ನಾನೆದ್ದಾಗ ಮೂಡಣ ಬೆಳಕಿನ ನೃತ್ಯಕ್ಕೆ,
ಮಂಜಿನ ಗುಂಡಾಗಿ, ಸರ್ರನೆ ಗೋಚರಿಸಿ,
ಝರ್ರನೆ ಕರಗಿ ಹೋದ ಆ ದಿನಕರ,
ಹಿಮಮಣಿಗೆ ಕಾದ ಗುಲಾಬಿ
ಮೆಲ್ಲಗೆ, ಅರಳುತ್ತಾ ನನ್ನ ಹರಸಿತು
ಶುಭವಾಗಲೆಂದು, ಆ ನೀರ ಹನಿ
ನನ್ನ ಬಿಂಬವ ನೋಡಿ ನಕ್ಕಿತು.
ಹನಿಮುತ್ತು ಪೋಣಿಸಿ ಚಿಗುರೆಲೆ
ಮಾಲೆಯಾದರೆ, ಲತೆ-ಬಳ್ಳಿಗಳು ಹೂವ ತುಂಬಿ
ಹೊನ್ನಿನ ಅರಿವೆಯ ಹೊದೆದು,
ಹುಲ್ಲಿನೊದೆಗಳು ನನಗೆ ಕಚಗುಳಿಯ ಮಾಡಿ
ಇಬ್ಬನಿಯ ಜಳಕದ ಪುಳಕಗೊಳಿಸಿದರೆ,
ಯುದ್ಧಕ್ಕೆ ಸಿದ್ಧನಾಗುವಂತೆ ನನ್ನ
ಮೈಯ ರೋಮವೆಲ್ಲ, ಸೆಟೆದು ಜತನದಿಂದ,
ಮುಂದಡಿಯಿಟ್ಟರೆ ಬಾಯಲಿ ಸುರುಳಿ-ಸುರುಳಿ,
ಹಬೆಯ ಸುಳಿಗಳ ಹೊಗೆ.
ಮತ್ತೆ ನಡೆದರೆ ಆಕಾಶಕ್ಕೂ, ಭೂಮಿಗೂ
ಅಂತಃಪಟ ಪರದೆಯ ಮಧುರ ಸಂಬಂಧ
ಬೆಸೆದ ಶ್ವೇತ ಶುಭ್ರ ಆ ಮಂಜು,
ಈ ನನ್ನ ಶರೀರ ತುಂಬಾ ಚಳಿ,
ಒಳಗೆ ಬಿಸಿ ನೆತ್ತರ ಸುಡುಬಿಸಿಲು,
ಆ ಮಾಗಿಯೇ ಹೀಗೆ
ಹೊಂಬಿಸಿಲು, ತುಂತುರು ಮಳೆ
ತಬ್ಬುವ ಚಳಿ ಇವುಗಳೊಳಗಿನ
ಕೂಪದೊಳಗೆ ನಾನು ಬಂಧಿ