ಅಂಕಣ

ಅರ್ಥ ಕಳೆದುಕೊಳ್ಳುತ್ತಿವೆ ಮನುಷ್ಯ ಸಂಬಂಧಗಳು

ಅನಾದಿಕಾಲದಿಂದ ಪ್ರಸ್ತುತದವರೆಗೆ ಮಾನವನ ಬದುಕು ಸಾಗುತ್ತಾ ಬಂದಂತೆ ಆತನಲ್ಲಿ ಹಲವು ಬದಲಾವಣೆಗಳಾಗಿವೆ.ಆತನ ಸುತ್ತಮುತ್ತಲಿನ ಸಮಾಜ,ಪರಿಸರ ಎಲ್ಲವೂ ಬದಲಾಗುತ್ತಲೇ ಬಂದಿವೆ.ಬದುಕಂತೂ ಹಲವು ಸಂಕ್ರಮಣಗಳ ಕಾಲಘಟ್ಟದಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಮನುಷ್ಯನ ಅಸ್ತಿತ್ವಕ್ಕೆ ಸದಾ ಬೆಂಗಾವಲಾಗಿ ನಿಂತಿದ್ದು ಆತನ ಇಚ್ಛಾಶಕ್ತಿ, ಆತನ ಆಲೋಚನೆಗಳು, ಆತ ತನ್ನ ಸುತ್ತಮುತ್ತಲಿನವರೊಂದಿಗೆ ಇಟ್ಟುಕೊಂಡ ಸಂಬಂಧಗಳು ಮಾತ್ರ. ಮನುಷ್ಯ ಸಂಬಂಧಗಳು ಪ್ರತಿಕ್ಷಣದಲ್ಲಿಯೂ ಮಾನವನ ಜೀವನ ಪ್ರೀತಿಗೆ ಜ್ವಲಂತ ಸಾಕ್ಷಿಯಾಗಿವೆ. ಹಾಗೆ ನೋಡಿದರೆ ಮನುಷ್ಯನನ್ನು ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡಿದ್ದು ಈ ಮಾನವ ಸಂಬಂಧಗಳೇ. ತನ್ನ ಸುತ್ತಮುತ್ತಲಿನ ಜನರೊಂದಿಗೆ,ಇತರ ಜೀವಿಗಳೊಂದಿಗೆ, ಪರಿಸರದೊಂದಿಗೆ, ಬದುಕಿನೊಂದಿಗೆ ತನಗೆ ಬೇಕಾದ ಹಾಗೆ, ತನಗೆ ಹಾಗೂ ಜಗತ್ತಿಗೆ ಒಳಿತಾಗುವ ಹಾಗೆ ಸಂಬಂಧ ಇಟ್ಟುಕೊಳ್ಳಬಲ್ಲ ಎಂಬುದೂ ಮಾನವನನ್ನು ಬುದ್ಧಿಜೀವಿ ಎಂದು ಕರೆಯಲು ಒಂದು ಕಾರಣವಿರಬಹುದು.

ಕಾಲಚಕ್ರ ಉರುಳಿದಂತೆ,ಮಾನವ ಆದಿಮಾನವನಿಂದ ಆಧುನಿಕ ಮಾನವನೆಡೆಗೆ ಬೆಳೆದು ಬಂದಂತೆ ಮನುಷ್ಯ ಸಂಬಂಧಗಳೂ ಬದಲಾಗತೊಡಗಿದವು. ಸಂಬಂಧಗಳು ಬದಲಾದವು ಎನ್ನುವುದಕ್ಕಿಂತಲೂ ಆ ಸಂಬಂಧಗಳ ವ್ಯಾಖ್ಯೆಗಳು ಅಂದರೆ ‘Definition’ ಬದಲಾದವು ಎನ್ನಬಹುದು. ಜೀವನ, ಸಂಸ್ಕೃತಿ, ಆಚಾರ-ವಿಚಾರಗಳು ನಗರೀಕರಣಗೊಳ್ಳುತ್ತಿರುವಾಗ ಸಂಬಂಧಗಳ ವ್ಯಾಖ್ಯೆಗಳೂ ಅವುಗಳ ಪ್ರಭಾವಕ್ಕೆ ಸಿಕ್ಕಿ ಪರಿಷ್ಕರಣೆಗೊಳಪಟ್ಟಿವೆ. ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದೆಡೆಗೆ ಪರಿವಾರ ವ್ಯವಸ್ಥೆ ಸಾಗಿದಂತೆ ಮಾನವ ಸಂಬಂಧಗಳು ನಿಧಾನಕ್ಕೆ ತಮ್ಮ ಬೆಲೆಯನ್ನು ಕಳೆದುಕೊಳ್ಳಲಾರಂಭಿಸಿದವು. ಬದುಕು, ಸಮಾಜ, ದೇಶ, ಆರ್ಥಿಕತೆ, ವೈಜ್ಞಾನಿಕತೆ, ವೈಚಾರಿಕತೆ, ಆರೋಗ್ಯ ವ್ಯವಸ್ಥೆ, ಕ್ರೀಡೆ, ಕೊನೆಗೆ ಆಳುವ ಸರ್ಕಾರದ ಅಭಿವೃದ್ಧಿ ಮಂತ್ರ ಎಲ್ಲವೂ ಸ್ಮಾರ್ಟ್ ಆಗುತ್ತಿರುವ ಸಂಕ್ರಮಣ ಕಾಲದಲ್ಲಿ ಸಂಬಂಧಗಳು ಮಾತ್ರ `Smart Relation’ ಹೆಸರಲ್ಲಿ ಇನ್ನೂ ಗಟ್ಟಿಯಾಗುವುದರ ಬದಲಿಗೆ ವಿನಾಶದಂಚಿಗೆ ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅಪ್ಪ – ಅಮ್ಮ- ಮಕ್ಕಳು, ಅಣ್ಣ-ತಂಗಿ, ಅಣ್ಣ-ತಮ್ಮ, ಗಂಡ-ಹೆಂಡತಿ, ಭಾವ-ಮೈದುನ, ಸ್ನೇಹಿತರು ಈ ಎಲ್ಲಾ ಸಂಬಂಧಗಳೂ ಅರ್ಥ ಕಳೆದುಕೊಳ್ಳಲಾರಂಭಿಸಿವೆ.

ಮಾನವ ಸಂಬಂಧಗಳು ಯಾವ ರೀತಿ ತಮ್ಮ ಅರ್ಥ ಕಳೆದುಕೊಂಡಿವೆ ಎಂಬುದನ್ನು ತಿಳಿಯಲು ಇಂದಿನ ದಿನಪತ್ರಿಕೆಗಳನ್ನು ಓದಿದರೆ ಸಾಕು,ಕ್ಷಣಕಾಲ ದೃಶ್ಯ ಮಾಧ್ಯಮಗಳ ಮೇಲೆ ಕಣ್ಣು ಹಾಯಿಸಿದರೆ ಸಾಕು. “ಆಸ್ತಿಗಾಗಿ ತಂದೆಯನ್ನೇ ಕೊಂದ ಮಗ, ಹಣಕ್ಕಾಗಿ ದಾಯಾದಿಗಳ ಜಗಳ, ಸೊಸೆಯನ್ನೇ ಅತ್ಯಾಚಾರ ಮಾಡಿದ ಮಾವ, ಪ್ರಿಯಕರನ ನೆರವಿನಿಂದ ಗಂಡನನ್ನೇ ಹತ್ಯೆಗೈದ ಹೆಂಡತಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿತ್ತೆಂದು ಮಗುವನ್ನೇ ಸಾಯಿಸಿದ ಅಪ್ಪ. ದುಡ್ಡಿನಾಸೆಗೆ ಸ್ನೇಹಿತನನ್ನೇ ಬಲಿಕೊಟ್ಟ ಮತ್ತೊಬ್ಬ ಸ್ನೇಹಿತ” ಹೀಗೆ ನಾನಾ ಥರದ ಸುದ್ದಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಬದುಕಿನ ಮಹೋನ್ನತ ಕ್ಷಣಗಳಿಗೆ, ಮಾನವನ ಸುಖ ಬದುಕಿಗೆ ಕಾರಣವಾಗಬೇಕಿದ್ದ ಮನುಷ್ಯ ಸಂಬಂಧಗಳು ಇಂದು ಆತನ ಬದುಕಿಗೇ ಕೊಳ್ಳಿ ಇಟ್ಟು ಆತ ಅವಸಾನದತ್ತ ಸಾಗಲು ದಾರಿ ಮಾಡಿಕೊಡುತ್ತಿವೆ.

ಉದ್ಯೋಗ ನಿಮಿತ್ತ ನಗರವಾಸಿಗಳಾಗುವವರ ಸಂಖ್ಯೆಯೇ ಇಂದು ಹೆಚ್ಚು. ಹಳ್ಳಿಯ ಸುಂದರ ಬದುಕು ಅಲ್ಲಿ ಸಿಗಲಾರದು. ಹಳ್ಳಿಗಳಲ್ಲಿದ್ದ ಅವಿಭಕ್ತ ಕುಟುಂಬಗಳು,ಸಂಬಂಧಗಳಿಗೆ ಅವು ನೀಡುತ್ತಿದ್ದ ಬೆಲೆ ಯಾವುದೂ ನಗರಗಳಲ್ಲಿ ಇಲ್ಲವಾಗಿದೆ. ಗಂಡ-ಹೆಂಡತಿ-ಮಗು ಈ ಮೂವರೇ ಒಂದು ಕುಂಟುಂಬ ಎಂಬಂತಾಗಿ ಅಲ್ಲಿ ಬೇರೆ ಮಾನವ ಸಂಬಂಧಗಳಾದ ಸಹೋದರರು, ಅಜ್ಜ-ಅಜ್ಜಿ,ಅತ್ತೆ-ಮಾವ,ಚಿಕ್ಕಪ್ಪ-ಚಿಕ್ಕಮ್ಮಂದಿರು ಇವುಗಳಿಗೆ ಅವಕಾಶವೇ ಇಲ್ಲವಾಗಿದೆ. ನಗರಗಳಲ್ಲಂತೂ ಅನೇಕರು ತಮ್ಮ ಸುತ್ತಮುತ್ತಲಿನವರೊಂದಿಗೆ ಸಂವಹನದ ಸಂಪರ್ಕ ಇಟ್ಟುಕೊಳ್ಳಲೂ ಹಿಂಜರಿಯುತ್ತಾರೆ. ಹಾಗಾಗಿಯೇ ಎಲ್ಲರನ್ನೂ ಅನುಮಾನದ ಕಣ್ಣಿಂದಲೇ ನೋಡುತ್ತಾರೆ. ಇಂದಿನ ಯುವಜನತೆಯೂ ಅಸಂಖ್ಯಾತರಾಗಿ ನಗರ ಸೇರುತ್ತಿದ್ದಾರೆ. ಒಮ್ಮೆ ತಮ್ಮ ಹಳ್ಳಿಯನ್ನು ಬಿಟ್ಟೊಡನೆ ಅಲ್ಲಿನ ಸಂಪರ್ಕದ ಕೊಂಡಿಗಳನ್ನೂ ಅನೇಕರು ಕಳಚಿಕೊಳ್ಳುತ್ತಾರೆ.ಮನುಷ್ಯ ಸಂಬಂಧಗಳನ್ನು ಕಳೆದುಕೊಂಡರೆ ಮುಂದೆ ಎಂಥ ಬೆಲೆ ತೆರಬೇಕಾಗಬಹುದು ಎಂಬುದೂ ಅನೇಕ ಜನರಿಗೆ ತಿಳಿದಿಲ್ಲ. ಸಂಬಂಧಗಳೇ ಇಲ್ಲದೇ ಬದುಕಿದರೆ ತಾನು, ತನ್ನದು ಎಂಬ ಸಂಕುಚಿತ ಮನೋಭಾವ ಬೆಳೆಸಿಕೊಂಡು, ಎಲ್ಲವೂ ತನಗೊಬ್ಬನಿಗೇ ಇರಲಿ, ಇತರರಿಗೆ, ಸಮಾಜಕ್ಕೆ, ರಾಷ್ಟ್ರಕ್ಕೆ, ಜಗತ್ತಿಗೆ ಏನಾದರೆ ತನಗೇನು ಎಂಬ ಭಾವನೆ ಬೆಳೆಯಬಹುದು. ಎಲ್ಲವನ್ನೂ ಹಣದಿಂದಲೆ ಅಳೆಯುವ ಇಂದಿನ ಸಮಾಜದಲ್ಲಿ ಹಣಕ್ಕಿಂತಲೂ ಮಿಗಿಲಾದದ್ದು ಮನುಷ್ಯಪ್ರೀತಿ, ಸಂಬಂಧಗಳು ಎಂಬ ಅರಿವೇ ಇಲ್ಲದಂತೆ ಕೊನೆಗೆ ತನಗೆ ತಾನೇ ಅಪರಿಚಿತನಾಗಿ ಬದುಕುವ ಪ್ರಸಂಗ ಒಂಟಿ ಮಾನವನಿಗೆ ಬರಬಹುದು.

ಮನುಷ್ಯ ಸಂಬಂಧಗಳನ್ನು ಉಳಿಸಿ, ಬೆಳೆಸಿ ಆ ಮೂಲಕ ಕಳೆದುಹೋಗುತ್ತಿರುವ ಜೀವನ ಪ್ರೀತಿಯನ್ನು ಮನುಷ್ಯನಲ್ಲಿ ಉಳಿಯುವಂತೆ ಮಾಡಿ ಜಗತ್ತಿನ ಬೆಳವಣಿಗೆಗೆ ಕಾರಣವಾಗುವಂಥ ಜವಾಬ್ದಾರಿ ಇಂದಿನ ಯುವಜನಾಂಗದ ಮೇಲೆಯೂ ಇದೆ. ಆಧುನಿಕತೆಯ ಭರಾಟೆಯಲ್ಲಿ, ಹಣ ಗಳಿಸುವ ಧಾವಂತದಲ್ಲಿ, ಎಲ್ಲವೂ ಯಾಂತ್ರೀಕರಣಗೊಂಡಿರುವ ಇಂದಿನ ಯುಗದಲ್ಲಿ ತಮ್ಮ ಬದುಕನ್ನು ಯಾಂತ್ರೀಕೃತವಾಗದಂತೆ ತಡೆಯುವ ಹೊಣೆ ಯುವಜನರದ್ದೇ. ಮನುಷ್ಯ ಸಂಬಂಧಗಳು ಮಾನವನ ಅಭ್ಯುದಯಕ್ಕಾಗಿ ಇವೆ,ಅವು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡಲಿರುವುದಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕಿದೆ.

ಹಾಗಾದರೆ ಸಂಬಂಧಗಳೆಂದರೇನು? ಅವು ಹೇಗಿರಬೇಕು? ಆ ಸಂಬಂಧಗಳನ್ನು ಮಾನವ ಹೇಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂಬುದನ್ನು ಇಲ್ಲಿಯವರೆಗೆ ಪ್ರಪಂಚದಲ್ಲಿ ರಚನೆಯಾಗಿರುವ ಹಲವು ಸಾಹಿತ್ಯ ಕೃತಿಗಳಲ್ಲಿ, ಮಹಾಕಾವ್ಯಗಳಲ್ಲಿ ತಿಳಿಸಲಾಗಿದೆ. ಹಲವು ಕಾವ್ಯಗಳಲ್ಲಿ ಮಾನವ ಸಂಬಂಧಗಳಿಗೆ ತಮ್ಮದೇ ಆದ ವ್ಯಾಖ್ಯೆ ನೀಡಲಾಗಿದೆ. ಅದನ್ನು ಜನರು ಅರ್ಥಮಾಡಿಕೊಳ್ಳಬೇಕಷ್ಟೇ. ಭರತವರ್ಷದ ಮೌಲಿಕ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಂತೂ ಜೀವನ ಪ್ರೀತಿಗೆ ಹೊಸ ಭಾಷ್ಯಗಳನ್ನೇ ಬರೆದಿವೆ. ಅವುಗಳಲ್ಲಿ ಬದುಕಿನ ಸಮೃದ್ಧಿಗೆ ಬೇಕಾದ ಎಲ್ಲ ಅಂಶಗಳೂ ಇವೆ.

ಗೆಳೆತನ ಪ್ರೀತಿಯನ್ನೇ ಮೀರಿದ್ದು ಎನ್ನುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದ ನಿಷ್ಕಲ್ಮಶ ಸ್ನೇಹ ಹೇಗಿರಬೇಕು ಎಂದು ಮಹಾಭಾರದ ಶ್ರೀಕೃಷ್ಣ ಸುದಾಮನ ಗೆಳೆತನ ಜಗತ್ತಿಗೇ ತಿಳಿಸಿಕೊಟ್ಟಿದೆ. ವಸ್ತ್ರಾಪಹರಣದ ಸಮಯದಲ್ಲಿ ದ್ರೌಪದಿಯ ಮಾನ ಕಾಪಡಿದ ಅಣ್ಣ ವಾಸುದೇವ. ರಕ್ಷಾಬಂಧನವನ್ನು ಪಾಂಚಾಲಿ ಕಟ್ಟುತ್ತಿದ್ದುದು ಶ್ರೀಕೃಷ್ಣನಿಗೆ. ಅಣ್ಣ-ತಂಗಿಯರ ಮಧುರ ಸಂಬಂಧಕ್ಕೆ ಕೃಷ್ಣ-ದ್ರೌಪದಿಯರ ಸಂಬಂಧ ಮಾದರಿ. ಯುದ್ಧರಂಗದಲ್ಲಿ ಅರ್ಜುನ ಕೈಚಲ್ಲಿ ಕುಳಿತಾಗ ಆತನಿಗೆ ಮಾರ್ಗದರ್ಶನ ಮಾಡಿ, ಭಗವದ್ಗೀತೆ ಬೋಧಿಸಿ, ವಿಶ್ವರೂಪ ದರ್ಶನವನ್ನು ಮಾಡಿಸಿ ತನ್ನ ಮೈದುನನ ಮೂಲಕ ಲೋಕಕಲ್ಯಾಣವಾಗುವಂತೆ ಮಾಡಿದ ಶ್ರೀಹರಿ. ಕೃಷ್ಣಾರ್ಜುನರದ್ದು ಲೋಕ ಮೆಚ್ಚುವ ಭಾವ-ಮೈದುನರ ಸಂಬಂಧ. ತನ್ನನ್ನು ದುರ್ಯೋಧನ ಪ್ರಾಣದ ಸ್ನೇಹಿತನೆಂದೇ ತಿಳಿದಿದ್ದರೂ ಕರ್ಣ ಮಾತ್ರ ದುರ್ಯೋಧನನನ್ನು ತನ್ನ ಸ್ವಾಮಿಯಂತೆಯೇ ಕಂಡ. ಕೊನೆಗೆ ತನ್ನ ಸ್ವಾಮಿಗಾಗಿ ಮಹಾಭಾರತ ಯುದ್ಧದಲ್ಲಿ ರುದಿರಾಭಿಷೇಕ ಮಾಡಿದ. ಕರ್ಣನ ಸ್ವಾಮಿನಿಷ್ಠೆ ಜಗತ್ತಿಗೇ ನಿದರ್ಶನವಾಯಿತು. ಭಾರತದ ಇತಿಹಾಸದಲ್ಲಿ ಅಪೂರ್ವ ಸಹೋದರರೆಂದು ಕರೆಯುವುದಾದರೆ ರಾಮ-ಲಕ್ಷ್ಮಣರನ್ನೇ. ವನವಾಸಕ್ಕೆ ಹೊರಟುನಿಂತ ಅಣ್ಣನ ಸೇವೆಗಾಗಿ ಸುಮಿತ್ರಾನಂದನ ತನ್ನ ಹೆಂಡತಿ ಊರ್ಮಿಳೆಯನ್ನೂ ಬಿಟ್ಟು ಹದಿನಾಲ್ಕು ವರ್ಷ ಅಣ್ಣನ ಜೊತೆಯೇ ಇದ್ದ.ರಾಮ-ಲಕ್ಷ್ಮಣರ ಸಹೋದರ ಸಂಬಂಧ ಜಗತ್ತಿಗೇ ಮಾರ್ಗದರ್ಶಿ.

ಮಾನವ ಸಂಬಂಧಗಳಿಗೆ ಮಹಾಕಾವ್ಯಗಳು ನೀಡಿದ ಮಹತ್ವವನ್ನು, ಆ ಮೂಲಕ ಬದುಕಿನ ಔನ್ನತ್ಯವನ್ನು ತಲುಪುವಂಥ ದಾರಿಯನ್ನು ಜನರು ಅರ್ಥ ಮಾಡಿಕೊಂಡರೆ ಉತ್ತಮ ಸತ್ವಯುತವಾದ, ಪ್ರೀತಿಯಿಂದ ಬದುಕಿ ಬಾಳುವಂಥ ಆರೋಗ್ಯಪೂರ್ಣ ಬದುಕು ನಮ್ಮದಾಗುತ್ತದೆ. ಮಾನವ ಸಂಬಧಗಳು ಅಳಿಯದೇ ಮನುಷ್ಯನ ಶ್ರೇಯೋಭಿವೃದ್ಧಿಗೆ ಇನ್ನೂ ಕಾರಣವಾಗಲಿ ಅದಕ್ಕಾಗಿ ಆ ಸಂಬಂಧಗಳನ್ನು ಇಂದಿನ ಜನತೆ ಉಳಿಸಿ ಬೆಳೆಸಿಕೊಂಡು ಹೋಗಲಿ ಎಂದು ಆಶಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!