ಅಂಕಣ

ಸರಳತೆಯ ಮೇರುವ್ಯಕ್ತಿತ್ವಕ್ಕೆ ಜನ್ಮದಿನದ ಶುಭಾಶಯಗಳು

ಆತ ಅದೆಷ್ಟೋ ಯುವ ಕ್ರಿಕೆಟ್ ಆಟಗಾರರಿಗೆ ನಿರಂತರ ಸ್ಪೂರ್ತಿ. ಕೇವಲ ಕ್ರಿಕೆಟ್‌ ಆಟಗಾರರಿಗೆ ಮಾತ್ರವಲ್ಲ ಕ್ರಿಕೆಟ್ ಬಗ್ಗೆ ಚೂರುಪಾರು ತಿಳಿದವರಿಗೂ ಆತನ ಜೀವನವೇ ಒಂದು ಪಾಠ.  ಜಂಟ್ಲಮ್ಯಾನ್ ಗೇಮ್ ಕ್ರಿಕೆಟ್ ನಲ್ಲಿ ನಿಜವಾದ ಜಂಟ್ಲಮ್ಯಾನ್ ಯಾರು ಎಂದು ಒಂದು ಪ್ರಶ್ನೆ ಮೂಡಿದರೆ ಮೊದಲು ಮೂಡುವ ಹೆಸರು ಈತನದ್ದೇ. ಕ್ರೀಸ್’ಗೆ ಅಂಟಿ ನಿಂತರೆ ಅಲ್ಲಾಡಿಸಲಾಗದ ಗೋಡೆ ಈತ. ಕೆರಳಿಸಿ ಕೆದಕಿದರೂ ಅಲ್ಲಾಡದ ಮನಸ್ಥಿತಿಯ ಆಟಗಾರನೀತ. ಅನಿವಾರ್ಯವಾಗಿ ವಿಕೆಟ್ ಕೀಪರ್ ಆದರೂ ಅದನ್ನು ಯಶಸ್ವಿಯಾಗಿ ನಿಬಾಯಿಸಿದ ಅದ್ಭುತ ಮಾದರೀ ಕ್ರೀಡಾಪಟು ಈತ . ಎಲ್ಲಕ್ಕಿಂತಲೂ ಹೆಚ್ಚಿನದಾಗಿ ನಮ್ಮ ಹೆಮ್ಮೆಯ ಕನ್ನಡಿಗನಿವ. ಕ್ರೀಡಾಂಗಣದಲ್ಲಿ ಅಬ್ಬರಿಸುವ ಕ್ರಿಸ್ ಗೇಲ್ ಮೈದಾನದ ಹೊರಗೆ ಪಕ್ಕಾ ಪೋಲಿಯಾಗಿ ವರ್ತಿಸುತ್ತಾನೆ, ಆಸ್ಟ್ರೇಲಿಯಾ ಕ್ರಿಕೆಟ್ ನ ದಿಕ್ಕು ಬದಲಿಸಿದ ರಿಕ್ಕಿ ಪಾಂಟಿಂಗ್ ಕ್ರೀಡಾಂಗಣದಲ್ಲಿ ತನ್ನನ್ನು ಬಿಟ್ಟರೆ ಬೇರೊಬ್ಬರಿಲ್ಲ ಎಂದು ಸೊಕ್ಕಿನಿಂದ ವರ್ತಿಸುತ್ತಾನೆ, ತಂಡದಲ್ಲಿ ತನ್ನ ಸ್ಥಾನವನ್ನು ಖಾಯಂ ಮಡಿಕೊಳ್ಳಲು ಪರಿತಪಿಸುತ್ತಿದ್ದ ಅಮಿತ್ ಮಿಶ್ರಾ ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಾನೆ.. ಹೀಗೆ ಇನ್ನೂ ಅದೆಷ್ಟೋ ಕ್ರಿಕೆಟ್ ಆಟಗಾರರ ಎಲ್ಲೆ ಮೀರಿದ ವರ್ತನೆಗಳನ್ನು ಪ್ರಸ್ತುತ ನಾವೆಲ್ಲ ನೋಡುತ್ತಿದ್ದೇವೆ… ವೇಗವಾಗಿ ಬಂದ ಹೆಸರು ಮತ್ತು ಸ್ಥಾನವನ್ನು ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸದೇ ಹುಚ್ಚರಂತೆ ಆಡುವ ಇವರುಗಳು ಕ್ರಿಕೆಟ್ ಎಂಬ ಶಿಸ್ತಿನ ಆಟಕ್ಕೆ ಅವಮಾನ ಮಾಡುತ್ತಿದ್ದಾರೆ ಅಂದರೆ ಯಾವುದೇ ಅತಿಶಯೋಕ್ತಿ ಇಲ್ಲ.. ಇವರುಗಳ ಉಪಟಳ ನೋಡುವಾಗೆಲ್ಲ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ ಆದರೆ ಕ್ರಿಕೆಟ್ ಲೋಕದಲ್ಲಿ ಶಿಸ್ತು ಮತ್ತು ಸಂಯಮದ ವಿಷಯಬಂದಾಗ ಮೂಡುವ ವ್ಯಕ್ತಿತ್ವವೆಂದರೆ ಅದು ಈ ಅಸಾಮಾನ್ಯ ಆಟಗಾರನದ್ದು ಮಾತ್ರ.. ಯಾರೀತ?  ಹೌದು ಆತನೇ “ದ ವಾಲ್”, “ಮಿಸ್ಟರ್ ಡಿಪೆಂಡಬಲ್”, “ಜಾಮಿ” ರಾಹುಲ್ ದ್ರಾವಿಡ್. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅದೆಷ್ಟೋ ಪಾಠವನ್ನು ರಾಹುಲ್ ದ್ರಾವಿಡ್ ಎಂಬ ವ್ಯಕ್ತಿಯನ್ನು ನೋಡಿ ಅಳವಡಿಸಿಕೊಳ್ಳಬಹುದು.

ರಾಹುಲ್ ದ್ರಾವಿಡ್ ಎಂಬ ಕ್ರಿಕೆಟ್ ದೈತ್ಯನ ಬಗ್ಗೆ ತುಂಬಾ ಹೇಳಲಿಚ್ಚಿಸುವುದಿಲ್ಲ ಆದರೆ ಈ ಮನುಷ್ಯನ ಸರಳ ಜೀವನದ ಬಗ್ಗೆ ಒಂದಿಷ್ಟು ನಿದರ್ಶನವಿದೆ ಅದನ್ನು ಹೇಳಲೇಬೇಕು..ಒಬ್ಬ ಸಚಿನ್,ಒಬ್ಬ ರಾಹುಲ್ ರಂತಹ ಆಟಗಾರರಿಂದ ಮಾತ್ರ ಈ ಸರಳತೆಯನ್ನು ನಿರೀಕ್ಷಿಸಬಹುದು.. ರಾಹುಲ್ 1973 ಜನವರಿ 11ರಂದು ಇಂದೊರ್ ನಲ್ಲಿ ಮರಾಠಿ ಮಧ್ಯಮವರ್ಗದ ಮನೆತನದಲ್ಲಿ ಜನಿಸಿದರು.. ಬೆಂಗಳೂರಿನ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ ರಾಹುಲ್ ಅತ್ಯಂತ ನಾಚಿಕೆಯ ಸ್ವಭಾವದ ಮತ್ತು ಶಿಸ್ತಿನ ವಿದ್ಯಾರ್ಥಿಯಾಗಿದ್ದರು. ರಾಹುಲ್ ವಿದ್ಯಾಭ್ಯಾಸದಲ್ಲಿ ಅತೀ ಬುದ್ದಿವಂತನೇನಾಗಿರಲಿಲ್ಲ. ರಾಹುಲ್ ತಂದೆ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು ಪರಿಣಾಮ ರಾಹುಲ್ ರನ್ನು ಕ್ರಿಕೆಟ್ ವೀಕ್ಷಿಸಲು ಕರೆದೊಯ್ಯುತ್ತಿದ್ದರು. ಒಂದರ್ಥದಲ್ಲಿ ರಾಹುಲ್ ರನ್ನು ಕ್ರಿಕೆಟ್ ಆಡಲು ಪ್ರೇರೇಪಿಸಿದವರೇ ಅವರ ತಂದೆ. ಕ್ರಿಕೆಟ್ ಅನ್ನು ನೋಡುತ್ತ ನೋಡುತ್ತ ರಾಹುಲ್ ಅದನ್ನು ಅತಿಯಾಗಿ ಪ್ರೀತಿಸಲು ಪ್ರಾರಂಭಿಸಿದ. ತನ್ನ ಹನ್ನೆರಡನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಶುರುಮಾಡಿದ ರಾಹುಲ್ 1991 ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾಗುತ್ತಾನೆ. ಸತತ ಐದು ವರ್ಷ ಯಶಸ್ವಿಯಾಗಿ ಕರ್ನಾಟಕವನ್ನು ಪ್ರತಿನಿಧಿಸಿ ದೇಶದ ಆಯ್ಕೆಸಮೀತಿಯ ಗಮನ ಸೆಳೆದ ರಾಹುಲ್ 1996ರಲ್ಲಿ ಟೆಸ್ಟ್ ತಂಡದ ಮೂಲಕ ದೇಶವನ್ನು ಪ್ರತಿನಿಧಿಸುವ ಸೌಭಾಗ್ಯ ಪಡೆದರು..  ಈ ಸಾಧನೆಯ ಹಿಂದೆ ಅದ್ಭುತವಾದ ತಯಾರಿ ಮತ್ತು ಸ್ಪಷ್ಟ ಗುರಿ ಇತ್ತು. ಕನಸನ್ನು ಬೆನ್ನುಹತ್ತಿದ ರಾಹುಲ್ ಜಯಿಸಿದಂತೂ ವಿರಮಿಸಲಾರೆ ಎಂದು ಪಣತೊಟ್ಟಿದ್ದ. ನಂತರ 1996 ರಲ್ಲಿ  ಲಾರ್ಡ್ಸನಲ್ಲಿ ರಾಹುಲ್ ಮತ್ತು ಸೌರವ್ ಗಂಗೂಲಿ ಒಂದೇ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು..

ನನ್ನ ಪ್ರಕಾರ ರಾಹುಲ್ ಎಂಬ ಸವ್ಯಸಾಚಿಗೆ ಸರಿಯಾದ ಗೌರವ ಕೊನೆವರೆಗೂ ಸಿಗಲೇ ಇಲ್ಲ.. ಸ್ನೇಹಿತರೇ ಈ ಹುಡುಗ ಪದಾರ್ಪಣೆಯ ಪಂದ್ಯದ ಮೂಲಕವೇ ಆ ಅವಮಾನ, ನೋವನ್ನು ನುಂಗಬೇಕಾಯಿತು. ಲಾರ್ಡ್ಸನ ಆ ಟೆಸ್ಟ್  ಪಂದ್ಯದಲ್ಲಿ ಗಂಗೂಲಿ ಭಾರಿಸಿದ131 ರನ್ನಿನೆದುರು ದ್ರಾವಿಡ್ ಭಾರಿಸಿದ್ದ 95 ನಗಣ್ಯವಾಗಿಹೋಯಿತು. ಎಲ್ಲರೂ ಗಂಗೂಲಿಯನ್ನು ಕೊಂಡಾಡುವುದರಲ್ಲೇ ಮೈಮರೆತರು.. ಇನ್ನೂ ವಿಪರ್ಯಾಸ ಎಂದರೆ ಎರಡನೆ ಟೆಸ್ಟನಲ್ಲಿ ಮತ್ತೆ ರಾಹುಲ್ 84 ರನ್ನು ಭಾರಿಸಿದ್ದ ಆದರೆ ಸಚಿನ್ ಭಾರಿಸಿದ ಶತಕದ ಎದುರು ರಾಹುಲ್ ಯಾರಿಗೂ ಕಾಣಿಸಲೇ ಇಲ್ಲ.. ಇದು ಇಲ್ಲಿಗೆ ನಿಲ್ಲಲಿಲ್ಲ1996ರಲ್ಲಿ ರಾಹುಲ್ ಏಕದಿನ ತಂಡಕ್ಕೆ ಆಯ್ಕೆಯಾದರು. 1997 ರಲ್ಲಿ ಪಾಕಿಸ್ತಾನದ ವಿರುದ್ಧದ  ಪಂದ್ಯದಲ್ಲಿ ರಾಹುಲ್ ಶತಕ ಭಾರಿಸಿದ್ದರು ಆದರೆ ಅದೇ ಪಂದ್ಯದಲ್ಲಿ ಸಯೀದ್ ಅನ್ವರ್  187 ರನ್ ಭಾರಿಸಿದ್ದರು ಪರಿಣಾಮ ಮತ್ತೆ ರಾಹುಲ್ ನಗಣ್ಯರಾಗಿಬಿಟ್ಟರು. ಸ್ನೇಹಿತರೇ ನಿಮಗೆಲ್ಲ 2003ರಲ್ಲಿ ಅಡಿಲೇಡ್ ನಲ್ಲಿ ದ್ರಾವಿಡ್ ಭಾರಿಸಿದ ಆ 233 ರನ್ ನೆನಪಿದ್ದೇ ಇರುತ್ತೆ. ಆ ಪಂದ್ಯದಲ್ಲಿ ರಾಹುಲ್ 835 ನಿಮಿಷ ಬ್ಯಾಟಿಂಗ್ ನಡೆಸಿ ಮೊದಲ ಇನಿಂಗ್ಸನಲ್ಲಿ 233 ಮತ್ತು ಎರಡನೆ ಇನಿಂಗ್ಸ್ ನಲ್ಲಿ 72ರನ್ನು ಬಾರಿಸಿ ಔಟಾಗದೆ ಉಳಿದಿದ್ದರು. ಈ ಪಂದ್ಯ ನಡೆದು ನಾಲ್ಕು ತಿಂಗಳ ನಂತರ ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ನಲ್ಲಿ ರಾಹುಲ್ 740 ನಿಮಿಷ ಬ್ಯಾಟ್ ಮಾಡಿ 270 ರನ್ ಬಾರಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಿಹಿಸಿದ್ದರು. ಅದೆಷ್ಟೋ ಅದ್ಭುತವಾದ ಆಟವಾಡಿ ತಂಡವನ್ನು ಸೋಲಿನಿಂದ ಪಾರುಮಾಡಿಸಿದ ರಾಹುಲ್ ವಿಶ್ವ ಕ್ರಿಕೆಟ್‌ನಲ್ಲಿ  ” ಮಹಾಗೋಡೆ ” ಎಂದು ಜನಜನಿತವಾದರು..ದ್ರಾವಿಡ್ ಕ್ರೀಸ್ ಗೆ ಕಚ್ಚಿನಿಂತರೆ ಬೌಲರ್ ಗಳು ಬಸವಳಿದು ಬೆಂಡಾಗುತ್ತಿದ್ದರು. ಭಾರತ ತಂಡದ ನಾಯಕರಾಗಿಯೂ ಯಶಸ್ವಿಯಾದ ರಾಹುಲ್ ನಿರಂತರ ಮಿನುಗುವ ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿದ ರಾಹುಲ್ 2007 ರ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುವಲ್ಲಿ ಎಡವಿದರು.. ಅಸಂಘಟಿತ ತಂಡದಿಂದ ಆ ವಿಶ್ವಕಪ್ ನಲ್ಲಿ ಭಾರತ ಸೋತಿತು. ನಂತರ ಸತತ ಮೂರು ಟೆಸ್ಟ್ ಸರಣಿಯ ಗೆಲುವಿನ ನಂತರವೂ 2011-12 ರಲ್ಲಿ ನಡೆದ ಟೆಸ್ಟ್ ಸರಣಿಯ ಸೋಲಿಗೆ ಕೇವಲ ದ್ರಾವಿಡ್ ರೊಬ್ಬರನ್ನೇ ಗುರಿ ಮಾಡಲಾಯಿತು. ಪರಿಣಾಮ ಜನವರಿ 24 ರಂದು ಆಸ್ಟ್ರೇಲಿಯಾದ ವಿರುದ್ಧ ನಡೆದ ಟೆಸ್ಟ್ ದ್ರಾವಿಡ್ ಕ್ರಿಕೆಟ್ ವ್ರತ್ತಿಬದುಕಿನ ಕೊನೆಯ ಪಂದ್ಯವಾಯಿತು. ತನ್ನ ಹದಿನಾರು ವರ್ಷದ ಸುದೀರ್ಘ ಟೆಸ್ಟ್ ಹಾಗು ಏಕದಿನ ಕ್ರಿಕೆಟ್ ಎರಡೂ ಸೇರಿ 508 ಪಂದ್ಯ ಆಡಿ 24,177 ರನ್ ಗಳಿಸಿದ ದ್ರಾವಿಡ್ 48 ಶತಕ,146 ಅರ್ಧಶತಕ ಭಾರಿಸಿದ್ದರು.

ದ್ರಾವಿಡ್ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅದರಲ್ಲಿ ಪ್ರಮುಖವಾಗಿ 1998ರಲ್ಲಿ ಅರ್ಜುನ ಪ್ರಶಸ್ತಿ ,2000ರಲ್ಲಿ ವಿಸ್ಡಮ್ ಕ್ರಿಕೇಟರ್ ಆಪ್ ದ ಇಯರ್ ಪ್ರಶಸ್ತಿ, 2004ರಲ್ಲಿ ಪದ್ಮಶ್ರೀ, ಟೆಸ್ಟ್ ಪ್ಲೇಯರ್‌ ಆಪ್ ದಿ ಇಯರ್,ಗ್ಯಾರಿಪೀಲ್ಡ ಸೋಬರ್ಸ ಟ್ರೋಫಿ,2013ರಲ್ಲಿ ಪದ್ಮಭೂಷಣ ಪ್ರಶಸ್ತಿ,2014ರಲ್ಲಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಯನ್ನು ಪಡೆದಿದ್ದಾರೆ.

ಇವಿಷ್ಟು ರಾಹುಲ್ ದ್ರಾವಿಡ್ ಎಂಬ ಕ್ರಿಕೆಟ್ ಆಟಗಾರನ ಸಾಧನೆಯ ಅಂಕಿ ಅಂಶ ಆದರೆ ದ್ರಾವಿಡ್ ಕೇವಲ ಅಂಕಿ ಅಂಶದ ಮೂಲಕ ನಮ್ಮ ಮನದೊಳಗೆ ನೆಲೆಸಿಲ್ಲ ಬದಲಾಗಿ ಸರಳತೆ ಮತ್ತು ಮಾನವೀಯತೆಯ ಮನುಷ್ಯನಾಗಿ ನಮ್ಮ ಮನದಲ್ಲಿ ನೆಲೆನಿಂತಿದ್ದಾರೆ.ಹಾಗಾದರೆ ಅಂತಹ ಕೆಲವು ಸನ್ನಿವೇಶದ ಕಡೆ ಗಮನ ಹರಿಸೋಣ ಬನ್ನಿ :

1. ಅಕ್ಷಯ್ ಧೋಕೆ ಎಂಬ ಯುವಕನೊಬ್ಬ ಬ್ಲಡ್ ಕಾನ್ಸರ್ ನಿಂದ ಬಳಲುತ್ತಿದ್ದ. ಆತನ ಸಮಸ್ಯೆ ಜಟಿಲಗೊಂಡಿದ್ದರಿಂದ  ಆತನನ್ನು ಆಸ್ಪತ್ರ್ಗೆ ಸೇರಿಸಲಾಗಿತ್ತು. ಆತನಿಗೆ  ದ್ರಾವಿಡ್ ಎಂದರೆ ತುಂಬಾ ಇಷ್ಟವಾಗಿತ್ತು. ಅಕ್ಷಯ್ ನ ಗೆಳೆಯರೆಲ್ಲ ಸೇರಿ ಹೇಗಾದರೂ ಮಾಡಿ ದ್ರಾವಿಡ್ ಅವರನ್ನು ಸಂಪರ್ಕಿಸಲು ಪ್ರಯತ್ನಪಟ್ಟರು ಆದರೆ ಅವರಿಗೂ ಭರವಸೆ ಇರಲಿಲ್ಲ. ಅಕ್ಷಯ್ ತನ್ನ ಕೊನೆಯಾಸೆಯೇನಾದರೂ ಇದ್ದರೆ ಅದು ದ್ರಾವಿಡ್ ನನ್ನು ನೋಡಬೇಕು ಎಂಬುದು ಎಂದು ಹೇಳಿದಾಗಲೆಲ್ಲ ಗೆಳೆಯರಿಗೆ ಹೇಗಾದರೂ ದ್ರಾವಿಡ್ ನನ್ನು ಭೇಟಿ ಮಾಡಿಸಬೇಕೆಂಬ ಛಲ ಬರುತಿತ್ತು ಆದರೆ ಇದು ಅಸಾಧ್ಯ ಎಂದೂ ಅನ್ನಿಸುತಿತ್ತು. ಹಾಗಾಗಿಯೂ ಅವರೆಲ್ಲರೂ ದ್ರಾವಿಡ್ ರನ್ನು ಸಂಪರ್ಕಿಸುವ ಪ್ರಯತ್ನ ಜಾರಿಯಲ್ಲಿಟ್ಟರು. ಆ ಪ್ರಯತ್ನಗಳಲ್ಲಿ ಈ-ಮೈಲ್ ಕೂಡ ಒಂದಾಗಿತ್ತು. ದ್ರಾವಿಡ್ ಗೆ ವಿಷಯವನ್ನು  ಮೈಲ್  ಮಾಡಿ ಕೂತಿದ್ದ ಗೆಳೆಯರಿಗೊಂದು ಅಚ್ಚರಿ ಕಾದಿತ್ತು. ಸದಾ ಮೈಲ್ ಚೆಕ್ ಮಾಡುವ ಅಭ್ಯಾಸ ಹೊಂದಿದ್ದ ರಾಹುಲ್ ಈ ಮೈಲ್ ಅನ್ನು ನೋಡಿ ಅಕ್ಷಯ್ ಜೊತೆ ತಾನು ಮಾತಾಡುವುದಾಗಿ ಹೇಳಿದರು. ನಂತರ ಗೆಳೆಯರೆಲ್ಲ ಸೇರಿ SKYPE ನ ಮೂಲಕ ಅಕ್ಷಯ್ ಜೊತೆ ದ್ರಾವಿಡ್ ಮಾತಾಡುವಂತೆ ಮಾಡಿದರು.ದ್ರಾವಿಡ್ ಸುಮಾರು ಒಂದು ಗಂಟೆಗಳ ಕಾಲ ಅಕ್ಷಯ್ ಜೊತೆ SKYPE ಮೂಲಕ ಮಾತಾಡಿದರು.ಅಕ್ಷಯ್ ನ ಸಂತೋಷಕ್ಕೆ ಪಾರವೇ ಇರದ ಆ ಕ್ಷಣ ನೋಡಿ ಗೆಳೆಯರ ಮನಸ್ಸು ತುಂಬಿ ಬಂದಿತ್ತು

.

2. ಹಣ ಮತ್ತು ಹೆಣ್ಣಿನ ಹಿಂದೆ ಬಿದ್ದು ಕುಟುಂಬಬವನ್ನೂ ಬೀದಿಗೆ ತಂದು ನಿಲ್ಲಿಸಿರುವ ಅದೆಷ್ಟೋ ಯುವ ಕ್ರೀಡಾಪಟುಗಳಿರುವ ಈ ಕಾಲದಲ್ಲಿ ರಾಹುಲ್ ಎಂಬ ಪಕ್ಕ ಫ್ಯಾಮಿಲಿಮ್ಯಾನ್ ಎಲ್ಲರಿಗೂ ಮಾದರಿ ಆಗಿ ನಿಲ್ಲುತ್ತಾನೆ. ಹೌದು ರಾಹುಲ್ ಬಿಡುವಿನ ಸಮಯದಲ್ಲಿ ಮನೆಯಲ್ಲಿದ್ದರೆ ಅವರೇ ಸ್ವತಃ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತರುತ್ತಾರೆ. ಒಮ್ಮೆ ಶ್ರೀವಿದ್ಯ ರಾಮ್ ಎನ್ನುವವರು ತಮ್ಮ ಮಕ್ಕಳನ್ನು ಕರೆತರಲು ಸಂಜೆ ಶಾಲೆಗೆ ಹೋದಾಗ ಅಲ್ಲಿ ದ್ರಾವಿಡ್ ಅವರನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು ಆಮೇಲೆ ಸ್ವಲ್ಪ ದಿನದ ನಂತರ ಅವರಿಗೆ ತಿಳಿಯಿತು ರಾಹುಲ್ ದ್ರಾವಿಡ್ ಅವರ ಇಬ್ಬರು ಮುದ್ದಿನ ಮಕ್ಕಳನ್ನು ಮನೆಗೆ ಕರೆದೊಯ್ಯಲು ಅಲ್ಲಿಗೆ ಬರುತ್ತಾರೆ ಎಂದು. ತಾನು ಎಷ್ಟೇ ದೊಡ್ಡವನಾಗಿದ್ದರು ಮನೆಯವರನ್ನು,ಸಂಬಂಧಗಳನ್ನು ಗೌರವಿಸುವ ಮನೋಭಾವ ಇರಬೇಕು ಎನ್ನುವುದನ್ನು ದ್ರಾವಿಡ್ ರಿಂದ ಕಲಿಯಬೇಕು.

3. 2005 ರಲ್ಲಿ ಒಮ್ಮೆ ರಾಹುಲ್ ಭಾಸ್ಕರ್ ಎನ್ನುವ ವ್ಯಕ್ತಿಯೊಬ್ಬರು ಗ್ಯಾಸ್ ಕಂಪನಿಯ ಕಚೇರಿಗೆ ಹೋಗಿದ್ದರು ಅಲ್ಲಿ ಅವರು ರಾಹುಲ್ ದ್ರಾವಿಡ್ ಮತ್ತು ಅವರ ಹೆಂಡತಿಯನ್ನು ನೋಡಿದರು. ರಾಹುಲ್ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಅಲ್ಲಿಗೆ ಬಂದಿದ್ದರು.ರಾಹುಲ್ ತಮ್ಮ ಸಾಂಟ್ರೋ ಕಾರ್ ನಿಂದ ಇಳಿದು ಕಚೇರಿಯ ಕಡೆ ಹೊರಟಾಗ ಅಲ್ಲಿನ ಮ್ಯಾನೇಜರ್ ಆಶ್ಚರ್ಯಚಕಿತನಾಗಿ ಸರ್ ನಾವೇ ನಮ್ಮ ಕಂಪನಿಯ ವ್ಯಕ್ತಿಯನ್ನು ನಿಮ್ಮ ಮನೆಗೆ ಕಳುಹಿಸುತ್ತೇವೆ ನೀವು ಹೋಗಿ ಅಂದರೂ ಕೇಳದ ರಾಹುಲ್ ಬಂದ ಕೆಲಸವನ್ನು ಮುಗಿಸಿಯೇ ಹೊರಟರು. ಆಮ್ ಆದ್ಮಿ ತಾನು ಎಂಬುದನ್ನೂ ಮತ್ತೆ ಸಾಬೀತು ಮಾಡಿದ್ದರು.

4. ಕ್ರಿಕೆಟ್’ನ ಉತ್ತುಂಗದಲ್ಲಿದ್ದಾಗಲೂ ತಲೆ ತಗ್ಗಿಸಿಯೇ ನಡೆಯುವ ಅಭ್ಯಾಸ ದ್ರಾವಿಡ್ ಅವರದ್ದಾಗಿತ್ತು. ಬಿಡುವಿದ್ದ ಸಮಯದಲ್ಲಿ  ಅಮ್ಮನಿಗೆ ಅಡಿಗೆ ಮಾಡುವುದರಲ್ಲಿ ಮತ್ತು ಮನೆಗೆ ಬಂದ ಅತಿಥಿಗಳನ್ನು ಉಪಚರಿಸುವಲ್ಲಿ ರಾಹುಲ್ ಸಹಾಯ ಮಾಡುತ್ತಿದ್ದರು.ಅವರ ಮನೆಯಲ್ಲಿ ಅಡಿಗೆ ಮಾಡಲು ಯಾವುದೇ ಕೆಲಸದವರಿರಲಿಲ್ಲ.

5.  ರಾಹುಲ್ ದ್ರಾವಿಡ್ ಆಟವಾಡುವಾಗ ಯಾವತ್ತೂ ತುಂಬಾ ಮಾತನಾಡಲು ಇಚ್ಚಿಸುವುದಿಲ್ಲ, ಅದು ಅಂತಾರಾಷ್ಟ್ರೀಯ ಪಂದ್ಯವೇ ಇರಲಿ ಅಥವಾ ಯಾವುದೋ ಕ್ಲಬ್ ತಂಡದಲ್ಲಿ ಆಡುತ್ತಿರುವ ಪಂದ್ಯವೇ ಆಗಲಿ . ಹಾಗಾಗಿಯೇ ನಮಗೆಲ್ಲ ಅವರು ತುಂಬಾ ಶಿಸ್ತಿನ ವ್ಯಕ್ತಿ ಅನ್ನಿಸುತ್ತದೆ. ಆದರೆ ದ್ರಾವಿಡ್ ಮಾತನಾಡದಿರಲು ಕಾರಣವೇನು ಗೊತ್ತೇ? ದ್ರಾವಿಡ್ ಎಲ್ಲರಿಂದಲೂ ಕಲಿಯಲು ಇಚ್ಚಿಸುತ್ತಾರೆ. ತಾನೇನಾದರೂ ಹೊಸದ್ನ್ನು ಕಲಿಯಬೇಕು ಎಂಬ ಆಸೆ ರಾಹುಲ್ ಗೆ ಯಾವತ್ತೂ ಜೀವಂತವಾಗಿದೆ.

6. ದ್ರಾವಿಡ್ ಗೆ ಕ್ರಿಕೆಟ್ ಆಡುವುದೊಂದೇ ಮೂಲ ಉದ್ದೇಶ,ಅದು ಅಂತಾರಾಷ್ಟ್ರೀಯ ಪಂದ್ಯವೇ ಇರಲಿ ಅಥವಾ ಸ್ಥಳೀಯ ಸಣ್ಣ ಮೈದಾನದಲ್ಲಿ ಆಡುತ್ತಿರುವ ಆಟವೆ ಆಗಿರಲಿ. ದ್ರಾವಿಡ್ 82 ಓವರ್ ನಿರಂತರವಾಗಿ ಕ್ರೀಡಾಂಗಣದಲ್ಲಿ ಇರಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ.ಆಟವನ್ನು ಹಣಕ್ಕಾಗಿ ಆಡದೆ ಕುಶಿಗಾಗಿ,ಕಲಿಯುವುದಕ್ಕಾಗಿ ಆದಿ ಜಯ ಕಂಡ ಆಟಗಾರ ರಾಹುಲ್ ದ್ರಾವಿಡ್. ಅಹಂಕಾರದ ಮಾತಾಡುತ್ತಾ, ತಾನು ಹೀರೋ ಎಂದು ಹಾರಾಡುವ ವ್ಯಕ್ತಿತ್ವ ರಾಹುಲ್ ದ್ರಾವಿಡ್ ಅವರದ್ದಲ್ಲ.

7. ರಾಹುಲ್ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಹೋದರೆ ಅಲ್ಲಿರುವ ವೈಟರ್ ಗಳಿಗೆ ತೊಂದರೆ ಕೊಡಲು ಇಚ್ಚಿಸುವುದಿಲ್ಲ ಅವರೇ ಸ್ವತಃ ಕೌಂಟರ್ ಗೆ ಹೋಗಿ ಬೇಕಾದ ತಿಂಡಿಯನ್ನು ಆರ್ಡರ್ ಮಾಡುತ್ತಾರೆ ಮತ್ತು ತನ್ನಿಂದ ಯಾರಿಗೂ ತೊಂದರೆ ಆಗಬಾರದೆಂಬ ಮನೋಭಾವ ಅವರದ್ದು.

8. ತನ್ನಿಂದ ಬೇರೆಯವರಿಗೆ ತೊಂದರೆ ಆಗಲು ಎಂದಿಗೂ ರಾಹುಲ್ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿ ಒಮ್ಮೆ ರಾಹುಲ್ ಎಕನಾಮಿಕ್ ಕ್ಲಾಸ್ ನಲ್ಲಿ ವಿಮಾನದಲ್ಲಿ ಹೊರಟಾಗ ಅಲ್ಲಿನ ಜನ ಇವರನ್ನು ಗುರುತಿಸಿ ಫೋಟೋ,ಆಟೋಗ್ರಾಫ್ ಎಂದು ಸುತ್ತುವರಿದಾಗ ರಾಹುಲ್ ಅವರನ್ನೆಲ್ಲ ಸಮಾಧಾನಿಸಿ ಸದ್ಯಕ್ಕೆ ಜನರಿಗೆ ತೊಂದರೆ ಮಾಡುವುದು ಬೇಡ ಕಾಳಿ ಜಾಗದಲ್ಲಿ ಫೋಟೋ ತೆಗ್ಗೆದುಕೊಳ್ಳಿ ಎಂದು ಹೇಳಿ ಅವರನ್ನು ಸಮಾಧಾನಿಸಿದರು.

ರಾಹುಲ್ ನ ಸರಳತೆಗೆ ಇವೆಲ್ಲ ಕೆಲವೇ ಕೆಲವು ಉದಾಹರಣೆಗಳು. ಸರಳತೆ ನಮ್ಮೊಳಗೆ ಹಾಸು ಹೊಕ್ಕದಾಗ ಮನುಷ್ಯನಾಗಲು ಸಾಧ್ಯ…

ಗೆಳೆಯರೇ ನಮ್ಮನ್ನು ಕೆಲವರು ಅತೀವವಾಗಿ ಆವರಿಸುತ್ತಾರೆ ಅಲ್ಲವೇ?, ಅವರ ವ್ಯಕ್ತಿತ್ವ ನಮ್ಮನು ಬದಲಾಯಿಸುತ್ತದೆ. ವ್ರತ್ತಿಯಲ್ಲಿ ಉತ್ತುಂಗಕ್ಕೇರಿ ಸಮಾಜದಲ್ಲಿ ಮುಗ್ಗರಿಸಿ ಬಿದ್ದ ಅದೆಷ್ಟೋ ಕ್ರೀಡಾ ಪಟುಗಳಲ್ಲಿ ರಾಹುಲ್ ದ್ರಾವಿಡ್ ಭಿನ್ನ ಎನ್ನಿಸುತ್ತಾರೆ. ಇವತ್ತು 43 ನೇ ವಸಂತಕ್ಕೆ ಕಾಲಿಟ್ಟ ಪ್ರೀತಿಯ “ಜ್ಯಾಮಿ” ಗೆ ಜನ್ಮದಿನದ ಹಾರ್ದಿಕ ಶುಭಾಶಯ ಕೋರುತ್ತಾ. 19 ವರ್ಷದೊಳಗಿನವರ ಭಾರತ ತಂಡದ ಕೋಚ್ ಆಗಿರುವ ನಿನಗೆ ಯಶಸ್ಸು ಸಿಗುತ್ತಲೇ ಇರಲಿ….

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!