ಪ್ರವಾಸ ಕಥನ

ಕಾಶಿ ಯಾತ್ರೆಯ ಅನುಭವ – ಭಾಗ 5

ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮಲ್ಲಿ ಎಂಟು ಪ್ರಕಾರದ ವಿವಾಹ ಪದ್ಧತಿಗಳಿವೆ. ಆದರೆ ಬಹುತೇಕ ಎಲ್ಲರೂ ಒಂದೇ ರೀತಿಯಲ್ಲಿ ಮದುವೆಯಾಗ್ತಾರೆ. ಆ ಮದುವೆಯ ವಿಧಾನದಲ್ಲಿ ಈ ಕಾಶೀಯಾತ್ರೆ ಅನ್ನೋ ಒಂದು ಅಣಕು ಪ್ರದರ್ಶನದಂಥಾ ವ್ಯರ್ಥ ಆಚರಣೆ ಚಾಲ್ತಿಯಲ್ಲಿದೆ. ಅವರವರ ಮದುವೆಯ ಉದ್ದೇಶಕ್ಕೆ ತಕ್ಕಂತೆ ಮದುವೆಯ ವಿಧಾನವೂ ಬದಲಾಗಬೇಕು. ಉದ್ದೇಶಕ್ಕೆ ತಕ್ಕ ಕ್ರಿಯೆ ಅನ್ನೋದು common sense. ಆದರೆ ಎಲ್ಲಾ ವಿಷಯಗಳಲ್ಲೂ ಆ ಸಾಮಾನ್ಯ ತಿಳುವಳಿಕೆಯ ಕೊರತೆ ಸಮಾಜದಲ್ಲಿ ಎಷ್ಟು ತಾರಕಕ್ಕೇರ್ತದೆ ಅಂದ್ರೆ ಕಾಲ-ಕಾಲಕ್ಕೆ ಒಂದಿಷ್ಟು ಜನ reformer’ಗಳು ಬಂದು ಅದನ್ನು ಸರಿಪಡಿಸಿ ಹೋಗ್ತಲೇ ಇರಬೇಕಾಗ್ತದೆ. ಆದರೂ ಅದು ಎಂದಿಗೂ ಪೂರ್ತಿಯಾಗಿ ಸರಿಯಾಗುವ ಸಮಸ್ಯೆಯಲ್ಲ. ಒಬ್ಬರ ಸ್ವಾರ್ಥ ಇನ್ನೊಬ್ಬರ ಶೋಷಣೆಗೆ ಕಾರಣ. ಹಾಗೆಯೇ ಒಂದು ಸಮೂಹದ/ತಲೆಮಾರಿನ ಅಜ್ಞಾನವೂ ಕೂಡ ತನ್ನೊಳಗಿನ ಜನರ ಶೋಷಣೆಗೆ ಕಾರಣವಾಗ್ತದೆ. ಅದು unintentional harassment. ಈ ಮದುವೆ ಮಾಡುವ ವಿಷಯದಲ್ಲಿರುವ ತಿಳುವಳಿಕೆಯ ಕೊರತೆ ಭಾರತೀಯ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದ ಸಮಸ್ಯೆ. ಆದರೆ ಅದನ್ನು ಸರಿಪಡಿಸುವಂಥಾ ಬೆಳಕು ಯಾವ ಕಡೆಯಿಂದಲೂ ಬರುವ ಲಕ್ಷಣಗಳು ತೋರುತ್ತಿಲ್ಲ.

ಸಾಂಗ ವೇದಾಧ್ಯಯನ ಮಾಡಿ, ಕುಲಪತಿಗಳಿಂದ ”ಸ್ನಾತಕ ವ್ರತ” ಬೋಧಿಸಿಕೊಂಡು ”ಸ್ನಾತಕ” ಆಗಬೇಕು. ನಂತರದ ನಾಲ್ಕೂ ವ್ರತಗಳನ್ನ ಮುಗಿಸಿ ಮುಂದಿನ ಅಧ್ಯಯನಕ್ಕಾಗಿ ಕಾಶಿಗೆ ಹೊರಡಬೇಕು. ಆಗ ಅವನಿಗೆ ಪಿತೃವರ್ಗದವರು/ ಹಿರಿಯರು ಮದುವೆ ಮಾಡಿಕೊಂಡು ಹೆಂಡತಿಯ ಜೊತೆಗೇ ಹೋಗು ಅಂತ ತಿಳಿಸಿದಮೇಲೆ ಅವನು ”ಮದರ್ಥಂ ಕನ್ಯಾಂ ವೃಣೀಧ್ವಂ” “ನನಗಾಗಿ ಕನ್ಯೆಯನ್ನು ಹುಡುಕಿರಿ” ಅಂತ ತನ್ನ ತಂದೆಯ ಸಮಾನ ವಯಸ್ಸಿನವರನ್ನು ವಿನಂತಿಸಬೇಕು. ಅವರು ನೋಡಿದ ಕನ್ಯೆಯನ್ನು ವಿವಾಹ ಮಾಡಿಕೊಂಡು “ಗೃಹ್ಯಾಗ್ನಿ ಸಮೇತನಾಗಿ” ”ಪತ್ನಿಯ ಜೊತೆಗೆ” ಕಾಶಿಗೆ ಹೊರಡಬೇಕು. ಕಾಶಿಯಲ್ಲಿ ಹೆಚ್ಚಿನ ಅಧ್ಯಯನ ಮುಗಿಸಿ ಊರಿಗೆ ಮರಳಿ ಬರಬೇಕು. ಇದು ”ಬ್ರಾಹ್ಮವಿವಾಹದ’ ವಿಧಾನ. ಅಂದರೆ ಈ ವಿಧಾನ ನಡೆಯುತ್ತಿದ್ದ ದಿನಗಳಲ್ಲಿ ಕಾಶಿಯಲ್ಲಿ ಸಾಂಗ ವೇದಾಧ್ಯಯನ ಮುಗಿದ ಮೇಲೆ ಮಾಡುವ ಮೇಲ್ಮಟ್ಟದ ಶಾಸ್ತ್ರಾಧ್ಯಯನ ಮಾಡಲಿಕ್ಕೆ ಉನ್ನತ ಮಟ್ಟದ ಶಾಸ್ತ್ರಬೋಧಕರಿದ್ದರು. ಅಲ್ಲಿಗೆ ”ಪತ್ನಿ ಮತ್ತು ಅಗ್ನಿಯ ಸಮೇತನಾಗಿ” ಬರುವ ಶಾಸ್ತ್ರಾರ್ಥಿಗೆ ವಾಸಕ್ಕೆ, ಗೃಹ್ಯಾಗ್ನಿಯ ಉಪಾಸನೆ ಮಾಡಲಿಕ್ಕೆ ಮತ್ತು ಅಧ್ಯಯನಕ್ಕೆ ವ್ಯವಸ್ಥೆ ಇತ್ತು” ಅನ್ನೋದು ಸರಳವಾಗಿ ಅರ್ಥವಾಗ್ತದೆ. ಆಗಿನ ಕಾಶೀರಾಜರು ಈ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿರಲಿಕ್ಕೇ ಬೇಕು. ಶಾಸ್ತ್ರಿಗಳು ಮತ್ತು ಶಾಸ್ತ್ರಾರ್ಥಿಗಳಾಗಿ ಕೈಯಲ್ಲಿ ಅಗ್ನಿಯನ್ನು ಹಿಡಿದು ಬರುವ ದಂಪತಿಗಳು – ಈ ಎರಡೂ ವರ್ಗದ-ಪಾಲನೆ ಪೋಷಣೆ ಕಾಶಿಯಲ್ಲಿ ಸಮೃದ್ಧವಾಗಿ ನಡೆಯುತ್ತಿದ್ದ ಕಾಲ ಇದ್ದಿರಲಿಕ್ಕೇ ಬೇಕು. ಆ ಕಾಲ ಯಾವುದು ಮತ್ತು ಆಗಿನ ರಾಜರು ಯಾರು ಅನ್ನೋದು ಇವತ್ತು ನಮಗೆ ಸಿಗುವ ಕಾಶಿಯ ಇತಿಹಾಸದಲ್ಲಿ ಲಭ್ಯವಿಲ್ಲ. ಬ್ರಾಹ್ಮವಿವಾಹ ವಿಧಿಯಲ್ಲಿ ಸೂತ್ರಕಾರರು ಬರೆದ ”ಕಾಶೀ ಯಾತ್ರಾಂ ಗಮಿಷ್ಯಾಮಿ” ಅನ್ನೋ ಸಾಲು ಮಾತ್ರ ಉಳಿದಿದೆ. ಅದರ ಹಿನ್ನೆಲೆ ಗೊತ್ತಿಲ್ಲದೇ ಮಾಡುವ ”ಕಾಶೀ ಯಾತ್ರೆ” ಅನ್ನುವ ನಾಟಕ ಮಾತ್ರ ಮದುವೆಯಲ್ಲಿ ಉಳಿದುಕೊಂಡಿದೆ.

ಅನೇಕ ಸಾಧನಾ ಮಾರ್ಗಗಳ ಜನರ ಹೊರತಾಗಿ, ತನ್ನ ಭೌಗೋಳಿಕ ಉಪಯುಕ್ತತೆಯ ಹೊರತಾಗಿ ಮೇಲ್ಮಟ್ಟದ ಶಾಸ್ತ್ರಾಭ್ಯಾಸಕ್ಕೂ ಕೂಡ ಕೇಂದ್ರವಾಗಿದ್ದ ಕಾಶಿಯಲ್ಲಿ ಈಗ ಎಷ್ಟು ಎಷ್ಟು ಶಾಸ್ತ್ರ ಪಂಡಿತರು ಉಳಿದಿದ್ದಾರೆ ಅನ್ನೋ ಕುತೂಹಲ ನನಗೆ ಅನೇಕ ವರ್ಷಗಳಿಂದ ಇತ್ತು. ಗಣೇಶ್ವರ ಶಾಸ್ತ್ರಿ ದ್ರವಿಡ, ಮತ್ತು ಮಣಿ ಶಾಸ್ತ್ರಿ ದ್ರವಿಡ ಎಂಬ ಇಬ್ಬರು ಅಣ್ಣ-ತಮ್ಮಂದಿರು ಮಾತ್ರ ಇದ್ದಾರೆ ಅನ್ನೋ ಸುದ್ದಿ ನನಗೆ ಕೆಲ ವರ್ಷಗಳ ಹಿಂದೆ ಸಿಕ್ಕಿತ್ತು. ಅವರಿಬ್ಬರೂ ಕೂಡ ದಕ್ಷಿಣ ಭಾರತದಿಂದ ವಲಸೆಹೋಗಿ ನೆಲೆಯಾದ ಕುಂಟುಂಬಗಳಿಗೆ ಸೇರಿದವರೇ. ಹರ್ಯಾಣಾದಲ್ಲಿ ಒಂದಿಷ್ಟು ಶಾಸ್ತ್ರಿಗಳು ಉಳಿದಿದ್ದಾರೆ ಅನ್ನೋದನ್ನು ಬಿಟ್ಟರೆ ಸಂಪ್ರದಾಯ-ಶುದ್ಧವಾಗಿ ಗುರುಮುಖವಾಗಿ ಶಾಸ್ತ್ರಾಭ್ಯಾಸ ಮಾಡಿದವರು ಇಡೀ ಉತ್ತರಭಾರತದಲ್ಲಿ ಎಲ್ಲಿಯೂ ಸಿಗೋದಿಲ್ಲ. ಯುನಿವರ್ಸಿಟಿಗಳ Philosophy department’ಗಳಲ್ಲಿ ಓದುವವರಿಗೆ ”ಭಾರತೀಯ ದರ್ಶನಗಳು” ಅನ್ನೋ ವಿಷಯ ಇದೆಯೇ ಹೊರತು ಪೂರ್ತಿಯಾಗಿ ಭಾರತೀಯ ಶಾಸ್ತ್ರಾಧ್ಯಯನ ಅಲ್ಲಿ ನಡೆಯುವುದಿಲ್ಲ. ಕೇವಲ ಸಂಸ್ಕೃತಕ್ಕಾಗಿಯೇ ಒಂದಿಷ್ಟು ಯುನಿವರ್ಸಿಟಿಗಳಿವೆ. ಅವುಗಳಲ್ಲಿ ಶಾಸ್ತ್ರವಿಷಯದ ”ಶಾಸ್ತ್ರಿ” ಮತ್ತು ”ಆಚಾರ್ಯ” (BA, MA) ಕೋರ್ಸ್’ಗಳಿವೆ. ಆದರೆ ಅಧ್ಯಯನದ ರೀತಿ, ಮತ್ತು ಅದರ ಉದ್ದೇಶ, ಬೋಧಕರಲ್ಲಿಯ ಪಾಂಡಿತ್ಯದ ಕೊರತೆ ಮುಂತಾದ ಅನೇಕ ಕಾರಣಗಳಿಂದಾಗಿ ಪಾರಂಪರಿಕ ವಿದ್ವಾಂಸರಿಗೆ ಇರುವಂತೆ ವೇದಾಧ್ಯಯನದ ಅಡಿಪಾಯ, ವಿಷಯದ ಹಿಡಿತ, ಅಧ್ಯಯನದ ವ್ಯಾಪ್ತಿ ಇರೋದಿಲ್ಲ. ಆರರ ಪೈಕಿ ಒಂದು ಶಾಸ್ತ್ರದಲ್ಲಿಯಾದರೂ ಸಂಪೂರ್ಣ ಪಾಂಡಿತ್ಯ ಇತ್ಯಾದಿಗಳು ಯುನಿವರ್ಸಿಟಿಗಳಲ್ಲಿ ಡಿಗ್ರಿಗಾಗಿ ದರ್ಶನಗಳನ್ನು ಓದುವವರಲ್ಲಿ ಇರಲಿಕ್ಕೆ ಸಾಧ್ಯವೇ ಇಲ್ಲ. ಈ ಮಾತನ್ನು ಸಂಸ್ಕೃತ ಯುನಿವರ್ಸಿಟಿಗಳ ಕುಲಪತಿಗಳೇ ಒಪ್ಪಿಕೊಳ್ತಾರೆ. ವೇದಾಧ್ಯಯನ ಮುಗಿದ ಮೇಲೆ ಶಾಸ್ತ್ರಾಧ್ಯಯನ ಶುರುವಾಗಬೇಕು. ಆದರೆ ಯುನಿವರ್ಸಿಟಿಗಳಲ್ಲಿ 10+2 ಮುಗಿಸಿ ಬಂದವರಿಗೆ ನೇರವಾಗಿ ಶಾಸ್ತ್ರಪ್ರವೇಶ ಮಾಡಿಸಿಬಿಡ್ತಾರೆ. ವೇದಾಧ್ಯಯನದ ಅಡಿಪಾಯ ಇಲ್ಲವೇ ಇಲ್ಲ. ಅದು ಹೇಗೆ ಅಂದರೆ ಸರಿಗಮಪ ಹಾಡಲಿಕ್ಕೂ ಕಲಿಯದೇ ಸಂಗೀತದ ಬಗ್ಗೆ ರಿಸರ್ಚ್ ಮಾಡುವವರ ಹಾಗೆ.

ವಿದ್ವಾಂಸರ ನೆಲೆಯಾಗಿದ್ದ ಕಾಶಿಯಲ್ಲಿ ಈಗ ಎಷ್ಟು ಜನ ವೇದ ಪಂಡಿತರು ಮತ್ತು ಶಾಸ್ತ್ರ ಪಂಡಿತರು ಇದ್ದಾರೆ ಅನ್ನೋದರ ಬಗ್ಗೆ ನನ್ನ ಬಳಿ ಈ ಮೊದಲೇ ಒಂದಷ್ಟು ”ಡಾಟಾ” ಇತ್ತು. ಆ ಮಾಹಿತಿ ಅತ್ಯಂತ ನಿರಾಶಾದಾಯಕವಾದದ್ದು. ದುಃಖ ಕೊಡುವಂಥದ್ದು. ಆದರೂ ಈಗ ಪ್ರತ್ಯಕ್ಷವಾಗಿ ನೋಡೇಬಿಡೋಣ, ಸಾಧ್ಯವಾದರೆ ಗಣೇಶ್ವರ ಶಾಸ್ತ್ರಿಗಳನ್ನು ಭೇಟಿಯಾಗೋಣ. ಕನಿಷ್ಠ ಅರ್ಧ ಘಂಟೆಯಾದರೂ ಅವರೊಂದಿಗೆ ಹರಟುವ ಅವಕಾಶ ಸಿಗಬಹುದು ಅನ್ನೋ ಉತ್ಸಾಹದಲ್ಲಿ ನಾನು ರಿಕ್ಷಾ ಹತ್ತಿ ಹೊರಟಿದ್ದೆ.

ಸಂಸಾರವಿಷವೃಕ್ಷಸ್ಯ ದ್ವೇ ಏವ ರಸವತ್ಫಲೇ
ಕಾವ್ಯಾಮೃತರಸಾಸ್ವಾದಃ ಸಂಗಮಃ ಸಜ್ಜನೈಃ ಸಹ
ಸಂಸಾರ ಅನ್ನೋ ಈ ವಿಷವೃಕ್ಷದಲ್ಲಿ ಎರಡೇ ಎರಡು ಸಿಹಿಯಾದ ಹಣ್ಣುಗಳಿವೆ, ಮೊದಲನೇಯದ್ದು ಕಾವ್ಯಾಮೃತದ ರಸ, ಎರಡನೇಯದ್ದು ಸಜ್ಜನರ/ವಿದ್ವಾಂಸರ ಸಹವಾಸ- ಅಂತ ಯಾರೋ ಸುಭಾಷಿತಕಾರ ಹೇಳಿದ್ದಾನೆ.

ಗ್ಯಾನವಾಪಿ ಚೌಕ್’ನ ಬಳಿ ಇರುವ ಚೌಖಾಂಬಾ ಪುಸ್ತಕಾಲಯದಲ್ಲಿ ಅನುಜ್ ಶುಕ್ಲಾನ ಬಳಿಗೆ ಹೋದೆ. ಅನೇಕ ವರ್ಷಗಳ ಕಾಲ ಪುಸ್ತಕ ಬೇಕು ಅಂತ ಪತ್ರ ಬರೆದರೆ ಸಾಕು, ಹಣದ ಬಗ್ಗೆ ಚಿಂತೆ ಇಲ್ಲದೇ ಪುಸ್ತಕ ಕಳಿಸಿಕೊಡುತ್ತಿದ್ದಾತ. ಪತ್ರಗಳ ಮೂಲಕ ಪರಿಚಯವಿದ್ದರೂ ಮುಖಾ-ಮುಖಿ ಭೇಟಿಯಾಗಿರಲಿಲ್ಲ. ಅವರ ಬಳಿ ಈ ಗಣೇಶ್ವರ ಶಾಸ್ತ್ರಿ ದ್ರವಿಡ, ಮತ್ತು ಮಣಿ ಶಾಸ್ತ್ರಿ ದ್ರವಿಡರ ಬಗ್ಗೆ ವಿಚಾರಿಸಿದೆ. ”ಅವರಿಬ್ಬರೂ ಈಗ ಕಾಶಿಯಲ್ಲಿಲ್ಲ. ಗಣೇಶ್ವರರು ವಾನಪ್ರಸ್ಥಾಶ್ರಮ ಸ್ವೀಕಾರ ಮಾಡಿ ಮಹಾರಾಷ್ಟ್ರದ ಗೋಂದಾವಲಿಯಲ್ಲಿದ್ದಾರೆ. ಮಣಿ ಶಾಸ್ತ್ರಿಗಳು ಚೆನ್ನೈನಲ್ಲಿ ತಮ್ಮ ಮಗಳ ಮನೆಯಲ್ಲಿ ಇದ್ದಾರೆ” ಅನ್ನೋ ಸುದ್ದಿ ಕೇಳಿ ನನ್ನ ಉತ್ಸಾಹವೆಲ್ಲಾ ಇಳಿದು ಹೋಯ್ತು. ಅವರಿಬ್ಬರಿಗೂ ವಯಸ್ಸಾಗಿ ಹೋಯ್ತು. ಅವರ ಶಿಷ್ಯರು, ಮಕ್ಕಳು ಯಾರಾದರೂ ಚೆನ್ನಾಗಿ ತಯಾರಾಗಿದ್ದಾರಾ.? ಅಂತ ನೋಡಿದರೆ ”ಅವರ ತಮ್ಮನ ಮಗನನ್ನು ಇಲ್ಲಿಗೇ ಕರೆಸಿಬಿಡ್ತೀನಿ ಇರಿ” ಅಂತ ಫೋನು ಎತ್ತಿಕೊಂಡು ಶುಕ್ಲಾ ಯಾರಿಗೋ ಫೋನು ಮಾಡಿದರು.

ನಾನು ಪುಸ್ತಕದಂಗಡಿಯನ್ನು ಒಂದು ಸುತ್ತು ಹಾಕುವಷ್ಟರಲ್ಲಿ ಗಣೇಶ ಶಾಸ್ತ್ರಿಗಳ ತಮ್ಮನ ಮಗ ಅಂಗಡಿಗೇ ಬಂದ. ಅವನ ಹೆಸರು ಶೇಖರ. ತಮಿಳು ನಾಡಿನ ಕುಂಭಕೋಣಂನಲ್ಲಿ ಕೃಷ್ಣ ಯಜುರ್ವೇದವನ್ನು ಘನಾಂತದವರೆಗೆ ಓದಿಕೊಂಡು ಬಂದು ಕಾಶಿಯಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ಪೌರೋಹಿತ್ಯವನ್ನು ಮುಂದುವರೆಸಿಕೊಂಡು ಹೋಗ್ತಾ ಇದ್ದಾನೆ. ಘನಾಂತದವರೆಗೂ ಓದಿಕೊಂಡು ಪೌರೋಹಿತ್ಯ ಯಾಕೆ ಮಾಡ್ಕೊಂಡಿದೀರಿ ಅಂತ ಕೇಳಿದ್ದಕ್ಕೆ.. ಹಾಗಾದ್ರೆ ಮತ್ತೇನು ಮಾಡ್ಬೇಕು..? ಪಾಠ ಮಾಡ್ತಾ ಕೂತ್ರೆ ಜೀವನ ನಡೆಸೋಕೆ ಆಗಲ್ಲ. ಹೆಂಡ್ತಿ ಮಕ್ಳು ಮರಿ ಎಲ್ಲಾ ಇರುತ್ತಲ್ಲ. ವಂಶಪಾರಂಪರ್ಯವಾಗಿ ಇಲ್ಲಿ ಒಂದಿಷ್ಟು ಜವಾಬ್ದಾರಿಗಳಿವೆ. ಅವನ್ನೆಲ್ಲ ನಿಭಾಯಿಸಲೇಬೇಕಲ್ವಾ..? ಅಂದ. ನಮ್ಮಿಬ್ಬರನ್ನು ಪರಸ್ಪರ ಪರಿಚಯಿಸಿ ಶುಕ್ಲಾ ತಮ್ಮ ವ್ಯಾಪಾರದಲ್ಲಿ ನಿರತರಾದರು. ನಿಮ್ಮ ದೊಡ್ಡಪ್ಪ “ಸಾಂಗ ವೇದ ವಿದ್ಯಾಲಯ” ಅಂತ ಒಂದು ಗುರುಕುಲ ನಡೆಸ್ತಿದ್ರಲ್ಲ. ಅದು ಹೇಗೆ ನಡೀತಿದೆ ಅಂತ ಕೇಳಿದೆ. ”ಶಿಥಿಲ ಮತ್ತು ಜೀರ್ಣ ಎರಡೂ ಆಗಿ ಹೋಗಿದೆ” ಎನ್ನುತ್ತಾ ನನ್ನನ್ನು ಅಲ್ಲಿಗೇ ಕರೆದುಕೊಂಡು ಹೋದ. ನಾಲ್ಕೂ ವೇದಗಳ ಎಲ್ಲಾ ಶಾಖೆಗಳು ಮತ್ತು ಶಿಕ್ಷಾ, ವ್ಯಾಕರಣ, ಛಂದಸ್ಸು ಮುಂತಾದ ಆರೂ ”ವೇದಾಂಗ”ಗಳನ್ನು ಹೊಂದಿದ್ದ ಭಾರತದ ಏಕೈಕ ಗುರುಕುಲ ಅದಾಗಿತ್ತು ಅನ್ನೋದು ನನಗೆ ಗೊತ್ತಿತ್ತು. 350 ವರ್ಷಗಳ ಇತಿಹಾಸವಿರೋ ಅದು ಈಗ ಹೇಗಿದೆ ಅನ್ನೋ ಕುತೂಹಲದಿಂದ ಅಲ್ಲಿಗೆ ಹೋದರೆ ಅದು ಹಾಳುಬಿದ್ದ ಕೊಂಪೆಯಂತಿತ್ತು. ಬರೀ ಒಂಭತ್ತು ಜನ ವಿದ್ಯಾರ್ಥಿಗಳು, ಅವರಿಗೆ ಒಬ್ಬರೇ ಅಧ್ಯಾಪಕರು. ಶುಕ್ಲ ಯಜುರ್ವೇದದ ಮಾಧ್ಯಂದಿನ ಶಾಖೆ ಮಾತ್ರ ಅಲ್ಲಿ ಉಳಿದಿದೆ. ಉಳಿದ ಶಾಖೆಗಳ್ಯಾಕೆ ಇಲ್ಲ ಅಂತ ಕೇಳಿದ್ದಕ್ಕೆ ಸುರೇಶ ಬೇಸರದಿಂದ ”ಅದೆಲ್ಲಾ ಇದ್ದಿದ್ದರೆ ನಾನು ಕುಂಭಕೋಣಂವರೆಗೆ ಹೋಗಿ ಓದ್ಕೊಂಡು ಬರಬೇಕಾದ ಅವಶ್ಯಕತೆಯೇ ಇರ್ತಿರಲಿಲ್ಲ. ಇಲ್ಲಿಯೇ ಓದಬಹುದಿತ್ತು.” ಅಂದ.

— ಮುಂದುವರಿಯುವುದು

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!