ಅಂಕಣ

ದೇಹಿ ದೇಹಿ ಎಂಬ ದಾಹ ಮತ್ತು ಬೇಡವೆಂಬ ನಿರ್ಮೋಹ

ಒಮ್ಮೆ ಯು.ಆರ್. ಅನಂತಮೂರ್ತಿಯವರ ಜೊತೆ ಮಾತಾಡುತ್ತಿದ್ದಾಗ ಅವರು ಹೇಳಿದ ಮಾತು: “ನಾನು ಪ್ರಶಸ್ತಿಗಳಿಂದ ಯಾವುದನ್ನೂ ಅಳೆಯುವುದಿಲ್ಲ. ನಮ್ಮ ದೇಶದ ಗಾಂಧಿಗೆ ನೊಬೆಲ್ ಪ್ರಶಸ್ತಿ ಬರಬೇಕಾಗಿತ್ತು. ಅಡಿಗರಿಗೆ ಜ್ಞಾನಪೀಠ ಬರಬೇಕಾಗಿತ್ತು. ಕಾರಂತ, ಕುವೆಂಪು, ಮಾಸ್ತಿ ಮುಂತಾದವರೆಲ್ಲ ನೊಬೆಲ್ ಪ್ರಶಸ್ತಿಯ ಮಟ್ಟದ ಸಾಹಿತಿಗಳು. ಆದರೆ ಇವರಾರಿಗೂ ಆ ಗೌರವಗಳು ದೊರಕಲಿಲ್ಲ. ಹಾಗಾಗಿ ಪ್ರಶಸ್ತಿಗಳಿಂದ ಒಬ್ಬ ವ್ಯಕ್ತಿಯ ಘನತೆಯನ್ನು ಅಳೆಯಬಹುದೆಂಬ ಮಾತನ್ನು ನಾನು ಒಪ್ಪುವುದಿಲ್ಲ”. ನಮ್ಮ ನಡುವಿನ ಆ ಮಾತುಕತೆ ಮುಗಿದು ಒಂದು ವರ್ಷವಾಗುತ್ತಲೇ ಸ್ವತಃ ಅನಂತಮೂರ್ತಿಯವರು ಮ್ಯಾನ್ ಬೂಕರ್ ಪ್ರಶಸ್ತಿಗಾಗಿ ಲಾಬಿ ಮಾಡಲು ಬ್ರಿಟನ್ನಿಗೆ ಹೊರಟು ನಿಂತರು. ಆಗ ಅವರ ಪರಿಸ್ಥಿತಿ ತೀರ ಕೆಟ್ಟದ್ದಾಗಿತ್ತು. ಎರಡು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಬೇಕಾಗಿತ್ತು. ಇಲ್ಲಿ ಅದನ್ನು ಮಾಡಿಸಿಕೊಂಡು ವಿಮಾನ ಹತ್ತಿ, ಅಲ್ಲಿ ಇಳಿದೊಡನೆ ಮತ್ತೊಮ್ಮೆ ಮಾಡಿಸಿಕೊಂಡು – ಅಂತೂ ಪಡಬಾರದ ಯಾತನೆ ಪಡುತ್ತ ಅವರು ಬೂಕರ್ ಪ್ರಶಸ್ತಿಯ ಕಣದಲ್ಲಿ ನಿಂತಿದ್ದರು. ಈ ಪ್ರಶಸ್ತಿಯನ್ನು ಪಡೆಯಬೇಕೆಂಬ ಆಸೆ ನನಗೇನೂ ಇಲ್ಲ. ಆದರೆ ಇಂಥದೊಂದು ಸುವರ್ಣ ಅವಕಾಶ ಕನ್ನಡದ ಲೇಖಕನೊಬ್ಬನಿಗೆ ಸಿಕ್ಕಿರುವಾಗ ಅದನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಕನ್ನಡ ಸಾಹಿತ್ಯದ ಪ್ರತಿನಿಧಿಯಾಗಿ ನಾನು ಅಲ್ಲಿ ಪ್ರಶಸ್ತಿಗಾಗಿ ಪ್ರಯತ್ನ ಪಡಬೇಕಾಯಿತು ಎಂದು ಅನಂತಮೂರ್ತಿಗಳು ಬಳಿಕ ಹೇಳಿಕೊಂಡರು. ಅದೇ ಸಮಯದಲ್ಲಿ ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಸವ ಪ್ರಶಸ್ತಿ ಬಂತು. ಆ ಪ್ರಶಸ್ತಿಗೆ ಅವರು ಬೌದ್ಧಿಕವಾಗಿ ಅರ್ಹರಾಗಿದ್ದರೂ, ಅದನ್ನು ಪಡೆಯಲು ಅವರು ಹಿಡಿದ ಮಾರ್ಗ ಮಾತ್ರ ನನಗೆ ಇಷ್ಟವಾಗಲಿಲ್ಲ. ದೊಡ್ಡಮೊತ್ತದ ಪ್ರಶಸ್ತಿ “ಹೊಡೆದುಕೊಳ್ಳಲು” ಅನಂತಮೂರ್ತಿ ಮತ್ತು ಕಲಬುರ್ಗಿ ನಡುವಲ್ಲಿ ಕೋಳಿಜಗಳ ಕೂಡ ನಡೆಯಿತು. ಪ್ರಶಸ್ತಿಯನ್ನು ಹೇಗಾದರೂ ತಪ್ಪಿಸಲೇಬೇಕೆಂದು ಹಠ ತೊಟ್ಟಿದ್ದ ಕಲಬುರ್ಗಿ ಅನಂತಮೂರ್ತಿಗಳ “ಮೂತ್ರವಿಸರ್ಜನೆ”ಯ ಪ್ರಕರಣವನ್ನು ಎಳೆದು ತಂದು ರಾಡಿ ಎಬ್ಬಿಸಿದ್ದನ್ನು ಕನ್ನಡಿಗರು ನೋಡಬೇಕಾಯಿತು.

ಪ್ರಶಸ್ತಿ ಎಂಬುದು ನಮ್ಮ ಹಲವು ಸಾಹಿತಿಗಳು ಮತ್ತು ಕಲಾವಿದರ ಪಾಲಿಗೆ ಆಕ್ಸಿಜನ್ ಇದ್ದಂತೆ. ಪ್ರಶಸ್ತಿಗಳಿಗಾಗಿಯೇ ಪುಸ್ತಕ ಬರೆಯುವ ಸಾಹಿತಿಗಳಿದ್ದಾರೆ. ಸರಕಾರೀ ಸಂಸ್ಥೆಗಳಲ್ಲಿ ಪ್ರಶಸ್ತಿಯ ಹೆಸರಲ್ಲಿ ಹಲವು ಹಗರಣಗಳು ಗುಪ್ತವಾಗಿ ನಡೆಯುತ್ತವೆ; ಭ್ರಷ್ಟಾಚಾರಕ್ಕೆ ನೈತಿಕತೆಯ ಮುಖವಾಡ ತೊಡಿಸುವ ಕೆಲಸ ಆಗುತ್ತದೆ. ಒಂದರ ಬಳಿಕಿನ್ನೊಂದು ಪ್ರಶಸ್ತಿ ಪಡೆಯಲು ಹಪಹಪಿಸುವ, ಅದಕ್ಕಾಗಿ ಯಾರ ಕಾಲನ್ನೂ ಹಿಡಿಯಬಲ್ಲ ಪಿಪಾಸುಗಳು ಇದ್ದಾರೆ. ತಮಗೆ ಹಿಂದೆ ಮಾಡಿದ ಉಪಕಾರಕ್ಕೆ ಕೃತಜ್ಞತೆಯ ರೂಪದಲ್ಲಿ ಭಟ್ಟಂಗಿಗಳಿಗೆ ಪ್ರಶಸ್ತಿ ಕೊಟ್ಟು ಋಣಮುಕ್ತವಾಗುವ ಸರಕಾರಗಳನ್ನು ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಹಲವು ಬಾರಿ ನೋಡಿದ್ದೇವೆ. ಪ್ರಶಸ್ತಿ, ಬಹುಮಾನ, ಪುರಸ್ಕಾರ ಎಂದಾಗೆಲ್ಲ ನನಗೆ ತಟ್ಟನೆ ನೆನಪಿಗೆ ಬರುವವನು ರಷ್ಯದ ಗಣಿತಜ್ಞ ಗ್ರೆಗೊರಿ ಪೆರೆಲ್ಮನ್. ಕ್ಲೇ ಎಂಬ ಹೆಸರಿನ ಗಣಿತ ಸಂಸ್ಥೆಯೊಂದು ಒಟ್ಟು ಏಳು ಪ್ರಶ್ನೆಗಳ ಪಟ್ಟಿಯನ್ನು ಪ್ರಕಟಿಸಿ, ಇವುಗಳಲ್ಲಿ ಯಾವುದೇ ಸವಾಲನ್ನು ಪರಿಹರಿಸಿದರೂ ಅಂಥವರಿಗೆ ಒಂದು ಮಿಲಿಯನ್ ಡಾಲರುಗಳ ಬಹುಮಾನ (ಆರೂವರೆ ಕೋಟಿ ರುಪಾಯಿ) ಕೊಡುತ್ತೇನೆಂದು ಘೋಷಿಸಿತು. ಈ ಪಟ್ಟಿಯಲ್ಲಿದ್ದ ಬ್ರಹ್ಮಗಂಟುಗಳಲ್ಲಿ ಮೊದಲನೆಯದನ್ನು ಬಿಡಿಸಿದ ಮೊದಲಿಗ ಗ್ರೆಗೊರಿ ಪೆರೆಲ್ಮನ್! ಪೆರೆಲ್ಮನ್’ನ ಗಣಿತ ಸಾಧನೆಯನ್ನು ಮೆಚ್ಚಿ ಕ್ಲೇ ಸಂಸ್ಥೆ, ಆ ಬಹುಮಾನವನ್ನು ಅವನಿಗೆ ಕೊಡಲು ಮುಂದೆ ಬಂತು. ಜೊತೆಗೆ, ಗಣಿತಲೋಕದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿರುವ ಫೀಲ್ಡ್ಸ್ ಪದಕವನ್ನು ಕೂಡ ಅವನಿಗೆ ಕೊಡುವುದೆಂದು ತೀರ್ಮಾನವಾಯಿತು. ಇಷ್ಟೆಲ್ಲ ವೈಭವೋಪೇತ ಸನ್ಮಾನದ ಸಿದ್ಧತೆಯಾಗುತ್ತಿರುವಾಗ ಪೆರೆಲ್ಮನ್ ತನ್ನ ಮನೆಯಲ್ಲಿ ಬಾಗಿಲು ಹಾಕಿ ಕೂತುಬಿಟ್ಟ. “ನನಗೆ ಯಾವ ಪ್ರಶಸ್ತಿಗಳೂ ಬೇಡ. ನಾನು ಮನಸ್ಸಂತೋಷಕ್ಕಾಗಿ ಸಮಸ್ಯೆಗಳನ್ನು ಬಿಡಿಸಿದೆನೇ ಹೊರತು ಯಾವ ಪುರಸ್ಕಾರದ ಆಸೆಯಿಂದಲೂ ಅಲ್ಲ. ಪುರಸ್ಕಾರ ಸ್ವೀಕರಿಸಿದ್ದೇ ಆದರೆ ನಾನೊಂದು ಸಂಸ್ಥೆಯಾಗಿಬಿಡುತ್ತೇನೆ. ನನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇನೆ” ಎಂದು ಹೇಳಿ, ಯಾರ ಮಾತಿಗೂ ಒತ್ತಾಯಕ್ಕೂ ಮನವೊಲಿಕೆಗೂ ಜಗ್ಗದೆ ಏಕಾಂಗಿಯಾಗಿ ಉಳಿದುಬಿಟ್ಟ! ಫೀಲ್ಡ್ಸ್ ಪದಕ ಗೆದ್ದ ನೂರಾರು ಜನರಲ್ಲಿ, ಇಂದಿಗೂ ಥಟ್ಟನೆ ನೆನಪಿಗೆ ಬರುವವನು ಅದನ್ನು ನಿರಾಕರಿಸಿದ ಪೆರೆಲ್ಮನ್ ಮಾತ್ರ!

ರೊಮಿಲಾ ಥಾಪರ್, ಭಾರತ ಕಂಡ ಅತ್ಯಂತ ಗೌರವಾನ್ವಿತ ಎಡಪಂಥೀಯ ಚರಿತ್ರೆಕಾರ್ತಿ. ದೇಶದ ಹಲವು ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಸುಳ್ಳುಗಳನ್ನು ತುಂಬಿದ; ಶಾಲಾ ಪಠ್ಯಗಳಲ್ಲಿ ಇತಿಹಾಸವನ್ನು ತಿರುಚಿದ ಕೀರ್ತಿ ಈಕೆಗೆ ಸಲ್ಲಬೇಕು. ಹೆಚ್ಚಾಗಿ ಇಂಥ ಕೆಲಸ ಮಾಡುವವರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿದ ಸರಕಾರಗಳಿಂದ ಪ್ರಶಸ್ತಿ  ಪಡೆಯಲು ಸದಾ ಬೊಗಸೆಯೊಡ್ಡಿ ನಿಂತಿರುತ್ತಾರೆ. ಆದರೆ ಥಾಪರ್ ಮಾತ್ರ ತನಗೆ ಉಡುಗೊರೆಯಂತೆ ಬಂದ ಪದ್ಮಭೂಷಣ ಪ್ರಶಸ್ತಿಯನ್ನು ಎರಡು ಬಾರಿ, 1992 ಮತ್ತು 2005ರಲ್ಲಿ ನಿರಾಕರಿಸಿದರು! “ನಾನು ಯಾವುದೇ ಸರಕಾರದಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ. ನಾನು ಕೆಲಸ ಮಾಡಿರುವ ಸಂಘ ಸಂಸ್ಥೆಗಳು ಮತ್ತು ವಿದ್ಯಾಸಂಸ್ಥೆಗಳಿಂದ ಮಾತ್ರ ಅರ್ಹ ಪುರಸ್ಕಾರವನ್ನು ಪಡೆಯುತ್ತೇನೆ” ಎನ್ನುವುದು ಆಕೆಯ ಖಚಿತನುಡಿ. ಜೀನ್ ಪಾಲ್ ಸಾರ್ತ್ರೆ, ಫ್ರೆಂಚ್ ಸಾಹಿತ್ಯ ಜಗತ್ತಿನ ಮೇರು ಹೆಸರು. ನೊಬೆಲ್ ಪ್ರಶಸ್ತಿ ಬಂದಾಗ ಈತ ಹೇಳಿದ ಮಾತು: “ಈ ಬಹುಮಾನ ನನ್ನನ್ನು ಪೂರ್ವ-ಪಶ್ಚಿಮಗಳ ರಾಜಕೀಯಕ್ಕೆ ದಾಳವಾಗಿಸಬಹುದು. ಸದ್ಯಕ್ಕೆ ಯಾವ ಕೃಪಾದೃಷ್ಟಿಗೂ ಜಗ್ಗದೆ, ಯಾವ ಸ್ಥಾಪಿತ ಹಿತಾಸಕ್ತಿಯ ಬಂಧನಕ್ಕೂ ಒಳಗಾಗದೆ ಸ್ವತಂತ್ರಹಕ್ಕಿಯಾಗಿದ್ದೇನೆ. ಪ್ರಶಸ್ತಿ ನನ್ನನ್ನು ಹಲವು ಸರಳುಗಳಿಂದ ಬಂಧಿಸಿಬಿಡುತ್ತದೆ”. ತಮಾಷೆಯೆಂದರೆ, ಸಾರ್ತ್ರೆಯನ್ನು ಮೆಚ್ಚುತ್ತಿದ್ದ, ಉಘೇಉಘೇ ಎನ್ನುತ್ತಿದ್ದ ಆತನ ಹಲವು ಗೆಳೆಯರು, ಹಿಂಬಾಲಕರು ನೊಬೆಲ್ ಪ್ರಶಸ್ತಿ ಪಡೆಯಲು ಚಾತಕಪಕ್ಷಿಗಳಂತೆ ಕಾದುಕೂತರು! ವಿಯೆಟ್ನಾಮ್’ನ ಮಹಾನ್ ಹೋರಾಟಗಾರ ಮತ್ತು ಮುತ್ಸದ್ದಿಯಾಗಿದ್ದ ಲೆಡಕ್ಟೊನಿಗೆ 1973ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಯಿತು. ಆದರೆ ಆತ, “ನಾನು ಇದುವರೆಗೆ ವಿಯೆಟ್ನಾಮ್’ನ ಸ್ವಾತಂತ್ರ್ಯಕ್ಕಾಗಿ ನನ್ನ ಜೀವ ಮತ್ತು ಜೀವನ ತೇಯ್ದಿದ್ದೇನೆ. ಆದರೂ ಆ ಕನಸು ಸಂಪೂರ್ಣವಾಗಿ ನನಸಾಗಿಲ್ಲ. ಹಾಗಿರುವಾಗ ಈ ಪ್ರಶಸ್ತಿಯ ಘೋಷಣೆ ನನ್ನ ಬೇಡಿಕೆಯ ಮೊನಚನ್ನು ಅಳಿಸಿಹಾಕುತ್ತದೆ; ನನ್ನ ದನಿಯನ್ನು ಕುಂಠಿಸುತ್ತದೆ. ವಿಯೆಟ್ನಾಂನಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸುವವರೆಗೂ ನಾನು ನೊಬೆಲ್ ಅನ್ನು ಮುಟ್ಟಲಾರೆ” ಎಂದುಬಿಟ್ಟ!

ಸೋನು ನಿಗಮ್ ಎಂಬ ಬಾಲಿವುಡ್ ಗಾಯಕ ಹಲವು ಪ್ರಶಸ್ತಿಗಳನ್ನು ಪಡೆದಿರಬಹುದು. ಆದರೆ, 1997ರ ಫಿಲ್ಮ್ ಫೇರ್ ಪ್ರಶಸ್ತಿ ನೆನಪಿನಲ್ಲಿ ಉಳಿಯುವಂಥಾದ್ದು. ಯಾಕೆಂದರೆ ಆ ವರ್ಷ ಸೋನುಗೆ ಪ್ರಶಸ್ತಿ ಘೋಷಣೆಯಾದರೂ ಆತ ಅದನ್ನು ಸ್ವೀಕರಿಸಲಿಲ್ಲ! “ಸಂದೇಶೆ ಆತೆ ಹ್ಞೆ” ಎಂಬ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಎಂಬ ಬಹುಮಾನ ಅವನಿಗೆ ಬಂದಿತ್ತು. ಆದರೆ ಸೋನು ಮಾತ್ರ, “ಈ ಹಾಡಿನಲ್ಲಿ ನನ್ನ ಕಂಠಕ್ಕೆ ಕಂಠ ಕೂಡಿಸಿ ಹಾಡಿದ ಇನ್ನೊಬ್ಬ ಗಾಯಕ ರೂಪ್ ಕುಮಾರ್ ರಾಥೋಡ್. ಅವರನ್ನು ಬಿಟ್ಟು ನನಗೊಬ್ಬನಿಗೇ ಪ್ರಶಸ್ತಿ ಕೊಡುತ್ತಿರುವುದು ಸರಿಯಲ್ಲ. ಹಾಗಾಗಿ ಒಂದೋ ಇಬ್ಬರನ್ನೂ ಪರಿಗಣಿಸಿ; ಇಲ್ಲವೇ ಇಬ್ಬರನ್ನೂ ಕೈಬಿಡಿ” ಎಂದು ಹೇಳಿ ಪ್ರಶಸ್ತಿ ತಟ್ಟೆಯನ್ನು ನಯವಾಗಿ ನಿರಾಕರಿಸಿದ್ದ. ಅದೇ ರೀತಿಯ ಬದ್ಧತೆ ಮತ್ತು ಪ್ರಬುದ್ಧತೆ ತೋರಿದ ಇನ್ನೊಬ್ಬ ಕಲಾವಿದ ಹಾಲಿವುಡ್ ಜಗತ್ತಿನ ದಂತಕತೆ ಮರ್ಲಾನ್ ಬ್ರಾಂಡೋ. 1972ರಲ್ಲಿ “ದ ಗಾಡ್ ಫಾದರ್” ಚಿತ್ರದ ಅತ್ಯದ್ಭುತ ನಟನೆಗಾಗಿ ಸಹಜವಾಗಿಯೇ ಬ್ರಾಂಡೊ, ಆಸ್ಕರ್ ಪ್ರಶಸ್ತಿಗೆ ಅಂತಿಮ ಪಟ್ಟಿಯಲ್ಲಿದ್ದ. ಆಯ್ಕೆಯೂ ಆದ. ಆದರೆ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇನೆಂದು ಮೊದಲೇ ಊಹಿಸಿದ್ದ ಬ್ರಾಂಡೊ, ತನ್ನ ಬದಲು ತನ್ನ ಪ್ರತಿನಿಧಿಯಾಗಿ ಇನ್ನೊಬ್ಬರನ್ನು ಸಮಾರಂಭಕ್ಕೆ ಕಳಿಸಿದ. ಅವರು ವೇದಿಕೆ ಹತ್ತಿ “ಬ್ರಾಂಡೋ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಕಾರಣ, ಆಸ್ಕರ್ ಪ್ರಶಸ್ತಿಗಳ ಪಟ್ಟಿಯಲ್ಲಿ ಅಮೆರಿಕಾದ ಮೂಲ ನಿವಾಸಿಗಳನ್ನು ಕಡೆಗಣಿಸಲಾಗುತ್ತಿದೆ. ಈ ಸಮಾರಂಭ, ಅಮೆರಿಕಾಕ್ಕೆ ವಲಸೆ ಬಂದ ಹೊರಗಿನವರ ದರ್ಬಾರಾಗಿ ಮಾರ್ಪಟ್ಟಿದೆ” – ಎಂದು ಬ್ರಾಂಡೊ ಬರೆದುಕೊಟ್ಟಿದ್ದ ಮಾತುಗಳನ್ನು ಓದಿದರು.

ಇಂಥದೊಂದು ತಾರತಮ್ಯದ ರಾಜಕೀಯ ನಮ್ಮ ದೇಶದಲ್ಲೂ ಇರುವಂತಿದೆ. ಪದ್ಮಪ್ರಶಸ್ತಿಗಳಿರಲಿ, ಭಾರತ ರತ್ನದಂಥ ಅತ್ಯುನ್ನತ ಪುರಸ್ಕಾರಗಳಿರಲಿ; ಇಲ್ಲೆಲ್ಲ ದಕ್ಷಿಣ ಭಾರತದವರು ನಿರಂತರವಾಗಿ ಉಪೇಕ್ಷೆಗೊಳಗಾಗುತ್ತ ಬಂದಿದ್ದಾರೆ. 2013ರಲ್ಲಿ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಪದ್ಮಭೂಷಣ ಬಂದಾಗ ಆಕೆ ಹೇಳಿದ್ದೂ ಆ ನೋವಿನ ಮಾತುಗಳನ್ನೇ. “ಇದನ್ನು ನಿರಾಕರಿಸಲು ಎರಡು ಕಾರಣಗಳಿವೆ. ಒಂದು ಈ ಪ್ರಶಸ್ತಿ ನನಗೆ ಬಹಳ ತಡವಾಗಿ ಬಂದಿದೆ. ಅದನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ವಯಸ್ಸು ದಾಟಿ ಬಹಳ ವರ್ಷಗಳೇ ಆದವು. ಎರಡನೆಯದಾಗಿ, ದಕ್ಷಿಣ ಭಾರತೀಯರು ಹಲವು ವರ್ಷಗಳಿಂದ ಕೇಂದ್ರ ಸರಕಾರಗಳ ಅವಗಣನೆಗೆ ಗುರಿಯಾಗುತ್ತಾ ಬಂದಿದ್ದಾರೆ”.

ಇನ್ನು, ಪ್ರಶಸ್ತಿಗಳನ್ನು “ತಮಗಿಂತ ಮೊದಲು ಬೇರೆಯವರು ಪಡೆದುಬಿಟ್ಟರು” ಎಂಬ ಕಾರಣಕ್ಕೇ ನಿರಾಕರಿಸುವ ಮಂದಿಯೂ ಬಹಳಿದ್ದಾರೆ. ಕಲಾವಿದ ಉಸ್ತಾದ್ ವಿಲಾಯತ್ ಖಾನ್ 1964ರಲ್ಲಿ ಪದ್ಮಶ್ರೀ, 68ರಲ್ಲಿ ಪದ್ಮಭೂಷಣ, 2000ದಲ್ಲಿ ಪದ್ಮವಿಭೂಷಣ, ಜೊತೆಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ – ಹೀಗೆ ಸಾಲುಸಾಲು ಪ್ರಶಸ್ತಿಗಳನ್ನು ನಿರಾಕರಿಸಿದರು! “ಈ ಎಲ್ಲ ಪುರಸ್ಕಾರಗಳನ್ನು ಕೊಡುವಾಗಲೂ ಆಯ್ಕೆ ಸಮಿತಿಯಲ್ಲಿ ನನ್ನ ಅರ್ಹತೆಗೆ ಸಮಾನರಲ್ಲದ ವ್ಯಕ್ತಿಗಳಿದ್ದರು. ಅಂಥವರಿಂದ ನಾನು ಪ್ರಶಸ್ತಿ ಪಡೆಯಬೇಕಾಗಿಲ್ಲ. ಈ ದೇಶದಲ್ಲಿ ಸಿತಾರ್’ಗೆ ಸಂಬಂಧಿಸಿದ ಯಾವ ಪ್ರಶಸ್ತಿಯಿದ್ದರೂ ಅದು ಮೊದಲಿಗೆ ನನಗೆ ಬರಬೇಕಾಗಿತ್ತು” – ಇದು ವಿಲಾಯತರು ಕೊಟ್ಟ ನಿರಾಕರಣದ ಒಕ್ಕಣೆ. 2015ರಲ್ಲಿ ಬಾಲಿವುಡ್ ಚಿತ್ರಸಂಭಾಷಣಕಾರ ಸಲೀಂ ಖಾನ್’ರಿಗೆ ಪದ್ಮಶ್ರೀ ಬಂತು. “ಚಿತ್ರ ಕ್ಷೇತ್ರಕ್ಕೆ ನನ್ನ ಕೊಡುಗೆ ಈ ಪ್ರಶಸ್ತಿಗಿಂತ ಬಹುಪಾಲು ದೊಡ್ಡದು. ಹಾಗಾಗಿ, ಈಗ ಇದನ್ನು ಪಡೆದು ಚಿಕ್ಕವನಾಗಲಾರೆ” ಎಂದು ಸಲೀಂ ಪ್ರಶಸ್ತಿಯನ್ನು ಹಾಗೆಯೇ ವಾಪಸು ಮಾಡಿದರು. 2002ರಲ್ಲಿ ಕಥಕ್ ತಾರೆ ಸಿತಾರಾ ದೇವಿಯವರಿಗೆ ಪದ್ಮಭೂಷಣ ಸಿಕ್ಕಿದಾಗ ಆಕೆ ಹೇಳಿದ್ದು: “ಇದು ಸನ್ಮಾನವಲ್ಲ ಅವಮಾನ. ಒಂದು ಅತ್ಯಂತ ಮೇರು ಕಲಾವಿದೆಗೆ ಇಂಥ ಚಿಕ್ಕಪುಟ್ಟ ಪ್ರಶಸ್ತಿಗಳನ್ನು ಕೊಟ್ಟು ಮಾನ ಕಳೆಯುತ್ತಿದ್ದೀರಿ. ಭಾರತ ರತ್ನಕ್ಕಿಂತ ಕಡಿಮೆಯದಾದ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ”. ಇಲ್ಲೆಲ್ಲ, ಒಂದೆಡೆ ಅವರಿಗೆ ಬರಬೇಕಿದ್ದ ಗೌರವ ತಡವಾಗಿ ಬಂತೆಂಬ ದುಃಖ, ದುಮ್ಮಾನ ಇದ್ದದ್ದನ್ನು ಕಂಡರೂ ನಡುವೆ ಒಂದಷ್ಟು ಅಹಂಕಾರವನ್ನೂ ಕಾಣುತ್ತೇವೆ. ಇವರು ತಮಗೆ ಬಂದದ್ದನ್ನು ಹೀಗೆ ಸಾರಾಸಗಟಾಗಿ ತಿರಸ್ಕರಿಸಿದ್ದು ಸರಿಯೇ; ಉನ್ನತ ವ್ಯಕ್ತಿತ್ವಗಳು ಎಂದು ಭಾವಿಸಿದವರಿಂದ ಇಂಥ ಕೀಳುಮಟ್ಟದ ನಿರಾಕರಣೆಗಳು ಬರಬಹುದೇ ಎಂಬುದು ಚರ್ಚಾತ್ಮಕ ವಿಷಯ.

ಇತ್ತೀಚೆಗೆ ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಕೃತಿಗಳ ಮೇಲೊಂದು ಅಷ್ಟಾವಧಾನ ಕಾರ್ಯಕ್ರಮ ನಡೆದಾಗ ಅಪ್ರಸ್ತುತ ಪ್ರಸಂಗಿಗಳು, “ಯಾರ್ಯಾರಿಗೋ ಪ್ರಶಸ್ತಿ ಬಂದಿದೆ. ಆದರೆ ಭೈರಪ್ಪನವರಿಗೆ ಮಾತ್ರ ಜ್ಞಾನಪೀಠವನ್ನು ನಿರಾಕರಿಸುತ್ತಾ ಬರಲಾಗಿದೆಯಲ್ಲ, ಇದು ಸರಿಯೇ?” ಎಂಬ ಅಪ್ರಸ್ತುತವಲ್ಲದ ಸರಿಯಾದ ಪ್ರಶ್ನೆ ಹಾಕಿದರು. ಅವಧಾನಿಗಳ ಪೀಠದಲ್ಲಿ ಕೂತಿದ್ದ ಶತಾವಧಾನಿ ಆರ್. ಗಣೇಶ್, “ಪೀಠವನ್ನು ಕಸಿದುಕೊಳ್ಳಬಹುದೇನೋ. ಆದರೆ ಜ್ಞಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ದೊಡ್ಡವರಿಗೂ ಪ್ರಶಸ್ತಿ ಬಂದಿದೆ (ಕುವೆಂಪು, ಕಾರಂತ), ದೊಡ್ಡವರಲ್ಲದವರಿಗೂ ಬಂದಿದೆ (ಯಾರೆಂದು ಕನ್ನಡಿಗರಿಗೆ ಗೊತ್ತಿದೆ!). ಹಾಗೆಯೇ, ದೊಡ್ಡವರಾಗಿಯೂ ಪ್ರಶಸ್ತಿ ಪಡೆಯದೆ ಹೋದ ಡಿವಿಜಿಯಂಥ ಹಲವು ಮಹನೀಯರಿದ್ದಾರೆ.” ಎಂಬ ಮಾರ್ಮಿಕ ಉತ್ತರ ಕೊಟ್ಟರು. ಸ್ವಾರಸ್ಯವೆಂದರೆ, ಇಡೀ ಕರ್ನಾಟಕವೇ ಕೂಗಿಕೂಗಿ ಬೇಡಿದರೂ ಭೈರಪ್ಪನವರಿಗೆ ಜ್ಞಾನಪೀಠ, ಪಂಪ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳನ್ನು ಕೊಡದೆ ಸತಾಯಿಸಲಾಗಿದೆ. ಆದರೆ, ಇಡೀ ಕರ್ನಾಟಕವೇ ಒಂದಾಗಿ ನಿಂತು “ಈ ಅಯೋಗ್ಯನಿಗೆ ಪ್ರಶಸ್ತಿ ಕೊಡಬೇಡಿ” ಎಂದರೂ ಭೈರಪ್ಪನವರ ಎದುರು ಮನೆಯ ಭಗವಾನರಿಗೆ ಸಾಹಿತ್ಯ ಅಕಾಡೆಮಿ “ಗೌರವ ಪ್ರಶಸ್ತಿ” ಕೊಟ್ಟುಬಿಟ್ಟಿದೆ! ಒಟ್ಟಲ್ಲಿ ತಮ್ಮ ವ್ಯಕ್ತಿತ್ವದಿಂದ ಪ್ರಶಸ್ತಿಗಳಿಗೆ ಮರ್ಯಾದೆ ತರುವವರೂ ಇರುತ್ತಾರೆ; ತಮ್ಮಿಂದಾಗಿಯೇ ಪ್ರಶಸ್ತಿಗಳ ಮಾನ ಕಳೆಯುವವರೂ ಇರುತ್ತಾರೆ.

ರಾಜ್ ಕುಮಾರ್ ಹೇಳಿದ ಹಾಗೆ “ಜನರ ಪ್ರೀತಿಯೇ ಬಲುದೊಡ್ಡ ಪ್ರಶಸ್ತಿ. ಅದರ ಮುಂದೆ ಇನ್ನಾವುದಿದೆ!”

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!