ಪ್ರವಾಸ ಕಥನ

ಗಮನ ಸೆಳೆವ ಗ್ರೇಟ್ ಬ್ರಿಟನ್

ಯೂರೋಪ್ ಖಂಡದ ವಾಯವ್ಯ ಭಾಗದ ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲೆಂಡ್ ಮತ್ತು ಉತ್ತರ ಐರ‍್ಲೆಂಡ್‌ಗಳನ್ನೊಳಗೊಂಡ ಸಮುಚ್ಚಯವೇ ಯುನೈಟೆಡ್‌ಕಿಂಗ್‌ಡಮ್‌. ಇವುಗಳಲ್ಲಿರಾಜಕೀಯವಾಗಿ ಪ್ರತ್ಯೇಕ ಅಸ್ತಿತ್ವವನ್ನುಳಿಸಿಕೊಂಡ ಐರ‍್ಲೆಂಡಿನ ಬಹುಭಾಗವನ್ನು ಹೊರತುಪಡಿಸಿದರೆ, ಪ್ರಾಕೃತಿಕ ಲಕ್ಷಣಗಳಿಗೆ ಅನುಸಾರವಾಗಿ ಇನ್ನುಳಿದ ಪ್ರದೇಶವನ್ನುಭೌಗೋಳಿಕವಾಗಿ, ಹೈಲ್ಯಾಂಡ್ ಮತ್ತು ಲೋಲ್ಯಾಂಡ್ ಎಂದು ವಿಭಾಗಿಸಬಹುದು. ಈ ಸಮುಚ್ಚಯದಲ್ಲೊಂದಾದ ಇಂಗ್ಲೆಂಡಿನ ಹರ್ಟ್ಫೋರ್ಡ್ಶೈರ್ ಕೌಂಟಿಯ ವೆಲ್ವಿನ್ ಗಾರ್ಡನ್ಸಿಟಿಯಲ್ಲಿರುವ ಟೆಸ್ಕೊ ಕಂಪೆನಿಯ ಮುಖ್ಯ ಕಛೇರಿಯಲ್ಲಿ ಕೆಲಸದ ನಿಮಿತ್ತ ತೆರಳಲು ಅವಕಾಶವೊದಗಿತು. ಹೊರಡುವುದಕ್ಕೆ ಅನುವಾದೆ.

ಅಬುದಾಭಿ ಸಂಪರ್ಕ ವಿಮಾನದ ಮೂಲಕ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣವನ್ನು ತಲುಪುವಾಗ ಮಧ್ಯಾಹ್ನ ಎರಡರ ಸಮಯವಾದರೂ ಮೈ ಕೊರೆಯುವ ಚಳಿ. ಸುಮಾರು 6ಡಿಗ್ರಿ ಚಳಿಯಲ್ಲಿ ಟ್ಯಾಕ್ಸಿ ಬಾಡಿಗೆ ಪಡೆದು 22 ಮೈಲಿಯ ದೂರದ ವೆಲ್ವಿನ್ ಗಾರ್ಡನ್ ಸಿಟಿಯನ್ನು ತಲುಪಿದ್ದಾಯಿತು. ಹದವಾದ ಏರಿಳಿತಗಳು, ವಿಸ್ತಾರವಾದ ಬಯಲು ಮತ್ತು ಹಸಿರಿನ ಸಸ್ಯ ಸಮೃದ್ಧಿಯಿಂದ ಕೂಡಿರುವ ವೆಲ್ವಿನ್ ಗಾರ್ಡನ್ ಸಿಟಿ ತುಂಬ ರಮ್ಯವಾದುದು. ವೇಲ್ಸ್ ಮತ್ತು ಸ್ಕಾಟ್‌ಲೆಂಡ್‌ಗಳೆರಡೂ ಪ್ರಾಕೃತಿಕವಾಗಿ ಬೆಟ್ಟ-ಕಾಡು -ಕಣಿವೆಗಳಿಂದ ಸಾಕಷ್ಟು ಭಿನ್ನವಾದ ಲಕ್ಷಣಗಳನ್ನು ಪಡೆದಿರುವಂತೆ ಜನಜೀವನದ ಮತ್ತು ಭಾಷಿಕಸ್ತರಗಳ ವ್ಯತ್ಯಾಸವನ್ನೂ ಹೊಂದಿವೆ.

Lords Cricket ground

Lords Cricket ground

ಆಕರ್ಷಣೆಗಳಾದರೊ ಹಲವಾರು; ಆದರೆ ಇದ್ದ ಸಮಯ ಕ್ಲುಪ್ತವಾದುದು. ಮೂರರಿಂದ ಆರು ತಿಂಗಳಾದರು ಬೇಕು ಇಡೀ ಲಂಡನ್ ನಗರದಲ್ಲಿರುವ ಪ್ರವಾಸೀ ತಾಣಗಳನ್ನು ವೀಕ್ಷಿಸಲು. ನನಗಿದ್ದ ಆರು ವಾರಗಳ ಕಾಲ ಸಾಕಾಗದೆಂಬ ಖೇದವೂ ಆಯಿತೆನ್ನಿ. ಮುಂದೆ ಯು.ಕೆ.ಯ ಸಂವಿಧಾನ ಸದನದತ್ತ ಹೆಜ್ಜೆ ಬೆಳೆಸಿದೆ. ವೆಸ್ಟ್ ಮಿನ್‌ಸ್ಟರ್ ಅಬ್ಬೆ ಮುಖಾಂತರವಾಗಿ ಮುಖ್ಯರಸ್ತೆಯನ್ನು ಹಾದು ಬಲಭಾಗಕ್ಕೆ ಬಂದರೆ ಥೇಮ್ಸ್ ನದಿಯ ದಂಡೆಯಲ್ಲಿರುವ ವೆಸ್ಟ್ ಮಿನ್‌ಸ್ಟರ್ ಅರಮನೆ ಸಿಗುತ್ತದೆ. ಇದು ಯುನೈಟೆಡ್ ಕಿಂಗ್ಡಮ್ ಸಂಸತ್ತಿನ ಎರಡೂ ಸದನಗಳು ಸಭೆ ಸೇರುವ ಕೇಂದ್ರ ಸ್ಥಳ. ಈ ಸುಂದರವಾದ ಕಟ್ಟಡವು ಒಮ್ಮೆ ಬೆಂಕಿ ಅನಾಹುತದಿಂದ ಮತ್ತು ಎರಡನೇ ವಿಶ್ವ ಸಮರದಲ್ಲಿ ಜರ್ಮನ್ನರ ದಾಳಿಯಿಂದಾದ ಹಾನಿಗೊಳಗಾದರೂ ಪುನರ್ ನಿರ್ಮಾಣವಾದುದು. ಅರಮನೆಗೆ ಮೂರು ಪ್ರಮುಖ ಗೋಪುರಗಳು. ನೈಋತ್ಯಕ್ಕಿರುವ ವಿಕ್ಟೋರಿಯಾ ಗೋಪುರವು ದೊಡ್ಡದು. ಬಿಗ್‌ಬೆನ್‌ ಎಂದೇ ಜಗತ್ಪ್ರಸಿದ್ಧವಾಗಿರುವ ಗಡಿಯಾರಗೋಪುರದ ಎತ್ತರವು ವಿಕ್ಟೋರಿಯಾ ಗೋಪುರಕ್ಕಿಂತ ಸ್ವಲ್ಪ ಕಡಿಮೆ. ರಚನೆಯು ಸ್ವಲ್ಪ ತೆಳುವಾದುದು. 1859ರಲ್ಲಿ ಚಾಲನೆಗೊಂಡ ಈ ಬೃಹತ್‌ ಗಡಿಯಾರವು 19ನೇ ಶತಮಾನದಲ್ಲಿಗಡಿಯಾರ ತಯಾರಿಕರಿಗೆ ಅಸಾಧ್ಯವೆನಿಸಿದ್ದ ನಿಖರತೆಯ ಗುಣಮಟ್ಟವನ್ನು ಸಾಧಿಸಿ ತೋರಿಸಿತ್ತಂತೆ. ಅದರ ವಿಶ್ವಾಸಾರ್ಹತೆಯು ಈಗಲೂ ಪ್ರಸ್ತುತ.

ವೆಸ್ಟ್‌ಮಿನಿಸ್ಟರ್’ನ ಬೃಹತ್ ಗಡಿಯಾರದಿಂದ ಸುಮಾರು ಒಂದು ಫರ್ಲಾಂಗ್’ನಷ್ಟು ದೂರ ಕ್ರಮಿಸಿದರೆ ಥೇಮ್ಸ್ ನದಿಯ ಸೇತುವೆಯ ಎಡಕ್ಕೆ ಆತುಕೊಂಡು ನಿಂತುಕೊಂಡಿರುವುದೆ ಲಂಡನ್ ಐ. ಹತ್ತರಿಂದ ಹದಿನೈದು ಚದುರ ಅಡಿಯ ಮೊಟ್ಟೆಯಾಕಾರದ ಹಲವು ಗಾಜಿನ ಗೂಡುಗಳನ್ನೊಳಗೊಂಡ ಈ ವೃತ್ತಾಕಾರದ ವಿನ್ಯಾಸದ ಪ್ರತಿ ಮೊಟ್ಟೆಯಲ್ಲೂ ಸುಮಾರು 20 – 25 ಮಂದಿಯನ್ನು, ಅರ್ಧಗಂಟೆಗೊಂದು ಸುತ್ತಿನಂತೆ, ಇನ್ನೂರು ಮೀಟರ್ ಮೇಲೇರಿಸಿ ಸಮಗ್ರ ನಗರವನ್ನು ದರ್ಶಿಸಿ ಕೆಳಕ್ಕಿಳಿಸಲಾಗುತ್ತದೆ. ಮೊಟ್ಟೆಯಾಕಾರವು ನಿಧಾನವಾಗಿ ಚಲಿಸುತ್ತಿದ್ದಂತೆ, ಎಡಭಾಗದ ಅಕ್ವೇರಿಯಂ ಮ್ಯೂಸಿಯಮ್, ನಂತರ ಬಲಕ್ಕೆ ಸಿಗುವ ವೆಸ್ಟ್ ಮಿನಿಸ್ಟರ್ ಸೇತುವೆ ಮತ್ತು ಬಿಗ್ ಬೆನ್ ಗಡಿಯಾರ ಗೋಪುರಗಳು ನಿಮ್ಮ ದರ್ಶನಕ್ಕೆ ಲಭ್ಯ. ಎರಡು ಕಿಲೊಮೀಟರ್ ದೂರದಿಂದಲೂ ಅದು ಕಾಣುತ್ತದೆಯಷ್ಟೆ. ಮತ್ತಷ್ಟು ಮೇಲೆ ಹೋದ ನಂತರ ಇಡೀ ಲಂಡನ್ ನಗರದ ವಿಹಂಗಮ ನೋಟದ ರಮಣೀಯತೆಯನ್ನು ಸವಿಯಬೇಕಷ್ಟೆ!

ಥೇಮ್ಸ್ ನದಿಯ ಗೋಪುರ ಸೇತುವೆ, ಮಡಮ್ ಟುಸ್ಸಾಡ್ಸ್, ಬ್ರಿಟಿಷ್ ಮ್ಯೂಸಿಯಮ್ , ಸೈನ್ಸ್ ಮ್ಯೂಸಿಯಮ್ ಮತ್ತಿತರೆ ತಾಣಗಳನ್ನು ವೀಕ್ಷಿಸಿ ಸೆಂಟ್ ಜಾನ್ಸ್ ವುಡ್ ನಲ್ಲಿರುವ ನನ್ನ ಮೆಚ್ಚಿನ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ತೆರಳಿದೆ. ನನ್ನಂತೆ ಅಸಂಖ್ಯ ಕ್ರಿಕೆಟ್‌ಪ್ರಿಯರಿಗೆ ಇದು ತೀರ್ಥಕ್ಷೇತ್ರವೇ ಸರಿ. ಲಾರ್ಡ್ಸ್‌ ಮೈದಾನವು ಬಿಗ್ ಬೆನ್ ಗೋಪುರದಿಂದ ವಾಯವ್ಯಕ್ಕೆ 2ಮೈಲಿಗಳಷ್ಟು ದೂರವಿದೆ. ಸುಮಾರು ಹದಿನೈದು ಪೌಂಡುಗಳನ್ನು ಪಾವತಿಸಿದರೆ ಲಾರ್ಡ್ಸ್ ಮೈದಾನದ ಇತಿಹಾಸವನ್ನು ತಿಳಿಯಬಹುದು. ಸ್ಟೇಡಿಯಂ ವೀಕ್ಷಿಸಲು ಗೈಡ್ ಸಹಾಯವಿದೆ.ಡ್ರೆಸ್ಸಿಂಗ್ ರೂಮುಗಳು, ಪೆವಿಲಿಯನ್ ಎಂಡ್, ಮೀಡಿಯಾ ಸೆಂಟರ್ ಮುಂತಾದವನ್ನೆಲ್ಲ ನೋಡಬಹುದು. ಭಾರತವು 1983ರಲ್ಲಿ ಮೊದಲ ಸಲ ವಿಶ್ವಚಾಂಪಿಯನ್‌ ಆದಾಗ, ಟ್ರೋಫಿಯನ್ನು ಹಿಡಿದು ಕಪಿಲ್ ದೇವ್ ನಿಂತಿದ್ದ ಸ್ಥಳದಲ್ಲಿ ಅಲ್ಲಿನ ಗೈಡ್ ನನ್ನ ಕೈ ಹಿಡಿದು ನಿಲ್ಲಿಸಿದ್ದು ನಿಜಕ್ಕೂ ನನಗೆ ಖುಷಿ ಕೊಟ್ಟ ಸಂಗತಿ. ಕ್ರಿಕೆಟ್ಟಿನ ಇತಿಹಾಸದ ಹಲವಾರು ಮರೆಯಲಾಗದ ಕ್ಷಣಗಳು ಕೈಹಿಡಿದು ಎಳೆಯುತ್ತವೆ.

Cambridge University

Cambridge University

ಜಗತ್ತಿನ ಅಗ್ರಗಣ್ಯ ವಿಶ್ವವಿದ್ಯಾಲಯದಲ್ಲೊಂದಾದ ಕೇಂಬ್ರಿಜ್‌ ಯುನಿವರ್ಸಿಟಿಯಿರುವುದು ವೆಲ್ವಿನ್ ನಿಂದ ಸುಮಾರು 40 ಮೈಲಿ ಈಶಾನ್ಯಕ್ಕಿರುವ ಕೇಂಬ್ರಿಜ್‌ಷೈರ್‌ ಕೌಂಟಿಯಲ್ಲಿ; ಕೇಮ್‌ ನದಿಯ ತೀರದಲ್ಲಿ. ಇಲ್ಲಿಯ ರಸ್ತೆಗಳು ಕಿರಿದಾದರೂ ಆಕರ್ಷಕ ಶಾಪಿಂಗ್ ಮಳಿಗೆಗಳಿವೆ. ಕೇಂಬ್ರಿಜ್‌ನಲ್ಲಿರುವ ಅನೇಕ ಕಾಲೇಜುಗಳು ಜಗತ್ತಿನಾದ್ಯಂತ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಅನೇಕ ಪ್ರಮುಖ ಆವಿಷ್ಕಾರಗಳಿಗೆ ನೆಲೆಯಾದದ್ದು ಈ ಕ್ಷೇತ್ರ. ಕೇಂಬ್ರಿಜ್‌‌‌‌‌‌‌‌ ವಿಶ್ವವಿದ್ಯಾನಿಲಯದಿಂದ ಹೊರಬಂದ ವಿದ್ವಾಂಸರುಗಳ ಸಂಖ್ಯೆ ನಿಜಕ್ಕೂ ಅಗಾಧ. ಕಲೆ-ಸಾಹಿತ್ಯ-ವಿಜ್ಞಾನ-ತತ್ತ್ವಶಾಸ್ತ್ರ-ತಂತ್ರಜ್ಞಾನ-ಇತಿಹಾಸ-ಮಾನವಿಕಶಾಸ್ತ್ರ ಹೀಗೆ ಎಷ್ಟೋ ಅಧ್ಯಯನದ ಶಿಸ್ತುಗಳಿಲ್ಲಿವೆ. ಈ ವಿಶ್ವವಿದ್ಯಾಲಯದ ಪ್ರಸಾರಾಂಗವಂತೂ ವಿಶ್ವದ ಸಮಸ್ತ ಜ್ಞಾನಪಿಪಾಸುಗಳಿಗೆ ಗಂಗೋತ್ರಿಯಿದ್ದಂತೆ.

ವೆಲ್ವಿನ್’ನಿಂದ 25 ಮೈಲಿ ನೈಋತ್ಯಕ್ಕೆ ಕ್ರಮಿಸಿದರೆ ವೆಂಬ್ಲಿ ಕೌಂಟಿಯಲ್ಲಿ ಅದ್ಭುತವಾದ ಸ್ವಾಮಿ ನಾರಾಯಣ ದೇವಸ್ಥಾನವನ್ನು ನೋಡಬಹುದು. ಇದು ಇಡೀ ಯುರೋಪಿನಲ್ಲಿ ಅತಿ ದೊಡ್ದದೇವಸ್ಥಾನ. ದೇವಸ್ಥಾನದ ಒಳಾಂಗಣವು ಮನಮೋಹಕವಾದ ಮಾರ್ಬಲ್ ಕಲ್ಲಿನ ಕೆತ್ತನೆಯಿಂದ  ನಮ್ಮನ್ನು ಪುಳಕಗೊಳಿಸುತ್ತದೆ.

ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು ಮತ್ತು ಸಾಮಾನ್ಯ ಜೀವನವು ನಮ್ಮ ದೇಶದಂತಲ್ಲದೇ ದುಬಾರಿಯಾದುವು. ಅದಕ್ಕೆ ತಕ್ಕಂತೆ ಪ್ರವಾಸಿಗರ ಮನಸೆಳೆಯುವ ಮೆರಗು. ಆರು ವಾರಗಳು ಸಾಕಾಗಲಿಲ್ಲವಲ್ಲ ಎಂಬ ಹಳಹಳಿ ಬಿಟ್ಟರೆ ರಮ್ಯವಾದ ನೆನಪುಗಳೊಂದಿಗೆ ಭಾರತಕ್ಕೆ ಮರಳಿದ್ದಾಯಿತು. ಬೆಂಗಳೂರಿನ ಸಂಚಾರ ವ್ಯವಸ್ಥೆಯ ಪರಿಯನ್ನು ನೋಡಿದಾಗ ಆ ದೇಶದ ವ್ಯವಸ್ಥೆ ಮತ್ತು ಶಿಸ್ತುಗಳು ನೆನಪಾದವು. ಅಲ್ಲಿನ ಜನರು ತಮ್ಮ ದೇಶದ ವ್ಯವಸ್ಥೆಯಲ್ಲಿಟ್ಟಿರುವ ವಿಶ್ವಾಸವು ನೆನಪಾಗಿ ನಮ್ಮ ದೇಶದ ಜೀವನವನ್ನು ಸಿಂಹಾವಲೋಕನ ಮಾಡುವಂತಾಯಿತು. ನಮ್ಮ ದೇಶಕ್ಕೆ ಹೋಲಿಸಿದರೆ ಸಾಕಷ್ಟು ಚಿಕ್ಕದೇಶವಾದರೂ ತಮ್ಮ ಪರಂಪರೆಯ ಬಗ್ಗೆ ಆ ಜನರಿಗಿರುವ ಆದರ, ಹೆಮ್ಮೆ; ತಮ್ಮ ಪರಿಸರದ ಬಗೆಗಿರುವ ಅವರ ಪ್ರೀತಿ, ನಗರೀಕರಣವು ಪ್ರಧಾನವಾದರೂ ಗ್ರಾಮಗಳಲ್ಲಿ ಕಾಣುವ ಅಚ್ಚುಕಟ್ಟು – ಇವೆಲ್ಲ ನಮ್ಮನ್ನು ತಾಕುತ್ತವೆ. ಭವಿಷ್ಯದ ಪರಿವೆಯೇ ಇಲ್ಲದೆ ನಡೆದಿರುವ ನಮ್ಮ ದೇಶದ ವಿದ್ಯಮಾನಗಳು ಇನ್ನಷ್ಟು ಕಾಡುತ್ತವೆ.

-Sandeep Sharma

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!