ಅಂಕಣ

ಕನ್ನಡಮಾತಾ ಸಂಜಾತ- “ವಿಶ್ವಮಾನವ”

ಪ್ರಕೃತಿಯ ಮಡಿಲು ಕುಪ್ಪಳ್ಳಿಯಲ್ಲಿ ಜನ್ಮ ತಳೆದು ಸಾಹಿತ್ಯದ ಪ್ರಾಂಜಲ ತೀರ್ಥವನ್ನು ನಿರಂತರ ತಪಸ್ಸಿನಿಂದ ತನ್ನೊಳಾವಾಹಿಸಿಕೊಂಡು ಆತ್ಮ ಕವಿಯಾಗಿ ರೂಪುಗೊಂಡ ಮಹಾನ್ ಕವಿ, ” ಕುವೆಂಪು” ಕಾವ್ಯನಾಮದಿಂದ ಸಾಹಿತ್ಯವಲಯದಲ್ಲಿ ಚಿರಂತನವಾಗುಳಿದಿರುವ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ನಿಸರ್ಗದ ನಿಗೂಢತೆಯ ಜಾಡನ್ನರಸುತ್ತರಸುತ್ತಲೇ ಕಾವ್ಯ ಸೃಜಿಸುವಿಕೆಯ ಶಿಖರವನ್ನು ಮುಟ್ಟಿ, ತನ್ಮೂಲಕ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಕಾವ್ಯತಪಸ್ವಿ. ವಿಶ್ವಮಾನವ ಪರಿಕಲ್ಪನೆಯನ್ನು ನೀಡಿ, ಜಾತ್ಯಾತೀತ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದವರು. ವಿಶ್ವಮಾನವ ಗೀತೆಯನ್ನು ಕೇಳುವಾಗ ಎಂಥವನೂ ಕೂಡ ತುಸುಕಾಲ ಶಿಶುವಾಗಿ ಮನಸ್ಸಿನ ಸಮಸ್ತ ಸಂಕುಚಿತತೆಗಳಿಂದಲೂ ವಿಮುಕ್ತನಾಗಿ ಒಂದು ಅವರ್ಣನೀಯ ಲೋಕದ ಕದ ತಟ್ಟಿ ಬರದೇ ಇರಲಾರ. ಅಂಥಾ ಮಾಯೆ ಕುವೆಂಪು ಕಾವ್ಯ! ಕನ್ನಡಭಕ್ತರ ಮಾನಸ ಸರಸಿಯಲ್ಲಿ ಚಿರಸ್ಥಾಯಿಯಾಗುಳಿದಿರುವ ಈ ವಿಶ್ವಮಾನವರ ೧೧೧ನೇ ಜನ್ಮ ಪರ್ವವಿಂದು.

ಡಿಸೆಂಬರ್ ೨೯, ೧೯೦೪ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ ಜನಿಸಿದ ಕುವೆಂಪು ಅವರ ಮೂಲಸ್ಥಳ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ. ವಾಣಿಜ್ಯೀಕರಣದ ಸ್ಪರ್ಶವಿರದ ಆ ಪುಟ್ಟ ಹಳ್ಳಿಯಲ್ಲಿ ನಿಸರ್ಗವನ್ನು ನೋಡುತ್ತಾ, ನಿಸರ್ಗದಲ್ಲಿ ಒಂದಾಗಿ ನಿಸರ್ಗ ಕವಿಯಾಗಿ ರೂಪುಗೊಂಡರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿಯೇ ಮುಗಿಸಿ, ಪ್ರೌಢ ಶಿಕ್ಷಣಕ್ಕಾಗಿ ಮೈಸೂರಿಗೆ ತೆರಳಿದರು. ಮಹಾರಾಜ ಕಾಲೇಜಿನಿಂದ ಬಿ. ಎ. ಮತ್ತು ಎಂ. ಎ. ಪದವಿ ಪಡೆದರು. ಅಲ್ಲಿಂದ ಮುಂದೆ ಮೈಸೂರೇ ಅವರ ಶಾಶ್ವತ ನೆಲೆಯಾಯಿತು. ಕನ್ನಡ ಕೀರ್ತಿ ಗಂಧವನ್ನು ಅಗಾಧವಾಗಿ ಪಸರಿಸುವಂತೆ ಮಾಡಿದ ಕುವೆಂಪು ತಮ್ಮ ಸಾಹಿತ್ಯ ಪಯಣವನ್ನು ಆಂಗ್ಲ ಭಾಷೆಯಿಂದ ಆರಂಭಗೊಳಿಸಿದ್ದು ಸೋಜಿಗ. ಹುಟ್ಟು ಕಲಾವಿದರಾದ ಅವರು ಪ್ರೌಢಶಾಲೆಯಲ್ಲಿದ್ದಾಗಲೇ ಹಲವಾರು ಇಂಗ್ಲಿಷ್ ಕವಿತೆಗಳನ್ನು ಬರೆದು ಅವೆಲ್ಲವನ್ನೂ ಸಂಕಲಿಸಿ ” ದಿ ಬಿಗಿನರ್ಸ್ ಮ್ಯೂಸ್” ಎಂಬ ಕೃತಿಯನ್ನು ಪ್ರಕಟಿಸಿದ್ದ ಪ್ರತಿಭಾಶಾಲಿ. ಒಮ್ಮೆ ತಾವು ಬರೆದಿದ್ದ ಕವಿತೆಗಳನ್ನು ಆಗ ಮೈಸೂರಿಗೆ ಭೇಟಿ ಕೊಟ್ಟಿದ್ದ ಜೇಮ್ಸ್ ಕಸಿನ್ಸ್ ಅವರ ಬಳಿಗೆ ತೆಗೆದುಕೊಂಡು ಹೋಗಿ ತೋರಿಸಿದಾಗ, ಕಸಿನ್ಸ್ ಅವುಗಳನ್ನು ಮೆಚ್ಚಿಕೊಂಡರಾದರೂ ಮಾತೃ ಭಾಷೆಯಲ್ಲಿ ಬರೆಯುವಂತೆ ಸಲಹೆ ನೀಡಿದರು. ಅಲ್ಲಿಂದ ಮುಂದೆ ಕುವೆಂಪು ತಮ್ಮ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಕೆಲ ಸ್ವತಂತ್ರ ಕನ್ನಡ ಕವಿತೆಗಳನ್ನೂ ಬರೆದರು. ಕ್ರಮೇಣ ಕನ್ನಡ ಕವಿಯಾದರು. ಇಂಥಾ ಅದ್ಭುತ ಕಾವ್ಯದೀಪವನ್ನು ಕನ್ನಡಪಥದೆಡೆಗೆ ಜಾರುವಂತೆ ಪ್ರೇರೇಪಿಸಿದ ಕಸಿನ್ಸ್ ಅವರಿಗೆ ಕೋಟಿ ನಮನಗಳನ್ನು ಸಲ್ಲಿಸಿದರೂ ಸಾಲದು.
ಕನ್ನಡದಲ್ಲಿ ಕುವೆಂಪು ಅವರ ಮೊದಲ ಕೃತಿ ” ಅಮಲನ ಕಥೆ”. ಗೋವಿನ ಹಾಡಿನ ಮಾದರಿಯ ಪದ್ಯಗಳ ಸಂಕಲನವಿದು. ನಂತರದಲ್ಲಿ ಕುವೆಂಪು ಸಾಹಿತ್ಯ ಅನಾಯಾಸವಾಗಿ ವಿಸ್ತಾರಗೊಳ್ಳುತ್ತಾ ಸಾಗಿತು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕುವೆಂಪು ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲೂ ತೊಡಗಿಸಿಕೊಂಡ ಧೀಮಂತ ಕವಿ. ” ಕೊಳಲು” ಅವರ ಮೊದಲ ಕವನ ಸಂಕಲನ. ಇದು ಅವರಿಗೆ ಜನಪ್ರಿಯತೆಯನ್ನೂ ಜನಮನ್ನಣೆಯನ್ನೂ ತಂದುಕೊಟ್ಟಿತು. ಅಲ್ಲಿಂದ ಮುಂದೆ ೩೦ ಕವನ ಸಂಕಲನಗಳನ್ನು ಹೊರ ತಂದರು. ನವಿಲು, ಕುಟೀಚಕ, ಚಂದ್ರ ಮಂಚಕೆ ಬಾ ಚಕೋರಿ, ಪ್ರೇಮಕಾಶ್ಮೀರ, ಅಗ್ನಿಹಂಸ, ಕಲಾಸುಂದರಿ, ಕೋಗಿಲೆ ಹೀಗೆ ಹೆಸರಿಸಬಹುದು. ರಕ್ತಾಕ್ಷಿ, ಮಹಾರಾತ್ರಿ, ಬಲಿದಾನ ಹಾಗೂ ಇನ್ನಿತರ ಒಟ್ಟು ೧೪ ನಾಟಕಗಳನ್ನು ಬರೆದಿದ್ದಾರೆ. ಕಥಾಸಂಕಲನಗಳನ್ನೂ ಹೊರ ತಂದಿದ್ದಾರೆ. ಮಕ್ಕಳ ಸಾಹಿತ್ಯದಲ್ಲೂ ಕುವೆಂಪು ಹಿಂದೆ ಬಿದ್ದಿಲ್ಲ. ಮೇಘ ಪುರ, ಮರಿವಿಜ್ಞಾನಿ, ಮೋಡಣ್ಣನ ತಮ್ಮ ಎಂಬ ಮಕ್ಕಳ ಕವನ ಸಂಕಲನಗಳನ್ನು ರಚಿಸಿದ್ದಾರೆ. ಆಧುನಿಕ ಸಾಹಿತ್ಯಿಕ ಕಾಲದಲ್ಲಿ ಮಹಾಕಾದಂಬರಿಗಳನ್ನು ರಚಿಸುವುದು ದುಸ್ತರ ಎಂಬ ಮನಸ್ಥಿತಿಯಿದ್ದ ಸಮಯದಲ್ಲಿ ಕಾನೂರು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಎಂಬ ಎರಡು ಮಹಾಕಾದಂಬರಿಗಳನ್ನು ರಚಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಮಲೆನಾಡಿನ ಗಾಢತೆಯ ಸುತ್ತ ಹೆಣೆದ ಕಾಲ್ಪನಿಕ ಪಾತ್ರಗಳನ್ನು ಕುಣಿಸುವ ಈ ಕಾದಂಬರಿಗಳು ಆಧುನಿಕ ಸಾಹಿತ್ಯದ ಅನರ್ಘ್ಯ ಅದ್ಭುತಗಳು. “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯವನ್ನು ರಚಿಸಿ ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದು ಕೊಟ್ಟ ಅಗ್ಗಳಿಕೆ ಕುವೆಂಪು ಅವರದ್ದು. ನೆನಪಿನ ದೋಣಿ ಅವರ ಆತ್ಮಕಥನ.

ಸಾಗರೋಪಾದಿಯ ಧೀಮಂತ ಸಾಹಿತ್ಯದಿಂದಷ್ಟೇ ಅಲ್ಲದೇ ತಮ್ಮ ಅತೀತವಾದ ನಿಗೂಢತೆಯಿಂದಲೂ ಕುವೆಂಪು ಭಿನ್ನವಾಗುತ್ತಾರೆ. ಇಂದಿಗೂ ಕುವೆಂಪು ಅವರ ಸಾಹಿತ್ಯಿಕ ಅಂಶಗಳನ್ನು ಅವರ ಜೀವನ ಮೌಲ್ಯಗಳೊಂದಿಗೆ ತುಲನೆ ಮಾಡಿ ಚರ್ಚಿಸುವ ದೊಡ್ಡ ಸಮೂಹವೇ ಇದೆ. ಆದರೆ ಚರ್ಚಿಸಿದಷ್ಟೂ ಕುವೆಂಪು ಮಾತ್ರ ಇನ್ನಷ್ಟು ನಿಗೂಢರಾಗುತ್ತಾ ಹೋಗುತ್ತಾರೆ. ರಾಮಾಯಣ ದರ್ಶನಂ ರಚಿಸಿದ ಕುವೆಂಪು ಅತಿದೊಡ್ದ ನಾಸ್ತಿಕರಾಗಿದ್ದರು ಎಂಬ ಪರಿಕಲ್ಪನೆ ಇನ್ನೂ ಹಲವರಲ್ಲಿದೆ. ಆದರೆ ಇಲ್ಲಿ ನಾಸ್ತಿಕರು ಎನ್ನುವುದಕ್ಕಿಂತ ಅವರೋರ್ವ ವೈಚಾರಿಕರಾಗಿದ್ದರು ಎಂದರೆ ಹೆಚ್ಚು ಸೂಕ್ತವಾಗುವುದೇನೋ. ಡಾಂಭಿಕ ಉಪಾಸನೆ, ಪ್ರದರ್ಶಿತ ಭಕ್ತಿಯೆಂದರೆ ಕುವೆಂಪು ಅವರಿಗೆ ಎಲ್ಲಿಲ್ಲದ ವಿರೋಧವಿತ್ತು. ಪುರೋಹಿತಶಾಹಿಯನ್ನು ಖಂಡಿಸುತ್ತಿದ್ದರವರು. ತೋರಿಕೆಯ ಆಡಂಬರದ ಜೀವನವನ್ನು ನಿರಾಕರಿಸಿದ ಅವರ ಜೀವನ ಮೌಲ್ಯಕ್ಕೆ ಅತ್ಯುತ್ತಮ ದೃಷ್ಟಾಂತವೆಂದರೆ ” ಮಂತ್ರಮಾಂಗಲ್ಯ”. ಪುರೋಹಿತ ಶಾಹಿಯನ್ನು ಬಹಿರಂಗವಾಗಿ ಧಿಕ್ಕರಿಸಿ ತಾವೇ ರೂಪಿಸಿದ ಸರಳ ಸಜ್ಜನಿಕೆಯ ಮಂತ್ರಮಾಂಗಲ್ಯ ಪ್ರಾಕಾರವಾಗಿ ತಾವೇ ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯವರ ವಿವಾಹ ಕಾರ್ಯ ನಡೆಸಿಕೊಡುತ್ತಾರೆ. ಮಂತ್ರಮಾಂಗಲ್ಯ ಸುಮಾರು ೨೦೦- ೩೦೦ ಜನರ ಸಮ್ಮುಖದಲ್ಲಿ ಯಾರು ಬೇಕಾದರೂ ಒಂದು ಪುಟ್ಟ ಮಂಟಪದಲ್ಲಿ ನಡೆಸಿಕೊಡಬಹುದಾದ ಸರಳ ವಿವಾಹ ಪ್ರಾಕಾರ. ಇದರೊಂದಿಗೆ ಕಾನೂನಿನ ರಕ್ಷೆಯನ್ನೂ ಸೇರಿಸಲಾಗಿದೆ. ಹೀಗೇ ತಮ್ಮದೇ ಆದ ಜೀವನ ಮೌಲ್ಯಗಳಿಂದ ಸಮಾಜದ ಸಂಕುಚಿತತೆಗಳನ್ನು ನಿರಂತರವಾಗಿ ಧಿಕ್ಕರಿಸುತ್ತಾ ಬದಲಾವಣೆಗೆ ಆ ಕಾಲದಲ್ಲಿಯೇ ಭಾಷ್ಯ ಬರೆದವರು ಕುವೆಂಪು.

ಗಂಟೆಗಟ್ಟಲೇ ಧ್ಯಾನಮಂದಿರದಲ್ಲಿ ತಮ್ಮನ್ನು ತಾವೇ ಕಳೆದುಕೊಳ್ಳುವಷ್ಟು ಅಧ್ಯಾತ್ಮಿಕರು. ಆದರೆ ಮಂತ್ರ- ತಂತ್ರಗಳಿಗೆ ಸೊಪ್ಪು ಹಾಕದ ನಿಷ್ಠುರವಾದಿ. ಮೇಲ್ನೋಟಕ್ಕೆ ಪರಸ್ಪರ ವಿರುದ್ಧವಾದ ಈ ಸಿದ್ಧಾಂತಗಳೇ ಕುವೆಂಪು ಅವರನ್ನು ಅಷ್ಟೊಂದು ನಿಗೂಢವಾಗಿಸುವುದು.

ಸಾಕು ಈ ಬಹೂದಕ
ಆಗು ನೀ ಕುಟೀಚಕ
ಓ, ನನ್ನ ಮಾನಸ!

ಎಂದು ಕುವೆಂಪು ತಮ್ಮ ಒಂದು ಕವನದಲ್ಲಿ ಹೇಳುತ್ತಾರೆ. ಅಂದರೆ ಪುಣ್ಯ ಕ್ಷೇತ್ರಗಳಿಗೆ ಅಲೆದು ಬಹಿರಂಗವಾಗಿ ಭಕ್ತಿ ಪ್ರದರ್ಶಿಸುವ ಈ ಬಹೂದಕತೆ ಸಾಕು. ನನ್ನ ಮನಸ್ಸೇ, ಇನ್ನಾದರೂ ಕುಟೀರದೊಳಗಿನ ಶಾಂತ ತಪಸ್ಸಿಗೆ ನನ್ನನ್ನು ಅಣಿಗೊಳಿಸು ಎಂಬುದು ಇದರ ಭಾವಾರ್ಥ. ದೇಹವನ್ನು ಕುಟೀರವನ್ನಾಗಿಸಿ ಉಪಾಸನೆಯನ್ನು ತಪಸ್ಸೆನ್ನುವ ಆ ಕವಿಭಕ್ತಿಯ ಪರಿ ಅನೂಹ್ಯವಾದುದು. ಹೀಗೆ ಭಕ್ತಿಯೆಂಬುದು ಆಚಾರಗಳಲ್ಲಿಲ್ಲ, ವಿಚಾರಗಳಲ್ಲಿದೆ ಎಂದು ನಂಬಿದವರು ಮತ್ತು ಪಾಲಿಸಿದವರು ಕುವೆಂಪು.
ಅಷ್ಟಕ್ಕೂ ಅವರು ಸಾಹಿತ್ಯವನ್ನೂ ಉಪಾಸನೆಯನ್ನೂ ವಿಜ್ಞಾನವನ್ನೂ ಎಂದೂ ಭಿನ್ನವಾಗಿ ಪರಿಭಾವಿಸಲೇ ಇಲ್ಲ. ನಿಸರ್ಗದ ಸುಪ್ತ ಸತ್ಯಾನ್ವೇಷಣೆಯನ್ನು ಶಾಸ್ತ್ರೀಯವಾಗಿ ಮಾಡಲು ಸಾಹಿತ್ಯವನ್ನು ಒಂದು ಪವಿತ್ರ ಸಾಧನವನ್ನಾಗಿಸಿಕೊಂಡರು. ಆದ್ದರಿಂದಲೇ ಅವರ ಸಾಹಿತ್ಯದಲ್ಲಿ ಆತ್ಮ ಮೂರ್ತವಾಗುತ್ತದೆ. ವಿಜ್ಞಾನ ಚಿತ್ತದ ಕ್ಷೀರ ಕಡಲಿನ ಅಲೆಗಳಾಗಿ ಕಲ್ಪನೆಗಳ ಅಲಂಕಾರದೊಂದಿಗೆ ಮುತ್ತಿಕ್ಕುತ್ತದೆ. ಯಾವುದನ್ನು ಪತ್ತೆ ಮಾಡುವುದು ಅಸಾಧ್ಯವೆಂಬುದು ಬಹುಕಾಲದ ನಂಬುಗೆಯಾಗಿದೆಯೋ ಅದರ ಸೂಕ್ಷ್ಮ ಪರಿಧಿಯಾಚೆಗಿನ ಅನ್ವೇಷಣೆಯಾಗಿ ಸಾಹಿತ್ಯ ರೂಪುಗೊಳ್ಳುತ್ತಾ ಸಾಗುತ್ತದೆ. ಈ ಮೂರೂ ಮೂಲಧಾತುಗಳ ಸೂಕ್ಷ್ಮ ಸಮನ್ವಯದ ಮಾಯೆಯೇ ಕುವೆಂಪು ಕಾವ್ಯಗಳನ್ನು ಇಂದಿಗೂ ನವನೂತನವಾಗಿಸುವುದು ಹಾಗೂ ನವಬರಹಗಾರರಿಗೆ ಸ್ಫೂರ್ತ ಸೆಲೆಯಾಗಿಸುವುದು.
ಇನ್ನು ಕನ್ನಡವನ್ನೇ ತಮ್ಮ ಸಾಹಿತ್ಯದ ಉಸಿರಾಗಿಸಿಕೊಂಡ ಕವಿಗಳ ಸಾಲಿನಲ್ಲಿ ಕುವೆಂಪು ಅಗ್ರಗಣ್ಯರು. ನಾಡಗೀತೆಯನ್ನು ಕಟ್ಟಿಕೊಟ್ಟವರು ಅವರು. ಕನ್ನಡ ತಾಯಿಯ ಹಿರಿಮೆ ವರ್ಣರಂಜಿತ ವಸನ ತೊಟ್ಟು ಪ್ರತಿ ಕನ್ನಡಿಗನ ಬಾಯಲ್ಲಿ ಹರಿದಾಡುತ್ತಿರುವುದಕ್ಕೆ ಓರ್ವ ಕಾರಣೀಕರ್ತರು.

ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ;
ನೀ ಮುಟ್ಟುವ ಮರ ಶ್ರೀ ಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ||

ಎಂಬ ಸಾಲುಗಳು ಕನ್ನಡತನ ದೃಢವಾಗಿ ಮನದಲ್ಲಿ ಬೇರೂರಿದ್ದರೆ ನಾವು ಎಲ್ಲೇ ಇದ್ದರೂ ಜಾಗೃತ ಕನ್ನಡಿಗರಾಗಿ, ತಾಯಿಯ ನಿಜ ಸುತರಾಗಿಯೇ ಇರುತ್ತೇವೆ ಎಂದು ಚಿತ್ರಿಸುವ ಆ ಪರಿಯೇ ಅನನ್ಯವಾದುದು. ಆ ಭಾವನೆಯೇ ಕೃತಕೃತ್ಯವಾದುದು. ಇಂಥಾ ಹಲವಾರು ಕವನಗಳು, ಮಾತೃ ಭಕ್ತಿಯ ಹಲವಾರು ಅನಿರ್ವಚನೀಯ ಮಜಲುಗಳನ್ನೂ ದರ್ಶಿಸಿ, ನಮ್ಮಲ್ಲಿ ಕನ್ನಡತನವನ್ನು ಜಾಗೃತಗೊಳಿಸುತ್ತವೆ. ಪದಪುಂಜಗಳೊಂದಿಗೆ ಸುಲಭವಾಗಿ ಆಟವಾಡುವ ಅತಿ ಧೀಮಂತಿಕೆ ಅವರದು. ಕನ್ನಡ ಭಾಷಾ ಭಂಡಾರವನ್ನು ಸಾರ್ಥಕವಾಗಿ ದುಡಿಸಿಕೊಂಡವರು.
ಹಲವಾರು ಪ್ರಶಸ್ತಿಗಳೂ ರಸಋಷಿಯನ್ನು ಅರಸುತ್ತಾ ಬಂದವು. ಪದ್ಮಭೂಷಣ, ರಾಜ್ಯ ಸರ್ಕಾರದ ರಾಷ್ಟ್ರ‍ಕವಿ ಪುರಸ್ಕಾರ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪುರಸ್ಕಾರ ಸೇರಿದಂತೆ ಹಲವಾರು ಗರಿಗಳು ಅವರ ಕೀರ್ತಿ ಮಕುಟವನ್ನೇರಿವೆ.
ಜಾತಿ- ಧರ್ಮಗಳನ್ನು ಮೆಟ್ಟಿ ನಿಂತು ವಿಶ್ವಮಾನವನಾಗುವಂತೆ ಕರೆ ಕೊಟ್ಟ ಆಧುನಿಕ ದಾರ್ಶನಿಕರಾದ ಕುವೆಂಪುರವರು ದಿಗಂತದಾಚೆಗಿನ ಅನಂತತೆಯನ್ನು ಅರಸುತ್ತರಸುತ್ತಲೇ ಮುಕ್ತವಾಗಿ ಕನ್ನಡ ಭಕ್ತರೆದೆತಲಿ ಯುಕ್ತ ಚೇತನ ಕಟ್ಟಿಟ್ಟ ಮಹಾನ್ ಕವಿ. ಭೌತಿಕವಾಗಿ ನಮ್ಮ ಜತೆಗಿಲ್ಲದಿದ್ದರೂ ತಮ್ಮ ಸಾಹಿತ್ಯದ ಮೂಲಕ, ವಿಚಾರಧಾರೆಗಳ ಮೂಲಕ ಸದಾ ಜೀವಂತವಾಗುಳಿಯುವ ಕುವೆಂಪುರವರ ಜನ್ಮದಿನವಿಂದು. ” ವಿಶ್ವಮಾನವ ದಿನ”!. ಒಡೆದ ಮನಸ್ಸುಗಳನ್ನಂಟಿಹ ಸಂಕುಚಿತತೆಯ ಬಟ್ಟೆಯನ್ನು ಕಳಚಿ ವಿಶ್ವಮಾನವರಾಗುವತ್ತ ದಿಟ್ಟ ಹೆಜ್ಜೆಯಿಡುವಾ……..

ರೂಪ ರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಅನಂತ ನೀ ಅನಂತವಾಗು
ಆಗು, ಆಗು, ಆಗು……………………

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!