ಅಂಕಣ

ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾದೆ..

ಮತ್ತೆ ಅಟಲ್ ಬಿಹಾರಿ… ಬಗೆದಷ್ಟೂ ಬರಿದಾಗದ ಗಣಿ ಅದು. ಬರೀ ಗಣಿ ಅಲ್ಲ, ಚಿನ್ನದ ಗಣಿ. ಹೌದು, ಅವರು ತಮ್ಮ ಜೀವನದಲ್ಲಿ ನಡೆದುಕೊಂಡ ಮೌಲ್ಯಗಳು, ನಮಗಾಗಿ ಕೊಟ್ಟ ಆದರ್ಶಗಳು ಒಂದು ಲೇಖನದಲ್ಲಿ ಬರೆದು ಮುಗಿಸುವಂತದ್ದಲ್ಲ. ಒಂದು ಆತ್ಮಕಥೆಯೊಳಗೆ  ಪೋಣಿಸಿ ಬಿಡುವಂತದ್ದಲ್ಲ ಅದು. ಯಾಕಂದ್ರೆ ವಾಜಪೇಯಿಯವರ ವಿಶೇಷತೆಯೇ ಅದು. ತಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲೂ ಇತಿಹಾಸ ನಿರ್ಮಿಸುತ್ತಾ ಹೋದವರು ವಾಜಪೇಯಿ.

ಈಗ ಎರಡು ವರ್ಷಗಳಿಂದ  ಸ್ವಾತಂತ್ರ ದಿನಾಚರಣೆಯ ಪ್ರಧಾನ ಮಂತ್ರಿಗಳ ಭಾಷಣವನ್ನು ನಾವು ಎವೆಯಿಕ್ಕದೆ ನೋಡುತ್ತಿದ್ದೇವಲ್ಲಾ? ಸುಮಾರು ಹದಿನೈದು ವರ್ಷಗಳ ಹಿಂದೆಯೂ ನಾವು ಪ್ರಧಾನಿಗಳ ಭಾಷಣವನ್ನು ನೋಡಿ ಸಂಭ್ರಮಿಸುತ್ತಿದ್ದೆವು. ದೇವರಾಣೆಗೂ ಹಿಂದಿ ನಯಾಪೈಸೆ ಅರ್ಥವಾಗುತ್ತಿರಲಿಲ್ಲ, ಅದು ಬೇರೆ ವಿಷಯ. ಆದರೆ ಆಗಿನ ಕಾಲಕ್ಕೆ ನನ್ನ ಪಕ್ಕದ ಮನೆಯಲ್ಲಿ ಸಿಗುತ್ತಿದ್ದ ಏಕೈಕ ಕನ್ನಡ ಚಾನಲ್ ಡಿಡಿ ಚಂದನದಲ್ಲಿ, ಸ್ವಾತಂತ್ರ ದಿನದಂದು ಸೇನೆಯ ಗತ್ತು ಗೈರತ್ತಿನ ನಡುವೆ ಅಟಲ್ ಬಿಹಾರಿ ವಾಜಪೇಯಿ ಎಂಬ ಹಾಸ್ಯಪ್ರಜ್ಞೆಯ ಮನುಷ್ಯ ರಾಜಗಾಂಭೀರ್ಯದಲ್ಲಿ ಕೆಂಪು ಕೋಟೆಯನ್ನು ಹತ್ತುತ್ತಿದ್ದುದು ನಮ್ಮೆಲ್ಲರನ್ನೂ ಹುಬ್ಬೇರಿಸುತ್ತಿದ್ದುದು ಸುಳ್ಳಲ್ಲ. ಅವರ ನಂತರ ಹತ್ತುವರ್ಷಗಳ ಕಾಲ ನಾವು ಸ್ವಾತಂತ್ರ ದಿನದ ಭಾಷಣವನ್ನೇ ನೋಡಲಿಲ್ಲವಾದರೂ, ಸ್ವಾತಂತ್ರ್ಯದ ದಿನ ಬಂದಾಗ ವಾಜಪೇಯಿ ಭಾಷಣದ ದಿನಗಳನ್ನು  ಮೆಲುಕು ಹಾಕುತ್ತಿದ್ದುದೂ ಸಹ ಸುಳ್ಳಲ್ಲ.  ಆ ಮಟ್ಟಕ್ಕೆ ನಮ್ಮನ್ನು ಮೋಡಿಗೊಳಿಸುವ ಮಾತುಗಾರ ವಾಜಪೇಯಿ.

ಕೆಲವು ಝಲಕ್ಕುಗಳನ್ನು ನೋಡಿ. ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಾಗ ಪತ್ರಕರ್ತರು ಯುದ್ಧದ ವಿಷಯವನ್ನು ಕೆದಕಿದರು. ವಾಜಪೇಯಿ ಏನ್ ಹೇಳಿದ್ರು ಗೊತ್ತಾ? “ಇನ್ಮುಂದೆ ಭಾರತ ಪಾಕಿಸ್ತಾನವನ್ನು ಸೋಲಿಸೋದು ಹಾಕಿ ಮೈದಾನದಲ್ಲಿ ಮಾತ್ರ..!”. ಒಂದೇ ಮಾತಿನಲ್ಲಿ ವಾಜಪೇಯಿ ಗೆದ್ದಿದ್ರು, ಪತ್ರಕರ್ತರು ಸೋತಿದ್ರು.

“ನೀನು ಮೆಲ್ಲ ಮೆಲ್ಲನೆ ಬರಬೇಡ,

ಮುಂದೆ ಬಾ, ಹೊಡೆ.ನಾನಾರೆಂದು ತೋರಿಸುವೆ.

ಈಗ ಇನ್ನೊಮ್ಮೆ ಬಿರುಗಾಳಿ ಎದ್ದಿದೆ.

ದೋಣಿಯು ಸುಳಿಗಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ.

ದಾಟುವೆನೆಂಬ ಧೈರ್ಯ ನನಗಿದೆ”

ಇದು ಅನಾರೋಗ್ಯಪೀಡಿತರಾಗಿ 1988ರಲ್ಲಿ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ವಾಜಪೇಯಿವರು ಸಾವಿನ ಕುರಿತಾಗಿ ಬರೆದ ಕವನ. ಎಂತಹಾ ಜೀವನೋತ್ಸಾಹ ಅಲ್ವಾ?

ಹೋರಾಟದ ಹಾದಿಯಿಂದಲೇ ರಾಜಕೀಯ ಜೀವನ ರೂಪಿಸಿಕೊಂಡ ವಾಜಪೇಯಿ ಸ್ವಾತಂತ್ರ್ಯ ಹೋರಾಟಗಾರನೂ ಹೌದು. ೧೯೪೨ ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸುವುದಕ್ಕಾಗಿ ಅವರು ಕಾಲೇಜು ಬಿಟ್ಟಿದ್ದರು. ಸ್ವಾತಂತ್ರ್ಯ ಸಿಕ್ಕ ನಂತರ ಕಾಶ್ಮೀರದಲ್ಲಿ ತಿರಂಗ ಹಾರಿಸುವ ಹೋರಾಟದಲ್ಲಿ ಶ್ಯಾಮ್’ಪ್ರಸಾದ್ ಮುಖರ್ಜಿ ಜೊತೆಗೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ತುರ್ತು ಪರಿಸ್ಥಿತಿ ಸಮಯದಲ್ಲಿ ಹೋರಾಟಕ್ಕಿಳಿಯುವ ಮುನ್ನವೇ ಇಂದಿರಾ ಗಾಂಧಿ ಸರಕಾರದಿಂದ ಬಂಧನಕ್ಕೊಳಗಾಗಿ ಬೆಂಗಳೂರಿನ ಕಾರಾಗ್ರಹವಾಸಿಯಾದವರು. ಅದರ ಬಳಿಕ ರಾಮ ಮಂದಿರ ಕುರಿತ ಹೋರಾಟದದಲ್ಲೂ ಯಶಸ್ವಿಯಾಗಿ ತೊಡಗಿಸಿಕೊಂಡವರು. ಒಟ್ಟಿನಲ್ಲಿ ಅವರ ಜೀವನವೇ ಹೋರಾಟ, ಹೋರಾಟವೇ ಜೀವನ.

96ರಲ್ಲಿ 13 ದಿನ ಪ್ರಧಾನಿಯಾದರು. 98ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾದರು. ಇಲ್ಲೂ ಅಧಿಕಾರದ ರಥ ಹದಿಮೂರು ತಿಂಗಳು ದಾಟಲಿಲ್ಲ. 99ರಲ್ಲಿ ಮತ್ತೆ ಪ್ರಧಾನಿಯಾಗಿ ಐದು ವರ್ಷ ಪೂರ್ಣಗೊಳಿಸಿದರು. ಆ ಐದು ವರ್ಷ ಇದೆಯಲ್ಲ್ಲಾ, ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಬದಲಾವಣೆಯ ಗಾಳಿ ಬೀಸಿದ ವರ್ಷಗಳಾಗಿತ್ತು. ಸರ್ವ ಶಿಕ್ಷಾ ಅಭಿಯಾನವಿರಬಹುದು, ಸುವರ್ಣ ಚತುಷ್ಪತವಿರಬಹುದು, ಒಂದೊಂದು ಯೋಜನೆಗಳೂ ಸಹ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುವಂತಹದ್ದೇ. ಅವರನ್ನು ಅಭಿವೃದ್ಧಿಯ ಹರಿಹಕಾರನೆನ್ನುವುದಕ್ಕಿಂತಲೂ ಹೊಸತನದ ಹರಿಕಾರನೆನ್ನುವುದೇ ಹೆಚ್ಚು ಸೂಕ್ತ. ಯಾಕಂದ್ರೆ ದೇಶಕ್ಕೆ ಅದುವರೆಗೆ ಅಭಿವೃದ್ಧಿಯೆಂದರೆ ‘ಗರೀಬೀ ಹಠಾವೋ’ ಆಗಿತ್ತೇ ವಿನಃ ಉತ್ತಮ ಗುಣಮಟ್ಟದ ರಸ್ತೆಗಳೇ  ದೇಶದ ಅಭಿವೃದ್ಧಿಯ ಮೂಲಮಂತ್ರ ಎನ್ನುವುದು ಯಾವ ಸರಕಾರಗಳಿಗೂ ತಿಳಿದಿರಲಿಲ್ಲ. ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಗ್ರಾಮ್ ಸಡಕ್’ನಂತಹ ಯೋಜನೆಗಳನ್ನು ತರಬೇಕೆಂದು ಅನಿಸಿದ್ದು ಅವರಿಗೆ. ವಿಜ್ಞಾನವಿದ್ದರಷ್ಟೇ ವಿಕಾಸ ಹೊಂದಬಹುದು ಎನ್ನುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದವರೂ ಕೂಡಾ ಅಟಲ್ ಅವರೇ.     ಕಂದಹಾರ ವಿಮಾನ ಅಪಹರಣವೊಂದು ಬಿಟ್ಟರೆ ಬೇರಾವುದೇ ಕಳಂಕ ವಾಜಪೇಯಿ ಸರ್ಕಾರಕ್ಕೆ ತಟ್ಟಲಿಲ್ಲ. (ಆದರೆ ಅಮಾಯಕ ನಾಗರೀಕರನ್ನು ರಕ್ಷಿಸುವುದಕ್ಕಾಗಿ ಭಯೋತ್ಪಾದಕರನ್ನು ಬಿಡದೇ ಬೇರಾವುದೇ ದಾರಿಯೂ ಸರ್ಕಾರದ ಮುಂದಿರಲಿಲ್ಲ ಎಂಬುದೂ  ಸಹ ಸತ್ಯ)

ಅಟಲ್ ಬಿಹಾರಿ ಅಂದ್ರೆ ಆವತ್ತಿನ ಕಾಲಕ್ಕೆ ಅತ್ಯಾಕರ್ಷಕ ಪರ್ಸನಾಲಿಟಿ. ಅವರನ್ನು ನೋಡಲು, ಅವರ ಕೈ ಕುಲುಕಿ ಮಾತನಾಡಲು ಜನ ಹವಣಿಸುತ್ತಿದ್ದರು. ಸಾಮಾನ್ಯರನ್ನು ಬಿಡಿ. ನರೇಂದ್ರ ಮೋದಿ ಕೂಡಾ ಅಟಲ್ ಮೋಡಿಗೆ ಒಳಗಾಗಿದ್ದರು. ಮೋದಿ ಆಗ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಅವರೊಮ್ಮೆ ವಾಜಪೇಯಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ.

ಅಟಲ್ ಸರ್ಕಾರದ ಆಡಳಿತದ ಶೈಲಿ, ಮಾಡಿರುವ ಕೆಲಸಗಳನ್ನು ನೋಡುವಾಗ 2004ರಲ್ಲಿ ಅವರು ಸೋಲಲು ಯಾವುದೇ ಕಾರಣಗಳಿರಲ್ಲಿಲ್ಲ. ದುರದೃಷ್ಟವಶಾತ್ ಜನ ಕೈ ಹಿಡಿಯಲಿಲ್ಲ. ಎನ್.ಡಿ.ಎ ಸೋಲಿಗೆ ವಾಜಪೇಯಿ ಸರಕಾರದ ಸಾಧನೆಗಳು ಜನರನ್ನು ತಲುಪಲಿಲ್ಲ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಆರು ತಿಂಗಳು ಮುಂಚಿತವಾಗಿ ಚುನಾವಣೆ ಎದುರಿಸಿದ್ದೇ ಸೋಲಿಗೆ ಕಾರಣ ಎನ್ನುತ್ತಾರೆ. ವಾಜಪೇಯಿ ನಂತರ ಬಂದ ಸರಕಾರವನ್ನು ನೋಡಿದಾಗ, ಖಂಡಿವಾಗಿಯೂ “ನಾವು ವಾಜಪೇಯಿಗೆ ಮಾಡಿದ್ದು ಮೋಸ” ಎಂದು ಅನಿಸದೇ ಇರದು. ಛೇ ಆ ಮನುಷ್ಯ ಮತ್ತೆ ಪ್ರಧಾನಿಯಾಗಬೇಕಿತ್ತು ಎಂದು ಅನಿಸದಿರದು. ಅಷ್ಟೇ ಯಾಕೆ, ವಾಜಪೇಯಿ ಸರಕಾರ ಸೋತಿದ್ದು ಅವರ ಕಟ್ಟಾ ವಿರೋಧಿಗಳಲ್ಲೂ ಆಶ್ಚರ್ಯ ಮೂಡಿಸಿತ್ತು.

ಈಗ ಅದೆಲ್ಲವೂ ಇತಿಹಾಸ. ಕಾಲನ ತಾಳಕ್ಕೆ ಎಲ್ಲರೂ ಕುಣಿಯಲೇ ಬೇಕಲ್ಲವೇ? ಕೆಲವೊಮ್ಮೆ ಆ ದಿನಗಳನ್ನು ನೆನೆಯುವಾಗ,  ಅಟಲ್ ತೆರೆಮರೆಗೆ ಸರಿದಿದ್ದನ್ನು ನಮಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ಎಲ್ಲರ ಆಸೆಯಾಗಿತ್ತು. ಭಾರತ ರತ್ನ ನೀಡದಿದ್ದರೇನಂತೆ? ಅವರು ನಿಜವಾಗಿಯೂ ಭಾರತ ರತ್ನನೇ ಎನ್ನುವಂತಹ ಮಾತುಗಳೂ ಸಹ  ಕೇಳಿ ಬಂದಿದ್ದವು.  ನಮ್ಮ ಆಸೆಯನ್ನು ಈಡೇರಿಸಲು ಮೋದಿ ಸರ್ಕಾರವೇ ಬರಬೇಕಾಯ್ತು  ಎನ್ನಿ.

ಅದೇನೇ ಇರ್ಲಿ.  ಅಟಲ್’ಜೀ ಜೀವನ ಸಾಧನೆಯನ್ನು ನೋಡುವಾಗ   “ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾದೆ..,” ಎಂದು ಮನತುಂಬಿ ಹಾಡಬಹುದು.  ಅಲ್ವಾ?

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!