ಅಂಕಣ

ಹೊಸ ವರ್ಷದ ಹೊಸ್ತಿಲಲ್ಲಿ … !!

ಹೊಸ ವರುಷ ಮೊದಲು ಆಚರಣೆಗೆ ತಂದವರು ಪ್ರಾಚಿನ ಬ್ಯಾಬಿಲೋನಿಯರು (ಈಗಿನ ಇರಾಕ್ ಪ್ರಾಂತ್ಯ ) ಎಂದು ಇತಿಹಾಸದಿಂದ ತಿಳಿದುಬರುತ್ತದೆ . ಮುಂದೆ ಕ್ರಿಸ್ತನ ಜನನದ ನಂತರ ಕ್ರಿಸ್ತಿಯನ್ ಧರ್ಮ ಉದಯಿಸಿ ರೋಮನ್ನರು ಕ್ರಿಸ್ತನ ಜನುಮ ದಿನವನ್ನೇ ಹೊಸ ವರುಷವೆಂದು ಆಚರಿಸಿದರು, ಅದೇ ನಾವಿಂದು ಸಂಭ್ರಮಿಸುವ ನವ ವರುಷ. ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪದ್ಧತಿಯನ್ನು ಎಲ್ಲ ಸಂಸ್ಕೃತಿಗಳಲ್ಲೂ ಆಚರಿಸುತ್ತಾರೆ, ನಮ್ಮನ್ನು ಹೊತ್ತಿರುವ ಭೂಮಿತಾಯಿ ಬೆಳಕು ನೀಡುವ ಸೂರ್ಯ ದೇವನನ್ನು ಪ್ರದಕ್ಷಿಸಲು ೩೬೫ ದಿನಗಳು ಬೇಕು. ಅಂದರೆ ಒಂದು ಪುನರಾವೃತಿಯಾಗುವ ಸಂದರ್ಭವನ್ನು ಸೂಚಿಸಲು ಹೊಸ ವರುಷದ ಆಚರಣೆ ಬಳಕೆಗೆ ಬಂತು ಎಂಬ ಪ್ರತೀತಿ ಇದೆ.

ಈ ಹೊಸ ವರುಷ ಸ್ವಾಗತಿಸಲು ಜಗತ್ತಿನೆಲ್ಲೆಡೆ ದಶಂಬರ ತಿಂಗಳ ೩೧ನೆ ರಾತ್ರಿ ೧೨ ಗಂಟೆಗೆ ಜಾಗರಣೆ ಕುಳಿತು ಸಿಡಿಮದ್ದು, ಕುಣಿತ ಪಾರ್ಟಿಗಳೊಂದಿಗೆ ಬರ ಮಾಡಿಕೊಳ್ಳುತ್ತಾರೆ. ಹೊಸ ವರುಷದ ದಿನ ಹೊಸ ಸೂರ್ಯ ಮೂಡುವುದಿಲ್ಲ , ಆತ ಎಂದಿನಂತೆ ಶಾಂತದಿಂದ ಶಾಖವಾಗುತ್ತಾನೆ, ಮತ್ತೆ ಮೆಲ್ಲನೆ ಬೆವರಿಳಿಸುತ್ತಾನೆ, ಸಂಜೆಯಾಗುತ್ತಿದ್ದಂತೆ ಶಶಿ ಉದಿಸುತ್ತಾನೆ. ಆತನಲ್ಲೂ ಬದಲಾವಣೆ ಇರುವುದಿಲ್ಲ. ಬಾನ್ದಳದ ತೋಟದಲ್ಲಿ ಚುಕ್ಕಿಗಳಲ್ಲೂ ಬದಲಾವಣೆ ಕಾಣುವುದಿಲ್ಲ. ಪರಿಸರ ಸಹಜವಾಗಿ ತಂಗಾಳಿಗೆ ತಲೆದೂಗುತಿರುತ್ತದೆ, ಪಕ್ಕಿಗಳು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುತ್ತವೆ. ನಿಸರ್ಗದೊಳಗಿನ ಮತ್ತು ಬಾಹ್ಯಾಕಾಶದ ಯಾವ ಕ್ರಿಯೆಯಲ್ಲೂ ಬದಲಾವಣೆ ಕಂಡು ಬರುವುದಿಲ್ಲ. ಇಲ್ಲಿ ವ್ಯತ್ಯಾಸ ಕಂಡು ಬರುವುದಿದ್ದರೆ ೨೦೧೫ ಇದ್ದಲ್ಲಿ ೧೬ ಸೇರಿಕೊಳ್ಳುತ್ತದೆ, ಜೊತೆಗೆ ನಮ್ಮ ಆಯುಷ್ಯದ ಒಂದು ವರುಷ ಕಡಿಮೆಯಾಗುತ್ತದೆ ಅಷ್ಟೇ.

ಇನ್ನೂ ವರುಷ ಉರುಳುತಿದ್ದಂತೆ ಹಿಂದಿನ ಕಾಲವೇ ಚೆನ್ನಾಗಿತ್ತು ಇದು ಕಲಿಯುಗ , ನಡೆದಾಡಲು ಭೀತಿ , ಬದುಕಲು ಭಯ ಎಂದು ಎಲ್ಲಾ ತಲೆಮಾರಿನ ಜನ ವಂಶಪಾರಂಪರ್ಯದ ಸಿದ್ಧ ಹಕ್ಕೆಂದು ಯಾವಾಗಲೂ ಹೇಳುತ್ತಲೇ ಬರುತ್ತಾರೆ. ಅದು ಪೂರ್ಣ ಸತ್ಯವಲ್ಲ . ಕಳೆದ ದಿನಗಳಲ್ಲಿ ಅನ್ಯಾಯವಿತ್ತು ಕಾನೂನು ಇರಲಿಲ್ಲ. ಅಸಮಾನತೆ ಇತ್ತು ಹೋರಾಟವಿರಲಿಲ್ಲ , ದಬ್ಭಾಳಿಕೆ ಇತ್ತು ಪ್ರತಿರೋಧ ಇರಲಿಲ್ಲ, ಜೊತೆಗೆ ವಿದ್ಯಾಭ್ಯಾಸ , ಆರೋಗ್ಯ , ತಂತ್ರಜ್ಞಾನ, ವೈಜ್ಞಾನಿಕತೆ ಈಗಿನ ಮಟ್ಟದಲ್ಲಿರಲಿಲ್ಲ. ಕೆಳವರ್ಗದ ಜನರ ಜೀವನ ಮಟ್ಟ ಬಲು ದುರ್ಭರವಾಗಿತ್ತು. ಹೊಸತು ಸ್ವೀಕರಿಸುವುದು ಎಂದರೆ ಸಂಕೀರ್ಣವಾದ ಸಂಕಟಗಳನ್ನು ಆಹ್ವಾನಿಸಿಕೊಳ್ಳುವುದು ಎಂದೇನೂ ಆಗಬೇಕಿಲ್ಲ. ಹಳೆಯ ಕಸವನ್ನು ತೆಗೆಯುವಲ್ಲಿ ಇರುವಷ್ಟೇ ಮುನ್ನೆಚ್ಚರ ಹೊಸ ಕಸವನ್ನು ಸೇರಿಸಿಕೊಳ್ಳುವುದರಲ್ಲಿದ್ದರೆ, ಕಸ ಜೀವನ ಒಂದು ಮಿಶ್ರಣದಂತೆ ವಿರೋಧಾತ್ಮತೆಗಳ ನಡುವೆ ಅನುಲಂಘ್ಯ ನಿಯಮಗಳನ್ನು ಮೆಟ್ಟಿ ಇಲ್ಲಿ ಚಳಿಯಿದೆ ಹಾಗಿದ್ದರೂ ಬೆಚ್ಚಗಿದೆ ಎಂಬ ಹಿತಾನುಭವಿಸಲು ಸಾಧ್ಯ . ಇದಕ್ಕೆ ಇರಬೇಕು ಕೆ.ಎಸ್ . ನರಸಿಂಹಸ್ವಾಮಿಯವರ ಈ ತುಣುಕಿನಲ್ಲಿ ಹೊಸತನದಲ್ಲಿ ಇಣುಕುತಿದೆ .

“ಮಾವು ನಾವು , ಬೇವು ನಾವು , ನೋವು ನಲಿವು ನಮ್ಮವು

ಹೂವು ನಾವು, ಹಸಿರು ನಾವು , ಬೇವು – ಬೆಲ್ಲ ನಮ್ಮವು

ಹೊಸತು ವರುಷ , ಹೊಸತು ಹರುಷ , ಹೊಸತು ಬಯಕೆ ನಮ್ಮವು ….”

ಹೀಗೆ ಸಮ್ಮಿಲನತೆಯ ನವ ನವೀನತೆಯ ಸೊಬಗಿನ ಸೊಗಡು ಮೇಳೈಸುತ್ತದೆ ಎಂದು ವರ್ಣಿಸುತ್ತಾರೆ . ಹೌದು ಇಂದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ನೂರರು ಹಬ್ಬ – ಹರಿದಿನಗಳಲ್ಲಿ ಇಂದು ಹೊಸ ವರುಷದ ಆಚರಣೆಯು ಒಂದೆಂಬಂತೆ ಸೇರಿಕೊಂಡು ಬಿಟ್ಟಿದೆ . ಬದುಕಿನ ಸುಧೀರ್ಘ ಪಯಣದಲ್ಲಿ ಕಳಕೊಂಡದ್ದು ಮತ್ತೆ ಸಿಕ್ಕಿದೆ . ಮತ್ತೆ ಸಿಕ್ಕಿದ್ದು ಕಳೆದು ಹೋಗಿದೆ ಮತ್ತೊಂದು ನವ ವರುಷದಲ್ಲಿ ಕಳೆದ ವರ್ಷ ಮತ್ತೆ ಮತ್ತೆ ಕಾಡುವ ನೆನಪಾಗಿವೆ . ಆ ಕೆಂಪು ವರ್ಣದ ಗುಲಾಬಿ ಹಸಿರು ಪರ್ಣದೊಂದಿಗೆ ಇನ್ನಷ್ಟು ಬಹುವರ್ಣಿಯವಾಗಿ ಸಿಂಗರಿಸಿ ನವೀಕರಿಸುತ್ತದೆ , ಅದರಂತೆ ನಮ್ಮಲಿರುವ ಸಂಸ್ಕಾರಯುತ , ಉಪಕಾರ ಮಾಡುವ , ಬದುಕು ಬೆಳಗಿಸುವ ,ಮತ್ತೊಂದು ಜೀವಕ್ಕೆ ನೆರಳಾಗುವ ಜೀನ್ ಗಳಿರಬಹುದು , ಅವುಗಳೆಲ್ಲ ಬಾಹ್ಯ ಹೊಡೆತಕ್ಕೆ ಸಮಾಜದ ಏರುಪೇರಿನಿಂದ ಮುಚ್ಚಿಕೊಂಡಿರಬಹುದು . ಅವು ಎಲ್ಲವೂ ಭೃಂಗದ ಕಂಪು ಹೊರ ಸೂಸಿ ಪ್ರತಿಯೊಬ್ಬರ ಮನ ಹಣ್ಣಿನಂತೆ ಹದವಾಗಿ ಪಕ್ವವಾಗಲಿ , ನವ ವರುಷದ ಹೊಸ್ತಿಲಲ್ಲಿ ನವಭರವಸೆಯ ಪಲ್ಲಂಗವ ಹೊತ್ತು ಯಶಸ್ಸಿನ ಪಲ್ಲವಿಯ ಭಾಷ್ಯ ಬರೆಯಲಿ …. ಶುಭವಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Bharatesha Alasandemajalu

ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!