ಮತ್ತೊಂದೆಡೆ ಹೀಗೆ ನನ್ನನ್ನು ಕಟುವಾಗಿ ಟೀಕಿಸಿಕೊಳ್ಳುವುದು ಖಿನ್ನತೆಗೆ ಎಡೆ ಮಾಡಿಕೊಡುತ್ತದೆ. ಈ ಅಹಂಕಾರ ಹಾಗೂ ಖಿನ್ನತೆಯ ನಡುವಿನ ಅಂತರ ತೀರಾ ಸೂಕ್ಷ್ಮವಾದದ್ದು, ಮನಸ್ವಿ. ಎರಡರ ನಡುವೆ ಸಮತೋಲನ ಸಾಧಿಸುವುದೇ ಆತ್ಮನ ದಿಗ್ವಿಜಯ. ಅದೇ ಬದುಕೊಡ್ಡುವ ಅತೀ ದೊಡ್ಡ ಸವಾಲು. ಪಾಪಪ್ರಜ್ಞೆ! ಪಾಪವನ್ನೇ ಮಾಡದ ಮನಸ್ಸಿನ ಪಾಪಪ್ರಜ್ಞೆಯ ಕಿಚ್ಚು ಅತಿಘೋರವಾದುದು. ಬರಿಯ ಬೂದಿ ಉಳಿದಿದೆ. ಸುಟ್ಟ ಬೂದಿಯನ್ನೇ ಇನ್ನೆಷ್ಟು ಸುಡಲು ಸಾಧ್ಯ ಹೇಳು?   ಹಿಂದಿನ ನಾನು! ಮತ್ತೆ ಮತ್ತೆ ನನ್ನ ಭಾವಗಳನ್ನು ಅವಿರತವಾಗಿ ವಂಚಿಸಿದವರನ್ನೂ ಎಂದಿಗೂ ದ್ವೇಷಿಸಿದವಳಲ್ಲ. ಆದರೆ ದ್ವೇಷವಿರದಿದ್ದರೂ ಇತ್ತೀಚೆಗೆ ಕೆಲ ವ್ಯಕ್ತಿಗಳ ಬಗ್ಗೆ ಅಸಮಾಧಾನ ಹುಟ್ಟಿರುವುದಂತೂ ಸತ್ಯ!  ಲೋಕದ ಕೃತಕತೆಯನ್ನು ನನ್ನಿಂದ ತಾಳಲಾಗದು ಮನಸ್ವಿ. ದಾರ್ಷ್ಟ್ಯಕ್ಕಿಂತಲೂ ಅತಿಘೋರವಾದುದು ಕೃತಕತೆ. ಅಷ್ಟಕ್ಕೂ ಇತರರನ್ನು ಅಳೆಯುವುದಕ್ಕೆ ನಾನೆಷ್ಟರವಳು? ಆದರೂ ಆ ಶಿಷ್ಟತನದ ಹಿಂದಿನ ಕೃತಕತೆ ಅಷ್ಟೊಂದು ನಿಚ್ಚಳವಾಗಿ ಗೋಚರವಾಗುತ್ತಿರುವಾಗಲೂ ಸಹ ಸುಮ್ಮನಿರುವುದು ನನಗೆ ಸಹ್ಯವಾಗದು. ಇದು ಮಾನವ ಸಹಜ ಗುಣವೋ ಅಥವಾ ನನ್ನದೇ ಅಧಮತೆಯೋ ಅರ್ಥವಾಗುತ್ತಿಲ್ಲ ನನಗೆ. ನಮ್ಮ ಚಿತ್ತದೊಳ ಬೆಂಕಿ ಸುಡುವುದು ನಮ್ಮನ್ನಷ್ಟೇ! ನನ್ನ ಪಾಲಿನ ಶಾಂತಪಥ ‘ ಪ್ರಾಂಜಲತೆ’ ಮಾತ್ರ. ಈಗ ಆ ಹಾದಿ ಕಾಣದೇ ಕಂಗಾಲಾಗಿದ್ದೇನೆ. ಅನಾಥಳಾಗಿ ಹೋಗಿದ್ದೇನೆ ನಾನು. ನನ್ನ ಈ ವಿಹ್ವಲ ಮನಸ್ಸನ್ನು ನಿರ್ಲಿಪ್ತಗೊಳಿಸಲು ಮನ ಒಂದು ಧವಲ ಚಿತ್ತವನ್ನು ಅರಸುತ್ತಿತ್ತು. ಆದರೆ ಈಗ ಅದರ ಬಗ್ಗೆ ಸಣ್ಣ ವಿಶ್ವಾಸವೂ ಉಳಿದಿಲ್ಲ. ಪವಿತ್ರ, ಸ್ವಾರ್ಥರಹಿತ ಪ್ರೇಮ!! ಅದೆಲ್ಲವೂ ಜಗತ್ತು ಹೇಳಿಕೊಂಡು ಬಂದಿರುವ ಅತಿ ದೊಡ್ಡ ಮಿಥ್ಯವೆಂದೆನಿಸುತ್ತೆ. ನಾನು ನಿರಾಶಾವಾದಿಯಾಗಿಲ್ಲ, ಆದರೆ ಭವಿಷ್ಯದ ಬಗೆಗಿನ ವರ್ಣರಂಜಿತ ಕನಸುಗಳು ನನಗೆ ವಿನೋದಕರವಾಗಿ ಕಾಣ್ತಿವೆ. ಸದ್ಯಕ್ಕೆ ಪ್ರಸ್ತುತವನ್ನು ತಾಳಿಕೊಳ್ಳಲೂ ಸಾಧ್ಯವಾಗ್ತಿಲ್ಲ. ಇನ್ನು ಭವಿಷ್ಯದ ಮಾತು ಬಿಡು! ಇದೆಲ್ಲಾ ನನ್ನನ್ನು ಇಷ್ಟೊಂದು ಕಾಡುತ್ತಿರುವುದೇಕೆ ಗೊತ್ತಾ? ಏಕೆಂದರೆ ಜಗತ್ತಿನ ಸರ್ವಸಂಕುಚಿತತೆಗಳಿಂದ ಮುಕ್ತವಾದ ಚಿತ್ತಶಕ್ತಿ ಅಷ್ಟು ಪ್ರಖರವಾದದ್ದು! ಅದರಿಂದ ವಂಚಿತಳಾಗುವುದನ್ನು ನಾನು ಕಲ್ಪನೆಯೂ ಮಾಡಿಕೊಳ್ಳಲಾರೆ…

ಮನಸ್ವಿ, ನನ್ನೊಳಗೆ ಒಬ್ಬ ಕಟು ವಿಮರ್ಶಕ ಕುಳಿತಿದ್ದಾನೆ. ನಿರುತ ನನ್ನ ಪ್ರತಿ ನಡೆ- ನುಡಿ, ಆಲೋಚನೆಗಳನ್ನೂ ಭೂತಕನ್ನಡಿ ಹಾಕಿಕೊಂಡು ಹುಡುಕುತ್ತಾನೆ. ಅವನಿಗೂ ನನಗೂ ನಡೆಯುತ್ತಿರುವ ಈ ಭೀಕರ ಯುದ್ದ ಕೊನೆಗಾಣುತ್ತಲೇ ಇಲ್ಲ. ಮಾರಣ ಹೋಮವಾಗುತ್ತಿದೆ. ಮನಸ್ಸು ರಣಭೂಮಿಯಾಗಿ ಅದರಲ್ಲಿ ಸಾವಿರಾರು ಹೆಣಗಳುರುಳಿ ಬಿದ್ದಿವೆ. ಎಲ್ಲವೂ ನನ್ನದೇ! ಪ್ರತಿ ಬಾರಿ ಅವನೇ ಗೆಲ್ಲುತ್ತಾನೆ. ಆದರೂ ಮತ್ತೆ ಮತ್ತೆ ಎದ್ದು ಹೋರಾಡುತ್ತಿದ್ದೇನೆ. ಯಾವತ್ತು ಶೂನ್ಯಳಾಗುತ್ತೇನೋ ಗೊತ್ತಿಲ್ಲ. ಹಿಂದಿನಂತೆ ಅಕಾರಣವಾಗಿ ತಲುಪುತ್ತಿದ್ದ ಆ ಆನಂದ ಶಿಖರ ಈಗ ಯಾವುದೋ ಮಾಯೆಯ ಮುಸುಕಲ್ಲಿ ಮರೆಯಾಗಿದೆ.  ಕಾರಣವಿಲ್ಲದೇ ಉಂಟಾಗುವ ಆ ಆನಂದ ಅತಿ ಪವಿತ್ರವಾದುದು.

ಮನಸ್ವಿ, ನನ್ನ ಸುತ್ತಲಿನ ಜನರನ್ನು ನೋಡುತ್ತೇನೆ. ಅವರು ಆನಂದವಾಗಿದ್ದಾರೆ.ಅವರೂ ಪರಿಪೂರ್ಣರಲ್ಲ. ಪರಿಪೂರ್ಣತೆ ಅಷ್ಟಕ್ಕೂ ಗಗನಕುಸುಮ! ಪರಿಪೂರ್ಣತೆ ನನ್ನ ಹಂಬಲವಲ್ಲ. ಪರಿಪೂರ್ಣತೆಯನ್ನರಸುವುದು ಮೂರ್ಖತನವಾದೀತು. ನನ್ನ ಆಂತರಿಕ ತುಡಿತ ಬೇರೆಯೇ ಇದೆ. ಅದನ್ನರಿಯಲಾಗದ  ಅಸಹಾಯಕತೆ ನನ್ನನ್ನು ಹಿಂಸಿಸುತ್ತಿದೆ. ಪ್ರತಿಯೊಬ್ಬರೊಳಗೂ ಇಂಥಾ ಕದನ ನಡೆಯುತ್ತಿರಬಹುದಾ? ಗೊತ್ತಿಲ್ಲ. ಆದರೆ ನನ್ನಲ್ಲಿ ಅದು ಬದುಕಿನ ಶಾಂತಿ ಕಿತ್ತುಕೊಳ್ಳುವಷ್ಟು ಘೋರವಾಗಿ ನಡೆಯುತ್ತಿರುವುದು ಮಾತ್ರ ನಿಚ್ಚಳವಾಗಿ ಗೋಚರವಾಗುತ್ತಿದೆ. ಈ ಮನಸ್ಥಿತಿಗೆ ಏನೆಂದು ಹೆಸರಿಡಲಿ? ಎಲ್ಲಾ ಇದ್ದೂ ಶೂನ್ಯಭಾವ! ಅಕಾರಣ ಮಾನಸಿಕ ವಿಪ್ಲವ! ಹೃದಯದಾಳದಲ್ಲಿ ಕೋಟಿ ಕೋಟಿ ಪ್ರಶ್ನೆಗಳಿವೆ. ಒಂದಕ್ಕೂ ಉತ್ತರವಿಲ್ಲ. ಓರ್ವ ‘ಗುರು’ ಬೇಕೆಂದೆನಿಸುತ್ತದೆ. ಧಾರ್ಮಿಕ ಗುರುವಲ್ಲ. ಬದುಕ ಪಾಠ ಹೇಳುವ ಗುರು ಬೇಕು ನನಗೆ. ಆ ಗುರು ನನ್ನೊಳಗೇ ಇರಬಹುದಾ? ಗೊತ್ತಿಲ್ಲ!

ಗೊಂದಲದಲ್ಲಿದ್ದೇನೆ ಮನಸ್ವಿ. ಭವಸಾಗರಕ್ಕೆ ತಳ್ಳಲ್ಪಟ್ಟಿದ್ದೇನೆ. ಸುಳಿಗಳೂ ಹೆದ್ದೆರೆಗಳೂ ನನ್ನನ್ನು ಬಳಲಿಸಿವೆ.  ನನಗೇ ನನ್ನನ್ನು ಅರಸಲು ಸಾಧ್ಯವಾಗದಷ್ಟು ಕಳೆದು ಹೋಗಿದ್ದೇನೆ. ಎಲ್ಲರಂತೆ ಈ ಜೀವನವನ್ನು ಹಸಿ ಹಸಿಯಾಗಿ ಆನಂದಿಸಲು ನನಗೇಕೆ ಸಾಧ್ಯವಾಗುತ್ತಿಲ್ಲ? ಯಾಕೆ ಈ ಕಟು ವಿಮರ್ಶಕನ ಸಹವಾಸ ನನಗೆ! ಬೇಡವಾಗಿದೆ. ಆದರೆ ಏನು ಮಾಡಲಿ? ಅವನಿಲ್ಲದೇ ನಾನಿಲ್ಲ. ನಾನಿಲ್ಲದೇ ಅವನಿಲ್ಲ. ನನ್ನಾತ್ಮದೊಳಗೆ ಬೆರೆತು ಹೋಗಿದ್ದಾನೆ ಅವನು. ಏಕಧಾತುವಾಗಿ ಹೋಗಿದ್ದೇವೆ ನಾವು. ಚೀರಬೇಕೆನಿಸುತ್ತಿದೆ….. ತೃಣಜೀವಿ ನಾನು! ಓ, ಹರಿಯೇ, ಎಲ್ಲಿದ್ದಿ? ನಿನ್ನನ್ನು ಆಲಿಸುವಷ್ಟು ನೋಡುವಷ್ಟು ಶಕ್ತಳಲ್ಲ ನಾನು. ಆದರೆ ನನ್ನೊಳಗೆ ನಡೆಯುತ್ತಿರುವ ಈ ಅವಿರತ ಕದನದ ಕಾರಣವನ್ನರಸುವುದು, ಬಗೆಹರಿಸುವುದು ನಿನ್ನಿಂದ ಮಾತ್ರವೇ ಸಾಧ್ಯ.

ಲೋಕದ ಕಣ್ಣಿಗೆ ಅಗೋಚರವಾದ ನಿಗೂಢ ಹೆಣ್ಣು ನಾನು…… ಅನಾಮಿಕಳು….. ಆದರೆ ನಾನು ಬದುಕಬೇಕು ವಿಷ್ಣು! ಶೂನ್ಯಳಾಗಿ ನಿನ್ನಲ್ಲಿ ಬೇಡುತ್ತಿದ್ದೇನೆ. ನಾನು ಬದುಕಬೇಕು, ಅಪರಿಪೂರ್ಣತೆಯಲ್ಲಿಯೇ  ‘ಪರಿಪೂರ್ಣ’ವಾಗಿ ಬದುಕಬೇಕು……..

ಅಪೇತಳಾದ ಈ ಅನಾಮಿಕಳ ಅಧ್ವಾನ ಪಥಕ್ಕೆ ಜತೆಯಾಗುವೆಯಾ……. ಖಾಲಿ ಕೈ ನಿನ್ನಾ ಕೈ ಬೀಸಿ ಕರೆಯುತಿದೆ…….

ನಿನ್ನೊಳು ನೀನಾಗುವೆ,  ನನ್ನೊಳಗೆ ನಾನಾಗುವೆಯಾ……….

ನಿನದೇ ನಿರೀಕ್ಷೆಯಲ್ಲಿ,

ಅನಾಮಿಕ

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!