ಅಂಕಣ

ಹೊಸ ವರ್ಷಕ್ಕೊಂದು ಭೀಷ್ಮ ಪ್ರತಿಜ್ಞೆ

ಹೊಸವರ್ಷ ಬಂದರೆ ಏನು ಮಾಡಬೇಕು? “ಬಂದರೆ ಮಾಡೋದೇನು? ಅದರ ಪಾಡಿಗೆ ಬರುತ್ತದೆ, ಅದರ ಪಾಡಿಗೆ ಹೋಗುತ್ತದೆ” ಎಂದು ಹೇಳುವ ನಿರಾಶಾವಾದಿಗಳು ಎಲ್ಲಾ ಕಾಲಕ್ಕೂ ಇರುತ್ತಾರೆ ಅನ್ನಿ. ಆದರೆ, ಹೊಸವರ್ಷಕ್ಕೆಂದು ಒಂದು ತಿಂಗಳ ಮೊದಲೇ ಯೋಜನೆ ಹಾಕಿಕೊಂಡು ತಯಾರಿ ನಡೆಸುವವರೂ ಇರುತ್ತಾರೆ. ಡಿಸೆಂಬರಿನ ದಿನಗಳನ್ನು ಒಂದೊಂದಾಗಿ ನಿಷ್ಕರುಣೆಯಿಂದ ಕತ್ತರಿಸಿ ಹಾಕುತ್ತ ಓಡಿಬರುವ ಕಾಲರಾಯನ ಬೀಸಾಟವನ್ನು ನೋಡಿದ್ದೇ ತಡ, ಹೊಸ ಕ್ಯಾಲೆಂಡರ್ ಕೊಳ್ಳಬೇಕು; ಹೊಸ ಡೈರಿ ತೆರೆಯಬೇಕು; ಎಲ್ಲವನ್ನೂ ಹೊಸದಾಗಿ ಮಾಡಬೇಕು ಎಂಬ ಒತ್ತಡ ಅದು ಹೇಗೋ ಹುಟ್ಟಿಬಿಡುತ್ತದೆ. ಹೊಸವರ್ಷ ಎನ್ನುವುದೇ ಹಲವು ಹೊಸ ಆಸೆ, ಭರವಸೆಗಳನ್ನು ಹೊತ್ತು ತರುವ ಸಮಯ. “ಇಷ್ಟು ವರ್ಷ ಜೋಡಿ ಕೊಡದೆ ಸತಾಯಿಸಿದೆ, ದೇವರೇ, ಈ ವರ್ಷವಾದರೂ ಒಂದೊಳ್ಳೆ ಹುಡುಗಿ ನನ್ನ ಬಾಳಿಗೆ ಬರುವಂತೆ ಮಾಡಬಾರದೆ?” ಎಂದು ದೊಡ್ಡಗಣಪತಿ ದೇವಸ್ಥಾನದಲ್ಲಿ ಹಣ್ಣುಕಾಯಿ ಒಡೆಯುವವರೂ ಇರುತ್ತಾರೆನ್ನಿ.

ಹೊಸವರ್ಷಕ್ಕೆ ಯಾರೇನು ಮಾಡುತ್ತಾರೋ ಬಿಡುತ್ತಾರೋ, ನಮ್ಮ ಬೀದಿಯ ಸೀತತ್ತೆ ಹೊಸತಾಗಿ ಒಂದು ಭೀಷ್ಮಪ್ರತಿಜ್ಞೆಯನ್ನಂತೂ ಮಾಡುತ್ತಾರೆ. ಅವರ ಪ್ರತಿಜ್ಞಾವಿಧಿಗೆ ಈ ವರ್ಷ ಐವತ್ತರ ಸಂಭ್ರಮವಂತೆ. ಹಾಗಾಗಿ, ಏನೇ ಮಾಡಿದರೂ ಅದನ್ನು ಐವತ್ತರಲ್ಲೇ ಮಾಡಬೇಕೆಂದು ಸೀತತ್ತೆ ನಿರ್ಧರಿಸಿದ್ದಾರಂತೆ. “ಈ ವರ್ಷ ನಿಮ್ಮ ಪ್ರತಿಜ್ಞೆ ಏನತ್ತೆ?” ಎಂದು ಕೇಳಿದಾಗ ಅವರು ಹೇಳಿದ್ದು:

 1. ಇಷ್ಟುವರ್ಷ ಬರೇ ಮೂವತ್ತರಲ್ಲೇ ಕಾರು ಚಲಾಯಿಸಿ ಬೋರಾಗಿದೆ. ಈ ವರ್ಷ ಗೂಳಿಯೆ ಬರಲಿ, ಪೋಲೀಸೇ ಸಿಗಲಿ; ನಾನು ಹೋಗೋದು ಐವತ್ತರಲ್ಲೇ.
 2. ಕನ್ನಡದಲ್ಲಿ ಪ್ರತಿದಿನ ಎಷ್ಟೊಂದು ಒಳ್ಳೊಳ್ಳೆಯ ಪುಸ್ತಕಗಳು ಪ್ರಿಂಟಾಗಿ ಬರ್ತಾ ಇವೆ. ಇವುಗಳಲ್ಲಿ ಕನಿಷ್ಠ ಐವತ್ತಾದರೂ ಓದಬೇಕು.
 3. ದಿನಕ್ಕೆ ಹತ್ತು ಸೀರಿಯಲ್ ತೋರಿಸಿದರೆ ಯಾವುದು ನೋಡೋದು, ಯಾವುದು ಬಿಡೋದು ಅಂತ ಕನ್‍ಫ್ಯೂಸ್ ಆಗುತ್ತೆ. ನಿನ್ನೆ ಅತ್ತೆಯಾಗಿ ಬಂದವಳು ಇವತ್ತು ಮೊಮ್ಮಗಳಾದದ್ದು ಹೇಗೆ ಅಂತ ಯೋಚನೆ ಬಂದು ಕೊನೆಗೆ “ಓ, ಅದು ಬೇರೆ ಸೀರಿಯಲ್ಲು, ಇದು ಬೇರೆ” ಎಂದು ನೆನಪಾಗುವ ಹೊತ್ತಿಗೆ ಸೀರಿಯಲ್ಲೇ ಮುಗಿದುಹೋಗಿರುತ್ತೆ! ಹಾಗಾಗಿ, ಈ ವರ್ಷ ಯಾವುದಾದರೂ ಒಂದು ಸೀರಿಯಲ್’ನ್ನು ಫಿಕ್ಸ್ ಮಾಡಿಕೊಂಡು ಕನಿಷ್ಠ ಐವತ್ತು ಎಪಿಸೋಡ್ ನೋಡಬೇಕು.
 4. ಪ್ರತಿದಿನ ಐವತ್ತು ರುಪಾಯಿ ಉಳಿಸಿ (ಅಥವಾ ಮನೆಯಲ್ಲಿ ನೇತುಬೀಳುವ ಪ್ಯಾಂಟಿನ ಜೇಬಿಂದ ಎಗರಿಸಿ) ಪಿಗ್ಮಿಯಲ್ಲಿ ಹಾಕ್ತಾ ಬರಬೇಕು.

ಕೇಳಲಿಕ್ಕೇನೋ ಚೆನ್ನಾಗಿದೆ. ಆದರೆ ಇದರಲ್ಲಿ ಎಷ್ಟನ್ನು ಸೀತತ್ತೆ ನಿಷ್ಠೆಯಿಂದ, ಸಂಕಷ್ಠಿಯ ಉಪವಾಸದಂತೆ ನಡೆಸಿಕೊಂಡು ಹೋಗುತ್ತಾರೆ ಎನ್ನುವುದು ಸ್ವತಃ ಅವರಿಗೇ ಗೊತ್ತಿಲ್ಲದ ವಿಸ್ಮಯ. ಹೊಸವರ್ಷ ಬಂದೊಡನೆ ಪ್ರತಿಜ್ಞೆಗಳನ್ನು ಮಾಡಬೇಕು ಎನ್ನುವ ಸಂಪ್ರದಾಯವನ್ನು ಅದ್ಯಾವ ಪುಣ್ಯಾತ್ಮ ಶುರುಮಾಡಿದನೋ ಗೊತ್ತಿಲ್ಲ. ಆದರೆ, ಆ ಯೋಚನೆಯಂತೂ ತುಂಬಾ ಚೆನ್ನಾಗಿದೆ ಎಂದೇ ಅನ್ನಿಸುತ್ತದೆ. ಬೇರೆಯವರು ಮಾಡಿದ ಕಠೋರ ಪ್ರತಿಜ್ಞೆಗಳ ಸಂಗತಿ ಕಿವಿಗೆ ಬಿದ್ದಾಗ ನಾವೂ ಅಂತಹ ಸಾಹಸಕ್ಕೆ ಕೈಹಾಕಬೇಕೆಂದು ಅನ್ನಿಸಿಯೇ ಅನಿಸುತ್ತದೆ. ನೀನು ಪ್ರತಿಜ್ಞೆ ಮಾಡು, ಮಿಕ್ಕಿದ್ದನ್ನು ನನಗೆ ಬಿಡು. ಇಡೀ ವರ್ಷ ಆ ಪ್ರತಿಜ್ಞೆ ಮುರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಮನಸ್ಸು ಮಸ್ಲಿನ್ ಪರದೆಯನ್ನು ಇಳಿಸಿ ತಲೆ ನೇವರಿಸುತ್ತದೆ. ನಾನೂ ಒಂದು ಪ್ರತಿಜ್ಞೆ ಮಾಡ್ತೇನೆ ಎಂದು ಕೈಮುಂದೆ ಮಾಡಿಬಿಡುತ್ತೇವೆ! ನಮ್ಮ ಎದುರುಮನೆಯ ಅನಿತಾ ಈ ವರ್ಷ ಒಂದು ವಿಶೇಷ ಪ್ರತಿಜ್ಞೆ ಮಾಡಿದ್ದಾಳೆ. ಅವಳ ಮಾತಲ್ಲೇ ಹೇಳುವುದಾದರೆ, “ಇಷ್ಟು ವರ್ಷ ನಾನು ಇಂಟರ್ನೆಟ್ಟಿಂದ ಬೇಕಾದಷ್ಟು ವಿಷಯ-ಜ್ಞಾನ ಪಡೆದಿದ್ದೇನೆ. ಆದರೆ, ಅದಕ್ಕೆ ಮರಳಿ ಏನನ್ನಾದರೂ ಕೊಡಬೇಕು ಅಂತ ಅನಿಸಿರಲಿಲ್ಲ. ಕಳೆದ ತಿಂಗಳು ಡಾ. ಯು.ಬಿ.ಪವನಜ ಅವರ ವಿಕಿಪೀಡಿಯ ವರ್ಕ್‍ಶಾಪ್‍ನಲ್ಲಿ ಪಾಲ್ಗೊಂಡೆ. ಅಲ್ಲಿಂದೀಚೆಗೆ ಕನ್ನಡದ ವಿಕಿಪೀಡಿಯಕ್ಕೆ ನನ್ನಿಂದಾದ ಅಳಿಲುಸೇವೆ ಸಲ್ಲಿಸಬೇಕು ಅಂತ ಮನಸ್ಸು ಹೇಳುತ್ತಿದೆ. ಈ ವರ್ಷ, ಕನ್ನಡ ವಿಕಿಪೀಡಿಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಹೊಸ ಲೇಖನಗಳನ್ನು ಸೇರಿಸಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ. ಅಲ್ಲದೆ, ಈ ಕೆಲಸ ಮಾಡುವಾಗ ವಾಕ್ಯ ರಚನೆ ಹೇಗೆ ಮಾಡಬೇಕು ಅಂತ ತಿಳಿಯುತ್ತದೆ. ನಾವು ದಿನನಿತ್ಯ ಮಾಡುವ ತಪ್ಪುಗಳ ಪರಿಚಯವಾಗುತ್ತದೆ. ಎಷ್ಟು ವಿಷಯಗಳು ನಮಗೆ ಗೊತ್ತಿಲ್ಲ ಅನ್ನುವ ಜ್ಞಾನೋದಯವೂ ಆಗುತ್ತದೆ. ವಿಕಿಪೀಡಿಯದ ಲೇಖನ ಬರೆಯಲು ಹತ್ತು ಹಲವು ಮಾಹಿತಿಮೂಲಗಳನ್ನು ತೆರೆಯುತ್ತ ಹೋದಾಗ ಜ್ಞಾನಾರ್ಜನೆಯೂ ಆದ ಹಾಗಾಯಿತಲ್ಲವಾ?”. ಅವಳ ಪ್ರತಿಜ್ಞೆ ನೆರವೇರಲಿ, ಉಳಿದ ಶಪಥಗಳಂತೆ ಹಳ್ಳಹಿಡಿಯದಿರಲಿ ಎಂದು ಹಾರೈಸಿದೆ.

ವಾರದ ದಿನಗಳಲ್ಲಿ ತಪ್ಪದೆ ಆರುಗಂಟೆಗೆ ಕ್ಲಬ್ಬಿಗೆ ಬರುತ್ತಿದ್ದ ಶ್ಯಾಮ ಈಗ್ಗೆ ಮೂರು ದಿನದಿಂದ ಐದೂವರೆಗೆಲ್ಲ ಬಂದು ಎಲೆಗಳಿಗೆ ಕೈಹಚ್ಚುತ್ತಿದ್ದ. ಆದರೆ, ಮುಖದಲ್ಲಿ ಮಾತ್ರ ಆಡುವ ಉತ್ಸಾಹ ಕಾಣದೆ ಪ್ರೇತಕಳೆ ಇತ್ತು. ಯಾಕೆ ಹೀಗೆ ಎಂದು ಕೇಳಿದರೆ, “ಇದೇ ನನ್ನ ಕೊನೆಯ ಆಟ ಕಣ್ರೋ. ಮುಂದಿನವಾರದಿಂದ ಈ ಕ್ಲಬ್ಬಿನ ಕಡೆ ತಲೆಹಾಕಿಯೂ ಮಲಗಲ್ಲ ಅಂತ ಶಪಥ ಮಾಡಿದ್ದೇನೆ. ಹೊಸವರ್ಷದ ಮೊದಲದಿನದಿಂದ ಇಸ್ಪೀಟು, ಕ್ಲಬ್ಬು, ಸಿಗರೇಟು, ಕುಡಿತ ಎಲ್ಲಕ್ಕೂ ಫುಲ್‍ಸ್ಟಾಪ್” ಎಂದು ಫುಲ್ ಫೀಲಿಂಗ್‍’ನ್ನು ಆವಾಹಿಸಿಕೊಂಡು ಗೋಗರೆದ. ಪ್ರತಿವರ್ಷದ ಕೊನೆಯ ವಾರ ಅವನು ಹೀಗೆ ಗೋಳಾಡುವುದು ಮಾಮೂಲಿ ಎಂದು ಕ್ಲಬ್ಬಿನ ಹಳೇಸದಸ್ಯರು ಆಮೇಲೆ ಹೇಳಿದರು.

“ಈ ವರ್ಷ ದೇಹದ ತೂಕವನ್ನು ಕಮ್ಮಿಮಾಡಿಕೊಳ್ಳುತ್ತೇನೆ. ದಿನಾ ಐದು ಮೈಲಿ ಓಡುತ್ತೇನೆ. ಯಾವ ಉದಾಸೀನವನ್ನೂ ಮಾಡದೆ ಪ್ರತಿದಿನ ಐದು ಗಂಟೆಗೆ ಏಳುತ್ತೇನೆ. ದಿನಕ್ಕೆ ಅರ್ಧಗಂಟೆ ವ್ಯಾಯಾಮ ಮಾಡುತ್ತೇನೆ. ಜಿಮ್ ಸೇರಿ ವರ್ಷದ ಕೊನೆಗೆ ಸಿಕ್ಸ್’ಪ್ಯಾಕ್ ಬೆಳೆಸಿಕೊಳ್ಳುತ್ತೇನೆ.” ಎಂದು ನಮ್ಮ ಕಾಲೇಜು ಹುಡುಗರು ಪ್ರತಿಜ್ಞೆ ಮಾಡುವುದು ಮಾಮೂಲಿ.  ಆದರೆ, ದೇಹದ ತೂಕ ಹೆಚ್ಚಿಸಿಕೊಳ್ಳುತ್ತೇನೆ ಅಂತ ಪ್ರತಿಜ್ಞೆ ಹಾಕುವುದೂ ಇದೆಯಾ? “ಇದೆ, ಬೇಕಾದರೆ ನನ್ನೇ ನೋಡು” ಎಂದ ಕಡ್ಡಿ ಕೃಷ್ಣಪ್ಪ. ಮೂಲತಃ ಅವನ ಹೆಸರು ಕಬಡ್ಡಿ ಕೃಷ್ಣಪ್ಪ ಎಂದು. ಯಾವ ತಂಡವೇ ಇರಲಿ, ಎಷ್ಟೇ ಬಲಶಾಲಿ ಭೀಮರೇ ಇರಲಿ; ಅವರ ಅಭೇದ್ಯ ಕೋಟೆಗೆ ಲಗ್ಗೆ ಇಟ್ಟು “ಕಬಡ್ಡಿ ಕಬಡ್ಡಿ” ಎಂದು ಉಸಿರುಗಟ್ಟಿ ಹೇಳುತ್ತ ಎದುರಾಳಿಗಳನ್ನು ಮೈಲಿಗೆ ಮಾಡಿ ಯಾರ ಕೈಗೂ ಸಿಕ್ಕದೆ ಬಚಾವಾಗಿ ಬರುವುದರಲ್ಲಿ ಕೃಷ್ಣಪ್ಪ ಇಡೀ ಹಲಸೂರಿಗೇ ಚಾಂಪಿಯನ್. ಆದರೆ, ಎಷ್ಟು ರಾಗಿಮುದ್ದೆ ತಿಂದರೂ ಒಂದು ಪೌಂಡಿನಷ್ಟೂ ತೂಕ ಹೆಚ್ಚದ ವಿಚಿತ್ರ ದೇಹ ಪ್ರಕೃತಿಯಿಂದಾಗಿ ಅವನ ಅಡ್ಡಹೆಸರಲ್ಲಿ ಕಬಡ್ಡಿ ಹೋಗಿ ಕಡ್ಡಿ ಮಾತ್ರ ಉಳಿದುಕೊಂಡಿದೆ. “ಈ ವರ್ಷ ನನ್ನ ತೂಕಕ್ಕೆ ಕನಿಷ್ಠ ಹತ್ತು ಕೆಜಿ ಜಮೆ ಮಾಡುತ್ತೇನೆ” ಎಂದು ಕೃಷ್ಣಪ್ಪ ಪ್ರತಿಜ್ಞೆಗೈದಿದ್ದಾನೆ.

ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುತ್ತಿರುವ ಕಾರಣಕ್ಕೆ ಕಾವ್ಯಶ್ರೀಗೆ ಈ ವರ್ಷ ತುಂಬ ಮಹತ್ವದ್ದು. ಅದಕ್ಕಾಗಿ ಅವಳೊಂದು ದೊಡ್ಡ ಪ್ರತಿಜ್ಞಾಪಟ್ಟಿಯನ್ನೂ ಬರೆದಿಟ್ಟುಕೊಂಡಿದ್ದಾಳೆ. ಅದರಲ್ಲಿ ಅಲ್ಲಿಲ್ಲಿ ಹೆಕ್ಕಿದ ನಾಲ್ಕೈದನ್ನು ಮಾತ್ರ ನಿಮ್ಮೆದುರು ಇಡುವುದಾದರೆ:

 1. ಈ ವರ್ಷ ನೌಕರಿಗೆ ಸೇರುತ್ತಿದ್ದೇನಾದ್ದರಿಂದ, ಕೆಲಸದ ಆಳ-ಅಗಲಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ.
 2. ಪ್ರತಿ ತಿಂಗಳ ಸಂಬಳದಲ್ಲಿ ನಾಲ್ಕನೇ ಒಂದು ಭಾಗವನ್ನು ಅಮ್ಮನ ಕೈಗೆ ಕೊಡುತ್ತೇನೆ, ಪ್ರತಿತಿಂಗಳೂ ಸ್ವಲ್ಪ ಉಳಿಸಿ ಬ್ಯಾಂಕಿನಲ್ಲಿ ಠೇವಣಿ ಇಡುತ್ತೇನೆ;ಇನ್ನೊಂದಿಷ್ಟು ಮದುವೆ ಖರ್ಚಿಗೆ ಅಂತ ಎತ್ತಿಟ್ಟು ಚಿನ್ನ ಕೊಳ್ಳುತ್ತೇನೆ.
 3. ಆನ್‍ಲೈನ್‍ನಲ್ಲಿ ಸಿಗುವ ಕೋರ್ಸುಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ವಿಷಯದ ಮೇಲೆ ಯಾವುದನ್ನಾದರೂ ಸೇರಿ ಪೂರ್ಣಗೊಳಿಸುತ್ತೇನೆ.
 4. ವಾರಕ್ಕೊಂದು ವಿಭಿನ್ನ ನೈಲ್‍ ಡಿಸೈನ್ ಮಾಡಿಕೊಳ್ಳುತ್ತೇನೆ.
 5. ಇಮೋಶನಲ್ ಫೂಲ್ ಆಗುವ ಬದಲು ಪ್ರಾಕ್ಟಿಕಲ್ಲಾಗಿ ಯೋಚಿಸಲು ಶುರುಮಾಡುತ್ತೇನೆ. ಚಿಕ್ಕ ವಿಷಯಗಳಿಗೆ ಮಗುವಿನಂತೆ ಅಳುವುದು, ರಚ್ಚೆ ಹಿಡಿಯುವುದು,ಗತಿಸಿಹೋದ ಘಟನೆಗಳನ್ನು ನೆನಪಿಸಿಕೊಂಡು ಸುಖಾಸುಮ್ಮನೆ ಕೊರಗುವುದು, ಬದಲಿಸಲಾರದ ಸಂಗತಿಗಳ ಬಗ್ಗೆ ಚಿಂತೆ ಮಾಡುವುದು – ಎಲ್ಲವೂ ಹೊಸವರ್ಷದ ಮೊದಲದಿನದಿಂದ ಬಂದ್!

ನಮ್ಮ ವೃತ್ತಿ, ಹಿನ್ನೆಲೆ, ಶಿಕ್ಷಣ, ಆಸಕ್ತಿಗಳಿಗೆ ಅನುಗುಣವಾಗಿ ನಮ್ಮ ಶಪಥಗಳೂ ಬದಲಾಗುತ್ತಾ ಹೋಗುತ್ತವೆ ಎಂದು ಹೇಳಬಹುದೇನೋ. ಉದಾಹರಣೆಗೆ ಅರಿಂದಮ್‍ನನ್ನೇ ತೆಗೆದುಕೊಳ್ಳಿ. ಒಂದಾನೊಂದು ಕಾಲದಲ್ಲಿ ಸುತ್ತ ಗೆಳೆಯರ ಪುಂಡು ಕಟ್ಟಿಕೊಂಡು ಜೀವನವನ್ನು ಬೇಕಾಬಿಟ್ಟಿಯಾಗಿ ಬದುಕುತ್ತಿದ್ದವನು ಈಗ ನೌಕರಿಯಲ್ಲಿ ಮೇಲಿನ ಹಂತಕ್ಕೆ ಏರಿದ ಮೇಲೆ ಜವಾಬ್ದಾರಿಯಿಂದ ವರ್ತಿಸುತ್ತಾನೆ. ಮೋಸ, ವಂಚನೆಗಳನ್ನೂ ಸಾಕಷ್ಟು ನೋಡಿ, ಸ್ವತಃ ಅವುಗಳ ಪೆಟ್ಟು ತಿಂದವನಾದ್ದರಿಂದ, ಸ್ವಲ್ಪ ಮಟ್ಟಿಗೆ ಮೆಚ್ಯೂರ್ ಆಗಿದ್ದಾನೆ ಎನ್ನಬಹುದು. ಡೈರಿಯಲ್ಲಿ ಅವನು ಬರೆದುಕೊಂಡ “ರೆಸಲ್ಯೂಶನ್ಸ್” ಇವು:

 1. ಜೀವನದ ಸಮಯವನ್ನು ತುಂಬ ಜಾಗ್ರತೆಯಿಂದ ಕಳೆಯಬೇಕು. ಪ್ರತಿ ಗಂಟೆ, ಪ್ರತಿ ನಿಮಿಷ ಅಮೂಲ್ಯ ಎನ್ನುವ ತಿಳುವಳಿಕೆ ಬಂದಿದೆ. ತುಂಬ ದುಬಾರಿ ಬೆಲೆ ತೆತ್ತು ಈ ಪಾಠವನ್ನು ಜೀವನದಲ್ಲಿ ಕಲಿತುಕೊಂಡಿದ್ದೇನೆ. ಮುಂದಿನವರ್ಷ ಯಾವುದೇ ರೀತಿಯಲ್ಲಿ ಕಾಲಹರಣ ಮಾಡುವ ಕೆಲಸಕ್ಕೆ ಕೈಹಾಕುವುದಿಲ್ಲ.
 2. ಒಂದೋ ಕೆಲಸದಲ್ಲಿ ಬ್ಯುಸಿಯಾಗಿರಬೇಕು; ಇಲ್ಲಾ ಒಳ್ಳೆಯ ಹವ್ಯಾಸದಲ್ಲಿ ತೊಡಗಿಕೊಳ್ಳಬೇಕು. ಖುಷಿಯಾಗಿರಲು ಸದಾ ಗೆಳೆಯರನ್ನು ಕಟ್ಟಿಕೊಂಡು ತಿರುಗುವುದು ಅನಿವಾರ್ಯವಲ್ಲ.
 3. ಸಂದರ್ಭ ಯಾವುದೇ ಇರಲಿ, ಎಷ್ಟೇ ಕಷ್ಟಗಳು ಮೈಮೇಲೆ ಇರುಕಿಕೊಂಡಿರಲಿ; ಖುಷಿಯಾಗಿರುತ್ತೇನೆ. ಬದುಕನ್ನು ಬಂದಂತೆ ಸ್ವೀಕರಿಸುತ್ತೇನೆ.
 4. ಏಕಾಂತದಲ್ಲಿ ಕೂತು, ಒಂದೊಳ್ಳೆಯ ಸಿನೆಮವೋ ಟಿವಿ ಕಾರ್ಯಕ್ರಮವೋ ನೋಡಿ ವರ್ಷಗಳೇ ಕಳೆದ ಹಾಗಿದೆ. ಈ ವರ್ಷವಾದರೂ ಒಂದಷ್ಟು ಒಳ್ಳೆಯ ಕಾಮಿಡಿ ಶೋಗಳನ್ನು ನೋಡಬೇಕು.

ನೀವು ಜಗತ್ತಿಗೆ ಮೋಸ ಮಾಡಬಹುದು, ಆದರೆ ನಿಮಗೆ ನೀವು ಮೋಸಗೊಳಿಸಲಾರಿರಿ ಎನ್ನುವುದು ಎಷ್ಟು ಸತ್ಯ ನೋಡಿ. ಅಪ್ಪಮ್ಮನ ಮಾತು ಕೇಳದ,ಗೆಳೆಯರು ಬುದ್ಧಿ ಹೇಳಿದರೆ ಕ್ಯಾರೇ ಮಾಡದ, ಅಧ್ಯಾಪಕರು ಗದರಿದರೆ ಅವೆಲ್ಲವನ್ನು ಕೊಡವಿಕೊಂಡು ಉಢಾಫೆ ತೋರಿಸುವ ಪಳನಿ ತನಗೆ ಸಿಕ್ಕಿದ ಒಂದು ಚೀಟಿಯಲ್ಲಿ ಹೊಸವರ್ಷದ ಪ್ರತಿಜ್ಞೆಗಳನ್ನು ಬರೆದುಕೊಂಡಿದ್ದ. ಅಲ್ಲಿದ್ದದ್ದು ಎರಡೇ ಸಾಲು. “ಎಲ್ಲರೂ ಮೆಚ್ಚುವಂತಹ ಹುಡುಗನಾಗಬೇಕು. ಸಾಧ್ಯವಾದರೆ ಎನ್‍ಜಿಓ-ಒಂದರಲ್ಲಿ ಸೇವೆ ಮಾಡಿ ನನ್ನ ಶಕ್ತಿಗೆ ಹೊರದಾರಿ ಕಂಡುಕೊಳ್ಳಬೇಕು. ಒಟ್ಟಲ್ಲಿ – ಒಳ್ಳೆಯ ಮನುಷ್ಯನಾಗಬೇಕು, ಅಷ್ಟೆ”

ಕಾಲೇಜು ಕಲಿಯುತ್ತಿರುವ ವಿದ್ಯಾಧರ ಡಿಸೆಂಬರ್ ತಿಂಗಳು ಪೂರ್ತಿ ಯೋಚನೆ ಮಾಡೀಮಾಡಿ ಕೊನೆಗೆ ಬರೆದುಕೊಂಡ ಪ್ರತಿಜ್ಞೆಗಳು:

 1. ತುಂಬಾ ಮುಖ್ಯವಾಗಿ ನನಗೆ ಜೀವನದಲ್ಲಿ ಏನಾಗಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳುವುದೇ ಈ ವರ್ಷದ ಗುರಿ. ನಾನೇನಾಗಬೇಕು ಎಂದುಕೊಳ್ಳುತ್ತೇನೋ ಅದಕ್ಕೆ ಮನೆಯವರಿಂದ ವಿರೋಧ ಬರುತ್ತದೆ. ಅವರು ಏನು ಸಲಹೆ ಕೊಡುತ್ತಾರೋ ಅದು ನನಗೆ ಒಪ್ಪಿಗೆಯಾಗುತ್ತಿಲ್ಲ. ಒಟ್ಟಲ್ಲಿ ಈ ಹಗ್ಗಜಗ್ಗಾಟದಲ್ಲಿ ಸಾಕುಸಾಕಾಗಿ ಹೋಗಿದೆ. ಹೊಸವರ್ಷದಲ್ಲಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ.
 2. ಇತ್ತೀಚೆಗೆ ಫೇಸ್‍ಬುಕ್ ನನ್ನ ದಿನದ ಬಹುಪಾಲನ್ನು ನುಂಗಿ ನೀರುಕುಡಿಯುತ್ತಿದೆ. ಅದಕ್ಕೊಂದು ತಿಲಾಂಜಲಿ ಇಡದಿದ್ದರೆ ನನಗೆ ಭವಿಷ್ಯವಿಲ್ಲ. ವಾರದಲ್ಲಿ ಇಷ್ಟೇ ಹೊತ್ತು ಫೇಸ್‍ಬುಕ್ ಬಳಸುತ್ತೇನೆ ಎನ್ನುವ ಸ್ವಯಂನಿಯಂತ್ರಣ ಹಾಕಿಕೊಳ್ಳುತ್ತೇನೆ. ಜನವರಿ ಒಂದರಿಂದ, ಅದರ ಅಪಬಳಕೆ ಇಲ್ಲ.
 3. ಸಾಧ್ಯವಾದರೆ ಕರ್ನಾಟಕದ ಒಂದು ಜಿಲ್ಲೆಗೆ ಗೆಳೆಯರ ಜೊತೆ ಪ್ರವಾಸ ಹೋಗಿಬರಬೇಕು. ಅಪ್ಪನ ಡಿಎಸ್‍ಎಲ್‍ಆರ್ ಕ್ಯಾಮರದಲ್ಲಿ ಫೋಟೋ ತೆಗೆಯುವುದು ಹೇಗೆಂದು ಕಲಿಯಬೇಕು. ಹೊಸವರ್ಷದಲ್ಲಿ ಖಂಡಿತ ಈ ಕೆಲಸ ಆಗಬೇಕು!
 4. ಈ ವರ್ಷದ ಕಾಲೇಜ್‍ ಡೇನಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಬೇಕು!

ಎಲ್ಲರ ಪಟ್ಟಿಗಳಲ್ಲೂ ಹೀಗೆ ನಾಲ್ಕೈದು ಶಪಥಗಳಿರುತ್ತವೆ, ಅಥವಾ ಇರಲೇಬೇಕು ಎಂದೇನಿಲ್ಲ. ಓಟವೇ ಜೀವನ ಎನ್ನುತ್ತ ವರ್ಷವಿಡೀ ಓಡುತ್ತಲೇ ಇರುವ ಆದಿತ್‍ನ ಶಪಥಗಳ ಪಟ್ಟಿಯಲ್ಲಿ ಇರುವ ಅಂಶ ಒಂದೇ – “ಈ ವರ್ಷ ಒಟ್ಟು 1500 ಕಿಮೀ ಓಡಬೇಕು”. ಆಗಾಗ ಕತೆ-ಕವನ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸುವ ಹವ್ಯಾಸವಿರುವ ಕುಲಕರ್ಣಿ ಅಂಕಲ್, ಹೊಸ ವರ್ಷದ ಮೊದಲದಿನದಿಂದ ಪ್ರತಿದಿನ ಕನಿಷ್ಠ 500 ಪದಗಳನ್ನು ಬರೆದೇ ಮಲಗೋದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಡಯಾಬಿಟೀಸ್ ಇಲ್ಲವಾದರೂ ಅಡ್ಡಾದಿಡ್ಡಿ ಬೆಳೆಯುತ್ತಿರುವ ಬೊಜ್ಜನ್ನು ನೋಡಿ ತನ್ನ ಬಗ್ಗೆ ತಾನೇ ಬೇಸರ ಮಾಡಿಕೊಂಡಿದ್ದ ರಾಧಾ ಆಂಟಿ “ಈ ವರ್ಷ ಪ್ರತಿದಿನ ತಪ್ಪದೆ ಐದುಗಂಟೆಗೆದ್ದು ಐದು ಕಿಲೋಮೀಟರ್ ನಡೆಯುತ್ತೇನೆ. ಮಳೆ ಬಂದ ದಿನ ಮಾತ್ರ ನಡಿಗೆಗೆ ವಿನಾಯಿತಿ” ಎಂದು ಬರೆದುಕೊಂಡು ಅಡುಗೆಮನೆಯ ಫ್ರಿಜ್ಜಿಗೆ ಅಂಟಿಸಿದ್ದಾರೆ. ಕುಂಟುನೆಪ ಹೇಳಿ ನಡಿಗೆ ತಪ್ಪಿಸಿಕೊಂಡ ದಿನ ಆ ಚೀಟಿ ಅವರನ್ನು ಕಂಡು ಅಣಕಿಸಿದ ಹಾಗೆ ಆಗಬೇಕಂತೆ! ಹಾಗೆಯೇ, ಯಾರು ಏನೇ ಕೇಳಿದರೂ ಯೋಚನೆ ಮಾಡದೆ “ಹ್ಞೂ” ಎಂದುಬಿಡುವ ಸಮ್ಮತಿ ಈ ವರ್ಷ ಒಂದು ಕಠಿಣಪ್ರತಿಜ್ಞೆ ಮಾಡಿದ್ದಾಳೆ – “ಇನ್ನುಮುಂದೆ ಯಾರು ಕೇಳಿದರೂ “ಎಸ್” ಎಂದು ಹೇಳುವ ಬದಲು ಆಗದ ಕೆಲಸಕ್ಕೆ ನಿಷ್ಠುರವಾಗಿ “ನೋ” ಅನ್ನುತ್ತೇನೆ. ಒಪ್ಪಿಕೊಂಡಾದ ಮೇಲೆ ಇಲ್ಲಸಲ್ಲದ ಕಷ್ಟಗಳನ್ನು ಮೈಮೇಲೆಳೆದುಕೊಂಡು ಗೋಳಾಡುವುದಿಲ್ಲ”. ಶ್ರೀಕಂಠರಾಯರಿಗೆ ಕಳೆದ ವರ್ಷವಷ್ಟೇ ರಿಟೈರ್ ಆಯಿತು. ಸಂಸ್ಕøತಿ, ಪರಂಪರೆಯ ಬಗ್ಗೆ ತುಂಬ ಗೌರವವುಳ್ಳ ರಾಯರು ತಮಗೆ ಇಳಿವಯಸ್ಸಾದರೂ ವಾರ್ಷಿಕ ಪ್ರತಿಜ್ಞೆ ಮಾಡಲು ಉದಾಸೀನ ತೋರಲಿಲ್ಲ. “ಜನವರಿ ಒಂದರಿಂದ ಪ್ರತಿದಿನ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಅರ್ಥಸಹಿತ ಓದಬೇಕು ಅಂತ ನಿರ್ಧಾರ ಮಾಡಿದ್ದೇನೆ. ಒಂದು ದಿನವೂ ತಪ್ಪಿಸದೆ ಓದಿದರೆ, ವರ್ಷದ ಕೊನೆಗೆ ಇಡೀ ಪುಸ್ತಕ ಮುಗಿಸಿರುತ್ತೇನೆ” ಎನ್ನುತ್ತಾರೆ ರಾಯರು. ಅವರ ಪತ್ನಿ ಜಾನಕೀಬಾಯಿಯದು ಕೂಡ ಒಂದೇ ಶಪಥ – “ಈವರೆಗಿನ ಯಾವ ಶಪಥವನ್ನೂ ಪಾಲಿಸಲು ಆಗದಿರುವುದರಿಂದ, ಈ ವರ್ಷ ಯಾವ ಹೊಸ ಶಪಥವನ್ನೂ ಮಾಡುವುದಿಲ್ಲ” ಎಂದು!

ಇದುವರೆಗೂ ದುಡ್ಡೆಂದರೆ ಮರದಲ್ಲಿ ಬಿಟ್ಟ ಮಾವಿನಕಾಯಿ ಎಂಬಂತೆ ದುಂದುವೆಚ್ಚ ಮಾಡುತ್ತಿದ್ದ ಎದುರುಮನೆ ಹುಡುಗಿ ರಾಗಿಣಿಗೆ ಕೊನೆಗೂ ಬುದ್ಧಿ ಬಂದಿದೆಯಂತೆ. ಹಾಗಂತ ಹೇಳಿದವರು ಅವಳ ತಾಯಿ ಸುಧಾರಾಣಿಯವರು. ತನ್ನ ಮಗಳು ಗುಟ್ಟಾಗಿ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ಪ್ರತಿಜ್ಞೆಗಳ ಪಟ್ಟಿಯನ್ನು ಎಗರಿಸಿ ತಂದು ಅವರು ನನ್ನ ಕೈಯಲ್ಲಿಟ್ಟರು. ಅದರಲ್ಲಿ ರಾಗಿಣಿ, “ಇಷ್ಟು ದಿನ ದುಡ್ಡನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದೆ. ಮನೆಯವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಇನ್ನಾದರೂ ಈ ವಿಷಯದಲ್ಲಿ ಜಾಗ್ರತೆ ಮಾಡಬೇಕು. ಅಪ್ಪ ಕೊಟ್ಟ ಪಾಕೆಟ್’ ಮನಿಯನ್ನು ಗೊತ್ತುಗುರಿಯಿಲ್ಲದೆ ಖರ್ಚುಮಾಡುವುದಿಲ್ಲ. ಕ್ರೆಡಿಟ್‍ಕಾರ್ಡನ್ನು ಎಲ್ಲೆಂದರಲ್ಲಿ ಬಳಸುವುದಿಲ್ಲ. ಒಂದು ದುಡ್ಡಿನ ಚೀಲ ಇಟ್ಟುಕೊಂಡು ಪ್ರತಿಸಲ ಎಷ್ಟಾಗುತ್ತೋ ಅಷ್ಟು ದುಡ್ಡನ್ನು ಅದರಲ್ಲಿ ಹಾಕಿ ಉಳಿಸುತ್ತಾ ಬರಬೇಕು ಅಂತ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 31ರವರೆಗೂ ಆ ಚೀಲದಲ್ಲಿ ಎಷ್ಟು ಸಂಗ್ರಹವಾಗಿದೆ ನೋಡುವುದಿಲ್ಲ. ವರ್ಷ ಮುಗಿದ ಮೇಲೆ, ಅದರಲ್ಲಿ ಎಷ್ಟು ಹಣ ಒಟ್ಟಾಗಿದೆಯೋ ಅದನ್ನು ಬಳಸಿ ಒಂದೊಳ್ಳೆಯ ಸೀರೆ ಅಮ್ಮನಿಗಾಗಿ ತಗೋಬೇಕು!” ಎಂದು ಬರೆದಿದ್ದಳು. ಅಮ್ಮನಿಗಾಗಿ ಮಗಳು ಮಾಡಿದ ಈ ಪ್ರತಿಜ್ಞೆ ಸಿಮೆಂಟ್ ಕಂಬದಂತೆ ನಿಲ್ಲುತ್ತದೋ ಅಥವಾ ಉಸುಕಿನ ಸೇತುವೆಯಂತೆ ಉದ್ಘಾಟನೆಯ ಮೊದಲೇ ಮುರಿದುಬೀಳುತ್ತದೋ ಗೊತ್ತಿಲ್ಲ!

ಹೊಸವರ್ಷದ ಮೊದಲ ದಿನ ಪ್ರತಿಜ್ಞೆ ಮಾಡುವುದರಲ್ಲಿ ನಮಗಿಂತಲೂ ಪಾಶ್ಚಾತ್ಯರೇ ಒಂದು ಕೈ ಮೇಲೆ ಎನ್ನಬಹುದೋ ಏನೋ (ಹಾಗೇ ಮುರಿಯುವುದರಲ್ಲೂ!). ಯಾಕೆಂದರೆ, ಹೊಸವರ್ಷದ ಪ್ರತಿಜ್ಞೆಗಳ ಗೌಜಿಗದ್ದಲ ವಿದೇಶಗಳಲ್ಲೇ ಜೋರು. ಅಂದಹಾಗೆ, ನಮ್ಮ ಜನರ ಟಾಪ್ 10 ಪ್ರತಿಜ್ಞೆಗಳ ಪಟ್ಟಿ ಮಾಡಲು ಹೋದರೆ ಅದರಲ್ಲಿ ಯಾವುದೆಲ್ಲ ಇರಬಹುದು?

 1. ಈ ವರ್ಷ ಯುರೋಪ್ ಟೂರ್ ಮಾಡಬೇಕು. “ಕ್ವೀನ್” ಚಿತ್ರದ ನಾಯಕಿಯ ಹಾಗೆ, ಸಾಧ್ಯವಾದರೆ ಒಬ್ಬನೇ ಅಥವಾ ಒಬ್ಬಳೇ ಯುರೋಪಿನ ಹೆಚ್ಚಿನ ದೇಶಗಳಿಗೆ ಪ್ರವಾಸ ಮಾಡಿಕೊಂಡು ಬರಬೇಕು.
 2. ಈ ವರ್ಷ ಸುಳ್ಳು ಹೇಳುವುದಿಲ್ಲ; ಸುಳ್ಳು ಮುಖವಾಡ ಹಾಕುವುದಿಲ್ಲ. ಮನಸ್ಸಿನಲ್ಲಿ ಏನಿದೆಯೋ ಅದನ್ನೇ ಹೇಳ್ತೇನೆ. ಹಾಗಂತ ಬೇರೆಯವರ ಮನಸ್ಸು ನೋಯಿಸುವುದು ನನ್ನ ಉದ್ಧೇಶವೇನಲ್ಲ. ಎಲ್ಲರನ್ನೂ ತುಂಬ ಸಹನೆ, ಪ್ರೀತಿಯಿಂದ ನೋಡ್ತೇನೆ.
 3. ಈ ವರ್ಷ ಕೋಪ ಬಿಡುತ್ತೇನೆ. ಯಾರ ಮೇಲೆ ಕೂಡ – ಕಾರಣ ಇರಲಿ ಇಲ್ಲದಿರಲಿ, ಸಿಟ್ಟು ಮಾಡಿಕೊಳ್ಳೋದಿಲ್ಲ.
 4. ಈ ವರ್ಷದಿಂದ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಗಂಟೆಗಂಟೆಗೆ ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಾಪ್ ಎನ್ನುತ್ತ ಕಾಲಹರಣ ಮಾಡುವುದಿಲ್ಲ. ಈ ಎಲ್ಲ ರಗಳೆಗಳಿಂದ ದೂರ ಹೋಗುತ್ತೇನೆ. ಸಾಧ್ಯವಾದರೆ, ಇಂಟರ್ನೆಟ್ ಇಲ್ಲದ ಬೇಸಿಕ್ ಮೊಬೈಲ್‍ಸೆಟ್ ಕೊಳ್ಳಬೇಕು!
 5. ಸಾಧ್ಯವಿಲ್ಲ – ಇನ್ನು ಸಾಧ್ಯವಿಲ್ಲ; ಈ ವರ್ಷ ಹಿಂದಿ ಕಲಿಯಲೇಬೇಕು. ಹಾಗಂತ ನಾನು ಕನ್ನಡದ್ವೇಷಿಯೆಂದು ಅಪಾರ್ಥ ಮಾಡಿಕೊಳ್ಳಬೇಡಿ ಮಾರಾಯ್ರೆ. ನನಗೆ ಹಿಂದಿ ಕಲಿಯಬೇಕು ಅಂತ ಆಸೆ ಅಷ್ಟೆ. ಆ ಭಾಷೆ ಬಂದರೆ, ಉತ್ತರಭಾರತವಿಡೀ ಆರಾಮಾಗಿ ಸುತ್ತಬಹುದು ತಾನೆ? ಅಲ್ಲದೆ, ಹಿಂದಿ ಚಿತ್ರಗಳ ಪ್ರತಿ ಡೈಲಾಗು, ಹಾಡುಗಳ ಪ್ರತಿಸಾಲನ್ನು ಅರ್ಥ ಮಾಡಿಕೊಂಡು ಆಸ್ವಾದಿಸಬೇಕೆಂಬ ಆಸೆ. ಹಾಗಾಗಿ, ಒಂದು ವರ್ಷದಲ್ಲಿ ಹಿಂದಿ ಕಲಿತು, ಡಿಸೆಂಬರ್ ಹೊತ್ತಿಗೆ ಸರಾಗವಾಗಿ ಮಾತಾಡುವ ಮಟ್ಟಕ್ಕೆ ಬರುತ್ತೇನೆ.
 6. ಇಷ್ಟು ವರ್ಷ, ಈ ಕಂಪೆನಿಗೆ ಮಣ್ಣುಹೊತ್ತದ್ದು ಸಾಕೆನಿಸಿದೆ. ಈ ವರ್ಷ, ಕಂಪೆನಿಯ ಕೆಲಸಕ್ಕೆ ತಿಲಾಂಜಲಿ ಇಟ್ಟು ಹೊರಬರಬೇಕು ಅಂತ ಮಾಡಿದ್ದೇನೆ. ಹೊರಬಂದು ಏನು ಮಾಡ್ತಿ ಅಂತೀರೇನೋ! ನಮ್ಮೂರಲ್ಲಿ ಒಂದು ಪುಟ್ಟ, ಆದರೂ ಆಧುನಿಕ ಕೆಫೆ ತೆರೆಯಬೇಕು ಅಂತ ನನ್ನಾಸೆ. ಅಲ್ಲಿ ನೀವು ಕೂತು ಪುಸ್ತಕ ಓದಬಹುದು, ನಿಮಗಿಷ್ಟವಾದ ತಿಂಡಿ, ಊಟ ಆರ್ಡರ್ ಮಾಡಿ ಹೋಟೇಲ್ ತರಹ ಕೂತು ತಿನ್ನಬಹುದು. ಆ ರೆಸ್ಟಾರೆಂಟ್ ಹೇಗಿರಬೇಕು, ಹೇಗೆ ಅದನ್ನು ನಿರ್ವಹಿಸಬೇಕು ಎಂದೆಲ್ಲ ಪ್ಲ್ಯಾನ್ ತಯಾರಿಸಿಟ್ಟಿದ್ದೇನೆ.
 7. ಭಾರತದ ಪುರಾಣಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡಬೇಕು ಅಂತ ನನಗೆ ಆಸೆ. ಅದಕ್ಕೋಸ್ಕರವೇ ಈ ವರ್ಷ ಎಲ್ಲಾಬಿಟ್ಟು ಹಿಮಾಲಯ ಯಾತ್ರೆ ಹೊರಡಬೇಕು ಅಂತ ಮಾಡಿದ್ದೇನೆ. ನನ್ನ ವರ್ಷದ ದೊಡ್ಡ ಪ್ರತಿಜ್ಞೆ ಎಂದರೆ ಮಾನಸ ಸರೋವರ ಯಾತ್ರೆ. ಅದಕ್ಕೆ ಬೇಕಾದ ತಯಾರಿ ಈಗಿನಿಂದಲೇ ಶುರು!
 8. ಈ ವರ್ಷ ನನ್ನದೇ ಆದ ಒಂದು ಪುಟ್ಟ ಡಾಕ್ಯುಮೆಂಟರಿ ತಯಾರಿಸಬೇಕು ಅಂತ ನಿರ್ಧರಿಸಿದ್ದೇನೆ. ಅದಕ್ಕೆ ಬೇಕಾದ ಸ್ಕ್ರಿಪ್ಟ್ ಬರೆಯೋದು, ಕ್ಯಾಮೆರ ಚಲನೆಯ ಎಬಿಸಿಡಿ ಕಲಿಯೋದು, ಲೈಟಿಂಗ್ ಬಗ್ಗೆ ತಿಳಿದುಕೊಳ್ಳೋದು, ಎಡಿಟಿಂಗ್ ಕಲಿಯೋದು – ಹೀಗೆ ಬೆಟ್ಟದಷ್ಟು ಕೆಲಸ ಇದೆ. ಇವೆಲ್ಲಕ್ಕೂ ಟೈಮ್‍ಲೈನ್ ಹಾಕಿ ಕೆಲಸ ಮಾಡುತ್ತೇನೆ. ಬೈ ದ ಎಂಡ್ ಆಫ್ ದ ಇಯರ್, ನಾನೂ ಒಬ್ಬ ನಿರ್ದೇಶಕ ಆಗಿರಬೇಕು!
 9. ನಾನು ಜೀವನದಲ್ಲಿ ಯಾವತ್ತೂ ಮನಸ್ಸಿಟ್ಟು ಯಾವ ಆಟವನ್ನೂ ಆಡಿಲ್ಲ ಗೊತ್ತ? ಶಾಲೆ-ಕಾಲೇಜುಗಳಲ್ಲಿದ್ದಾಗ ಕ್ರಿಕೆಟ್, ಫುಟ್‍ಬಾಲ್ ಇತ್ಯಾದಿ – ಯಾವುದನ್ನೂ ಸರಿಯಾಗಿ, ಮನಸ್ಸು ಕೇಂದ್ರೀಕರಿಸಿ ಆಡಿದವನಲ್ಲ. ಆದರೆ, ಈಗ ಯಾಕೋ ಮನಸ್ಸಾಗಿದೆ. ಈ ವರ್ಷ – ಚೆಸ್ ಕಲಿಯಬೇಕು ಅಂತ ಡಿಸೈಡ್ ಮಾಡಿದ್ದೇನೆ. ಅದರ ಪಟ್ಟುಗಳನ್ನು ಕಲಿತು, ವರ್ಷದ ಕೊನೆಗೆ ಪಂಟರ್ ಅಲ್ಲದಿದ್ದರೂ ತಕ್ಕಮಟ್ಟಿಗೆ ಅದರಲ್ಲಿ ಪ್ರವೀಣನಾಗಬೇಕು ಅಂತ ಮನಸ್ಸಲ್ಲಿದೆ.
 10. ಕಾಲೇಜ್ ಬಿಟ್ಟು ಇಪ್ಪತ್ತು ವರ್ಷವಾಗುತ್ತಾ ಬಂತು. ಆ ಕಾಲದ ಕ್ಲಾಸ್‍ಮೇಟುಗಳು ಎಲ್ಲಿದ್ದಾರೋ ಹೇಗಿದ್ದಾರೋ ದೇವ್ರಿಗೇ ಗೊತ್ತು! ಆದರೆ ಫೇಸ್‍ಬುಕ್‍ನಲ್ಲಿ ಸಿಕ್ತಾರೆ. ಅವರ ನಂಬರ್ ನನ್ ಹತ್ರ ಇದೆ. ಆದರೆ, ಪರಸ್ಪರ ಮಾತಾಡಲು, ಸುಖಕಷ್ಟ ಕೇಳಲು ಮಾತ್ರ ಆಗೇ ಇಲ್ಲ. ಎಲ್ಲರೂ ನಮ್ಮನಮ್ಮ ಬದುಕಿನೊಳಗೆ ಸುರುಟಿಕೊಂಡ ಶಂಖದ ಹುಳುಗಳಂತೆ, ಅಥವಾ ದ್ವೀಪಗಳಂತೆ ಬದುಕುತ್ತಿದ್ದೇವೆ. ಈ ವರ್ಷ ನಿರ್ಧಾರ ಮಾಡಿದ್ದೇನೆ ಕಣ್ರಿ, ನನ್ನ ಹಳೆಗೆಳೆಯರಲ್ಲಿ ಕನಿಷ್ಠ ಐದು ಜನರನ್ನಾದರೂ ಮುಖತಃ ಭೇಟಿಯಾಗಿ ಬರಬೇಕು. ಐ ವಿಲ್ ಡೂ ಇಟ್!

– ಈ ಪಟ್ಟಿ ನಿಮ್ಮದೂ ಆಗಿರಬಹುದಲ್ವೆ?

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!