ಮೋದಿಯನ್ನು ಹಣಿಯಲು ಗಂಭೀರವಾದ ವಿಷಯಗಳಾವುದೂ ಸಿಗುತ್ತಿಲ್ಲ. ಒಂದು ಹಗರಣವೂ ಇಲ್ಲ. ಯಾವುದೇ ಕಳಂಕವೂ ಇಲ್ಲ. ಆದರೂ ಇವರು ಸಂಸತ್ತಿನ ಅಧಿವೇಶನ ನಡೆಯಲು ಬಿಡುತ್ತಿಲ್ಲ. ಒಟ್ಟಿನಲ್ಲಿ ಅಧಿಕಾರವಿಲ್ಲದೆ ಕ್ಷಣವೂ ನೆಮ್ಮದಿಯಿಂದ ಕೂರಲು ಈ ತಾಯಿ ಮಗನಿಗೆ ಆಗುತ್ತಿಲ್ಲ. ಈ ತಾಯಿ ಮಗನ ಸ್ಟ್ರಾಟಜಿ ಏನೆಂದು ದೇವರಾಣೆಗೂ ಅರ್ಥವಾಗುತ್ತಿಲ್ಲ.
ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ಸಹಾಯ ಮಾಡಿದ್ದಾರೆ ಎನ್ನುವ ವಿಷಯವನ್ನು ಯಾವ ಆಧಾರ ಇಲ್ಲದಿದ್ದರೂ ಚುಯಿಂಗ್ ಗಮ್ಮ್’ನಂತೆ ಎಳೆದು ಎಳೆದು ಮುಂಗಾರಿನ ಅಧಿವೇಶನವನ್ನು ಬಲಿ ಕೊಟ್ಟಿದ್ದಾಯಿತು. ಸುಷ್ಮಾ ಸ್ವರಾಜ್’ರನ್ನು ಉತ್ತರಿಸಲೂ ಬಿಡಲಿಲ್ಲ ವಿರೋಧ ಪಕ್ಷಗಳು. ಕ್ಷುಲಕ ಕಾರಣಕ್ಕಾಗಿ ಸಂಸತ್ತಿನ ಅಮೂಲ್ಯ ಸಮಯವನ್ನು, ಸಾರ್ವಜನಿಕ ಹಣವನ್ನು ಪೋಲು ಮಾಡಿದವು. ಅದಾದ ಬಳಿಕ ಅಸಹಿಷ್ಣುತೆ ಭುಗಿಲೆದ್ದಿತು. ಮತ್ತೆ ಅದೇ ಅಧಾರವಿಲ್ಲದ ವಾದಗಳು, ಮತ್ತೆ ಇದೇ ತಾಯಿ ಮಗ ರಾಷ್ಟ್ರಪತಿ ಭವನದಲ್ಲಿ ಪ್ರತ್ಯಕ್ಷರಾದರು. ಅಸಹಿಷ್ಣತೆಯೆನ್ನುವುದು ಹಿಂದೆಂದೂ ಇರದ ವಸ್ತುವಲ್ಲ, ಅದೊಂದು ರಾಜಕೀಯ ಕೃಪಾಪೋಷಿತ ಎಂಬುದು ಜನರ ಅರಿವಿನಲ್ಲಿದಿದ್ದರಿಂದ ಈ ಆಟವೂ ಹೆಚ್ಚು ದಿನ ನಡೆಯಲಿಲ್ಲ. ಆದರೆ ಸಂಸತ ಕಲಾಪ ಸುಗಮವಾಗಲು ಅದು ಸಾಕಾಗಲಿಲ್ಲ. ವಿಕೆ ಸಿಂಗ್ ಎನ್ನುವ ಮಿಕವೂ ಸಿಕ್ಕಿತು. ವಿ.ಕೆ ಸಿಂಗ್ ಹೇಳಿದ್ದೇನು ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಜಾತಿ ರಾಜಕೀಯವನ್ನು ಮೇಳೈಸುವುದಕ್ಕಾಗಿ ಭಾರೀ ಪ್ರತಿಭಟನೆಗಳು ನಡೆದವು. ಸಂಸತ್ತಿನ ಅಧಿವೇಶನಕ್ಕೆ ಭಂಗ ತರಲು ಅದೂ ಒಂದು ಕಾರಣವಾಯ್ತು. . ಈಗ ಅದಕ್ಕೆ ಮತ್ತೊಂದು ಸೇರ್ಪಡೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ಮೇಲಿನ “ನ್ಯಾಷನಲ್ ಹೆರಾಲ್ಡ್ ವಂಚನೆ ಪ್ರಕರಣ”.
ಅಷ್ಟಕ್ಕೂ ಈ ಕೇಸು ೨೦೧೩ರಲ್ಲಿ ಅಂದರೆ ಯುಪಿಎ ಅವಧಿಯಲ್ಲಿಯೇ ದಾಖಲಾಗಿದ್ದು, ಮೋದಿ ಸರ್ಕಾರ ಬಂದ ಮೇಲೆ ದಾಖಲಾಗಿದ್ದಲ್ಲ. ಅಲ್ಲಿಂದೀಚೆಗೆ ನಿರಂತರ ವಿಚಾರಣೆಗಳು ನಡೆದು ಸತ್ಯ ಘಟನೆಯನ್ನು ಪರಾಮರ್ಶಿಸುವುದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ಜಾರಿ ಮಾಡಿರುವುದು ದೆಹಲಿಯ ನ್ಯಾಯಾಲಯವೇ ಹೊರತು ನರೇಂದ್ರ ಮೋದಿಯಲ್ಲ. ಹಾಗಿದ್ದ ಮೇಲೆ ಅದು ಹೇಗೆ ಸೇಡಿನ ಕ್ರಮವಾಗುತ್ತದೆ? ಇದರಲ್ಲಿ ಮೋದಿ ಅಥವಾ ಕೇಂದ್ರ ಸರಕಾರದ ಪಾತ್ರವೇ ಇಲ್ಲವೆಂದ ಮೇಲೆ ಅದು ಹೇಗೆ ಸರ್ವಾಧಿಕಾರಿ ಧೋರಣೆ ಎಂದಾಗುತ್ತದೆ? ಒಂದಿಲ್ಲೊಂದು ದೂರಿನೊಂದಿಗೆ ಇಢೀಯ ಗಾಂಧಿ ಕುಟುಂಬವನ್ನು ಕಾಡುತ್ತಿರುವ ಸುಬ್ರಹ್ಮಣ್ಯಂ ಸ್ವಾಮಿಯಾದರೂ ಸೇಡಿನ ದೂರು ದಾಖಲಿಸಿದ್ದಾಗಿರಬಹುದು ಆದರೆ ನ್ಯಾಯಾಲಯ ಮೇಲ್ನೋಟದ ಸತ್ಯಾಂಶವಿರದೆ ಸಮನ್ಸ್ ಜಾರಿ ಮಾಡುತ್ತದೆಯೇ? ತಿಳಿದವರು ಹೇಳಬೇಕು.
ಅಷ್ಟು ಸಾಕಾಗಿದೆ ಕಾಂಗ್ರೆಸ್ ಪಕ್ಷಕ್ಕೆ. ನ್ಯಾಷನಲ್ ಹೆರಾಲ್ಡ್ ವಂಚನೆ ಪ್ರಕರಣದಲ್ಲಿ ಅಧಿನಾಯಕಿ ಸೋನಿಯಾ ಮತ್ತು ಉತ್ತರ ಕುಮಾರ ರಾಹುಲ್’ಗೆ ಸಮನ್ಸ್ ಜಾರಿ ಮಾಡಿದ ವಿಷಯವನ್ನೂ ಸಂಸತ್ತಿನ ಕಲಾಪ ಬಲಿಕೊಡುವುದಕ್ಕೆ ಪ್ರಯತ್ನಿಸಿದೆ. ಅರೇ.. ವೈಯಕ್ತಿಕ ದೂರು, ದುಮ್ಮಾನಗಳಿಗೋಸ್ಕರ ಸಂಸತ್ತಿನ ಕಲಾಪವನ್ನು ನುಂಗಲು ಅದನ್ನೆನು ಸಂಸತ್ತು ಅಂದುಕೊಂಡಿದ್ದಾರೋ ಇಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿ ಅಂದುಕೊಂಡಿದ್ದಾರೋ? ಸುಬ್ರಹ್ಮಣ್ಯಂ ಸ್ವಾಮಿಯವರು ಬಿಜೆಪಿಯವರಾದರೂ ಅವರು ದೂರು ನೀಡಿದ್ದು ಖಾಸಗಿಯಾಗಿ. ಒಟ್ಟಾರೆಯಾಗಿ ಈ ಪ್ರಕರಣ ಸಂಪೂರ್ಣ ಖಾಸಗಿ ಪ್ರಕರಣ. ಅದಕ್ಕಾಗಿ ಜಿ.ಎಸ್.ಟಿ.ಯಂತಹ ಮಸೂದೆಗಳು ಪಾಸಾಗಬೇಕಿರುವ ಹೊತ್ತಿನಲ್ಲಿ ಸಂಸತ್ತನ್ನು ಹೈಜಾಕ್ ಮಾಡುತ್ತದೆಯೆಂದರೆ, ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷವಾಗಿ ಸಾಮಾಜಿಕ ಬದ್ಧತೆಯೆಂಬುವುದು ಒಂಚೂರೂ ಇಲ್ಲವಾ? ನೆನಪಿದೆಯಾ, ಶವಪೆಟ್ಟಿಗೆ ಹಗರಣವನ್ನು ಹಿಡಿದುಕೊಂಡು ತಿಂಗಳುಗಳ ಕಾಲ ಸಂಸತ್ತಿನ ಅಧಿವೇಶನ ನಡೆಯದಂತೆ ಮಾಡಿದ್ದ ಕಾಂಗ್ರೆಸ್, ಇವತ್ತು ಆ ಹಗರಣದಲ್ಲಿ ಜಾರ್ಜ್ ಫರ್ನಾಂಡಿಸ್ ನಿರ್ದೋಷಿ ಎಂದು ಕೋರ್ಟು ತೀರ್ಪಿತ್ತಾಗ ಮಗುಮ್ಮಾಗಿ ಕುಳಿತಿದೆ. ಒಂದು ಪಶ್ಚಾತ್ತಾಪದ ಮಾತನ್ನೂ ಆಡಲಿಲ್ಲ. ಇವತ್ತು ತಮ್ಮ ಮೇಲೆ ಸಮನ್ಸ್ ಜಾರಿಯಾಗುವಾಗ “ಇದೊಂದು ಪೊಲಿಟಿಕಲ್ ವೆಂಡೆಟ್ಟಾ” ಎನ್ನುವ ಇವರಿಗೆ ಮೋದಿಯ ಮೇಲೆ ಎಷ್ಟೊಂದು ಪೊಲಿಟಿಕಲ್ ವೆಂಡೆಟ್ಟಾ ಆಗಿತ್ತು ಎನ್ನುವುದು ಗೊತ್ತಿದೆಯಾ? ಒಂದಂತೂ ಹೇಳಬಲ್ಲೆ, ಇವರಂತೂ ದೇಶವನ್ನು ಉದ್ಧಾರ ಮಾಡಲಿಲ್ಲ, ಉಳಿದವರನ್ನು ಮಾಡಲೂ ಬಿಡುವುದಿಲ್ಲ!
ಮೊನ್ನೆ ಮೊನ್ನೆಯಷ್ಟೇ ರಾಹುಲ್ ಒಂದು ಮಾತು ಹೇಳಿದ್ದರು “ಸಿಬಿಐ ಮುಂತಾದ ದೊಡ್ಡ ದೊಡ್ಡ ತನಿಖಾ ಸಂಸ್ಥೆಗಳೆಲ್ಲಾ ನಿಮ್ಮ ಕೈಯಲ್ಲೇ ಇದೆ, ಸುಳ್ಳು ಅರೋಪಗಳನ್ನು ಮಾಡುವ ಬದಲು ನೇರವಾಗಿ ತನಿಖೆ ನಡೆಸಿ, ಸತ್ಯ ಏನೆಂಬುದು ಜಗತ್ತಿಗೆ ತಿಳಿಯಲಿ”. ಇವತ್ತು ರಾಹುಲ್ ವರಸೆ ಹೇಗಿದೆ ಗೊತ್ತಾ? “ಕೇಂದ್ರ ಸರಕಾರದ ಈ ರಾಜಕೀಯದ ಸೇಡಿನ ಕ್ರಮಕ್ಕೆ ಹೆದರುವುದಿಲ್ಲ, ಕೇಂದ್ರದ ವಿರುದ್ಧ ಮಾತಾಡುವುದನ್ನು ನಿಲ್ಲಿಸುವುದಿಲ್ಲ”. ವಾಟ್ ಎ ಚೇಂಜ್ ಓವರ್ ಮಾಮ? ರಾಹುಲ್ ಜೀ… ತನಿಖೆ ನಡೆಸಿ ಎಂದು ನೀವೇ ಹೇಳಿ ಇವತ್ತು ಕೊರ್ಟ್ ಸಮನ್ಸ್ ನೀಡಿದಾಗ “ಇದು ಸೇಡಿನ ಕ್ರಮ” ಎಂದು ಒಂದು ಇನ್ನೊಂದು ಮತ್ತೊಂದು ಹೇಳಿ ನುಣುಚಿಕೊಳ್ಳೂತ್ತಿರುವುದೇಕೆ? ತಪ್ಪು ಮಾಡಿರದಿದ್ದರೆ ತಾಯಿ ಮಗ ಇಬ್ಬರೂ ಕೋರ್ಟಿಗೆ ಹಾಜರಾಗಿ ವಾದ ಮಂಡಿಸಬಹುದಲ್ಲಾ? ಅದನ್ನು ಪದೇ ಪದೇ ಮುಂದೆ ಹಾಕುತ್ತಿರುವುದೇಕೆ? ಸುಷ್ಮಾ ಸ್ವರಾಜ್ ಉತ್ತರ ನೀಡಬೇಕೆಂದು ಎರಡು ತಿಂಗಳು ರಚ್ಚೆ ಹಿಡಿದು ಕುಳಿತ ನೀವು ತಾಯಿ ಮಗ ಯಾಕೆ ಒಂದು ಜವಾಬ್ದಾರಿಯುವ ಉತ್ತರ ನೀಡಬಾರದು?
ಇದೇ ಮಂಡೆ ಬಿಸಿಯಲ್ಲಿ, ಸೋನಿಯಾ ಗಾಂಧಿ “ನಾನಾರಿಗೂ ಹೆದರುವುದಿಲ್ಲ, ನಾನು ಇಂದಿರಾ ಗಾಂಧಿ ಸೊಸೆ” ಎಂದು ಅತ್ತೆಯದ್ದೇ ಸ್ವಭಾವವನ್ನು ಪ್ರದರ್ಶಿಸಿದ್ದಾರೆ. ಅಲ್ಲಾ ಅವರು ಇಂದಿರಾ ಗಾಂಧಿ ಸೊಸೆಯಾದರೆ ನಾವೇನು ಮಾಡಬೇಕು? ಅವರೇನು ಕಾನೂನಿಗಿಂತ ದೊಡ್ಡವರಲ್ಲವಲ್ಲ. ಇಂದಿರಾ ಗಾಂಧಿಯಂತೂ ಕಾನೂನಿಗಿಂತ ದೊಡ್ಡವರಾಗಲು ಹೋಗಿ ಛೀಮಾರಿ ಹಾಕಿಸಿಕೊಂಡ ಮೇಲೂ ತುರ್ತು ಪರಿಸ್ಥಿತಿಯನ್ನು ಹೇರಿದ ದುರಹಂಕಾರಿ ಮಹಿಳೆ. ತನ್ನ ಅಧಿಕಾರ ದಾಹಕ್ಕಾಗಿ ಪ್ರಜಾಪ್ರಭುತ್ವದ ರಾಷ್ಟ್ರದ ಜನರ ಸ್ವಾತಂತ್ರವನ್ನು ಬ್ರಿಟೀಷರಿಗಿಂತಲೂ ಹೀನವಾಗಿ ಕಸಿದುಕೊಂಡಾಕೆ ಇಂಧಿರಾ ಗಾಂಧಿ. ಚುನಾವಣೆಯಲ್ಲಿ ಅಕ್ರಮಗಳನ್ನೆಸಗಿದರೂ, ದೇಶದ್ರೋಹಿ ಕೆಲಸ ಮಾಡಿದರೂ ಯಾರೂ ಕೇಳಬಾರದು ಎನ್ನುವಂತಹ ಧೋರಣೆಯಾಗಿತ್ತು ಅವರದ್ದು. ಸೋನಿಯಾ ಅತ್ತೆಗೆ ತಕ್ಕ ಸೊಸೆ ಎಂಬುದನ್ನು ಬಿಂಬಿಸಲು ಹೊರಟಿರುವಂತಿದೆ. ಸೋತು ಸುಣ್ಣವಾಗಿ ನೆಲೆ ಕಳೆದುಕೊಂಡಿರುವಾಗಲೂ ಇವರು ಇಷ್ಟು ಅಂಹಕಾರ ಪ್ರದರ್ಶಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡಿ. ಎಷ್ಟಾದರೂ ಸೋನಿಯಾ ಇಂದಿರಾ ಗಾಂಧಿ ಸೊಸೆಯಲ್ಲವೇ?
ಸೋನಿಯಾ ಗಾಂಧಿಯವರ ದರ್ಪದ ಮಾತುಗಳನ್ನು ಕೇಳಿದಾಗ ಬಹುಷಃ ಆಕೆ ದೇಶದಲ್ಲಿನ್ನೂ ಯುಪಿಎ ಸರ್ಕಾರವಿದೆಯೆಂದು ಭಾವಿಸಿದಂತಿದೆ. ಆದರೆ ಸರ್ಕಾರವಿರುವುದು ಮೋದಿಯದ್ದು. ನ್ಯಾಯಾಲಯ ಯಾರ ಸೊಸೆಯೂ ಅಲ್ಲ. ಅತ್ತೆಯೂ ಅಲ್ಲ. ಅದೇನಾದರೂ ಕಠಿಣ ನಿರ್ಧಾರ ತೆಗೆದುಕೊಂಡಿತೆಂದರೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆಗಳನ್ನಷ್ಟೇ ಮಾಡಬೇಕಾದೀತು!
ಲಾಸ್ಟ್ ಪಂಚ್: ಸಣ್ಣ ಮಕ್ಕಳಿಗೆ ತಾಯಿ “ನಿಂಗೆ ಪೆಟ್ಟಿನ ಹೆದರಿಕೆಯಿಲ್ಲ” ಎಂದು ಬೈಯ್ಯುವುದುಂಟು. ಸೋನಿಯಾ ಗಾಂಧಿಗೂ ಹಾಗೆಯಾ?!