ಅಂಕಣ

ಬಡಪಾಯಿ ಚಿತೆಯ ಮೇಲೆ ಬೇಳೆ ಬೇಯಿಸಿಕೊಳ್ಳುತ್ತಿರುವವರು..!

ಜಾತಿಯ ಹೆಸರಿನಲ್ಲಿ ಶೋಷಣೆ, ದಬ್ಬಾಳಿಕೆ, ಕೀಳುಜಾತಿಯವರಿಗೆ ಗ್ರಾಮದಿಂದ ಬಹಿಷ್ಕಾರ ಇವೆಲ್ಲಾ ನಮ್ಮ ದೇಶದಲ್ಲಿ  ಹಿಂದಿನ ಕಾಲದಿಂದಲೇ ರೂಢಿಯಲ್ಲಿದ್ದ ಕೆಟ್ಟ  ಸಂಪ್ರದಾಯಗಳು. ಇವತ್ತಿಗೂ ಇವುಗಳೆಲ್ಲ ಕೆಲವೆಡೆ ರೂಢಿಯಲ್ಲಿದೆ. ಆದರೆ ಕಾಲಕಾಲಕ್ಕೆ ಈ ನಾಡಿನಲ್ಲಿ   ಜನ್ಮವೆತ್ತಿದ ಮಹಾಪುರುಷರು, ಸಮಾಜ ಸುಧಾರಕರು ಈ ಪಿಡುಗನ್ನು ನಿವಾರಿಸಲು ಬಹಳ ಶ್ರಮ ಪಟ್ಟರು. ಬಸವಣ್ಣ, ಅಕ್ಕ ಮಹಾದೇವಿ, ನಾರಾಯಣ ಗುರು ಮುಂತಾದವರೆಲ್ಲ ಈ ನಿಟ್ಟಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಇವರುಗಳೆಲ್ಲಾ ಧರ್ಮ ಮಾರ್ಗದಿಂದ ಈ ಶೋಷಣೆಗಳೆಲ್ಲಾ ಕಡಿಮೆಯಾಗಲು ಕಾರಣರಾದರೆ, ಮತ್ತೆ ಕೆಲವರು ಜನರಿಗೆ ಶಿಕ್ಷಣದ ಮಾರ್ಗವನ್ನು ತೋರುವ ಮೂಲಕ ಕಾರಣರಾದರು. ನಾವಿವತ್ತು ಇಪ್ಪತ್ತೊಂದನೇಯ ಶತಮಾನದಲ್ಲಿದ್ದೇವೆ. ನಮ್ಮ ಕೈಯಲ್ಲಿ ವಿದ್ಯೆಯಿದೆ, ಬುದ್ಧಿಯಿದೆ,ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಅಷ್ಟಿದ್ದೂ ಕೂಡಾ ಜಾತಿ ಧರ್ಮ ಪಂಥಗಳ ಹೆಸರಿನಲ್ಲಿ ಬಡಿದಾಡಿಕೊಳ್ಳುತ್ತಿದ್ದೇವೆ. ಬೇಸರದ ಸಂಗತಿಯೆಂದರೆ ಇದಕ್ಕೆ ಕಾರಣರಾಗಿರುವವರು ವಿದ್ಯಾವಂತರೇ ಆಗಿದ್ದಾರೆ.

ಆ ವಿಷಯ ಆಚೆಗಿರಲಿ, ಯಾಕಂದ್ರೆ ಅದು ಎಂದೂ ಮುಗಿಯದ ಕಥೆ. ನಾವು ಚಿಂತಿತರಾಗಬೇಕಿರುವುದು ಅದಕ್ಕಲ್ಲ, ಬೆಂಕಿಗೆ ತುಪ್ಪ ಸುರಿಯುತ್ತಿರುವ ರಾಜಕಾರಣಿಗಳ ಬಗ್ಗೆ. ಬಹುಶಃ, ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಹೊಣೆಗಾರಿಕೆ ನಮ್ಮ ಶಿಕ್ಷಕರಿಗಿದ್ದಷ್ಟೇ, ಧಾರ್ಮಿಕ ಗುರುಗಳಿಗಿದ್ದಷ್ಟೇ, ರಾಜಕೀಯ ನಾಯಕರುಗಳಿಗೂ ಇರುತ್ತದೆ. ರಾಜಕಾರಣಿ ಮನಸ್ಸು ಮಾಡಿದರೆ ಎಂತಹಾ ಕ್ರಾಂತಿಯನ್ನಾದರೂ  ಮಾಡಬಹುದು. ರಾಮ್ ಮನೋಹರ್ ಲೋಹಿಯಾ, ದೀನ್ ದಯಾಳ್ ಉಪಾಧ್ಯಾಯ, ದೇವರಾಜ್ ಅರಸು ಮುಂತಾದವರೇ ಇದಕ್ಕೆ ಜ್ವಲಂತ ನಿದರ್ಶನ. ಹಿಂದಿನ ಬಹುತೇಕ ರಾಜಕಾರಣಿಗಳೆಲ್ಲಾ ಒಂದು ತತ್ವಾದರ್ಶವನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತಿದ್ದರು. ಇವತ್ತಿನ ರಾಜಕಾರಣಿಗಳನ್ನು ನೋಡಿ, ತತ್ವವೂ ಇಲ್ಲ, ಆದರ್ಶವೂ ಇಲ್ಲ, ಮಣ್ಣಂಗಟ್ಟಿಯೂ ಇಲ್ಲ, ಅಸಹ್ಯ ಎನಿಸುತ್ತದೆ.

ರೋಹಿತ್ ವೇಮುಲಾ ಎಂಬ ಹೈದರಾಬಾದ್ ವಿ.ವಿಯ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ. ಸಾಯುವುದಕ್ಕೂ ಮುನ್ನ ತನ್ನ ಜೀವನದ ಆಸೆಯೇನಿತ್ತು, ತನ್ನ ಸ್ನೇಹಿತರ ಬಗ್ಗೆ ತುಂಬಾನೇ ಭಾವುಕನಾಗಿ ಬರೆದಿದ್ದನೇ ಹೊರತು ತನ್ನ ಸಾವಿಗೆ ಕಾರಣ ಯಾರು ಅಂತ ಎಲ್ಲಿಯೂ ಬರೆದಿರಲಿಲ್ಲ. ಕಾರಣ ಏನೇ ಇರಬಹುದು, ಆತ ಮಾತ್ರ ಸೈಲೆಂಟಾಗಿ ಸಾವಿಗೆ ಶರಣಾದ.

ಬರೀ ಅಷ್ಟಾಗಿದಿದ್ದರೆ “ದಿನಾ ಸಾಯೋರಿಗೆ ಅಳೋದ್ಯಾರು” ಅಂತ ಸುಮ್ಮನಾಗಬಹುದಿತ್ತು. ವಾಸ್ತವದಲ್ಲಿ ಆತ ದಲಿತನಾಗಿರದಿದ್ದರೂ, ನಮ್ಮ ಮಾದಧ್ಯಮಗಳ,ರಾಜಕಾರಣಿಗಳ ಕಣ್ಣಿಗೆ  ಆತ ದಲಿತನಾಗಿದ್ದ.  ಈ ದಲಿತ ಎನ್ನುವುದು ನಮ್ಮ ದೇಶದ  ಬಹುತೇಕ ರಾಜಕಾರಣಿಗಳು  ತಮ್ಮ ಸ್ವಾರ್ಥಕ್ಕಾಗಿ ಬೇಕು ಬೇಕಾದಾಗ ಬಳಸಿಕೊಂಡ ಲೇಬಲ್. ಈ ಲೇಬಲನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವ ಅದೆಷ್ಟೋ ರಾಜಕಾರಣಿಗಳು ನಮ್ಮ ದೇಶದಲ್ಲಿದ್ದಾರೆ. ಅಂತಾದ್ದರಲ್ಲಿ ತಾನೇ ತಾನಾಗಿ ಬಲೆಗೆ ಬಿದ್ದಿರುವ ಮೀನನ್ನು ಬಿಡುವುದುಂಟೇ? ಚಿನ್ನದಂತಹಾ ಅವಕಾಶವನ್ನು ಬಿಡುವುದುಂಟೇ?  ರೋಹಿತ್ ಸಾವಿನ ಬಳಿಕ ದೇಶದ ಮೂಲೆ ಮೂಲೆಗಳಿದಂದ ರಾಜಕಾರಣಿಗಳ ದಂಡೇ ಹೈದರಾಬಾದಿನತ್ತ ದಂಡೆತ್ತಿ ಬಂತು.

ದಲಿತರು ಅಥವಾ ಮುಸ್ಲಿಮರು, ಈ ಇಬ್ಬರಲ್ಲಿ ಯಾರಿಗೆ ತೊಂದರೆಯಾದರೂ ರಾಹುಲ್ ಗಾಂಧಿ ಉಸೈನ್ ಬೋಲ್ಟ್ ವೇಗದಲ್ಲಿ ಓಡಿ ಬರುತ್ತಾರೆ. . ಉತ್ತರ ಪ್ರದೇಶದಲ್ಲಿ ಮತ್ತು ಹರಿಯಾಣಾದಲ್ಲಿ ದಲಿತರಿಗೆ ತೊಂದರೆಗಳಾದಾಗ ಓಡೋಡಿ ಹೋಗಿದ್ದ ರಾಹುಲ್ ಅಲ್ಲಿಯ ಘಟನೆಯನ್ನು ಮೋದಿಯತ್ತ ಬೊಟ್ಟು ಮಾಡಿ ತೋರಿಸಲು ಯಶಸ್ವಿಯಾಗಿ ಬಳಸಿಕೊಂಡಿದ್ದರು,  ರಾಹುಲ್ ಗಾಂಧಿ ಮೊನ್ನೆ ಹೈದರಾಬಾದಿಗೂ ಬಂದಿದ್ದರು. ನೊಂದವರಿಗೆ ಸಾಂತ್ವಾನ ಹೇಳುವ ಕಪಟ ನಾಟಕದ ಬಳಿಕ ಅವರು ಮಾಡಿದ್ದು ಅದೇ ಮೋದಿ ವಿರುದ್ಧ ಆರೋಪ. “ದೇಶದಲ್ಲಿ ಎನ್.ಡಿ.ಎ ಸರಕಾರ ಬಂದ ಬಳಿಕ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ” ಎನ್ನುವ ತಮ್ಮ ಬತ್ತಳಿಕೆಯಲ್ಲಿದ್ದ ಅದೇ ಹಳೇ ಬಾಣವನ್ನು ಮತ್ತೆ ಹೂಡಿದರು. ಒಬ್ಬ ಯುವಕನ ಆತ್ಮಹತ್ಯೆಯ ಬಗ್ಗೆ ಅಷ್ಟೆಲ್ಲಾ ಮಾತನಾಡಿದ ರಾಹುಲ್,ಕರ್ನಾಟಕದಲ್ಲಿ ಆರು ನೂರಕ್ಕೂ ಮಿಕ್ಕಿ ಜನ ರೈತರು ಆತ್ಮಹತ್ಯೆ ಮಾಡಿಕೊಂಡು ಮೂರು ತಿಂಗಳುಗಳಾದರೂ ಅಡ್ರೆಸ್’ಗೆ ಇರಲಿಲ್ಲ. ಪಠಾಣ್ ಕೋಟ್ ದಾಳಿಯಲ್ಲಿ ಮೃತರಾದ ಯೋಧರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಮನಸ್ಸು ಮಾಡಲಿಲ್ಲ. ಸಂತೋಷ್ ಮೆಹದೀಕ್ ಪ್ರಾಣಾರ್ಪಣೆ ಮಾಡಿದಾಗ ಕಣ್ಣಿರು ಸುರಿಸಲಿಲ್ಲ. ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಸೊಲ್ಲೆತ್ತಲಿಲ್ಲ.

ಮತ್ತೊಬ್ಬರು ಅವತಾರ ಪುರುಷ ಶ್ರೀ ಶ್ರೀ ಅರವಿಂದ ಕೇಜ್ರಿವಾಲ್. ಒಂದು ಕಾಲದಲ್ಲಿ “ಯಾವ ಕಾರಣಕ್ಕೂ ನಾನು ರಾಜಕಾರಣವನ್ನು ಸೇರುವುದಿಲ್ಲ” ಎಂದಿದ್ದ ಈ ರಾಜಕಾರಣಿಯ ಮುಂದೆ ಅರ್ಧ ಶತಕಗಳಿಂದಲೂ ರಾಜಕಾರಣ ಮಾಡುತ್ತಿರುವ ದೇವೇಗೌಡರೂ ನಾಚಬೇಕು, ಲಾಲೂ ಪ್ರಸಾದ್ ಯಾದವ್ ದಂಗಾಗಿ ಹೋಗಬೇಕು. ಆ ಮಟ್ಟಕ್ಕೆ ರಾಜಕೀಯದ ಪಟ್ಟುಗಳಲ್ಲಿ ಪಳಗಿದ್ದಾರೆ ಕೇಜ್ರಿವಾಲ್. ಇವರೂ ಅಷ್ಟೆ, ದಾದ್ರಿಯಲ್ಲೇನೋ ಆಗಿದೆ ಎಂದು ಮೀಡಿಯಾದಲ್ಲಿ ಬಂದ ಕೂಡಲೇ ಅಲ್ಲಿಗೆ ದಡಬಡನೆ ದೌಡಾಯಿಸಿದ್ದರು. ಹರಿಯಾಣಾದ ಘಟನೆ ಕುರಿತಾಗಿಯೂ ಮೋದಿಯನ್ನು ಟೀಕಿಸಿದ್ದರು. ಹೈದರಾಬಾದಿನ ಲೇಟೆಸ್ಟ್ ಘಟನೆಯ ಕುರಿತು “ಇದು ಆತ್ಮಹತ್ಯೆಯಲ್ಲ ಕೊಲೆ, ಪ್ರಜಾಪ್ರಭುತ್ವದ ಕೊಲೆ, ಮೋದಿ ತಕ್ಷಣಾ ಸಚಿವರನ್ನು ವಜಾ ಮಾಡಬೇಕು” ಎಂದು ತಡ ಮಾಡದೇ ಟ್ವೀಟ್ ಮಾಡಿದ್ದರು. ಆದರೆ ಈ ಯು ಟರ್ನ್ ಪಿತಾಮಹನ ಟ್ವಿಟ್ಟರ್ ಖಾತೆಯಿಂದ ಪಠಾಣ್ ಕೋಟ್ ದಾಳಿಯಾದಾಗ, ಮಾಲ್ಡಾ ಗಲಭೆ ಸಂಭವಿಸಿದಾಗ ಒಂದೇ ಒಂದು ಟ್ವೀಟ್ ಆಚೆಗೆ ಬಂದಿರಲಿಲ್ಲ. ಈ ಬಗ್ಗೆ ಕೇಳಿದಾಗ, “ನಾನು ಡೆಲ್ಲಿಯವ, ಡೆಲ್ಲಿಯ ಬಗ್ಗೆ ಮಾತ್ರ ಮಾತನಾಡುತ್ತೇನೆ” ಎಂದು ಹೇಳಿದ್ದವರು ಯಾಕೆ ಇವತ್ತು ಡೆಲ್ಲಿಯಿಂದ ಹೊರಗಿರುವ ಹೈದರಾಬಾದಿನ ಬಗ್ಗೆ ಮಾತನಾಡುತ್ತಿದ್ದಾರೆ? ಎಲ್ಲಕ್ಕಿಂತ ಮುಖ್ಯವಾಗಿ ಈ ಮನುಷ್ಯ ಪಠಾಣ್ ಕೋಟ್ ದಾಳಿಯಾದಾಗ ಹಾಯಾಗಿ ಕೋಲ್ಕೋತ್ತಾಪಾನ್ ಮೆಲ್ಲುತ್ತಿದ್ದರು ಮತ್ತು ಅದನ್ನು ಟ್ವಿಟ್ಟರಿನಲ್ಲಿ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಎಲ್ಲ ಬಿಡಿ, ಹೋದ ವರ್ಷ ಆಮ್ ಆದ್ಮಿ ಪಕ್ಷದ ಪ್ರತಿಭಟನೆ ನಡೆಯುತ್ತಿರುವಾಗ ಇದೇ ಕೇಜಿವಾಲರ ಸಮ್ಮುಖದಲೇ ರೈತನೊಬ್ಬ ನೇಣು ಬಿಗಿದುಕೊಂಡಿದ್ದು ನಿಮಗೆಲ್ಲಾ ನೆನಪಿರಬಹುದು, ಆವಾಗ ಈ ಕೇಜ್ರಿವಾಲಗೆ“ಪ್ರಜಾಪ್ರಭುತ್ವದ ಕೊಲೆ” ಅಂತನ್ನಿಸಿರಲಿಲ್ಲವೇ??

ಮತ್ತೊಬ್ಬರು, ಸಾಮಾಜಿಕ ನ್ಯಾಯದ ಹರಿಕಾರ ಸನ್ಮಾನ್ಯ ಸಿದ್ಧರಾಮಯ್ಯನವರು. ರೋಹಿತ್ ಬರೆದಿರುವ ಪತ್ರವನ್ನು ನೋಡಿದರೆ ಇದನ್ನು ಸಾಮಾಜಿಕ ನ್ಯಾಯದ ಕಗ್ಗೊಲೆಯೆಂದೇ ಹೇಳಬೇಕಾಗುತ್ತದೆ ಎಂದು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.  ತಮ್ಮ ಬಟ್ಟಲಿನಲ್ಲಿಯೇ ನೊಣ ಬಿದ್ದಿದ್ದರೂ ಮತ್ತೊಬ್ಬನ ಬಟ್ಟಲಿನಲ್ಲಿಯೂ ನೊಣ ಬಿದ್ದಿದೆ ಎಂದು ಸಂಭ್ರಮಿಸುವ ನೇತಾರನೆಂದರೆ ಅದು ಇವರೇ ಇರಬೇಕು. ನಮ್ಮ ರಾಜ್ಯದಲ್ಲೇ ಅಷ್ಟೆಲ್ಲಾ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಾಗ ಇವರಿಗೆ ಅದು ಸಾಮಾಜಿಕ ನ್ಯಾಯದ ಕಗ್ಗೊಲೆ ಅನಿಸಿರಲಿಲ್ಲ. ಡಿ.ಕೆ ರವಿಯವರು ಸತ್ತಾಗ ಅದು ಸಾಮಾಜಿಕ ನ್ಯಾಯದ ಕಗ್ಗೊಲೆ ಅಂತ ಅನಿಸಿರಲಿಲ್ಲ. ಆ ಯಾವ ಸಂಧರ್ಭಗಳಲ್ಲೂ ಇವರ ಟ್ವಿಟ್ಟರಿನಿಂದ ಒಂದು ಸ್ಟೇಟಸ್ಸೂ ಆಚೆ ಬರಲಿಲ್ಲ.

ಮತ್ತಿಬ್ಬರು ಮಹಿಳಾಮಣಿಗಳು.  ಒಬ್ಬರು ಮಾಯಾವತಿ, ಮತ್ತೊಬ್ಬರು ಮಮತಾ ಬ್ಯಾನರ್ಜಿ. ಮುಸ್ಲಿಮರನ್ನು, ದಲಿತರನ್ನು ಓಲೈಸುವುದರಲ್ಲಿ ನಾ ಮುಂದು ತಾ ಮುಂದು ಎಂಬಂತೆ ಸ್ಪರ್ಧೆಗಿಳಿದವರು. ಈ ದಲಿತ ದೌರ್ಜನ್ಯ, ಮೇಲ್ಜಾತಿ-ಕೀಳುಜಾತಿ ಶೋಷಣೆ, ಅಸಾಂವಿಧಾನಿಕ ಆಚರಣೆಗಳೆಲ್ಲಾ ಉತ್ತರ ಪ್ರದೇಶದಲ್ಲಿದ್ದಷ್ಟು ಬೇರೆಲ್ಲೂ ಇಲ್ಲಾ, ಅದಕ್ಕೆಲ್ಲಾ ಉತ್ತರಪ್ರದೇಶ ತವರು ಮನೆಯಿದ್ದಂತೆ. ದಾದ್ರಿಯಂತಹ ಹತ್ತಾರು ಘಟನೆಗಳು ಅಲ್ಲಿ ನಡೆದರೂ ಅದು ಹೊರಜಗತ್ತಿಗೆ ಗೊತ್ತಾಗುವುದಿಲ್ಲ. ಅದನ್ನು ನಿವಾರಿಸಲು ಸಾಧ್ಯವಾಗದ ಮಾಯಾವತಿ ಹೈದರಾಬಾದಿಗೆ ಪಕ್ಷದ ಪ್ರತಿನಿಧಿಗಳನ್ನು ಆಂತರಿಕ ತನಿಖೆಗಾಗಿ ಕಳುಹಿಸಿದ್ದಾರೆ. ಮಾಲ್ಡಾದಲ್ಲಿ ಹಿಂದೂಗಳ ಮೇಲೆ ಬಾಂಬೆಸೆದು ದೌರ್ಜನ್ಯವೆಸಗಿದ ಘಟನೆ ಇನ್ನೂ ಹಸಿ ಹಸಿಯಾಗಿಯೇ ಇದೆ. ಅದರ ಬಗ್ಗೆ ತನಿಖೆ ನಡೆಸಿ, ಗಲಭೆಕೋರರನ್ನು ಒಳಹಾಕದ ಮಮತಾ ಬ್ಯಾನರ್ಜಿ ಕೂಡಾ ಸರಕಾರದ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿದ್ದಾರೆ.   ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಟಾಗೋರರಂತಹ ಮಹನೀಯರೆಲ್ಲಾ ಜನ್ಮವೆತ್ತಿದ ಬಂಗಾಳ ಇವತ್ತು ಯಾವ ಮಟ್ಟಕ್ಕಿಳಿದಿದೆಯೆಂದರೆ ಅದರ ತನಿಖೆಗಾಗಿ ಇಡೀಯ ಮಮತಾ ಸರಕಾರವೇ ಹೋಗಬೇಕಾದೀತು!

ಇವರೆಲ್ಲರ ತೋರಿಕೆಯ ಕಾರಣವೊಂದೇ.-ದಲಿತ ದೌರ್ಜನ್ಯ. ದಲಿತರಿಗೆ ತೊಂದರೆಯಾದರೆ ಇವರುಗಳೆಲ್ಲಾ ಎಲ್ಲೇ ಇದ್ದರೂ ಕುಕ್ಕಿ ಕುಕ್ಕಿ ತಿನ್ನಲು ರಣಹದ್ದುಗಳಂತೆ ಹಾರಿಬರುತ್ತಾರೆ.  ದಲಿತ ಎನ್ನುವ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅದರಲ್ಲವರಿಗೆ ಯಾವ ನಾಚಿಗೆಯೂ ಇಲ್ಲ, ದಲಿತರ ಮೇಲಿನ  ಕಾಳಜಿ ಹೇಗೂ  ಇಲ್ಲ, ದಲಿತರ ಬಗೆಗೆ ಇಷ್ಟೆಲ್ಲಾ ಮಾತನಾಡುವ ರಾಹುಲ್ ಗಾಂಧಿ, ತಮ್ಮ ಕಾಂಗ್ರೆಸ್ಸ್ ಪಕ್ಷ ಅರುವತ್ತು ವರ್ಷಗಳಲ್ಲಿ ದಲಿತರಿಗೆ ಮಾಡಿದ್ದೇನು? ಅರುವತ್ತು ವರ್ಷಗಳ ಕಾಲ ಆಳ್ವಿಕೆ ಮಾಡಿಯೂ ದಲಿತರನ್ನು ಸಮಾಜದ ಮೇಲ್’ಸ್ತರಕ್ಕೆ ತರಲು ಕಾಂಗ್ರೆಸ್ಸ್ಗೆ ಯಾಕೆ ಸಾಧ್ಯ ಆಗಲಿಲ್ಲ?ಎನ್ನುವುದಕ್ಕೆ ಉತ್ತರಿಸುತ್ತಾರಾ? ದಲಿತರ ಹೆಸರು ಹೇಳಿಕೊಂಡೇ ರಾಜಕೀಯದಲ್ಲಿ ಮೇಲೆ ಬಂದು ಉತ್ತರ ಪ್ರದೇಶದಲ್ಲಿ ಸಾವಿರಾರು ಆನೆಗಳನ್ನು ಸ್ಥಾಪಿಸಿಕೊಂಡ ಮಾಯಾವತಿದಲಿತರಿಗಾಗಿ ನಾನು ಹಾಗೆ ಮಾಡಿದೆ ಹೀಗೆ ಮಾಡಿದೆ ಎಂದು ಹೇಳುತ್ತಾ  ದಲಿತ ಮಕ್ಕಳಿಗೆ ನೀಡುವ ಆಹಾರದಲ್ಲಿ ನಿಯತ್ತಾಗಿ ಕಮಿಷನ್ ಹೊಡೆದ ಆಂಜನೇಯರಂತಹ ರಾಜಕಾರಣಿಗಳು ಮಾಡಿದ್ದು ಯಾರ ಉದ್ಧಾರ ಅಂತ ನಮಗೆ ಚೆನ್ನಾಗಿ ಗೊತ್ತಿದೆ ಬಿಡಿ. 

ಮತ್ತೆ ಕೆಲವರು, ನಾವು ಪ್ರಗತಿಪರರು ಎನ್ನುತ್ತಾ ದೇಶದ್ರೋಹಿಗಳ ಪರ ನಿಲ್ಲುವವರಿದ್ದಾರೆ. ಇವರೂ ಸಹ ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ತೆವಲು ತೀರಿಸಿಕೊಳ್ಳಲು, ಪ್ರಚಾರ ಗಿಟ್ಟಿಸಿಕೊಳ್ಳಲು ಯಾವುದೇ ಅವಕಾಶ ಸಿಕ್ಕಿದರೂ ಸಾಕು, ತಕ್ಷಣ ತೂರಿಕೊಳ್ಳುತ್ತಾರೆ. ಟೌನ್ ಹಾಲ್ ಮುಂದೆ ಕುಳಿತು ಸುಪಾರಿ ಪ್ರತಿಭಟನಾಕಾರರಾಗುತ್ತಾರೆ.

ಇನ್ನೊಂದು… ದೇಶದಲ್ಲಿ ದಲಿತರಿಗೆ, ಮುಸ್ಲಿಮರಿಗೆ ಏನಾದರೂ ಆದ್ರೆ ತಮ್ಮ ಮನೆಗೇ ಬೆಂಕಿ ಬಿದ್ದಂತಾಡುವ ಇವರುಗಳ್ಯಾರೂ ಪಠಾಣ್’ಕೋಟ್ ದಾಳಿಯಾದಾಗ,ಕಾಶ್ಮೀರದಲ್ಲಿ ನಿತ್ಯವೂ ಪ್ರಾಣ ಬಿಡುವ ಸೈನಿಕರ ಕಡೆಗೆ ತಿರುಗಿಯೂ ನೀಡುವುದಿಲ್ಲ. ರೋಹಿತ್ ತಾಯಿಯ ಕೈ ಹಿಡಿದು ಸಾಂತ್ವಾನ ಹೇಳುವ ರಾಹುಲ್ ಗಾಂಧಿಗೆ ಹುತಾತ್ಮ ಯೋಧ ನಿರಂಜನ್ ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಬೇಕೆಂದು ಅನಿಸುವುದಿಲ್ಲ. ಅವರ ಪರವಾಗಿ ಫೇಸ್ಬುಕ್’ನಲ್ಲಿ DP ಬದಲಾಯಿಸಬೇಕೆಂದು ಯಾವ ಬುದ್ಧಿ ಜೀವಿಗೂ ಅನಿಸುವುದಿಲ್ಲ. ಯಾಕೆ, ನಿರಂಜನ್ ತಾಯಿಗೆ, ಪತ್ನಿಗೆ, ಏನೂ ಅರಿಯದ ಆ ಪುಟ್ಟ ಹುಡುಗಿಗೆ ಸಂವೇಧನೆಗಳೇ ಇರುವುದಿಲ್ವಾ?ಅವರುಗಳೂ ಮನುಷ್ಯರಲ್ವಾ? ಅಲ್ಲಾ  ಹೊಲಸು ಬುದ್ಧಿಯ  ಈ ರಾಜಕಾರಣಿಗಳು ಮನುಷ್ಯರಲ್ವಾ?

ಒಂದಂತೂ ಖರೆ. ಮೋದಿ ಸ್ವಂತವಾಗಿ ಸ್ಥಾನಗಳನ್ನು ಗೆದ್ದು ಬಂದಿದ್ದಾರೆ.  ನಂತರ ದೇಶ ವಿದೇಶಗಳಲ್ಲೂ ಮನ್ನಣೆಯನ್ನು ಪಡೆದುಕೊಂಡು ತನ್ನ ಪ್ರಭಾವವನ್ನು ಇನ್ನಷ್ಟು ವೃದ್ಧಿಸಿಕೊಂಡಿದ್ದಾರೆ. ಇವನನ್ನು ಹೀಗೇ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎನ್ನುವ ಸತ್ಯ ಎಲ್ಲಾ ವಿರೋಧ ಪಕ್ಷಗಳ ಅರಿವಿಗೆ ಬಂದಿದೆ. ಆದ್ದರಿಂದ ಒಬ್ಬ ಮೋದಿಯನ್ನು ಹಣಿಯಲು ಎಲ್ಲಾ ದುಷ್ಟರು ಒಂದಾಗುತ್ತಿದ್ದಾರೆ. ಮೋದಿಯನ್ನು ತೆಗಳಲು ಯಾವ ಬಿಲದಿಂದ ಅವಕಾಶ ಸಿಕ್ಕರೂ ಮಿಸ್ಸ್ ಮಾಡದೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇವರೆಲ್ಲ ದಲಿತರ ಚಿತೆಯ ಮುಂದೆ ನಂಗಾನಾಚ್ ಮಾಡುತ್ತಿದ್ದಾರೆಯೇ ಹೊರತು ದಲಿತರ ಮೇಲೆ ಒಂದಿಂಚೂ ಕಾಳಜಿಯಿಲ್ಲ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!