ಅಂಕಣ

ಸಶಕ್ತ ಭಾರತದ ಕನಸೂ, ಅಶಕ್ತ ಮಕ್ಕಳೂ

ಮನೆ ಪಕ್ಕದ ಖಾಲಿ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಸಿದ್ದತೆ ಜೋರಾಗಿ ನಡೆಯುತ್ತಿದೆ, ಅದರ ಮೊದಲ ಕುರುಹಾಗಿ ಒಂದು ಚಿಕ್ಕ ಶೆಡ್ ಹಾಗೂ ಅದರಲ್ಲಿ ವಾಸಿಸಲು ಒಂದು ಪುಟ್ಟ ಸಂಸಾರ. ಹಗಲೆಲ್ಲಾ ಕಟ್ಟಡದ ಕೆಲಸ ಹಾಗೂ ರಾತ್ರಿ ನೋಡಿಕೊಳ್ಳುವ ಕೆಲಸ. ತಾಯಿ ಕೆಲಸಕ್ಕೆ ಹೋದಾಗ ತಮ್ಮನಿಗಿಂತ ನಾಲ್ಕು ವರ್ಷ ದೊಡ್ಡವಳಾದ ಹುಡುಗಿಯೇ ಅವನ ಅಮ್ಮ. ಮರದ ಕೊಂಬೆಗೆ ಕಟ್ಟಿದ ಜೋಲಿ ಮಲಗಲು, ಕಲ್ಲು ಮಣ್ಣು ಮರಳುಗಳೇ ಆಟದ ಸಾಮಾನುಗಳು
.
ಸಂಜೆ ಹೀಗೆ ಹೊರಗೆ ಕೂತಿರುವಾಗ ಸಂಭಾಷಣೆಯೊಂದು ಕಿವಿಗೆ ಬಿತ್ತು. ಆಗ ತಾನೇ ಮಗುವನ್ನು ಡಾಕ್ಟರಿಗೆ ತೋರಿಸಿ ಬಂದಿದ್ದ ಅವರು ನೆರೆಮನೆಯವರೊಂದಿಗೆ ಮಾತಿಗೆ ಇಳಿದಿದ್ದರು. ಎಷ್ಟು ಹುಷಾರಾಗಿ ನೋಡಿಕೊಂಡರೂ, ಎಚ್ಚರಿಕೆ ವಹಿಸಿದರೂ ಈ ಡಾಕ್ಟರ ಬಳಿ ಹೋಗೋದು ಮಾತ್ರ ತಪ್ಪೊಲ್ಲ ನೋಡಿ, ಎಷ್ಟೂ ಅಂತ ಔಷಧಿ ಹಾಕೋದು ನಂಗಂತೂ ಸಾಕಾಗಿ ಹೋಗಿದೆ. ಇಷ್ಟು ಚೆನ್ನಾಗಿ ನೋಡಿಕೊಂಡರೂ ಹೀಗೆ ಅದೇ ಎದುರಿನ ಶೆಡ್ ನಲ್ಲಿರೋ ಮಕ್ಕಳು ನೋಡಿ ಧೂಳು, ಬಿಸಿಲು ಮಣ್ಣು ಪರಿವೆಯಿಲ್ಲದೆ ಅಲ್ಲೇ ಆಡ್ತಾವೆ, ಅಲ್ಲೇ ತಿಂತಾವೆ ಹಾಗೂ ಅಲ್ಲೇ ಮಲಗ್ತವೆ ಅದರೂ ಎಷ್ಟು ಆರೋಗ್ಯವಾಗಿ ಗಟ್ಟಿಮುಟ್ಟಾಗಿ ಇರ್ತಾರೆ ನೋಡಿ …

ತಟ್ಟನೆ ಮನಸ್ಸು ಬಾಲ್ಯದತ್ತ ಜಾರಿತು. ಬಾಲ್ಯ ನೆನಪಾದೊಡನೆ ಕಣ್ಣೆದೆರು ಕಾಣೋ ಚಿತ್ರಗಳಲ್ಲಿ, ನೆನಪುಗಳ ರಾಶಿಯಲ್ಲಿ ಬಹುಭಾಗ ಆಕ್ರಮಿಸಿರುವುದು ಆಟ, ತುಂಟಾಟಗಳೇ. ಮತ್ತುಳಿದವುಗಳೆಲ್ಲಾ ನಂತರದ ಸ್ಥಾನ. ಗೆಳೆಯರ ಬಳಗ, ಆಟ, ತುಂಟಾಟ ಬಹು ಸಮಯ ಕಳೆಯುತ್ತಿದ್ದಿದ್ದೆ ಮನೆಯ ನಾಲ್ಕು ಗೋಡೆಯಾಚೆಯ ಬಯಲಿನಲ್ಲಿ. ಪ್ರಕೃತಿಯ ಮಡಿಲಿನಲ್ಲಿ. ದೈಹಿಕ ಕಸರತ್ತೆ ಪ್ರಮುಖ ಅಂಶ, ಒಗ್ಗಟ್ಟು ಒಬ್ಬಟ್ಟಿನಷ್ಟೇ ಮಧುರ.

ನಮ್ಮ ಗ್ರಾಮೀಣ ಆಟಗಳ ವೈಶಿಷ್ಟವೆ ಅದು. ನಮಗರಿವಿಲ್ಲದೆ ಅದೆಷ್ಟೋ ಜೀವನ ತತ್ವಗಳನ್ನು ಕಲಿಸುತ್ತಿದ್ದವು. ಒಬ್ಬರೇ ಆಡುವ ಆಟಗಳು ಇಲ್ಲವೇ ಇಲ್ಲವೇನೋ ಎಂಬಷ್ಟು ಅಂತಹ ಆಟಗಳು ನಿಷಿದ್ದ. ಇನ್ನೊಬ್ಬರ ಸಾಂಗತ್ಯ, ಸಹಕಾರ ಅನಿವಾರ್ಯ. ಇದು ನಮಗೆ ಗೊತ್ತಿಲ್ಲದಂತೆ ಎಲ್ಲರೊಂದಿಗೆ ಬೆರೆಯುವ ಸ್ವಭಾವವನ್ನು ಕಲಿಸುತ್ತಿತ್ತು. ಏನೇ ಜಗಳ, ಕಿತ್ತಾಟವಾದರೂ ಆಟ ಮುಂದುವರೆಸಲು ಒಂದಾಗಬೇಕಾದ ಅನಿವಾರ್ಯತೆ ಭಿನ್ನಾಭಿಪ್ರಾಯಗಳ ನಡುವೆಯೂ ಸಮರ್ಥವಾಗಿ ಕೆಲಸ ನಿರ್ವಹಿಸುವ ಗುಣ ಕಲಿಸುತ್ತಿತ್ತು. ಒಂದು ಕೆಲಸಕ್ಕಾಗಿ ಎಲ್ಲರೊಡನೆ ಸಾಗುವ ಪಾಠ ಅರ್ಥಮಾಡಿಸುತ್ತಿತ್ತು.

ಮುಖ್ಯವಾಗಿ ನಾಲ್ಕು ಗೋಡೆಗಳ ನಡುವಿನ ಸಂಕುಚಿತ ಪ್ರದೇಶದಿಂದ ಬಯಲಿಗೆ ತಂದು ಮನಸ್ಸನ್ನೂ ವಿಶಾಲಗೊಳಿಸುತ್ತಿತ್ತು. ಪ್ರಕೃತಿಯೊಡನೆ ಬೆರೆಯುವ ಅವಕಾಶ ದೊರಕಿಸುತ್ತಿತ್ತು, ಓಟ ನೆಗೆತ ದೈಹಿಕವಾಗಿ ಬಲಗೊಳಿಸುವುದರ ಜೊತೆಗೆ ಎಡವಿದಾಗ, ಬಿದ್ದಾಗ ಮತ್ತೆ ಮುನ್ನುಗ್ಗುವಂತೆ ಧ್ರುತಿಗೆಡದಂತೆ ಮಾನಸಿಕವಾಗಿಯೂ ಶಕ್ತರನ್ನಾಗಿಸುತ್ತಿತ್ತು. ಗುಂಪಿನಲ್ಲಿ ಆಡುವಾಗ ನಾಯಕತ್ವದ ಗುಣವನ್ನು ಬೆಳೆಸುವುದರ ಜೊತೆ ಜೊತೆಗೆ ಸಂಘಟಿತ ಶ್ರಮದ ಅವಶ್ಯಕತೆಯನ್ನು ಅದರ ಉಪಯೋಗವನ್ನೂ ಪರಿಚಯಿಸುತ್ತಿತ್ತು. ಆ ನಗು , ಸಂಭ್ರಮಗಳು ಇಡೀ ದಿನವನ್ನು ಚೇತೊಹಾರಿಯಾಗಿಸುತ್ತಿತ್ತು. ಆಡಿ ಸುಸ್ತಾಗಿ ಬಂದು ಹೊಟ್ಟೆತುಂಬಾ ತಿಂದು, ಸೊಂಪಾದ ನಿದ್ರೆಯನ್ನು ಮಾಡಿ ದೇಹ ಮತ್ತು ಮನಸ್ಸುಗಳೇರೆಡೂ ಆರೋಗ್ಯವನ್ನು ಹೊಂದಿ ನಳನಳಿಸುತ್ತಿದ್ದವು.

ಈಗಿನ ಮಕ್ಕಳ ಬಾಲ್ಯವನ್ನು ಒಮ್ಮೆ ಗಮನಿಸಿದರೆ ಅವರನ್ನು ಎಂಥಹ ಅವಕಾಶ ವಂಚಿತರನ್ನಾಗಿಸುತ್ತಿದೆವಲ್ಲವೆನಿಸುತ್ತದೆ. ನಾವು ನಮ್ಮ ಮಕ್ಕಳ ಬಾಲ್ಯವನ್ನೇ ಕಸಿದುಬಿಟ್ಟಿದ್ದೇವೆ. ಹೊರಗಿನ ಆಟಗಳು ನಿಷಿದ್ದ, ನಾಲ್ಕು ಗೋಡೆಗಳ ಮುಚ್ಚಿದ ಬಾಗಿಲ ಒಳಗಿನ ದುಬಾರಿ ಆಟಿಕೆಗಳು ಅವರ ಬಾಲ್ಯವನ್ನು ಬಡವಾಗಿಸಿವೆ. ಮನಸ್ಸನ್ನು ಸಂಕುಚಿತಗೊಳಿಸಿದೆ. ಚಿಕ್ಕನಿಂದಲೇ ಅಂತಸ್ತುಗಳ ಹೇರಿಕೆ ಮಾನಸಿಕವಾಗಿ ಅವರನ್ನು ದೂರ ದೂರ ಮಾಡುತ್ತಿವೆ, ಯಾವುದೇ ಮೊಬೈಲ್ ಗೇಮ್ ಗಳೋ ವೀಡಿಯೊ ಗೇಮ್’ಗಳೋ ಕೇಳುವುದು ಹೊಂದಾಣಿಕೆಯನ್ನೋ, ಒಗ್ಗಟ್ಟನ್ನೋ ಅಲ್ಲಾ.. ಏಕಾಂಗಿ ಹೋರಾಟವನ್ನು. ಇವುಗಳು ನಮ್ಮನ್ನು ಒಂಟಿಯನ್ನಾಗಿಸುವದರ ಅರಿವಿಲ್ಲದೆ ಅದರಲ್ಲಿ ಮುಳುಗಿ ಹೋಗಿದ್ದೇವೆ. ಸಂತೆಯಲ್ಲೂ ಏಕಾಂಗಿಯಾಗಿರುವುದನ್ನು ಇವು ಕಲಿಸುತ್ತಿವೆ. ಇಲ್ಲಿ ಕೇವಲ ನನ್ನ ಗೆಲುವಿಗಷ್ಟೇ ಮಹತ್ವ. ನಮ್ಮ ಎನ್ನುವ ಪದಕ್ಕೆ ಜಾಗವೇ ಇಲ್ಲ.

ದೈಹಿಕ ಕಸರತ್ತಿಗೆ ಅವಕಾಶ ತೀರಾ ಕಡಿಮೆ, ಹಾಗಾಗಿಯೇ ಮನಸ್ಸಿನಷ್ಟೇ ದೇಹವೂ ಸೂಕ್ಷ್ಮ. ಬೀಳುವ ಅವಕಾಶವಿಲ್ಲ, ಎದ್ದು ನಡೆಯುವ ಸ್ಥೈರ್ಯ ಕಲಿಯುವ ಪ್ರಸಕ್ತಿಯೇ ಇಲ್ಲ. ಹಾಗಾಗಿಯೇ ನಮ್ಮ ಮಕ್ಕಳು ಸೋಲನ್ನು ಸುಲಭವಾಗಿ ಅರಗಿಸಿಕೊಳ್ಳಲಾರರು. ಬೀಳುವುದ ಸಹಜ ಎಂದು ಅರ್ಥಮಾಡಿಕೊಳ್ಳುವುದು ದೂರದ ಮಾತು. ದೇಹಕ್ಕೆ ಹೆಚ್ಚು ಶ್ರಮವಿಲ್ಲ, ತಿನ್ನುವುದಾದರೂ ಹೇಗೆ? ಸರಿಯಾಗಿ ತಿನ್ನದೇ ಶಕ್ತಿ ತುಂಬುವುದಾದರೂ ಎಲ್ಲಿಂದ? ಪ್ರತಿಯೊಂದನ್ನೂ ಒತ್ತಡದಲ್ಲೇ ನಿರ್ವಹಿಸುವ ಪರಿಸ್ಥಿತಿಯನ್ನು ಸೃಷ್ಟಿಸಿಬಿಟ್ಟಿದ್ದೇವೆ. ಅದನ್ನು ಸುಲಭವಾಗಿ ನಿವಾರಿಸಿಕೊಳ್ಳುವ ದಾರಿಯನ್ನೂ ಮುಚ್ಚಿಬಿಟ್ಟಿದ್ದೇವೆ. ವಿಶಾಲವಾದ ಆಗಸದಲ್ಲಿ ಹಾರಲು ಕಲಿಯಬೇಕಾಗಿದ್ದ ಹಕ್ಕಿಯನ್ನು ತಂದು ಪಂಜರದಲ್ಲಿಟ್ಟು ಖಂಡಾಂತರದಾಚೆ ಹಾರುವ ಕನಸನ್ನು ತುಂಬುತ್ತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಸಶಕ್ತ ಭಾರತದ ಮಾತಾನಾಡುತ್ತಾ ಅಶಕ್ತ ಪ್ರಜೆಗಳನ್ನು ತಯಾರು ಮಾಡುತ್ತಿದ್ದೇವೆ.

ಮಕ್ಕಳಿಗೆ ಬೇಕಾಗಿರುವುದು, ಅವರಿಗೆ ಸಂತೋಷ ಕೊಡುವುದು ದುಬಾರಿ ಆಟಿಕೆಗಳೋ. ಬ್ರಾಂಡೆಡ್ ಬಟ್ಟೆಗಳೋ ಅಲ್ಲಾ. ಅವರಿಗೆ ಬೇಕಾಗಿರುವುದು ಹಾಗೂ ಅವಶ್ಯಕವಾಗಿರುವುದು ಎಲ್ಲರೊಂದಿಗೆ ಸೇರಿ ಆಡುವ ಸ್ವಾಂತಂತ್ರ್ಯ. ಬಾಲ್ಯ ಸಹಜವಾಗಿ ಅರಳಬೇಕು. ಆ ಸಹಜತೆ, ಸಂತಸ ಆರೋಗ್ಯ ಹೇರಳವಾಗಿ ಹಾಗೂ ಬಿಟ್ಟಿಯಾಗಿ ಸಿಗುವುದು ಎಲ್ಲರೊಂದಿಗೆ ಸೇರಿ ಆಡುವ ನಮ್ಮ ಆಟಗಳಲ್ಲಿ. ಆಡೋಣ, ಬೆಳೆಯೋಣ…

Facebook ಕಾಮೆಂಟ್ಸ್

ಲೇಖಕರ ಕುರಿತು

Shobha Rao

Writer

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!