ಜಾತ್ರೆ ಎಂದರೆ ಅದು ಬದುಕಿನ ಜಂಜಾಟಗಳ ನಡುವಿನ ಸಂಭ್ರಮ. ದೈನಂದಿನ ಕಾಯಕದ ಬ್ಲಾಕ್-ಎಂಡ್-ವೈಟ್ ಬದುಕಿಗೆ ಕಲರ್ -ಫುಲ್ ಕನಸುಗಳನ್ನು ಹೊತ್ತು ತರುವ ರಾಯಭಾರಿ. ನಮ್ಮದೇ ಊರನ್ನು ಹೊಸ-ಹೊಸ ರೂಪದಲ್ಲಿ ನಮಗೆ ದರ್ಶಿಸುವ ಸಂದರ್ಭಕ್ಕೆ ಸಾಕ್ಷಿಯಾಗುವ ಸದವಕಾಶ ಈ ಜಾತ್ರೆ. ನಿರಾಭರಣ ಸುಂದರಿಯಾದ ನಮ್ಮ ಊರು ಜಾತ್ರೆಯಂದು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಇನಿಯನ ಬರುವಿಕೆಗೆ ಕಾಯುತ್ತಿರುವಂತೆ ಭಾಸವಾಗುತ್ತದೆ. ನಾನು ನನ್ನ ಈ ಲೇಖನವನ್ನು ನನ್ನದೇ ಊರಾದ ಕೋಟೇಶ್ವರವೆಂಬ ಮದುವಣಗಿತ್ತಿಯ ಸೊಬಗಿನ ಸ್ಪೂರ್ತಿಯಿಂದ ಬರೆಯುತ್ತಿದ್ದೇನೆ.
ಪ್ರತಿ ಮನೆ ಹಾಗೂ ಅಂಗಡಿಗಳು ದೀಪಾಲಂಕೃತಗೊಂಡು ಇರುಳಿನ ನಿಶೆಗೆ ಸಡ್ಡು ಹೊಡೆದು ಬಣ್ಣ-ಬಣ್ಣದ ಬೆಳಕಿನಲ್ಲಿ ಮಿಂದು ಬಣ್ಣದ ಬೆಳಕಿನ ಹನಿಗಳನ್ನು ತೊಟ್ಟಿಕ್ಕುತ್ತ ನಿಂತಂತಿರುತ್ತದೆ. ರಸ್ತೆಬದಿಯ ಮರಗಳು ನಿಯಾನ್ ಬಲ್ಬ್’ಗಳ ಮಾಲೆಯನ್ನು ಧರಿಸಿ ತಾವೇನು ಕಡಿಮೆ ಸುಂದರಿಯರಲ್ಲ ಎಂದು ಬೀಗುತ್ತಿರುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳಗುವ ಟ್ಯೂಬ್ ಲೈಟ್ ಗಳು ಜಾತ್ರೆಯ ಸಲುವಾಗಿ ಸರ್ವಾಲಂಕೃತವಾಗಿ ಆಗಮಿಸುವ ಭಕ್ತಾದಿಗಳ ಉಡುಪಿನ ಬೆರಗನ್ನು ಇನ್ನಷ್ಟು ಹೆಚ್ಚಿಸುವಂತಿರುತ್ತದೆ. ರಥಬೀದಿ ಸಮೀಪಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸುವ ಬೆಳಕಿನ ಕಮಾನುಗಳ ಕಾಮನಬಿಲ್ಲನ್ನು ನೆನಪಿಸುತ್ತದೆ. ಜಾತ್ರೆ ಪೇಟೆಯಲ್ಲಿ ರಾತ್ರಿಯ ಸುತ್ತಾಟವೇ ಒಂದು ಸುಂದರ ಅನುಭವ. ವಿದ್ಯುದ್ದೀಪಗಳ ಮಂಟಪದ ನಡುವೆ ಸುತ್ತಾಡುವಾಗ ನಾವೆಲ್ಲೋ ನಕ್ಷತ್ರಗಳ ಲೋಕದಲ್ಲಿ ಸಂಚರಿಸುತ್ತಿದ್ದೇವೇನೋ ಅನಿಸುತ್ತದೆ.
ಇನ್ನು ರಸ್ತೆಬದಿಯ ನೂರಾರು ಅಂಗಡಿಗಳು, ನಾವು ದಿನವೂ ಸುಳಿದಾಡುವ ದಾರಿ ಇದೇ ಹೌದೇ? ಎಂಬ ಸಂಶಯ ಹುಟ್ಟಿಸುತ್ತದೆ. ಬಳೆ, ಸರ, ಓಲೆ ಇತ್ಯಾದಿಗಳ ಅಂಗಡಿಗಳನ್ನು ಕಂಡಾಗ ಈ ಕಾಂಕ್ರೀಟ್ ಯುಗದಲ್ಲೂ ವಿಜಯನಗರ ಸಾಮ್ರಾಜ್ಯದ ಬೀದಿಗಳ ಒಂದು ಝಲಕ್ ಕಣ್ಮುಂದೆ ಹಾದುಹೋಗುತ್ತದೆ. ಆದರೆ ಆಗ ನಿಜವಾದ ಚಿನ್ನವನ್ನು ಮಾರುತ್ತಿದ್ದರಂತೆ, ಈಗ ಅಷ್ಟು ಭದ್ರತೆ ಇಲ್ಲ ಎಂಬ ಕಟುಸತ್ಯವನ್ನು ಒಪ್ಪಿ; ಗಿಲೀಟು ಒಡವೆಗಳನ್ನು ಮಾರುತ್ತಾರೆ.
ಅಂಗಡಿಗಳ ಸಂಖ್ಯೆಯಲ್ಲಿ ನಂತರದ ಸ್ಥಾನ ‘ಗೋಬಿ ಮಂಚೂರಿ’ ಹಾಗೂ ‘ಐಸ್ ಕ್ರೀಮ್’ ಗಳದ್ದು. ಪ್ರತಿ ಅಂಗಡಿಯಲ್ಲೂ ಧ್ವನಿವರ್ಧಕಗಳನ್ನು ಇಟ್ಟುಕೊಂಡು “ಬನ್ನಿ, ಬನ್ನಿ… ರುಚಿ-ರುಚಿಯಾದ ಗೋಬಿ ಮಂಚೂರಿ, ‘ಶ್ರೀ ಕೃಷ್ಣಾ’ ಐಸ್ ಕ್ರೀಮ್. ಒಮ್ಮೆ ತಿಂದರೆ ಮತ್ತೊಮ್ಮೆ, ಮತ್ತೊಮ್ಮೆ ತಿಂದರೆ ಮಗದೊಮ್ಮೆ ಸವಿಯಬೇಕೆನಿಸುವ ರುಚಿಯಾದ ಐಸ್ ಕ್ರೀಮ್ ‘ಶ್ರೀ ಕೃಷ್ಣಾ’ ಐಸ್ ಕ್ರೀಮ್. ಹ್ವಾಯ್ ಮಕ್ಕಳ್ ಹಟ ಮಾಡ್ತಿದ್ರ, ಅವ್ರಿಗ್ ಒಂದ್ ಐಸ್ ಕ್ರೀಮ್ ಕೊಡ್ಸಿ ಮಾರ್ರೆ; ಜಾತ್ರಿಯಂಗಲ್ದೇ ಇನ್ ಏಗಳಿಕ್ ಕೊಡ್ಸುದೇ…” ಎಂದು ಜನರನ್ನು ಜಾತ್ರೆಯ ಮರುಳಿನ ಅಮಲಿನಲ್ಲಿ ತೇಲಿಸುವ ಪ್ರಯತ್ನ ನಡೆಸುತ್ತಾರೆ. ಅಲ್ಲದೇ “ಒಳಗೆ ಬನ್ನಿ, ಕುರ್ಚಿ ಮೇಲ್ ಕೂತ್ಕಣಿ, ‘ಕೃಷ್ಣಾ…’ ಅನ್ನಿ; ನಾವ್ ಐಸ್ ಕ್ರೀಮ್ ತಂದ್ ಕೊಡತ್” ಎನ್ನುತ್ತಾ ಮುಖದಲ್ಲೊಂದು ಮಂದಹಾಸ ತರಿಸಿ ತಮ್ಮತ್ತ ಸೆಳೆಯುವ ಪ್ರಕಟಣೆಗಳಿಗೂ ಕಡಿಮೆ ಇಲ್ಲ.
‘ಜನ ಮರುಳೋ? ಜಾತ್ರೆ ಮರುಳೋ?’ ಎಂಬ ಗಾದೆ ಮಾತಿನಂತೆ ಚಿತ್ರ-ವಿಚಿತ್ರವಾದ ಆಟಿಕೆ ಸಾಮಾನುಗಳು ಬಟ್ಟೆ ಮಳಿಗೆಗಳು, ಪ್ಲಾಸ್ಟಿಕ್ ಹೂಕುಂಡಗಳು, ಆರ್ಟಿಫಿಶಿಯಲ್ ಹೂಮಾಲೆಗಳು, ಬಾಗಿಲಿನ ತೋರಣಗಳು, ಬ್ಯಾಗ್ ಗಳು, ಪರ್ಸ್ ಗಳು, ಸೋಫಾ ಕುಶನ್ ಗಳು, ಟಿ-ಶರ್ಟ್ ಗಳು, ಚಪ್ಪಲಿ ಅಂಗಡಿಗಳು, ಕೀ-ಬಂಚ್ ಗಳು, ಹೀಗೆ ಜನರನ್ನು ಮರುಳು ಮಾಡುವ ಜಾತ್ರೆಯ ಮರುಳಿಗೆ ಬೆಂಬಲಿಸುವ ಅಂಗಡಿಗಳು ಹಲವು. “ಬರೀ ಇಪ್ಪತ್, ಬರಿ ಇಪ್ಪತ್” ಎಂದಷ್ಟೇ ಕೂಗುತ್ತಾ “ಯಾವುದಕ್ಕೆ?” ಎಂಬ ಕುತೂಹಲದ ಮರುಳನ್ನು ನಮ್ಮಲ್ಲಿ ಹುಟ್ಟಿಸುವ ಜಾತ್ರೆಯ ಪೇಟೆಗೆ ಹಾಗೂ ಅಲ್ಲಿನ ವ್ಯಾಪಾರಿಗಳಿಗೆ ನನ್ನದೊಂದು ಸಲಾಮ್. ಅದೇ ಕುತೂಹಲವನ್ನು ಹೊತ್ತು ಅಂಗಡಿಯತ್ತ ತೆರಳುವ ನಾವು “ಬರೀ ಇಪ್ಪತ್ತ”ರ ನಾಲ್ಕು ಐಟಮ್ ಗಳನ್ನು ಖರೀದಿಸಿ “ಬರೀ ಎಂಭತ್ತ”ನ್ನು ಕೊಟ್ಟು ಹೊರಡಬೇಕಾಗುತ್ತದೆ. ಇದನ್ನೇ ‘ಜಾತ್ರೆಯ ಮರುಳು’ ಎನ್ನಬಹುದೆನೋ… ಏನೇ ಆದರೂ ಈ ಮರುಳಲ್ಲೂ ಏನೋ ಒಂದು ಖುಷಿ ಇರುತ್ತದೆ. ಬೃಹತ್ ಮಾಲ್ ಗಳಲ್ಲಿ ಖರೀದಿಸಿದ ವಸ್ತುಗಳಿಗಿಂತ ಹೆಚ್ಚಿನದೇನೋ ಪ್ರೀತಿ ಈ ಜಾತ್ರೆಯಲ್ಲಿ ಕೊಂಡ ವಸ್ತುಗಳ ಮೇಲೆ. ಎಲ್ಲೋ ರಸ್ತೆಯಲ್ಲಿ ಮಲಗಿ, ಮಡದಿ ಮಕ್ಕಳನ್ನೆಲ್ಲ ಕರೆದುಕೊಂಡು ಊರೂರು ತಿರುಗಿ , ಒಂದು ದೃಢವಾದ ನೆಲೆಯೇ ಇಲ್ಲದೇ ಬದುಕುವ ಆ ಜಾತ್ರೆಯ ವ್ಯಾಪಾರಿಗಳು ನಮ್ಮ ಊರಿಗೆ ಬಂದು ಜಾತ್ರೆ ಪೇಟೆಗೆ ರಂಗನ್ನು ತರುತ್ತಾರೆ. ಹಬ್ಬದ ಸಂಭ್ರಮ ತರುತ್ತಾರೆ. ಅಂತಹವರಲ್ಲಿ ಏನಾದರೂ ಖರೀದಿಸಿದಾಗ ಅವರ ಒಂದು ಹೊತ್ತಿನ ಊಟದಲ್ಲಿ ನನ್ನದೊಂದು ಅಲ್ಪ ಪಾಲಿದೆ ಎಂಬ ಸಂತೃಪ್ತಿಯು ಮನದ ಮುಗಿಲಿನ ಒಂದು ಮೂಲೆಯಲ್ಲಿ ಬೇರೆಲ್ಲೂ ಸಿಗದ ಖುಷಿಯ ಬಲೂನನ್ನು ಹಾರಿಸುತ್ತದೆ.
ನಾ ಕಂಡ ಇನ್ನೊಂದು ಆಕರ್ಷಣೆ ಎಂದರೆ ಒಂದು ಉದ್ದವಾದ ಕೋಲಿಗೆ ಕೊಳಲಿನ ಗುಚ್ಚಗಳನ್ನು ಕಮಲದ ದಳಗಳಂತೆ ಸಿಕ್ಕಿಸಿಕೊಂಡು, ಅದನ್ನು ಹೆಗಲ ಮೇಲೆ ಹೊತ್ತು ತಿರುಗುವ ಕೊಳಲಿನ ವ್ಯಾಪಾರಿಗಳು. ಅವರು ನುಡಿಸುವ ಪ್ರತಿ ರಾಗಕ್ಕೆ ಪ್ರತಿ ಬಾರಿಯ ಜಾತ್ರೆಯಲ್ಲೂ ನಾನು ಮರುಳನೇ. ಆ ಕೊಳಲನ್ನು ಕೊಂಡರೆ ಯಾರು ಬೇಕಾದರೂ ಅಷ್ಟು ಸುಶ್ರಾವ್ಯವಾಗಿ ನುಡಿಸಬಹುದೇನೋ ಎಂಬ ಭ್ರಮೆಗೆ ಪ್ರತಿ ಬಾರಿ ಒಳಗಾಗುತ್ತೇನೆ ನಾನು. ಅದೇ ಭ್ರಮೆಯಲ್ಲಿ ಮೂರು ಬಾರಿ ಆ ಕೊಳಲನ್ನು ಕೊಂಡು ನುಡಿಸಲು ಬಾರದೇ ಮನೆಯ ಅಟ್ಟದ ಮೇಲೆ ಹಾಕಿದ ಅನುಭವ ನನ್ನದು. ಮುಂದಿನ ಜಾತ್ರೆಯ ಕೊಳಲಾದರೂ ನಾನು ಹೇಳಿದಂತೆ ಕೇಳಬಹುದೇನೋ ಎಂಬ ಆಶಾಭಾವದಲ್ಲಿ ಕಾಯುತ್ತಿದ್ದೇನೆ.
ಜಾತ್ರೆ ಪೇಟೆಯಲ್ಲಿ ಸುತ್ತಾಡುವಾಗ ಪರಿಚಿತರ ನಡುವೆಯೇ ಮೂಡುವ ಅಪರಿಚಿತರ ಭಾವದ್ದೇ ಒಂದು ವಿಶೇಷತೆ. ನಮ್ಮದೇ ಊರಿನ ಬೀದಿಗಳಲ್ಲಿ ಅಲೆಯುತ್ತಾ “ಇಷ್ಟೊಂದ್ ಜನ ಇಲ್ಲಿ ಯಾರು ನನ್ನೋರು” ಎಂಬ ಹಾಡನ್ನು ನೆನಪಿಸಿಕೊಳ್ಳುತ್ತಾ, ಅಪರಿಚಿತತೆಯ ಸೆರಗಿನ ಮರೆಯಲ್ಲಿ ಪರಿಚಿತರಿಗಾಗಿ ಹುಡುಕುವ ಕುತೂಹಲಕಾರಿ ಅಲೆದಾಟಕ್ಕೆ ತೊಡಗುತ್ತೇವೆ. ಆ ಅಲೆದಾಟದಲ್ಲಿರುವ ‘ಮಜ’ವೇ ಬೇರೆ. ಮೊಬೈಲ್ ನೆಟ್ ವರ್ಕ್ ಗಳೆಲ್ಲ ಹ್ಯಾಂಗ್ ಆಗಿ ಮುಷ್ಕರ ಹೂಡುವಷ್ಟು ಸೇರಿರುವ ಜನಸಾಗರದ ನಡುವೆ, ಜೊತೆಗೆ ಹೋಗೋಣ ಎಂದ ಗೆಳೆಯನ ಮುಖ ಕಂಡಾಗ ಆಗುವ ಸಂತಸ ಅಷ್ಟಿಷ್ಟಲ್ಲ. “ಅಬ್ಬಾ, ಅಂತೂ ಸಿಕ್ಕಿದ್ಯ್ಲಲ್ಲಾ ಮಾರಾಯಾ…” ಎಂಬ ಉದ್ಗಾರವೊಂದು ಅರಿವಿಲ್ಲದೆಯೇ ತುಟಿಗಳ ಗೇಟನ್ನು ದಾಟಿ ಹೊರಬರುತ್ತದೆ. ಇನ್ನು ಗೆಳೆಯರೆಲ್ಲ ಭೇಟಿಯಾದ ನಂತರ ಒಬ್ಬರ ಹೆಗಲ ಮೇಲೆ ಒಬ್ಬರು ಕೈ ಹಾಕಿ, ಜಾತ್ರೆ ನಡೆಸುತ್ತಿರುವವರೇ ನಾವೇನೋ ಎಂಬ ಗತ್ತಿನಲ್ಲಿ ಪೇಟೆ ಸುತ್ತುವ ಹುಚ್ಚುತನಕ್ಕೆ ನನಗೇ ಒಮ್ಮೊಮ್ಮೆ ನಗು ಬರುವುದುಂಟು. ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವವರು ಜಾತ್ರೆಯ ಸಂದರ್ಭಗಳಲ್ಲಿ ಊರಿಗೆ ಬರುತ್ತಾರೆ. ತಮ್ಮ ಮನೆ-ಮಂದಿಯನ್ನು, ಹಳೆಯ ಗೆಳೆಯಯರನ್ನು ವರ್ಷಕ್ಕೊಮ್ಮೆ ಭೇಟಿಯಾಗುವ ಸುಸಂದರ್ಭ ಅದು. ಕೆಲವೊಮ್ಮೆ ಎಷ್ಟೋ ವರ್ಷಗಳ ಹಳೆಯ ಗೆಳೆಯ/ಗೆಳತಿಯ ಭೇಟಿಯಾಗಿ ಅಚ್ಚರಿ ಉಂಟಾಗುವುದುಂಟು. ಹೀಗೆ ಅಕ್ಕ-ಪಕ್ಕದ ಮನೆಯಲ್ಲಿದದ್ದು ಕೂಡ ಮಾತನಾಡಲು ಬಿಡುವಿರದ ಇಂದಿನ ಬದುಕಿನಲ್ಲಿ ಎಷ್ಟೊ ವರ್ಷದ ಹಳೆಯ ಪರಿಚಿತರನ್ನು ಭೇಟಿಮಾಡಿಸುವ ಜಾತ್ರೆಗೆ ಒಂದು ಧನ್ಯವಾದ ಹೇಳಲೇಬೇಕು.
ಜಾತ್ರೆಯ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು. ಒಂದು ದಿನ ‘ರಸಮಂಜರಿ’,ಯಾದರೆ ಇನ್ನೊಂದು ದಿನ ‘ಡ್ಯಾನ್ಸ್ ಧಮಾಕಾ’, ಮತ್ತೊಂದು ದಿನ ‘ಮೂರು ಮುತ್ತು’, ‘ಸುಸೈಡ್ ಸುಂದರ’, ‘ಗಮ್ಮತ್ತಿನ ಮದುವೆ’ಯಂತಹ ನಗೆ ನಾಟಕಗಳು. ಇನ್ನೆಲ್ಲೋ ಸ್ವಲ್ಪ ದೂರದಲ್ಲಿ ‘ಯಕ್ಷಗಾನ’ ಹೀಗೆ ಜಾತ್ರೆಯ ಇರುಳಿನ ನಿಶ್ಷ್ಯಬ್ಧತೆಯನ್ನು ಸಾಂಸ್ಕೃತಿಕತೆಯ ಶಬ್ದಗಳ ಅಲೆಯಿಂದ ಬಡಿದು ಭಗ್ನಗೊಳಿಸುವ ಕಾರ್ಯಕ್ರಮಗಳು ನಿಶೆಯ ನಶೆಗೆ ಹೊಸ ರಂಗನ್ನು ತರುತ್ತವೆ. ಈ ಕಾರ್ಯಕ್ರಮಗಳು ನಮಗೆ ಕೇವಲ ಮನೋರಂಜನೆಯ ಸಾಧನವಾಗಿರಬಹುದು, ಆದರೆ ಅಲ್ಲಿನ ಹಲವು ಬಡ ಕಲಾವಿದರ ಬದುಕಿಗೆ ಜೀವನಾಧಾರ. ಇನ್ನು ಕೆಲವರ ಪಾಲಿಗೆ ಈ ಕಾರ್ಯಕ್ರಮಗಳೇ ಅವರ ಮುಂದಿನ ಬದುಕಿನ ಯಶಸ್ಸಿನ ಹಾದಿಗೆ ತಿರುವಾಗಿ ಮಾರ್ಪಾಡಾಗಬಹುದು.
ಇವೆಲ್ಲವುಗಳ ನಡುವೆ ಜಾತ್ರೆಯ ಮುಖ್ಯ ಆಕರ್ಷಣೆ ರಥೋತ್ಸವ. ವರ್ಷದ ಬಹುಪಾಲು ಸಮಯ ಗರ್ಭಗುಡಿಯಲ್ಲಿ ಕುಳಿತಿರುವ ದೇವರನ್ನು ನೋಡಲು ನಾವೇ ಒಳಗೆ ಹೋಗಬೇಕು. ಆದರೆ ಈ ದಿನ ಮಾತ್ರ ದೇವರೇ ಹೊರಗೆ ಬಂದು ರಥದಲ್ಲಿ ರಾಜನಂತೆ ಕುಳಿತು ಪ್ರಜೆಗಳಿಗೆ ದರ್ಶನ ಕೊಡುತ್ತಾರೆ. ಮೂರ್ತರೂಪ ದೇವರು ಗರ್ಭಗುಡಿಯಿಂದ ಹೊರಬಂದು ರಥವನ್ನೇರುವ ಚಂದವೇ ಒಂದು ಹಬ್ಬ. ಈ ಹಬ್ಬದಲ್ಲಿ ಹಿರಿತಲೆಗಳು ಕೈಮುಗಿದು ಭಕ್ತಿಯ ಪರಾಕಾಶ್ಠೆಯಲ್ಲಿದ್ದರೆ, ಮಧ್ಯಮ ವಯಸ್ಕರು ಹಣ್ಣು-ಕಾಯಿ ಚೀಲ ಹಿಡಿದು ದೇವರಿಗೆ ಒಪ್ಪಿಸುವ ಭರದಲ್ಲಿರುತ್ತಾರೆ. ಇನ್ನು ನಮ್ಮ ಯುವಪೀಳೀಗೆ ಮೊಬೈಲ್, ಹ್ಯಾಂಡಿಕ್ಯಾಮ್ ಗಳನ್ನು ಹಿಡಿದುಕೊಂಡು ಭಾವಚಿತ್ರ ಕ್ಲಿಕ್ಕಿಸುವ ಭರದಲ್ಲಿರುತ್ತಾರೆ. ಬೇರೆ ದಿನಗಳಲ್ಲಿ “ದೇವಾಲಯದ ಆವರಣದಲ್ಲಿ ಛಾಯಾಗ್ರಹಣ ನಿಷೇದಿಸಲಾಗಿದೆ/Photography prohibited inside the temple”ಎಂಬ ಫಲಕಗಳಿಂದ ಬೇಸತ್ತ ನನ್ನಂಥವರಿಗೆ ಇದೊಂದು ಸದವಕಾಶ. ಹಾಗಾಗಿ ಕೈ ಮುಗಿಯುವುದನ್ನ ನಾಳೆ ಮಾಡಿದರಾಯ್ತು, ಮೊದಲು ಫೋಟೋ ತೆಗೆಯುವ ಎನಿಸುವುದು ಸಹಜ ಅಲ್ಲವೇ?
ಇನ್ನು ಜಾತ್ರೆ ಎಂದರೆ ಬರೀ ಅಂಗಡಿಗಳು, ಕಾರ್ಯಕ್ರಮಗಳು, ತೇರು ಅಷ್ಟೆ ಇರುತ್ತದೆಯೇ? ಅಲ್ಲ. ಅಲ್ಲಿ ಹಲವು ಹನಿ-ಹನಿ ಪ್ರೇಮ್-ಕಹಾನಿಗಳೂ ಅರಳುತ್ತವೆ.”ಎಲ್ಲಾರೂ ಜಾತ್ರೆಯಲ್ಲಿ ತೇರನ್ನೆ ನೋಡುವಾಗ ಅವನು ನನ್ನೇ ನೋಡಬೇಕು…”ಎಂಬ ಜಯಂತ್ ಕಾಯ್ಕಿಣಿಯವರ ಸಾಲನ್ನು ನೆಚ್ಚಿ ಜಾತ್ರೆಗಾಗಿಯೇ ಖರೀದಿಸಿದ ಹಸಿರು ಬಣ್ಣದ ಲಂಗ-ದಾವಣಿ ತೊಟ್ಟ ಹುಡುಗಿ ಕಣ್ಣಮುಂದೆ ಸುಳಿದಾಡಿದಾಗ ಆ ಹುಡುಗನಾದರೂ ತೇರನ್ನು ನೋಡಲು ಸಾಧ್ಯವೇ? ಆಗಲೇ ಶುರುವಾಗುವುದು ಮನದ ಮುಗಿಲಲ್ಲಿ ಮೊಹಬ್ಬತ್. ಆ ಜನಜಂಗುಳಿಯಲ್ಲೂ ಅವಳ ಎದೆಬಡಿತದ ಗತಿ ಅವನಿಗೆ ಕೇಳಿಸಿದರೂ ಅಚ್ಚರಿಯಿಲ್ಲ. ಹೀಗೆ ಮನದ ಮುಗಿಲಲ್ಲಿ ತೇಲುವಾಗ, ನೆಲದ ಮೇಲೆ ತನ್ನ ಪಕ್ಕದವರ ಕಾಲನ್ನು ಮೆಟ್ಟಿ ಬೈಗುಳ ತಿನ್ನುವ ಸಾಧ್ಯತೆಗಳೂ ಇಲ್ಲದ್ದಿಲ್ಲ. ಅದೇನೇ ಇರಲಿ; ಕೆಲವರ ಪಾಲಿಗೆ ಜಾತ್ರೆ ಬರಿ ಕಣ್ಣಿಗೆ ಹಬ್ಬವಾಗಿರದೇ ಮನಸಿಗೂ ಹಬ್ಬವಾಗುತ್ತದೆ. ಇಡೀ ಜೀವನವನ್ನೇ ಸಂಭ್ರಮಿಸುವ ಪ್ರೀತಿಯು ಹಬ್ಬವೂ ಆಗಬಹುದು.
ಹೀಗೆ ನಿತ್ಯವೂ ನಮ್ಮ ಆಗು-ಹೋಗುಗಳಲ್ಲಿ ನಮ್ಮ ಜೊತೆ ಇರುವ ನಮ್ಮದೇ ಊರನ್ನು, ನಮ್ಮದೇ ಬೀದಿಯನ್ನು, ನಮ್ಮದೇ ಜನರನ್ನು ಹೊಸ ಲೋಕದಲ್ಲಿ ಹೊಸ ಅವತಾರದಲ್ಲಿ ಕಾಣುತ್ತಿದ್ದೇವೇನೋ ಎಂಬ ಭ್ರಮೆಯ ಬೆರಗನ್ನು ಉಂಟುಮಾಡುವ ಜಾತ್ರೆಗೆ ನಾನು ಋಣಿ. ಇರುವ ನೋವುಗಳಿಗೆ ಬಣ್ಣ ಬಳಿದು ನಲಿವಿನ ಕ್ಷಣಗಳಂತೆ ಬಿಂಬಿಸಿ ಬದುಕನ್ನು ಸಂಭ್ರಮಿಸಲು ಅವಕಾಶ ಮಾಡುವ ಜಾತ್ರೆಯನ್ನು ಎಲ್ಲರೂ ಮನಸಾರೆ ಆನಂದಿಸೋಣ. ಪ್ರಸ್ತುತತೆಯಲ್ಲಿ ನವೀನತೆಯನ್ನು ದರ್ಶಿಸುವ ಆ ಒಂದು ದಿನದ ಸಂಭ್ರಮಕ್ಕೆ ಪ್ರತಿ ವರ್ಷವೂ ತಪ್ಪದೇ ಸಾಕ್ಷಿಯಾಗೋಣ.