ಡಾ . ಅಭಿಜಿತ್ ಎ ಪಿ ಸಿ ಅವರ “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕ ಮೊನ್ನೆಯಷ್ಟೇ (27 ಡಿಸೆಂಬರ್ 2015) ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ನಾನಂತೂ ಸಂಪೂರ್ಣ ಸಂತೋಷದಿಂದ ಸಮಾರಂಭವನ್ನು ಅನುಭವಿಸಿದ್ದೇನೆ.
ಕಜೆ ವೃಕ್ಷಾಲಯ , ಮಂಚಿ ಅಂಚೆ , ಬಂಟ್ವಾಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಯಾರಿಕೆ ನೀಗಲು ನೀಡಿದ ಪಾನೀಯದಿಂದ ಹಿಡಿದು – ಸಮಾರಂಭ ನಡೆದ ಸ್ಥಳ – ಪುಸ್ತಕ ಬಿಡುಗಡೆಯಾದ ರೀತಿ ಎಲ್ಲದರಲ್ಲೂ ಹೊಸತನ.
ಕಾಡಿನ ಮಧ್ಯೆ ಸಮಾರಂಭದ ವ್ಯವಸ್ಥೆ. ಅಲ್ಲಿಗೆ ಇಳಿದುಕೊಂಡು ಹೋಗುವ ಕಾಡಿನ ದಾರಿ, ಕಷ್ಟವಾದರೆ ಹಿಡಿದುಕೊಳ್ಳಲು ಬದಿಯಲ್ಲಿ ಮರದ ಕೈಗಳು ಅದನ್ನು ಕಟ್ಟಿದ್ದು ಪ್ಲಾಸ್ಟಿಕ್ ಬಳ್ಳಿಯಿಂದ ಅಲ್ಲ “ಅರ್ಕಬೂರು” ಎಂಬ ಕಾಡಿನಲ್ಲೇ ಸಿಗುವ ಬಳ್ಳಿಯಿಂದ. ಇಲ್ಲೇನು ಮಾಡಿಯಾರು ಇವರು ಎಂದು ಅಂದುಕೊಳ್ಳುತ್ತಾ ಹೋದರೆ ಅಲ್ಲಿಯ ವ್ಯವಸ್ಥೆಯಂತೂ ಅಧ್ಭುತ. ಒಂದು ಕಡೆ ಪಕ್ಷಿಗಳ ಚಿತ್ರ ಪ್ರದರ್ಶನ. ದಾರಿಯುದ್ದಕ್ಕೂ ಹಲವು ಗಿಡ ಮರಗಳ ಪರಿಚಯ.
ಹೀಗೆ… ನಡೆದಷ್ಟೂ ದೂರ ಮಾಹಿತಿಗಳ ಪೂರ…..
ಇನ್ನೊಂದು ಹೊಸ ಪ್ರಯೋಗವಿತ್ತು ಇಲ್ಲಿ, ಆಡಿಯೋ ಗೈಡ್ ಎಂದು. ಇದೇನಪ್ಪಾ ಅಂತ ಅಂದುಕೊಂಡೇ ಹೋಗಿದ್ದೆ. ನೋಡಿದರೆ ಶ್ರೀ ವಸಂತ್ ಕಜೆ ಅವರು ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ತಾವು ಹಲವು ಗಿಡವನ್ನು ನೆಟ್ಟು ಬೆಳೆಸಿ, ಅವೆಲ್ಲದರ ಮಾಹಿತಿ ಸಂಗ್ರಹಿಸಿ, ಆಡಿಯೋ ಮಾಡಿ, ನಮಗೆಲ್ಲಾ ಪರಿಚಯಿಸುವ ಪರಿ ಕೇಳಿಯೇ ತಿಳಿಯಬೇಕು. ಇವರ ಪ್ರಯತ್ನಕ್ಕೊಂದು ಸಲಾಂ ಅನ್ನುವುದೇ ಸರಿ. ಅಂದ ಹಾಗೆ ಸಸ್ಯಾಸಕ್ತರಿದ್ದರೆ ಮುಂದೆಯೂ ಇವರ ವೃಕ್ಷಾಲಯಕ್ಕೆ ಭೇಟಿ ನೀಡಬಹುದು ತಿಳಿದುಕೊಳ್ಳುವ ವಿಚಾರ ಬಹಳಷ್ಟಿದೆ.
ಡಾ. ನರಸಿಂಹನ್ ಅವರಿಂದ ಪುಸ್ತಕ ಬಿಡುಗಡೆ – ಅಂಬರದಿಂದ ಇಳಿದು ಬಂದ ಪುಸ್ತಕ. ಮರದ ಮೇಲೆ ಪುಸ್ತಕವನ್ನು ಕಟ್ಟಿ ಇಳಿಸಿದ್ದು ಅದನ್ನು ಬಿಡುಗಡೆಗೊಳಿಸಿದ್ದು ಎಲ್ಲವೂ ಅತಿ ಸುಂದರ. ಈ ಪುಸ್ತಕದಲ್ಲಿ ಕೀಚುಗ ಎನ್ನುವ ಹಕ್ಕಿಯು ಹೇಗೆ ತನ್ನ ಮರಿಗಳನ್ನು ಕಾಪಾಡುತ್ತವೆ ಎಂಬಿತ್ಯಾದಿ ತಿಳಿಸಲಾಗಿದೆ. ಈ ಹಕ್ಕಿ ಗೂಡು ಕಟ್ಟಿದ್ದು ತೆಂಗಿನ ಮರದಲ್ಲಿ ಅದಕ್ಕಾಗೆ ಪುಸ್ತಕವನ್ನು ತೆಂಗಿನ ಗರಿಗಳಿಂದ ಅಂದವಾಗಿ ಪ್ಯಾಕ್ ಮಾಡಲಾಗಿತ್ತು.
ಶ್ರೀ ಅಶೋಕ್ ವರ್ಧನ್ ಅವರು ಹೇಳಿದ ಮಾತೊಂದು ಬಹಳಾ ಹಿಡಿಸಿತು “ವಸಂತ್ ಕಜೆಯವರ ವೃಕ್ಷಾಲಯ ನಾಗರೀಕ ದೃಷ್ಟಿಯಿಂದ ಅಭಿವೃದ್ಧಿ ಹೊಂದಲಿ, ವನ್ಯ ದೃಷ್ಟಿಯಿಂದ ಹಾಳಾಗಿ ಹೋಗಲಿ” ಎಂದು. ಅಂದರೆ ಯಾವುದು ಹೇಗಿರಬೇಕೋ ಹಾಗೆ ನಿಸರ್ಗದತ್ತವಾಗೇ ಬೆಳೆಯಬೇಕು ಎನ್ನುತ್ತಾ ಶುಭಹಾರೈಸಿದ ರೀತಿ ಖುಷಿಯಾಯಿತು.
ಎ.ಪಿ.ಚಂದ್ರಶೇಖರ್ ಅವರು ನಿರಗ್ನಿ ಆಹಾರದ ಅಗತ್ಯತೆಯನ್ನು ಅಂದವಾಗಿ ವಿವರಿಸಿದ್ದು, ಸನ್ಮಾನ ಸ್ವೀಕರಿಸಿದ ಉದಯಕುಮಾರ್ ಶೆಟ್ಟಿಯವರು ಬರಡು ಭೂಮಿಯಂತಿದ್ದ ಜಾಗವನ್ನು ಸಸ್ಯಶ್ಯಾಮಲೆಯಾಗಿ ಮಾಡಿದ ಹಾದಿಯನ್ನು ಹೇಳಿದ್ದು ಎಲ್ಲರ ಮಾತುಗಳೂ ಮಾಹಿತಿಯನ್ನೇ ನೀಡುತ್ತಿತ್ತು. ಉದಯ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಿದ ರೀತಿಯೂ ಬಹು ಅಂದ, ಜೋಗಿಮಣಿ ಹಾರ – ಕೋಕಂ ಜ್ಯೂಸ್ – ಚೆರ್ರಿ ಹಣ್ಣಿನ ಜ್ಯಾಮ್ – ಇನ್ನು ಉಪಯೋಗಕ್ಕೆ ಬರಲಿಕ್ಕಿಲ್ಲ ಅಂದುಕೊಂಡ ಮರದ ತುಂಡುಗಳಿಂದ ಅಂದದ ಮೊಮೆಂಟೊ – ಅಂದದ ಹೂ.
ದಿನೇಶ್ ನಾಯ್ಕ್ ವಿಟ್ಲ ಇವರು ಸ್ಥಳೀಯ ಸಸ್ಯಗಳ ಪರಿಚಯ ಮಾಡಿದ್ದು ಬಹಳ ಉಪಕಾರವೇ ಆಯಿತು ಎನ್ನಬೇಕು. ಪ್ರತಿ ಸಸ್ಯದ ಫೋಟೋ , ಅದರ ಉಪಯೋಗ, ಔಷಧೀಯ ಗುಣ ಹೀಗೆ ಯಾವುದನ್ನೂ ಬಿಡದೇ ಅದ್ಭುತವಾಗಿ ವಿವರಿಸಿದ್ದರು. ಹಲವು ಟಿಪ್ಸ್’ಗಳು ದೊರಕಿತ್ತು ಅನ್ನಬಹುದು.
ಇನ್ನು ನಿರಗ್ನಿ ಊಟದ ಹೊತ್ತು 🙂
ಅಭಿಜಿತ್ ಅವರು ಕಳುಹಿಸಿದ ಆಮಂತ್ರಣದಲ್ಲಿ ಮಧ್ಯಾಹ್ನಕ್ಕೆ ನಿರಗ್ನಿ ಆಹಾರ ಅಂತ ಇತ್ತು. ಭಯ ಪಟ್ಟುಕೊಂಡೇ ಹೋಗಿದ್ದೆ, ಇವರು ಇನ್ನೇನು ತಿನ್ನೋಕೆ ಕೊಡ್ತಾರಪ್ಪಾ ಅಂತ 😀
ಹತ್ತು ಗಂಟೆ ಸುಮಾರಿಗೆ “ದಾಸವಾಳ ಹೂವಿನ ಕಷಾಯ” ಮತ್ತು ಬಾಳೆಹಣ್ಣು.
ಹನ್ನೊಂದುವರೆಯ ಸುಮಾರಿಗೆ, ಉಪಹಾರ – ಚಕ್ಕೋತ ಹಣ್ಣು – ಮಾಪಲ ಹಣ್ಣು, ತೆಂಗಿನ ತಿರುಳು, ಬೇಯಿಸಿದ ಸಿಹಿ ಗೆಣಸು ಜೊತೆಗೇ ಕುಡಿಯಲು ಮಜ್ಜಿಗೆ ನೀರು (ಮಜ್ಜಿಗೆ ಸೊಪ್ಪು ಹಾಕಿ ಕುದಿಸಿದ ಬಳಿಕ ಮಜ್ಜಿಗೆ ಸೇರಿಸಿದ್ದು).
ಮಧ್ಯಾಹ್ನದ ಊಟದ ಗಮ್ಮತ್ತೇ ಬೇರೆ. ಸಾರು ಸಾಂಬಾರ್ ಅಂತೆಲ್ಲಾ ಇಲ್ಲವೇ ಇಲ್ಲ. ಊಟದ ಸವಿಯೇ ಬೇರೆ, ಏನಪ್ಪಾ ಮಾಡ್ತಾರೆ ಅಂದುಕೊಂಡಿದ್ದ ನನಗಂತೂ ಓಹ್ ಹೀಗೂ ಊಟವನ್ನು ಸವಿಯಬಹುದು ಎನ್ನುವ ಖುಷಿ.
ರಾಜಮುಡಿ ಅಕ್ಕಿಯ ಅನ್ನ
ಮೊದಲಿಗೆ – ತುಪ್ಪ / ತೆಂಗಿನ ಎಣ್ಣೆ ಜೊತೆಗೆ ಮಜ್ಜಿಗೆ ಮಸಾಲೆ ಎನ್ನುವ ದ್ರಾವಣವನ್ನು ಸೇರಿಸಿಕೊಂಡು ಊಟ. ಇದರ ರುಚಿ ಎಷ್ಟು ಹಿಡಿಸಿತೆಂದರೆ ಅಭಿಜಿತ್ ಅವರ ಮನೆಯಲ್ಲೇ (ಇಂದ್ರಪ್ರಸ್ಥ ) ತಯಾರಿಸಿದ ಮಜ್ಜಿಗೆ ಮಸಾಲೆಯನ್ನು ಕೊಂಡುಕೊಂಡು ಬಂದಿದ್ದೇನೆ. 🙂
ಮತ್ತೆ ಪುನಃ ಅನ್ನ – ತಂಬುಳಿ (ಎಂಟು ಬಗೆಯ ಸೊಪ್ಪುಗಳನ್ನು ಉಪಯೋಗಿಸಿ ಮಾಡಿದ್ದು)
ಮಾಂ
ಕಲ್ಲು ಬಾಳೆ – ಹಸಿ ಕೆಸುವು ಸಲಾಡ್
ಹಾ
ಪ್ಯಾ
ನಿರಗ್ನಿ ಅಂತ ಇವರೇನೂ ಸಿಹಿ ಮಾಡಿಲ್ಲ ಅಂದುಕೊಂಡಿದ್ದರೆ, ತಪ್ಪು.
ಚಿಕ್ಕು/ಸಪೋಟ – ಪಪ್ಪಾಯ – ಬಾಳೆಹಣ್ಣು ಹಾಕಿ ಮಾಡಿದ ರಸಾಯನ
ಚಿಕ್ಕು ಚಾಕೊಲೇಟ್- (ಬಿಸಿಲಿನಲ್ಲಿ ಒಣಗಿಸಿದ್ದು)
ಬೇಲದ ಹಣ್ಣಿನ ಹಲ್ವ (ಬಿಸಿಲಿನಲ್ಲಿ ಒಣಗಿಸಿದ್ದು)
ಬಾಳೆಹಣ್ಣು ಚಾಕೊಲೇಟ್ (ಬಿಸಿಲಿನಲ್ಲಿ ಒಣಗಿಸಿದ್ದು)
ಮಜ್ಜಿಗೆಯಿರದಿರೆ ಊಟ ಕೊನೆಯಾದೀತೇ?
ಅನ್ನ – ಮಜ್ಜಿಗೆ – ಉಪ್ಪು – ಎಳೆ ಜಾಯಿಕಾಯಿ ಉಪ್ಪಿನಕಾಯಿ , ಕಂಚುಳಿ ಉಪ್ಪಿನಕಾಯಿ.
ಅಲ್ಲಿಗೆ ನಿರಗ್ನಿ ಆಹಾರದ ಸವಿಯಂತೂ ಅದ್ಭುತ ಎನ್ನದೇ ವಿಧಿಯೇ ಇಲ್ಲ 🙂
ಪುಸ್ತಕದ ಕುರಿತು ಹೀಗಿದೆ:
ಮರದಲ್ಲಿ ಹುಟ್ಟಿ ಅಂಬರದಲ್ಲಿ ನಲಿದಾಡುವ “ Ashy Wood Swallow” ಎಂಬ ಪಕ್ಷಿಯ ಕತೆ ಇದು . ಮಲೆನಾಡಿನವರಿಗೆ ಬಲು ಸಾಮಾನ್ಯವಾದ , ಬಯಲು ಸೀಮೆಯವರಿಗೆ ವಿರಳವಾದ ಈ ಪಕ್ಷಿಯ ಜೀವನ ಶೈಲಿಯನ್ನು “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕದಲ್ಲಿ ಬಲು ವಿಸ್ತಾರವಾಗಿ 64 ಪುಟಗಳಲ್ಲಿ ತಿಳಿಸಲಾಗಿದೆ . ಅಂಬರಕೀಚುಗನ ಆವಾಸಸ್ಥಾನ , ಅದು ಎಲ್ಲಿ ಮತ್ತು ಹೇಗೆ ಗೂಡು ಮಾಡುತ್ತವೆ , ಕೀಚುಗನ ಪರಾಕ್ರಮ , ಕೀಚುಗನ ಸಹಬಾಳ್ವೆ ಮತ್ತು ಮಮತೆ , ಅಂಬರಕೀಚುಗನಿಂದ ಕೃಷಿಕನಿಗೆ ಏನು ಉಪಯೋಗ ಹೀಗೆ ಅನೇಕ ವಿಚಾರಗಳನ್ನು ಸವಿಸ್ತಾರವಾಗಿ ಚಿತ್ರ ಸಮೇತ ವಿವರಿಸಲಾಗಿದೆ .
ಇಂದ್ರಪ್ರಸ್ಥದ ಪ್ರಕಟಣೆಯಲ್ಲಿ ಬಂದಿರುವ ಈ ಪುಸ್ತಕದ ಕರ್ತೃ ಡಾ.ಅಭಿಜಿತ್ ಎ.ಪಿ.ಸಿ . ( ಸಂಪೂರ್ಣ ವರ್ಣಚಿತ್ರದಿಂದ ಕೂಡಿರುವ ಈ ಪುಸ್ತಕದ ಮುಖಬೆಲೆ ರೂ 110/ . ಪ್ರತಿ ಚಿತ್ರಗಳೂ ವಿಭಿನ್ನ, ಚಿತ್ರಗಳೂ ಈ ಪುಸ್ತಕದಲ್ಲಿ ಮಾತಾಡುತ್ತವೆ.
ಸದಾ ನಿಲಾಕಾಶದಲ್ಲಿ ತೇಲುವ ಈ ಹಕ್ಕಿಯನ್ನು ಕೆಳಮಟ್ಟದಲ್ಲಿ ನೋಡುವುದೇ ಕಷ್ಟ . ಅಂಥಾ ಹಕ್ಕಿ ಧರೆಗಿಳಿದು ಹೇಗೆ ಬಾಣಂತನ ಮಾಡಿತು ಎಂಬ ಕೌತುಕ ಸಂಗತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿಡಲಾಗಿದೆ . ಪ್ರಕೃತಿಯಲ್ಲಿ ಕೀಟ ನಿಯಂತ್ರಣ ಹೇಗೆ ? ಕೀಟ ನಿಯಂತ್ರಣದಲ್ಲಿ ಪಕ್ಷಿಗಳ ಪಾತ್ರವೇನು , ಹೇಗೆ? ಕೀಟ ನಿಯಂತ್ರಣದಲ್ಲಿ ಪಕ್ಷಿಗಳ ಪಾತ್ರವೇನು ಎಂಬುದರ ಬಗೆಗೆ ಮಾಹಿತಿಗಳು ಈ ಕಿರು ಹೊತ್ತಿಗೆಯಲ್ಲಿ ಲಭ್ಯವಿದೆ .
ಪುಸ್ತಕದ ಪ್ರತಿಗಾಗಿ : ಡಾ ಅಭಿಜಿತ್ -9480468772
ಹೀಗೆ ಒಂದು ದಿನವನ್ನು ಸಾರ್ಥಕವಾಗಿ ಕಳೆದ ನೆಮ್ಮದಿಯೊಂದಿಗೆ ಮರಳಿ ಮನೆಗೆ…..
ಚಿತ್ರ : ಸುಮನಾ ಮುಳ್ಳುಂಜ , ಸದಾಶಿವರಾವ್, ಅಭಿಜಿತ್ ಎ.ಪಿ.ಸಿ, ರಂಜನ್’ಶ್ಯಾಮ್