ಅಂಕಣ

ವಿಶ್ವೇಶರಿಗೆ ವಿಶ್ವೇಶರೇ ಪರ್ಯಾಯ!

ಉಡುಪಿಯ ಕೃಷ್ಣಮಠದ ಎದುರು ದೊಡ್ಡ ಗೋಪುರವೊಂದನ್ನು ನಿರ್ಮಿಸುವ ಕೆಲಸಕ್ಕೆ ಅದಮಾರು ಶ್ರೀಗಳು ಕೈಹಾಕಿದ್ದರು. ಅದು ಹೇಗೋ ಕನಕದಾಸರ ವಿಷಯಕ್ಕೆ ತಳುಕು ಹಾಕಿಕೊಂಡು ವಿವಾದ ಸೃಷ್ಟಿಯಾಗಿತ್ತು. ಕುರುಬ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡ ರಾಜಕೀಯ ನಾಯಕರೊಬ್ಬರು “ಪೇಜಾವರರು ಇದನ್ನು ಕೂಡಲೇ ಕೈಬಿಡಬೇಕು” ಎಂದು ಹುಕುಂ ಜಾರಿಮಾಡಿದರು. ಅದುವರೆಗೆ ವಿವಾದದಿಂದ ದೂರವಿದ್ದ ಪೇಜಾವರ ಶ್ರೀಗಳು ಆ ರಾಜಕೀಯ ನಾಯಕರಿಗೆ, “ಈ ಗೋಪುರದ ನಿರ್ಮಾಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನನ್ನೇಕೆ ಈ ವಿಷಯದಲ್ಲಿ ಎಳೆದಾಡುತ್ತೀರಿ?” ಎಂದು ಕೇಳಿದರು. ಆಗ ಆ ನಾಯಕ ಹೇಳಿದರಂತೆ: “ನೋಡಿ, ನಮಗೆ ಉಡುಪಿ ಅಂದರೆ ಪೇಜಾವರ, ಪೇಜಾವರ ಅಂದರೆ ಉಡುಪಿ. ಹಾಗಾಗಿ ಉಡುಪಿಯ ಯಾವುದೇ ಸಮಸ್ಯೆಗಳಿದ್ದರೂ ನಾವು ನಿಮ್ಮನ್ನೇ ಕೇಳುತ್ತೇವೆ. ನಮ್ಮ ತೆಗಳಿಕೆ ಹೊಗಳಿಕೆ ಏನಿದ್ದರೂ ನಿಮಗೇ ಮೀಸಲು”. ಪೇಜಾವರರು ಏನೇ ಮಾತಾಡಿದರೂ ಅದನ್ನು ವಿವಾದವೆಂದೇ ಬಿಂಬಿಸುವ ಒಂದಷ್ಟು ಜನ ಇದ್ದಾರೆ. ” ಅಮವಾಸ್ಯೆ ದಿನ ಚಂದ್ರ ಕಾಣಿಸುವುದಿಲ್ಲ” ಎಂದು ಶ್ರೀಗಳು ಹೇಳಿದರೆ, “ಅಮವಾಸ್ಯೆಗೆ ಚಂದ್ರ ಕಾಣಿಸಬಾರದೆಂದು ಹೇಳಲು ಪೇಜಾವರ ಯಾರು?” ಎನ್ನುತ್ತ ಯುದ್ಧಕ್ಕೆ ಬರುವ ದೊಡ್ಡ ಗುಂಪೇ ಇದೆ!

“ಬ್ರಾಹ್ಮಣನಾಗಿ ಆಧುನಿಕತೆಗೆ ಆತುಕೊಂಡ ಅನಂತಮೂರ್ತಿಯವರಿಗೆ ಆಧುನಿಕನಾದರೂ ಬ್ರಾಹ್ಮಣ್ಯಕ್ಕೆ ಆತುಕೊಂಡ ಪೇಜಾವರ ಶ್ರೀಗಳ ಜೊತೆ ಒಳ್ಳೆಯ ಒಡನಾಟ ಇತ್ತು. ಯಾರಿಗೆ ಗೊತ್ತು, ಅವರಿಬ್ಬರೂ ದೊಡ್ಡದೊಂದು ವ್ಯವಸ್ಥೆಯ ಯುಗ್ಮದೆರಡು ತುದಿಗಳೋ ಏನೋ” ಎಂದು ನಾನು ಹಿಂದೊಮ್ಮೆ ಬರೆದಿದ್ದೆ. ಪೇಜಾವರರು ಆಧುನಿಕರು. ಆದರೆ ತನ್ನ ಸನ್ಯಾಸ ಜೀವನದಿಂದ ಒಂದಿಷ್ಟೂ ಅತ್ತಿತ್ತ ನಡೆಯಲಾರರು. ಇಂದಿಗೂ ಅವರು ಕೃಶದೇಹಿ. ತನ್ನ ಶಿಷ್ಯರಿಗಂತೂ ಹೂವಿನ ದಂಡೆಯಷ್ಟೇ ಹಗುರ. ನೆಲದ ಮೇಲೆ ಮಲಗುವುದರಲ್ಲಿ; ಇಪ್ಪತ್ತೊಂದು ತುತ್ತಿಗಿಂತ ಹೆಚ್ಚಿನದನ್ನು ಉಣ್ಣದಿರುವುದರಲ್ಲಿ; ಪ್ರತಿದಿನದ ಯೋಗ ಪ್ರಾಣಾಯಾಮಗಳ ಅಭ್ಯಾಸದಲ್ಲಿ; ನಿತ್ಯ ಕರ್ಮಾನುಷ್ಠಾನದಲ್ಲಿ; ದೇವರ ಪೂಜೆಯಲ್ಲಿ; ಧರ್ಮಪ್ರಸಾರದಲ್ಲಿ ಕಿಂಚಿದೂನವೂ ಬರದಂತೆ ಸನ್ಯಾಸಾಶ್ರಮವನ್ನು ಅಪ್ಪಿಕೊಂಡ ಜೀವ-ಮನಸ್ಸು-ಬುದ್ಧಿ ಅವರದ್ದು. ಪೇಜಾವರರು ಬೌದ್ಧನಾಗಿ ಹುಟ್ಟಿದ್ದರೆ ಅತ್ಯುತ್ತಮ ಬುದ್ಧ ಸಂನ್ಯಾಸಿಯಾಗುತ್ತಿದ್ದರು. ಕ್ರಿಶ್ಚಿಯನ್ ಆಗಿ ಹುಟ್ಟಿದ್ದರೆ ಅತ್ಯಂತ ಪರಿಶುದ್ಧ ಹೃದಯದ ಪಾದರಿಯಾಗುತ್ತಿದ್ದರು. ಇಂಜಿನಿಯರಾಗಿದ್ದರೆ ಮತ್ತೊಬ್ಬ ವಿಶ್ವೇಶ್ವರಯ್ಯನಾಗುತ್ತಿದ್ದರು. ಒಬ್ಬ ಗಣಿತಜ್ಞನಾಗಿದ್ದರೆ ಶುದ್ಧ ಗಣಿತದಲ್ಲಿ ಹಲವು ಸಾಧನೆಗಳನ್ನು ಮಾಡುತ್ತಿದ್ದರು. ಯಾಕೆಂದರೆ ತಾನೇನು ಆಗುತ್ತೇನೆಯೋ ಅದಕ್ಕೆ ನೂರಕ್ಕೆ ನೂರರಷ್ಟು ಬುದ್ಧಿ-ಮನಸ್ಸುಗಳನ್ನು ಸಮರ್ಪಿಸಿಕೊಳ್ಳುವ ಶಕ್ತಿ ಅವರಿಗೆ ಸಿದ್ಧಿಸಿದೆ. ಇಂಥ ಕರ್ಮನಿಷ್ಠೆ ಇರುವ ಯಾವುದೇ ವ್ಯಕ್ತಿ ಪೇಜಾವರರಂತೆ ಸಾಧಕನಾಗಲು ಸಾಧ್ಯ ಎಂದು ನನಗೆ ಯಾವತ್ತೂ ಅನ್ನಿಸಿದೆ. ಇದಕ್ಕೆ ಪೂರಕವೆನ್ನುವಂಥ ಒಂದು ಕತೆಯನ್ನು ವಿದ್ಯಾಪೀಠದ ವಿದ್ಯಾರ್ಥಿಗಳು ಹೇಳುತ್ತಾರೆ. ಅಲ್ಲಿ ಹನ್ನೆರಡನೆ ಮತ್ತು ಅಂತಿಮ ವರ್ಷದ ಸುಧಾ ಪಾಠಗಳನ್ನು ಮಾಡುವವರು ಪೇಜಾವರ ಶ್ರೀಗಳು. ಆದರೆ ತರಗತಿಗೆ ಕೂತಾಗ ಹಲವು ಹತ್ತು ಫೋನ್ ಕರೆಗಳನ್ನೂ ಸ್ವೀಕರಿಸಬೇಕಾಗುತ್ತದೆ. ರಾಷ್ಟ್ರ ನಾಯಕರ ಜೊತೆ ಸರಾಗವಾಗಿ ವ್ಯವಹರಿಸುವ ಶ್ರೀಗಳು ಕೆಲವೊಮ್ಮೆ ಹಲವು ನಿಮಿಷಗಳನ್ನು ಈ ಸಂಭಾಷಣೆಗಾಗಿ ಮೀಸಲಿಡಬೇಕಾದರೂ ಮರಳಿ ವಿದ್ಯಾರ್ಥಿಗಳ ಸಮ್ಮುಖಕ್ಕೆ ಬಂದಾಗ, ತಾವು ಯಾವ ಶ್ಲೋಕದ ಯಾವ ಪದದಲ್ಲಿ ನಿಲ್ಲಿಸಿದ್ದರೋ ಕರಾರುವಾಕ್ಕಾಗಿ ಅಲ್ಲಿಂದಲೇ ಶುರುಮಾಡುವ ವಿಚಿತ್ರವನ್ನು ವಿದ್ಯಾರ್ಥಿಗಳು ಕಂಡಿದ್ದಾರೆ. ಇಂಥ ಸ್ಮರಣಶಕ್ತಿಯನ್ನು ಸಂಪತ್ತೆನ್ನುವಂತೆ ಪೇಜಾವರರು ಕಾಯ್ದುಕೊಂಡು ಬಂದಿದ್ದಾರೆ.

ಸ್ವಾಮಿಯಾಗಿ ಕಾವಿ ಧರಿಸುವವರನ್ನು ದ್ವಿಜ (ಎರಡು ಬಾರಿ ಹುಟ್ಟಿದವರು) ಎನ್ನುತ್ತೇವೆ. ಯಾಕೆಂದರೆ, ಸ್ವಾಮಿಯಾಗ ಹೊರಟವರು ತಮ್ಮ ಪೂರ್ವಾಶ್ರಮದ ಹೆಸರು, ಹೆತ್ತವರ ಜೊತೆಗಿನ ಸಂಬಂಧ, ಬಂಧು ಬಾಂಧವರ ಸ್ನೇಹ ಈ ಎಲ್ಲವನ್ನೂ ಬಿಟ್ಟು ಬರಬೇಕು. ಅಲ್ಲದೆ ಬದುಕಿರುವ ಹೆತ್ತವರಿಗೆ ಶ್ರಾದ್ಧವನ್ನೂ ಮಾಡಿ, ತನ್ನದನ್ನೂ ಪೂರೈಯಿಸಿಕೊಂಡು ನಂತರ ಸಂನ್ಯಾಸ ಜೀವನಕ್ಕೆ ಅಡಿಯಿಡಬೇಕಾಗುತ್ತದೆ. ಏಳೆಂಟರ ಎಳೆವಯಸ್ಸಿಗೆ ಅವೆಲ್ಲ ಏನು ಎಂಬುದಾದರೂ ತಿಳಿಯುತ್ತದೋ ಇಲ್ಲವೋ. ವಿಶ್ವೇಶರು ಅವೆಲ್ಲವನ್ನು ಮಾಡಿದರೇನೋ ಹೌದು; ಆದರೆ ತನ್ನ ತಾಯಿಯ ಜೊತೆ ಕೊನೆಯವರೆಗೂ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಂಡರು. ಸ್ವಾಮಿಯಾಗಿ ಹಲವು ವರ್ಷಗಳ ನಂತರ ಒಮ್ಮೆ ಬದರಿಗೆ ಹೋಗಿದ್ದಾಗ ಅವರು ತನ್ನ ತಾಯಿಯನ್ನು ಕರೆದರಂತೆ. ತಾಯಿಗೋ ಆಗ ಇಳಿವಯಸ್ಸು. ಆದರೂ ಮಗ ಕರೆದಾಗ, ಅದೂ ಬದರಿಗೆ, ಇಲ್ಲವೆನ್ನೋಣವೇ? ತಾಯಿ ಹೊರಟೇ ಹೊರಟರು. ಇಡೀ ಪ್ರಯಾಣವನ್ನು ತನ್ನ ಮಗನೊಂದಿಗೆ ಮಾಡಿ ಮುಗಿಸಿದ ತೃಪ್ತಿಯ ಕಣ್ಣೀರು ತಾಯಿಗೆ. ತಾಯಿಯನ್ನು ಖುಷಿ ಪಡಿಸುವ ಒಂದು ಕೆಲಸವನ್ನು ಮಗನಾಗಿ ನಿಭಾಯಿಸಿ ಬಿಟ್ಟೆನಲ್ಲ ಎಂಬ ಆನಂದಭಾಷ್ಪ ವಿಶ್ವೇಶರಿಗೆ. ಇಂಥದೊಂದು ಕರುಳ ಸಂಬಂಧ ವಿವೇಕಾನಂದರಿಗೂ ತನ್ನ ತಾಯಿಯ ಜೊತೆಗಿತ್ತು. ಸಂನ್ಯಾಸಿಯಾಗಿ ರಾಮಕೃಷ್ಣರಿಂದ ದೀಕ್ಷೆ ಪಡೆದ ಮೇಲೂ ವಿವೇಕಾನಂದರು ತನ್ನ ತಾಯಿಯ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಸಂಬಂಧಿಕರ ಜೊತೆಗೆ ಕೋರ್ಟಿನ ವ್ಯಾಜ್ಯ ಹೋರಾಡುತ್ತಿದ್ದ ಆಕೆಗೆ ತನ್ನ ಬದುಕಿನ ಕೊನೆಯವರೆಗೂ ನೈತಿಕ ಬೆಂಬಲ ಕೊಡುತ್ತಿದ್ದರು. ಈತ ಅಮೆರಿಕಕ್ಕೆ ಹೋಗಿ ಸುಳ್ಳು ಧರ್ಮಪ್ರಚಾರ ಮಾಡುತ್ತಿದ್ದಾನೆ ಎಂಬ ಅಪಪ್ರಚಾರವಾದಾಗ ಅವರು ತನ್ನ ಅಮೆರಿಕದ ಶಿಷ್ಯನೊಬ್ಬನಿಗೆ ಬರೆದ ಪತ್ರದಲ್ಲಿ ಹೇಳಿದ ಮಾತು ಹೀಗಿತ್ತು: “ನನಗೊಬ್ಬಳು ತಾಯಿ ಇದ್ದಾಳೆ. ವಯಸ್ಸಾದ, ಹಲವು ಖಾಯಿಲೆಗಳಿಂದ ಜರ್ಝರಿತಳಾದ ಮಹಾಮಾತೆ ಆಕೆ. ಆದರೆ ಆ ಖಾಯಿಲೆ ಮತ್ತು ವೃದ್ಧಾಪ್ಯದಿಂದ ಆಗುವ ನೋವಿಗಿಂತ ಹೆಚ್ಚಿನದನ್ನು ಆಕೆ ತನ್ನ ಮಗ ಸುಳ್ಳು ಹೇಳಿದರೆ ಅನುಭವಿಸುವವಳು. ಅವಳಿಗೆ ಅಂಥ ನೋವು ಕೊಡುವ ಕೆಲಸವನ್ನು ನಾನೆಂದೂ ಮಾಡಿಲ್ಲ”. ತಾಯಿ ಎಂಬ ಮಮತೆಯೆದುರು ಸಂನ್ಯಾಸಾಶ್ರಮವೂ ಕೈಕಟ್ಟಿ ನಿಲ್ಲಬೇಕು ತಾನೆ!

ವಿಶ್ವೇಶರು ತನ್ನ ಮಾತೃ ಸಂಬಂಧದಂತೆಯೇ ಇದುವರೆಗೆ ಕಡಿದುಕೊಳ್ಳದೆ ಉಳಿಸಿ ಬೆಳೆಸಿರುವ ಇನ್ನೊಂದು ಬಾಂಧವ್ಯ ಹುಟ್ಟೂರಿನ ಜೊತೆಗಿನದ್ದು. ಅವರು ಹುಟ್ಟಿದ್ದು ಪುತ್ತೂರಿನ ಬಳಿಯ ರಾಮಕುಂಜ ಎಂಬ ಹಳ್ಳಿಯಲ್ಲಿ. ಅಲ್ಲಿನ ದೇವಸ್ಥಾನದ ಹಜಾರದಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿ ಹುಡುಗನಾಗಿದ್ದಾಗ ಒಂದೆರಡು ಕ್ಲಾಸು ಓದಿದ್ದುಂಟು. ಎಂಟನೇ ವಯಸ್ಸಿಗೇ ಸ್ವಾಮಿಯಾಗಿ ಉಡುಪಿಗೆ ಹೋಗಬೇಕಾಗಿ ಬಂದದ್ದರಿಂದ ಊರಿನ ಋಣ ಹರಿಯಬೇಕಾಗಿತ್ತು. ಆದರೆ, ವಿಶ್ವೇಶರು ತಾನು ಹುಟ್ಟಿ ಆಡುತ್ತ ಬೆಳೆದ ಈ ಹಳ್ಳಿಯಲ್ಲಿ ಒಂದು ಸುಸಜ್ಜಿತ ಶಾಲೆ ಕಟ್ಟಿ ತನ್ನ ಹುಟ್ಟೂರಿನ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಹುಡುಗರು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಪ್ರತಿವರ್ಷ ಶಾಲೆಯ ವಾರ್ಷಿಕೋತ್ಸವದ ದಿನವನ್ನು ನಿಗದಿ ಪಡಿಸುವುದು ಸ್ವಾಮಿಗಳೇ! ಆ ದಿನ ಅದೆಂತದೇ ಇರಲಿ, ಎಷ್ಟು ಕೆಲಸದೊತ್ತಡಗಳೇ ಇರಲಿ, ಅವರು ತನ್ನ ಆ ಶಾಲೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಈ ವರ್ಷವೂ ಅಷ್ಟೆ; ಪರ್ಯಾಯಕ್ಕೆ ಕೇವಲ ಒಂದು ವಾರವಿದ್ದಾಗ ಎಲ್ಲ ಹೊರೆಗಳನ್ನೂ ಒಂದಷ್ಟು ಹೊತ್ತು ಪಕ್ಕಕ್ಕಿಟ್ಟು ಶ್ರೀಗಳು ರಾಮಕುಂಜದ ತನ್ನ ಶಾಲೆಯಲ್ಲಿ ಓಡಾಡುತ್ತಿದ್ದರು, ವಾರ್ಷಿಕೋತ್ಸವದ ಸಂಭ್ರಮದಲ್ಲಿ!

ಪೇಜಾವರರು ಗುರು ವಿಶ್ವಮಾನ್ಯ ತೀರ್ಥರಿಂದ ದೀಕ್ಷೆ ಪಡೆದದ್ದು ಹಂಪೆಯ ಚಕ್ರತೀರ್ಥದಲ್ಲಿ. ವೆಂಕಟರಮಣ ಎಂಬ, ಜೀವಕ್ಕಿಂತ ಉದ್ದದ ಹೆಸರು ಕಳಚಿ ಬಿದ್ದು ವಿಶ್ವೇಶನೆಂಬ ಪುಟ್ಟ ಹೆಸರು ಏಳರ ಹುಡುಗನಿಗೆ ಅಂಟಿಕೊಂಡಿತು. ಮಠವೊಂದರ ಉತ್ತರಾಧಿಕಾರಿಯಾಗಿದ್ದೇನೆಂಬ ಆಲೋಚನೆಯೂ ಇಲ್ಲದ ಮುಗ್ಧಮನಸ್ಸದು. ಗಂಟಾಮಣಿ ಹಿಡಿದ ಕೈಯನ್ನು ಗಾಳಿಯಲ್ಲಿ ಸೊನ್ನೆ ಬರೆಯದಂತೆ ನಿಲ್ಲಿಸಿ ಬಲಗೈಯಲ್ಲಿ ಆರತಿ ಎತ್ತುವುದೇ ಮಹತ್ಸಾದನೆ ಅನ್ನಿಸುವ ವಯಸ್ಸು. ಅಂಥದೊಂದು ಮಗುವಿನ ಮುಗ್ಧತೆಯನ್ನು ಪೇಜಾವರರು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು. ಅನಂತಮೂರ್ತಿಗಳಂತೆಯೇ ವಿಶ್ವೇಶತೀರ್ಥರೂ ಗಾಂಧೀಜಿಯ ತತ್ವ-ಚಿಂತನೆಗಳಿಗೆ ಮಾರುಹೋದರು. ಪಟ್ಟೆ-ಪೀತಾಂಬರಗಳನ್ನು ಎಂದೂ ಉಡುವುದಿಲ್ಲ ಎಂಬ ಸಂಕಲ್ಪವನ್ನೂ ಕೈಗೊಂಡರು. ಹರಿಜನರ ಉದ್ಧಾರ ಮಾಡುವ ನಿಶ್ಚಯ ಮಾಡಿದರು. ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದಾಗ, ಎಲ್ಲರಿಗಿಂತ ಮೊದಲು ಮಠದ ಹೊಲಗದ್ದೆಗಳನ್ನು ಬಿಟ್ಟುಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟರು. ನೀನಾಸಂ ತಿರುಗಾಟದ ಮಂದಿ ಉಡುಪಿಗೆ ಬಂದಾಗೆಲ್ಲ ಪೇಜಾವರ ಮಠದ ಅತಿಥಿಗೃಹದಲ್ಲಿ ಉಳಿದುಕೊಳ್ಳುತ್ತಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಬೇರೆ; ಆತ್ಮೀಯತೆ ಬೇರೆ. ಎರಡನ್ನೂ ತಳುಕು ಹಾಕಿಕೊಂಡು ಸುಖಾಸುಮ್ಮನೆ ವೈರತ್ವ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ ಎನ್ನುವುದು ಪೇಜಾವರರ ನಿಲುವು. ಹಾಗಾಗಿ ಸ್ನೇಹ ವಲಯದಲ್ಲಿದ್ದೂ ತನ್ನನ್ನು ಬಯ್ಯುವ ಸ್ವಾತಂತ್ರ್ಯವನ್ನು ಅವರು ಹಲವರಿಗೆ ಉದಾರವಾಗಿ ಕೊಟ್ಟಿದ್ದಾರೆ. ಪೇಜಾವರರ ಸ್ನೇಹ ಎಂಬುದು ಧೃತರಾಷ್ಟ್ರ ಆಲಿಂಗನದಂತೆ ಎಂದು ರಾಜಾಂಗಣದ ವೇದಿಕೆಯಲ್ಲಿ ಹೇಳಿ, ಭಾಷಣ ಮುಗಿಸಿದ ಬಳಿಕ ಅದೇ ಪೇಜಾವರರಿಂದ ಹಾರ-ತುರಾಯಿಗಳ ಸನ್ಮಾನ ಮಾಡಿಸಿಕೊಂಡು ಹೋದ ಕನ್ನಡದ ಬುದ್ಧಿಜೀವಿ ಸಾಹಿತಿಗಳ ಪಟ್ಟಿ ಬಲು ದೊಡ್ಡದು!

ಇವರು ರಾಜಕೀಯ ಸ್ವಾಮಿ ಎಂಬ ದೊಡ್ಡ ಹುಯಿಲು ಹಲವು ವರ್ಷಗಳಿಂದ ಇದೆ. ಅದಕ್ಕೆ ಒಂದು ಕಾರಣ, ಹಲವು ರಾಜಕೀಯ ನಾಯಕರು ವಿಶ್ವೇಶರ ಜತೆ ಬಹಳ ಆತ್ಮೀಯವಾಗಿ ವ್ಯವಹರಿಸುತ್ತಾರೆ ಎಂಬುದು. ಅಡ್ವಾಣಿ, ವಾಜಪೇಯಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ, ಪ್ರಮೋದ್ ಮಹಾಜನ್ ಮುಂತಾದ ಆ ಕಾಲದ ಘಟಾನುಘಟಿಗಳೆಲ್ಲ ವಿಶ್ವೇಶರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು. ಬಿಜೆಪಿಯ ಬೆಂಕಿಚೆಂಡು ಎಂದೇ ಖ್ಯಾತವಾದ ಉಮಾಭಾರತಿ ಪೇಜಾವರ ಶ್ರೀಗಳಿಂದ ದೀಕ್ಷೆ ಪಡೆದ ಸಂನ್ಯಾಸಿನಿ. ವಿಶ್ವ ಹಿಂದೂ ಪರಿಷತ್ತಿನ ಉನ್ನತ ಮಟ್ಟದ ನಾಯಕರ ಸಾಲಿನಲ್ಲಿ ಕೂರಬಲ್ಲ; ಆರೆಸ್ಸೆಸ್’ನ ಸರಸಂಘಚಾಲಕರನ್ನೂ ಅಂತರಂಗಕ್ಕೆ ಕರೆದು ಚರ್ಚಿಸಬಲ್ಲ ಸ್ವಾಮಿ ಎಂಬುದು ಪೇಜಾವರರ ಹೆಗ್ಗಳಿಕೆ. ಈ ಕೇಸರಿ ಬಣದ ಸಂಘಸಂಸ್ಥೆಗಳ ಮೇಲೆ ನಿರಂತರವಾಗಿ ನಂಜು ಉಗುಳುವ ಬುದ್ಧಿಜೀವಿಗಳಿಗೆ ಅಲ್ಲೆಲ್ಲ ಎದ್ದು ಕಾಣುವ ಹೆಸರು ಪೇಜಾವರರದ್ದು. ಹಾಗಾಗಿ ಅವರ ಮೇಲೆ ಸದಾ ಟೀಕೆಯ ಸುರಿಮಳೆ! ವಿರೋಧಿಗಳು ಆಡಿಕೊಂಡರೆಂದು ಹರೇ ಕೃಷ್ಣ ಎನ್ನುತ್ತ ಸುಮ್ಮನಾಗುವ ಜಾಯಮಾನವೂ ಪೇಜಾವರರದ್ದಲ್ಲ! ಎಲ್ಲಿ ವಿವಾದಗಳೋ ಅಲ್ಲಿ ಇವರಿದ್ದಾರೆ. ಇವರಿದ್ದಲ್ಲಿ ಮಾಧ್ಯಮದ ಮಿತ್ರರ ಮೈಕು, ಕ್ಯಾಮರಗಳಿವೆ. ಇಷ್ಟೆಲ್ಲ ಒಟ್ಟು ಸೇರಿದ ಮೇಲೆ ಮತ್ತಷ್ಟು ವಿವಾದಗಳು ಹುಟ್ಟುತ್ತವೆ. “ನಾನು ಹಿಂದೂ ಧರ್ಮದ ಪೀಠಾಧಿಪತಿ. ಹಿಂದೂ ಧರ್ಮಕ್ಕೆ ಎಲ್ಲಿ ಕಂಟಕ ಒದಗುತ್ತದೋ ಆಗ ಅಲ್ಲಿದ್ದು ನನ್ನವರನ್ನು ಕಾಪಾಡುವ, ಮಾರ್ಗದರ್ಶನ ಮಾಡುವ ಜವಾಬ್ದಾರಿ ನನ್ನದು” ಎಂಬ ವಿಶ್ವೇಶರದ್ದು ವಿಶ್ವದೃಷ್ಟಿ. ಗರ್ಭಗುಡಿಯಲ್ಲಿ ಮಾತ್ರವಲ್ಲ ಜನತೆಯಲ್ಲೂ ಜನಾರ್ದನನಿದ್ದಾನೆ ಎನ್ನುವವರು ಅವರು. ಸಂಪ್ರದಾಯಬದ್ಧನಾಗಿ, ಲೋಕದ ಹೊಣೆಗಾರಿಕೆಗಳಿಗೆ ಸಿದ್ಧನಾಗಿ ಎರಡೂ ಕಡೆಯೂ ಸಲ್ಲುವಂತೆ ತನ್ನನ್ನು ಒಡ್ಡಿಕೊಳ್ಳುವುದು ಹಗ್ಗದ ಮೇಲಿನ ನಡಿಗೆ.

ವಿಶ್ವೇಶ ತೀರ್ಥರು ಮಾತು ಬಲ್ಲವರು. ಭಾಷೆಯ ಆಳ-ಅಗಲಗಳನ್ನು ಬಲ್ಲವರಾದ್ದರಿಂದ ಅಳೆದುತೂಗಿ ಆಡಬಲ್ಲರು. 1943ರಲ್ಲಿ ಭಂಡಾರಕೇರಿಯಲ್ಲಿ ನಡೆದ ವಿದ್ವತ್’ಸಭೆಯ ಅಧ್ಯಕ್ಷತೆ ವಹಿಸಿದಾಗ ಸ್ವಾಮಿಗಳಿಗೆ ಕೇವಲ ಹನ್ನೆರಡರ ಹರೆಯ! ಅಲ್ಲಿಂದ ಮುಂದಕ್ಕೆ ತರ್ಕ-ಮೀಮಾಂಸೆಗಳ ಚರ್ಚೆಯಲ್ಲಿ ಪದೇಪದೇ ಭಾಗವಹಿಸುತ್ತ ತನ್ನ ವಿಚಾರಗಳನ್ನು ದನಿಯೆತ್ತರಿಸದೆ ಆದರೂ ಧ್ವನಿಪೂರ್ಣವಾಗಿ ಹೇಳುತ್ತ ಮನಸ್ಸುಗಳನ್ನು ಗೆಲ್ಲುತ್ತಹೋದವರು ವಿಶ್ವೇಶರು. ಒಮ್ಮೆ ಉಡುಪಿಯಲ್ಲಿ, ಅವರ ಪರ್ಯಾಯದ ಸಮಯದಲ್ಲಿ ಒಬ್ಬ ನಾಸ್ತಿಕ ಸಾಹಿತಿಯ ಭಾಷಣ ಏರ್ಪಾಡಾಗಿತ್ತು. ಸಮಯ-ಸಂದರ್ಭಗಳನ್ನು ಮರೆತು ಸಾಹಿತಿ, ಧರ್ಮದೇವರುಗಳನ್ನು ಖಂಡಿಸುವುದಕ್ಕೆ ನಿಂತುಬಿಟ್ಟರು. ಅವರ ಒಂದು ತಾಸಿನ ನಿರರ್ಗಳ ಮಾತುಗಾರಿಕೆಯನ್ನು ಕೇಳಿ ಪ್ರೇಕ್ಷಕರು ದಂಗಾಗಿದ್ದರು. ಅದಾದ ನಂತರ ಸ್ವಾಮೀಜಿಗಳ ಪುಟ್ಟದೊಂದು ಆಶೀರ್ವಚನ ನಡೆಯುವುದಿತ್ತು. ಸ್ವಾಮಿಗಳು ತನ್ನ ಮಾತು ಆರಂಭಿಸಿ “ಇದುವರೆಗೆ ತಮ್ಮ ವಿಚಾರಗಳನ್ನು ನಮ್ಮೊಂದಿಗೆ ಅತ್ಯಂತ ಮುಕ್ತವಾಗಿ ಹಂಚಿಕೊಂಡ ಶ್ರೀಯುತರಿಗೆ ಆಯುರಾರೋಗ್ಯ ಕೊಟ್ಟು ಶ್ರೀಕೃಷ್ಣಮುಖ್ಯಪ್ರಾಣನು ಕಾಪಾಡಲಿ ಎಂದು ನಾವು ಬೇಡುತ್ತೇವೆ” ಎಂದುಬಿಟ್ಟರು. ಸ್ವಾಮೀಜಿಗಳ ಮಾತು ಒಂದು ನಿಮಿಷದಲ್ಲಿ ಮುಗಿಯಿತು. ನಾಲ್ಕು ನಿಮಿಷ ಚಪ್ಪಾಳೆಯ ಸಮಾರಾಧನೆಯಾಯಿತು! ವಿಶ್ವೇಶತೀರ್ಥರು ಉಪಮಾಲಂಕಾರವನ್ನು ಬಳಸುವುದರಲ್ಲಿ ಎತ್ತಿದ ಕೈ. ಮರವಂತೆಯಲ್ಲಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ “ಸಮುದ್ರದ ಮಧ್ಯದಲ್ಲಿ ದಿಕ್ಕು ತೋಚದ ನಾವಿಕರು ದೀಪಸ್ಥಂಬದ ಬೆಳಕನ್ನು ಅನುಸರಿಸಿ ದಡ ಸೇರುತ್ತಾರೆ. ಹಾಗೆಯೇ ದೇವಸ್ಥಾನಗಳು ಮನುಷ್ಯರಿಗೆ ಸಂಸಾರ ಸಾಗರವನ್ನು ದಾಟಲು ಬೆಳಕು ತೋರುತ್ತವೆ” ಎಂದಿದ್ದರು. ಹರಿಜನರ ಕೇರಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟ ಸಂದರ್ಭದಲ್ಲಿ ಅವರು ಹೇಳಿದ್ದು: “ವಿದ್ಯುತ್ ದೀಪಗಳ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುಚ್ಛಕ್ತಿ ಅಭಿವ್ಯಕ್ತವಾಗುವಂತೆ ಮನುಷ್ಯನ ಸ್ವರೂಪ ಯೋಗ್ಯತೆಗೆ ಅನುಗುಣವಾಗಿ ಭಗವಂತ ಪ್ರಕಟಗೊಳ್ಳುತ್ತಾನೆ”. ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಪೇಜಾವರರು ಇಂದಿರಾಗಾಂಧಿಗೆ ಪತ್ರ ಬರೆದು “ದೇಶದ ಜನತೆಯ ಆಶಯಕ್ಕೆ ವಿರುದ್ಧವಾಗಿ ಹೋದರೆ ಬಾಂಗ್ಲಾದೇಶದ ಶೇಖ್ ಮುಜಿಬುರ್ ರಹಮಾನರಂತೆ ದುರಂತಕ್ಕೆ ಈಡಾದೀರಿ” ಎಂದು ಬರೆದು ಸಂದರ್ಭವನ್ನು ಸೂಕ್ಷ್ಮವಾಗಿ ವಿವರಿಸಿದ್ದರು.

ವಿಶ್ವೇಶತೀರ್ಥರ ಇಡಿಯ ವ್ಯಕ್ತಿತ್ವವನ್ನು ಕೆಲವೇ ಮಾತುಗಳಲ್ಲಿ ಕಟ್ಟಿಕೊಡುವುದು ಬಹಳ ಕಷ್ಟ. ಲೋಕಾಭಿರಾಮ ಅಂಕಣ ಬರೆಯುತ್ತಿದ್ದ ಕು.ಶಿ.ಹರಿದಾಸ ಭಟ್ಟರ ಮಾತುಗಳು ಇವು: ಸಣಕಲು, ಒಣಕಲು ಶರೀರದ ಶ್ರೀಗಳವರನ್ನು, ಅವರ ಶತಮುಖ ಕರ್ತವ್ಯಗಳನ್ನು, ನಿರಂತರ ಸಂಚಾರ ಕಾರ್ಯಕ್ರಮಗಳನ್ನು ಎಣಿಸಿಕೊಂಡಾಗ ಹಗಲೆಲ್ಲ ಚಟುವಟಿಕೆ ತೋರಿಸುವ ಎರಡು ವರ್ಷದ ನಿರ್ಬೋಧ ಹಸುಳೆಯ ನೆನಪಾಗುತ್ತದೆ. ಪರಿಣಾಮಗಳ ಅಂಜಿಕೆ ಇಲ್ಲದೆ, ಕಾಳಜಿಯೂ ಇಲ್ಲದೆ, ಉಳಿದವರು ಮಾಡದೆ ಬಿಟ್ಟ ಸಾಹಸಗಳನ್ನು, ಏರದ ಎತ್ತರಗಳನ್ನು, ಹಾರದ ಪ್ರಪಾತಗಳನ್ನು, ಎಟುಕದ ನಿಲುವುಗಳನ್ನು, ನೋಡದ ನೋಟಗಳನ್ನು ನಾನು ಸಾಧಿಸುತ್ತೇನೆನ್ನುವ ಪಂಥ ಎಷ್ಟಿರುತ್ತದೆ ಈ ಎಳವೆಯಲ್ಲಿ? ಅಂದಿನ ಚೈತನ್ಯ, ಸೃಷ್ಟಿಶೀಲ ಬುದ್ಧಿ, ಸಾಹಸ ಪ್ರೇರಣೆ ಮತ್ತು ಸ್ಫೂರ್ತಿಗಳ ಮೇಲೆ ಮತ-ಮಠ-ಶಾಲೆ-ಕಾಲೇಜು-ಆವರಣ-ಸಮಾಜ ಮುಸುಕನ್ನೆಳೆದು ಮನುಷ್ಯನನ್ನು ಪಂಜರ ಬದ್ಧನನ್ನಾಗಿ ಮಾಡುತ್ತದೆ. ಆದರೆ ಈ ಪಂಜರದಿಂದ ತಪ್ಪಿಸಿಕೊಂಡು ಇಳಿಪ್ರಾಯದಲ್ಲೂ ವರ್ಷ ಎರಡೇ ಎರಡರ ಬಾಲ ಚೈತನ್ಯವನ್ನು ತೋರಬಲ್ಲವರು ನಮ್ಮ ಪೇಜಾವರ ಶ್ರೀಗಳಂಥವರು ಮಾತ್ರ.

(ಚಿತ್ರ ಕೃಪೆ: ಮುರಳಿ ರಾಯರಮನೆ)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!