ಅಂಕಣ

ॐ: ಎಣಿಕೆ ಮತ್ತು ಮಹತ್ವ

ॐ ಕಾರ ಎಲ್ಲರಿಗೂ ತಿಳಿದಿರುವ ಶಬ್ದ/ಸ್ವರ/ನಾದ ಎಂದು ಹೇಳಬಹುದು. ಇದು ಹೀಗೆ ಎಂದು ಹೇಳಲು ಆಗುವುದಿಲ್ಲ. ಇದು ಸ್ವರವೋ, ವ್ಯಂಜನವೋ, ನಾದವೋ, ಇಲ್ಲ ಬರಿ ಒಂದು ಶಬ್ದವೋ?! ಎಲ್ಲವೂ ಹೌದು ಆದರೆ ಯಾವುದೂ ಅಲ್ಲ! ಹೌದು ಸರಿಯಾಗೆ ಓದಿದ್ದೀರಿ, ಗೊಂದಲ ಪಡುವ ಅಗತ್ಯವಿಲ್ಲ. ನಿಜ ’ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!’ ಎಂದರೆ ಇದು ಯಾವುದೊ ಹುಚ್ಚು ವಾಕ್ಯವೇ ಸರಿ. ಇದನ್ನೆ ಇನ್ನೂ ಹೆಚ್ಚಾಗಿ ತಿಳಿದುಕೊಳ್ಳುವ ಪ್ರಯಾಸವಿದಾಗಿದೆ.

ॐ ಎಂಬ ವಿಚಾರಕ್ಕೆ ಹೋಗುವ ಮುನ್ನ, ಒಂದು ವಿಷಯವನ್ನು ನಾನು ಓದುಗರಿಗೆ ತಿಳಿಯಪಡಿಸಲು ಇಚ್ಚಿಸುತ್ತೇನೆ. ॐ ಎಂಬುದು ಯಾವುದೋ ಧರ್ಮ, ಮತ, ಅಥವ ಪಂಥಕ್ಕೆ ಸೀಮಿತವಾದ ಗುರುತು ಅಥವ ಚಿಹ್ನೆ ಅಲ್ಲ. ರಾಜಾ ಹುಲಿ ಚಿತ್ರದಲ್ಲಿ ವಿಶೇಷವಾಗಿ ಮೊದಲನೆಯ ಹಾಡಿನಲ್ಲಿಯೇ ಒತ್ತಿ ಹೇಳಿದ್ದಾರೆ. “ॐ ಹಿಂದು ಗುರುತು” ಅಂತ. ಹಾಡಿನ ವಿಮರ್ಶೆ ನಮಗೆ ಬೇಡಾ, ಆದರೆ ॐ ಎನ್ನುವುದು ಹಿಂದು ಗುರುತಲ್ಲ. ಇದನ್ನು ಜಗತ್ತಿಗೆ ನೀಡಿದ್ದು ಭಾರತೀಯರೆ. ಆದರಿದು ಧರ್ಮ ಚಿಹ್ನೆಯಲ್ಲ. ಹೇಗೆ ಗಣಿತ, ವಿಜ್ಞಾನ, ಶಾಸ್ತ್ರಗಳು ಮತ-ಸಂಪ್ರದಾಯಗಳ ಆವರಣಕ್ಕೆ ಸೀಮಿತವಾಗುವುದಿಲ್ಲವೋ, ಅಂತೆಯೆ ॐ ಕಾರವೂ ಹೌದು.

ॐ ಕಾರವು 2 ಸ್ವರ ಮತ್ತು 1 ವ್ಯಂಜನ ಸೇರಿ ಆದದ್ದು, ಅವೇ – ’ಅ’, ’ಉ’, ಮತ್ತು ’ಮ್’ಕಾರಗಳು. ’ಅ’, ’ಉ’, ’ಮ್’ಕಾರಗಳ ಸಮ್ಮಿಲನವೇ ॐ ಕಾರ. ಇನ್ನು ॐ ಕಾರಕ್ಕೆ ಪ್ರಣವ ಅಥವ ಪ್ರಣವನಾದ ಎಂದು ಕರೆಯುವುದು ಉಂಟು. ಇದು ಅತೀಂದ್ರಿಯ ಮತ್ತು ಪವಿತ್ರವಾದ ನಾದ ರೂಪ ಎಂದು ಹೇಳಬಹುದು. ನಿಜ, ನಮ್ಮ ಧರ್ಮ ಗ್ರಂಥಗಳಲ್ಲಿ, ಪುರಾಣಾದಿ ಪುಣ್ಯ ಗ್ರಂಥಗಳಲ್ಲಿ, ಶ್ಲೋಕ-ಮಂತ್ರಗಳಲ್ಲಿ ಹಲವಾರು ಬಾರಿ ಬಂದಿರುತ್ತದೆ. ಸಾಮಾನ್ಯ, ಶ್ಲೋಕ-ಮಂತ್ರಗಳ ಉಚ್ಛಾರದ ಪೂರ್ವದಲ್ಲಿ ॐಕಾರದ ಉಚ್ಛಾರ ವಾಡಿಕೆಯಾಗಿದೆ. ಎಲ್ಲ ಆಚಾರಗಳಂತೆ ಇದೂ ಕೂಡ ಒಂದು ಆಚಾರ ಎಂದು ತಿಳಿಯಬಹುದು. ಆದರದು ಸುಳ್ಳು, ಅಪೂರ್ಣ ತಿಳುವಳಿಕೆ. ॐ ಕಾರದ ಉಚ್ಛಾರದಿಂದ ಪ್ರತಿ ಕಾರ್ಯಕ್ಕೂ (ಶ್ಲೋಕ-ಮಂತ್ರಗಳ ಪಠನವನ್ನು ಒಳಗೊಂಡು) ಶುಭಾರಂಭವಾಗುತ್ತದೆ. ದೈವೀ ಭಾವದಿಂದ ಮನಸ್ಸು ಮತ್ತು ದೇಹ ಪಾವನ-ಪುನೀತವಾಗಿ ಸತ್ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಪೂರಕವಾಗುತ್ತದೆ.

ॐ ಕಾರದ ಉಚ್ಛಾರಣೆಯಿಂದ ಆರೋಗ್ಯದ ದೃಷ್ಟಿಯಿಂದ ಹಲವಾರು ಉಪಯೋಗಗಳಿವೆ. ಇಗಾಗಲೇ ಹೇಳಿದಂತೆ ॐ ಕಾರದಲ್ಲಿ ’ಅ’, ’ಉ’, ’ಮ್’ಕಾರಗಳೆಂದು ಮೂರು ಭಾಗಗಳು. ’ಅ’ಕಾರದ ಕಂಪನಗಳು ನಾಭಿಯ ಮೂಲದಿಂದ ಮೂಡುತ್ತದೆ. ಇದರ ಕಂಪನ-ತರಂಗಗಳನು ನಾವು ದೇಹದ ಕೆಳಭಾಗ, ಎಂದರೆ ಸೊಂಟದಿಂದ ಕಾಲು ಬೆರಳಿನ ತುದಿಯವರೆಗೆ ಗಮನಿಸಬಹುದು. ಇನ್ನು ’ಉ’ಕಾರದ ಕಂಪನಗಳು ಎದೆಯ ಮೆಲ್ಭಾಗ ಮತ್ತು ಕಂಠದಿಂದ ಮೂಡಿದ್ದು, ದೇಹದ ಮಧ್ಯ ಭಾಗದಲ್ಲಿ ಎಂದರೆ, ಹೊಟ್ಟೆಯ ಭಾಗದಿಂದ ಕೈ ಬೆರಳುಗಳ ತುದಿಯವರೆಗೆ ಇದರೆ ಕಂಪನಗಳನ್ನು ಗಮನಿಸಬಹುದು. ಧಾರ್ಷ್ಟ್ಯದಿಂದ ಮೂಡುವುದೆ ’ಮ್’ಕಾರ. ಇದರ ಕಂಪನಗಳು ವಿಶೇಷವಾಗಿ ತಲೆಯ ಭಾಗದಲ್ಲಿ ಗಮನಿಸಬಹುದು. ॐ ಕಾರದ ನಿತ್ಯ ಪಠನದಿಂದ ಮನಸ್ಸಿನ ಒತ್ತಡಕ್ಕೆ ಸಂಬಂಧಿಸಿದ ರೋಗದಿಂದ ಹೆಚ್ಚು ಆರಾಮಸಿಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮನಸ್ಸಿನ ಏರಿಳಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಅತೀವ ಸಹಾಯ ಮಾಡುತ್ತದೆ. ॐ ಕಾರದಿಂದ ದಿನವನ್ನು ಪ್ರಾರಂಭಿಸಿದ್ದಲ್ಲಿ, ದಿನವಿಡಿ ನವ ಚೇತನ – ಹೊಸ ಉತ್ಸಾಹ ತುಂಬಿರುತ್ತದೆ.

ॐ ಕಾರದ ಮೂರು ಅಕ್ಷರಗಳು ಜೀವನದ ವಿಭಿನ್ನ ಪಾತ್ರಗಳು, ಅನುಭವಗಳು, ಮತ್ತು ಪರಿಕಲ್ಪನೆಗಳಿಗೆ ಹೊಂದಿಕೊಂಡಿದೆ. ತ್ರಿಮೂರ್ತಿಯ ಪರಿಕಲ್ಪನೆಯಿರಬಹುದು, ಅಥವ ತ್ರಿಗುಣಗಳ ದಟ್ಟ ವಿಚಾರವಿರಬಹುದು. ತ್ರಿಗುಣಗಳ ವಿಚಾರಕ್ಕೆ ಬಂದಾಗ “ಸತ್ವ, ರಜಸ್ಸ್, ಮತ್ತು ತಮಸ್ಸ್” ಎಂದು ಮೂರು ಗುಣಗಳು. ತಾಮಸ ಗುಣವು ’ಆಲಸ್ಯ, ಗಲಭೆ, ಅನಾರೋಗ್ಯ, ಹಿಂಸಾಚಾರ, ಮೌಢ್ಯ, ಅಜ್ಞಾನ’ ಇತ್ಯಾದಿ ಗುಣಗಳನ್ನು ಬಿಂಬಿಸುತ್ತದೆ. ರಜಸ್ಸು. ’ರೋಷ, ಉದ್ವೇಗ, ಚಟುವಟಿಕೆ, ಪ್ರತಿಷ್ಠೆ’ ಇತ್ಯಾದಿ ಗುಣಗಳನ್ನು ಬಿಂಬಿಸುತ್ತದೆ. ಸತ್ವ ಗುಣ, ’ಸಹನೆ, ಶಾಂತಿ, ಸಮತೆ, ಪರಿಪೂರ್ಣತೆ, ಸೌಶೀಲ್ಯ’ ಇತ್ಯಾದಿ ಗುಣಗಳನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯಾಗಿ ಮೂರೂ ಗುಣಗಳ ಬಂಧನವನ್ನು ಮೀರಿ ನಿರ್ಗುಣತೆಯಕಡೆಗೆ ಸಾಗುವುದೇ ॐ ಕಾರದ ಸಂಕೇತ. ಲೌಕಿಕ ಜಾಡನ್ನು ಬಿಟ್ಟು ನಿರ್ಲಿಪ್ತತೆಯ ಕಡೆಗೆ ಸಾಗುವ ಹಾದಿಯೇ ॐ ಕಾರ. ದೇಹದಲ್ಲಿ ಇಡ-ಪಿಂಗಲ-ಸುಷುಮ್ನ ಹೀಗೆ ಮೂರು ನಾಡಿಗಳು. ಮೂರನ್ನು ದಾಟಿ ಸಹಸ್ರಾರ ಚಕ್ರದೆಡೆಗೆ ಹೋಗುವುದಕ್ಕೆ ॐ ಕಾರದ ಸಹಾಯ ಬೇಕಾಗುತ್ತದೆ.

ॐ ಕಾರದ ಪರಿಕಲ್ಪನೆ ಆಯುರ್ವೇದವನ್ನೂ ಬಿಟ್ಟಿಲ್ಲ, ಇಲ್ಲಿ “ತ್ರಿದೋಷ” ಎಂಬ ಪರಿಕಲ್ಪನೆ; ಅವೇ, “ವಾತ, ಪಿತ್ತ, ಮತ್ತು ಕಫ”. ಇವುಗಳಲ್ಲಿ ಒಂದು ಒಳ್ಳೆಯದು ಮತ್ತೊಂದು ಕೆಟ್ಟದ್ದು ಎಂದಲ್ಲ. ಆರೋಗ್ಯವನ್ನು ಕಾಪಾಡಬೇಕಾದರೆ ಸಮತೆಯಿರಬೇಕು. ’ ವಾತ, ಪಿತ್ತ, ಕಫ’ಗಳು ಅಗತ್ಯಕ್ಕೆ ಬೇಕಾದಷ್ಟು ಇದ್ದರೆ ಆರೋಗ್ಯ; ಏರುಪೇರಾದಲ್ಲಿ ಅನಾರೋಗ್ಯ. ವೇದಗಳಲ್ಲಿ ನಾಲ್ಕು ವೇದಗಳಿದ್ದರೂ, ಮುಖ್ಯವಾಗಿ ಇರುವುದು ಮೂರು – ’ಋಕ್, ಯಜುಸ್, ಸಾಮ್’. ಅಥರ್ವ ವೇದವು ಆಚಾರಕ್ಕೆ ಸಂಬಂಧ ಪಟ್ಟದ್ದು. ಅವೇ ಮೂರು ॐ ಕಾರದ ಮೂರು ಅಕ್ಷರದ ಸ್ವರೂಪಗಳು. ಇನ್ನು ನಮ್ಮ ದೇಹದ ’ಜಾಗೃತಿ (consciousness), ಸ್ವಪ್ನ (Dream), ಮತ್ತು, ಸುಶುಪ್ತಿಯ (Deep sleep) ಅವಸ್ಥೆಗಳನ್ನು ॐ ಕಾರ ಬಿಂಬಿಸುತ್ತದೆ.

ॐ ಎಂಬುದು ಐತಿಹಾಸಿಕ ಮಹತ್ವವನ್ನು ಪಡೆದಿದೆ. “ಹರಪ್ಪಾ-ಮೊಹೆಂಜೊದಾರೊ” ನಾಗರೀಕತೆಯ ಸ್ಥಳಗಳಲ್ಲಿ ಕೂಡ ॐ ಕಾರದ ಚಿಹ್ನೆ ನಮಗೆ ಲಭ್ಯವಾಗಿದೆ. ॐ ಕಾರವು ಬರೆದಾಗ ಬಿಲ್ಲು ಬಾಣದ ರೀತಿಯಲ್ಲಿರುತ್ತದೆ. ಆ ಬಿಲ್ಲಿನಿಂದ ಬಾಣ ಹೊಡೆದರೆ, ಅದರ ಗುರಿ ಪರಬ್ರಹ್ಮನಾಗಿರುತ್ತಾನೆ (ಎಂದರೆ ದೇವರು).

ಭಗವದ್ಗೀತೆಯಲ್ಲಿ ಕೃಷ್ಣನು ॐ ಬಗ್ಗೆ ಹೀಗೆಂದಿದ್ದಾನೆ –
रसोऽहमप्सु कौन्तेय प्रभास्मि शशिसूर्ययो:|

प्रणव: सर्ववेदेषु शब्द: खे पौरुषं नृषु ||8||
ಅರ್ಥ: “ವೇದಗಳಲ್ಲಿ ॐ ಕಾರವೇ ನಾನು”. ಎಂದರೆ ಸಾಕ್ಷಾತ್ ಪರಮಾತ್ಮನೆ ತಾನು ಬೇರಲ್ಲ, ॐಕಾರವೇ ಹೌದು, ಎಂದಿದ್ದಾನೆ.

ॐ ಎಂಬುದು ಸೃಷ್ಟಿಯ ಮೂಲ, ಬ್ರಹ್ಮಾಂಡದ ಸ್ವೋಪಜ್ಞ ನಾದ ಎಂದು ಹೇಳುತ್ತಾರೆ. ಬ್ರಹ್ಮಾಂಡದಲ್ಲಿನ “Cosmic Micro Wave Radiations” ಕೂಡ ॐಕಾರದ ಆವರ್ತನಗಳಿಗೆ ಹತ್ತಿರವಾಗಿದೆ ಎಂದು ಭೌತವಿಜ್ಞಾನಿಗಳು ಹೇಳುತ್ತಾರೆ. ಎಲ್ಲದರ ಮೂಲವೇ ॐಕಾರ. ಜೀವ-ಜಡ, ಪುರುಷ-ಪ್ರಕೃತಿ, ಪಿಂಡಾಂಡ-ಬ್ರಹ್ಮಾಂಡ, ಇವುಗಳ ಸಾರವೇ ॐಕಾರ. ಇದು ಎಲ್ಲವೂ ಹೌದು, ಆದರೆ ಯಾವುದೂ ಅಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Vittal

ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!