ಅಂಕಣ

ಭರತನಾಟ್ಯವನ್ನೇ ಶಿಲುಬೆಗೇರಿಸಿದ ಮತಾಂಧತೆ

“ಭರತ ನಾಟ್ಯವು ಸೃಷ್ಟಿ-ಸ್ಥಿತಿ-ಲಯಗಳ ಆವರ್ತನಾಚಕ್ರವನ್ನೇ ಆಧರಿಸಿದೆ. ಶಿವನ ನೃತ್ಯದಲ್ಲಿ ಕಾಣಬರುವುದೂ ಅದೇ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು”

–  ಆನಂದ ಕುಮಾರ ಸ್ವಾಮಿ.

ನೃತ್ಯದ ಹಿಂದಿನ ತತ್ವವನ್ನು ಅರುಂದಲೆ “ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ” ಎಂದು ವಿವರಿಸುತ್ತಾರೆ. ಶಿವನ ಈ ನೃತ್ಯ ರೂಪಕವು ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ.

ನಟರಾಜ ನೃತ್ಯದ, ನೃತ್ಯಗಾರರ ಅಧಿಪತಿ. ಅವನು ಪ್ರಜ್ಞೆಯ ಭವನದಲ್ಲಿ ನರ್ತಿಸುತ್ತಾನೆ. ಇಡೀ ವಿಶ್ವದ ಲಯಗತಿಯನ್ನು ನೇಯುತ್ತಾನೆ. ಸೃಷ್ಟಿ, ಸ್ಥಿತಿ, ಪುನರುಜ್ಜೀವನ ತಿರೋಧಾನ ಮತ್ತು ಅನುಗ್ರಹಗಳೆಲ್ಲವೂ ಅವನ ನೃತ್ಯದಲ್ಲಿ ಒಳಗೊಂಡಿವೆ. ನೃತ್ಯವು ಹಿಂದೂ ಧರ್ಮದೊಂದಿಗೆ ಎಷ್ಟು ಬೆಸೆದಿದೆಯೆಂದರೆ ಅದನ್ನು ಈ ಮೌಲಿಕ ಹಿನ್ನೆಲೆಯಿಂದ ಬೇರ್ಪಡಿಸಿ ಊಹಿಸುವುದೂ ಅಸಾಧ್ಯ ಎಂದಿದ್ದಾರೆ ರುಕ್ಮಿಣಿದೇವಿ ಅರುಂದಲೆ. ನೃತ್ಯವು ದೇವತಾರಾಧನೆಯ ಒಂದು ವಿಧಾನವೂ ಹೌದು. ಭರತನಾಟ್ಯದ ಮೂಲವನ್ನು ನೃತ್ಯಕ್ಕೆ ಸಂಬಂಧಿಸಿದ ವೇದದ ಉಲ್ಲೇಖಗಳಲ್ಲಿ ಗುರುತಿಸಬಹುದು. ಕಲಾ ಪ್ರಕಾರ ಹಾಗೂ ಕಲಾಭಿಜ್ಞತೆಯ ಅಧಿಕೃತ ಗ್ರಂಥವಾದ “ನಾಟ್ಯಶಾಸ್ತ್ರ”ವನ್ನು ಭರತ ಮುನಿ ಬರೆಯುವುದಕ್ಕೆ ಮುಂಚೆಯೇ ನೃತ್ಯಪ್ರಕಾರವು ವ್ಯವಸ್ಥಿತ ರೂಪ ತಳೆದಿತ್ತು. ತಮಿಳು ಮಹಾಕಾವ್ಯ “ಚಿಲ್ಲಪ್ಪದಿಗಾರಂ” ಪ್ರಾಚೀನ ನಗರಗಳಲ್ಲಿ ಶಾಸ್ತ್ರೀಯ ನೃತ್ಯಪ್ರದರ್ಶನ ನಡೆಯುತ್ತಿದುದರ ಬಗ್ಗೆ ವರ್ಣಿಸಿದೆ. ಶಾಸ್ತ್ರ ಗ್ರಂಥಗಳನ್ನು ನೇರವಾಗಿ ಗ್ರಹಿಸುವ ಶಕ್ತಿ ಇಲ್ಲದ ಸಾಮಾನ್ಯರು ಮಾತ್ರವಲ್ಲ, ಕಲೆಯ ಮೂಲಕವೇ ಶಿವನನ್ನು ಒಲಿಸಿಕೊಳ್ಳುವ ಮರ್ಮ ತಿಳಿವ ಹಂಬಲವಿದ್ದ ಅಸಾಮಾನ್ಯರೂ ನೃತ್ಯವನ್ನು ದೇವತಾರಾಧನೆಯ ಭಾಗವೆಂದೇ ಪರಿಗಣಿಸುತ್ತಿದ್ದುದರ ಫಲವಾಗಿ ಅವುಗಳಿಗೆ ಧಾರ್ಮಿಕ ಆಚರಣೆಗಳ ಸ್ಥಾನವಿತ್ತು.

ನೃತ್ಯದ ಆಧ್ಯಾತ್ಮಿಕ ಆಯಾಮವನ್ನು ಕಾಪಾಡಿಕೊಂಡು, ಅದರಲ್ಲಿ ಹೊಸ ಹೊಸ ಪ್ರಕಾರಗಳನ್ನು ಪರಿಚಯಿಸಿ, ಅದರ ತಂತ್ರಗಳನ್ನು ಪ್ರಸಾರ ಮಾಡಿದವರಲ್ಲಿ ಶೈವ ಸನ್ಯಾಸಿಗಳೂ ಪ್ರಮುಖರು. ಅವರು ಅದನ್ನು ಆನಂದದ ತುರೀಯಾವಸ್ಥೆಗೆ ತಲುಪುವ ಒಂದು ವಿಧಾನವಾಗಿ ಬಳಸುತ್ತಿದ್ದರು. ಭರತ ಖಂಡದ ಉದ್ದಗಲಗಳಲ್ಲಿ ತಮ್ಮದೇ ನಾಟ್ಯ ಪರಂಪರೆಯನ್ನು ಹೊಂದಿದ ವಿವಿಧ ಬುಡಕಟ್ಟು ಪರಂಪರೆಗಳು ಈ ಸುಸಂಸ್ಕೃತ ನೃತ್ಯಧಾರೆಯೊಂದಿಗೆ ಸಂಬಂಧ ಹೊಂದಿದ್ದಂಥವೇ. ಈ ಮುಖ್ಯ ಧಾರೆಯೇ ಮುಂದೆ ಭರತ ನಾಟ್ಯ, ಕಥಕ್ಕಳಿ, ಮಣಿಪುರಿ ಮುಂತಾದ ಅನನ್ಯ ನಾಟ್ಯ ಸಂಯೋಜನೆಗಳ ಉದಯಕ್ಕೆ ನೆರವಾಯಿತು. ಎಷ್ಟೆಂದರೆ ಕಠ್ಮಂಡು ಕಣಿವೆಯಲ್ಲಿದ್ದ ಬೌದ್ಧರು ನೇವಾರರಲ್ಲಿ ತಮ್ಮ ರಾಜ್ಯವನ್ನು ವಾರ್ಷಿಕವಾಗಿ ನವೀಕರಿಸುವ ವಿಧಿಯೆಂಬಂತೆ ಭೈರವ ನೃತ್ಯವನ್ನು ಮಾಡುತ್ತಿದ್ದರು, ನಟರಾಜನನ್ನು ಪೂಜಿಸುತ್ತಿದ್ದರು. ಇವೆಲ್ಲಾ ಹೊಂದಾಣಿಕೆಗಳು ಮೂಲಪ್ರಾಕಾರವನ್ನು ಬುಡಮೇಲು ಮಾಡದೆ ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿದವು.

ಯಾವಾಗ ಮಿಷನರಿಗಳು ಭಾರತದಲ್ಲಿ ಬಲವಾಗಿ ಕಾಲೂರಲಾರಂಭಿಸಿದರೋ ಅಂದಿನಿಂದ ಭಾರತೀಯ ನಾಟ್ಯ ಶಾಸ್ತ್ರದ ಮೇಲೆ ಪ್ರಹಾರ ಮೊದಲ್ಗೊಂಡಿತು. ಅವರ ಮೊದಲ ಪ್ರಹಾರ ದೇವದಾಸೀ ಪದ್ದತಿಯ ಮೇಲೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಶೈವಾಗಮದ ಪ್ರಕಾರ ಶಿವನ ಪೂಜೆಯ ಒಂದು ಭಾಗವಾಗಿ ಇಂತಿಂಥ ಪ್ರಕಾರದ ನ್ರತ್ತವನ್ನು ಇಂತಿಂಥ ಕುಲದ ಸ್ತ್ರೀಯರು ಮಾಡಬೇಕು. ಮತ್ತು ಐದು ಆಚಾರ್ಯರು ಹಿಮ್ಮೇಳದಲ್ಲಿರಬೇಕು ಎನ್ನುವ ಉಲ್ಲೇಖದಂತೆ ಅಂತಹ ಕುಲಗಳು ದೇವಾಲಯಗಳ ಸೇವೆಯ ಅಗತ್ಯ ಜೊತೆಗಾರರಾಗಿ ಜೀವನ ಸಾಗಿಸಿದ್ದವು. ಆದರೆ ಹನ್ನೊಂದನೆಯ ಶತಮಾನದವರೆಗೆ ಶುದ್ಧ ಹಾಗೂ ಉತ್ತುಂಗ ಸ್ಥಿತಿಯಲ್ಲಿದ್ದ ಈ ಪದ್ದತಿ ಮೊಘಲರ ಆಳ್ವಿಕೆ ಬಂದೊಡನೆ ಧಾರ್ಮಿಕತೆಯಿಂದ ರಿಕ್ತವಾಗಿ ಮನರಂಜನೆಯಾಗಿ ಬದಲಾಯಿತು. ಕೆಲವು ಸಂದರ್ಭಗಳಲ್ಲಿ ನರ್ತಕಿಯರು ವೇಶ್ಯಾವಾಟಿಕೆಗೆ ಬಳಸಲ್ಪಟ್ಟು ದೇವದಾಸೀ ಪದ್ದತಿಯ ಬಗೆಗೆ ಹಿಂದೂಗಳಿಗೇ ಅಸಹ್ಯಹುಟ್ಟುವಂತಾಗಿತ್ತು. ಈ ಲಂಪಟತನವನ್ನೇ ಅಸ್ತ್ರವಾಗಿಟ್ಟುಕೊಂಡು ವಿಚಾರವಂತ ಹಿಂದೂಗಳ ಸಹಾನುಭೂತಿ ಗಿಟ್ಟಿಸಿ ತಮ್ಮ ಕಂಪೆನಿ ಸರಕಾರದ ಮೂಲಕ ಈ ಪದ್ದತಿಯನ್ನೇ ನಿರ್ಮೂಲನಗೊಳಿಸಹೊರಟರು ಮಿಷನರಿಗಳು. ನಿಜವಾದ ಕಳಕಳಿ ಹೊಂದಿದ್ದರೆ ಕೆಟ್ಟು ಹೋದ ಭಾಗವನ್ನು ತೆಗೆದು ಮತ್ತೆ ಶುದ್ಧತೆಯನ್ನು ಸ್ಥಾಪಿಸಲು ನೆರವಾಗಬೇಕಿತ್ತು. ಆದರೆ ಅವರದ್ದು ಕುಟಿಲ ನೀತಿ. ದೇವದಾಸೀ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವ ಬದಲು ಗೀತೆಯ ಬೋಧೆಯನ್ನು, ರಾಮಾಯಣದ ಸೌಂದರ್ಯವನ್ನು, ಆಗಮಗಳ ಪೂಜಾವಿಧಿಗಳನ್ನು ಅವರಲ್ಲಿ ಮತ್ತೆ ತುಂಬಿ ಶುದ್ಧ ನಾಟ್ಯವನ್ನಾಗಿ ಪರಿವರ್ತಿಸುತ್ತಿದ್ದಲ್ಲಿ ಗಾರ್ಗಿ, ಮೈತ್ರೇಯೀ, ಮಣಿಮೇಖಲೆಯರಂತಹ ವೇದ ಸ್ತ್ರೀಮಂತ್ರಗಾತೃಗಳಂತೆ ಸಮಾಜದ ನೈತಿಕತೆ-ಧಾರ್ಮಿಕತೆಗಳನ್ನುದ್ದೀಪನಗೊಳಿಸುವ, ಭಾರತದ ಧರ್ಮ ದೀವಿಗೆಯನ್ನು ಜಗತ್ತಿಗೆ ಪಸರಿಸುವ ಜ್ಯೋತಿಗಳನ್ನಾಗಿ ದೇವದಾಸಿಯರನ್ನು ಪರಿವರ್ತಿಸಬಹುದಿತ್ತು. ಆದರೆ ನಮ್ಮಲ್ಲಿನ ವಿಚಾರವಂತರು ಮೈಮರೆತರು. ಮಿಷನರಿಗಳು ನಾಟ್ಯದ ಕ್ರೈಸ್ತೀಕರಣದ ಮೊದಲ ಪ್ರಯತ್ನದಲ್ಲಿ ಗೆದ್ದರು. ಮಿಷನರಿಗಳ ಪ್ರಭಾವ ಯಾವ ಮಟ್ಟದ್ದೆಂದರೆ ಒಬ್ಬ ದ್ರಾವಿಡವಾದಿಯಂತೂ ನಾಟ್ಯವನ್ನು ವೇಶ್ಯಾವೃತ್ತಿಯನ್ನು ಪ್ರೋತ್ಸಾಹಿಸುವ ಜೀವನಾಡಿ ಎಂದು ಬಿಟ್ಟ!

ಮಿಷನರಿಗಳ ಈ ಕಾರ್ಯಕ್ಕೆ ತಡೆಯನ್ನೊಡ್ಡಿದವರಲ್ಲಿ ರುಕ್ಮಿಣಿದೇವಿ ಅರುಂದಲೆ ಪ್ರಮುಖರು. “ಕಲಾಕ್ಷೇತ್ರ ಅಕಾಡೆಮಿ ಆಫ್ ಡಾನ್ಸ್ ಆಂಡ್ ಮ್ಯೂಸಿಕ್” ಸಂಸ್ಥೆಯನ್ನು 1936ರಲ್ಲಿ ಸ್ಥಾಪಿಸಿ, ಈ ನಾಟ್ಯ ಪ್ರಕಾರವನ್ನು ರಕ್ಷಿಸಿ, ಪುನರುಜ್ಜೀವನಗೊಳಿಸಿದರವರು. ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲದೆ ಗಂಡು ಮಕ್ಕಳೂ ಕೂಡಾ ಭರತನಾಟ್ಯವನ್ನು ಕಲಿಯುವುದು ಸ್ವೀಕಾರಾರ್ಹವಾಗುವಂತೆ ಮಾಡಿದ ಆಕೆ ದೇವತಾ ಪ್ರಾರ್ಥನೆ, ಶಾಕಾಹಾರ ಮತ್ತು ಗುರುಶಿಷ್ಯ ಸಂಬಂಧಗಳ ಮೇಲೆ ಲಕ್ಷ್ಯವಿಟ್ಟು ಒಂದುಗುರುಕುಲದಂತೆ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದರು. ಇದು ಮುಂದೆ ಒಂದು ಕಲಾ ವಿಶ್ವವಿದ್ಯಾಲಯವೇ ಆಯಿತು. ಇದರಿಂದ ಪರಂಪರೆಯ ಗುರು-ಶಿಷ್ಯ ಪದ್ದತಿ ತಮಿಳುನಾಡು ಮಾತ್ರವಲ್ಲದೆ ಹೊರಭಾಗಗಳಿಗೂ ವ್ಯಾಪಿಸಿ ಭರತನಾಟ್ಯ ಒಂದು ಕಲಾಪ್ರಕಾರವಾಗಿ ಪುನರುಜ್ಜೀವನಗೊಂಡಿತು.

ಇದರಿಂದ ಮಿಷನರಿಗಳು ತಮ್ಮ ಕಾರ್ಯಸಾಧನೆಗೆ ಬೇರೆ ಉಪಾಯಗಳನ್ನು ಹುಡುಕಲಾರಂಭಿಸಿದರು. ಈ ಬಾರಿ ಅವರ ಕಾರ್ಯ ಸಾಧನೆ ನೇರವಾಗಿ ಒಳಹೊಕ್ಕುವ ಮೂಲಕ ನಡೆಯಿತು. ಆರಂಭದಲ್ಲಿ ಹಿಂದೂ ಆಚರಣೆ-ರೂಢಿ-ಸಂಪ್ರದಾಯ-ಸಂಕೇತಗಳಿಗೆ ಗೌರವ ತೋರಿಸುತ್ತಾ ಹಿಂದೂಗುರುಗಳಲ್ಲಿ ಅಭ್ಯಾಸ ಮಾಡತೊಡಗಿದರು. ಅಮಾಯಕ ಗುರುಗಳು ಇವರ ಗುರಿಯನ್ನರಿಯದೇ ಶಿಷ್ಯರನ್ನಾಗಿ ಸ್ವೀಕರಿಸಿದರು. ಪದ್ಮಭೂಷಣ ಕಲಾನಿಧಿ ನಾರಾಯಣ, ಕುಬೇಂದ್ರನಾಥ್, ಚಂದ್ರಶೇಖರ್, ಖಗೇಂದ್ರನಾಥ್ ಮುಂತಾದ ಘಟಾನುಘಟಿಗಳಿಂದ ಕಲಿತ ಫ್ರಾನ್ಸಿಸ್ ಬಾರ್ಬೋಜಾ ಭರತನಾಟ್ಯವನ್ನು ಕ್ರಿಸ್ತೀಕರಣಗೊಳಿಸಲು ಯತ್ನಿಸಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾನೆ. ಭಾರತೀಯ ನಾಟ್ಯ ಶಾಸ್ತ್ರದ ಅನನ್ಯ ಲಕ್ಷಣಗಳಾದ ಹಸ್ತ ಮುದ್ರೆಗಳನ್ನು ಅನುಕರಿಸಿ ಆತ ದೇವಹಸ್ತ, ಕ್ರಿಸ್ತ, ಫಾದರ್, ಉದಿತ ಕ್ರಿಸ್ತ, ಮೇರಿ, ಶಿಲುಬೆ, ಚರ್ಚು, ಮೆಡೋನ್ನಾಗಳ ಮುದ್ರೆಗಳನ್ನು ಸೃಷ್ಟಿಸಿದ. ವಿದೇಶೀಯನೊಬ್ಬನಿಂದ ನಮ್ಮ ಕಲೆ ಬೆಳೆಯುತ್ತಿದೆಯೆಂಬ ಹುಂಬ ಅಭಿಮಾನ ಹಾಗೂ ಹೊಸತನದಿಂದ ಭವಿಷ್ಯದಲ್ಲುಂಟಾಗಬಹುದಾದ ಪರಿಣಾಮಗಳನ್ನು ಪರಾಮರ್ಶಿಸದೆ ಅಪ್ಪಿಕೊಳ್ಳುವ ಭಾರತೀಯರ ಸಹಜ ಭೋಳೇ ಸ್ವಭಾವ ಭರತ ನಾಟ್ಯವನ್ನು ಕ್ರಿಸ್ತನಾಟ್ಯವಾಗಿ ಪರಿವರ್ತಿಸಲು ಆತನಿಗೆ ಸಹಾಯಕವಾಯಿತು. ಪ್ರಸಿದ್ಧಿ, ಹಣದ ಹುಚ್ಚಿನಿಂದ ಇಂತಹ ಗೋಮುಖವ್ಯಾಘ್ರ ಶಿಷ್ಯರಿಗೆ ಬೆಂಗಾವಲಾಗಿ ನಿಂತ ಗುರುಗಳಿಗೇನೂ ಕಡಿಮೆ ಇರಲಿಲ್ಲ.

1977ರಲ್ಲಿ ಕೆಥೋಲಿಕ್ ಪೂಜಾರಿಯೊಬ್ಬನಿಂದ ಆರಂಭಗೊಂಡ “ಕಲೈ ಕಾವೇರಿ ಆಫ್ ಫೈನ್ ಆರ್ಟ್ಸ್” ಭರತ ನಾಟ್ಯವನ್ನೇ ಮತಾಂತರ ಮಾಡಲು ಹೊರಟ ಒಂದು ಸಂಸ್ಥೆ. ನನ್, ಪಾದ್ರಿಗಳನ್ನು ಹಿಂದೂ ಗುರುಗಳ ಬಳಿ ನೃತ್ಯಾಭ್ಯಾಸ ಮಾಡಲು ಕಳುಹಿ ಕೊಟ್ಟ ಈ ಕ್ಷುದ್ರ ಜೀವಿ ಆ ಬಳಿಕ ಅವರನ್ನುಪಯೋಗಿಸಿಕೊಂಡು ತನ್ನ ಮತಾಂತರದ ಜಾಲವನ್ನು ವಿಸ್ತರಿಸಿದ. ಭರತ ನಾಟ್ಯ ಹಾಗೂ ಭಾರತೀಯ ಸಂಗೀತ ಶಾಸ್ತ್ರದಲ್ಲಿ ಪದವಿಯನ್ನು ಪ್ರದಾನಿಸುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಈ ಸಂಸ್ಥೆ ಭರತ ನಾಟ್ಯದಲ್ಲಿ ಹಿಂದೂ ಮುದ್ರೆಗಳನ್ನು ತೆಗೆದುಹಾಕಿ ಆ ಜಾಗದಲ್ಲಿ ಬಾರ್ಬೋಜಾ ರೂಪಿಸಿದ ಕ್ರೈಸ್ತ ಮುದ್ರೆಗಳನ್ನು ರಾಜಾರೋಷವಾಗಿ ಬಳಸುತ್ತಿದೆ. ಕಲೈ ಕಾವೇರಿ ಸಾಗರದಾಚೆಗೂ ಹಲವು ಶಾಖೆಗಳನ್ನು ಹೊಂದಿದೆ. ತನ್ನ ಇಪ್ಪತ್ತೈದನೇ ವಾರ್ಷಿಕೋತ್ಸವದ ಕೈಪಿಡಿಯಲ್ಲಿ ಭರತನಾಟ್ಯವನ್ನು ಕ್ರಿಸ್ತನಾಟ್ಯವಾಗಿ ಪರಿವರ್ತಿಸಿದ ತನ್ನ ಸಫಲ ಕಾರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದೆ ಕಲೈ ಕಾವೇರಿ. ಮೊದಲು ಜಗತ್ತಿನ ಸೃಷ್ಟಿಯನ್ನು, ವಾಗ್ದೇವಿ-ಓಂಕಾರಗಳ ಸಂಬಂಧವನ್ನು ವರ್ಣಿಸುತ್ತಾ ಸಾಗುವ ಇದರ ವಿಶ್ಲೇಷಣೆ ಮುಂದುವರಿದಂತೆ ಬೈಬಲಿನ ವ್ಯಾಖ್ಯೆಗೆ ತೊಡಗುತ್ತದೆ. “ಆದಿಯಲ್ಲಿ ಬ್ರಹ್ಮನಿದ್ದ. ಆತನೊಡನಿದ್ದ ನಾದವೇ ಪರಬ್ರಹ್ಮ” ಎನ್ನುವ ವೇದಮಂತ್ರವನ್ನು “ಆದಿಯಲ್ಲಿ ದೇವರಿದ್ದ. ಅವನೊಡನಿದ್ದ ಶಬ್ಧವೇ ದೇವರಾಗಿತ್ತು” ಎಂದು ತಿರುಚಿ ಮುಂದೆ ನೇರವಾಗಿ ಕ್ರಿಸ್ತನ ಕಡೆಗೆ ಸಾಗುತ್ತದೆ ಈ ವಿಶ್ಲೇಷಣೆ. ಕಲೈಕಾವೇರಿಯ ನಿಷ್ಣಾತ ನಾಟ್ಯಪಟು ಕೇರಳದ ಸಜು ಜಾರ್ಜ್ ಎಂಬ ಪಾದ್ರಿ ಭರತನಾಟ್ಯದಲ್ಲಿ ಕ್ರಿಸ್ತನನ್ನು ಶಿಲುಬೆಗೇರಿಸುವ, ಆತನ ಪುನರಾಗಮನದ ದೃಶ್ಯಗಳನ್ನು ಅಳವಡಿಸಿದ. ರಾಧಾಕೃಷ್ಣರ ಹಾಗೂ ಕ್ರಿಸ್ತನ ದೃಷ್ಯವೈವಿಧ್ಯಗಳೆರಡನ್ನೂ ಒಂದೇ ವೇದಿಕೆಯ ಮೇಲೆ ತೋರಿಸುವ ಮೂಲಕ ಹಿಂದೂಗಳ ಸಹಾನುಭೂತಿಯನ್ನೂ, ಭರತ ನಾಟ್ಯದ ಕ್ರಿಸ್ತೀಕರಣವನ್ನೂ ಹಾಗೂ ದುರ್ಬಲ ಮನಸ್ಸುಗಳ ವೈಚಾರಿಕ/ಆಚಾರಿಕ ಮತಾಂತರವನ್ನು ಏಕಕಾಲದಲ್ಲಿ ಸಾಧಿಸತೊಡಗಿದ. ಈತನ ಬಗ್ಗೆ ಕಲೈ ಕಾವೇರಿ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಮೇಲ್ನೋಟಕ್ಕೆ ಇದರಿಂದ ನಮಗೇನೂ ಹಾನಿಯಿಲ್ಲ ಎಂಬಂತಿದ್ದರೂ ಒಳಹೊಕ್ಕು ನೋಡಿದಾಗ ಬೆಚ್ಚಿಬೀಳುವ ಅಗಾಧತೆ ಈ ಮತಾಂತರಕ್ಕಿದೆ. ಚರ್ಚಿನ ಅಭಿಯಾನ ಎನ್ನುತ್ತಾ ಅಪಾರ ಪ್ರಮಾಣದ ಹಣವೂ ಈ ಕಾರ್ಯಕ್ಕೆ ಹರಿದು ಬರುತ್ತಿದೆ. ವಿಪರ್ಯಾಸವೆಂದರೆ ತಮಿಳುನಾಡಿನ ಸರಕಾರವೂ ಈ ಸಂಸ್ಥೆಗೆ ಧನ ಸಹಾಯ ಮಾಡುತ್ತಿರುವುದು.

ಓರ್ವ ಮತಾಂಧ ಇವ್ಯಾಂಜೆಲಿಸ್ಟನ ಮಗಳಾದ ರಾಣಿ ಡೇವಿಡ್ ಭರತನಾಟ್ಯದ ಕ್ರಿಸ್ತೀಕರಣ ಮಾಡುವುದರಲ್ಲಿ ಎಲ್ಲರಿಗಿಂತಲೂ ಪರಿಣತಳು. ಅಮೇರಿಕಾದ ಹಿಂದೂ ದೇವಾಲಯವೊಂದರ ಪಕ್ಕದಲ್ಲೇ “ಕಲೈ ರಾಣಿ ನಾಟ್ಯ ಸಾಲೈ” ಎನ್ನುವ ಸಂಸ್ಥೆಯನ್ನು ಸ್ಥಾಪಿಸಿರುವ ಈಕೆ ತಂಜಾವೂರ್ ಪದ್ದತಿಯಲ್ಲಿ ಷಣ್ಮುಗಂ ಅವರ ಬಳಿ ನಾಟ್ಯಾಭ್ಯಾಸ ಮಾಡಿದಳು. ಆನಂತರ ಅರುಂದಲೆಯವರ ನೇರ ಶಿಷ್ಯೆ ಮೈಥಿಲಿ ರಾಘವನರ ಬಳಿ ಹೆಚ್ಚಿನ ಅಭ್ಯಾಸ ನಡೆಸಿದಳು. ಬಳಿಕ ಅಡ್ಯಾರ್ ಲಕ್ಷ್ಮಣ ಹಾಗೂ ಸೀತಾರಾಮ ಶರ್ಮರಿಂದ ನುಟುವಾಂಗವನ್ನು ಕಲಿತಳು. ಭರತ ನಾಟ್ಯದಿಂದ “ನಮಸ್ಕಾರ” ಭಂಗಿಯನ್ನೇ ತೆಗೆದು ಹಾಕಿದ ಆಕೆ “ಏಸು ಏಸು ಏಸು” ಎನ್ನುವ ನಾಟ್ಯ ಕಾರ್ಯಕ್ರಮವನ್ನೇ ಹುಟ್ಟುಹಾಕಿದಳು. ನಾಟ್ಯವು ಬೈಬಲಿನಲ್ಲಿ ಖಂಡಿಸಲ್ಪಟ್ಟಾಗ ಅದನ್ನು ಭರತನಾಟ್ಯವೆಂದು ಹೇಳುತ್ತಾ, ಬೈಬಲಿನಲ್ಲಿ ಹೊಗಳಲ್ಪಟ್ಟ ಸಂದರ್ಭಗಳಲ್ಲಿ ಕ್ರಿಸ್ತನಾಟ್ಯವನ್ನಾಗಿ ತನಗೆ ಬೇಕಾದಂತೆ ತಿರುಚಿ ಲೇಖನಗಳನ್ನು ಬರೆದಳು. ರಾಣಿ ಡೇವಿಡಳ ಹಿಂಬಾಲಕಿ ಅನಿತಾ ರತ್ನಂ ಭರತ ನಾಟ್ಯ ಹಾಗೂ “ಸಂಗಂ ತಮಿಳ್”ದೊಂದಿಗೆ ಕ್ರಿಶ್ಚಿಯಾನಿಟಿ ಇತ್ತೆನ್ನುವುದನ್ನು ರಾಣಿ ಡೇವಿಡ್ ವಾಸ್ತವಾಂಶಗಳೊಂದಿಗೆ ನಿರೂಪಿಸಿದ್ದಾಳೆ ಎಂದಿದ್ದಾಳೆ. ಈಕೆ ನಡೆಸುತ್ತಿರುವ “ನರ್ತಕಿ.ಕಾಂ” ಭರತ ನಾಟ್ಯದ ಬಗೆಗೆ ರಾಣಿ ಡೇವಿಡ್ ಬರೆದಿರುವ ಕ್ರೈಸ್ತ ಇತಿಹಾಸವನ್ನೇ ಅಧಿಕೃತವೆಂದು ಪರಿಗಣಿಸಿ ಪ್ರಕಟಿಸುತ್ತಿದೆ.

ಯಾವ ರುಕ್ಮಿಣಿ ಅರುಂದಲೆ ಭರತನಾಟ್ಯವನ್ನು ಕ್ರೈಸ್ತ ಮತ ಪ್ರಚಾರಕರ ಷಡ್ಯಂತ್ರಗಳಿಂದ ಪಾರು ಮಾಡಿ ಕಲಾಕ್ಷೇತ್ರವನ್ನು ಸ್ಥಾಪಿಸಿದಳೋ ಅದೇ ಅರುಂದಲೆಯ ಶಿಷ್ಯೆ ಲೀಲಾ ಸ್ಯಾಮ್ಸನಳಿಂದ ಕಲಾಕ್ಷೇತ್ರ ಮತಪ್ರಚಾರಕರ ವಶವಾಯಿತು. ಲೀಲಾ ಸ್ಯಾಮ್ಸನಳಿಗೆ ನೃತ್ಯ ಕಲಿಸಲು ರುಕ್ಮಿಣಿದೇವಿಯವರಿಗೆ ಮನಸ್ಸಿರಲಿಲ್ಲ. ಆದರೆ ತಮ್ಮ ಸಹವರ್ತಿಗಳ/ಶಿಷ್ಯಂದಿರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಆಕೆಯನ್ನು ಶಿಷ್ಯೆಯಾಗಿ ಸ್ವೀಕರಿಸಿದರು. ಭರತನಾಟ್ಯದ ಆಧ್ಯಾತ್ಮಿಕ ಮೂಲಗಳನ್ನು ಅಳಿಸಿ ಹಾಕುವುದನ್ನು ಬಹಿರಂಗವಾಗಿ ಸಮರ್ಥಿಸಿದ ಈಕೆ ‘ಆರ್ಟ್ ಆಫ್ ಲಿವಿಂಗ್’ನ ಶ್ರೀ ರವಿಶಂಕರರು ನಡೆಸಿದ “ಆರೋಗ್ಯ ಮತ್ತು ಆನಂದ” ಎಂಬ ಶಿಬಿರ ಹಿಂದೂ ಧರ್ಮಕ್ಕೆ ಸಂಬಂಧಿಸಿದುದು ಎನ್ನುವ ನೆಪವೊಡ್ಡಿ ಕಲಾಕ್ಷೇತ್ರದ ವಿದ್ಯಾರ್ಥಿಗಳು ಆ ಶಿಬಿರದಲ್ಲಿ ಭಾಗವಹಿಸದಂತೆ ಪ್ರತಿಬಂಧಿಸಿದಳು. ಕಲಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಆದಿಯಿಂದಲೂ ಪೂಜಿಸುತ್ತಿದ್ದ ವಿಗ್ರಹಗಳನ್ನು ತೆಗೆದು ಹಾಕಿದಳು. ಗೀತಗೋವಿಂದವನ್ನು ಅವಹೇಳನಕಾರಿ ಶಬ್ಧಗಳಲ್ಲಿ ಪಾಠ ಮಾಡುತ್ತಿದ್ದಳು. ರುಕ್ಮಿಣಿ ಅರುಂದಲೆಯವರು ವಿನ್ಯಾಸಗೊಳಿಸಿದ್ದ ಪ್ರಮಾಣಪತ್ರದಲ್ಲಿದ್ದ ನಟರಾಜನ ಲಾಂಛನವನ್ನು ತೆಗೆದು ಹಾಕಿದಳು. ಹಿಂದೂ ಕಥಾನಕಗಳನ್ನು ವಾಲ್ಟಡಿಸ್ನಿಯ ಪಾತ್ರಗಳಿಗೆ ಹೋಲಿಸಿ, ಬ್ರಹ್ಮನನ್ನು “ಸ್ಟಾರ್ ವಾರ್ಸ್” ಚಿತ್ರಕಥೆಯ ವಿಲಕ್ಷಣ ಪಾತ್ರಗಳಿಗೆ ಹೋಲಿಸಿ ಲೇವಡಿ ಮಾಡತೊಡಗಿದಳು. ಹೀಗೆ ಲೀಲಾ ಸ್ಯಾಮ್ಸನ್ ಭರತನಾಟ್ಯವನ್ನು ಅದರ ಆಧ್ಯಾತ್ಮಿಕ, ತಾತ್ವಿಕ, ಕಲಾತ್ಮಕ, ಬೌದ್ಧಿಕ ಆಯಾಮಗಳಿಂದ ಮುಕ್ತಗೊಳಿಸಿ ಅವಳದ್ದೇ ಮಾತುಗಳಲ್ಲಿ ಹೇಳುವುದಾದರೆ ಹಿಂದೂ ಧರ್ಮದಿಂದ ಮುಕ್ತಗೊಳಿಸುವ ತನ್ನ ಕಾರ್ಯದಲ್ಲಿ ಯಶಸ್ವಿಯಾದಳು. “ಯಾವುದನ್ನೂ ತಿಳಿಯದಿರುವುದೇ ವೈಶ್ವಿಕ ಧರ್ಮ. ವೈಶ್ವಿಕ ಧರ್ಮವನ್ನು ಅನುಸರಿಸುತ್ತೇವೆ ಎನ್ನುವ ಜನರಿಗೆ ಹಿಂದೂ ಧರ್ಮದ ಔನ್ನತ್ಯದ ಬಗೆಗೆ, ಭಾರತದ ಹಿರಿಮೆಯ ಬಗೆಗೆ ಏನು ಗೊತ್ತು?” ಎನ್ನುವ ಅರುಂದಲೆಯವರ ಕಿಡಿನುಡಿ ತಾನು ವೈಶ್ವಿಕ ಧರ್ಮವನ್ನು ನಂಬುತ್ತೇನೆ ಎಂದು ಹೇಳಿ ಮತಾಂತರದ ಹೀನ ಕಾರ್ಯವೆಸಗುವ ಅವರ ಶಿಷ್ಯೆ ಸ್ಯಾಮ್ಸನಳಂತಹವರಿಗೆ ಉತ್ತರದಂತಿದೆ.

ಮತಾಂತರಿಗಳ ಕುತಂತ್ರ ಅಷ್ಟಕ್ಕೇ ಕೊನೆಯಾಗಲಿಲ್ಲ. ಜಾನಪದ ಕಲೆಯನ್ನು ಹಿಂದೂಧರ್ಮದಿಂದ ವಿಭಜಿಸಲು ಹುನ್ನಾರವನ್ನೇ ನಡೆಸಿದರು. ಜಾನಪದವನ್ನು ದ್ರಾವಿಡ ಕಲೆಯೆಂದು ವರ್ಗೀಕರಿಸಿ ಆರ್ಯರ ವಿರುದ್ಧ ನಡೆದ ಪ್ರತಿಭಟನೆ ಎನ್ನಲಾಯಿತು. ಜಾನಪದ ದೇವದೇವಿಯರು ಜೈನ ಹಾಗೂ ಬೌದ್ಧ ಧರ್ಮದಿಂದ ಬಂದು ಶೈವರಾಗಿ ಪರಿವರ್ತಿತರಾದವರು ಎಂದು ಇತಿಹಾಸವನ್ನು ತಿರುಚಲಾಯಿತು. ಜಾನಪದ ಗೀತೆಗಳನ್ನು ಕ್ರಿಸ್ತೀಕರಣಗೊಳಿಸಿ ಅವೇ ಮೂಲಗೀತೆಗಳೆಂದು ಬಿಂಬಿಸಲಾಯಿತು. ಈ ಮತಿಹೀನರು ಮುರುಗನ್ ಎಂದರೆ ಕ್ರಿಸ್ತನೇ ಎಂದು ಕಥೆಕಟ್ಟಿ, ಮುರುಗನ್ ಪತ್ನಿ ವಲ್ಲಿಯನ್ನು ಕ್ರಿಸ್ತನ ತಾಯಿ ಮೇರಿ ಎಂದು ಹೇಳಿ ತಮ್ಮ ಮತಾಂತರದ ಕೆಲಸವನ್ನು ಚುರುಕುಗೊಳಿಸಿದರು. ಫೋರ್ಡ್ ಫೌಂಡೇಶನ್ನಿನ ಧನಸಹಾಯ ಪಡೆದು ಕಾರ್ಯ ನಿರ್ವಹಿಸುವ ಜೆಸ್ಯೂಟ್ ಕಾಲೇಜು ತಿರುಚಿ ಕ್ರಿಸ್ತೀಕರಣಗೊಳಿಸಿದ ಇತಿಹಾಸ-ಪುರಾಣಗಳನ್ನು ತುರುಕಿದ ಪಠ್ಯ ಪುಸ್ತಕವೊಂದನ್ನು ಬಿಡುಗಡೆಗೊಳಿಸಿತು. ಭಾರತ, ವಂದೇಮಾತರಂ, ಇತಿಹಾಸ-ಪುರಾಣಗಳನ್ನು ಅವಹೇಳನ ಮಾಡುವ ಇನ್ನೊಂದು ಪುಸ್ತಕವನ್ನು ಕೂಡಾ ಈ ಸಂಸ್ಥೆ ಪ್ರಕಟಿಸಿದೆ. ಇತ್ತೀಚೆಗಂತೂ ಮತಾಂತರದ ವ್ಯವಸ್ಥಿತ ಪ್ರಯತ್ನಗಳೇ ನಡೆಯುತ್ತಿವೆ. ತಮಿಳುನಾಡಿನಲ್ಲಿ ನವಿಲನ್ನು ವಾಹನವಾಗುಳ್ಳ ಮುರುಗನ್ ಜಾಗದಲ್ಲಿ ಯೇಸುವನ್ನು ಚಿತ್ರಿಸಿದರೆ, ಕೇರಳದಲ್ಲಿ ಕೃಷ್ಣನ ಜಾಗದಲ್ಲಿ ಯೇಸುವನ್ನು ಕುಳ್ಳಿರಿಸಲಾಗಿದೆ. ಧ್ವಜಸ್ಥಂಭ, ಸಹಸ್ರನಾಮಾರ್ಚನೆ, ಹಣ್ಣುಕಾಯಿ, ಮಂಗಳಾರತಿ, ತೀರ್ಥಪ್ರಸಾದಗಳನ್ನೂ ಚರ್ಚುಗಳಲ್ಲಿ ಆರಂಭಿಸಲಾಗಿದೆ. ಎಲ್ಲರೂ ಒಂದೇ, ನಮ್ಮಂತೆಯೇ ಎನ್ನುವ ಹಿಂದೂಗಳ ಭೋಳೇತನ, ಆಗುವುದೆಲ್ಲಾ ಒಳ್ಳೆಯದಕ್ಕೇ ಎನ್ನುವ ನಿರ್ಲಿಪ್ತ ಮನೋಭಾವಗಳೇ ಹಿಂದೂ ಧರ್ಮಕ್ಕೆ ಮುಳ್ಳಾದದ್ದು. ತನ್ನ ವಿಸ್ತರಣೆಗಾಗಿ ಕ್ರಿಶ್ಚಿಯಾನಿಟಿ ನಿರಂತರ ಪರಿಷ್ಕರಣೆ ಹೊಂದುತ್ತಾ ತಂತ್ರಗಳನ್ನು ಉಪಯೋಗಿಸುತ್ತಾ ಮತಾಂತರ ಕಾರ್ಯವನ್ನು ತೀವ್ರಗೊಳಿಸುತ್ತಿರುತ್ತದೆಯೆನ್ನುವ ವಿಚಾರ ಹಿಂದೂಗಳಿಗೆ ಅರಿವಾದಾಗ ಕಾಲ ಮುಗಿದು ಹೋಗಿರುತ್ತದೆ. ಜ್ಞಾನದ ನಿಧಿಯೇ ಬತ್ತಿ ಹೋಗುತ್ತಿರುವುದನ್ನು ಕಂಡು ಮಹಾಕಾಲ “ನಟರಾಜ” “ಲಯ”ವನ್ನಲ್ಲದೇ ಮತ್ತೇನು ಮಾಡಿಯಾನು?

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!