ಅಂಕಣ

ಹಿಂದೂ ಎನ್ನಲು ಹಿಂಜರಿಕೆಯೇಕೆ?

ನಾವು ಈಗಲಾದರೂ ಈ ದೇಶದಲ್ಲಿ ಭಾರತೀಯ ಅಂದರೆ ಯಾರು ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ವ್ಯಾಖ್ಯೆ ಬರೆಯಬೇಕಾದ ಅಗತ್ಯವಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನನಗೊಬ್ಬ ಸೌದಿ ಅರೇಬಿಯದಿಂದ ಬಂದ ವಿದ್ಯಾರ್ಥಿಯಿದ್ದ. ಆತನೊಮ್ಮೆ ನನ್ನ ಬಳಿ ಬಂದು “ನಿಮ್ಮಲ್ಲಿ ಕೇಳಬೇಕೆಂದು ಈ ಪ್ರಶ್ನೆಯನ್ನು ಒಬ್ಬರು ಕೊಟ್ಟಿದ್ದಾರೆ. ಇಸ್ಲಾಮ್ ಹೇಗೆ ಬೇರೆ ದೇಶಗಳಿಗೆ ಪಸರಿಸುತ್ತಹೋಯಿತು ಎಂಬುದರ ಬಗ್ಗೆ ಅರೇಬಿಯದಲ್ಲಿ ನಾವು ಅಧ್ಯಯನ ಮಾಡುತ್ತಿದ್ದೆವು. ಒಂದಾನೊಂದು ಕಾಲದಲ್ಲಿ ನೂರಕ್ಕೆ ನೂರರಷ್ಟು ಜೊರಾಷ್ಟ್ರಿಯನ್ ಮತಕ್ಕೆ ಸೇರಿದ್ದ ಇರಾನ್‍ ಅನ್ನು ದಾಳಿ ಮಾಡಿ ವಶಪಡಿಸಿಕೊಂಡ ಹದಿನೈದು ವರ್ಷಗಳಲ್ಲಿ ಅದನ್ನು ನೂರು ಶೇಕಡಾ ಮುಸ್ಲಿಮ್ ದೇಶವಾಗಿಸುವಲ್ಲಿ ಮುಹಮ್ಮದೀಯರು ಯಶಸ್ವಿಯಾದರು. ಹತ್ತಿರದ ಬ್ಯಾಬಿಲೋನಿಯ ಮತ್ತು ಮೆಸಪೊಟೋಮಿಯ ಪ್ರಾಂತ್ಯಗಳು 17 ವರ್ಷಗಳಲ್ಲಿ ಇಸ್ಲಾಂಗೆ ಮತಾಂತರವಾದವು. ಈಜಿಪ್ಟ್ ದೇಶ 21 ವರ್ಷಗಳಲ್ಲಿ ಶತಪ್ರತಿಶತ ಇಸ್ಲಾಮೀಕರಣಗೊಂಡಿತು. ಹಾಗೆಯೇ, ಕ್ಯಾಥೊಲಿಕ್ ಧರ್ಮೀಯರು ಯುರೋಪಿಗೆ ಹೋಗಿ, ಐವತ್ತು ವರ್ಷಗಳಲ್ಲಿ ಇಡೀ ಯುರೋಪನ್ನು ಕ್ರಿಶ್ಚಿಯಾನಿಟಿಗೆ ಮತಾಂತರಿಸಿದರು. ಆದರೆ, ಭಾರತದಲ್ಲಿ 800 ವರ್ಷಗಳ ಮುಸ್ಲಿಂ ಆಳ್ವಿಕೆ, 200 ವರ್ಷಗಳ ಬ್ರಿಟಿಷ್ ಆಡಳಿತ ಇದ್ದರೂ 83% ಜನ ಇನ್ನೂ ಹಿಂದೂಗಳಾಗಿಯೇ ಉಳಿದ್ದಾರೆ. ಇದು ನಮಗೆ ಅರ್ಥವಾಗದ ಸಮಸ್ಯೆಯಾಗಿ ಉಳಿದಿದೆ” ಎಂದ.

ಆತನ ಪ್ರಶ್ನೆಯಲ್ಲಿ ಬಹುಶಃ ನಾವೂ ಚರ್ಚಿಸಬೇಕಾದ ಒಂದಷ್ಟು ವಿಷಯಗಳಿವೆ. ಮುಸ್ಲಿಮರಿರಲಿ ಕ್ರಿಶ್ಚಿಯನಿರಲಿ, ಭಾರತೀಯ ಹಿಂದೂಗಳು ತಮ್ಮತನವನ್ನು ಅಷ್ಟು ಬೇಗ ಬೇರೆಯವರಿಗಾಗಿ ಬಿಟ್ಟು ಕೊಡುವವರಾಗಿರಲಿಲ್ಲ. ಅವರು ತಮ್ಮ ಮೇಲೆ ಕತ್ತಿ ಹಿರಿದ ಪ್ರತಿಯೊಂದು ದಾಳಿಕೋರನ ಜೊತೆಗೂ ಹೋರಾಡುತ್ತ ಬಂದವರು. ಶಿವಾಜಿಯ ಸೇನಾಧಿಕಾರಿ ಒಬ್ಬ ಮುಸ್ಲಿಮನಾಗಿದ್ದ; ಔರಂಗಜೇಬನ ಸೇನೆಯಲ್ಲಿ ಹಿಂದೂಗಳಿದ್ದರು. ಇವೆಲ್ಲ ಅಪವಾದಗಳನ್ನು ಬಿಟ್ಟರೆ ಭಾರತದ ಮುಖ್ಯ ಚರಿತ್ರೆ ಬೇರೆ ಮತೀಯರ ದಾಳಿಯನ್ನು ಎದುರಿಸಲಿಕ್ಕಾಗಿ ಹಿಂದೂಗಳು ನಡೆಸಿದ ಹೋರಾಟದ ಕತೆಯೇ ಆಗಿದೆ. ಮಂಡನಮಿಶ್ರರು ಸನಾತನಿಯಾಗಿ ಬದಲಾದ ಮೇಲೆ ಆದಿ ಶಂಕರಾಚಾರ್ಯರು ಅವರನ್ನು ಶೃಂಗೇರಿ ಪೀಠಕ್ಕೆ ಪ್ರಥಮ ಮಠಾಧಿಪತಿಯಾಗಿ ಆರಿಸುತ್ತಾರೆ. ಇದೇ ಪರಂಪರೆಯಲ್ಲಿ ಬರುವ ಯತಿಗಳೊಬ್ಬರು ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆ ಕೊಡುತ್ತಾರೆ. ಹಕ್ಕ ಮತ್ತು ಬುಕ್ಕ ಎಂಬ ಎರಡು (ಸನಾತನ ಧರ್ಮಕ್ಕೆ ಮರಳಿಬರುವ) ಮುಸ್ಲಿಮ್ ಯುವಕರೇ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದವರು ಮತ್ತು ಇದರ ರಾಜಧಾನಿಯಾಗಿದ್ದದ್ದು ಕರ್ನಾಟಕದಲ್ಲಿರುವ ಹಂಪೆ. ಈ ವಂಶ ಮುಂದೆ 350 ವರ್ಷಗಳ ಕಾಲ ಭಾರತದ ಬಹುಭಾಗವನ್ನು ಆಳಿತು. ಉತ್ತರದಲ್ಲಿ ಅಸ್ಸಾಂನವರೆಗೂ ಈ ರಾಜ್ಯ ವಿಸ್ತರಿಸಿತ್ತು ಎಂಬ ಮಾಹಿತಿಗಳು ನಮಗೆ ಇತಿಹಾಸದಲ್ಲಿ ಸಿಗುತ್ತವೆ. ಮುಘಲ್ ಸಾಮ್ರಾಜ್ಯ ತನ್ನ ಇಡೀ ಜೀವಿತದಲ್ಲಿ ಎಷ್ಟು ಪ್ರದೇಶವನ್ನು ಆಳಿತ್ತೋ ಅದಕ್ಕಿಂತ ಹೆಚ್ಚಿನ ಪ್ರಾಂತ್ಯಗಳು ವಿಜಯನಗರದ ಆಳ್ವಿಕೆಗೆ ಒಳಪಟ್ಟಿದ್ದವು. ಮುಘಲ್ ಆಳ್ವಿಕೆಯ ಪ್ರಮುಖಭಾಗ – ಅಕ್ಬರ್‍ನಿಂದ ಔರಂಗಜೇಬನವರೆಗಿನ ಕಾಲ – ಇಡೀ ಭಾರತದ ಇತಿಹಾಸದಲ್ಲಿ ಕೇವಲ 150 ವರ್ಷಗಳು ಅಷ್ಟೆ. ಆದರೆ ನಮ್ಮ ಚರಿತ್ರೆಯ ಪಠ್ಯಪುಸ್ತಕಗಳನ್ನು ನೋಡಿ. ಮುಘಲ್ ವಂಶದ ಒಬ್ಬೊಬ್ಬ ರಾಜರಿಗೂ ಅಲ್ಲಿ ಒಂದೊಂದು ಅಧ್ಯಾಯಗಳನ್ನೇ ಮೀಸಲಿರಿಸಲಾಗಿದೆ! ಆದರೆ, ವಿಜಯನಗರದ ಕತೆ ಬರೆಯಬೇಕಾದಾಗ, ಅದರ ಮೂರೂವರೆ ಶತಮಾನಗಳ ಧೀರ್ಘಕತೆಯನ್ನು ಒಂದು ಪ್ಯಾರಾಗ್ರಾಫ್‍ನಲ್ಲಿ ಮುಗಿಸಿಬಿಡುತ್ತಾರೆ. “ದಕ್ಷಿಣ ಭಾರತದಲ್ಲಿ ವಿಜಯನಗರವೆಂಬ ಸಾಮ್ರಾಜ್ಯ ಇತ್ತು” – ಅಷ್ಟೆ! ದುರ್ದೈವವೆಂದರೆ, ಉತ್ತರಭಾರತದ ಜನಕ್ಕೆ ಇವತ್ತಿಗೂ ಈ ಸಾಮ್ರಾಜ್ಯದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಹಾಗಾಗಿ ನಮಗೆ ನಮ್ಮ ಅಸ್ಮಿತೆಯನ್ನು ಹೇಳಲು ಹೊಸ ಚರಿತ್ರೆ ಪಠ್ಯಪುಸ್ತಕಗಳ ಅವಶ್ಯಕತೆ ಇದೆ. ನಮ್ಮ ದೇಶದ ಚರಿತ್ರೆ ಎಂದರೆ ಹೋರಾಟಗಳ ಕತೆ. ತ್ಯಾಗ ಬಲಿದಾನಗಳ ಕತೆ. ಗುರು ಗೋವಿಂದ ಸಿಂಘರ ಬಗ್ಗೆ ನಮಗೆಷ್ಟು ಗೊತ್ತು? ಗುರು ತೇಗ್ ಬಹದ್ದೂರರ ತ್ಯಾಗದ ಬಗ್ಗೆ ನಮಗೆಷ್ಟು ತಿಳಿದಿದೆ? ಇವೆಲ್ಲವನ್ನು ನಾವು ನಮ್ಮ ಪಠ್ಯಪುಸ್ತಕಗಳಲ್ಲಿ  ಓದುವುದು ಯಾವಾಗ?

ಇನ್ನು ಎರಡನೆಯದಾಗಿ ನಾನು ಹೇಳಬಯಸುವುದೇನೆಂದರೆ, ಹಿಂದೂಗಳಿಗೆ ಇನ್ನೂ ಆತ್ಮಾಭಿಮಾನದ ಕೊರತೆ ಇದೆ. ಪರಸ್ಪರ ಮಾತುಕತೆಯಲ್ಲಿ ಹಿಂದೂ ಎಂಬ ಶಬ್ದ ಬಂದರೂ ಸಾಕು, “ನೋಡಪ್ಪ, ನಾನು ತುಂಬ ಉದಾರಿ, ವಿಶಾಲ ಮನೋಭಾವದವನು, ಕೋಮುವಾದಿ ಅಲ್ಲ” ಎಂದೆಲ್ಲ ತಮ್ಮನ್ನು ಸಮರ್ಥನೆ ಮಾಡಲು ನಿಂತುಬಿಡುತ್ತಾರೆ! ನಾವು ನಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಜಾತೀಯತೆ ಅಥವಾ ಕೋಮುವಾದ ಹೇಗಾಗುತ್ತದೆ? ಮುಸ್ಲಿಮರನ್ನು ಕೊಲ್ಲು, ಕ್ರಿಶ್ಚಿಯನ್ನರನ್ನು ಮತಾಂತರಿಸು ಎಂದೆಲ್ಲ ಹೇಳಿದರೆ ಅದು ಜಾತೀಯತೆ ಸರಿ. ಹಿಂದೂಗಳಲ್ಲಿ ನಾನು ಕಾಣುವ ಇನ್ನೊಂದು ಸಮಸ್ಯೆ ಎಂದರೆ, ನಾವು ಯಾವತ್ತೂ ಸಂಘಟಿತರಾಗಿಯೇ ಇಲ್ಲ. ಜೊತೆ ಸೇರುವುದು ಬೇರೆ, ಸಂಘಟಿತರಾಗುವುದು ಬೇರೆ. ಉದಾಹರಣೆಗೆ ಕುಂಭಮೇಳದಲ್ಲಿ ನೋಡಿ, ಕೋಟಿಗಿಂತಲೂ ಹೆಚ್ಚು ಜನ ಸೇರುತ್ತಾರೆ. ಸರಕಾರದ ಆಹ್ವಾನವಿಲ್ಲ; ಅಬ್ಬರದ ಪ್ರಚಾರವಿಲ್ಲ. ಆದರೂ ಜನ ಸ್ವಯಂಸ್ಫೂರ್ತಿಯಿಂದ ಬರುತ್ತಾರೆ. ಬಹಳ ಸಭ್ಯತೆಯಿಂದ ವರ್ತಿಸುತ್ತಾರೆ, ದೈವಿಕ  ಭಕ್ತಿ ಭಾವನೆ ತೋರಿಸುತ್ತಾರೆ. ಅಷ್ಟು ಜನ ಸೇರಿದರೂ ಅಲ್ಲಿ ಕಾನೂನಿನ ಸಮಸ್ಯೆಗಳಿರುವುದಿಲ್ಲ. ಕೊಲೆಸುಲಿಗೆಯಂಥ ಅಪರಾಧಗಳು ನಡೆಯುವುದಿಲ್ಲ. ಪ್ರತಿಯೊಬ್ಬನಿಗೂ ದೇವರಲ್ಲಿ ವೈಯಕ್ತಿಕ ನೆಲೆಯ ಸಂಬಂಧ ಇದೆಯೇ ಹೊರತು, ಅಲ್ಲೊಂದು ಸಾಮೂಹಿಕ ಪ್ರಜ್ಞೆ ಇರುವುದಿಲ್ಲ. ಅದಕ್ಕೇ ನೋಡಿ ನಮಗೆ ಸಾವಿರಾರು ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಹೊಡೆದೋಡಿಸಿದರೆ ಏನೂ ಅನ್ನಿಸುವುದಿಲ್ಲ. ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಬಾಂಗ್ಲಾದೇಶದಲ್ಲಿ 32% ಹಿಂದೂಗಳಿದ್ದರು, ಇಂದು ಅದು 7%ಗೆ ಇಳಿದಿದೆ ಎಂದರೂ ನಮ್ಮವರಿಗೆ ಯಾವ ಭಾವನೆಗಳೂ ಜಾಗೃತವಾಗುವುದಿಲ್ಲ. ಪ್ರತಿದಿನ ಎನ್ನುವಂತೆ ಕಝಕಿಸ್ತಾನ – ಗಯಾನದಂಥ ಪ್ರದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ಒಡೆದು ಪುಡಿಗುಟ್ಟಿದರೂ ನಮಗೆ ಕೋಪ ಬರುವುದಿಲ್ಲ. ಯಾಕೆಂದರೆ ನಮಗೆ ದೇವರು ಮತ್ತು ಧರ್ಮದ ಜೊತೆ ವೈಯಕ್ತಿಕ ಮಾತುಕತೆಗಳಿವೆಯೇ ಹೊರತು ಸಾಮೂಹಿಕ ಪ್ರಜ್ಞೆಯಾಗಲೀ ಸಂಘ ಭಾವನೆಯಾಗಲೀ ಇಲ್ಲ. ಕಾರಣ, ನಮಗೆ ಆತ್ಮಾಭಿಮಾನವಿಲ್ಲ. ನಮಗೆ ನಮ್ಮ ಚರಿತ್ರೆಯ ಬಗ್ಗೆ ಪೂರ್ವಾಗ್ರಹಗಳು ಬೆಳೆದುಬರುವಂತೆ ನೋಡಿಕೊಳ್ಳಲಾಗಿದೆ.

ಹಿಂದೂಗಳು ಉಳಿದ ಮತಗಳೆದುರು ಮಂಡಿಯೂರಿ ಶರಣಾಗಿದ್ದು ಬಲಹೀನರಾಗಿದ್ದರು ಎಂಬ ಕಾರಣಕ್ಕಲ್ಲ. ಬದಲು ನಮ್ಮ ನಿಯಮಗಳೇ ಅತ್ಯಂತ ನಾಗರಿಕವಾಗಿದ್ದವು ಎಂಬ ಕಾರಣಕ್ಕೆ. ಯುದ್ಧನೀತಿಗಳನ್ನು ತೆಗೆದುಕೊಳ್ಳಿ. ನಾವು ಸೂರ್ಯಾಸ್ತದ ನಂತರ, ಸೂರ್ಯೋದಯದ ಮೊದಲು ಯುದ್ಧ ಮಾಡುತ್ತಿರಲಿಲ್ಲ. ಹಳ್ಳಿ, ನಗರ, ಕೃಷಿಭೂಮಿಗಳಲ್ಲಿ ಯುದ್ಧ ಮಾಡಬಾರದು ಎಂಬ ನಿಯಮ ಇತ್ತು. ಅದೇನಿದ್ದರೂ ನಾಗರಿಕರಿಗೆ ಅತಿ ಕಡಿಮೆ ತೊಂದರೆಯಾಗುವಂಥ ತೆರೆದ ಬಯಲಿನಂತಹ ರಣರಂಗದಲ್ಲಿ ಮಾತ್ರ ಎಂದು ನಮ್ಮವರು ತಮಗೆ ತಾವೇ ನಿರ್ಬಂಧ ಹಾಕಿಕೊಂಡಿದ್ದರು. ಯುದ್ಧದಲ್ಲಿ ಸೋತವನು ನಿಮ್ಮೆದುರು ಬಂದು ಕ್ಷಮಾಪಣೆ ಕೇಳಿದರೆ ಅವನನ್ನು ಕ್ಷಮಿಸಿಬಿಡಬೇಕು ಎನ್ನುತ್ತಿತ್ತು ನಮ್ಮ ಧರ್ಮ! ಪ್ರಥ್ವೀರಾಜ ಚೌಹಾಣ, ಮುಹಮ್ಮದ್ ಘೋರಿಯನ್ನು ಹದಿನಾರು ಸಲ ಹಾಗೆ ಕ್ಷಮಿಸಿ ವಾಪಸ್ ಕಳಿಸಿದ. ಎರಡು ಸಲ ಅಂದರೂ ಒಪ್ಪಬಹುದೇನೋ; ಆದರೆ ಹದಿನಾರು ಸಲ!? ಹದಿನೇಳನೇ ಸಲ ದಂಡೆತ್ತಿ ಬಂದ ಮುಹಮ್ಮದ್ ಘೋರಿ ಕುತಂತ್ರಗಳ ಮೂಲಕ ಪ್ರಥ್ವೀರಾಜನನ್ನು ಸೋಲಿಸಿ ಭಾರತದ ನೆಲ ಪ್ರವೇಶಿಸಿದ. ಭಾರತಕ್ಕೆ ಇಸ್ಲಾಂ ಮತ ಕಾಲಿಟ್ಟದ್ದು ಹೀಗೆ. ಈ ಜನರಿಗೆ ಯುದ್ಧನೀತಿಗಳೇ ಇರಲಿಲ್ಲ. ರಾತ್ರಿಯಲ್ಲಿ ದಾಳಿ ಮಾಡುವುದು, ನಗರಗಳಿಗೆ ನುಗ್ಗಿ ಜನರನ್ನು ಕತ್ತರಿಸಿ ಚೆಲ್ಲುವುದು, ಅತ್ಯಂತ ಹೆಚ್ಚಿನ ನಷ್ಟವಾಗುವಂತೆ ನೋಡಿಕೊಳ್ಳುವುದು – ಇವುಗಳೇ ಅವರ ನೀತಿಯಾಗಿದ್ದವು.

ಚರಿತ್ರೆಯಲ್ಲಿ ಹೊರಗಿನವರು ನಮ್ಮನ್ನು ವಿಘಟಿಸಿ ಆಳಿದರೆ, ಈಗ ಸ್ವಾತಂತ್ರ್ಯಾನಂತರ ಭಾರತ ಭಂಜನ ಕಾರ್ಯಕ್ರಮವನ್ನು ನಮ್ಮವರೇ ಕೈಗೆತ್ತಿಕೊಂಡಿದ್ದಾರೆ ಎನ್ನುವುದು ಇನ್ನೊಂದು ವ್ಯಂಗ್ಯ. ಇದು ಆಗುತ್ತಿರುವುದು ಮೀಸಲಾತಿ ಎಂಬ ಅಸ್ತ್ರದ ಮೂಲಕ. ಪರಿಶಿಷ್ಟ ಜಾತಿ-ಪಂಗಡದ ಜನರಿಗೆ ಮೀಸಲಾತಿ ಸಿಗಬೇಕೆನ್ನುವುದು ನನ್ನ ಬೇಡಿಕೆಯೂ ಆಗಿದೆ. ಆದರೆ, ಅವರನ್ನು ಹೊರತುಪಡಿಸಿ ಮಿಕ್ಕವರಿಗೆ ಮೀಸಲಾತಿ ಯಾಕೆ ಸಿಗಬೇಕು ನನಗೆ ತಿಳಿಯುತ್ತಿಲ್ಲ. ಯಾಕೆಂದರೆ, ಯಾರಿಗೆ ಈ ದೇಶದಲ್ಲಿ ಎಂದೆಂದೂ ಆಳುವ ಹಕ್ಕಿರಲಿಲ್ಲವೋ ಅವರಿಗೆ ಮೀಸಲಾತಿ ಸಿಗುವುದು ನ್ಯಾಯಯುತ. ಬಡವರು ಎಂದ ಮಾತ್ರಕ್ಕೆ ಮೀಸಲಾತಿ ಸಿಗಬೇಕಿಲ್ಲ. ಬ್ರಾಹ್ಮಣರಲ್ಲಿ ಬಡವರಿದ್ದಾರೆ; ಅವರೆಂದಾದರೂ ಆ ಸೌಲಭ್ಯ ಪಡೆದಿದ್ದಾರೆಯೆ? ಕ್ಷತ್ರಿಯ ಕುಲದಲ್ಲೂ ಬಡವರಿದ್ದಾರೆ. ಪ್ರಾಚೀನ ಕಾಲದಲ್ಲಿ ಯಾದವರು ದ್ವಾರಕೆಯಲ್ಲಿ ಹಲವು ವರ್ಷ ಆಳಿದರು. ಝಾಟರು ದೆಹಲಿಯನ್ನು ಬಹುಕಾಲ ಆಳಿದರು. ಇವರೆಲ್ಲ ಮೀಸಲಾತಿಯ ಲಾಭ ಪಡೆಯುವ ಹವಣಿಕೆ ಹಾಕುತ್ತಿದ್ದಾರೆ! ಎಲ್ಲರಿಗಿಂತ ಹೆಚ್ಚಾಗಿ ಮುಸ್ಲಿಮರು ಈ ದೇಶವನ್ನು 800 ವರ್ಷ ಆಳಿದವರು! ಮೀಸಲಾತಿಯನ್ನು ಆ ಎಂಟು ಶತಮಾನಗಳ ಕಾಲ ಆಳಿದವನಿಗೆ ಕೊಡಬೇಕೋ ಅಥವಾ ಆಳಿಸಿಕೊಂಡು ತುಳಿಸಿಕೊಂಡು ನರಳಿದವನಿಗೆ ಕೊಡಬೇಕೋ? ಕ್ರಿಶ್ಚಿಯನ್ನರು ಈ ದೇಶದ ಚುಕ್ಕಾಣಿ ಹಿಡಿದ ಗುಂಪಿನವರಾಗಿರಲಿಲ್ಲವೆ? ಬಿಡಿ, ಈ ಜಗತ್ತಿನಲ್ಲಿ ಯಾವ ಮತ, ಧರ್ಮಗಳಲ್ಲಿ “ಅಲ್ಪಸಂಖ್ಯಾತರು” ಎಂಬ ಪಂಗಡ ಇದೆ ಎಂದು ತೋರಿಸಿ! ಒಮ್ಮೆ ವಿಶ್ವಸಂಸ್ಥೆ  ತನ್ನ ಸದಸ್ಯತ್ವ ಪಡೆದ ಎಲ್ಲಾ ದೇಶಗಳ ಬಳಿಯೂ ಆಯಾ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಅಂಕಿಅಂಶ ಕೇಳಿತು. ಆಗ ಲ್ಯಾಟಿನ್ ಅಮೆರಿಕನ್ ದೇಶಗಳು ಒಟ್ಟಾಗಿ “ನಮ್ಮಲ್ಲಿ ಅಲ್ಪಸಂಖ್ಯಾತರೇ ಇಲ್ಲ” ಎಂದು ಘೋಷಿಸಿಬಿಟ್ಟವು! ಯಾಕೆಂದರೆ ಅವರ ಪ್ರಕಾರ “ಅಲ್ಪಸಂಖ್ಯಾತ”ರೆಂದರೆ ಜನಾಂಗ ಭಿನ್ನತೆ ಇರುವವರು ಎಂದರ್ಥ. ನಮ್ಮ ದೇಶದ ಮುಸ್ಲಿಮ್ ಮತ್ತು ಕ್ರೈಸ್ತರೆಲ್ಲರೂ ಇದೇ ದೇಶದಲ್ಲಿ ಹುಟ್ಟಿಬೆಳೆದವರು ತಾನೆ? ಒಂದಾನೊಂದು ಕಾಲದಲ್ಲಿ ಇವರ ಅಜ್ಜ-ಮುತ್ತಜ್ಜರೆಲ್ಲರೂ ಹಿಂದೂಗಳೆ ಆಗಿದ್ದವರಲ್ಲವೆ? ಮತಾಂತರವಾಗಿ ಬೇರೆ ಆಚರಣೆಗಳನ್ನು ಶುರು ಮಾಡಿದರು ಎಂದಮಾತ್ರಕ್ಕೆ ಅವರು ಭಿನ್ನಜನಾಂಗದವರು ಎಂದು ಪರಿಗಣಿಸಲ್ಪಡುವುದಿಲ್ಲ. ಇನ್ನು, ಪರಿಶಿಷ್ಟ ಜಾತಿ ಪಂಗಡಗಳ ಜನ ಎಂದೆಂದೂ ಹಿಂದೂಗಳೇ ಆಗಿದ್ದವರು; ಹಾಗಾಗಿ ಅವರನ್ನು ಕೂಡ “ಅಲ್ಪಸಂಖ್ಯಾತರು” ಎಂದು ಗುರುತಿಸಬಾರದು. ಅವರಿಗೆ ಮೀಸಲಾತಿ ಕೊಡುವುದು ಅಲ್ಪಸಂಖ್ಯಾತರು ಎಂಬ ಕಾರಣಕ್ಕಲ್ಲ; ಬದಲು ಅವರನ್ನು ಇಷ್ಟು ವರ್ಷ ಅಧಿಕಾರದಿಂದ ದೂರ ಇಡಲಾಗಿತ್ತೆಂಬ ಕಾರಣಕ್ಕೆ. ಕಾಲಾನುಕ್ರಮೇಣ ಅವರೂ ಸಶಕ್ತರಾಗಿ ಮುಖ್ಯವಾಹಿನಿಯಲ್ಲಿ ಒಂದಾದ ಮೇಲೆ ಅವರ ಮೇಲಿನ ಮೀಸಲಾತಿ ಸೌಲಭ್ಯವನ್ನೂ ಹಂತಹಂತವಾಗಿ ತೆಗೆಯಬೇಕು.

ನಮ್ಮ ದೇಶದ ದುರಂತವೆಂದರೆ, ಇಲ್ಲಿ ಮೀಸಲಾತಿ ಹೋರಾಟಗಳಿಗಾಗಿ ನಾವು ಅಂಬೇಡ್ಕರ್‍ರನ್ನು ಬಳಸಿಕೊಳ್ಳುತ್ತಿದ್ದೇವೆ. ಅಂಬೇಡ್ಕರ್ ಮಹಾಋಷಿ ಅಥವಾ ಬ್ರಾಹ್ಮಣ ಎಂದು ಕರೆಸಿಕೊಳ್ಳಲು ಯೋಗ್ಯರಾದ ವ್ಯಕ್ತಿ. ಅವರನ್ನು ಪರಿಶಿಷ್ಟ ಜಾತಿಗೆ ಸೀಮಿತವಾಗಿಡುವುದು ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಮಾನ. ಅಂಬೇಡ್ಕರ್ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಿ ಅರ್ಥಶಾಸ್ತ್ರದ ಮೇಲೆ ಅನನ್ಯವಾದ ಸಂಶೋಧನಾ ಪ್ರಬಂಧ ಬರೆದರು. ಅದೇ ಅಂಬೇಡ್ಕರ್ ಸಾರ್ವಜನಿಕ ಸಭೆಗಳಲ್ಲಿ ಮತ್ತು ಪಂಡಿತರ ಜೊತೆಗಿನ ಚರ್ಚೆಗಳಲ್ಲಿ ಭಾರತದ ಸಾಂಸ್ಕøತಿಕ ಏಕತೆಯ ಬಗ್ಗೆ ಮಾತಾಡುತ್ತಿದ್ದರು. ಜಗತ್ತಿನ ಬೇರಾವ ದೇಶವೂ ಭಾರತದಷ್ಟು ಸಾಂಸ್ಕøತಿಕ ಉನ್ನತಿ ಮತ್ತು ಐಕ್ಯವನ್ನು ಸಾಧಿಸಿಲ್ಲ ಎಂದು ಅವರು ಹೇಳಿದ್ದುಂಟು. ಆದರೆ, ಜವಹರಲಾಲ ನೆಹರೂಗೆ ಅಂಬೇಡ್ಕರ್ ಮೇಲೆ ಈಷ್ರ್ಯೆಯಿತ್ತು. ಎಲ್ಲಾ ಪರೀಕ್ಷೆಗಳಲ್ಲಿ ಅನುತ್ತೀರ್ಣನಾದ ಮೇಲೆ ನೆಹರೂ ತಮಗೆ ತಾವೇ ಪಂಡಿತ್ ಎಂಬ ಬಿರುದು ಕೊಟ್ಟುಕೊಂಡವರಲ್ಲವೆ? ಹಾಗಾಗಿ ಕೊಲಂಬಿಯಾ ವಿವಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಪಿ.ಎಚ್‍ಡಿ. ಇತ್ಯಾದಿ ಬಿರುದುಬಾವಲಿಗಳನ್ನು ಕಂಡಾಗ ನೆಹರೂ ಅವರಿಗೆ ಅಂಬೇಡ್ಕರ್ ಮೇಲೆ ಅಸೂಯೆ ಹುಟ್ಟಿದ್ದು ಸಕಾರಣವೆ. ಸುಭಾಸ್ ಚಂದ್ರ ಭೋಸ್ ಮೇಲೂ ಅವರಿಗೆ ಇದೇ ಬಗೆಯ ಅಸೂಯೆ, ಅಸಹನೆ ಇತ್ತಲ್ಲ? ಹಾಗಾಗಿ ಅಂಬೇಡ್ಕರ್‍ರನ್ನು ಎಷ್ಟು ಸಾಧ್ಯವೋ ಅಷ್ಟು ಪಕ್ಕಕ್ಕೆ ತಳ್ಳಲು ನೋಡಿದರು. ಮಹಾರಾಷ್ಟ್ರದಲ್ಲಿ ಸತತವಾಗಿ ಮೂರು ಬಾರಿ ಅಂಬೇಡ್ಕರ್ ಚುನಾವಣೆಗಳಲ್ಲಿ ಸೋತು ಠೇವಣಿ ಕಳೆದುಕೊಂಡರು. ಅವರನ್ನು ರಾಜಕೀಯವಾಗಿ ಮುಗಿಸಿ ಹಾಕಬೇಕೆಂದು ನೆಹರೂ ಮಾಡಿದ ಷಡ್ಯಂತ್ರದ ಭಾಗ ಆ ಸರಣಿ ಸೋಲುಗಳು. ಇವೆಲ್ಲ ಕಹಿ ಅನುಭವಗಳು ಅಂಬೇಡ್ಕರ್ ಮತ್ತು ನೆಹರೂ ಸಂಬಂಧವನ್ನು ಪೂರ್ತಿಯಾಗಿ ಹದಗೆಡಿಸಿಹಾಕಿದವು. ಅಂಬೇಡ್ಕರ್‍ರಿಗೆ ಭಾರತ ರತ್ನ ಕೊಟ್ಟದ್ದು ಜನತಾ ಸರಕಾರ. ಅದುವರೆಗೂ ಅವರಿಗೆ ಪ್ರಶಸ್ತಿಗಳನ್ನು ತಪ್ಪಿಸುತ್ತ ನಿರಾಕರಿಸುತ್ತ ಬರಲಾಗಿತ್ತು.

ಮತ್ತೆ ಮೀಸಲಾತಿಯ ಚರ್ಚೆಗೆ ವಾಪಸು ಬರುವುದಾದರೆ, ನಮ್ಮ ದೇಶದಲ್ಲಿ ಕ್ಯಾಸ್ಟ್ ಎಂಬ ಪದವನ್ನು ತಪ್ಪು ತಪ್ಪಾಗಿ ಬಳಸುತ್ತಿದ್ದೇವೆ. ಅದು ಪೋರ್ಚುಗೀಸ್ ಭಾಷೆಯ “ಕೋಸ್ಟೊಸ್” ಎಂಬ ಪದದ ಅಪಭ್ರಂಶ ಅಷ್ಟೆ. ನಮ್ಮ ದೇಶದಲ್ಲಿ ಹಿಂದೆ ಕ್ಯಾಸ್ಟಿಸಂ ಇರಲಿಲ್ಲ. ಇಲ್ಲಿ ಇದ್ದದ್ದು ವರ್ಣ ಮತ್ತು ಜಾತಿ – ಎರಡೇ. ವರ್ಣವೆನ್ನುವುದು ಕಾರ್ಯಸೂಚಕ. ಜಾತಿ ಕುಲಸೂಚಕ, ಮೇಲಾಗಿ ರಕ್ತಸಂಬಂಧಸೂಚಕ. ಭೃಗು ಮತ್ತು ಭಾರದ್ವಾಜ – ಈ ಇಬ್ಬರು ಮಹಾಋಷಿಗಳು “ಸಮಾಜ ವ್ಯವಸ್ಥಿತವಾಗಿ ನಡೆಯಬೇಕಾದರೆ ಅಧಿಕಾರ ವಿಕೇಂದ್ರೀಕರಣವಾಗಬೇಕು” ಎಂದು ಚಿಂತಿಸಿದವರು. ಭೃಗು ಋಷಿ ಹೇಳುವ ಪ್ರಕಾರ ಅಧಿಕಾರವೆನ್ನುವುದು ನಾಲ್ಕು ಸಾಧನಗಳಿಂದ ದೊರೆಯಬಹುದು. ಅವು: ಜ್ಞಾನ, ಸೈನ್ಯ, ಧನ ಮತ್ತು ಭೂಮಿ. ಅಧಿಕಾರ ಸರಿಸಮನಾಗಿ ಹಂಚಿಹೋಗಬೇಕಾದರೆ ಸಮಾಜದ ಯಾರೊಬ್ಬನೂ ಈ ನಾಲ್ಕರಲ್ಲಿ ಒಂದಕ್ಕಿಂತ ಹೆಚ್ಚಿನದನ್ನು ಹಿಡಿತದಲ್ಲಿಟ್ಟುಕೊಳ್ಳಬಾರದು. ಒಬ್ಬ ವ್ಯಕ್ತಿ ಜ್ಞಾನ ಸಂಪಾದಿಸಲು ಇಚ್ಛಿಸಿದರೆ ಅವನಿಗೆ ಸೈನ್ಯ, ಧನ, ಭೂಮಿಗಳು ಅನಗತ್ಯ ಎನ್ನುವುದು ಭೃಗುವಿನ ಹೇಳಿಕೆ. ಮತ್ತು ಇವು ಯಾವುವೂ ಅಪ್ಪನಿಂದ ಮಗನಿಗೆ ಬರುವ ಆಸ್ತಿಗಳಲ್ಲ. ಜ್ಞಾನಮಾರ್ಗವನ್ನು ಆರಿಸಿಕೊಂಡವನು – ಅವನನ್ನು ಋಷಿಗಳು ಬ್ರಾಹ್ಮಣ ಎಂದರು – ಬ್ರಾಹ್ಮಣನ ಮಗನೇ ಆಗಿರಬೇಕಾದ ಯಾವ ನಿಯಮವೂ ಇಲ್ಲ. ವೇದವ್ಯಾಸರ ತಾಯಿ ಬೆಸ್ತರ ಹೆಣ್ಣು. ವಾಲ್ಮೀಕಿ ವ್ಯಾಧರ ಪಂಗಡದವನು. ಇಬ್ಬರೂ ಮಹಾಋಷಿಗಳಾಗಿ ಮಹಾಕಾವ್ಯಗಳನ್ನು ಬರೆದರು. ಕಾಳಿದಾಸ ಬೇಟೆಗಾರರ ಪಂಗಡದವನು. ಭಾರತದಲ್ಲಿ ಹುಟ್ಟಿದ ಮಹಾಕವಿ ಅವನು. ವಿಶ್ವಾಮಿತ್ರರ ಹೆತ್ತವರು ಕ್ಷತ್ರಿಯ ಕುಲೀನರು. ಆದರೆ, ಜ್ಞಾನಕ್ಕಾಗಿ ಆಸೆಪಟ್ಟು ವಿಶ್ವಾಮಿತ್ರರು ಮಹಾಬ್ರಾಹ್ಮಣನೆಂಬ ಪದವಿಗೇರಿದರು. ರಾವಣ ಒಬ್ಬ ಬ್ರಾಹ್ಮಣನಾಗಿದ್ದವನು. ಆದರೆ, ಆತ ವರ್ಣಾಶ್ರಮಕ್ಕೆ ಸೇರುವವನಲ್ಲ; ಆತ ದ್ರಾವಿಡ ಎಂಬ ಹೊಸ ಸಿದ್ಧಾಂತ ಕಟ್ಟಿದರು ಬುದ್ಧಿಜೀವಿಗಳು. ವಾಲ್ಮೀಕಿ ರಾಮಾಯಣದಲ್ಲಿ, ಅವನನ್ನು ರಾಮ ಕೊಂದ ಮೇಲೆ ಶವವನ್ನು ಅರಮನೆಗೆ ತಂದಿಟ್ಟಾಗ ಪತ್ನಿ ಮಂಡೋದರಿ ಶೋಕತಪ್ತಳಾಗಿ “ಓ ಆರ್ಯಪುತ್ರಾ!” ಎನ್ನುತ್ತಾಳೆ. ಆ ಕಾವ್ಯಭಾಗವನ್ನು ನಾನು ಕರುಣಾನಿಧಿಗೂ ತೋರಿಸಿದ್ದೇನೆ.

ಸದ್ಯದ ಜಗತ್ತಿನಲ್ಲಿ ವರ್ಣಾಶ್ರಮಗಳನ್ನು ಅನುಸರಿಸುವುದು ಅರ್ಥಹೀನವಾಗಬಹುದು. ಯಾಕೆಂದರೆ ಅದು ಆ ಕಾಲಕ್ಕೆ ತಕ್ಕಂತೆ ರಚಿಸಿದ ವ್ಯವಸ್ಥೆ. ಈಗಂತೂ ಜಾತಿಗಳು ಕೂಡ ಅರ್ಥಹೀನವಾಗಿವೆ. ಹಲವು ಜಾತಿಗಳ ನಡುವೆ ಕೊಡುಕೊಳ್ಳುವ ಸಂಬಂಧಗಳು ಬೆಳೆದ ಮೇಲೆ ಯಾರು ಯಾವ ಜಾತಿ ಎಂಬ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳಬೇಕಿಲ್ಲ ಅನ್ನಿಸುತ್ತಿದೆ.

ಅಂತಿಮವಾಗಿ ಈ ವರ್ಣ, ಜಾತಿ ಎಲ್ಲ ವ್ಯವಸ್ಥೆಗಳನ್ನೂ ಮೀರಿ ನಾವೆಲ್ಲ ಭಾರತೀಯರು, ನಾವು ಹಿಂದೂಗಳು ಎಂಬ ಏಕಭಾವದತ್ತ ಸಾಗಬೇಕು. ಜಾತಿ, ಮತ, ಮೀಸಲಾತಿ ಇವೆಲ್ಲ ನಮ್ಮನ್ನು ಒಳಗಿಂದ ಹದಗೆಡಿಸುತ್ತಿರುವ, ಕೆಡಿಸುತ್ತಿರುವ ಶತ್ರುಗಳು. ಪಾರ್ಸಿಗಳನ್ನು ನೋಡಿ. ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ವಾಪಸು ಹೋಗುವಾಗ  ಬ್ರಿಟಿಷರು ಪಾರ್ಸಿ ನಾಯಕರನ್ನು ಕರೆದು, ಅವರಿಗೂ ಲೋಕಸಭೆಯಲ್ಲಿ ಆಂಗ್ಲೋಇಂಡಿಯನ್ ರೀತಿಯ ಮೀಸಲಾತಿ ಕೊಡುವ ಭರವಸೆ ಕೊಟ್ಟರು. ಆಗ ಪಾರ್ಸಿಗಳು ನಾವು ಸಾವಿರ ವರ್ಷಗಳಿಂದ ಭಾರತೀಯರಾಗಿ ಬದುಕುತ್ತಿದ್ದೇವೆ. ನಮಗೆ ಪ್ರತ್ಯೇಕ ಮುದ್ರೆ ಬೇಕಾಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಉತ್ತರ ಕೊಟ್ಟರು. ಪಾರ್ಸಿಗಳನ್ನೂ ಯಹೂದಿಗಳನ್ನೂ ನೆಮ್ಮದಿಯಿಂದ ಬದುಕಲುಬಿಟ್ಟ ದೇಶ ನಮ್ಮದು.

ಇಸ್ರೇಲ್ ದೇಶ ಅಸ್ತಿತ್ವಕ್ಕೆ ಬಂದಾಗ, ಅಲ್ಲಿನ ಸಂಸತ್ತಿನಲ್ಲಿ ಮಂಡಿಸಿದ ಮೊದಲ ನಿರ್ಣಯದಲ್ಲಿ ಹೇಳಿದ ಮಾತೇನು ಗೊತ್ತೆ? “ಭಾರತವೇ ನಿನಗೆ ಅಭಿನಂದನೆಗಳು. ಯಹೂದಿಗಳನ್ನು ಖಡ್ಗ ಹಿಡಿದು ಓಡಿಸದೆ, ಗೌರವದಿಂದ ನಡೆಸಿಕೊಂಡ ಜಗತ್ತಿನ ಏಕೈಕ ದೇಶ ನೀನು”. ಭಾರತದ ಅಸ್ಮಿತೆ ಇರುವುದು ಅದರ ಇಂತಹ ಸನಾತನ ತತ್ವಗಳಲ್ಲಿ; ಸನಾತನ ಸಂಸ್ಕೃತಿಯಲ್ಲಿ. ಅದರ ಫಲವತ್ತಾದ ಮಣ್ಣಿನಲ್ಲಿ ನಾವು ಭವಿಷ್ಯತ್ತಿನ ಫಸಲನ್ನು ಪಡೆಯಬೇಕಾಗಿದೆ.

ಪ್ರೊ. ಡಾ. ಸುಬ್ರಹ್ಮಣ್ಯನ್ ಸ್ವಾಮಿ * ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!